ಕಾಲಹರಣ ಕಾಲ ಚೋರ
“ಕಾಲಹರಣವು ಕಾಲ ಚೋರ.”—ಎಡರ್ಡ್ವ್ ಯಂಗ್, ಸುಮಾರು 1742.
ನಿಲ್ಲಿ! ಈ ಲೇಖನ ಓದುವುದನ್ನು ನಿಲ್ಲಿಸಬೇಡಿ! ಏನಾಗಬಹುದೆಂದು ನಿಮಗೆ ಗೊತ್ತು. ನೀವು ಓದುವುದನ್ನು ನಿಲ್ಲಿಸಿ, “ಅದೊಂದು ರಸಕರವಾದ ಶಿರೋನಾಮೆ. ಆದರೆ ಈಗ ಓದಲು ಸಮಯವಿಲ್ಲ. ಅದನ್ನು ಮತ್ತೆ ಓದುವೆ,” ಎಂದು ಹೇಳೀರಿ. ಆದರೆ “ಮತ್ತೆ” ಬರುವ ಸಂಭವವೇ ಇರಲಿಕ್ಕಿಲ್ಲ.
ಕಾಲಹರಣದ ಕುರಿತ ಒಂದು ಲೇಖನವನ್ನು ಓದಲು ವಿಳಂಬಿಸಬೇಡಿ! ಲೆಕ್ಕ ಹಾಕಿ. ಈ ಲೇಖನವನ್ನು ಓದಲು ನಿಮಗೆ ಪ್ರಾಯಶಃ ಐದು ನಿಮಿಷ ಹಿಡಿದೀತು. ಆಗ ನೀವು ಈ ಪೂರ್ತಿ ಪತ್ರಿಕೆಯ ಸುಮಾರು 10 ಪ್ರತಿಶತವನ್ನು ಓದಿ ಮುಗಿಸಿರುವಿರಿ! ಈಗ ನಿಮ್ಮ ವಾಚನ್ನು ನೋಡಿ ಸಮಯವನ್ನು ಲೆಕ್ಕಿಸಲು ಆರಂಭಿಸಿರಿ. (ನೀವು ಆಗಲೆ ಲೇಖನದ 5 ಪ್ರತಿಶತ ಓದಿ ಮುಗಿಸಿರುತ್ತೀರಿ!)
ಅದು ಕಾಲಹರಣವೋ?
ನೀವು ಈಗ ಮಾಡಸಾಧ್ಯವಿರುವುದನ್ನು ಅಥವಾ ಮಾಡಬೇಕಾಗಿರುವುದನ್ನು ವಿಳಂಬಮಾಡುವಲ್ಲಿ, ಮುಂದಕ್ಕೆ ದೂಡುವಲ್ಲಿ, ಆಗ ನೀವು ಕಾಲಹರಣ ಮಾಡುತ್ತೀರಿ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಿಮಗೆ ಈಗ, ಇಂದು ಮಾಡಲು ಸಾಧ್ಯವಿರುವುದನ್ನು ನೀವು ನಾಳೆಗೆ ತಳ್ಳುತ್ತೀರಿ. ಬೇಕಾಗಿರುವುದು ಕಾರ್ಯವಾಗಿರುವಾಗ ಕಾಲಹರಣಕಾರನು ಆ ಕಾರ್ಯವನ್ನು ಮುಂದಕ್ಕೆ ತಳ್ಳುತ್ತಾನೆ.
ಒಬ್ಬ ಸೂಪರ್‌ವೈಸರನು ಕೆಲಸಗಾರನೊಂದಿಗೆ ಒಂದು ವರದಿಯನ್ನು ಕೇಳುತ್ತಾನೆ; ಹೆತ್ತವರು ತಮ್ಮ ಮಗನಿಗೆ ಅವನು ತನ್ನ ಕೋಣೆಯನ್ನು ಶುಚಿಮಾಡುವಂತೆ ಕೇಳಿಕೊಳ್ಳುತ್ತಾರೆ; ಹೆಂಡತಿ ತನ್ನ ಗಂಡನೊಡನೆ ಆ ಸುರಿಗೊಳವೆಯನ್ನು ರಿಪೇರಿ ಮಾಡಲು ಕೇಳಿಕೊಳ್ಳುತ್ತಾಳೆ. ಕೆಲಸ ಮಾಡದಿರುವುದಕ್ಕೆ, “ನಾನು ತುಂಬ ಕೆಲಸದಲ್ಲಿದ್ದೆ,” ಅಥವಾ, “ನನಗೆ ಮರೆತು ಹೋಯಿತು,” ಅಥವಾ, “ನನಗೆ ಸಮಯವಿರಲಿಲ್ಲ,” ಎಂಬ ನೆವಗಳು ಕೊಡಲಾಗುತ್ತವೆ. ವಾಸ್ತವವೇನಂದರೆ, ಮಾಡಲು ಹೆಚ್ಚು ಆನಂದಕರವಾದ ಕೆಲಸಗಳಿರುವಾಗ ವರದಿಗಳನ್ನು ಬರೆಯುವುದನ್ನು, ಕೋಣೆಯನ್ನು ಶುಚಿ ಮಾಡುವುದನ್ನು ಅಥವಾ ಕೊಳವೆ ರಿಪೇರಿಯನ್ನು ಮಾಡಲು ನಮ್ಮಲ್ಲಿ ಕೆಲವರು ಇಷ್ಟಪಡುತ್ತೇವೆ. ಆದಕಾರಣ ನಾವು ಮುಂದೆ ದೂಡುತ್ತೇವೆ, ಮಾಡಿ ಮುಗಿಸಲು ವಿಳಂಬಿಸುತ್ತೇವೆ.
ಆದರೂ, ಕೆಲವು ಬಾರಿ ನಾವು ಕೆಲಸವನ್ನು ಮುಂದಕ್ಕೆ ಹಾಕುವುದು ಕಾಲಹರಣವಲ್ಲವೆಂಬುದು ನಿಮಗೆ ತಿಳಿದಿತ್ತೊ? ಒಂದು ಕೋರಿಕೆಯನ್ನು ಪಡೆದಾಗ ಅದನ್ನು ಏನು ಮಾಡುವುದೆಂದು ತಿಳಿಯದಿರುವ ಒಬ್ಬ ವ್ಯಾಪಾರಸ್ಥೆ, ಅದನ್ನು ತನ್ನ ಮೇಜಿನ ಮೇಲಿರುವ “ತಡೆದಿಡು” ಎಂಬ ಹೆಸರಿನ ಪೆಟ್ಟಿಗೆಯೊಳಗೆ ಹಾಕುತ್ತಾಳೆ. ಕೆಲವು ವಾರಗಳ ಅನಂತರ ಆಕೆ ಈ ಕೋರಿಕೆಗಳನ್ನು ಪುನರ್ವಿಮರ್ಶಿಸುವಾಗ, ಅವುಗಳಲ್ಲಿ ಅರ್ಧಾಂಶ ಯಾವ ಕ್ರಮ ಕೈಕೊಳ್ಳಲೂ ಅವಶ್ಯವಿಲ್ಲದ್ದೆಂದು ಕಂಡುಹಿಡಿಯುತ್ತಾಳೆ. ಆ ಸಮಸ್ಯೆಗಳು ರದ್ದಾಗಿರುತ್ತವೆ ಅಥವಾ ಆ ಸಂಗತಿಗಳು ಇನ್ನು ಮುಂದೆ ಅವಶ್ಯವಿಲ್ಲದ್ದಾಗಿರುತ್ತವೆ. ವಿಳಂಬಿಸಬೇಕೊ ಕ್ರಮ ಕೈಕೊಳ್ಳಬೇಕೊ ಎಂಬುದು ನಿಮಗೆ ಅನಿಶ್ಚಿತವಾಗಿರುವಲ್ಲಿ, ನೀವು ಮುಂದಕ್ಕೆ ದೂಡುವಂತಹದ್ದನ್ನು ಎಂದಿಗೂ ಮಾಡದಿರುವಲ್ಲಿ ಏನಾಗುವುದೆಂದು ನಿರ್ಧರಿಸಲು ಪ್ರಯತ್ನಿಸಿರಿ. ಅದನ್ನು ಮಾಡಿ ಮುಗಿಸುವಲ್ಲಿ ಫಲಿತಾಂಶವು ಹೆಚ್ಚು ಉತ್ತಮವಾದೀತೆ ಅಥವಾ ಹೆಚ್ಚು ಕೆಟ್ಟದ್ದಾದೀತೆ?
ನಾವು ಈಗಲೇ ಕ್ರಮ ಕೈಕೊಳ್ಳಸಾಧ್ಯವಿರುವಲ್ಲಿ ಮತ್ತು ಕೈಕೊಳ್ಳಬೇಕಾಗಿರುವಲ್ಲಿ ಹಾಗೂ ಅಗತ್ಯವಿರುವ ಕ್ರಮವನ್ನು ವಿಳಂಬಿಸುವುದು ಮುಂದಕ್ಕೆ ಹೆಚ್ಚು ಸಮಸ್ಯೆಗಳನ್ನು ತರಸಾಧ್ಯವಿರುವಲ್ಲಿ, ಆಗ ವಿಳಂಬಿಸುವುದು ಕಾಲಹರಣವಾಗಿದೆ. ಉದಾಹರಣೆಗೆ, ಕೊಳೆ ಬಟ್ಟಲುಗಳನ್ನು ಸ್ವಲ್ಪ ಸಮಯ ಹಾಗೆಯೇ ಬಿಟ್ಟು ತೊಳೆಯುವಲ್ಲಿ ಅವುಗಳನ್ನು ತಿಕ್ಕಿ ಶುದ್ಧಮಾಡುವುದು ಹೆಚ್ಚು ಕಷ್ಟಕರ. ವಾಹನದ ದುರಸ್ತನ್ನು ಮುಂದಕ್ಕೆ ಹಾಕುವುದು, ಮುಂದಕ್ಕೆ ಹೆಚ್ಚು ವೆಚ್ಚದ ರಿಪೇರಿಯಲ್ಲಿ ಪರಿಣಮಿಸಬಲ್ಲದು. ಬೆಲೆಪಟ್ಟಿಯನ್ನು ಸಲ್ಲಿಸಲು ವಿಳಂಬಿಸುವುದು ಹೆಚ್ಚು ಹಣವನ್ನು ತುಂಬಿಸುವಂತೆ ಅಥವಾ ಆ ಚಾಕರಿಯು ನಷ್ಟಗೊಳ್ಳುವಂತೆ ಮಾಡಬಲ್ಲದು. ವಾಹನ ಸಂಬಂಧದ ಅಪರಾಧಗಳಿಗೆ ತಕ್ಕ ಸಮಯದಲ್ಲಿ ದಂಡ ತೆರದೆ ಇದುದ್ದರಿಂದ ತನಗೆ ವಿಧಿಸಲ್ಪಟ್ಟ ದಂಡ, ವಿಡಿಯೊ ಟೇಪ್‌ಗಳನ್ನು ತಕ್ಕ ಸಮಯದಲ್ಲಿ ಹಿಂದಿರುಗಿಸದ್ದಕ್ಕೆ ವಿಧಿಸಲ್ಪಟ್ಟ ದಂಡ, ವಾಚನಾಲಯ ಪುಸ್ತಕಗಳನ್ನು ವಿಳಂಬಿಸಿ ಹಿಂದಿರುಗಿಸಿದ್ದರ ದಂಡದ ಮೊತ್ತ 46 ಡಾಲರುಗಳಾದವೆಂದು ಒಬ್ಬ ಸ್ತ್ರೀ ಲೆಕ್ಕ ಹಾಕಿದಳು. ಅದು ಕೇವಲ ಒಂದು ತಿಂಗಳಿಗೆ!
ಚೋರನನ್ನು ಹಿಡಿಯುವುದು
ನೀವು ಏಕೆ ಕಾಲಹರಣ ಮಾಡುತ್ತಿದ್ದೀರೆಂದು ತಿಳಿದುಕೊಳ್ಳಿರಿ. ಈ ಕೆಳಗಣ ಕಾರಣಗಳನ್ನು ನೋಡಿ, ನೀವಿನ್ನೂ ಆರಂಭಿಸದೆ ಇರುವ ಅಥವಾ ಮುಗಿಸಿರುವ ಪ್ರಚಲಿತ ಯೋಜನೆಗೆ ಯಾವುದು ಹೊಂದಿಕೆಯಾಗುತ್ತದೆಂದು ಗುರುತಿಸಲು ಆಗುತ್ತದೊ ಎಂದು ನೋಡಿರಿ:
ಅಭ್ಯಾಸ:
ನಾನು ಕೊನೆಯ ಗಳಿಗೆಯ ತನಕ ಕಾದರೆ, ಅದನ್ನು ಮುಗಿಸಲು ನನಗೆ ಹೆಚ್ಚು ಪ್ರಚೋದನೆಯಿರುವುದು.
ಅತಿ ಕೊನೆಯ ಕ್ಷಣದಲ್ಲಿ ಮಾಡುವುದರಿಂದ ಸಿಕ್ಕುವ ಭಾವೂದ್ರೇಕದಲ್ಲಿ ನಾನು ಆನಂದಿಸುತ್ತೇನೆ.
ನನ್ನ ಧಣಿ ಒಂದೆರಡು ಬಾರಿ ಜ್ಞಾಪಕ ಹುಟ್ಟಿಸುವ ತನಕ ನಾನು ಕಾಯುವೆನು, ಏಕೆಂದರೆ ಆಗ ಅವನಿಗೆ ಅದು ನಿಜವಾಗಿಯೂ ಬೇಕಾದ ಸಂಗತಿಯೆಂದು ನಾನು ತಿಳಿಯುವೆನು.
ನನಗೆ ಮಾಡತಕ್ಕ ಸಂಗತಿ ಎಷ್ಟು ಇದೆಯೆಂದರೆ ಅತ್ಯಗತ್ಯ ವಿಷಯಗಳು ಮಾತ್ರ ನನ್ನ ಗಮನವನ್ನು ಪಡೆಯುತ್ತವೆ.
ಮನೋಭಾವ:
ನನ್ನ ಕೆಲಸ ಮಾಡಲು ಮನಸ್ಸಾಗಲಿ ಪ್ರಚೋದಕ ಶಕ್ತಿಯಾಗಲಿ ನನಗಿಲ್ಲ.
ನನಗೆ ಮಾಡಲು ಮನಸ್ಸಾಗುವಾಗ ನಾನು ಕೆಲಸಕ್ಕಿಳಿಯುತ್ತೇನೆ.
ನನಗೆ ಇನ್ನಾವುದನ್ನಾದರೂ ಮಾಡಲು ಮನಸ್ಸಾಗುತ್ತದೆ.
ನನಗೆ ಸ್ವಶಿಸ್ತಿನ ಕೊರತೆಯಿದೆ.
ಭಯ:
ನನಗೆ ಅದು ಮಾಡಸಾಧ್ಯವಾಗುತ್ತದೊ ತಿಳಿಯೆ.
ನನಗೆ ಅದನ್ನು ಮಾಡಲು ತಕ್ಕಷ್ಟು ಸಮಯವಿಲ್ಲ.
ಅದು ತೀರ ದೊಡ್ಡ ಯೋಜನೆ. ನನಗೆ ಸಹಾಯ ಅಗತ್ಯ.
ಒಂದುವೇಳೆ ನಾನು ಸಫಲಗೊಳ್ಳದಿದ್ದರೆ ಅಥವಾ ಮುಗಿಸದಿದ್ದರೆ ಆಗೇನು?
ಆ ಯೋಜನೆಯನ್ನು ಮಾಡಿ ಮುಗಿಸಲು ನನಗೆ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು.
ನನ್ನನ್ನು ಟೀಕಿಸಲಾಗುವುದು ಅಥವಾ ಪೇಚಾಟಕ್ಕೊಳಗಾದೇನು ಎಂದು ಭಯಪಡುತ್ತೇನೆ.
ವಿಭಿನ್ನ ಜನರು ವಿಭಿನ್ನ ಹಂತಗಳಲ್ಲಿ ಕಾಲಹರಣಮಾಡುತ್ತಾರೆ. ಯೋಜನೆ ತೀರ ದೊಡ್ಡದೆಂದು ವೀಕ್ಷಿಸುತ್ತಾ ಕೆಲವರು ಅದನ್ನು ಪ್ರಾರಂಭಿಸುವ ಮೊದಲು ಕಾಲಹರಣ ಮಾಡುತ್ತಾರೆ. ಇತರರು ಪ್ರಾರಂಭಿಸಿದರೂ ಸುಮಾರು ಅರ್ಧ ಮುಗಿದಾಗ, ಅವರ ಉತ್ಸಾಹ ಕುಗ್ಗುತ್ತದೆ ಮತ್ತು ಅವರು ಮಾಡಿ ಮುಗಿಸುವುದನ್ನು ಮುಂದೆ ಹಾಕುತ್ತಾರೆ. ಇನ್ನೂ ಇತರರು ಅದನ್ನು ಮಾಡಿ ಮುಗಿಸಲು ಸಮೀಪಿಸುವಾಗ ಇನ್ನೊಂದು ಯೋಜನೆಯನ್ನು ತೆಗೆದುಕೊಂಡು ಮೊದಲನೆಯದ್ದನ್ನು ಮುಗಿಸದೆ ಬಿಡುತ್ತಾರೆ. (ಶಹಭಾಸ್, ನೀವು ಆಗಲೆ ಈ ಲೇಖನದ ಅರ್ಧಾಂಶವನ್ನು ಮುಟ್ಟಿದ್ದೀರಿ.)
ಒಂದು ಯೋಜನೆಯನ್ನು ಮಾಡಿ ಮುಗಿಸದಿರಲು ಕಾರಣಗಳು ಮೂರೂ ವಿಭಾಗಗಳಲ್ಲಿ ವರ್ಗೀಕರಿಸಲ್ಪಡಬಹುದು. ದ ನೌ ಹ್ಯಾಬಿಟ್ ಎಂಬ ಪುಸ್ತಕದಲ್ಲಿ ನೀಲ್ ಫ್ಯೋರೆ ಬರೆದುದು: “ಹೆಚ್ಚಿನ ಕಾಲಹರಣ ಸಮಸ್ಯೆಗಳ ಮೂರು ಮುಖ್ಯ ವಿವಾದಾಂಶಗಳು: ಬಲಿಪಶುವಿನ ಅನಿಸಿಕೆಯಾಗುವುದು, ಕೆಲಸದಲ್ಲಿ ಮುಳುಗಿ ಹೋಗುವಂತಾಗುವುದು ಮತ್ತು ವಿಫಲಗೊಳ್ಳುವ ಭಯ.” ಕಾರಣಗಳು ಯಾವುವೇ ಇರಲಿ, ಇದರ ಕಾರಕಗಳನ್ನು ಕಂಡುಹಿಡಿಯುವಲ್ಲಿ, ಸಮಸ್ಯೆಯ ಪರಿಹಾರಕ್ಕೆ ನೀವು ಹೆಚ್ಚು ಹತ್ತಿರವಾಗಿರುವಿರಿ.
ನೀವು ಕಾಲಹರಣಮಾಡುವ ಕಾರಣ ನಿಮಗೆ ಅನಿಶ್ಚಿತವಾಗಿರುವಲ್ಲಿ, ಒಂದು ವಾರದ, ಅರ್ಧ ತಾಸಿನ ವಿರಾಮಗಳಿರುವ ನಿಮ್ಮ ಚಟುವಟಿಕೆಗಳ ದಾಖಲೆ ಮಾಡಿರಿ. ನೀವು ಹೇಗೆ ಸಮಯ ಕಳೆಯುತ್ತೀರೆಂದು ನಿಶ್ಚಯ ಮಾಡಿರಿ. ಪ್ರಾಮುಖ್ಯ ಕೆಲಸಗಳ ಮಧ್ಯೆ ಸಾಪೇಕ್ಷವಾಗಿ ಅಮುಖ್ಯ ಸಂಗತಿಗಳಲ್ಲಿ ನಾವೆಷ್ಟು ಸಮಯವನ್ನು ವ್ಯಯಿಸುತ್ತೇವೆಂದು ನೋಡುವುದು ನಿಜ ತಿಳಿವು ಮೂಡಿಸಬಲ್ಲದು. ಆದರೆ ಅನಂತರ ಏನು?
ಪರಿಣಾಮಗಳ ಕುರಿತು ಯೋಚಿಸಿ
ಪ್ರಯತ್ನಿಸದೆ ಯಾವುದೋ ಒಂದು ಕೆಲಸ ಪೂರ್ತಿಗೊಳ್ಳುತ್ತದೆ ಎಂದು ನಿರೀಕ್ಷಿಸುವುದು ಜುಗುಪ್ಸೆಯ ಅನಿಸಿಕೆಯನ್ನು ಉಂಟುಮಾಡಬಲ್ಲದು. ನಿರೀಕ್ಷಿಸಲಾಗುವ ಗಡುವನ್ನು ನೀವು ಸಮೀಪಿಸುವಷ್ಟಕ್ಕೆ, ನಿಮಗೆ ಒತ್ತಡ ಮತ್ತು ಖಿನ್ನತೆಯ ಅನಿಸಿಕೆಯಾಗುತ್ತದೆ. ಈ ಅನಿಸಿಕೆಗಳು ವೃದ್ಧಿಯಾದಾಗ ನಿಮ್ಮ ಸೃಜನಶೀಲ ಸಾಮರ್ಥ್ಯಕ್ಕೆ ಅಡಚಣೆಯಾದೀತು. ನಿಮ್ಮ ಗುರಿಯನ್ನು ನೆರವೇರಿಸಲು ವಿವಿಧ ಮಾರ್ಗಗಳನ್ನು ಅಳೆಯಲು ಅಥವಾ ತೂಗಿ ನೋಡಲು ನೀವು ಮೊದಲಿನಂತಹ ಪ್ರವೃತ್ತಿಯುಳ್ಳವರಾಗಿರುವ ಬದಲಾಗಿ ಅದನ್ನು ಮಾಡಿ ಮುಗಿಸುವುದರಲ್ಲಿ ಮುಖ್ಯ ಆಸಕ್ತಿಯುಳ್ಳವರಾಗಿರುತ್ತೀರಿ.
ದೃಷ್ಟಾಂತ: ನಿಮಗೊಂದು ಭಾಷಣದ ನೇಮಕವಿದೆ. ಹಿಂದಿನ ರಾತ್ರಿ, ನೀವು ಕೆಲವು ಮಾತುಗಳನ್ನು ಕಾಗದದ ಮೇಲೆ ಬರೆದಿಡಲು ಕುಳಿತುಕೊಳ್ಳುತ್ತೀರಿ. ನಿಮ್ಮ ವಿಷಯವನ್ನು ಸಂಶೋಧನೆ ಮಾಡಲು ಸಾಕಷ್ಟು ಸಮಯವನ್ನು ನೀವು ತೆಗೆದುಕೊಂಡಿಲ್ಲ. ಆದುದರಿಂದ ನೀವು ಮನಸ್ಸಿಗೆ ಹೊಳೆದಂತೆ ತಯಾರಿಸುತ್ತೀರಿ. ಪ್ರಾಯಶಃ ತುಸು ಹೆಚ್ಚಿನ ಪ್ರಯತ್ನದಿಂದ, ನೀವು ನಿಮ್ಮ ಸಭಿಕರು ಆ ವಿಷಯವನ್ನು ಚಿತ್ರಿಸಿಕೊಳ್ಳಲು ಸಹಾಯಿಸುವಂತೆ ಅನುಭವಗಳನ್ನು, ಬೆಂಬಲಿಸುವ ಮಾಹಿತಿಯನ್ನು ಅಥವಾ ತಖ್ತೆಗಳನ್ನು ಸೇರಿಸಸಾಧ್ಯವಿತ್ತು.
ನಾವು ಒಂದು ಯೋಜನೆಯನ್ನು ವಿಳಂಬಿಸುವುದರಿಂದಾಗಿ ಬರುವ ಇನ್ನೊಂದು ಪರಿಣಾಮವು, ನಮಗೆ ಬಿಡು ಸಮಯದಲ್ಲಿಯೂ ವಿಶ್ರಮಿಸಲು ಅಸಾಧ್ಯವಾಗುವುದೇ. ಇದು ಏಕೆಂದರೆ ನಾವು ಒಂದು ಯೋಜನೆಯನ್ನು ಮುಗಿಸದೆ ಬಿಟ್ಟಿದ್ದೇವೆಂಬ ಪೀಡಿಸುವ ಅನಿಸಿಕೆ ನಮಗಾಗುತ್ತದೆ.
ನಾನೇನು ಮಾಡಬಲ್ಲಿ?
ಒಂದು ಪಟ್ಟಿ ಮಾಡಿ. ಹಿಂದಿನ ರಾತ್ರಿ ಇದನ್ನು ಮಾಡಿರಿ. ಮುಂದಿನ ದಿನ ನೀವು ಪೂರೈಸಬೇಕಾಗಿರುವ ಸಂಗತಿಗಳನ್ನು ಬರೆಯಿರಿ. ಹೀಗೆ ನೀವು ಯಾವುದನ್ನಾದರೂ ಮರೆಯಲಾರಿರಿ. ಮತ್ತು ಮುಗಿಸಿದ ಸಂಗತಿಗಳನ್ನು ನೀವು ಗುರುತಿಸುವಾಗ ನೀವು ನಿಮ್ಮ ಪ್ರಗತಿಯನ್ನು ನೋಡುವಿರಿ. ಪ್ರತಿ ಸಂಗತಿಯ ಬಲಪಕ್ಕದಲ್ಲಿ, ಆ ಕೆಲಸವನ್ನು ಮುಗಿಸಲು ಎಷ್ಟು ಸಮಯ ಹಿಡಿದೀತೆಂದು ನೀವು ಅಂದಾಜು ಮಾಡುತ್ತೀರೆಂದು ಬರೆಯಿರಿ. ಒಂದು ದಿನಕ್ಕಾಗಿ ‘ಮಾಡಲಿರುವ ಸಂಗತಿಗಳ’ ಒಂದು ಪಟ್ಟಿಯನ್ನು ನೀವು ಮಾಡುವಲ್ಲಿ, ನಿಮಿಷಗಳನ್ನು ಬರೆಯಿರಿ. ಒಂದು ಯೋಜನೆಯನ್ನು ಮಾಡುವಲ್ಲಿ ತಾಸುಗಳನ್ನು ಬರೆಯಿರಿ. ಈ ಪಟ್ಟಿಯನ್ನು ಹಿಂದಿನ ರಾತ್ರಿ ಮಾಡಿರಿ. ಮುಂದಿನ ದಿನಕ್ಕಾಗಿ ಪಟ್ಟಿಯನ್ನು ತಯಾರಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿ. ಹತ್ತಿರದಲ್ಲಿ ಒಂದು ಮಾಸಿಕ ಕ್ಯಾಲೆಂಡರ್ ಇರಲಿ. ನೀವು ನೇಮಕಗಳು ಮತ್ತು ಕಾರ್ಯ ನಿಶ್ಚಯಗಳನ್ನು ಪಡೆಯುವಲ್ಲಿ, ಅವನ್ನು ಬರೆದಿಡಿರಿ.
ಮರುದಿನಕ್ಕಾಗಿರುವ ಕೆಲಸಗಳನ್ನು ಪುನರ್ವಿಮರ್ಶಿಸುವಾಗ, ನಿಮ್ಮ ಕ್ಯಾಲೆಂಡರಿನಲ್ಲಿರುವ ಸಂಗತಿಗಳಿಗೆ, ಮುಂದೆ ಯಾವುದನ್ನು ಪೂರೈಸಲಿಕ್ಕಿದೆ ಎಂದು ತೋರಿಸಲು, ಎ, ಬಿ, ಸಿ, ಇತ್ಯಾದಿಯಂತಹ ಅಕ್ಷರಗಳನ್ನು ಬರೆಯುತ್ತಾ ಆದ್ಯತೆಯನ್ನು ಕೊಡಿರಿ. ಕೆಲವು ಜನರು ಬೆಳಗ್ಗೆ, ಇನ್ನು ಕೆಲವರು ಅಪರಾಹ್ಣದಲ್ಲಿ ಅಥವಾ ಸಾಯಂಕಾಲ ಹೆಚ್ಚು ಉತ್ತಮವಾದ ಕೆಲಸವನ್ನು ಮಾಡುತ್ತಾರೆ. ನಿಮ್ಮ ಅತಿ ದೊಡ್ಡ ಯೋಜನೆಗಳನ್ನು ಅಂತಹ ಪ್ರಧಾನ ಸಮಯಕ್ಕಾಗಿ ಪಟ್ಟಿಮಾಡಿರಿ. ಕಡಮೆ ಆನಂದದಾಯಕ ಕೆಲಸಗಳನ್ನು ಆನಂದದಾಯಕ ಕೆಲಸಗಳ ಮೊದಲು ಪಟ್ಟಿಮಾಡಿರಿ.
ಸಮಯವನ್ನು ನಿರ್ಧರಿಸಿರಿ. ನೀವು ಸದಾ ಸಮಯವಿಲ್ಲದವರಾಗಿರುವುದಾದರೆ, ತಡವಾಗಿರುವುದರಿಂದ ಅಕ್ಷರಶಃ ಓಡುತ್ತಿರುವುದಾದರೆ, ಸಮಯವನ್ನು ನಿರ್ಧರಿಸಲು ಕಲಿಯಿರಿ. ಅಂದರೆ, ಒಂದು ಕೆಲಸವನ್ನು ಮಾಡಲು ನಿಮಗೆ ಎಷ್ಟು ಸಮಯ ಬೇಕು ಎಂಬುದರ ನಿಷ್ಕೃಷ್ಟ ನಿರ್ಧಾರವನ್ನು ಮಾಡಿರಿ. ಸಂಭವಿಸಬಹುದಾದ “ಆಪತ್ತಿ”ಗಾಗಿ ಒಂದು ಕೆಲಸಕ್ಕೆ ಕೆಲವು ಹೆಚ್ಚು ನಿಮಿಷಗಳನ್ನು ಕೂಡಿಸಿರಿ. ಕಾರ್ಯನಿಶ್ಚಯಗಳ ಮಧ್ಯೆ ಸಮಯವನ್ನು ಅನುಮತಿಸಲು ಮರೆಯಬೇಡಿ. ಪ್ರಯಾಣದ ಸಮಯವನ್ನು ನೀವು ಕೂಡಿಸುವುದು ಅಗತ್ಯ. ನೀವು ಒಂದು ಕೂಟವನ್ನು ಬೆಳಗ್ಗೆ 10ಕ್ಕೆ ಮುಗಿಸಿ, ಕೂಟವು ನಗರದ ಇನ್ನೊಂದು ಕಡೆಯಲ್ಲಿರುವುದಾದರಂತೂ ಬಿಡಿರಿ, ಪಕ್ಕದ ಕೋಣೆಯಲ್ಲಿರುವುದಾದರೂ ಇನ್ನೊಂದರಲ್ಲಿ 10ಕ್ಕೆ ಉಪಸ್ಥಿತರಾಗಲಾರಿರಿ. ಇವುಗಳ ನಡುವೆ ಸಾಕಷ್ಟು ಸಮಯವನ್ನು ಬಿಡಿರಿ.
ನಿಯೋಜಿಸಿರಿ. ನಮಗೆ ಸದಾ ಅಗತ್ಯವಿಲ್ಲದಿದ್ದರೂ ನಾವು ಅನೇಕ ವೇಳೆ ಎಲ್ಲವನ್ನೂ ನಾವೇ ಮಾಡಲು ಪ್ರಯತ್ನಿಸುತ್ತೇವೆ. ಇನ್ನೊಬ್ಬ ವ್ಯಕ್ತಿಯು ಪೋಸ್ಟ್ ಆಫೀಸಿಗೆ ಹೋಗುತ್ತಾನೆಂದು ನಮಗೆ ತಿಳಿಯುವಲ್ಲಿ, ನಮಗಾಗಿ ಒಂದು ಪ್ಯಾಕೇಜನ್ನು ಅವನು ಅಲ್ಲಿಗೆ ಕೊಂಡೊಯ್ದು ಕೊಡಶಕ್ತನಾಗಿರಬಹುದು.
ಹೋಳಾಗಿಸಿರಿ. ಕೆಲವು ಸಲ, ಒಂದು ಯೋಜನೆಯ ಗಾತ್ರದ ಕಾರಣ ನಾವು ಅದನ್ನು ಆರಂಭಿಸುವುದಿಲ್ಲ. ಆ ದೊಡ್ಡ ಕೆಲಸವನ್ನು ಹೆಚ್ಚು ಚಿಕ್ಕವುಗಳಾಗಿ ಹೋಳಾಗಿಸಬಾರದೇಕೆ? ಹೆಚ್ಚು ಚಿಕ್ಕ ಕೆಲಸಗಳನ್ನು ನಾವು ಪೂರ್ತಿಗೊಳಿಸುವಾಗ, ನಾವು ನಮ್ಮ ಪ್ರಗತಿಯನ್ನು ನೋಡುವ ಕಾರಣ ಮುಂದಿನ ವಿಭಾಗವನ್ನು ಮುಗಿಸುವಂತೆ ಪ್ರೋತ್ಸಾಹಿಸಲ್ಪಡುವೆವು.
ಅಡತ್ಡಡೆಗಳಿಗಾಗಿ ಯೋಜಿಸಿರಿ: ನಮ್ಮ ಕೆಲಸದ ದಿನದಲ್ಲಿ ಸದಾ ಅಡತ್ಡಡೆಗಳು—ಫೋನ್ ಕರೆಗಳು, ಭೇಟಿಕಾರರು, ಸಮಸ್ಯೆಗಳು, ಟಪಾಲು—ಇರುತ್ತವೆ. ನಮಗೆ ಕಾರ್ಯಸಾಧಕವಾಗಿ ಕೆಲಸಮಾಡಲು ಮನಸ್ಸಿದೆ; ಆದರೆ ಇದರಲ್ಲಿ ಯಾರಿಗೆ ಸಹ ಕಾಲದ ಮಿತಿ ಇದೆಯೊ ಅವರೊಂದಿಗೆ ಕೆಲಸ ಮಾಡುವುದು ಸೇರಿದೆ. ನಾವು ಕಾರ್ಯಸಾಧಕವಾಗಿ ಕೆಲಸಮಾಡುವುದರಲ್ಲಿ ಮಾತ್ರ ಚಿಂತಿತರಾಗಿರುವಲ್ಲಿ, ಇತರರು ನಮ್ಮ ಚಟುವಟಿಕೆಯ ಮಧ್ಯ ಬರುವಾಗ ನಾವು ರೇಗುವೆವು. ಆದಕಾರಣ ಅಡತ್ಡಡೆಗಳಿಗಾಗಿ ಯೋಜಿಸಿರಿ. ಪ್ರತಿದಿನ ಅಯೋಜಿತ ವಿಕಸನಗಳಿಗಾಗಿ ಸಮಯವನ್ನು ಬದಿಗಿಡಿರಿ. ಅವು ಎದ್ದುಬರುವಾಗ, ಅವುಗಳಿಗಾಗಿ ನೀವು ಸಮಯವನ್ನು ಇಟ್ಟಿದ್ದೀರೆಂದು ತಿಳಿದಿರುವುದರಿಂದ, ನೀವು ಅವುಗಳ ಜಾಗ್ರತೆ ವಹಿಸುವಿರಿ.
ಪ್ರತಿಫಲ. ನೀವು ಕಾರ್ಯತಖ್ತೆ ಮಾಡುವಾಗ, ಸುಮಾರು 90 ನಿಮಿಷಗಳ ತೀಕ್ಷ್ಣ ಅಥವಾ ಏಕಾಗ್ರತೆಯ ಕೆಲಸಕ್ಕಾಗಿ ಯೋಜಿಸತಕ್ಕದ್ದು. ಆ ಕೆಲಸದ ತಯಾರಿಗಾಗಿ ಸಮಯವನ್ನು ಬದಿಗಿಡಲು ಮರೆಯಬೇಡಿ. ನೀವು ವಾಸ್ತವವಾಗಿ ಕೆಲಸವನ್ನು ಆರಂಭಿಸಿದ ಬಳಿಕ ಮತ್ತು ಸುಮಾರು ಒಂದೂವರೆ ತಾಸು ಕೆಲಸ ಮಾಡಿದ ಬಳಿಕ, ಒಂದು ಚಿಕ್ಕ ವಿರಾಮದ ಸಮಯ ನಿಮಗೆ ಬೇಕಾದೀತು. ನೀವು ಒಂದು ಆಫೀಸಿನಲ್ಲಿ ಕೆಲಸಮಾಡುವಲ್ಲಿ, ಕೆಲಸವನ್ನು ತುಸು ನಿಲ್ಲಿಸಿ, ಮೈಮುರಿದು, ಚಿಂತಿಸಿರಿ. ನೀವು ಹೊರಗೆ ಕೆಲಸಮಾಡುವಲ್ಲಿ, ಉಪಾಹಾರವನ್ನು ತಕ್ಕೊಳ್ಳಿ. ನಿಮ್ಮ ಕೆಲಸಕ್ಕಾಗಿ ನಿಮಗೆ ಪ್ರತಿಫಲಕೊಟ್ಟುಕೊಳ್ಳಿರಿ.—ಪ್ರಸಂಗಿ 3:13.
ಯೋಚಿಸಿ, ನೀವು ಶಿರೋನಾಮೆಯನ್ನು ಓದಿದ ಮೇಲೆ ಈ ಲೇಖನವನ್ನು ಸುಮಾರು ಐದು ನಿಮಿಷಗಳಲ್ಲಿ ಮುಗಿಸಿದ್ದೀರಿ. ನೀವು ವಾಸಿಹೊಂದುವ ಮಾರ್ಗದಲ್ಲಿರಬಹುದು!