ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 18: 15ನೇ ಶತಕದಿಂದ “ಕ್ರೈಸ್ತರು” ಮತ್ತು “ವಿಧರ್ಮಿಯರು” ಸಂಧಿಸಿದಾಗ
“ಧರ್ಮವು ಹೃದಯದಲ್ಲಿ ಹೊರತು, ಮೊಣಕಾಲುಗಳಲ್ಲಿ ಅಲ್ಲ”—ಡಿ. ಡಬ್ಲ್ಯೂ ಜೆರೊಲ್ಡ್, 19ನೆಯ ಶತಮಾನದ ಇಂಗ್ಲಿಷ್ ನಾಟಕಕಾರ
ಮಿಶನೆರಿ ಕಾರ್ಯವು ಆರಂಭದ ಕ್ರೈಸ್ತತ್ವದ ಒಂದು ವೈಶಿಷ್ಟತೆಯುಳ್ಳ ಗುರುತಾಗಿತ್ತು. ಇದರಿಂದಾಗಿ “ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಲು” ಮತ್ತು “ಲೋಕದ ಕಟ್ಟಕಡೆಯ ವರೆಗೂ” ಆತನ ಸಾಕ್ಷಿಗಳಾಗಿರಲು, ಯೇಸುವಿನ ಆಜ್ಞೆಗಳನ್ನು ಪಾಲಿಸುವದಾಗಿತ್ತು.—ಮತ್ತಾಯ 28:19, 20; ಅ.ಕೃತ್ಯ 1:8.
15ನೆಯ ಶತಮಾನದಲ್ಲಿ, “ವಿಧರ್ಮಿ”ಯರನ್ನು ಮತಾಂತರಿಸಲು ಒಂದು ಭೌಗೋಲಿಕ ಕಾರ್ಯಕ್ರಮದಲ್ಲಿ ಕ್ರೈಸ್ತ ಪ್ರಪಂಚವು ತೊಡಗಿತು. ಆ ಸಮಯದ ತನಕ ಈ “ವಿಧರ್ಮಿಯರು” ಯಾವ ರೀತಿಯ ಧರ್ಮವನ್ನು ಆಚರಿಸುತ್ತಿದ್ದರು? ಮತ್ತು “ಕ್ರೈಸ್ತತ್ವದ” ಕಡೆಗಿನ ನಂತರದ ಯಾವುದೇ ಮತಾಂತರವು ಅವರ ಹೃದಯವನ್ನು ಸ್ಪರ್ಶಿಸಿತೋ ಅಥವಾ ಅವರು ತಮ್ಮ ಔಪಚಾರಿಕ ಅಧೀನತೆಯನ್ನು ತೋರಿಸಲು ಮೊಣಕಾಲುಗಳ ಮೇಲೆ ಬೀಳುವಂತೆ ಮಾತ್ರ ಮಾಡಿತೋ?
ಆಫ್ರಿಕದಲ್ಲಿನ ಸಹಾರಾದ ದಕ್ಷಿಣಕ್ಕೆ ಲೆಕ್ಕಿಸಲ್ಪಟ್ಟ 700 ಕುಲವರ್ಣೀಯ ಗುಂಪುಗಳು ಇವೆ. ಮೂಲದಲ್ಲಿ ಅವುಗಳಲ್ಲಿರುವಂಥ ಸಮರೂಪತೆಗಳು ಸಾಮಾನ್ಯ ಮೂಲವನ್ನು ತೋರಿಸಿ ಕೊಡುವದಾದರೂ, ಪ್ರತಿಯೊಂದು ಅದರ ಸ್ವಂತ ಬುಡಕಟ್ಟನ್ನು ಹೊಂದಿದ್ದವು. ಆಸ್ಟ್ರೇಲಿಯಾ, ಅಮೆರಿಕಗಳು ಮತ್ತು ಫೆಸಿಪಿಕ್ನ ದ್ವೀಪಗಳಲ್ಲಿ ಡಜನುಗಟ್ಟಲೆ ಇತರ ಸ್ಥಳೀಯ ಧರ್ಮಗಳು ಕಂಡುಬರುತ್ತವೆ.
ಹೆಚ್ಚಿನವು, ಒಬ್ಬ ಪರಮ ದೇವರನ್ನು ನಂಬುತ್ತವಾದರೂ, ಬಹುದೇವತಾವಾದಿಗಳಂತೆ,—ಕುಟುಂಬ, ಕುಲ, ಇಲ್ಲವೆ ಸಮಾಜದ ದೇವರುಗಳನ್ನು, ಹೀಗೆ ಅಧಿಕ ಸಂಖ್ಯೆಯ ಕಡಿಮೆ ದರ್ಜೆಯ ದೇವತೆಗಳಿಗೂ ಸ್ಥಳಾವಕಾಶ ಮಾಡುತ್ತವೆ. ಆಜ್ಟೆಕ್ ಧರ್ಮದ ಮೇಲೆ ಮಾಡಿದ ಒಂದು ಅಧ್ಯಯನವು 60ಕ್ಕಿಂತಲೂ ಹೆಚ್ಚಿನ ವಿಶಿಷ್ಟ ಮತ್ತು ಪರಸ್ಪರ ಸಂಬಂಧಿಸಿದ ದೇವತೆಗಳ ಹೆಸರುಗಳನ್ನು ಪಟ್ಟಿ ಮಾಡಿತು.
ಆಫ್ರಿಕ ಮತ್ತು ಅಮೆರಿಕಗಳಲ್ಲಿ ಅತಿ “ಪುರಾತನ” ಧರ್ಮಗಳೊಂದಿಗಿನ ಜನರು ತಂತ್ರಗಾರನೆಂದು ತಿಳಿದಿರುವ ಒಂದು ಪ್ರಕೃತ್ಯತೀತ ಆಕೃತಿಯಲ್ಲಿ ನಂಬಿಕೆಯನ್ನಿಡುತ್ತಾರೆ. ಕೆಲವೊಮ್ಮೆ ಅವನನ್ನು ವಿಶ್ವದ ಸೃಷ್ಟಿ ಕರ್ತನು ಎಂಬುದಾಗಿಯೂ, ಮತ್ತು ಬೇರೆ ಸಮಯಗಳಲ್ಲಿ ಸೃಷ್ಟಿಯನ್ನು ಪುನಃ ಏರ್ಪಡಿಸುವವನೆಂದೂ ವಿವರಿಸುತ್ತಾರೆ. ಯಾವಾಗಲೂ ಆತನು ಕುತಂತ್ರದ ವಂಚಕನು ಮತ್ತು ಕಾಮಾಸಕ್ತಿಯುಳ್ಳವನು, ಆದರೂ, ದ್ವೇಷಿಯಾಗಿರಬೇಕಿಲ್ಲ ಎಂದೂ ವೀಕ್ಷಿಸುತ್ತಾರೆ. ಉತ್ತರ ಅಮೆರಿಕದ ನವಾಹೊ ಇಂಡಿಯನರು ಅವನು ಮರಣವನ್ನು ನೇಮಿಸಿದ್ದಾನೆ ಎಂದು ಹೇಳುತ್ತಾರೆ; ಒಗಾಲ್ಲಾ ಲಾಕೊಟಾ ಬುಡಕಟ್ಟು, ಆತನು ಪ್ರಥಮ ಮಾನವರಿಗೆ ಬೇರೆ ಕಡೆಯಲ್ಲಿ ಉತ್ತಮ ಜೀವಿತವನ್ನು ವಾಗ್ದಾನಿಸಿ, ಅವರು ಪರದೈಸದಿಂದ ಹೊರಗೆ ಅಟ್ಟಲ್ಪಡುವಂತೆ ಮಾಡಿದ ಪತನಗೊಂಡ ದೇವದೂತ ಎಂದು ಕಲಿಸುತ್ತದೆ. ದಿ ಎನ್ಸೈಕ್ಲೊಪಿಡಿಯಾ ಆಫ್ ರಿಲಿಜನ್ ಹೇಳುವದೇನಂದರೆ ಈ ತಂತ್ರಗಾರನು ಅನೇಕ ಬಾರಿ “ಸೃಷ್ಟಿಯ ಕಥೆಗಳಲ್ಲಿ”, “ಆತ್ಮಿಕ ಸೃಷ್ಟಿಕರ್ತ-ದೇವತೆಯ” ಎದುರು ಆಡುವವನಾಗಿ ಕಂಡು ಬರುತ್ತಾನೆ.
ಬೆಬಿಲೋನಿನ ಮತ್ತು ಐಗುಪ್ತ್ಯದ ಜ್ಞಾಪಕ ಹುಟ್ಟಿಸುವ, ಕೆಲವು ನಾಡಿನ ಧರ್ಮಗಳು ತ್ರಯೈಕ್ಯವನ್ನು ಬೋಧಿಸುತ್ತವೆ. ದಿ ಎಸ್ಕಿಮೊಸ್ ಎಂಬ ಪುಸ್ತಕ, ಗಾಳಿಯ ಆತ್ಮ, ಸಮುದ್ರದ ಆತ್ಮ, ಚಂದ್ರನ ಆತ್ಮ, ಇವು ತ್ರಯೈಕ್ಯವಾಗಿ “ಕಟ್ಟಕಡೆಗೆ ವ್ಯಾವಹಾರಿಕವಾಗಿ ಎಸ್ಕಿಮೊ ಪರಿಸರದಲ್ಲಿರುವ ಎಲ್ಲವನ್ನು ಹಿಡಿತದಲ್ಲಿಡುತ್ತದೆ” ಎಂದು ಹೇಳುತ್ತದೆ.
ಮಾನವರು—“ಆತ್ಮಿಕವಾಗಿ ಅವಿನಾಶಿಗಳು”
ಆಸ್ಟ್ರೇಲಿಯಾದ ವಿಶ್ವ ವಿದ್ಯಾಲಯದ ರೊನಾಲ್ಡ್ ಎಮ್. ಬರ್ನ್ಡ್ಟ್ ನಮಗೆ ತಿಳಿಸುವದೇನಂದರೆ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ನಂಬುತ್ತಾರೇನಂದರೆ ಜೀವನದ ಚಕ್ರವು “ಮರಣದ ನಂತರವೂ ಮುಂದುವರಿಯುತ್ತದೆ, ದೈಹಿಕತೆಯಿಂದ ಪೂರ್ಣ ಆತ್ಮಿಕತೆಗೆ. ಪುನಃ ಕಾಲಾನಂತರ ದೈಹಿಕ ಪ್ರಮಾಣಕ್ಕೆ ಹಿಂದಿರುಗುತ್ತದೆ.” ಇದರ ಅರ್ಥವೇನಂದರೆ “ಮಾನವ ಜೀವಿಗಳು ಆತ್ಮಿಕವಾಗಿ ಅವಿನಾಶಿಗಳು.”
ಸಾಮಾನ್ಯ ಮನುಷ್ಯರು ಸತ್ತ ನಂತರ ಪ್ರೇತಗಳಾಗುತ್ತಾರಾದರೆ, ಗಣ್ಯ ವ್ಯಕ್ತಿಗಳು ಅವರ ಗೌರವಾನಿತ್ವ ಮತ್ತು ಮನವಿ ಮಾಡಲ್ಪಟ್ಟವರಾಗಿರುವದರಿಂದ ಸಮಾಜದ ಅದೃಶ್ಯ ಮುಂದಾಳುಗಳೋಪಾದಿ ಅವರು ಪೂರ್ವಜ ಆತ್ಮಗಳಾಗುತ್ತಾರೆ ಎಂದು ನಿರ್ದಿಷ್ಟ ಆಫ್ರಿಕನ್ ಬುಡಕಟ್ಟುಗಳು ನಂಬುತ್ತಾರೆ. ಮಲೆನೇಶಿಯಾದ ಮಾನುಸ್ಗಳಿಗನುಸಾರ, ಒಬ್ಬ ಮನುಷ್ಯನ ಅಥವಾ ನಿಕಟ ರಕ್ತಸಂಬಂಧಿಯೊಬ್ಬನ ಆತ್ಮವೊಂದು ಅವನ ಕುಟುಂಬದ ಮೇಲೆ ಮೇಲ್ವಿಚಾರಣೆ ಮಾಡುತ್ತಾ ಇರುತ್ತದೆ.
ಕೆಲವು ಅಮೆರಿಕನ್ ಇಂಡಿಯನರು, ಆತ್ಮಗಳ ಸಂಖ್ಯೆಯು ಮಿತಗೊಳಿಸಲ್ಪಟ್ಟಿರುವದರಿಂದ, ಅವುಗಳನ್ನು “ಮೊದಲನೆಯದಾಗಿ ಮಾನವರಾಗಿ ಮತ್ತು ನಂತರ ಪ್ರೇತ ಅಥವಾ ಪ್ರಾಣಿಗಳಾಗಿ ಒಂದಾದ ಮೇಲೊಂದಾಗಿ ಪುನರಾವತಾರವೆತ್ತುವದನ್ನು” ಆವಶ್ಯಕವನ್ನಾಗಿ ಮಾಡುತ್ತದೆ ಎಂದು ನಂಬುತ್ತಾರೆ. ದಿ ಎನ್ಸೈಕ್ಲೊಪಿಡಿಯಾ ಆಫ್ ರಿಲಿಜನ್ ವಿವರಿಸುವದು: “ಒಂದು ಮಾನವ ಮೃತ್ಯು ಒಂದು ಪಶುವಿಗೆ ಯಾ ಪ್ರೇತಕ್ಕೆ ಆತ್ಮವನ್ನು ಬಿಟ್ಟುಕೊಡುತ್ತದೆ, ಮತ್ತು ಹೀಗೆ ವಿಪರ್ಯಯವಾಗಿಯೂ ಇದು ಸತ್ಯ, ಈ ರೀತಿಯಲ್ಲಿ ಮಾನವರು, ಪಶುಗಳು, ಮತ್ತು ಪ್ರೇತಗಳು ಪರಸ್ಪರ ಆತುಕೊಳ್ಳುವಿಕೆಯ ಚಕ್ರದಲ್ಲಿ ಜೋಡಿಸಲ್ಪಟ್ಟಿರುತ್ತಾರೆ.”
ಈ ರೀತಿಯಲ್ಲಿ ಆರಂಭದ ದೇಶ ಅನ್ವೇಷಕರು ಎಸ್ಕಿಮೊ ಹೆತ್ತವರು ತಮ್ಮ ಮಕ್ಕಳನ್ನು “ಅಮ್ಮಾ” ಯಾ “ಅಜ್ಜಾ” ಎಂಬ ಪದಗಳಿಂದ ಸಂಬೋಧಿಸುತ್ತಾ, ತಮ್ಮ ಮಕ್ಕಳನ್ನು ಶಿಸ್ತುಗೊಳಿಸುವದರಲ್ಲಿ ಸಡಿಲತೆಯಿಂದಿರುವದನ್ನು ಕಾಣಲು ಆಶ್ಚರ್ಯಗೊಂಡಿದ್ದರು. ಗ್ರಂಥಕರ್ತ ಎರ್ನೆಸ್ಟ್ ಎಸ್. ಬುರ್ಕ್, Jr., ವಿವರಿಸುವದು, ಆ ಪದ ಸೂಚಿಸುವ ಸಂಬಂಧಿಕರ ಹೆಸರನ್ನು ಆ ಮಗುವಿಗೆ ಇಟ್ಟಿರುವದರಿಂದಾಗಿಯೇ ವಿಷಯವು ಹೇಗಿರುತ್ತದೆ ಮತ್ತು ಸ್ವಭಾವಿಕವಾಗಿಯೇ ಒಬ್ಬ ಎಸ್ಕಿಮೋ ತಂದೆಯು, “ಈಗ ತನ್ನ ಮಗನ ದೇಹದಲ್ಲಿ ಅವನ ಅಜ್ಜಿಯು ಸ್ಥಳಾಂತರಿಸಲ್ಪಟ್ಟಿರುವದರಿಂದ, ತನ್ನ ಅಜಿಯ್ಜನ್ನು ಶಿಕ್ಷಿಸುವ ಕಲ್ಪನೆಯಿಂದ ಹಿಂಜರಿಯುವನು.”
ಉತ್ತರ ಅಮೆರಿಕದ ಕೆಲವು ಇಂಡಿಯನರ ಬುಡಕಟ್ಟುಗಳಿಂದ “ಇದರ ನಂತರ”ವು ಚಿತ್ರಿಸಲ್ಪಟ್ಟಂತೆ, ಮರಣದಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ಒಟ್ಟಿಗೆ ಒಂದೇ ಕಡೆ ಹೋಗುವದು ಒಂದು ಸಂತೋಷದ ಬೇಟೆಯಾಡುವ ಮೈದಾನು ಎಂದಾಗಿದೆ. ಅಲ್ಲಿ ಅವರು ತಮ್ಮ ಪ್ರೀತಿಯ ಸಂಬಂಧಿಕರೊಂದಿಗೆ ಪುನಃ ಐಕ್ಯಗೊಳ್ಳುತ್ತಾರೆ, ಆದರೂ ಅಲ್ಲಿ ತಮ್ಮ ಗತಕಾಲದ ಶತ್ರುಗಳನ್ನು ಎದುರಿಸುತ್ತಾರೆ. ಕೆಲವು ಇಂಡಿಯನರು ಅವರ ಶತ್ರುಗಳನ್ನು ಕೊಂದಾದ ನಂತರ, ನೆತ್ತಿಯ ಚರ್ಮವನ್ನು ಸುಲಿಯುತ್ತಿದ್ದರು, ಪ್ರಾಯಶಃ ಆ ಮೂಲಕ ಇದು ಆತ್ಮ ಲೋಕದಲ್ಲಿ ಶತ್ರುಗಳ ಪ್ರವೇಶವನ್ನು ತಡೆಯುತ್ತದೆ ಎಂದು ನಂಬುತ್ತಿದ್ದರು.
ಮರಣಾನಂತರ ಯಾವುದಾದರೊಂದು ವಿಧದ ಜೀವಿತವು ಇದೆ ಎಂಬ ಮೂಲನಿವಾಸಿಗಳ ಧರ್ಮಗಳಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯು, ಮಾನವರಲ್ಲಿ ಒಂದು ಅಮರತ್ವದ ಆತ್ಮವಿದೆ ಎಂದು ಕ್ರೈಸ್ತ ಧರ್ಮಗಳು ಕಲಿಸುವದು ಸರಿ ಎದು ರುಜು ಪಡಿಸುತ್ತದೋ? ಎಂದಿಗೂ ಇಲ್ಲ. ಸತ್ಯ ಧರ್ಮವು ಆರಂಭಗೊಂಡ ಏದೇನಿನಲ್ಲಿ ದೇವರು ಮರಣದ ನಂತರದ ಕುರಿತು ಏನನ್ನೂ ಹೇಳಲಿಲ್ಲ; ಮರಣದ ವ್ಯತಿರಿಕ್ತವಾಗಿ ಅವನು ನಿತ್ಯ ಜೀವದ ಪ್ರತೀಕ್ಷೆಯನ್ನು ಎತ್ತಿ ಹಿಡಿದನು. ಮರಣವು ಒಂದು ಉತ್ತಮ ಜೀವಿತಕ್ಕೆ ಒಂದು ದ್ವಾರವಾಗಿದೆ ಎಂಬ ಕಲ್ಪನೆಯನ್ನು ಹುಟ್ಟು ಹಾಕಿ ಪ್ರೋತ್ಸಾಹಿಸಿದ್ದು ಸೈತಾನನು ಮತ್ತು ನಂತರ ಬೆಬಿಲೋನಿನಲ್ಲಿ ಅದು ಕಲಿಸಲ್ಪಟ್ಟಿತು.
ಮಾನವ ಆವಶ್ಯಕತೆಗಳೋ, ಯಾ ದೈವಿಕ ಅಭಿರುಚಿಯೋ?
ಮೂಲನಿವಾಸಿಗಳ ಧರ್ಮದಲ್ಲಿ ಒತ್ತರವು ವೈಯಕ್ತಿಕ ಸುರಕ್ಷತೆ ಯಾ ಸಮಾಜದ ಶ್ರೇಯಸ್ಸಿನ ಮೇಲೆ ಇರುತ್ತಿತ್ತು. ಆದುದರಿಂದ, ಆಸ್ಟ್ರೇಲಿಯದ ಮೂಲನಿವಾಸಿಗಳ ಧರ್ಮದ ಕುರಿತು, ರೊನಾಲ್ಡ್ ಬರ್ನ್ಡ್ಟ್ ಬರೆಯುವದು: “ದಿನನಿತ್ಯದ ಜೀವಿತದಲ್ಲಿ ಜನರ ವಿಧವಿಧದ ವ್ಯಾಕುಲತೆಯನ್ನು [ಅದು] ಪ್ರತಿಬಿಂಬಿಸಿತು. ಸಮಾಜಿಕ ಸಂಬಂಧಗಳ ಮೇಲೆ, ಮಾನವನು ಅಸ್ತಿತ್ವದ ಬಿಕ್ಕಟ್ಟಿನ ಮೇಲೆ, ಮತ್ತು ಪಾರಾಗುವಿಕೆಯ ವ್ಯಾವಹಾರಿಕ ವಿಷಯಗಳ ಮೇಲೆ ಅದು ಕೇಂದ್ರೀಕೃತವಾಗಿತ್ತು.”
ಅಂಥ ಮಾನವ ಆವಶ್ಯಕತೆಗಳೊಂದಿಗೆ ವ್ಯವಹರಿಸಲು ಎನಿಮಿಸಮ್, ಫೆಟಿಶಿಸಮ್ ಮತ್ತು ಶಾಮಾನಿಸಮ್ ಎಂದು ಪರಿಚಿತವಾಗಿರುವ ಆರಾಧನಾ ಪದ್ಧತಿಗಳು ರೂಪಿಸಲ್ಪಟ್ಟಿವೆ. ಈ ಆರಾಧನಾ ವಿಧಾನಗಳು ಬೇರೆ ಬೇರೆ ಸಮಾಜಗಳಲ್ಲಿ, ಬೇರೆ ಬೇರೆ ಸಂಯೋಗಗಳಲ್ಲಿ ಮತ್ತು ವಿವಿಧ ತೀವ್ರತೆಯ ದರ್ಜೆಗಳಲ್ಲಿ ಅಸ್ತಿತ್ವಗಳಲ್ಲಿವೆ.
ಎನಿಮಿಸಮ್ (ಸರ್ವಚೇತನ ವಾದ), ಭೌತಿಕ ವಸ್ತುಗಳಾದ ಗಿಡಗಳಿಗೆ ಮತ್ತು ಕಲ್ಲುಗಳಿಗೆ ಮತ್ತು ಸ್ವಾಭಾವಿಕ ಪ್ರಕೃತಿ ಘಟನೆಗಳಾದ ಗುಡುಗು ಬಿರುಗಾಳಿ ಮತ್ತು ಭೂಕಂಪಗಳಿಗೂ ಪ್ರಜ್ಞೆಯಿರುವ ಜೀವ ಮತ್ತು ಅಂತಸ್ಥವಾಗಿರುವ ಆತ್ಮ ಇದೆ ಎಂದು ಹೇಳುತ್ತದೆ. ಶರೀರದಿಂದ ಬಿಡುಗಡೆ ಹೊಂದಿದ ಆತ್ಮಗಳು ಅಸ್ತಿತ್ವದಲ್ಲಿವೆ ಮತ್ತು ಅವುಗಳು ಜೀವಿತರ ಮೇಲೆ ಕರುಣಾಳು ಅಥವಾ ಅತ್ಯುಗ್ರ ಪ್ರಭಾವವನ್ನು ಬೀರುತ್ತವೆ ಎಂಬ ಕಲ್ಪನೆಯನ್ನು ಕೂಡಾ ಅದರಲ್ಲಿ ಸೇರಿರಬಹುದು.
ಫೆಟಿಶಿಸಮ್ (ವಸ್ತುಪೂಜಾ ವಾದ) ಎಂಬುದು ಪೋರ್ಚುಗೀಸ್ ಶಬ್ದದಿಂದ ಬರುತ್ತದೆ. ಕೆಲವೊಮ್ಮೆ ಈ ಶಬ್ದವನ್ನು, ತಮ್ಮ ಒಡೆತನವಿದ್ದವರಿಗೆ ಸಂರಕ್ಷಣೆ ಯಾ ಸಹಾಯವನ್ನು ಒದಗಿಸುವ, ಅಲೌಕಿಕ ಶಕ್ತಿಗಳನ್ನು ಹೊಂದಿರುವ ವಸ್ತುಗಳಿಗೆ ಉಪಯೋಗಿಸಲಾಗಿದೆ. ಹೀಗಿರುವದರಿಂದ, ಪಶ್ಚಿಮ ಆಫ್ರಿಕನರು ಅವರ ಧರ್ಮಗಳಲ್ಲಿ ಉಪಯೋಗಿಸುತ್ತಿದ್ದ ಮಂತ್ರ, ತಾಯಿತಗಳನ್ನು ಕಂಡುಕೊಂಡಾಗ ಅವುಗಳನ್ನು ಗುರುತಿಸಲಿಕ್ಕಾಗಿ ಈ ಪದವನ್ನು ಪೋರ್ಚುಗೀಸ್ ಭೂಅನ್ವೇಷಕರು ಉಪಯೋಗಿಸಿದರು. ವಿಗ್ರಹಾರಾಧನೆಗೆ ಹತ್ತಿರವಾಗಿ ಸಂಬಂಧಿಸಿದ ವಸ್ತುಪೂಜಾ ವಾದವು ಅನೇಕ ವಿಧಾನಗಳನ್ನು ಹೊಂದಿದೆ. ಉದಾಹರಣೆಗೆ, ಕೆಲವು ಅಮೆರಿಕನ್ ಇಂಡಿಯನರು, ಗರಿಗಳಿಗೆ ಅಲೌಕಿಕ ಶಕ್ತಿಗಳು ಸೇರಿವೆ ಎಂದೆಣಿಸಿ, ಅವುಗಳು ಪ್ರಾರ್ಥನೆಗಳನ್ನು ಯಾ ಸಂದೇಶಗಳನ್ನು ಸ್ವರ್ಗದ ಕಡೆಗೆ “ಹಾರಿಸುವಂಥ” ಪರಿಣಾಮಕಾರಿ ವಾಹಕಗಳೆಂದು ಪರಿಗಣಿಸುತ್ತಾರೆ.
ಶಾಮಾನಿಸಮ್ “ತಿಳಿದಾತನು” ಎಂದರ್ಥ ಕೊಡುವ ಟುಂಗುಸೊ-ಮಂಚೂರಿಯನ್ನ ಪದವಾಗಿದೆ. ಇದು ಶಾಮಾನ್ ಎಂಬ ವ್ಯಕ್ತಿಯ ಸುತ್ತಲೂ ಕೇಂದ್ರಿತವಾಗಿದೆ. ಅವನು ಗುಣಪಡಿಸಲು ಮತ್ತು ಪ್ರೇತ ಲೋಕದೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಿರುವ ವ್ಯಕ್ತಿ ಎಂದು ಭಾವಿಸಲ್ಪಟ್ಟಿದ್ದಾನೆ. ಈ ಮದ್ದಿನ ಮನುಷ್ಯ, ಮಾಂತ್ರಿಕ ವೈದ್ಯ, ಮಾಟಗಾರ್ತಿ—ಯಾವುದೇ ಪದವನ್ನು ನೀವು ಉಪಯೋಗಿಸಲು ಬಯಸಬಹುದು—ಅವರು ಆರೋಗ್ಯವನ್ನು ಸುರಕ್ಷಿತಗೊಳಿಸುತ್ತಾರೆ ಯಾ ಜನ್ಮ ಕೊಡುವ ಶಕ್ತಿಗಳನ್ನು ಪುನಃ ಸ್ಥಾಪಿಸುತ್ತಾರೆಂದು ಹೇಳಿಕೊಳ್ಳುತ್ತಾರೆ. ದಕ್ಷಿಣ ಅಮೆರಿಕದ ಕಾಡಿನ ಕೆಲವು ಬುಡಕಟ್ಟುಗಳಲ್ಲಿ ಇರುವಂತೆ, ಚಿಕಿತ್ಸೆ ಪಡೆಯುವದಕ್ಕೋಸ್ಕರ ನೀವು ನಿಮ್ಮ ತುಟಿ, ಮೂಗಿನ ವಿಭಾಜಕ ಭಿತ್ತಿ, ಯಾ ಕಿವಿಯ ಪಾಲಿಗಳನ್ನು ಚುಚ್ಚಿ ರಂಧ್ರ ಮಾಡಬೇಕಾದೀತು. ನಿಮ್ಮ ದೇಹಕ್ಕೆ ಬಣ್ಣ ಬಳಿಯಬೇಕಾದೀತು, ಯಾ ನೀವು ನಿರ್ದಿಷ್ಟ ಅಲಂಕಾರಿಕ ಒಡವೆಗಳನ್ನು ಧರಿಸಬೇಕಾದೀತು. ಅಥವಾ ಉತ್ತೇಜಕಾರಿ ಮತ್ತು ಮತ್ತುಬರಿಸುವ ತಂಬಾಕು ಮತ್ತು ಕೋಕ ಎಲೆಗಳನ್ನು ನೀವು ಉಪಯೋಗಿಸುವಂತೆ ನಿಮಗೆ ಹೇಳಲ್ಪಡಬಹುದು.
ಬೋಧನೆಗಳ ಮೇಲೆ ನಿರ್ಬಲವಾಗಿರುವಂಥ, ಮೂಲ ನಿವಾಸಿಗಳ ಧರ್ಮಗಳಿಗೆ ಸೃಷ್ಟಿಕರ್ತನ ಸ್ಪಷ್ಟವಾದ ಜ್ಞಾನವನ್ನು ಬೇರೆಯವರಿಗೆ ತಲುಪಿಸಲು ಸಾಧ್ಯವಿಲ್ಲ. ಮತ್ತು ದೈವಿಕ ಅಭಿರುಚಿಗಳ ಮೇಲೆ ಮಾನವನ ಆವಶ್ಯಕತೆಗಳನ್ನು ಎತ್ತಿ ಹಿಡಿಯುವದರ ಮೂಲಕ, ಆತನ ನ್ಯಾಯೋಚಿತ ಸಲ್ಲಿಸುವಿಕೆಯನ್ನು ಅವರು ಆತನಿಂದ ಕದಿಯುತ್ತಾರೆ. ಹೀಗೆ, ಕ್ರೈಸ್ತ ಪ್ರಪಂಚವು ಅದರ ಆಧುನಿಕ ದಿನದ ಮಿಶನೆರಿ ಕಾರ್ಯವನ್ನು ಆರಂಭಿಸಿದಾಗ, ಎದ್ದಿರುವ ಪ್ರಶ್ನೆಯು: “ವಿಧರ್ಮಿಯರ” ಹೃದಯಗಳನ್ನು ದೇವರ ಸಮೀಪಕ್ಕೆ ಸೆಳೆಯಲು “ಕ್ರೈಸ್ತರಿಗೆ” ಸಾಧ್ಯವಾದೀತೊ?
15ನೆಯ ಶತಮಾನದಲ್ಲಿ, ಸ್ಪೆಯ್ನ್ ಮತ್ತು ಪೋರ್ಚುಗಲ್ ಭೂಶೋಧನೆ ಮತ್ತು ನೆಲಸುನಾಡುಗಳನ್ನು ವಿಸ್ತರಿಸುವ ಒಂದು ಕಾರ್ಯಕ್ರಮವನ್ನು ಆರಂಭಿಸಿದವು. ಈ ಕ್ಯಾಥಲಿಕ್ ಶಕ್ತಿಗಳು ಹೊಸ ಭೂಪ್ರದೇಶಗಳನ್ನು ಕಂಡುಹಿಡಿಯುವಾಗ, ಮೂಲ ನಿವಾಸಿಗಳನ್ನು ಅವರ ಹೊಸ “ಕ್ರೈಸ್ತ” ಸರಕಾರವನ್ನು ಸ್ವೀಕರಿಸುವಂತೆ ಚರ್ಚ್ ಗೊತ್ತುಪಾಡು ಮಾಡುತ್ತಾ, ಮತಾಂತರಗೊಳಿಸಲು ಆರಂಭಿಸಿದರು. ಆಫ್ರಿಕ ಮತ್ತು ಏಶ್ಯಾಗಳಲ್ಲಿ ಪೋಪ್ ಗುರುವಿನ ಶಾಸನವು ಧರ್ಮಪ್ರಚಾರದ ಹಕ್ಕುಗಳನ್ನು ಪೋರ್ಚುಗಲಿಗೆ ಕೊಟ್ಟಿತು. ಆನಂತರ, ಅಮೆರಿಕವನ್ನು ಕಂಡುಹಿಡಿದ ಮೇಲೆ, ಪೋಪ್ ಅಲೆಕ್ಸಾಂಡರ್ VIರ ಮೂಲಕ ಸ್ಪೆಯ್ನ್ಗೆ ಪಶ್ಚಿಮದ ಮತ್ತು ಪೋರ್ಚುಗಲಿಗೆ ಪೂರ್ವದ ಹಕ್ಕುಗಳನ್ನು ಕೊಡುವ, ಊಹನೆಯ ರೇಖೆಯನ್ನು ಮಧ್ಯ-ಅಟ್ಲಾಂಟಿಕ್ನಲ್ಲಿ ಎಳೆಯಲಾಯಿತು.
ಅದೇ ಸಮಯದಲ್ಲಿ, ಕ್ಯಾಥಲಿಕರ ವಿರುದ್ಧ ತಮ್ಮ ಸ್ವಂತ ಸ್ಥಾನಗಳನ್ನು ಭದ್ರಪಡಿಸುವದರಲ್ಲಿ ಪ್ರೊಟೆಸ್ಟಾಂಟ್ರು ಬಹಳ ಕಾರ್ಯಮಗ್ನರಿದರ್ದಿಂದ ಇತರರನ್ನು ಮತಾಂತರಗೊಳಿಸುವದಕ್ಕೆ ಗಮನ ಹರಿಸಲಿಲ್ಲ ಇಲ್ಲವೇ ಅವರು ಹಾಗೆ ಮಾಡುವಂತೆ ಪ್ರೊಟೆಸ್ಟಾಂಟ್ ಸುಧಾರಕರು ಪ್ರೇರೇಪಣೆ ನೀಡಲೂ ಇಲ್ಲ. ಲೋಕಾಂತ್ಯವು ಎಷ್ಟು ಹತ್ತರಿಸಿದೆ ಅಂದರೆ “ವಿಧರ್ಮಿಗಳಿಗೆ” ತಲುಪಲು ಕೂಡ ಈಗ ತಡವಾಗಿದೆ ಎಂದು ಲೂಥರ್ ಮತ್ತು ಮೆಲಂಚ್ತೋನ್ ಪ್ರಾಯಶಃ ನಂಬಿದ್ದರು.
ಆದಾಗ್ಯೂ, 17ನೆಯ ಶತಕದಲ್ಲಿ, ಪೆಯಿಟಿಸಮ್ (ಭಕ್ತಿ ವಾದ) ಎಂದು ಕರೆಯಲ್ಪಡುವ ಒಂದು ಪ್ರೊಟೆಸ್ಟಾಂಟ್ ಚಳುವಳಿಯು ಬೆಳೆಯಲು ಆರಂಭಗೊಂಡಿತು. ಸುಧಾರಣೆಯ ಒಂದು ಶಾಖೆಯಾಗಿದ್ದು, ಅದು ಬಾಹ್ಯಾಚಾರಗಳಿಗಿಂತ ವೈಯಕ್ತಿಕ ಧಾರ್ಮಿಕ ಅನುಭವವನ್ನು ಒತ್ತಿಹೇಳಿತು ಮತ್ತು ಬೈಬಲ್ ವಾಚನ ಮತ್ತು ಧಾರ್ಮಿಕ ಕಟ್ಟುಪಾಡಿಗೆ ಒತ್ತರ ಹಾಕಿತು. ಒಬ್ಬ ಲೇಖಕನು ಅದನ್ನು ವಿವರಿಸಿದಂತೆ, ಅದರ “ಕ್ರಿಸ್ತನ ಸುವಾರ್ತೆಯ ಜರೂರಿಯಿದ್ದ ಮಾನವ ಕುಲದ ಒಂದು ನೋಟ” ಎಂಬದು 18ನೆಯ ಶತಮಾನದ ಕೊನೆಯ ಭಾಗದಲ್ಲಿ ಮಿಶನೆರಿ ಚಟುವಟಿಕೆಯ “ಹಡಗಿನ” ಮೇಲೆ ಕಟ್ಟಕಡೆಗೆ ಪ್ರೊಟೆಸ್ಟಾಂಟಿಸಂ ಏರುವಂತೆ ಮಾಡಿತು.
1,500ರಲ್ಲಿ ಲೋಕದ ಜನಸಂಖ್ಯೆಯ ಸಾಧಾರಣ ಐದನೆಯ ಒಂದು ಭಾಗದಿಂದ, ಕ್ರೈಸ್ತರೆನಿಸಿಕೊಳ್ಳುವವರ ಸಂಖ್ಯೆಯು 1,800ರಲ್ಲಿ ನಾಲ್ಕರ ಒಂದು ಭಾಗಕ್ಕೆ ಏರಿತು, ಮತ್ತು 1,900ರಷ್ಟರಲ್ಲಿ ಸಾಧಾರಣ ಮೂರರಲ್ಲಿ ಒಂದು ಭಾಗವಾಯಿತು. ಲೋಕದಲ್ಲಿ ಮೂರರ ಒಂದು ಭಾಗ ಈಗ “ಕ್ರೈಸ್ತ”ವಾಗಿತ್ತು!
ಅವರು ನಿಜವಾಗಿ ಕ್ರೈಸ್ತ ಶಿಷ್ಯರನ್ನು ಮಾಡಿದರೋ?
ಮೂಲ ನಿವಾಸಿಗಳಲ್ಲಿ ದೊರಕಿದ ಸತ್ಯದ ಗುರುತುಗಳು ಬೆಬಿಲೋನಿನ ಸುಳ್ಳುತನದ ಅನೇಕ ಘಟಕಗಳ ಮೂಲಕ ಬಂದ ಕವಲುಗಳು, ಆದರೆ ಇದು ಮತಭ್ರಷ್ಟ ಹೊಂದಿದ ಕ್ರೈಸ್ತತ್ವದ ಬಗ್ಗೆಯೂ ಸಮಾನ ಸತ್ಯವಾಗಿದೆ. ಈ ಸರ್ವ ಸಾಮಾನ್ಯ ಧರ್ಮಗಳ ಪಿತ್ರಾರ್ಜಿತವು “ವಿಧರ್ಮಿ”ಗಳಿಗೆ “ಕ್ರೈಸ್ತ”ರಾಗಲಿಕ್ಕೆ ಬಹಳ ಸುಲಭವನ್ನಾಗಿ ಮಾಡಿತು. ದಿ ಮಿಥಲೊಜಿ ಆಫ್ ಆಲ್ ರೇಸಸ್ ಎಂಬ ಪುಸ್ತಕವು ಹೇಳುವದು: “ಮಾಯಾನ್ ಜನರಂತೆ, ಕ್ರೈಸ್ತ ಮತಾಚರಣೆ ಮತ್ತು ಸಂಕೇತಗಳಿಗೆ ಅಷ್ಟೊಂದನ್ನು ಒದಗಿಸಿದ ಯಾ ಅಂಥಾ ಗಮನಾರ್ಹ ಸಾದೃಶ್ಯಗಳಿರುವ ಬೇರೆ ಯಾವುದೇ ಕ್ಷೇತ್ರವು ಅಮೆರಿಕದಲ್ಲಿ ಇಲ್ಲ.” ಶಿಲುಬೆಯ ಪೂಜೆ ಮತ್ತು ಸಂಸ್ಕಾರಗಳಲ್ಲಿ ಬೇರೆ ಸರಿ ಹೋಲುವಿಕೆಗಳು “ಕಡಿಮೆ ತಿಕ್ಕಾಟದ ಮೂಲಕ ಧರ್ಮ ಬದಲಾಯಿಸುವದನ್ನು ಮುನ್ನಡಿಸಿತು.”
ಆಫ್ರಿಕಾನರು—ಸಾಧಾರಣ 450 ವರ್ಷಗಳಷ್ಟು ಕಾಲ, ಕ್ರಮವಾಗಿ “ಕ್ರೈಸ್ತರಿಂದ” ಅಪಹರಿಸಲ್ಪಟ್ಟು, ಗುಲಾಮರಾಗಿ ಸೇವೆ ಸಲ್ಲಿಸಲು ನೂತನ ಜಗತ್ತಿಗೆ ತರಲ್ಪಟ್ಟರು,—ಅವರೂ ಕೂಡಾ “ಅತಿ ಕಡಿಮೆ ತಿಕ್ಕಾಟದೊಂದಿಗೆ” ಧರ್ಮವನ್ನು ಬದಲಾಯಿಸಲು ಶಕ್ತರಾದರು. “ಕ್ರೈಸ್ತರು” ಯೂರೋಪಿನ ಮೃತ “ಸಂತರನ್ನು” ಪೂಜಿಸುವಾಗ, “ವಿಧರ್ಮಿ ಕ್ರೈಸ್ತರಿಂದ” ಆಫ್ರಿಕಾದ ಪೂರ್ವಜ ಆತ್ಮಗಳಿಗೆ ಆರಾಧನೆ ಕೊಡಲ್ಪಡುವದರ ವಿರುದ್ಧ ಯಾರು ಮಾತಾಡಬಹುದು? ಹೀಗಿರುವಲ್ಲಿ, ದಿ ಎನ್ಸೈಕ್ಲೊಪಿಡಿಯಾ ಆಫ್ ರಿಲಿಜನ್ ಗಮನಿಸುವದು: “ವೂಡೂ . . . , ಪಶ್ಚಿಮ ಆಫ್ರಿಕದ ಧರ್ಮಗಳ, ಮಾಟಮಂತ್ರಗಳ, ಕ್ರೈಸ್ತ ಧರ್ಮದ, ಮತ್ತು ಪರಂಪರೆಯ ನಂಬಿಕೆ . . . , ಇವೆಲ್ಲವುಗಳ ತುಣುಕುಗಳನ್ನು ಜೋಡಿಸಿದ ಒಂದು ಸಮ್ಮಿಳಿತ ಧರ್ಮವಾಗಿದೆ. ಅದು, ಹೆಸರಿನ ಕ್ಯಾಥಲಿಕರನ್ನು ಸಹ ಸೇರಿಸಿ, ಹೈಟೀಯ ಬಹು ಸಂಖ್ಯಾತ ಜನರ ನಿಜ ಧರ್ಮವಾಗಿದೆ.”
ದಿ ಕನ್ಸೊಯಿಸ್ ಡಿಕ್ಷನೆರಿ ಆಫ್ ದಿ ಕ್ರಿಶ್ಚ್ಯನ್ ವರ್ಲ್ಡ್ ಮಿಶನ್ ಒಪ್ಪಿಕೊಳ್ಳುತ್ತದೆ ಏನಂದರೆ, ಲ್ಯಾಟಿನ್ ಅಮೆರಿಕ ಮತ್ತು ಫಿಲಿಪೈನ್ಸ್ನ ಮತಾಂತರವು ಕೇವಲ ಮೇಲ್ಮೈಯದಾಗಿತ್ತು, “ಈ ಪ್ರದೇಶಗಳ ಕ್ರೈಸ್ತತ್ವವು ಇಂದು ಮೂಢ ನಂಬಿಕೆ ಮತ್ತು ಅಜ್ಞಾನದೊಂದಿಗಿನ ಒಗಟುಗಳಿಂದ ತುಂಬಿದೆ. ಅಜ್ಟೆಕ್, ಮಾಯಾ ಮತ್ತು ಇಂಕಾಸ್ಗಳಿಗೆ, “‘ಮತಾಂತರವು’ ಕೇವಲ ಅವರ ಸಕಲ ದೇವತೆಗಳ ದೇವಾಲಯದಲ್ಲಿ ಇನ್ನೊಂದು ದೇವತೆಯ ಕೂಡಿಸುವಿಕೆಯ ಅರ್ಥದಲ್ಲಿದೆ.”
ಘಾನಾ ಮತ್ತು ಕೊಟ್ ಡಿ ಐವರ್ನ ಆಕಾನ್ ಜನರ ಕುರಿತು, ಪಿಬೊಡಿ ಮ್ಯುಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ (ನೈಸರ್ಗಿಕ ಇತಿಹಾಸದ ಪಿಬೊಡಿ ವಸ್ತು ಸಂಗ್ರಹಾಲಯ)ಯದ ಮಿಶೆಲ್ ಗಿಲ್ಬರ್ಟ್ ಹೇಳುವದು: “ಸಾಂಪ್ರದಾಯಿಕ ಧರ್ಮವು ಮುಂದುವರಿಯುತ್ತಾ ಇದೆ. ಯಾಕಂದರೆ ಅದು ಜನರಿಗೆ ನಂಬಿಕೆಯ ಅತಿ ಕಾರ್ಯಸಾಧಕ ವ್ಯವಸ್ಥೆಯಾಗಿರುತ್ತದೆ, ಮತ್ತು ಅದು ಲೋಕಕ್ಕೆ ಅರ್ಥವನ್ನು ಕೊಡುತ್ತಾ ಮುಂದುವರಿಯುತ್ತದೆ ಎಂದು ಗ್ರಹಿಸುವಂತೆ ಮಾಡಲಾಗಿದೆ.”
ಯುನಿವರ್ಸಿಟಿ ಆಫ್ ಝಿಂಬಾವೇಯ್ವ ಎಂ.ಎಫ್.ಸಿ. ಬೊರ್ಡಿಲೊನ್, ಶೋನಾ ಧರ್ಮದ ಸದಸ್ಯರೊಳಗಿನ “ಧಾರ್ಮಿಕ ಸಜ್ಜುಗೊಳಿಸುವಿಕೆ”ಯ ಬಗ್ಗೆ ಹೇಳುವದು: “ವಿವಿಧ ಸಾಂಪ್ರದಾಯಿಕ ಪಂಥಗಳೊಂದಿಗೆ ವಿವಿಧ ರೀತಿಯ ಕ್ರೈಸ್ತತ್ವವು ಸೇರಿ ಎಲ್ಲವು ಧಾರ್ಮಿಕ ಪ್ರತಿಕ್ರಿಯೆಗಳ ನಿಂತ ನೀರಿನ ಮಡುವಾಗಿದೆ, ಆದುದರಿಂದ, ವ್ಯಕ್ತಿಯೊಬ್ಬನು ಅವನ ಅಥವಾ ಅವಳ ಸದ್ಯದ ಆವಶ್ಯಕತೆಗಳ ಆಧಾರದ ಮೇಲೆ ಆರಿಸುವಿಕೆಯನ್ನು ಮಾಡಬಹುದು.”
ಆದರೆ ಒಂದು ವೇಳೆ, “ವಿಧರ್ಮಿ ಕ್ರೈಸ್ತರು” ಮೇಲ್ಮೈಯ, ಅಜ್ಞಾನದ, ಮೂಢನಂಬಿಕೆಯ, ಮತ್ತು ಬಹು-ದೇವತಾವಾದದ ಸ್ವಭಾವದವರೆಂದು ಗುರುತಿಸಲ್ಪಟ್ಟಿರುವದಾದರೆ, ಮತ್ತವರ ಸಾಂಪ್ರದಾಯಿಕ ಧರ್ಮಗಳು, ಕ್ರೈಸ್ತತ್ವಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬ ನೋಟವುಳ್ಳವರಾಗಿರುವದಾದರೆ, ಮತ್ತು ಅವರು ಸಂದರ್ಭಗಳು ಮಾರ್ಗದರ್ಶಿಸುವಂತೆ ಒಂದರಿಂದ ಮತ್ತೊಂದಕ್ಕೆ ಚಲಿಸಲು ಅವರನ್ನು ಬಿಟ್ಟುಕೊಟ್ಟು, ಧರ್ಮವನ್ನು ಕೇವಲ ಒಂದು ಅನುಕೂಲದ ಯಾ ಸಂದರ್ಭಕ್ಕೆ ತಕ್ಕ ವಿಷಯವೆಂದು ನೋಡುವದಾದರೆ, ಕ್ರೈಸ್ತ ಪ್ರಪಂಚವು ನಿಜ ಕ್ರೈಸ್ತ ಶಿಷ್ಯರನ್ನು ಮಾಡಿದೆ ಎಂದು ನೀವು ಹೇಳುವಿರೋ?
ಶಿಷ್ಯರಲ್ಲದಿದ್ದರೆ, ಅವರು ಯಾರಾಗಿದ್ದಾರೆ?
ನಿಜ, ಕ್ರೈಸ್ತ ಪ್ರಪಂಚದ ಮಿಶನೆರಿಗಳು ಅಶಿಕ್ಷಿತರಿಗೆ ವಿದ್ಯಾಭ್ಯಾಸ ನೀಡಲು ನೂರಾರು ಶಾಲೆಗಳನ್ನು ನಿರ್ಮಿಸಿರುತ್ತಾರೆ. ರೋಗಪೀಡಿತರಿಗೆ ಗುಣ ಪಡಿಸಲು ಆಸ್ಪತ್ರೆಗಳನ್ನು ಕಟ್ಟಿರುತ್ತಾರೆ. ಮತ್ತು ತಕ್ಕ ಮಟ್ಟಿಗೆ, ಅವರು ಬೈಬಲಿಗೆ ಮತ್ತು ಅದರ ಸೂತ್ರಗಳಿಗೆ ಗೌರವವನ್ನೂ ಬೆಳಸುತ್ತಾರೆ.
ಆದರೆ “ವಿಧರ್ಮಿಗಳಿಗೆ,” ದೇವರ ವಾಕ್ಯದ ಗಟ್ಟಿಯಾದ ಆತ್ಮಿಕ ಆಹಾರವನ್ನು ಉಣಬಡಿಸಿರುತ್ತಾರೋ ಯಾ ಧರ್ಮಭೃಷ್ಟ ಕ್ರೈಸ್ತತ್ವದ ಆಹಾರದ ಚೂರುಗಳನ್ನು ತಿನ್ನಿಸಿರುತ್ತಾರೋ? “ವಿಧರ್ಮಿಗಳ” ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ತ್ಯಜಿಸಲಾಗಿದೆಯೋ ಯಾ ಕೇವಲ “ಕ್ರೈಸ್ತರ” ಬಟ್ಟೆಯಲ್ಲಿ ಸುತ್ತಲ್ಪಟ್ಟಿವೆಯೋ? ಚುಟುಕಾಗಿ, ಕ್ರೈಸ್ತ ಧರ್ಮದ ಮಿಶನೆರಿಗಳು ದೇವರಿಗೋಸ್ಕರ ಹೃದಯಗಳನ್ನು ಜಯಿಸಿದ್ದಾರೋ, ಯಾ ಕೇವಲ “ಕ್ರೈಸ್ತರ” ಬಲಿಪೀಠಗಳ ಮುಂದೆ ಅಡ್ಡಬೀಳುವಂತೆ “ವಿಧರ್ಮಿಯರ” ಮೊಣಕಾಲುಗಳನ್ನು ಬಲಾತ್ಕರಿಸಿದ್ದಾರೋ?
ಧರ್ಮಭೃಷ್ಟ ಕ್ರೈಸ್ತತ್ವಕ್ಕೆ ಒಬ್ಬ ಮತಾಂತರಿಯು, ತನ್ನ ಅಜ್ಞಾನದ ಹಿಂದಿನ ಪಾಪಗಳಿಗೆ ಕಪಟ ಕ್ರೈಸ್ತತ್ವದ ಹೊಸ ಪಾಪಗಳನ್ನು ಕೂಡಿಸುವವನಾಗಿದ್ದಾನೆ, ಹೀಗೆ, ಅವನ ಅಪರಾಧಗಳ ಹೊರೆಯನ್ನು ಇಮ್ಮಡಿಗೊಳಿಸುತ್ತಾನೆ. ಆದಕಾರಣ, ಕ್ರೈಸ್ತ ಪ್ರಪಂಚಕ್ಕೆ, ಯೇಸುವಿನ ಮಾತುಗಳು ತಕ್ಕದ್ದಾಗಿವೆ: “ಕೇವಲ ಒಬ್ಬನನ್ನು ಮತಾಂತರಿಯನ್ನಾಗಿ ಮಾಡಲು ನೀವು ಸಮುದ್ರ ಮತ್ತು ಭೂಮಿಯನ್ನು ಹುಡುಕಾಡುತ್ತೀರಿ, ನಂತರ ನೀವವನನ್ನು ನಿಮ್ಮಂತೆಯೇ ನಾಶನಕ್ಕೆ ಇಮ್ಮಡಿ ಪಾತ್ರರನ್ನಾಗಿ ಮಾಡುತ್ತೀರಿ.”—ಮತ್ತಾಯ 23:15, ಫಿಲಿಪ್ಸ್.
ಕ್ರೈಸ್ತ ಶಿಷ್ಯರನ್ನಾಗಿ ಮಾಡುವ ಪಂಥಾಹ್ವಾನವನ್ನು ಎದುರಿಸಲು ಕ್ರೈಸ್ತ ಪ್ರಪಂಚವು ಅಪಜಯ ಹೊಂದಿರುತ್ತದೆ. ಲೋಕ ಬದಲಾವಣೆಯ ಪಂಥಾಹ್ವಾನವನ್ನು ಎದುರಿಸಲಿರುವದರಲ್ಲಿ ಅವಳು ಏನಾದರೂ ಒಳ್ಳೆಯದಾಗಿ ಬಾಳಿರುವಳೋ? ಮುಂದಿನ ಸಂಚಿಕೆಯಲ್ಲಿ, “ಕ್ರೈಸ್ತ ಪ್ರಪಂಚವು ಲೋಕ ಬದಲಾವಣೆಯೊಂದಿಗೆ ಸೆಣಸಾಡುತ್ತದೆ” ಎಂಬ ಲೇಖನವು ಆ ಪ್ರಶ್ನೆಯನ್ನು ಉತ್ತರಿಸುವದು. (g89 9/22)
[ಪುಟ 17 ರಲ್ಲಿರುವಚಿತ್ರ]
ಈ ನಿಜ ಕ್ರೈಸ್ತ ಮಿಶನೆರಿಗಳು ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹೃದಯಗಳನ್ನು ತಲುಪುತ್ತಾರೆ, ಕೇವಲ ಮೊಣಕಾಲುಗಳನ್ನಲ್ಲ