ಲೂಕ
23 ಆಗ ಕೂಡಿಬಂದಿದ್ದವರೆಲ್ಲರು ಎದ್ದು ಅವನನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು. 2 ಬಳಿಕ ಅವರು, “ಈ ಮನುಷ್ಯನು ನಮ್ಮ ಜನಾಂಗವನ್ನು ಬುಡಮೇಲು ಮಾಡುತ್ತಿರುವುದನ್ನು, ಕೈಸರನಿಗೆ ತೆರಿಗೆ ತೆರುವುದನ್ನು ನಿಷೇಧಿಸುತ್ತಿರುವುದನ್ನು ಮತ್ತು ತಾನೇ ಅರಸನಾದ ಕ್ರಿಸ್ತನೆಂದು ಹೇಳಿಕೊಳ್ಳುತ್ತಾ ಇರುವುದನ್ನು ನಾವು ನೋಡಿದೆವು” ಎಂದು ಹೇಳಿ ಅವನ ಮೇಲೆ ಆರೋಪ ಹೊರಿಸಲಾರಂಭಿಸಿದರು. 3 ಆಗ ಪಿಲಾತನು ಅವನಿಗೆ, “ನೀನು ಯೆಹೂದ್ಯರ ಅರಸನೊ?” ಎಂದು ಪ್ರಶ್ನಿಸಿದನು. ಅದಕ್ಕೆ ಉತ್ತರವಾಗಿ ಅವನು, “ನೀನೇ ಅದನ್ನು ಹೇಳುತ್ತಾ ಇದ್ದೀ” ಎಂದು ಉತ್ತರಿಸಿದನು. 4 ಆಗ ಪಿಲಾತನು ಮುಖ್ಯ ಯಾಜಕರಿಗೂ ಜನರ ಗುಂಪಿಗೂ, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣುತ್ತಿಲ್ಲ” ಎಂದು ಹೇಳಿದನು. 5 ಆದರೆ ಅವರು, “ಇವನು ಗಲಿಲಾಯದಿಂದ ಆರಂಭಿಸಿ ಇಲ್ಲಿಯ ವರೆಗೂ ಯೂದಾಯದಾದ್ಯಂತ ಬೋಧಿಸುವ ಮೂಲಕ ಜನರಲ್ಲಿ ಗಲಭೆಯನ್ನು ಉಂಟುಮಾಡುತ್ತಿದ್ದಾನೆ” ಎಂದು ಪಟ್ಟುಹಿಡಿದು ಹೇಳಲಾರಂಭಿಸಿದರು. 6 ಇದನ್ನು ಕೇಳಿ ಪಿಲಾತನು ‘ಈ ಮನುಷ್ಯನು ಗಲಿಲಾಯದವನೋ’ ಎಂದು ವಿಚಾರಿಸಿ 7 ಅವನು ಹೆರೋದನ ಅಧಿಕಾರವ್ಯಾಪ್ತಿಗೆ ಒಳಪಟ್ಟವನು ಎಂದು ತಿಳಿದ ಬಳಿಕ ಅವನನ್ನು ಹೆರೋದನ ಬಳಿಗೆ ಕಳುಹಿಸಿದನು; ಈ ದಿನಗಳಲ್ಲಿ ಹೆರೋದನು ಸಹ ಯೆರೂಸಲೇಮಿನಲ್ಲಿಯೇ ಇದ್ದನು.
8 ಹೆರೋದನು ಯೇಸುವನ್ನು ನೋಡಿದಾಗ ಬಹಳವಾಗಿ ಸಂತೋಷಿಸಿದನು; ಏಕೆಂದರೆ ಅವನ ಕುರಿತು ಕೇಳಿಸಿಕೊಂಡಿದ್ದರಿಂದ ಬಹಳ ಸಮಯದಿಂದ ಅವನನ್ನು ಕಾಣಲು ಬಯಸಿದ್ದನು ಮತ್ತು ಅವನು ನಡೆಸುವ ಯಾವುದಾದರೂ ಸೂಚಕಕಾರ್ಯವನ್ನು ನೋಡಲು ನಿರೀಕ್ಷಿಸುತ್ತಿದ್ದನು. 9 ಹೆರೋದನು ಅನೇಕ ಮಾತುಗಳಿಂದ ಅವನನ್ನು ಪ್ರಶ್ನಿಸಲು ಆರಂಭಿಸಿದನಾದರೂ ಯೇಸು ಅವನಿಗೆ ಯಾವುದೇ ಉತ್ತರವನ್ನು ಕೊಡಲಿಲ್ಲ. 10 ಆದರೆ ಮುಖ್ಯ ಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಭಾವಾವೇಶದಿಂದ ಅವನ ಮೇಲೆ ಆರೋಪ ಹೊರಿಸುತ್ತಾ ಇದ್ದರು. 11 ಬಳಿಕ ಹೆರೋದನು ತನ್ನ ಸೈನಿಕರೊಂದಿಗೆ ಯೇಸುವಿಗೆ ಅಪಮಾನಮಾಡಿ, ಅವನಿಗೆ ಮಿರುಗುವ ವಸ್ತ್ರವನ್ನು ತೊಡಿಸುವ ಮೂಲಕ ಅವನನ್ನು ಅಪಹಾಸ್ಯಮಾಡಿ ಪಿಲಾತನ ಬಳಿಗೆ ಹಿಂದೆ ಕಳುಹಿಸಿದನು. 12 ಅದೇ ದಿನದಲ್ಲಿ ಹೆರೋದನೂ ಪಿಲಾತನೂ ಒಬ್ಬರಿಗೊಬ್ಬರು ಸ್ನೇಹಿತರಾದರು; ಅದಕ್ಕಿಂತ ಮುಂಚೆ ಅವರ ಮಧ್ಯೆ ವೈರತ್ವವಿತ್ತು.
13 ಬಳಿಕ ಪಿಲಾತನು ಮುಖ್ಯ ಯಾಜಕರನ್ನೂ ಅಧಿಪತಿಗಳನ್ನೂ ಜನರನ್ನೂ ಒಟ್ಟುಗೂಡಿಸಿ 14 ಅವರಿಗೆ, “ಈ ಮನುಷ್ಯನು ಜನರನ್ನು ಗಲಭೆಗೆ ಪ್ರೇರೇಪಿಸುತ್ತಿದ್ದಾನೆ ಎಂದು ಹೇಳಿ ನೀವು ಅವನನ್ನು ನನ್ನ ಬಳಿಗೆ ಕರೆತಂದಿರಿ; ನಾನು ಇವನನ್ನು ನಿಮ್ಮ ಮುಂದೆ ವಿಚಾರಿಸಿದೆ, ಆದರೆ ನೀವು ಇವನ ವಿರುದ್ಧ ಹೊರಿಸುತ್ತಿರುವ ಯಾವ ಆರೋಪಕ್ಕೂ ಆಧಾರವನ್ನು ನಾನು ಇವನಲ್ಲಿ ಕಾಣಲಿಲ್ಲ. 15 ವಾಸ್ತವದಲ್ಲಿ ಹೆರೋದನೂ ಇವನಲ್ಲಿ ಯಾವ ತಪ್ಪನ್ನೂ ಕಂಡುಕೊಳ್ಳದೆ ಇವನನ್ನು ನಮ್ಮ ಬಳಿಗೆ ಹಿಂದೆ ಕಳುಹಿಸಿದ್ದಾನೆ; ಇವನು ಮರಣಕ್ಕೆ ಯೋಗ್ಯವಾದದ್ದೇನನ್ನೂ ಮಾಡಿಲ್ಲ. 16 ಆದುದರಿಂದ ನಾನು ಇವನನ್ನು ಹೊಡೆಸಿ ಬಿಡುಗಡೆಮಾಡುತ್ತೇನೆ” ಎಂದು ಹೇಳಿದನು. 17* —— 18 ಆದರೆ ಜನರೆಲ್ಲರೂ ಒಟ್ಟಾಗಿ, “ಇವನನ್ನು ಮುಗಿಸಿಬಿಡು, ನಮಗೆ ಬರಬ್ಬನನ್ನು ಬಿಡುಗಡೆಮಾಡು” ಎಂದು ಕೂಗಿಹೇಳಿದರು. 19 (ಈ ಮನುಷ್ಯನು ಪಟ್ಟಣದಲ್ಲಿ ನಡೆದ ದಂಗೆಯ ಕಾರಣದಿಂದಲೂ ಕೊಲೆಯ ಕಾರಣದಿಂದಲೂ ಸೆರೆಮನೆಗೆ ಹಾಕಲ್ಪಟ್ಟಿದ್ದನು.) 20 ಪಿಲಾತನು ಯೇಸುವನ್ನು ಬಿಡುಗಡೆಮಾಡಲು ಬಯಸಿದ್ದರಿಂದ ಪುನಃ ಒಮ್ಮೆ ಜನರೊಂದಿಗೆ ಮಾತಾಡಿದನು. 21 ಆದರೆ ಅವರು, “ಅವನನ್ನು ಶೂಲಕ್ಕೇರಿಸು, ಶೂಲಕ್ಕೇರಿಸು” ಎಂದು ಜೋರಾಗಿ ಬೊಬ್ಬೆಹಾಕಿದರು. 22 ಅವನು ಮೂರನೆಯ ಬಾರಿ ಅವರಿಗೆ, “ಏಕೆ? ಇವನು ಯಾವ ಅಪರಾಧವನ್ನು ಮಾಡಿದ್ದಾನೆ? ಮರಣಕ್ಕೆ ಯೋಗ್ಯವಾದ ಯಾವುದನ್ನೂ ನಾನು ಇವನಲ್ಲಿ ಕಾಣಲಿಲ್ಲ; ಆದುದರಿಂದ ನಾನು ಇವನನ್ನು ಹೊಡೆಸಿ ಬಿಡುಗಡೆಮಾಡುತ್ತೇನೆ” ಎಂದನು. 23 ಆಗ ಅವರು ಇನ್ನಷ್ಟು ಒತ್ತಾಯಮಾಡಲಾರಂಭಿಸಿ ಗಟ್ಟಿಯಾದ ಸ್ವರದಿಂದ ಅವನನ್ನು ಶೂಲಕ್ಕೇರಿಸುವಂತೆ ತಗಾದೆಮಾಡಿದರು. ಅವರು ಎಷ್ಟು ಗಟ್ಟಿಯಾಗಿ ಕಿರಿಚಿದರೆಂದರೆ 24 ಪಿಲಾತನು ಅವರ ಒತ್ತಾಯಕ್ಕೆ ಮಣಿದು ಅವರ ಇಚ್ಛೆಯಂತೆಯೇ ಮಾಡಿದನು. 25 ದಂಗೆಯ ಕಾರಣದಿಂದಲೂ ಕೊಲೆಯ ಕಾರಣದಿಂದಲೂ ಸೆರೆಮನೆಗೆ ಹಾಕಲ್ಪಟ್ಟಿದ್ದ ಮನುಷ್ಯನನ್ನು ಅವರು ಕೇಳಿಕೊಂಡಂತೆಯೇ ಅವನು ಬಿಡುಗಡೆಮಾಡಿದನು; ಮತ್ತು ಯೇಸುವನ್ನು ಅವರು ತಮ್ಮ ಇಷ್ಟದಂತೆ ಮಾಡಲು ಒಪ್ಪಿಸಿಕೊಟ್ಟನು.
26 ಅವರು ಅವನನ್ನು ಕರೆದುಕೊಂಡು ಹೋಗುತ್ತಿದ್ದಾಗ ಗ್ರಾಮದಿಂದ ಬರುತ್ತಿದ್ದ ಕುರೇನೆ ಪಟ್ಟಣದ ಸೀಮೋನ ಎಂಬ ವ್ಯಕ್ತಿಯನ್ನು ಹಿಡಿದು ಅವನ ಮೇಲೆ ಯಾತನಾ ಕಂಬವನ್ನು ಹೊರಿಸಿ ಅದನ್ನು ಯೇಸುವಿನ ಹಿಂದೆ ಹೊತ್ತುಕೊಂಡು ಬರುವಂತೆ ಮಾಡಿದರು. 27 ಆದರೆ ಅವನ ಹಿಂದೆ ಜನರ ಮತ್ತು ಸ್ತ್ರೀಯರ ಒಂದು ದೊಡ್ಡ ಗುಂಪು ದುಃಖದಿಂದ ಎದೆಬಡಿದುಕೊಳ್ಳುತ್ತಾ ಅವನಿಗಾಗಿ ಗೋಳಾಡುತ್ತಾ ಬರುತ್ತಿತ್ತು. 28 ಯೇಸು ಆ ಸ್ತ್ರೀಯರ ಕಡೆಗೆ ತಿರುಗಿ ಅವರಿಗೆ, “ಯೆರೂಸಲೇಮಿನ ಪುತ್ರಿಯರೇ, ನನಗಾಗಿ ಅಳುವುದನ್ನು ನಿಲ್ಲಿಸಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ; 29 ಏಕೆಂದರೆ ‘ಬಂಜೆಯರೂ ಹೆರದವರೂ ಮೊಲೆಯುಣಿಸದವರೂ ಸಂತೋಷಿತರು’ ಎಂದು ಜನರು ಹೇಳುವ ದಿನಗಳು ಬರಲಿವೆ. 30 ಆಗ ಅವರು ಬೆಟ್ಟಗಳಿಗೆ, ‘ನಮ್ಮ ಮೇಲೆ ಬೀಳಿರಿ’ ಎಂದೂ ಗುಡ್ಡಗಳಿಗೆ ‘ನಮ್ಮನ್ನು ಮರೆಮಾಡಿರಿ’ ಎಂದೂ ಹೇಳತೊಡಗುವರು. 31 ಮರವು ಹಸಿಯಾಗಿರುವಾಗಲೇ ಅವರು ಈ ರೀತಿ ಮಾಡುವುದಾದರೆ ಅದು ಒಣಗಿದ ಮೇಲೆ ಏನಾಗುವುದು?” ಎಂದು ಹೇಳಿದನು.
32 ಆದರೆ ಅವನೊಂದಿಗೆ ದುಷ್ಕರ್ಮಿಗಳಾದ ಬೇರೆ ಇಬ್ಬರನ್ನೂ ಕೊಲ್ಲಲಿಕ್ಕಾಗಿ ಕರೆದೊಯ್ಯಲಾಗುತ್ತಿತ್ತು. 33 ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಅವನನ್ನೂ ಅವನ ಬಲಗಡೆಯಲ್ಲಿ ಮತ್ತು ಎಡಗಡೆಯಲ್ಲಿ ಇಬ್ಬರು ಕಳ್ಳರನ್ನೂ ಶೂಲಕ್ಕೇರಿಸಿದರು. 34 ಆದರೆ ಯೇಸು, “ತಂದೆಯೇ, ಅವರನ್ನು ಕ್ಷಮಿಸು; ತಾವು ಏನು ಮಾಡುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿಲ್ಲ” ಎಂದು ಹೇಳಿದನು. ಇದಲ್ಲದೆ ಅವನ ವಸ್ತ್ರಗಳನ್ನು ಹಂಚಿಕೊಳ್ಳಲಿಕ್ಕಾಗಿ ಅವರು ಚೀಟಿ ಎತ್ತಿದರು. 35 ಮತ್ತು ಜನರು ನೋಡುತ್ತಾ ನಿಂತಿದ್ದರು. ಆದರೆ ಅಧಿಪತಿಗಳು ಗೇಲಿಮಾಡುತ್ತಾ, “ಇವನು ಇತರರನ್ನು ರಕ್ಷಿಸಿದನು; ಇವನು ದೇವರ ಕ್ರಿಸ್ತನು, ಆರಿಸಿಕೊಳ್ಳಲ್ಪಟ್ಟವನು ಆಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ” ಎಂದರು. 36 ಸೈನಿಕರು ಸಹ ಅವನ ಹತ್ತಿರ ಬಂದು ಅವನಿಗೆ ಹುಳಿ ದ್ರಾಕ್ಷಾಮದ್ಯವನ್ನು ನೀಡುತ್ತಾ, 37 “ನೀನು ಯೆಹೂದ್ಯರ ಅರಸನಾಗಿರುವುದಾದರೆ ನಿನ್ನನ್ನು ರಕ್ಷಿಸಿಕೋ” ಎಂದು ಹೇಳಿ ಅಪಹಾಸ್ಯಮಾಡಿದರು. 38 ಇದಲ್ಲದೆ ಅವನ ಮೇಲ್ಗಡೆಯಲ್ಲಿ “ಇವನು ಯೆಹೂದ್ಯರ ಅರಸನು” ಎಂಬ ಅಭಿಲೇಖವು ಇತ್ತು.
39 ಆದರೆ ತೂಗಹಾಕಲ್ಪಟ್ಟಿದ್ದ ದುಷ್ಕರ್ಮಿಗಳಲ್ಲಿ ಒಬ್ಬನು ಅವನನ್ನು ದೂಷಿಸುತ್ತಾ, “ನೀನು ಕ್ರಿಸ್ತನು ಅಲ್ಲವೆ? ಹಾಗಿರುವಲ್ಲಿ ನಿನ್ನನ್ನು ರಕ್ಷಿಸಿಕೋ ಮತ್ತು ನಮ್ಮನ್ನೂ ರಕ್ಷಿಸು” ಎಂದು ಹೇಳಿದನು. 40 ಅದಕ್ಕೆ ಇನ್ನೊಬ್ಬ ದುಷ್ಕರ್ಮಿಯು, “ನೀನು ಇದೇ ರೀತಿಯ ದಂಡನೆಯನ್ನು ಅನುಭವಿಸುತ್ತಿರುವಾಗಲೂ ದೇವರಿಗೆ ಭಯಪಡುವುದಿಲ್ಲವೊ? 41 ನಾವಾದರೋ ಮಾಡಿದ ಕೆಲಸಕ್ಕೆ ತಕ್ಕ ಶಿಕ್ಷೆಯನ್ನು ಪೂರ್ಣವಾಗಿ ಹೊಂದುತ್ತಿದ್ದೇವೆ, ಆದರೆ ಈ ಮನುಷ್ಯನು ಅನ್ಯಾಯವಾದ ಏನನ್ನೂ ಮಾಡಲಿಲ್ಲ” ಎಂದು ಹೇಳಿ ಅವನನ್ನು ಗದರಿಸಿದನು. 42 ಅನಂತರ ಅವನು ಮುಂದುವರಿಸಿ, “ಯೇಸುವೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ” ಎಂದು ಹೇಳಿದನು. 43 ಅದಕ್ಕೆ ಯೇಸು ಅವನಿಗೆ, “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದನು.
44 ಇಷ್ಟರಲ್ಲಾಗಲೇ ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯಾಗಿತ್ತು, ಆದರೂ ಮೂರು ಗಂಟೆಯ ವರೆಗೆ ಭೂಮಿಯಲ್ಲೆಲ್ಲಾ ಕತ್ತಲೆ ಕವಿಯಿತು, 45 ಏಕೆಂದರೆ ಸೂರ್ಯನ ಬೆಳಕು ಇಲ್ಲದೆಹೋಯಿತು; ಆಗ ಪವಿತ್ರ ಸ್ಥಳದ ಪರದೆಯು ಮಧ್ಯದಲ್ಲಿ ಹರಿದು ಇಬ್ಭಾಗವಾಯಿತು. 46 ಮತ್ತು ಯೇಸು ಮಹಾಧ್ವನಿಯಿಂದ, “ತಂದೆಯೇ, ನಿನ್ನ ಕೈಗಳಿಗೆ ನನ್ನ ಜೀವಶಕ್ತಿಯನ್ನು ಒಪ್ಪಿಸುತ್ತೇನೆ” ಎಂದು ಕೂಗಿಹೇಳಿದ ಮೇಲೆ ಮೃತಪಟ್ಟನು. 47 ನಡೆದ ಸಂಗತಿಯನ್ನು ನೋಡಿದ ಶತಾಧಿಪತಿಯು, “ನಿಜವಾಗಿಯೂ ಈ ಮನುಷ್ಯನು ನೀತಿವಂತನಾಗಿದ್ದನು” ಎಂದು ಹೇಳಿ ದೇವರನ್ನು ಮಹಿಮೆಪಡಿಸಲು ಆರಂಭಿಸಿದನು. 48 ಈ ನೋಟಕ್ಕಾಗಿ ಕೂಡಿಬಂದಿದ್ದ ಎಲ್ಲ ಜನರು ನಡೆದ ಸಂಗತಿಯನ್ನು ನೋಡಿ ಎದೆಬಡಿದುಕೊಳ್ಳುತ್ತಾ ಹಿಂದಿರುಗತೊಡಗಿದರು. 49 ಅವನಿಗೆ ಪರಿಚಯವಿದ್ದವರೆಲ್ಲರೂ ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದರು. ಮಾತ್ರವಲ್ಲದೆ, ಗಲಿಲಾಯದಿಂದ ಅವನನ್ನು ಹಿಂಬಾಲಿಸುತ್ತಾ ಬಂದಿದ್ದ ಸ್ತ್ರೀಯರು ಸಹ ಈ ಸಂಗತಿಗಳನ್ನು ನೋಡುತ್ತಾ ನಿಂತಿದ್ದರು.
50 ಯೋಸೇಫನೆಂಬ ಒಬ್ಬ ಮನುಷ್ಯನಿದ್ದನು; ಇವನು ಹಿರೀಸಭೆಯ ಸದಸ್ಯನೂ ಒಳ್ಳೆಯ ವ್ಯಕ್ತಿಯೂ ನೀತಿವಂತನೂ ಆಗಿದ್ದನು— 51 ಈ ಮನುಷ್ಯನು ಅವರ ಕುತಂತ್ರಕ್ಕೂ ಕೃತ್ಯಕ್ಕೂ ಬೆಂಬಲ ನೀಡದವನಾಗಿದ್ದನು—ಇವನು ಯೂದಾಯದವರ ಅರಿಮಥಾಯವೆಂಬ ಪಟ್ಟಣದವನಾಗಿದ್ದು ದೇವರ ರಾಜ್ಯಕ್ಕಾಗಿ ಎದುರುನೋಡುತ್ತಿದ್ದನು. 52 ಈ ಮನುಷ್ಯನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು. 53 ಅವನು ಅದನ್ನು ಕೆಳಗಿಳಿಸಿ ಶುದ್ಧವಾದ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಇಟ್ಟನು; ಅಷ್ಟರ ತನಕ ಯಾರನ್ನೂ ಅದರಲ್ಲಿ ಇಟ್ಟಿರಲಿಲ್ಲ. 54 ಅದು ಸಿದ್ಧತೆಯ ದಿನವಾಗಿತ್ತು ಮತ್ತು ಸಬ್ಬತ್ ದಿನವು ಆರಂಭಗೊಳ್ಳುವ ಸಂಜೆಯು ಹತ್ತಿರವಾಗುತ್ತಿತ್ತು. 55 ಗಲಿಲಾಯದಿಂದ ಅವನೊಂದಿಗೆ ಬಂದಿದ್ದ ಸ್ತ್ರೀಯರು ಹಿಂದೆಯೇ ಹೋಗಿ ಸ್ಮರಣೆಯ ಸಮಾಧಿಯನ್ನೂ ಅದರಲ್ಲಿ ಅವನ ದೇಹವು ಇಡಲ್ಪಟ್ಟಿದ್ದ ರೀತಿಯನ್ನೂ ನೋಡಿದರು; 56 ಬಳಿಕ ಅವರು ಪರಿಮಳದ್ರವ್ಯವನ್ನೂ ಸುಗಂಧತೈಲವನ್ನೂ ಸಿದ್ಧಪಡಿಸಲು ಹಿಂದಿರುಗಿದರು. ಆದರೆ ಆಜ್ಞೆಯ ಪ್ರಕಾರ ಅವರು ಸಬ್ಬತ್ ದಿನದಂದು ವಿಶ್ರಮಿಸಿದರು.