ಶಾಲೆಯಲ್ಲಿನ ಸಮಸ್ಯೆಗಳೊಂದಿಗೆ ನಿಭಾಯಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ
ಕೆಡುತ್ತಿರುವ ಲೋಕ ಪರಿಸ್ಥಿತಿಗಳು ನಮ್ಮ ಮಕ್ಕಳ ಸಹಿತ, ನಮ್ಮೆಲ್ಲರ ಮೇಲೆ ಪ್ರಭಾವಬೀರುತ್ತವೆ. “ನಿಭಾಯಿಸಲು ಕಷ್ಟವಾದ ಕಠಿನ ಸಮಯಗಳು [ಬರುವುವು]” ಮತ್ತು “ದುಷ್ಟರೂ ವಂಚಕರೂ . . . ಹೆಚ್ಚಾದ ಕೆಟ್ಟತನಕ್ಕೆ [ಹೋಗುವರು]” ಎಂದು ದೇವರ ವಾಕ್ಯವಾದ ಬೈಬಲು, ನಿಷ್ಕೃಷ್ಟವಾಗಿ ಮುಂತಿಳಿಸಿತು. (2 ತಿಮೊಥೆಯ 3:1-5, NW, 13) ಹೀಗೆ ತಮ್ಮ ಹೆತ್ತವರು ಅಪರೂಪವಾಗಿ ಅನುಭವಿಸಿದ್ದ ಸನ್ನಿವೇಶಗಳೊಂದಿಗೆ ವಿದ್ಯಾರ್ಥಿಗಳು ಹೋರಾಡುವಾಗ ಇಂದು ಶಾಲಾ ಶಿಕ್ಷಣವು ತೊಂದರೆಯಿಂದ ತುಂಬಿದೆ. ತಮ್ಮ ಮಕ್ಕಳಿಗೆ ನಿಭಾಯಿಸುವಂತೆ ಸಹಾಯಮಾಡಲು ಹೆತ್ತವರು ಏನು ಮಾಡಬಲ್ಲರು?
ಸಮಾನಸ್ಥರ ಒತ್ತಡ
ಆಗಾಗ ಅಧಿಕಾಂಶ ಮಕ್ಕಳು ಸಮಾನಸ್ಥರ ಒತ್ತಡವನ್ನು ಅನುಭವಿಸುತ್ತಾರೆ. ಒಬ್ಬ ಯುವ ಫ್ರೆಂಚ್ ವಿದ್ಯಾರ್ಥಿಯು ಪ್ರಲಾಪಿಸುವುದು: “ಹೆತ್ತವರು ಮತ್ತು ಸಮಾಜವು ಸಹಾಯ ಮಾಡಲು ತಮ್ಮಿಂದಾದಷ್ಟು ಪ್ರಯತ್ನಿಸುತ್ತದೆ, ಆದರೆ ಅದು ಸಾಕಾಗುವುದಿಲ್ಲ. ಯುವ ಅಪರಾಧಿಗಳು ಇತರ ಯುವ ಜನರನ್ನು ಬಲಾತ್ಕರಿಸುತ್ತಾರೆ. . . . ತಮ್ಮ ಮಕ್ಕಳನ್ನು ನಿಯಂತ್ರಿಸದ ಹೆತ್ತವರು, ಹೆತ್ತವರಲ್ಲ.”
ಸಮಾನಸ್ಥರ ಹಾನಿಕರವಾದ ಒತ್ತಡವನ್ನು ಎದುರಿಸಲು ಅವರಿಗೆ ಅಗತ್ಯವಾದ ಆಂತರಿಕ ಬಲವನ್ನು ಒದಗಿಸುವ ಆತ್ಮಿಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ಜವಾಬ್ದಾರಿ ಹೆತ್ತವರು ತಮ್ಮ ಮಕ್ಕಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. “ನಮ್ಮ ಮಕ್ಕಳು ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ನಾವು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಪ್ರಯೋಗಿಸುತ್ತೇವೆ” ಎಂದು ಒಬ್ಬ ತಂದೆ ವಿವರಿಸುತ್ತಾನೆ, “ಇದರಿಂದಾಗಿ ತಮ್ಮ ಸಮಾನಸ್ಥರ ಮೆಚ್ಚಿಗೆಯು ಅಗತ್ಯವಾಗಿದೆ ಎಂದು ಅವರು ಭಾವಿಸುವುದಿಲ್ಲ. ಇತರ ಮಕ್ಕಳಂತೆ ಇರುವುದು ಅವರಿಗೆ ಪ್ರಾಮುಖ್ಯವಾಗಿಲ್ಲದಿರುವುದಾದರೆ, ಅವರು ಇಲ್ಲವೆಂದು ಹೇಳಬೇಕಾದ ಸಂದರ್ಭದಲ್ಲಿ ಇಲ್ಲವೆಂದು ಹೇಳಲು ಸುಲಭವಾಗಿರುವುದಾಗಿ ಕಂಡುಕೊಳ್ಳುತ್ತಾರೆ.” ಕಷ್ಟದ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬೇಕೆಂದು ತನ್ನ ಮಕ್ಕಳಿಗೆ ಕಲಿಸಲಿಕ್ಕಾಗಿ ಈ ಹೆತ್ತವನು, ಪಾತ್ರವನ್ನಾಡುವುದರಲ್ಲಿ—ಉದ್ಭವಿಸಬಹುದಾದ ಕಷ್ಟದ ಸನ್ನಿವೇಶಗಳನ್ನು ವಾಸ್ತವವಾಗಿ ಕಾರ್ಯಗತ ಮಾಡುತ್ತಾ, ಅದನ್ನು ನಿಭಾಯಿಸಲಿಕ್ಕಾಗಿ ಮಾರ್ಗಗಳನ್ನು ಪ್ರದರ್ಶಿಸುವುದು—ಒಳಗೂಡಲು ತನ್ನ ಕುಟುಂಬಕ್ಕೋಸ್ಕರ ಸಮಯವನ್ನು ಮಾಡಿಕೊಳ್ಳುತ್ತಾನೆ. ನೀವು ಬೆಂಬಲಿಸುವ ಹೆತ್ತವರಾಗಿರಿ, ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ನಿಮ್ಮ ಮಗುವಿಗೆ ಸಹಾಯಮಾಡಿರಿ.
ಅಶ್ಲೀಲ ಭಾಷೆ
ಲೋಕವ್ಯಾಪಕವಾಗಿ ನೈತಿಕ ಮಟ್ಟಗಳು ಕ್ಷೀಣಿಸುತ್ತಿರುವಾಗ, ಅಶ್ಲೀಲ ಭಾಷೆಯು ಸರ್ವಸಾಮಾನ್ಯವಾಗಿ ಪರಿಣಮಿಸುತ್ತಿದೆ. ಟೀವೀಯ ಪ್ರಧಾನ ಪ್ರೇಕ್ಷಣ ಸಮಯವೆಂದು ಕರೆಯಲ್ಪಡುವ ಸಮಯದಲ್ಲಿಯೂ ಅನೇಕ ದೇಶಗಳಲ್ಲಿ ಅದು ಆಗಾಗ್ಗೆ ಕೇಳಲ್ಪಡುತ್ತದೆ. ಹೀಗೆ ಶಾಲೆಯ ಆಟದ ಮೈದಾನಗಳು, ಕೈಸಾಲೆಗಳು, ಮತ್ತು ತರಗತಿ ಕೋಣೆಗಳು ಅಶ್ಲೀಲ ಭಾಷೆಯಿಂದ ಪ್ರತಿಧ್ವನಿಸುತ್ತವೆ.
ಅಂತಹ ಭಾಷೆಯ ಕಡೆಗೆ ತಮ್ಮ ಸ್ವಂತ ಮನೋಭಾವಗಳನ್ನು ಅವರ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬಲ್ಲರೆಂದು ವಾದಿಸುತ್ತಾ, ಕೆಲವು ಶಿಕ್ಷಕರು ತಮ್ಮ ಸ್ವಂತ ಶಪಿಸುವಿಕೆಗಳನ್ನು ಸಮರ್ಥಿಸುತ್ತಾರೆ. ಆದರೆ ಅಂತಹ ಒಂದು ಧೋರಣೆಯು ಈ ನೀತಿಭ್ರಷ್ಟ ಅಭಿವ್ಯಕ್ತಿಗಳನ್ನು ದೈನಂದಿನ ಭಾಷೆಯ ಅಂಗೀಕೃತವಾದ ಭಾಗದೋಪಾದಿ ಹೊಂದಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಅನುಮತಿಸುತ್ತದೆ.
ಕುಟುಂಬದಲ್ಲಿ ಅಂತಹ ಮಾತುಗಳನ್ನು ಉಚ್ಚರಿಸುವುದು ಯಾಕೆ ಅನುಮತಿಸಲ್ಪಟ್ಟಿಲ್ಲ ಎಂಬುದನ್ನು ವಿವೇಕಿ ಹೆತ್ತವರಲ್ಲೊಬ್ಬರು ಸ್ನೇಹಭಾವದಿಂದ ವಿವರಿಸುತ್ತಾರೆ. ಯಾವ ಪುಸ್ತಕಗಳನ್ನು ತನ್ನ ಮಗುವು ಅಭ್ಯಸಿಸುವುದು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಶಾಲಾ ಪಾಠಸೂಚಿಯನ್ನು ಪರೀಕ್ಷಿಸುವ ಮೂಲಕ ತರಗತಿ ಅಧ್ಯಯನದಲ್ಲಿ ಅಶ್ಲೀಲ ಭಾಷೆಯ ಸಮಸ್ಯೆಯನ್ನು ಸಹ ಅವನು ತಡೆಗಟ್ಟಬಲ್ಲನು. ಆರಿಸಲ್ಪಟ್ಟಿರುವ ಯಾವುದೇ ಅಧ್ಯಯನಗಳಲ್ಲಿ ಅಶ್ಲೀಲ ಭಾಷೆಯಿರುವುದಾದರೆ ಅಥವಾ ಅನೈತಿಕತೆಯನ್ನು ಪ್ರದರ್ಶಿಸುವುದಾದರೆ, ಅವನು ಸ್ವೀಕಾರಯೋಗ್ಯವಾದ ವಿಷಯಗಳಿರುವ ಪರ್ಯಾಯ ಪುಸ್ತಕವನ್ನು ಆರಿಸುವಂತೆ ಮಗುವಿನ ಶಿಕ್ಷಕರಿಗೆ ವಿನಂತಿಸಸಾಧ್ಯವಿದೆ. ಒಂದು ಸಮತೂಕವಾದ ಸಮೀಪಿಸುವಿಕೆಯು ನ್ಯಾಯಸಮ್ಮತತೆಯನ್ನು ಪ್ರದರ್ಶಿಸುತ್ತದೆ.—ಫಿಲಿಪ್ಪಿ 4:5.
ಅನೈತಿಕತೆ ಮತ್ತು ಅಮಲೌಷಧಗಳು
ಅನೇಕ ಹೆತ್ತವರು “ಮನೆಯಲ್ಲಿ [ಲೈಂಗಿಕ ಶಿಕ್ಷಣದ] ವಿಷಯದ ಕುರಿತು ತಿಳಿಸಲು ತೀರ ನಾಚಿಕೆಪಡುವವರೂ ಅಥವಾ ಪೇಚಾಟದಲ್ಲಿರುವವರೂ” ಆಗಿದ್ದಾರೆಂದು ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಬದಲಾಗಿ ಅವರು ಲೈಂಗಿಕ ವಿಷಯದ ಕುರಿತು ನಿಷ್ಕೃಷ್ಟವಾದ ಸಮಾಚಾರವನ್ನು ತಮ್ಮ ಮಕ್ಕಳಿಗೆ ಒದಗಿಸುವಂತೆ ಶಾಲೆಯ ಮೇಲೆ ಅವಲಂಬಿಸುತ್ತಾರೆ. ಆದರೆ ಲಂಡನಿನ ದ ಸಂಡೇ ಟೈಮ್ಸ್ ವರದಿಸುತ್ತದೇನಂದರೆ, ಒಬ್ಬ ಹಿರಿಯ ಶಿಕ್ಷಕರಿಗನುಸಾರ, ಇಂದಿನ ಹದಿವಯಸ್ಕ ಗರ್ಭಧಾರಣೆಗಳ ಅಸಾಮಾನ್ಯವಾಗಿ ಅಧಿಕಗೊಂಡ ಸಂಖ್ಯೆಯು “ಗರ್ಭನಿರೋಧ ವಿಧಾನಗಳ ಕುರಿತಾದ ಅಜ್ಞಾನದ ಒಂದು ಸಮಸ್ಯೆಯ ಬದಲಾಗಿ ಒಂದು ನೈತಿಕ ಸಮಸ್ಯೆಯಾಗಿದೆ.” ತಮ್ಮ ಮಕ್ಕಳು ಕಾಪಾಡಿಕೊಳ್ಳಬೇಕೆಂದು ಅವರು ನಿರೀಕ್ಷಿಸುವ ನಡವಳಿಕೆಯ ಮಟ್ಟಗಳನ್ನು ಸ್ಥಾಪಿಸುವ ಅತ್ಯುತ್ತಮ ಸ್ಥಾನದಲ್ಲಿ ಹೆತ್ತವರಿದ್ದಾರೆ.
ಅಮಲೌಷಧದ ದುರುಪಯೋಗದ ಕುರಿತು ಸಹ ಇದು ಸತ್ಯವಾಗಿದೆ. ಹೆತ್ತವರ ಮಾರ್ಗದರ್ಶನದ ಕೊರತೆಯು ಸಮಸ್ಯೆಯನ್ನು ಇನ್ನೂ ಕೆಡಿಸುತ್ತದೆ. “ಮಗುವಿಗೆ ಕುಟುಂಬ ಜೀವಿತವು ಹೆಚ್ಚೆಚ್ಚು ಅಪ್ರಿಯವಾಗಿ ಕಂಡುಬಂದಂತೆ, ಅದಕ್ಕೆ ಬದಲಿಯನ್ನು ಸ್ವಂತವಾಗಿ ಕಂಡುಕೊಳ್ಳುವ ಪ್ರವೃತ್ತಿಯು ಅಧಿಕವಾಗುತ್ತದೆ. ಅಮಲೌಷಧಗಳನ್ನು [ತೆಗೆದುಕೊಳ್ಳುವುದು] ಅವುಗಳಲ್ಲಿ ಒಂದಾಗಿದೆ” ಎಂದು ಫ್ರಾಂಕಾಸ್ಕಾಪಿ 1993 ಗಮನಿಸುತ್ತದೆ. “ಹೆತ್ತವರಾಗಿರುವುದು ಕಠಿನವಾದದ್ದಾಗಿದೆ” ಎಂದು ಟಾಕ್ಸಿಕಾಮನಿ ಏ ಪ್ರೆವಾನ್ಜ್ಯಾನ್ ಜ್ಯೂನೆಸ್ (ಅಮಲೌಷಧದ ಉಪಯೋಗ ಮತ್ತು ಯುವಜನರ ಸಂರಕ್ಷಣೆ)ನ ಅಧ್ಯಕ್ಷರಾದ ಮೀಶ್ಲೀನ್ ಶಾಬಾನ್-ಡೆಲ್ಮಾ ಒಪ್ಪಿಕೊಳ್ಳುತ್ತಾರೆ. “ನೀವು ಸಂತತವಾಗಿ ಎಚ್ಚರಿಕೆಯಿಂದಿರಬೇಕಾಗಿದೆ; ಅನೇಕವೇಳೆ ಅಮಲೌಷಧಗಳು ಏನೋ ತಪ್ಪಾಗಿದೆ ಎಂಬುದನ್ನು ಹೆತ್ತವರಿಗೆ ಎಚ್ಚರಿಸಲಿಕ್ಕಾಗಿರುವ ಒಂದು ಮಾರ್ಗವಾಗಿದೆ. ತನ್ನ ತಾಯಿ ಅಥವಾ ತಂದೆಯು ತನ್ನ ಕಡೆಗೆ ಗಮನ ಹರಿಸುತ್ತಿಲ್ಲವೆಂದು ಯುವಕನು ಭಾವಿಸುವುದಾದರೆ, ಅವನಿಗೆ ಅಮಲೌಷಧಗಳು ಕೊಡಲ್ಪಟ್ಟಾಗ, ಅವು ಅವನ ಸಮಸ್ಯೆಗಳಿಗೆ ಒಂದು ಅದ್ಭುತ ಪರಿಹಾರದಂತೆ ಭಾಸವಾಗಬಲ್ಲವು.”
ತಮ್ಮ ಹದಿಪ್ರಾಯದ ಮಗಳ ಶಾಲಾ ಶಿಕ್ಷಣದಲ್ಲಿ ಒಂದು ನೈಜವಾದ ಆಸಕ್ತಿಯನ್ನು ಅವನು ಮತ್ತು ಅವನ ಹೆಂಡತಿಯು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕೆನಡದ ಒಬ್ಬ ಹೆತ್ತವರು ವಿವರಿಸುತ್ತಾರೆ: “ನಾವು ನೇಡೀನಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತೇವೆ ಮತ್ತು ಕರೆದುಕೊಂಡು ಬರುತ್ತೇವೆ. ಆಗಿಂದಾಗ್ಗೆ, ಅವಳನ್ನು ಕರೆದುಕೊಂಡು ಬರುವಾಗ ಪರಿಣಮಿಸುವ ಒಂದು ಸಂಭಾಷಣೆಯು ಅವಳ ದಿನವು ಹೇಗಿತ್ತು ಎಂಬುದನ್ನು ಹೊರಪಡಿಸುತ್ತದೆ. ಗಂಭೀರವಾದ ಏನನ್ನಾದರೂ ನಾವು ಕಂಡುಕೊಳ್ಳುವುದಾದರೆ, ನಾವು ಆಗಲೇ ಅದರ ಕುರಿತು ಅವಳೊಂದಿಗೆ ಮಾತಾಡುತ್ತೇವೆ ಅಥವಾ ರಾತ್ರಿಯೂಟದ ವೇಳೆಯಲ್ಲಿ ಅಥವಾ ಕುಟುಂಬದ ಒಂದು ಚರ್ಚೆಯಲ್ಲಿ ಆ ವಿಷಯವನ್ನು ಪುನಃ ತರುತ್ತೇವೆ.” ತದ್ರೀತಿಯಲ್ಲಿ ಸಂಪರ್ಕ ಮಾರ್ಗಗಳನ್ನು ತೆರೆದಿಡುವ ಮೂಲಕ ನೀವು ನಿಮ್ಮ ಮಗುವಿಗಾಗಿ ಯಥಾರ್ಥವಾದ ಚಿಂತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಬಲ್ಲಿರಿ.
ದಬಾವಣೆ ಮತ್ತು ಹಿಂಸಾಚಾರ
ದಬಾವಣೆಯು “ಶಾಲೆಯ ಅತ್ಯಂತ ವಂಚನೆಯ ಸಮಸ್ಯೆಗಳಲ್ಲಿ ಒಂದಾಗಿದೆ” ಎಂದು ಹೌ ಟು ಹೆಲ್ಪ್ ಯುವರ್ ಚಿಲ್ಡ್ರನ್ ತ್ರೂ ಸ್ಕೂಲ್ನಲ್ಲಿ ಮಾರೀನ್ ಒಕಾನರ್ ಹೇಳುತ್ತಾಳೆ. “ಅದು ಬಲಿಪಶುಗಳಿಗೆ ಅಧಿಕ ಸಂಕಟವನ್ನು ಉಂಟುಮಾಡುತ್ತಿರುವುದಾದರೂ, ‘ಚಾಡಿಕೋರ’ ಎಂಬ ಕಳಂಕ ಹಚ್ಚಲ್ಪಡುತ್ತದೆ ಎಂಬ ಭಯದಿಂದ, ಅದರ ಕುರಿತು ವಯಸ್ಕರಿಗೆ ಹೇಳಲು ಅವರು ಅನೇಕವೇಳೆ ಇಷ್ಟವಿಲ್ಲದವರಾಗಿದ್ದಾರೆ” ಎಂದು ಸಹ ಅವಳು ದಾಖಲಿಸುತ್ತಾಳೆ.
ವಿಷಾದಕರವಾಗಿ, ಕೆಲವು ಶಿಕ್ಷಕರು ದಬಾವಣೆಯನ್ನು ಸಾಮಾನ್ಯ ನಡವಳಿಕೆಯಾಗಿ ದೃಷ್ಟಿಸುತ್ತಾರೆ. ಆದರೆ “ದಬಾವಣೆಗಾರರು ಅದನ್ನು ಮುಂದುವರಿಸುವಂತೆ ಬಿಡುವುದು ಅವರಿಗೆ ಒಳ್ಳೆಯದಾಗಿರುವುದಿಲ್ಲ” ಎಂದು ಪ್ರತಿಪಾದಿಸುವ ಮತ್ತು ದಬಾವಣೆಯು “ದುರುಪಯೋಗದ ಒಂದು ವಿಧ”ವಾಗಿದೆ ಎಂದು ನಂಬುವ, ಶಿಕ್ಷಕರಾದ ಪೀಟ್ ಸೀವ್ಟನ್ಸನ್ನೊಂದಿಗೆ ಇತರ ಅನೇಕರು ಸಮ್ಮತಿಸುತ್ತಾರೆ.
ಹಾಗಾದರೆ, ನಿಮ್ಮ ಮಗುವು ದಬಾವಣೆಯ ಬಲಿಪಶುವಾಗುವುದಾದರೆ ನೀವೇನು ಮಾಡಬಲ್ಲಿರಿ? “[ಬಲಿಪಶುಗಳು] ಜೀವಿಸುತ್ತಿರುವ ವಯಸ್ಕ ಸಮುದಾಯವು ಅತ್ಯಂತ ಪ್ರಾಮುಖ್ಯವಾದ ರಕ್ಷಣೆಯಾಗಿರಬೇಕು” ಎಂದು ಒಕಾನರ್ ಬರೆಯುತ್ತಾರೆ. ಸಹಾನುಭೂತಿಯುಳ್ಳ ಒಬ್ಬ ಶಿಕ್ಷಕರೊಂದಿಗೆ ವಿಷಯಗಳನ್ನು ಸಾವಕಾಶವಾಗಿ ಮಾತಾಡಿರಿ. ಇದು ಅಂತಹ ಆಕ್ರಮಣಶೀಲ ನಡವಳಿಕೆಯನ್ನು ನೀವಿಬ್ಬರೂ ಅಸ್ವೀಕರಣೀಯವಾಗಿ ಪರಿಗಣಿಸುವಿರೆಂದು ನಿಮ್ಮ ಮಗುವಿಗೆ ಭರವಸೆಕೊಡುತ್ತದೆ. ದಬಾವಣೆಯ ವಿರುದ್ಧ ಶಿಕ್ಷಕರು ತರಗತಿಯಲ್ಲಿ ಬಹಿರಂಗವಾಗಿ ಚರ್ಚಿಸುವ ಒಂದು ಸ್ಪಷ್ಟ ಧೋರಣೆಯನ್ನು ಅನೇಕ ಶಾಲೆಗಳು ಅನುಮೋದಿಸಿವೆ.
ನ್ಯಾಟಲಿ ತನ್ನ ಧರ್ಮದ ಕಾರಣದಿಂದ ದಬಾವಣೆಗಾರರ ಬಲಿಪಶುವಾದಳು. “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದರಿಂದ, ನಾನು ಅಪಮಾನಕ್ಕೆ ಗುರಿಪಡಿಸಲ್ಪಟ್ಟೆ, ಮತ್ತು ಕೆಲವೊಮ್ಮೆ ನನ್ನ ಸ್ವತ್ತುಗಳು ಛಿದ್ರಮಾಡಲ್ಪಡುತ್ತಿದ್ದವು” ಎಂದು ಅವಳು ಹೇಳುತ್ತಾಳೆ. ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ, ಅವಳು ತನ್ನ ಹೆತ್ತವರೊಂದಿಗೆ ವಿಷಯಗಳನ್ನು ಮಾತಾಡಿದಳು, ಅವಳ ಶಿಕ್ಷಕರೊಂದಿಗೆ ಮಾತಾಡುವಂತೆ ಅವರು ಅವಳಿಗೆ ಸಲಹೆ ನೀಡಿದರು. ಅವಳು ಹಾಗೆ ಮಾಡಿದಳು. “ನನ್ನನ್ನು ಪೀಡಿಸುತ್ತಿದ್ದ ಇಬ್ಬರು ಸಹಪಾಠಿಗಳ ಹೆತ್ತವರಿಗೆ ಟೆಲಿಫೋನ್ ಮಾಡುವುದಕ್ಕೆ ಸಹ ಮುಂತೊಡಗಿದೆನು” ಎಂದು ಅವಳು ಕೂಡಿಸುತ್ತಾಳೆ. “ಸಮಸ್ಯೆಯನ್ನು ಅವರಿಗೆ ವಿವರಿಸಲು ನಾನು ಶಕ್ತಳಾದುದರಿಂದ, ವಿಷಯಗಳು ಈಗ ಹೆಚ್ಚು ಉತ್ತಮವಾಗಿವೆ. ಹೀಗೆ ನನ್ನ ಶಿಕ್ಷಕರ ಮತ್ತು ನನ್ನ ಸಹಪಾಠಿಗಳಲ್ಲಿ ಅಧಿಕಾಂಶ ಮಂದಿಯ, ಹೀಗೆ ಇಬ್ಬರದ್ದೂ ವಿಶ್ವಾಸವನ್ನು ನಾನು ಗಳಿಸಿಕೊಂಡೆನು.”
ಆಗಾಗ ಹೆತ್ತವರು ತಮ್ಮ ಮಗು ಬಲಿಪಶುವಲ್ಲ, ದಬಾವಣೆಮಾಡುವಂತಹದ್ದಾಗಿ ಕಂಡುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರು ಮನೆಯಲ್ಲಿ ಏನು ಸಂಭವಿಸುತ್ತಿದೆಯೆಂಬುದರ ಕುರಿತು ನಿಕಟವಾಗಿ ಅವಲೋಕಿಸಬೇಕು. “ಹೆಚ್ಚು ಎದ್ದು ಕಾಣುವ ಆಕ್ರಮಣಶೀಲ ನಡವಳಿಕೆಯಿರುವ ಮಕ್ಕಳು ಸಾಮಾನ್ಯವಾಗಿ ಹೆತ್ತವರು ಸಂಘರ್ಷವನ್ನು ಹೆಚ್ಚು ಸಮರ್ಪಕವಾಗಿ ಪರಿಹರಿಸದ ಕುಟುಂಬಗಳಿಂದ ಬಂದಿರುತ್ತಾರೆ” ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ, ಅದು ಕೂಡಿಸಿದ್ದು: “ಹಿಂಸಾತ್ಮಕ ನಡವಳಿಕೆಯು ಕಲಿತುಕೊಂಡಿರುವ ಒಂದು ಪ್ರಕ್ರಿಯೆಯಾಗಿದೆ.”
ಕೆಲವು ಸ್ಥಳಗಳಲ್ಲಿ ಹಿಂಸಾಚಾರವು ವ್ಯಾಪಕ ಪ್ರಮಾಣವನ್ನು ತಲಪುತ್ತದೆ. ರಾಜಕೀಯ ಅಶಾಂತಿಯು ಶಾಲಾ ಶಿಕ್ಷಣವನ್ನು ಬಹುಮಟ್ಟಿಗೆ ಅಸಾಧ್ಯವನ್ನಾಗಿ ಮಾಡುವಾಗ, ತಾಟಸ್ಥ್ಯವನ್ನು ಅಮೂಲ್ಯವಾಗಿ ಕಾಣುವ ಮಕ್ಕಳು ಅನೇಕವೇಳೆ ಮನೆಯಲ್ಲಿ ಉಳಿಯುವುದನ್ನು ವಿವೇಕವುಳ್ಳದ್ದಾಗಿ ಕಂಡುಕೊಳ್ಳುತ್ತಾರೆ. ಆದರೆ ಅವರು ಶಾಲೆಯಲ್ಲಿರುವಾಗ ತೊಂದರೆಯು ತಲೆದೋರುವುದಾದರೆ ಅವರು ವಿವೇಕದಿಂದ ಶಾಲೆಯ ಮೈದಾನಗಳನ್ನು ಬಿಟ್ಟು, ಶಾಂತಿಯು ಪುನಃ ಸ್ಥಾಪಿಸಲ್ಪಡುವ ವರೆಗೆ ಮನೆಗೆ ಹಿಂದಿರುಗುತ್ತಾರೆ.
ನ್ಯೂನ ಬೋಧನೆ
ನ್ಯೂನ ಬೋಧನೆಯು ಸಮಸ್ಯೆಯನ್ನುಂಟುಮಾಡುವಾಗ ನಿಮ್ಮ ಮಗು ಮತ್ತು ನಿಮ್ಮ ಮಗುವಿನ ಶಿಕ್ಷಕರ ನಡುವೆ ಒಳ್ಳೆಯ ಸಂಸರ್ಗವು ಸಹಾಯಮಾಡಬಲ್ಲದು. “ಅವಳ ಪಾಠಗಳ ಕಡೆಗೆ ಒಂದು ಸಕಾರಾತ್ಮಕವಾದ ನೋಟವಿರುವಂತೆ ನಾವು ಯಾವಾಗಲೂ ನಮ್ಮ ಮಗಳಿಗೆ ಉತ್ತೇಜಿಸುತ್ತೇವೆ” ಎಂದು ಒಬ್ಬ ದಂಪತಿಗಳು ಹೇಳಿಕೆ ನೀಡುತ್ತಾರೆ. ಆದರೆ ಒಂದು ವಿಷಯವನ್ನು ಆಸಕ್ತಿಭರಿತವನ್ನಾಗಿ ಮಾಡಲು ಶಿಕ್ಷಕರು ಸೋತುಹೋಗುವಾಗ, ಮಕ್ಕಳು ಬೇಗನೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ನಿಮ್ಮ ಮಗುವು ಇದನ್ನು ಹೀಗೆ ಕಂಡುಕೊಳ್ಳುವುದಾದರೆ, ಶಿಕ್ಷಕರೊಂದಿಗೆ ಖಾಸಗಿಯಾಗಿ ಮಾತಾಡುವಂತೆ ಅವನಿಗೆ ಯಾಕೆ ಉತ್ತೇಜಿಸಬಾರದು?
ಉತ್ತರಿಸಲ್ಪಟ್ಟಾಗ ಪಾಠದ ಅಂಶವನ್ನು ಗ್ರಹಿಸಲು ಮತ್ತು ಕಲಿಸಲ್ಪಟ್ಟ ವಿಷಯವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಕಲಿಯಲು ಸುಲಭವಾಗಿ ಮಾಡುವಂತಹ ಪ್ರಶ್ನೆಗಳನ್ನು ತಯಾರಿಸಲು ನಿಮ್ಮ ಎಳೆಯರಿಗೆ ಸಹಾಯಮಾಡಿರಿ. ಆದರೂ, ಇದೊಂದೇ ವಸ್ತುವಿಷಯದಲ್ಲಿ ಒಂದು ನೈಜವಾದ ಮತ್ತು ಸ್ಥಿರವಾದ ಆಸಕ್ತಿಯ ಖಾತರಿಯನ್ನು ಕೊಡುವುದಿಲ್ಲ. ನಿಮ್ಮ ಮಗುವಿನೊಂದಿಗೆ ಪಾಠಗಳನ್ನು ಚರ್ಚಿಸುವ ಮೂಲಕ ಮತ್ತು ಶಿಕ್ಷಕರು ನೇಮಿಸುವ ಸಂಶೋಧಕ ಕಾರ್ಯಯೋಜನೆಗಳಿಗೆ ಸಹಾಯಮಾಡಲು ನೀಡಿಕೊಳ್ಳುವ ಮೂಲಕ ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಿ ಎಂಬುದನ್ನು ತೋರಿಸಿರಿ.
ಶಾಲೆಯಲ್ಲಿ, ಅನೈಕ್ಯ ಕುಟುಂಬಗಳಿಂದ ಬರುವ, ಅಥವಾ ಬೈಯುವ ಯಾ ಉದಾಸೀನತೆಯ ಸನ್ನಿವೇಶಗಳ ಕೆಳಗಿರುವ ಮಕ್ಕಳಿದ್ದಾರೆ, ಆದುದರಿಂದ ಅವರು ಅನೇಕವೇಳೆ ಆತ್ಮವಿಶ್ವಾಸ ಹಾಗೂ ಆತ್ಮಗೌರವದ ಕೊರತೆಯುಳ್ಳವರಾಗಿರುತ್ತಾರೆ. ಅವರು ಉತ್ತಮವಾದ ಪರಿಸ್ಥಿತಿಗಳಿರಬಹುದಾದ ಮಕ್ಕಳೊಂದಿಗೆ ಸೇರುತ್ತಾರೆ. ಶಾಲೆಯಲ್ಲಿ ಉದ್ಭವಿಸುವ ಸಮಸ್ಯೆಗಳೊಂದಿಗೆ ನಿಭಾಯಿಸಲು ತಮ್ಮ ಮಕ್ಕಳಿಗೆ ಸಹಾಯಮಾಡುವುದರಲ್ಲಿ ಅವರು ದೃಢರಾಗಿರುವ ಆವಶ್ಯಕತೆಯಿದೆ ಎಂಬುದನ್ನು ಅಧಿಕಾಂಶ ಹೆತ್ತವರು ಗ್ರಹಿಸುತ್ತಾರೆ. ಆದರೆ ಶಿಕ್ಷಕರೊಂದಿಗೆ ಹೆತ್ತವರ ವ್ಯವಹರಿಸುವಿಕೆಯ ಕುರಿತೇನು? ಯಾವ ರೀತಿಯ ಸಂಬಂಧವನ್ನು ಅವರು ಬೆಳೆಸಿಕೊಳ್ಳಬೇಕು, ಮತ್ತು ಹೇಗೆ?
[ಪುಟ 7 ರಲ್ಲಿರುವ ಚೌಕ]
ನಿಮ್ಮ ಮಗುವು ದಬಾವಣೆಯ ಬಲಿಪಶುವೊ?
ತಮ್ಮ ಮಕ್ಕಳಲ್ಲಿ ಈ ದರ್ಶಕ ಸೂಚನೆಗಳನ್ನು ಗಮನಿಸುವಂತೆ ಪರಿಣತರು ಹೆತ್ತವರಿಗೆ ಸಲಹೆನೀಡುತ್ತಾರೆ. ಅವನು ಯಾ ಅವಳು ಶಾಲೆಗೆ ಹೋಗಲು ಅನಿಚ್ಛೆ ತೋರಿಸುತ್ತಾರೊ, ಶಾಲಾಸ್ನೇಹಿತರನ್ನು ತ್ಯಜಿಸುತ್ತಾರೊ, ಹೊಡೆಯಲ್ಪಟ್ಟು ಅಥವಾ ಹರಿದ ವಸ್ತ್ರಗಳೊಂದಿಗೆ ಮನೆಗೆ ಬರುತ್ತಾರೊ?
ನಿರ್ದಿಷ್ಟವಾಗಿ ಏನು ಸಂಭವಿಸಿತೆಂಬುದನ್ನು ನಿಮಗೆ ಹೇಳುವಂತೆ ನಿಮ್ಮ ಮಗುವಿಗೆ ಪ್ರೋತ್ಸಾಹಿಸಿರಿ. ಇದು ದಬಾವಣೆಯು ನಿಜವಾಗಿಯೂ ಸಮಸ್ಯೆಯಾಗಿದೆಯೊ ಇಲ್ಲವೊ ಎಂಬುದನ್ನು ತಿಳಿಯಲು ನಿಮಗೆ ಸಹಾಯಮಾಡುವುದು. ಅದು ಸಮಸ್ಯೆಯಾಗಿರುವಲ್ಲಿ ಸಹಾನುಭೂತಿಯುಳ್ಳ ಒಬ್ಬ ಶಿಕ್ಷಕನೊಂದಿಗೆ ಮಾತಾಡಿರಿ.
ಅವನು ನಂಬಲರ್ಹರಾದ ಸಹಪಾಠಿಗಳೊಂದಿಗೆ ಆಪ್ತನಾಗಿರುವಂತೆ ಮತ್ತು ದಬಾವಣೆಯು ಪುನಃ ಮರಳಬಲ್ಲ ಸಂದರ್ಭಗಳನ್ನು ಮತ್ತು ಸ್ಥಳಗಳನ್ನು ತೊರೆಯುವಂತೆ ಸಲಹೆ ನೀಡುವ ಮೂಲಕ ನಿಮ್ಮ ಮಗುವು ನಿಭಾಯಿಸುವಂತೆ ಸಹಾಯಮಾಡಿರಿ. ಒಂದು ಒಳ್ಳೆಯ ಹಾಸ್ಯದೃಷ್ಟಿಯಿರುವ ಮತ್ತು ಸನ್ನಿವೇಶವೊಂದನ್ನು ನಿಷ್ಕ್ರಿಯಗೊಳಿಸಲಿಕ್ಕಾಗಿ ಹೇಗೆ ಮಾತಾಡಬೇಕೆಂಬುದನ್ನು ತಿಳಿದಿರುವ ಒಂದು ಮಗುವು, ಅನೇಕ ವೇಳೆ ಹೆಚ್ಚು ಉತ್ತಮವಾಗಿ ನಿರ್ವಹಿಸುವುದು.
ಅತಿಯಾಗಿ ವ್ಯಾಕುಲವುಳ್ಳವರಾಗುವುದನ್ನು ತೊರೆಯಿರಿ, ಮತ್ತು ಪ್ರತೀಕಾರವನ್ನು ಉತ್ತೇಜಿಸಬೇಡಿರಿ.