ನಮ್ಮ ವಂಶವಾಹಿಗಳಿಂದ ನಾವು ಪೂರ್ವನಿರ್ಣಯಿಸಲ್ಪಡುತ್ತೇವೊ?
“ನಮ್ಮ ಅದೃಷ್ಟವು ನಕ್ಷತ್ರಗಳಲ್ಲಿತ್ತೆಂದು ನಾವು ನೆನಸುತ್ತಿದ್ದೆವು. ಈಗ, ಬಹಳಷ್ಟು ಮಟ್ಟಿಗೆ, ನಮ್ಮ ಅದೃಷ್ಟವು ನಮ್ಮ ವಂಶವಾಹಿಗಳಲ್ಲಿದೆ ಎಂದು ನಮಗೆ ತಿಳಿದಿದೆ.” ರೂತ್ ಹಬ್ಬರ್ಡ್ ಮತ್ತು ಇಲೈಜಾ ವಾಲ್ಡ್ ಅವರಿಂದ ಬರೆಯಲ್ಪಟ್ಟ ಎಕ್ಸ್ಪ್ಲೋಡಿಂಗ್ ದ ಜೀನ್ ಮಿತ್ ಎಂಬ ಪುಸ್ತಕದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಜೇಮ್ಸ್ ವಾಟ್ಸನ್ ಹಾಗೆಂದರು. ಹಾಗಿದ್ದರೂ, ವಾಟ್ಸನರ ಉಲ್ಲೇಖದ ಕೆಳಗೆಯೇ, ಆರ್. ಸಿ. ಲೆವಾನ್ಟನ್, ಸ್ಟೀವನ್ ರೋಸ್, ಮತ್ತು ಲಿಆ್ಯನ್ ಜೆ. ಕಾಮೆನ್ ಹೀಗೆ ಹೇಳುತ್ತಿರುವುದಾಗಿ ಉಲ್ಲೇಖಿಸಲ್ಪಟ್ಟಿದ್ದಾರೆ: “ಯಾವುದೇ ಅರ್ಥವತ್ತಾದ ಮಾನವ ಸಾಮಾಜಿಕ ವರ್ತನೆಯು, ಸಾಮಾಜಿಕ ಪರಿಸ್ಥಿತಿಗಳ ಮೂಲಕ ರೂಪಿಸಲ್ಪಡಲು ಸಾಧ್ಯವಿಲ್ಲದಂತಹ ಒಂದು ರೀತಿಯಲ್ಲಿ ನಮ್ಮ ವಂಶವಾಹಿಗಳೊಳಗೆ ನಿರ್ಮಿಸಲ್ಪಟ್ಟಿರುವುದನ್ನು ನಾವು ಯೋಚಿಸಸಾಧ್ಯವಿಲ್ಲ.”
ಆ ಪುಸ್ತಕದ ಮರೆಹಾಳೆಯು, ಅದರ ಒಳವಿಷಯದಲ್ಲಿ ಒಂದಿಷ್ಟನ್ನು ಸಾರಾಂಶಿಸುತ್ತದೆ ಮತ್ತು “ಮಾನವ ವರ್ತನೆಯು ಆನುವಂಶೀಯವೊ?” ಎಂಬ ನಿರ್ಧಾರಕ ಪ್ರಶ್ನೆಯೊಂದಿಗೆ ಆರಂಭಗೊಳ್ಳುತ್ತದೆ. ಬೇರೆ ಮಾತುಗಳಲ್ಲಿ, ಮಾನವ ವರ್ತನೆಯು, ಜೀವಿಯ ಪಿತ್ರಾರ್ಜಿತ ಜೀವಿವಿಜ್ಞಾನದ ವೈಶಿಷ್ಟ್ಯಗಳನ್ನು ಮತ್ತು ವಿಶೇಷಗುಣಗಳನ್ನು ರವಾನಿಸುವ, ವಂಶವಾಹಿಗಳ ಮೂಲಕ ಸಂಪೂರ್ಣವಾಗಿ ನಿರ್ಧರಿಸಲ್ಪಡುತ್ತದೊ? ನಿರ್ದಿಷ್ಟವಾದ ಅನೈತಿಕ ವರ್ತನೆಯು, ಅದು ಆನುವಂಶೀಯವೆಂಬ ಆಧಾರದ ಮೇಲೆ ಸ್ವೀಕಾರಾರ್ಹವಾಗಿರಬೇಕೊ? ಅಪರಾಧಿಗಳು, ಒಂದು ಆನುವಂಶೀಯ ಒಲವಿನ ಕಾರಣ ಕಡಮೆ ಜವಾಬ್ದಾರಿಯನ್ನು ಪ್ರತಿಪಾದಿಸಲು ಶಕ್ತರಾಗಿರುತ್ತಾ, ತಮ್ಮ ಆನುವಂಶೀಯ ನಿಯಮಾವಳಿಯ ಬಲಿಪಶುಗಳೋಪಾದಿ ಉಪಚರಿಸಲ್ಪಡಬೇಕೊ?
ಈ ಶತಮಾನದಲ್ಲಿ ವಿಜ್ಞಾನಿಗಳು ಅನೇಕ ಪ್ರಯೋಜನಕರ ಆವಿಷ್ಕಾರಗಳನ್ನು ಮಾಡಿರುವುದರ ಕುರಿತು ಯಾವ ನಿರಾಕರಣೆಯೂ ಇರುವುದಿಲ್ಲ. ಈ ಆವಿಷ್ಕಾರಗಳಲ್ಲಿ, ನಮ್ಮ ಆನುವಂಶೀಯ ರಚನೆಯ ನೀಲಿನಕ್ಷೆಯೆಂಬುದಾಗಿ ಕರೆಯಲ್ಪಟ್ಟಿರುವ, ಸ್ತಂಭಿಸುವ ಡಿಎನ್ಏ ಒಂದಾಗಿದೆ. ಆನುವಂಶೀಯ ನಿಯಮಾವಳಿಯು ಹಿಡಿದಿಟ್ಟುಕೊಂಡಿರುವ ಮಾಹಿತಿಯು, ಏಕಪ್ರಕಾರವಾಗಿ ವಿಜ್ಞಾನಿಗಳ ಹಾಗೂ ಜನಸಾಮಾನ್ಯರ ಕುತೂಹಲವನ್ನು ಕೆರಳಿಸಿದೆ. ಆನುವಂಶಿಕತೆಯ ಕ್ಷೇತ್ರದಲ್ಲಿನ ಸಂಶೋಧನೆಯು ನಿಜವಾಗಿಯೂ ಏನನ್ನು ಕಂಡುಹಿಡಿದಿದೆ? ಕಂಡುಹಿಡಿತಗಳು ಪೂರ್ವಯೋಜನೆ ಅಥವಾ ಪೂರ್ವನಿರ್ಣಯದ ಆಧುನಿಕ ಸಿದ್ಧಾಂತವನ್ನು ಬೆಂಬಲಿಸಲು ಹೇಗೆ ಉಪಯೋಗಿಸಲ್ಪಡುತ್ತವೆ?
ದಾಂಪತ್ಯ ದ್ರೋಹ ಮತ್ತು ಸಲಿಂಗಿ ಕಾಮದ ಕುರಿತೇನು?
ದಿ ಆಸ್ಟ್ರೇಲಿಯನ್ ಎಂಬ ವಾರ್ತಾಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ಒಂದು ಲೇಖನಕ್ಕನುಸಾರ, ಆನುವಂಶಿಕತೆಯ ಯಾವುದೊ ಸಂಶೋಧನೆಯು ಪ್ರತಿಪಾದಿಸುವುದೇನೆಂದರೆ, “ದಾಂಪತ್ಯ ದ್ರೋಹವು ಬಹುಶಃ ನಮ್ಮ ವಂಶವಾಹಿಗಳಲ್ಲಿದೆ. . . . ಮೋಸಮಾಡುವ ನಮ್ಮ ಹೃದಯಗಳು ಹಾಗಿರುವಂತೆ ಪೂರ್ವನಿರ್ಣಯಿಸಲ್ಪಟ್ಟಿವೆ ಎಂದು ತೋರುತ್ತದೆ.” ಒಂದು ಸ್ವೇಚ್ಛಾ ಜೀವನ ಶೈಲಿಗಾಗಿ ಕಡಮೆ ಜವಾಬ್ದಾರಿಯನ್ನು ಪ್ರತಿಪಾದಿಸಲು ಬಯಸುವ ಯಾವುದೇ ವ್ಯಕ್ತಿಗೆ ತಪ್ಪಿಸಿಕೊಳ್ಳುವ ಒಂದು ಉಪಾಯವನ್ನು ಸೃಷ್ಟಿಸುವ ಮೂಲಕ, ಈ ಮನೋಭಾವವು ವಿವಾಹಗಳು ಮತ್ತು ಕುಟುಂಬಗಳ ಮೇಲೆ ಎಂತಹ ಒಂದು ಹಾವಳಿಯನ್ನು ಸಾಧಿಸಸಾಧ್ಯವೆಂಬುದನ್ನು ಕೇವಲ ಊಹಿಸಿಕೊಳ್ಳಿರಿ!
ಸಲಿಂಗಿ ಕಾಮದ ಕುರಿತು, ನ್ಯೂಸ್ವೀಕ್ ಪತ್ರಿಕೆಯಲ್ಲಿ, “ಜನಿಸಿದ್ದೊ ಪಳಗಿಸಿದ್ದೊ?” ಎಂಬ ತಲೆಬರಹವಿತ್ತು. ಆ ಲೇಖನವು ಹೇಳಿದ್ದು: “ಸಲಿಂಗಿ ಕಾಮವು ಪೋಷಣೆಯ ವಿಷಯವಲ್ಲ, ಆನುವಂಶಿಕತೆಯ ವಿಷಯವಾಗಿರಬಹುದೆಂದು ಸೂಚಿಸುವ ನವೀನ ಸಂಶೋಧನೆಯನ್ನು ಗ್ರಹಿಸಿಕೊಳ್ಳಲು ವಿಜ್ಞಾನ ಹಾಗೂ ಮನೋಶಾಸ್ತ್ರವು ಪ್ರಯಾಸಪಡುತ್ತಿದೆ. . . . ಸ್ವತಃ ಸಲಿಂಗಿ ಕಾಮಿಗಳ ಸಮುದಾಯದಲ್ಲಿ, ಸಲಿಂಗಿ ಕಾಮವು ವರ್ಣತಂತುಗಳಲ್ಲಿ ಆರಂಭವಾಗುತ್ತದೆ ಎಂಬ ಸೂಚನೆಯನ್ನು ಅನೇಕರು ಸ್ವಾಗತಿಸುತ್ತಾರೆ.”
ಲೇಖನವು ತದನಂತರ ಡಾ. ರಿಚರ್ಡ್ ಪಿಲಾರ್ಡ್ರನ್ನು ಉಲ್ಲೇಖಿಸುತ್ತದೆ. ಅವರು ಹೇಳಿದ್ದು: “ಲೈಂಗಿಕ ಪರಿಸ್ಥಿತಿಯಲ್ಲಿನ ಒಂದು ಆನುವಂಶಿಕ ಅಂಶವು, ‘ಇದೊಂದು ದೋಷವಲ್ಲ, ಮತ್ತು ಇದು ನಿಮ್ಮ ತಪ್ಪಲ್ಲ’ ಎಂದು ಹೇಳುತ್ತದೆ.” ಈ “ತಪ್ಪಲ್ಲ” ಎಂಬ ವಾದವನ್ನು ಇನ್ನೂ ಬಲಪಡಿಸುತ್ತಾ, ಸಲಿಂಗಿ ಕಾಮದ ವಿಷಯದಲ್ಲಿ ಒಬ್ಬ ಸಂಶೋಧಕರಾಗಿರುವ ಫ್ರೆಡ್ರಿಕ್ ವಿಟೆಮ್ ಗಮನಿಸುವುದೇನೆಂದರೆ, “ಸಲಿಂಗಿ ಕಾಮವು ಸ್ವಭಾವಸಿದ್ಧವಾದದ್ದೆಂದು ಹೇಳಲ್ಪಟ್ಟಾಗ, ಸಮಾಧಾನದ ನಿಟ್ಟುಸಿರನ್ನು ಬಿಡುವುದು ಜನರ ಪ್ರವೃತ್ತಿಯಾಗಿದೆ. ಅದು ಕುಟುಂಬಗಳನ್ನು ಮತ್ತು ಸಲಿಂಗಿ ಕಾಮಿಗಳನ್ನು ದೋಷಿಭಾವದಿಂದ ಬಿಡಿಸುತ್ತದೆ. ಸಮಾಜವು ಸಲಿಂಗಿ ಕಾಮಿ ಶಿಕ್ಷಕರಂತಹ ವಿಷಯಗಳ ಕುರಿತು ಚಿಂತಿಸಬೇಕಾಗಿಲ್ಲವೆಂಬದನ್ನೂ ಅದು ಅರ್ಥೈಸುತ್ತದೆ.”
ಕೆಲವೊಮ್ಮೆ, ಸಲಿಂಗಿ ಕಾಮದ ಪ್ರವೃತ್ತಿಗಳು ವಂಶವಾಹಿಗಳ ಮೂಲಕ ನಿರ್ಧರಿಸಲ್ಪಡುತ್ತವೆಂದು ಹೇಳುವ ಸಾಕ್ಷ್ಯವನ್ನು, ವಾರ್ತಾಮಾಧ್ಯಮದ ಮೂಲಕ ಒಂದು ಸಾಧ್ಯತೆ ಹಾಗೂ ನಿರ್ಣಯವಿಹೀನ ವಿಷಯವಾಗಿ ಸಾದರಪಡಿಸುವ ಬದಲಿಗೆ, ವಾಸ್ತವಿಕ ಹಾಗೂ ನಿರ್ಣಾಯಕ ವಿಷಯವಾಗಿ ಸಾದರಪಡಿಸಲಾಗುತ್ತದೆ.
ನ್ಯೂ ಸ್ಟೇಟ್ಸ್ಮನ್ ಆ್ಯಂಡ್ ಸೊಸೈಟಿ ಎಂಬ ಪತ್ರಿಕೆಯು, ಕೆಲವು ಪ್ರಭಾವೋತ್ಪಾದಕ ಉತ್ಪ್ರೇಕ್ಷೆಯ ಮೇಲೆ ತಣ್ಣೀರೆರಚುತ್ತದೆ: “ವಿಸ್ಮಯಗೊಂಡ ಓದುಗನು, ವಾಸ್ತವಿಕವಾದ ಭೌತಿಕ ಸಾಕ್ಷ್ಯದ ಬಾಹ್ಯ ತೋರಿಕೆಯನ್ನು—ಅಥವಾ, ನಿಶ್ಚಯವಾಗಿಯೂ, ಸ್ವೇಚ್ಛಾ ಸಂಪರ್ಕವು ‘ಗಂಡಿನ ವಂಶವಾಹಿಗಳಲ್ಲಿ ಕ್ರೂಡೀಕರಿಸಲ್ಪಟ್ಟಿದೆ ಮತ್ತು ಗಂಡಿನ ಮಿದುಳಿನ ವಿದ್ಯುತ್ಪಥದ ಮೇಲೆ ಅಚ್ಚೊತ್ತಲ್ಪಟ್ಟಿದೆ’ ಎಂಬ ವೈಜ್ಞಾನಿಕವಾಗಿ ಪ್ರಖ್ಯಾತವಾಗಿರುವ [ಕುತ್ಸಿತ] ಪ್ರತಿಪಾದನೆಗೆ ಒಂದು ಆಧಾರದ ಸಂಪೂರ್ಣ ಅನುಪಸ್ಥಿತಿಯನ್ನು ಅಲಕ್ಷಿಸಿದ್ದಿರಬಹುದು.” ಕ್ರ್ಯಾಕಿಂಗ್ ದ ಕೋಡ್ ಎಂಬ ತಮ್ಮ ಪುಸ್ತಕದಲ್ಲಿ, ಡೇವಿಡ್ ಸೂಸೂಕಿ ಮತ್ತು ಜೋಸೆಫ್ ಲೆವಿನ್ ಪ್ರಚಲಿತ ಆನುವಂಶಿಕತೆಯ ಸಂಶೋಧನೆಯ ಕುರಿತಾದ ತಮ್ಮ ಚಿಂತೆಯನ್ನು ಕೂಡಿಸುತ್ತಾರೆ: “ವಂಶವಾಹಿಗಳು ವರ್ತನೆಯನ್ನು ಒಂದು ಸಾಮಾನ್ಯ ರೀತಿಯಲ್ಲಿ ಪ್ರಭಾವಿಸುತ್ತವೆ ಎಂದು ವಾದಿಸಸಾಧ್ಯವಿರುವಾಗಲೂ, ನಿರ್ದಿಷ್ಟವಾದ ಒಂದು ವಂಶವಾಹಿಯು—ಅಥವಾ ವಂಶವಾಹಿಗಳ ಜೋಡಿಯು, ಅಥವಾ ಇಪ್ಪತ್ತು ವಂಶವಾಹಿಗಳೂ—ಅದರ ಪರಿಸರಕ್ಕೆ ಒಂದು ಪ್ರಾಣಿಯ ಪ್ರತಿಕ್ರಿಯೆಗಳ ನಿರ್ದಿಷ್ಟವಾದ ವಿವರಗಳನ್ನು ನಿಜವಾಗಿಯೂ ನಿಯಂತ್ರಿಸುತ್ತದೆ ಎಂದು ತೋರಿಸುವುದು ಬೇರೆ ವಿಷಯವೇ ಸರಿ. ಈ ಬಿಂದುವಿನಲ್ಲಿ—ಅಣುವನ್ನು ಗುರುತಿಸುವ ಮತ್ತು ಮಾರ್ಪಡಿಸುವ ನಿಷ್ಕೃಷ್ಟ ಅರ್ಥದಲ್ಲಿ—ನಿರ್ದಿಷ್ಟ ವರ್ತನೆಗಳನ್ನು ಮುಂಚಿತವಾಗಿ ಬಾಧಿಸುವ ಡಿಎನ್ಏಯ ಯಾವುದೇ ಎಳೆಗಳನ್ನು ಯಾರಾದರೂ ಕಂಡುಕೊಂಡಿದ್ದಾರೊ ಎಂದು ಕೇಳುವುದು ನ್ಯಾಯಸಮ್ಮತವು.”
ಮದ್ಯದ ಗೀಳು ಹಾಗೂ ಅಪರಾಧಿತ್ವದ ವಂಶವಾಹಿಗಳು
ಮದ್ಯದ ಗೀಳಿನ ಅಧ್ಯಯನವು, ವರ್ಷಗಳಿಂದ ಆನುವಂಶಿಕತೆಯ ಅನೇಕ ಸಂಶೋಧಕರನ್ನು ಆಕರ್ಷಿಸಿದೆ. ಮದ್ಯದ ಗೀಳಿಗೆ ನಿರ್ದಿಷ್ಟ ವಂಶವಾಹಿಗಳ ಉಪಸ್ಥಿತಿ ಅಥವಾ ಕೊರತೆಯು ಕಾರಣವೆಂದು ಅಧ್ಯಯನಗಳು ತೋರಿಸಿರುವುದಾಗಿ ಕೆಲವರು ಪ್ರತಿಪಾದಿಸುತ್ತಾರೆ. ಉದಾಹರಣೆಗೆ, ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ 1988ರಲ್ಲಿ ವರದಿಸಿದ್ದೇನೆಂದರೆ, “ಕಳೆದ ದಶಕದಲ್ಲಿ, ಮದ್ಯದ ಗೀಳು ಪಿತ್ರಾರ್ಜಿತವಾಗಿ ಪಡೆದುಕೊಳ್ಳುವ ವಿಶೇಷ ಗುಣವಾಗಿದೆ ಎಂಬ ನಿರ್ಣಾಯಕ ಸಾಕ್ಷ್ಯವನ್ನು ಪ್ರತ್ಯೇಕವಾದ ಮೂರು ತನಿಖೆಗಳು ಉತ್ಪಾದಿಸಿವೆ.”
ಹಾಗಿದ್ದರೂ, ದುರ್ವ್ಯಸನದ ಕ್ಷೇತ್ರದಲ್ಲಿನ ಕೆಲವು ವಿಶೇಷಜ್ಞರು ಈಗ, ಮದ್ಯದ ಗೀಳು ಬಹುಮಟ್ಟಿಗೆ ಜೀವಿವಿಜ್ಞಾನದ ಅಂಶಗಳಿಂದ ಪ್ರಭಾವಿಸಲ್ಪಡುತ್ತದೆ ಎಂಬ ನೋಟವನ್ನು ಆಕ್ಷೇಪಿಸುತ್ತಿದ್ದಾರೆ. ಎಪ್ರಿಲ್ 9, 1996ರ ದ ಬಾಸ್ಟನ್ ಗ್ಲೋಬ್ನಲ್ಲಿನ ಒಂದು ವರದಿಯು ಹೇಳಿದ್ದು: “ಮದ್ಯದ ಗೀಳಿನ ವಂಶವಾಹಿಯು ಕಣ್ಣಿಗೆ ಬೀಳುವಂತೆ ತೋರುವುದಿಲ್ಲ, ಮತ್ತು ಹೆಚ್ಚೆಂದರೆ ತಾವು, ಅಮಲೇರದೆ ಹೆಚ್ಚನ್ನು ಕುಡಿಯುವಂತೆ ಕೆಲವು ಜನರನ್ನು ಅನುಮತಿಸುವ ಒಂದು ಆನುವಂಶಿಕ ದೌರ್ಬಲ್ಯ—ಮದ್ಯದ ಗೀಳಿಗೆ ಅವರನ್ನು ಗುರಿಮಾಡಬಹುದಾದ ಒಂದು ವಿಶೇಷ ಗುಣ—ವನ್ನು ಬಹುಶಃ ಕಂಡುಹಿಡಿಯುವೆವೆಂದು ಕೆಲವು ಸಂಶೋಧಕರು ಅಂಗೀಕರಿಸುತ್ತಾರೆ.”
ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ “ಆನುವಂಶಿಕತೆ ಮತ್ತು ಅಪರಾಧಿ ವರ್ತನೆಯ ಕುರಿತಾದ ಸಂಶೋಧನೆಯ ಅರ್ಥ ಮತ್ತು ಮಹತ್ವ” ಎಂಬ ಶೀರ್ಷಿಕೆಯ ಸಮ್ಮೇಳನದ ಕುರಿತು ದ ನ್ಯೂ ಯಾರ್ಕ್ ಟೈಮ್ಸ್ ವರದಿನೀಡಿತು. ಒಂದು ಅಪರಾಧಿ ವಂಶವಾಹಿಯ ವಿಚಾರವು ಆಕರ್ಷಕವಾಗಿ ಸರಳವಾಗಿದೆ. ಅನೇಕ ವ್ಯಾಖ್ಯಾನಕಾರರು ಗೆದ್ದೆತ್ತಿನ ಬಾಲ ಹಿಡಿಯಲು ಆತುರರಾಗಿರುವಂತೆ ತೋರುತ್ತಾರೆ. ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸೀನ್ನಲ್ಲಿನ ಒಬ್ಬ ವಿಜ್ಞಾನ ಬರಹಗಾರನು ಹೇಳಿದ್ದೇನೆಂದರೆ, ದುಷ್ಟತನವು “ಗರ್ಭಧಾರಣೆಯ ಸಮಯದಲ್ಲಿ ನಮ್ಮ ಹೆತ್ತವರು ನಮಗೆ ರವಾನಿಸುವ ವರ್ಣತಂತುಗಳ ಸುರುಳಿಗಳಲ್ಲಿ ನಾಟಿಕೊಂಡಿರ”ಬಹುದು. ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿನ ಒಂದು ಲೇಖನವು ವರದಿಸಿದ್ದೇನೆಂದರೆ, ಅಪರಾಧಿತ್ವಕ್ಕಾಗಿರುವ ವಂಶವಾಹಿಗಳ ಕುರಿತಾದ ಸತತ ಚರ್ಚೆಯು, ಅಪರಾಧಕ್ಕೆ “ಒಂದು ಸಾಮಾನ್ಯ ಉಗಮ—ಮಿದುಳಿನ ಒಂದು ಅಸಾಮಾನ್ಯತೆ” ಇದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸುತ್ತದೆ.
ಹಿಂಸಾತ್ಮಕ ಪ್ರವೃತ್ತಿಯಿರುವ ಮಕ್ಕಳನ್ನು ಆನುವಂಶೀಯ ಪರೀಕ್ಷೆಗಳು ಗುರುತಿಸುವ ಸಮಯವು ಬರುವುದೆಂದು, ಹಾರ್ವರ್ಡ್ ಮನೋಶಾಸ್ತ್ರಜ್ಞರಾದ ಜೆರೋಮ್ ಕಾಗನ್ ಮುಂತಿಳಿಸುತ್ತಾರೆ. ಅಪರಾಧವನ್ನು ಸಾಮಾಜಿಕ ಸುಧಾರಣೆಯ ಬದಲು ಜೀವಿವಿಜ್ಞಾನದ ನಿರ್ವಹಣೆಯ ಮುಖಾಂತರ ನಿಯಂತ್ರಿಸುವ ನಿರೀಕ್ಷೆಯಿರಬಹುದೆಂದು ಕೆಲವು ಜನರು ಸೂಚಿಸುತ್ತಾರೆ.
ವರ್ತನೆಗಾಗಿರುವ ಆನುವಂಶೀಯ ಆಧಾರದ ಕುರಿತ ಈ ಊಹೆಗಳಲ್ಲಿನ ವರದಿಗಳಲ್ಲಿ ಉಪಯೋಗಿಸಲ್ಪಟ್ಟ ಭಾಷೆಯು, ಅನೇಕ ವೇಳೆ ಸಂದಿಗ್ಧವೂ ಅನಿಶ್ಚಿತವೂ ಆಗಿದೆ. ಎಕ್ಸ್ಪ್ಲೋಡಿಂಗ್ ದ ಜೀನ್ ಮಿತ್ ಎಂಬ ಪುಸ್ತಕವು, ಆನುವಂಶಿಕತೆಯ ವರ್ತನಾ ಶಾಸ್ತ್ರಜ್ಞನಾದ ಲಿಂಕನ್ ಈವ್ಸ್ನಿಂದ ನಡೆಸಲ್ಪಟ್ಟ ಒಂದು ಅಧ್ಯಯನದ ಕುರಿತು ಹೇಳುತ್ತದೆ. ಖಿನ್ನತೆಗಾಗಿರುವ ಒಂದು ಆನುವಂಶೀಯ ಕಾರಣದ ಸಾಕ್ಷ್ಯವನ್ನು ತಾನು ಕಂಡುಕೊಂಡಿದ್ದೇನೆಂದು ಅವನು ಹೇಳಿದನು. ಈವ್ಸ್, ಖಿನ್ನತೆಯ ಕಡೆಗೆ ಒಲವುಳ್ಳವರೆಂದು ಪರಿಗಣಿಸಲ್ಪಟ್ಟ ಸ್ತ್ರೀಯರನ್ನು ಸಮೀಕ್ಷಿಸಿದ ತರುವಾಯ, “[ಸ್ತ್ರೀಯರ] ಖಿನ್ನವಾದ ಹೊರನೋಟ ಮತ್ತು ಶೈಲಿಯು, ಇಂತಹ ಆಕಸ್ಮಿಕ ತೊಂದರೆಗಳು ಸಂಭವಿಸುವುದನ್ನು ಹೆಚ್ಚು ಸಂಭವನೀಯವಾಗಿ ಮಾಡಿರಬಹುದೆಂದು ಸೂಚಿಸಿದನು.” ಈ “ಆಕಸ್ಮಿಕ ತೊಂದರೆಗಳು” ಯಾವುವಾಗಿದ್ದವು? ಅಧ್ಯಯನಿಸಲ್ಪಟ್ಟ ಸ್ತ್ರೀಯರು “ಬಲಾತ್ಕಾರದಿಂದ ಕೆಡಿಸಲ್ಪಟ್ಟಿದ್ದರು, ಅತ್ಯಾಚಾರಕ್ಕೊಳಗಾಗಿದ್ದರು, ಇಲ್ಲವೆ ತಮ್ಮ ಕೆಲಸಗಳಿಂದ ತೆಗೆಯಲ್ಪಟ್ಟಿದ್ದರು.” ಹಾಗಾದರೆ ಖಿನ್ನತೆಯು ಈ ಅಗಾಧ ವೇದನೆಯ ಘಟನೆಗಳನ್ನು ಉಂಟುಮಾಡಿತೊ? “ಅದು ಯಾವ ರೀತಿಯ ತರ್ಕವಾಗಿದೆ?” ಎಂದು ಕೇಳುತ್ತಾ ಪುಸ್ತಕವು ಮುಂದುವರಿಸುತ್ತದೆ. “ಆ ಸ್ತ್ರೀಯರು ಬಲಾತ್ಕಾರದಿಂದ ಕೆಡಿಸಲ್ಪಟ್ಟಿದ್ದರು, ಅತ್ಯಾಚಾರಕ್ಕೊಳಗಾಗಿದ್ದರು, ಅಥವಾ ತಮ್ಮ ಕೆಲಸಗಳಿಂದ ತೆಗೆಯಲ್ಪಟ್ಟಿದ್ದರು, ಮತ್ತು ಅವರು ಖಿನ್ನರಾಗಿದ್ದರು. ಅವರು ಎಷ್ಟರ ಮಟ್ಟಿಗೆ ಅಗಾಧ ವೇದನೆಯ ಘಟನೆಗಳನ್ನು ಅನುಭವಿಸಿದ್ದರೊ, ಅವರ ಖಿನ್ನತೆಯು ಅಷ್ಟು ಹೆಚ್ಚು ಅಸ್ಥಿಗತವಾಗಿತ್ತು. . . . ಖಿನ್ನತೆಯು ಜೀವಿತದ ಯಾವುದೇ ಅನುಭವಕ್ಕೆ ಸಂಬಂಧಿಸಿರಲಿಲ್ಲವೆಂದು ಅವನು [ಈವ್ಸ್] ಕಂಡುಹಿಡಿದಿದ್ದರೆ, ಒಂದು ಆನುವಂಶೀಯ ಜೋಡಣೆಗಾಗಿ ಹುಡುಕುವಂತಹದ್ದು ಸಾರ್ಥಕವಾಗಿ ಪರಿಣಮಿಸುತ್ತಿತ್ತು.”
ಅದೇ ಪ್ರಕಾಶನವು ಹೇಳುವುದೇನೆಂದರೆ, ಈ ಕಥೆಗಳು “ವಾರ್ತಾ ಮಾಧ್ಯಮ ಹಾಗೂ ವೈಜ್ಞಾನಿಕ ಪತ್ರಿಕೆಗಳು—ಎರಡರಲ್ಲೂ—ಇರುವ ಆನುವಂಶಿಕತೆಯ [ವರ್ತನಾ ಸಂಬಂಧವಾದ] ಕುರಿತಾದ ಅತ್ಯಂತ ಪ್ರಚಲಿತ ವರದಿಸುವಿಕೆಯ ಪ್ರತಿನಿಧಿರೂಪವಾಗಿವೆ. ಅವುಗಳಲ್ಲಿ, ನಮ್ಮ ಜೀವಿತಗಳಲ್ಲಿ ವಂಶವಾಹಿಗಳ ಮಹತ್ವದ ಕುರಿತಾದ ಸ್ವಾರಸ್ಯಕರವಾದ ವಾಸ್ತವಾಂಶಗಳು, ಸಮರ್ಥನವಿರದ ಕಲ್ಪನೆಗಳು, ಮತ್ತು ಆಧಾರರಹಿತ ಅತ್ಯುಕ್ತಿಗಳ ಮಿಶ್ರಣವಿದೆ. ಈ ಬರವಣಿಗೆಯ ಹೆಚ್ಚಿನ ಭಾಗದ ಕುರಿತಾದ ಒಂದು ಎದ್ದುಕಾಣುವ ವಿಷಯವು, ಅದರ ಸಂದಿಗ್ಧತೆಯಾಗಿದೆ.” ಅದು ಮುಂದುವರಿಸಿ ಹೇಳುವುದು: “ಅನುವಂಶ ತತ್ವದ ಮೆಂಡೆಲನ ನಮೂನೆಯನ್ನು ಅನುಸರಿಸುವ ಪರಿಸ್ಥಿತಿಗಳೊಂದಿಗೆ ವಂಶವಾಹಿಗಳನ್ನು ಸಂಬಂಧಿಸುವುದು ಮತ್ತು ಕ್ಯಾನ್ಸರ್ ಅಥವಾ ಅಧಿಕ ರಕ್ತದೊತ್ತಡಗಳಂತಹ ಜಟಿಲವಾದ ಪರಿಸ್ಥಿತಿಗಳನ್ನು ವಿವರಿಸಲು ಊಹಾತ್ಮಕವಾದ ಆನುವಂಶೀಯ ‘ಪ್ರವೃತ್ತಿಗಳನ್ನು’ ಬಳಸುವುದರ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಮಾನವ ವರ್ತನೆಗಳನ್ನು ವಿವರಿಸಲು ಆನುವಂಶೀಯ ಸಂಶೋಧನೆಯು ಸಹಾಯಮಾಡಬಲ್ಲದೆಂದು ವಿಜ್ಞಾನಿಗಳು ಸೂಚಿಸುವಾಗ, ಅವರೊಂದು ಅವಸರದ ತೀರ್ಮಾನಕ್ಕೆ ಬರುತ್ತಾರೆ.”
ಹಾಗಿದ್ದರೂ, ಮೊದಲೇ ಹೇಳಿರುವ ಈ ಎಲ್ಲ ವಿಷಯಗಳ ನೋಟದಲ್ಲಿ, ಅನೇಕಾವರ್ತಿ ಎಬ್ಬಿಸಲ್ಪಡುವ ಪ್ರಶ್ನೆಗಳು ಇನ್ನೂ ಉಳಿಯುತ್ತವೆ: ಕೆಲವೊಮ್ಮೆ ನಮ್ಮ ಜೀವಿತಗಳಲ್ಲಿ ಬದಲಾದ ವರ್ತನಾ ನಮೂನೆಗಳು ಉದಯಿಸುತ್ತಿರುವುದನ್ನು ನಾವು ಏಕೆ ಕಂಡುಕೊಳ್ಳುತ್ತೇವೆ? ಮತ್ತು ಅಂತಹ ಸನ್ನಿವೇಶಗಳಲ್ಲಿ ನಮಗೆ ಯಾವ ನಿಯಂತ್ರಣವಿದೆ? ನಮ್ಮ ಜೀವಿತಗಳ ನಿಯಂತ್ರಣವನ್ನು ನಾವು ಹೇಗೆ ಗಳಿಸಿ, ಕಾಪಾಡಿಕೊಳ್ಳುತ್ತೇವೆ? ಈ ಪ್ರಶ್ನೆಗಳಿಗೆ ಕೆಲವು ಉತ್ತರಗಳನ್ನು ಒದಗಿಸುವುದರಲ್ಲಿ ಮುಂದಿನ ಲೇಖನವು ಸಹಾಯಕಾರಿಯಾಗಿ ಪರಿಣಮಿಸಬಹುದು.
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ವಂಶವಾಹಿ ಚಿಕಿತ್ಸೆ—ನಿರೀಕ್ಷೆಗಳು ನೆರವೇರಿಸಲ್ಪಟ್ಟಿವೆಯೊ?
ವಂಶವಾಹಿ ಚಿಕಿತ್ಸೆ—ಪ್ರಕೃತಿ ಜನ್ಯ ಆನುವಂಶೀಯ ರೋಗಗಳಿಂದ ರೋಗಿಗಳನ್ನು ಗುಣಪಡಿಸಲು ಅವರ ದೇಹದೊಳಕ್ಕೆ ಸರಿಪಡಿಸುವ ವಂಶವಾಹಿಗಳನ್ನು ಒಳಹೊಗಿಸುವುದರ ಕುರಿತೇನು? ಕೆಲವೊಂದು ವರ್ಷಗಳ ಹಿಂದೆ ವಿಜ್ಞಾನಿಗಳಿಗೆ ಉಚ್ಚಮಟ್ಟದ ನಿರೀಕ್ಷೆಗಳಿದ್ದವು. “ವಂಶವಾಹಿ ಚಿಕಿತ್ಸೆಯನ್ನು ಆರಂಭಿಸುವ ಸೂಕ್ತವಾದ ಸಮಯವು ಇದಾಗಿದೆಯೊ?” ಎಂಬುದಾಗಿ ಡಿಸೆಂಬರ್ 16, 1995ರ ದಿ ಇಕಾನೊಮಿಸ್ಟ್ ಕೇಳಿ, ಹೀಗೆ ಹೇಳುತ್ತದೆ: “ವಂಶವಾಹಿ ಚಿಕಿತ್ಸಕರ ಬಹಿರಂಗ ಹೇಳಿಕೆಗಳು, ಮತ್ತು ಹೆಚ್ಚಿನ ವೃತ್ತಪತ್ರ ಪ್ರಸಾರದಿಂದ ತೀರ್ಮಾನಿಸುತ್ತಾ, ನೀವು ಹಾಗೆ ಯೋಚಿಸಬಹುದು. ಆದರೆ ಅಮೆರಿಕದ ಪ್ರಖ್ಯಾತ ವೈಜ್ಞಾನಿಕ ಪರಿಣತರ ಗುಂಪು ಸಮ್ಮತಿಸುವುದಿಲ್ಲ. ಈ ವಿಷಯವನ್ನು ಪುನರ್ವಿಮರ್ಶಿಸುವಂತೆ ಹದಿನಾಲ್ಕು ಶ್ರೇಷ್ಠ ವಿಜ್ಞಾನಿಗಳು ನ್ಯಾಷನಲ್ ಇನ್ಸ್ಟಿಟ್ಯುಟ್ಸ್ ಆಫ್ ಹೆಲ್ತ್ (ಎನ್ಐಏಚ್)ನ ಮುಖ್ಯಸ್ಥರಾದ ಹೆರಾಲ್ಡ್ ವಾರ್ಮಸ್ ಅವರಿಂದ ಕೇಳಿಕೊಳ್ಳಲ್ಪಟ್ಟರು. ಏಳು ತಿಂಗಳುಗಳ ಆಲೋಚನೆಯ ನಂತರ, ಕಳೆದ ವಾರ ಪ್ರಕಾಶಿಸಲ್ಪಟ್ಟ ಒಂದು ವರದಿಯಲ್ಲಿ ಅವರು ಹೇಳಿದ್ದೇನೆಂದರೆ, ವಂಶವಾಹಿ ಚಿಕಿತ್ಸೆಯು ಆಶಾಜನಕವಾಗಿದೆಯಾದರೂ, ಪ್ರಸ್ತುತ ಕ್ಷಣದ ವರೆಗಿನ ಅದರ ಸಾಧನೆಗಳು ‘ಅತಿಶಯಿಸಲ್ಪಟ್ಟಿವೆ.’” ಎಡಿನೊಸೈನ್ ಡಿಮಿನೇಸ್ (ಏಡಿಏ) ಕೊರತೆ ಅಥವಾ ಅನ್ಯ ವಂಶವಾಹಿಗಳ ಕೂಡಿಸುವಿಕೆಯ ಮೂಲಕ ಚಿಕಿತ್ಸೆಗೆ ಬದ್ಧವಾಗುವವೆಂದು ಎಣಿಸಲ್ಪಟ್ಟ ಇತರ ಡಸನ್ಗಟ್ಟಲೆ ರೋಗಗಳಲ್ಲಿ ಒಂದರಿಂದ ಕಷ್ಟಾನುಭವಿಸುತ್ತಿರುವ 597 ರೋಗಿಗಳನ್ನು ಒಳಗೊಂಡ ಪರೀಕ್ಷೆಗಳು ನಡೆಸಲ್ಪಟ್ಟವು. “ವಿಜ್ಞಾನಿಗಳಿಗನುಸಾರ, ಇಂತಹ ಒಂದು ಪರೀಕ್ಷೆಯಲ್ಲಿನ ಭಾಗವಹಿಸುವಿಕೆಯಿಂದ ಯಾವನೇ ರೋಗಿಯು ಸುಸ್ಪಷ್ಟವಾಗಿ ಪ್ರಯೋಜನ ಪಡೆದಿರುವುದಿಲ್ಲ,” ಎಂಬುದಾಗಿ ದಿ ಇಕಾನೊಮಿಸ್ಟ್ ಹೇಳುತ್ತದೆ.
[ಪುಟ 8 ರಲ್ಲಿರುವ ಚಿತ್ರಗಳು]
ಆನುವಂಶೀಯ ಮನೋಭಾವದ ಕುರಿತು ಕೆಲವರು ಪ್ರತಿಪಾದಿಸಬಹುದಾದ ವಿಷಯದ ಹೊರತಾಗಿಯೂ, ತಾವು ಕ್ರಿಯೆಗೈಯುವ ವಿಧವನ್ನು ಜನರು ಆರಿಸಿಕೊಳ್ಳಬಲ್ಲರು