ಮನುಷ್ಯ ಮತ್ತು ಕಡಲಾಮೆ ಸಂಧಿಸುವ ಸ್ಥಳ
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಮರಳಲ್ಲಿ ಹೊಸದಾಗಿ ತಯಾರಿಸಿದ ಗೂಡಿನಲ್ಲಿ ಮೊಟ್ಟೆಗಳನ್ನಿಡುವಾಗ ಪಳಗಿಸದ ಒಂದು ಕಡಲಾಮೆಯನ್ನು ಸಂಧಿಸಲು ಅತ್ಯುತ್ತಮ ಸಮಯವಾಗಿರುತ್ತದೆ. ಆದುದರಿಂದ ಆಸ್ಟ್ರೇಲಿಯದ ಸೂರ್ಯನ ಬೆಳಕಿನ, ಕ್ವೀನ್ಸ್ಲೆಂಡ್ನ ಕರಾವಳಿಯಲ್ಲಿ ಒಂದು ಮೈಲು ಉದ್ದದ ಸಮುದ್ರ ತೀರವಾದ, ಮಾನ್ ರೆಪೊಗೆ ನಾವು ಭೇಟಿಕೊಡುವಾಗ ನೀವು ನನ್ನೊಂದಿಗೆ ಬರಲಿಚ್ಛಿಸುವಿರೊ? ಉರಿಯುವ, ಹೆಚ್ಚು ಕಡಮೆ ಉಷ್ಣವಲಯದ ಸೂರ್ಯನಿಂದ ನಿಮಗೆ ತೊಂದರೆಯಾಗುವುದು ಎಂದು ನೀವು ಚಿಂತಿತರಾಗಬೇಡಿರಿ, ಯಾಕಂದರೆ ನಮ್ಮ ಭೇಟಿಯು ರಾತ್ರಿಯ ಚಟುವಟಿಕೆಯಾಗಿರುವುದು. ಅಂಥ ಮೋಹಗೊಳಿಸುವ ವಿಹಾರಕ್ಕಾಗಿ ಉತ್ತಮ ಸಮಯವು ಸಂಜೆ ಎಂಟು ಗಂಟೆ ಮತ್ತು ಮಧ್ಯರಾತ್ರಿಯ ನಡುವಿನದ್ದಾಗಿರುವುದು.
ತರಬೇತು ಹೊಂದಿದ ಒಬ್ಬ ಗೈಡ್ ಮತ್ತು ಸಣ್ಣ ಗುಂಪಿನೊಂದಿಗೆ ಹೋಗುವುದು ಹೆಚ್ಚು ಉತ್ತಮ, ಯಾಕಂದರೆ ನಾವು ದೊಡ್ಡ ತಾಯಿ ಆಮೆಯನ್ನು ನೋಡಬೇಕಿರುವಲ್ಲಿ ಮತ್ತು ಸ್ಪರ್ಶಿಸಬೇಕಿರುವಲ್ಲಿ ಮಾಡಬೇಕಾಗಿರುವ ಮತ್ತು ಮಾಡಬಾರದಾಗಿರುವ ಹಲವಾರು ವಿಷಯಗಳಿವೆ. ಪೂರ್ಣ ಭರತದ ಗುರುತಿನ ಮೇಲ್ಭಾಗದಿಂದ ನಾವು ಸಮುದ್ರತೀರದಲ್ಲಿ ನಡೆಯುತ್ತಿರುವಾಗ, ಬೆಳಕು ಆಮೆಗಳನ್ನು ಹೆದರಿಸುತ್ತದಾದ ಕಾರಣ ನಮ್ಮ ಗೈಡ್ ನಮ್ಮ ಹೊಳಪುಬೆಳಕುಗಳನ್ನು ಆರಿಸಿಡುವಂತೆ ಕೇಳಿಕೊಳ್ಳುತ್ತಾಳೆ. ಮತ್ತು ಬೆಳಕುಗಳಿಲ್ಲದಿದ್ದರೂ ಮರಳಲ್ಲಿ ಗಜ ಅಗಲದ ಆಮೆಯ ಜಾಡನ್ನು ಎಷ್ಟು ಉತ್ತಮವಾಗಿ ಕಾಣಬಹುದೆಂದು ತಿಳಿಯಲು ನಾವು ಚಕಿತರಾಗುತ್ತೇವೆ.
ಅನಂತರ, ಈ ಸ್ಥಳದಲ್ಲಿರುವ ಕಡಲಾಮೆಗಳ ಕೆಲವು ಅಭಿರುಚಿಕರ ವಾಸ್ತವಾಂಶಗಳನ್ನು ನಮ್ಮ ಗೈಡ್ ನೀಡುತ್ತಾಳೆ. ಆಸ್ಟ್ರೇಲಿಯದ ನೀರುಗಳಲ್ಲಿ ಆರು ವಿವಿಧ ಜಾತಿಗಳಿವೆ, ಆದರೆ ಬಂಡಬರ್ಗ್ ಕರಾವಳಿಯುದ್ದಕ್ಕೆ ಪ್ರಾಮುಖ್ಯ ಗೂಡುಕಟ್ಟುವ ಸ್ಥಳವಾಗಿರುವ ಮಾನ್ ರೆಪೊದಲ್ಲಿ ಇವುಗಳಲ್ಲಿ ಕೇವಲ ನಾಲ್ಕು ಜಾತಿಗಳು ಕಂಡುಬರುತ್ತವೆ. ಹೆಚ್ಚು ಪ್ರಾಧಾನ್ಯವಾಗಿರುವ ಕ್ರಮದಲ್ಲಿ, ಈ ನಾಲ್ಕು ಜಾತಿಗಳು: ದೊಡ್ಡ ತಲೆಯ ಆಮೆಗಳು (ಕರೆಡ ಕರೆಡ), ಚಪ್ಪಟೆ ಬೆನ್ನಿನ ಆಮೆಗಳು (ನಟೇಟರ್ ಡಿಪ್ರೆಸ), ಪಚ್ಚೆ ಆಮೆಗಳು (ಕಿಲೋನಿಯ ಮೈದಾಸ್), ಮತ್ತು ತೊಗಲು ಬೆನ್ನಿನ ಆಮೆಗಳು (ಡರ್ಮಾಕೆಲಿಸ್ ಕೊರಿಯೇಷ) ಆಗಿವೆ.
ನಮ್ಮ ಮೊದಲ ಅವಲೋಕನ
ಒಂದು ದೊಡ್ಡ ಕಡಲಾಮೆಯನ್ನು ನಾವು ಪತ್ತೆ ಹಿಡಿಯುವಾಗ ಮಹಾ ಸಂಭ್ರಮಾನುಭವವಾಗುತ್ತದೆ. ಅವಳು ನಾವು ಮಾಡಿದ ಪಟ್ಟಿಯಲ್ಲಿ ಮೊದಲನೆಯವಳು—ದೊಡ್ಡ ತಲೆಯ ಕಡಲಾಮೆ—ಆಗಿದ್ದಳು. ಅವಳು ತೆರೆನೊರೆಯಿಂದ ಹೊರಗೆ ಬಂದು ಉಬ್ಬರದ ನೀರು ಮರಳ ಮೇಲೆ ಮಾಡಿದ ಗುರುತಿಗಿಂತ ಮೇಲಕ್ಕೆ ತೆವಳುತ್ತಿರುವಾಗ ನಾವು ಶಬ್ದ ಮಾಡದೆ ವೀಕ್ಷಿಸುತ್ತಿರುತ್ತೇವೆ. ಕೊನೆಗೂ ನಾವು ಸಮೀಪಕ್ಕೆ ಚಲಿಸಿದಾಗ, ಅವಳು ಅವಳ ಸುತ್ತಲಿನ ಮರಳು ಮತ್ತು ಸಸ್ಯಗಳನ್ನು ಕೆರೆದು ತೆಗೆಯುವುದರ ಮೂಲಕ ತಟ್ಟೆಯಾಕಾರದ ಗುಂಡಿಯನ್ನು ತೋಡಿರುವುದನ್ನು ನಾವು ಗಮನಿಸುತ್ತೇವೆ. ಇದು ಗೂಡಿನ ಮೇಲೆ ಹುಲ್ಲು ಬೆಳೆಯದಂತೆ ಮತ್ತು 7ರಿಂದ 12 ವಾರಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುವಾಗ ಸಿಕ್ಕಿಹಾಕಿಕೊಳ್ಳದಂತೆ ತಡೆಯುತ್ತದೆ. ಆಕೆಯ ಹಿಂಬದಿಯ ಈಜುವ ಅಂಗಗಳಿಂದ ಮರಳನ್ನು—ಬಲದಲ್ಲಿ ತೋಡುವುದು, ಎಡದಲ್ಲಿ ಸಿಡಿಸುವುದು; ಎಡದಲ್ಲಿ ತೋಡುವುದು, ಬಲದಲ್ಲಿ ಸಿಡಿಸುವುದು—ಒಂದಾದ ಮೇಲೊಂದರಂತೆ ತೋಡುವುದು ಮತ್ತು ಚಿಮ್ಮಿಸುವುದರ ಮೂಲಕ ಪೇರು ಹಣ್ಣಿನಾಕಾರದ ಗೂಡನ್ನು ಕೂಡ ಅವಳು ಮುಗಿಸಿರುತ್ತಾಳೆ. ಇದೆಕ್ಕೆಲ್ಲ ಸುಮಾರು 45 ನಿಮಿಷಗಳು ಹಿಡಿಯುತ್ತವೆ.
ಇಷ್ಟರವರೆಗೆ, ಅವಳು ಸುಲಭವಾಗಿ ಶಾಂತಿಭಂಗಪಟ್ಟು ನೀರಿಗೆ ಹಿಂತೆರಳಬಹುದಿತ್ತು, ಆದರೆ ಒಮ್ಮೆ ಅವಳು ಮೊಟ್ಟೆಗಳನ್ನಿಡಲು ಆರಂಭಿಸಿದ ಮೇಲೆ, ನಾವವಳನ್ನು ಮುಟ್ಟಲು ಅನುಮತಿ ಇದೆ. ವನರಕ್ಷಕಿ ಅವಳ ಮೇಲೆ ಬೆಳಕನ್ನು ಹಾಯಿಸುತ್ತಾಳೆ, ಮತ್ತು ನಮಗೆ ಮನಸ್ಸಿರುವಲ್ಲಿ ಭಾವಚಿತ್ರಗಳನ್ನು ತಕ್ಕೊಳ್ಳಬಹುದು. ಕಾವನ್ನು ಹೊಂದುತ್ತಿರುವಾಗ ಶಿಲೀಂಧ್ರ ಮತ್ತು ಕ್ರಿಮಿಕೀಟಗಳಿಂದ ಮೊಟ್ಟೆಗಳಿಗೆ ರಕ್ಷೆಕೊಡುವಂಥ ತಿಳಿಯಾದ, ಲೋಳೆಯಂಥ ದ್ರವದೊಂದಿಗೆ, ಕಡಲಾಮೆಯು ಗೂಡಿನೊಳಗೆ 10ರಿಂದ 20 ನಿಮಿಷಗಳ ವರೆಗೆ ಸತತವಾಗಿ ತನ್ನ ಮೊಟ್ಟೆಗಳನ್ನು ಉದುರಿಸುತ್ತಾಳೆ. ದೊಡ್ಡ ತಲೆಯ ಕಡಲಾಮೆಗಳು ಒಂದು ಮೊಟ್ಟೆಯೊಡ್ಡಿನಲ್ಲಿ—ಒಂದು ಋತುವಿನಲ್ಲಿ 14 ದಿನಗಳಿಗೊಮ್ಮೆ ಅನೇಕ ಬಾರಿ—ಋತುಗಳ ನಡುವೆ ಎರಡರಿಂದ ನಾಲ್ಕು ವರ್ಷಗಳಲ್ಲಿ ಪಿಂಗ್ ಪಾಂಗ್ ಚೆಂಡುಗಳ ಗಾತ್ರದ ಸರಾಸರಿ 120 ಮೊಟ್ಟೆಗಳನ್ನು ಇಡುತ್ತವೆ.
ನಿಜತ್ವದಲ್ಲಿ ಕಡಲಾಮೆಯನ್ನು ಸ್ಪರ್ಶಿಸುವಾಗ, ಅವಳ ಚರ್ಮ ಎಷ್ಟು ಮೃದುವಾಗಿದೆ ಎಂದು ನೋಡಿ ನಾವು ಚಕಿತರಾಗುತ್ತೇವೆ—ಕಡಲಾಮೆಯ ಚರ್ಮವನ್ನು ಅಷ್ಟೊಂದು ಅಪೇಕ್ಷಣೀಯವಾಗಿ ಮಾಡುವ ಮತ್ತು ಕಡಲಾಮೆಗಳ ಆಸ್ತಿತ್ವವನ್ನು ಅಪಾಯಕ್ಕೀಡುಮಾಡುವ ಒಂದು ಅಂಶವು ಅದಾಗಿದೆ. ಆಕೆಯ ಕವಚ ಯಾ ಮೇಲ್ಚಿಪ್ಪು, ಫಲಕಗಳಿಂದ ಮಾಡಲ್ಪಟ್ಟಿದೆ ಮತ್ತು ಬೆನ್ನು ಮೂಳೆ ಮತ್ತು ಪಕ್ಕೆಲುಬುಗಳಿಗೆ ಸದೃಶವಾಗಿದೆ. ಈಗ ಅವಳು ಆಕೆಯ ಮೊಟ್ಟೆಗಳನ್ನು ಮುಚ್ಚಲಾರಂಭಿಸುತ್ತಾಳೆ. ಆದರೆ ಅವಳು ಅವುಗಳನ್ನು ಉಬ್ಬರದ ರೇಖೆಗೆ ಸಮೀಪದಲ್ಲಿಟ್ಟದ್ದರಿಂದ, ಅವುಗಳು ಉಳಿಯಬೇಕಾಗಿರುವಲ್ಲಿ ಅವುಗಳನ್ನು ಪುನಃ ಬೇರೆ ಸ್ಥಳದಲ್ಲಿ ಇಡಲೇಬೇಕು. ಇದನ್ನು ನಮ್ಮ ಗುಂಪಿನೊಂದಿಗೆ ಬಂದಿರುವ ಕಡಲಾಮೆಗಳ ಸಂಶೋಧನೆ ನಡೆಸುವ ತಂಡದ ಇಬ್ಬರಿಂದ ಮಾಡಲ್ಪಡುವುದು.
ಆಮೆಗಳಿಗೆ ಲೋಹ ಕಟ್ಟುವಿಕೆ
ಕಡಲಾಮೆಗಳ ಕುರಿತು ಸಂಶೋಧನೆಯಲ್ಲಿ ನೆರವಾಗುವಂತೆ ನಮ್ಮ ಕಡಲಾಮೆಯ ಮುಂದಿನ ಈಜು ಅಂಗಗಳೊಂದಕ್ಕೆ ಲೋಹ ಪಟ್ಟಿಯು ಕಟ್ಟಲ್ಪಡಲಿದೆ. ಆಕೆಯು ಕಾರ್ಯಮಗ್ನಳಾಗಿ ಎಲ್ಲಾ ಕಡೆ ಸಿಡಿಸುವ ಅಷ್ಟೊಂದು ಮರಳಿನ ನೋಟದಲ್ಲಿ ಇದೊಂದು ಸುಲಭದ ಕೆಲಸವಲ್ಲ. ಆ ಲೋಹಪಟ್ಟಿಗಳು ತುಕ್ಕುಹಿಡಿಯದ ಟೈಟೇನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟವುಗಳಾಗಿವೆ. ಅದರ ಹಿಂದುಗಡೆಯಲ್ಲಿ ಒಂದು ವಿಳಾಸವಿದೆ, ಮತ್ತು ಇದು ಸಂಶೋಧನಾ ಯೋಜನೆಗೆ ಪ್ರಾಮುಖ್ಯವಾಗಿದೆ ಯಾಕಂದರೆ ಜನರಿಂದ ಕಂಡುಕೊಳ್ಳಲ್ಪಟ್ಟ ಕಡಲಾಮೆಗಳು ಅಂಕೆಯಿಂದ ವರದಿಸಲ್ಪಡಬೇಕು. ಕಡಲಾಮೆಯು ಸತ್ತಾಗ ಮಾತ್ರ ಲೋಹಪಟ್ಟಿಯನ್ನು ಬಿಡಿಸಿ ತೆಗೆಯಬೇಕು ಮತ್ತು ಆಮೆಯ ನೆಲೆಯ ವಿವರಣೆಯೊಂದಿಗೆ ಹಿಂತಿರುಗಿಸಬೇಕು. ಲೋಹಪಟ್ಟಿಯ ಮುಂಭಾಗದಲ್ಲಿ ಕಡಲಾಮೆಯನ್ನು ಗುರುತಿಸುವ ಅಂಕೆಯು ಇರುತ್ತದೆ. ನಮ್ಮ ಆಮೆ T54239, ಆದರೆ ಅವಳನ್ನು ತಬಿಥ ಎಂದು ಕರೆಯಲು ನಾವು ನಿರ್ಧರಿಸುತ್ತೇವೆ.
ತಬಿಥಳಿಗೆ ಈ ಮುಂಚೆ ಲೋಹಪಟ್ಟಿ ಕಟ್ಟಲ್ಪಟ್ಟಿರದ ಕಾರಣ, ಅವಳು ಈ ಮುಂಚೆ ಎಂದಿಗೂ ಗೂಡು ಕಟ್ಟಿದ್ದಿರಲಿಕ್ಕಿಲ್ಲ ಮತ್ತು ಶಾಂತ ಸಾಗರದಲ್ಲಿ ಕಡಲಾಮೆಗಳ ಮತ್ತು ಅವುಗಳ ಮೊಟ್ಟೆಗಳ ಸಂರಕ್ಷಣೆಯನ್ನು ಜಾರಿಗೆ ತರಲು ಕೆಲವು ಪ್ರಾಮುಖ್ಯ ಮಾಹಿತಿಯನ್ನು ಅವಳು ಒದಗಿಸಬಹುದು. ಈಗ, ಈ ಒಂದು ಮಾಹಿತಿಯನ್ನು ಪಡೆಯಲು, ಈ ಕಡಲ ತೀರದಲ್ಲೇ ಒಂದು ಆಮೆಯ ಸಣ್ಣ ಶಸ್ತ್ರಕ್ರಿಯೆಯನ್ನು ನಾವು ನೋಡುತ್ತೇವೆ! ಈ ಕಾರ್ಯವಿಧಾನವು ಲ್ಯಾಪೆರಾಸ್ಕಪಿ ಎಂದು ಕರೆಯಲ್ಪಡುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಮಾನವರ ಮೇಲೆ ಬಳಸಲಾಗುತ್ತದೆ. ತಬಿಥಳನ್ನು ಮೆತ್ತಗೆ ಉರುಳಿಸಲಾಯಿತು ಮತ್ತು ಚಕ್ರದ ಕೈಬಂಡಿಯ ಮಂಚದ ಮೇಲೆ ಇಡಲಾಯಿತು. ನಾವು ಅವಳಿಗಾಗಿ ದುಃಖಪಡುತ್ತೇವೆ ಮತ್ತು ಅವಳ ಕುತ್ತಿಗೆಯನ್ನು ತಟ್ಟುವುದು ಅವಳನ್ನು ಶಾಂತಪಡಿಸುತ್ತದೆಂದು ನಾವು ಕಂಡುಕೊಳ್ಳುತ್ತೇವೆ. ನಾವು ನೋಡುತ್ತಿರುವುದು ಕಣ್ಣೀರನ್ನಲ್ಲ, ಬದಲಾಗಿ ಅವಳ ಕಣ್ಣುಗಳಿಂದ ಮರಳನ್ನು ತೊಳೆಯಲು ಅವಳು ಲವಣ ದ್ರಾವಣವನ್ನು ವಿಸರ್ಜಿಸುವುದನ್ನೇ ಮತ್ತು ಅವಳು ಸಮುದ್ರ ನೀರನ್ನು ಕುಡಿದಿದರ್ದ ಫಲವಾಗಿ ಅಧಿಕಾಂಶ ಉಪ್ಪನ್ನು ಹೊರಚೆಲ್ಲುವುದನ್ನೇ. ಅವುಗಳು ನೋವಿಗೆ ಸಂಬಂಧಿಸಿದವುಗಳಲ್ಲ. ಆಕೆಯ ಕೆಳ ಈಜು ಅಂಗದ ಮೇಲಕ್ಕಿರುವ ಚರ್ಮವು ಉಜ್ಜಲ್ಪಡುತ್ತದೆ; ನಂತರ ಒಂದು ಸಣ್ಣ ಕತ್ತರಿಕೆಯ ಮೂಲಕ ನಳಿಕೆಯನ್ನು ಅದರೊಳಗೆ ತುರುಕಲಾಗುತ್ತದೆ, ಮತ್ತು ಸ್ವಲ್ಪ ಗಾಳಿಯನ್ನು ಒಳಗೆ ಊದಲಾಗುತ್ತದೆ. ಆಕೆಯ ಅಂಡಾಶಯಗಳನ್ನು ನೋಡುವುದರ ಮೂಲಕ, ಇದು ಆಕೆಯ ಮೊದಲ ಪುನರುತ್ಪತ್ತಿಯ ಋತುವಾಗಿದೆ, ಮತ್ತು ಹಣ್ಣಾಗುತ್ತಿರುವ ಇನ್ನೂ ಅಧಿಕ ಮೊಟ್ಟೆಗಳು ಅವಳಲ್ಲಿವೆ ಎಂದು ಸಂಶೋಧಕರು ಕಂಡುಕೊಳ್ಳುತ್ತಾರೆ. ಈ ಎಲ್ಲಾ ಮಾಹಿತಿಯು ದಾಖಲಿಸಲ್ಪಡುತ್ತದೆ; ಅನಂತರ ನಳಿಕೆಯ ಕವಾಟದ ಮೂಲಕ ಗಾಳಿಯನ್ನು ಹೊರಬಿಡಲಾಗುತ್ತದೆ, ಮತ್ತು ಕತ್ತರಿಕೆಯನ್ನು ಹೊಲಿಯಲಾಗುತ್ತದೆ.
ಮರಳಲ್ಲಿ ಪುನಃ ಹಿಂದಕ್ಕೆ ಉರುಳಿಸಲಾದ ಮೇಲೆ, ತಬಿಥ ಸಹಜಪ್ರವೃತ್ತಿಯಿಂದಲೇ ನೀರಿನ ಕಡೆಗೆ ತೆರಳುತ್ತಾಳೆ. ಅಲೆಗಳು ಅವಳ ಮೇಲೆ ಹರಿಯುತ್ತವೆ ಮತ್ತು ಉಪಶಮನ ಹೊಂದಿದ ತಬಿಥಳನ್ನು ಸಮುದ್ರದೊಳಕ್ಕೆ ತೇಲಿಸಿ ಕೊಂಡೊಯ್ಯುತ್ತದೆ.
ಮೊಟ್ಟೆಗಳ ಸ್ಥಳಬದಲಾವಣೆ ಮಾಡುವುದು
ನಾವು ಹಿಂದಕ್ಕೆ ತಿರುಗಿದಾಗ, ಗೂಡಿನೊಳಗಿಂದ ಮೊಟ್ಟೆಗಳನ್ನು ಆಗಲೇ ತೆಗೆದಿರುವುದನ್ನು ಕಾಣುತ್ತೇವೆ. ನಾಲ್ಕು ತಾಸುಗಳ ಅನಂತರ ಮೊಟ್ಟೆಯು ಅದರ ಚಿಪ್ಪಿನ ಒಳಗಡೆ ಅಂಟಿಕೊಳ್ಳುತ್ತದೆ ಮತ್ತು ರಕ್ತನಾಳಗಳನ್ನು ರಚಿಸುತ್ತದೆ. ಇದಾದನಂತರ ಅವುಗಳನ್ನು ತಿರುಗಿಸುವಲ್ಲಿ, ಅವುಗಳು ಹಾಳಾಗುವವು. ಸಂತಾನ ಬೆಳೆಸುವ ಸ್ಥಳದಲ್ಲಿ, ಜಾಗ ಬದಲಾಯಿಸುವ ಕಾರ್ಯವಿಧಾನಕ್ಕೆ ಸಾಮಾನ್ಯವಾಗಿ ಎರಡು ತಾಸುಗಳನ್ನು ಅನುಮತಿಸಲಾಗುತ್ತದೆ, ಮತ್ತು ಮೊಟ್ಟೆಗಳನ್ನು ಜಾಗ ಬದಲಾಯಿಸುವದರ ಯಶಸ್ಸಿನ ಪರಿಮಾಣವು ಅತ್ಯಧಿಕವಾಗಿರುತ್ತದೆ. ಗೂಡನ್ನು ಮತ್ತು ಮೊಟ್ಟೆಗಳನ್ನು ನೀರಿನಿಂದ ಮತ್ತು ಕೊರೆದುಹೋಗುವಿಕೆಯಿಂದ ಸಂರಕ್ಷಿಸುವುದೇ ಇದರ ಉದ್ದೇಶವಾಗಿರುತ್ತದೆ. ಮರಳಿನ ತಾಪಮಾನವು ಮೊಟ್ಟೆಯೊಡೆದು ಹೊರಬರುವ ಮರಿಗಳ ಲಿಂಗಜಾತಿಯನ್ನು ನಿರ್ಧರಿಸುತ್ತದೆ. ಅನೇಕ ದ್ವೀಪಗಳಲ್ಲಿ ತಂಪಗಿನ ಮರಳಿರುತ್ತದೆ ಮತ್ತು ಪ್ರಮುಖವಾಗಿ ಗಂಡುಗಳನ್ನು ಉತ್ಪಾದಿಸುತ್ತದೆ, ಆದರೆ ಮಾನ್ ರೆಪೊವಿನ ಬೆಚ್ಚಗೆನ ಮರಳು ಹೆಚ್ಚಾಗಿ ಹೆಣ್ಣುಗಳನ್ನು ಉತ್ಪಾದಿಸುತ್ತದೆ.
ಜನವರಿಯಿಂದ ಮಾರ್ಚ್ ವರೆಗೆ ಮರಿಗಳು ಮೊಟ್ಟೆಯೊಡೆದು ಹೊರಬರುತ್ತವೆ. ಅವು ಅವುಗಳ ಮರಳು ಚಾವಣಿಯನ್ನು ಪರಚುವುದರ ಮೂಲಕ, ಮರಳು ಗೂಡಿನ ತಳಕ್ಕೆ ಬೀಳುತ್ತದೆ ಮತ್ತು ಅವು ತಮ್ಮನ್ನು ಮೇಲಕ್ಕೆತ್ತಿಸಿಕೊಳ್ಳುತ್ತವೆ. ಮರಳಿನ ತಾಪಮಾನವು ಅತ್ಯಧಿಕವಾಗಿರದೆ ಇರುವಲ್ಲಿ, ಅವು ತಮ್ಮ ಪ್ರಯಾಣವನ್ನು ಗೂಡಿನೊಳಗಿಂದ ಹೊರಗೆ ಮುಂದರಿಸುತ್ತವೆ ಮತ್ತು ಸಮುದ್ರದ ಕಡೆಗೆ ತೆವಳಿಕೊಂಡು ಹೋಗುತ್ತವೆ. ಆದರೆ ಅವರ ಪ್ರಯಾಣವು ಕೇವಲ ಈಗಲೇ ಆರಂಭವಾಗಿದೆ. ಪುನರುತ್ಪನ್ನದ ಪ್ರೌಢತೆಗೆ ತಲುಪಲು 50 ವರುಷಗಳು ಹಿಡಿಯುತ್ತವೆ ಎಂದು ನಂಬಲಾಗುತ್ತದೆ. ಕೇವಲ ಒಂದು ಸಣ್ಣ ಸೇಕಡವು ಅಷ್ಟು ಕಾಲದ ತನಕ ಬದುಕುತ್ತದೆ.
ಮನುಷ್ಯನು ಜಾಗ್ರತೆ ತಕ್ಕೊಳ್ಳಲು ಕಲಿಯಬೇಕು
ನಿರಾಶಾದಾಯಕವಾಗಿ, ಮಾನವಕುಲದ ಅಜಾಗರೂಕತೆಯೂ ಅವಿಚಾರಶೀಲತೆಯೂ ಕಡಲಾಮೆಗಳ ಜ್ಞಾತವಾದ ಆರು ಜಾತಿಗಳನ್ನು ಕಡಿಮೆಗೊಳಿಸಲು ಬಹಳಷ್ಟನ್ನು ಮಾಡುತ್ತದೆ. ಸಮುದ್ರದೊಳಗೆ ಎಸೆಯಲ್ಪಟ್ಟ ಪ್ಲ್ಯಾಸ್ಟಿಕ್ ಚೀಲಗಳು ಅನೇಕ ಬಾರಿ ಲೋಳೆ ಮೀನೆಂದು ತಪ್ಪಾಗಿ ಗ್ರಹಿಸಲ್ಪಡುತ್ತದೆ ಮತ್ತು ಕಡಲಾಮೆಗಳಿಂದ ಅವು ತಿನ್ನಲ್ಪಡುತ್ತವೆ. ಇದು ಅವುಗಳ ಜೀರ್ಣಾಂಗಗಳನ್ನು ಅಡ್ಡಗಟ್ಟುತ್ತದೆ ಮತ್ತು ಅವು ಉಪವಾಸದಿಂದ ಸಾಯುವಂತೆ ಮಾಡುತ್ತದೆ. ಇತರ ಹೊಲಸು, ಕಡಲಾಮೆಗಳನ್ನು ಉಸಿರು ಕಟ್ಟಿಸಿ ಕೊಲ್ಲಬಹುದು. ನಾವಿಕನು ಜಾಗ್ರತೆಯಿಂದಿರದಿದ್ದಲ್ಲಿ ಹಡಗಿನ ಚಾಲಕಗಳು ಕೂಡ ಅಪಾಯವನ್ನೊಡಬ್ಡಹುದು. ಇದಕ್ಕೆ ಕೂಡಿಸಿ ತೈಲ ಸೋರುವಿಕೆಗಳು ಮತ್ತು ವಿಷಕಾರಿ ಕಚಡವು ಸಂತಾನವೃದ್ಧಿಯಾಗುವ ಋತುವಿನಲ್ಲಿ ಸಮುದ್ರ ತೀರದ ಪೂರ್ಣ ಆಮೆಸಂಖ್ಯೆಯನ್ನೇ ನಾಶಮಾಡಬಹುದು. ಮತ್ತು ಒಂದು ಆಮೆಯು ಗಾಳಿಗಾಗಿ ಪ್ರತಿ 15 ನಿಮಿಷಗಳಿಗೆ ಮೇಲಕ್ಕೆ ಬರಲೇ ಬೇಕಾದ ಕಾರಣ, ಕಡಲಾಮೆಯನ್ನು ಸಿಕ್ಕಿಸಿ ಹಾಕುವ ಮೀನು ಹಿಡಿಯುವ ಬಲೆಗಳು ಅದನ್ನು ಮುಳುಗಿಸಿ ಸಾಯಿಸುವಂತೆ ಮಾಡಬಲ್ಲವು.
ಹೆಚ್ಚಿನ ಜನರು ಈ ಅಪಾಯಗಳ ಬಗ್ಗೆ ತಿಳಿದುಕೊಳ್ಳುವಾಗ ಮತ್ತು ಪರಿಸರದ ಮಹತ್ತಾದ ಜಾಗ್ರತೆಯನ್ನು ತಕ್ಕೊಳ್ಳಲು ಕಲಿಯುವಾಗ, ಮನುಷ್ಯ ಮತ್ತು ಕಡಲಾಮೆಗಳು ಸಂಧಿಸಲು—ಮತ್ತು ಸೃಷ್ಟಿಯ ಕುತೂಹಲಕರ ಪುನರುತ್ಪತ್ತಿಯ ಕಾಲಚಕ್ರದ ಇನ್ನೂ ಒಂದು ಅದ್ಭುತದ ಮೂಲಕ ಮಾನವಕುಲದ ಮನತಟ್ಟಿ ಅವರನ್ನು ಮೋಹಗೊಳಿಸಲು—ನಿಸ್ಸಂಶಯವಾಗಿಯೂ ಹೆಚ್ಚಿನ ಸಂದರ್ಭಗಳು ಒದಗಿ ಬರುವವು. (g93 3/22)
[ಪುಟ 27 ರಲ್ಲಿರುವ ಚಿತ್ರಗಳು]
ಮೇಲ್ಬದಿಯಲ್ಲಿ ಎಡದಿಂದ ಪ್ರದಕ್ಷಿಣವಾಗಿ: ಸಣ್ಣ ಶಸ್ತ್ರ ಚಿಕಿತ್ಸೆ, ಸಮುದ್ರಕ್ಕೆ ಹಿಂದಿರುಗುವಿಕೆ, ಮೊಟ್ಟೆಗಳನ್ನು ಬದಲಾಯಿಸಿದ ಜಾಗದಲ್ಲಿಡುವುದು, ಈಜು ಅಂಗಕ್ಕೆ ಲೋಹದ ಪಟ್ಟಿಯನ್ನು ಸಿಕ್ಕಿಸುವುದು