ಲೂಕ
11 ಅವನು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದಾಗ ಅವನ ಶಿಷ್ಯರಲ್ಲಿ ಒಬ್ಬನು ಅವನಿಗೆ, “ಕರ್ತನೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದಂತೆ ನಮಗೂ ಪ್ರಾರ್ಥನೆಮಾಡುವುದನ್ನು ಕಲಿಸು” ಎಂದು ಹೇಳಿದನು.
2 ಆಗ ಅವನು ಅವರಿಗೆ, “ನೀವು ಪ್ರಾರ್ಥನೆಮಾಡುವಾಗ ‘ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. 3 ನಮ್ಮ ಅನುದಿನದ ಆಹಾರವನ್ನು ಪ್ರತಿದಿನದ ಆವಶ್ಯಕತೆಗನುಸಾರ ದಯಪಾಲಿಸು. 4 ನಮ್ಮ ಪಾಪಗಳನ್ನು ಕ್ಷಮಿಸು, ಏಕೆಂದರೆ ನಾವು ಸಹ ನಮಗೆ ಪಾಪಮಾಡಿದವರನ್ನು* ಕ್ಷಮಿಸುತ್ತೇವೆ; ನಮ್ಮನ್ನು ಪ್ರಲೋಭನೆಯೊಳಗೆ ಸೇರಿಸಬೇಡ’ ಎಂದು ಹೇಳಿರಿ” ಅಂದನು.
5 ಅವನು ಅವರಿಗೆ ಇನ್ನೂ ಹೇಳಿದ್ದು: “ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದಿಟ್ಟುಕೊಳ್ಳೋಣ. ಅವನು ಮಧ್ಯರಾತ್ರಿಯಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ ‘ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು; 6 ಏಕೆಂದರೆ ನನ್ನ ಸ್ನೇಹಿತನೊಬ್ಬನು ಪ್ರಯಾಣಮಾಡಿ ಈಗಷ್ಟೇ ನನ್ನ ಬಳಿಗೆ ಬಂದಿದ್ದಾನೆ. ಅವನಿಗೆ ಬಡಿಸಲು ನನ್ನ ಬಳಿ ಏನೂ ಇಲ್ಲ’ ಎಂದು ಹೇಳುತ್ತಾನೆ. 7 ಆಗ ಆ ಸ್ನೇಹಿತನು ಮನೆಯೊಳಗಿಂದಲೇ, ‘ನನಗೆ ತೊಂದರೆ ಕೊಡಬೇಡ. ಈಗಾಗಲೇ ಬಾಗಿಲಿಗೆ ಬೀಗ ಹಾಕಲಾಗಿದೆ ಮತ್ತು ನನ್ನ ಚಿಕ್ಕ ಮಕ್ಕಳು ನನ್ನೊಂದಿಗೆ ಮಲಗಿದ್ದಾರೆ; ನಾನು ಎದ್ದು ನಿನಗೆ ಏನನ್ನೂ ಕೊಡಲಾರೆ’ ಎಂದು ಉತ್ತರಿಸಬಹುದು. 8 ಆದರೆ ಸ್ನೇಹಿತನಾಗಿರುವ ಕಾರಣದಿಂದಲ್ಲದಿದ್ದರೂ ಅವನು ಧೈರ್ಯದಿಂದ ಪಟ್ಟುಹಿಡಿದ ಕಾರಣ ಇವನು ಎದ್ದು ಅವನಿಗೆ ಬೇಕಾಗಿರುವುದನ್ನು ಕೊಡುವನು ಎಂದು ನಿಮಗೆ ಹೇಳುತ್ತೇನೆ. 9 ಅದೇ ರೀತಿಯಲ್ಲಿ ನಾನು ನಿಮಗೆ ಹೇಳುವುದೇನೆಂದರೆ, ಕೇಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು. 10 ಏಕೆಂದರೆ ಕೇಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು. 11 ನಿಮ್ಮಲ್ಲಿ ಯಾವ ತಂದೆಯು ತನ್ನ ಮಗನು ಮೀನು ಕೇಳಿದರೆ ಮೀನಿಗೆ ಬದಲಾಗಿ ಹಾವನ್ನು ಕೊಡುವನು? 12 ಅಥವಾ ಅವನು ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನು? 13 ಹಾಗಾದರೆ, ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುವನಲ್ಲವೆ?”
14 ಬಳಿಕ ಅವನು ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಹೊರಬಂದ ಬಳಿಕ ಆ ಮೂಕನು ಮಾತಾಡಿದನು. ಇದನ್ನು ನೋಡಿ ಜನರ ಗುಂಪು ಅತ್ಯಾಶ್ಚರ್ಯಪಟ್ಟಿತು. 15 ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು. 16 ಆದರೆ ಇತರರು ಅವನನ್ನು ಪರೀಕ್ಷಿಸಲಿಕ್ಕಾಗಿ ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಅವನನ್ನು ಕೇಳಲಾರಂಭಿಸಿದರು. 17 ಅವರ ಆಲೋಚನೆಗಳನ್ನು ಅರಿತವನಾಗಿ ಅವನು ಅವರಿಗೆ, “ತನ್ನೊಳಗೆ ಒಡೆದು ವಿಭಾಗವಾಗಿರುವ ಪ್ರತಿಯೊಂದು ರಾಜ್ಯವು ಹಾಳಾಗುವುದು; ತನ್ನಲ್ಲಿ ವಿಭಾಗಗೊಂಡಿರುವ ಪ್ರತಿಯೊಂದು ಮನೆಯು ಬೀಳುವುದು. 18 ಅಂತೆಯೇ, ಸೈತಾನನು ಸಹ ತನಗೇ ವಿರೋಧವಾಗಿ ವಿಭಾಗಿಸಲ್ಪಟ್ಟರೆ ಅವನ ರಾಜ್ಯವು ಹೇಗೆ ನಿಲ್ಲುವುದು? ಏಕೆಂದರೆ ನಾನು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಅವುಗಳನ್ನು ಬಿಡಿಸುತ್ತಾರೆ? ಈ ಕಾರಣದಿಂದ ಅವರೇ ನಿಮಗೆ ನ್ಯಾಯತೀರಿಸುವವರಾಗಿರುವರು. 20 ನಾನು ದೇವರ ಪವಿತ್ರಾತ್ಮದ* ಸಹಾಯದಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಜವಾಗಿಯೂ ನಿಮ್ಮನ್ನು ದಾಟಿಹೋಗಿದೆ. 21 ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿದವನಾಗಿ ತನ್ನ ಅರಮನೆಯನ್ನು ಕಾಯುತ್ತಿರುವಾಗ ಅವನ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತ ಬಲಿಷ್ಠನಾದವನು ಅವನಿಗೆ ವಿರುದ್ಧವಾಗಿ ಬಂದು ಅವನನ್ನು ಜಯಿಸಿದಾಗ ಅವನು ಭರವಸೆಯಿಡುತ್ತಿದ್ದ ಆಯುಧಗಳನ್ನೆಲ್ಲ ತೆಗೆದುಕೊಂಡು ಅವನಿಂದ ಸುಲಿಗೆಮಾಡಿದ ವಸ್ತುಗಳನ್ನು ಇತರರಿಗೆ ಹಂಚಿಕೊಡುತ್ತಾನೆ. 23 ನನ್ನ ಪಕ್ಷ ವಹಿಸದವನು ನನಗೆ ವಿರೋಧವಾಗಿದ್ದಾನೆ; ನನ್ನೊಂದಿಗೆ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ.
24 “ಒಂದು ದೆವ್ವವು ಒಬ್ಬ ಮನುಷ್ಯನಿಂದ ಹೊರಗೆ ಬಂದ ಮೇಲೆ ವಿಶ್ರಾಂತಿ ಸ್ಥಳಕ್ಕಾಗಿ ಹುಡುಕುತ್ತಾ ನೀರಿಲ್ಲದ ಸ್ಥಳಗಳನ್ನು ದಾಟಿಹೋಗುತ್ತದೆ, ಮತ್ತು ಅಂಥ ಸ್ಥಳವು ಸಿಗದೇ ಹೋದಾಗ ಅದು, ‘ನಾನು ಎಲ್ಲಿಂದ ಹೊರಗೆ ಬಂದೆನೋ ಆ ನನ್ನ ಮನೆಗೆ ಹಿಂದಿರುಗುತ್ತೇನೆ’ ಅಂದುಕೊಳ್ಳುತ್ತದೆ. 25 ಮತ್ತು ಅಲ್ಲಿಗೆ ಬಂದಾಗ ಅದು ಚೆನ್ನಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುವುದು ಕಾಣಿಸುತ್ತದೆ. 26 ಅದು ಹೊರಟುಹೋಗಿ ತನಗಿಂತ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುತ್ತದೆ ಮತ್ತು ಅವು ಒಳಗೆ ಸೇರಿ ಅಲ್ಲೇ ವಾಸಿಸುತ್ತವೆ; ಆಗ ಆ ಮನುಷ್ಯನ ಅಂತ್ಯ ಸ್ಥಿತಿಯು ಮೊದಲಿಗಿಂತ ಹೆಚ್ಚು ಕೆಟ್ಟದಾಗಿರುತ್ತದೆ” ಎಂದು ಹೇಳಿದನು.
27 ಅವನು ಈ ಮಾತುಗಳನ್ನು ಹೇಳುತ್ತಿದ್ದಾಗ ಜನರ ಗುಂಪಿನ ಮಧ್ಯದಿಂದ ಒಬ್ಬ ಸ್ತ್ರೀಯು ಗಟ್ಟಿಯಾದ ಸ್ವರದಿಂದ ಅವನಿಗೆ, “ನಿನ್ನನ್ನು ತನ್ನ ಗರ್ಭದಲ್ಲಿ ಹೊತ್ತವಳೂ ನಿನಗೆ ಮೊಲೆಯುಣಿಸಿದವಳೂ ಸಂತೋಷಿತಳು” ಎಂದು ಹೇಳಿದಳು. 28 ಅದಕ್ಕೆ ಅವನು, “ಇಲ್ಲ, ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದು ಹೇಳಿದನು.
29 ಜನರು ಗುಂಪುಗುಂಪಾಗಿ ಕೂಡಿಬರುತ್ತಿದ್ದಾಗ ಅವನು ಅವರಿಗೆ, “ಈ ಸಂತತಿಯು ದುಷ್ಟ ಸಂತತಿಯಾಗಿದೆ; ಇದು ಒಂದು ಸೂಚಕಕಾರ್ಯವನ್ನು ಹುಡುಕುತ್ತದೆ. ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೇ ಸೂಚಕಕಾರ್ಯವು ಇದಕ್ಕೆ ಕೊಡಲ್ಪಡುವುದಿಲ್ಲ. 30 ಯೋನನು ನಿನೆವೆಯ ಜನರಿಗೆ ಒಂದು ಸೂಚನೆಯಾದಂತೆಯೇ ಮನುಷ್ಯಕುಮಾರನು ಸಹ ಈ ಸಂತತಿಗೆ ಸೂಚನೆಯಾಗಿರುವನು. 31 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಖಂಡಿಸುವಳು; ಏಕೆಂದರೆ ಅವಳು ಸೊಲೊಮೋನನ ವಿವೇಕದ ಕುರಿತು ಕೇಳಿಸಿಕೊಳ್ಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು, ಆದರೆ ಸೊಲೊಮೋನನಿಗಿಂತ ಹೆಚ್ಚಿನವನು ಇಲ್ಲಿದ್ದಾನೆ. 32 ನ್ಯಾಯತೀರ್ಪಿನಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದುನಿಂತು ಇದನ್ನು ಖಂಡಿಸುವರು; ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ಪಶ್ಚಾತ್ತಾಪಪಟ್ಟರು, ಆದರೆ ಯೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ. 33 ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿದ ಬಳಿಕ ಮರೆಯಾದ ಸ್ಥಳದಲ್ಲಿ ಅಥವಾ ಕೊಳಗದೊಳಗೆ* ಇಡುವುದಿಲ್ಲ; ಆದರೆ ಮನೆಯೊಳಗೆ ಬರುವವರಿಗೆ ಬೆಳಕು ಕಾಣುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 34 ನಿನ್ನ ಕಣ್ಣು ದೇಹದ ದೀಪವಾಗಿದೆ. ನಿನ್ನ ಕಣ್ಣು ಸರಳವಾಗಿರುವಲ್ಲಿ ನಿನ್ನ ದೇಹವೆಲ್ಲ ಪ್ರಕಾಶಮಾನವಾಗಿರುವುದು; ಆದರೆ ಅದು ಕೆಟ್ಟದಾಗಿರುವಲ್ಲಿ ನಿನ್ನ ದೇಹವೂ ಕತ್ತಲಾಗಿರುವುದು. 35 ಆದುದರಿಂದ ಜಾಗರೂಕನಾಗಿರು. ಒಂದುವೇಳೆ ನಿನ್ನಲ್ಲಿರುವ ಬೆಳಕು ಕತ್ತಲೆಯಾಗಿರಬಹುದು. 36 ನಿನ್ನ ಇಡೀ ದೇಹವು ಪ್ರಕಾಶಮಾನವಾಗಿದ್ದು ಯಾವುದೇ ಭಾಗವು ಕತ್ತಲಾಗಿರದಿದ್ದರೆ ಒಂದು ದೀಪವು ತನ್ನ ಕಿರಣಗಳಿಂದ ಬೆಳಕನ್ನು ಕೊಡುವಾಗ ಹೇಗೋ ಹಾಗೆ ಎಲ್ಲವೂ ಪ್ರಕಾಶಮಾನವಾಗಿರುವುದು” ಎಂದು ಹೇಳಿದನು.
37 ಅವನು ಇದನ್ನು ಹೇಳಿ ಮುಗಿಸಿದಾಗ ಒಬ್ಬ ಫರಿಸಾಯನು ಅವನನ್ನು ತನ್ನೊಂದಿಗೆ ಊಟಮಾಡುವಂತೆ ಕೇಳಿಕೊಂಡನು. ಆದುದರಿಂದ ಅವನು ಒಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಅವನು ಕೈತೊಳೆದುಕೊಳ್ಳದೆ ಇರುವುದನ್ನು ನೋಡಿ ಆ ಫರಿಸಾಯನು ಆಶ್ಚರ್ಯಪಟ್ಟನು. 39 ಅದಕ್ಕೆ ಕರ್ತನು ಅವನಿಗೆ, “ಫರಿಸಾಯರಾದ ನೀವು ಲೋಟ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿದೆ. 40 ವಿಚಾರಹೀನರಾದ ಜನರೇ, ಹೊರಭಾಗವನ್ನು ಮಾಡಿದವನೇ ಒಳಭಾಗವನ್ನೂ ಮಾಡಿದ್ದಾನಲ್ಲವೆ? 41 ಆದರೂ ಒಳಗಿರುವಂಥದ್ದನ್ನು ದಾನವಾಗಿ ಕೊಡಿರಿ; ಆಗ ನಿಮ್ಮ ಕುರಿತಾದ ಬೇರೆಲ್ಲ ಸಂಗತಿಗಳು ಶುದ್ಧವಾಗಿರುವವು. 42 ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪುದೀನ, ಸದಾಪು ಮತ್ತು ಬೇರೆಲ್ಲ ತರಕಾರಿಗಳಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೀರಿ; ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ನಿರ್ಲಕ್ಷಿಸುತ್ತೀರಿ. ನೀವು ಈ ಸಂಗತಿಗಳನ್ನು ಮಾಡುವ ಹಂಗಿನಲ್ಲಿದ್ದಿರಿ ಆದರೆ ಅದೇ ಸಮಯದಲ್ಲಿ ಬೇರೆ ವಿಷಯಗಳನ್ನು ನಿರ್ಲಕ್ಷಿಸಬಾರದಾಗಿತ್ತು. 43 ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ. 44 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ನೆಲಸಮವಾದ ಸ್ಮರಣೆಯ ಸಮಾಧಿಗಳಂತಿದ್ದೀರಿ; ಅವು ಸಮಾಧಿಗಳೆಂದು ತಿಳಿಯದೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ” ಎಂದು ಹೇಳಿದನು.
45 ಆಗ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಒಬ್ಬನು ಅವನಿಗೆ, “ಬೋಧಕನೇ, ಈ ವಿಷಯಗಳನ್ನು ಹೇಳುವ ಮೂಲಕ ನೀನು ನಮಗೆ ಅವಮಾನವನ್ನೂ ಮಾಡುತ್ತೀ” ಎಂದನು. 46 ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿರುವ ನಿಮ್ಮ ಗತಿಯನ್ನೂ ಏನು ಹೇಳಲಿ! ನೀವು ಹೊರಲು ಕಷ್ಟಕರವಾದ ಹೊರೆಗಳನ್ನು ಕಟ್ಟಿ ಜನರ ಮೇಲಿಡುತ್ತೀರಿ; ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವುದಿಲ್ಲ.
47 “ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳ ಸ್ಮರಣೆಯ ಸಮಾಧಿಗಳನ್ನು ಕಟ್ಟುತ್ತೀರಿ, ಆದರೆ ನಿಮ್ಮ ಪೂರ್ವಜರು ಅವರನ್ನು ಕೊಂದರು. 48 ನಿಮ್ಮ ಪೂರ್ವಜರ ಕೃತ್ಯಗಳಿಗೆ ನೀವೇ ಸಾಕ್ಷಿಗಳಾಗಿದ್ದೀರಿ; ಆದರೂ ನೀವು ಅವುಗಳಿಗೆ ಒಪ್ಪಿಗೆಯನ್ನು ಕೊಡುತ್ತೀರಿ. ಏಕೆಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತಿದ್ದೀರಿ. 49 ಆದುದರಿಂದ ದೇವರ ವಿವೇಕವು ಸಹ ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು ಮತ್ತು ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಕೆಲವರನ್ನು ಹಿಂಸಿಸುವರು. 50 ಹೀಗೆ ಲೋಕದ ಆದಿಯಿಂದ ಸುರಿಸಲ್ಪಟ್ಟ ಎಲ್ಲ ಪ್ರವಾದಿಗಳ ರಕ್ತಕ್ಕೆ, 51 ಅಂದರೆ ಹೇಬೆಲನ ರಕ್ತದಿಂದ ಆರಂಭಿಸಿ ಯಜ್ಞವೇದಿಗೂ ಆಲಯಕ್ಕೂ ನಡುವೆ ಹತಿಸಲ್ಪಟ್ಟ ಜಕರೀಯನ ರಕ್ತದ ವರೆಗಿನ ರಕ್ತಕ್ಕೆ ಈ ಸಂತತಿಯು ಉತ್ತರಕೊಡಬೇಕಾಗುವುದು.’ ಹೌದು, ಈ ಸಂತತಿಯು ಉತ್ತರಕೊಡಬೇಕಾಗುವುದು ಎಂದು ನಿಮಗೆ ಹೇಳುತ್ತೇನೆ.
52 “ಧರ್ಮಶಾಸ್ತ್ರದಲ್ಲಿ ಪ್ರವೀಣರಾಗಿರುವ ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಜ್ಞಾನದ ಕೀಲಿ ಕೈಯನ್ನು ತೆಗೆದುಕೊಂಡು ಹೋದಿರಿ; ನೀವು ಹೇಗೂ ಒಳಗೆ ಹೋಗಲಿಲ್ಲ, ಒಳಗೆ ಹೋಗುವವರನ್ನೂ ತಡೆದಿರಿ” ಎಂದು ಹೇಳಿದನು.
53 ಅವನು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳೂ ಫರಿಸಾಯರೂ ಕೋಪಾವೇಶವುಳ್ಳವರಾಗಿ ಅವನನ್ನು ಸುತ್ತುಗಟ್ಟಿ ಇನ್ನೂ ಅನೇಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುತ್ತಾ 54 ಅವನ ಬಾಯಿಮಾತಿನಲ್ಲಿ ಏನಾದರೂ ಹಿಡಿಯಬೇಕೆಂದು ಅವನಿಗಾಗಿ ಹೊಂಚುಹಾಕಿಕೊಂಡಿದ್ದರು.