“ಅದು ನನ್ನ ತಪ್ಪಲ್ಲ”
‘ನನ್ನನ್ನು ಕ್ಷಮಿಸಿ. ಅದು ನನ್ನ ತಪ್ಪಾಗಿತ್ತು. ಸಂಪೂರ್ಣವಾಗಿ ನಾನೇ ಜವಾಬ್ದಾರನು!’ ಎಂಬುದಾಗಿ ಯಾರಾದರೊಬ್ಬರು ಹೇಳುವುದನ್ನು ಇಂದು ನೀವು ಎಷ್ಟು ಸಾರಿ ಕೇಳುತ್ತೀರಿ? ಇಂತಹ ಸರಳವಾದ ಪ್ರಾಮಾಣಿಕತೆಯು ವಿರಳವಾಗಿ ಕೇಳಿಬರುತ್ತದೆ. ವಾಸ್ತವದಲ್ಲಿ, ಅನೇಕ ವಿದ್ಯಮಾನಗಳಲ್ಲಿ, ತಪ್ಪೊಂದು ಅಂಗೀಕರಿಸಲ್ಪಟ್ಟಾಗಲೂ, ಆರೋಪವನ್ನು ಬೇರೆ ಯಾರಾದರೊಬ್ಬರ ಮೇಲೆ ಅಥವಾ ತನಗೆ ನಿಯಂತ್ರಣವಿರಲಿಲ್ಲವೆಂದು ತಪ್ಪಿತಸ್ಥನು ಪ್ರತಿಪಾದಿಸುವ, ಕಡಮೆ ಪ್ರಾಧಾನ್ಯವುಳ್ಳ ಪರಿಸ್ಥಿತಿಗಳ ಮೇಲೆ ಹೊರಿಸಲು ಸಕಲ ಪ್ರಯತ್ನವು ಮಾಡಲಾಗುತ್ತದೆ.
ಕೆಲವರು ತಮ್ಮ ವಂಶವಾಹಿಗಳ ಕಡೆಗೂ ಆಪಾದನೆಯ ಬೆರಳನ್ನು ತೋರಿಸುತ್ತಾರೆ! ಆದರೆ ಇದು ಸಂಭವನೀಯವೊ? ಎಕ್ಸ್‌ಪ್ಲೋಡಿಂಗ್ ದ ಜೀನ್ ಮಿತ್ ಎಂಬ ಪುಸ್ತಕವು, ವಂಶವಾಹಿ ಸಂಶೋಧನೆಯ ಕೆಲವು ವಿಷಯಾಂಶಗಳ ಗುರಿಗಳು ಮತ್ತು ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತದೆ. ಆಸ್ಟ್ರೇಲಿಯನ್ ಪತ್ರಿಕೋದ್ಯೋಗಿ, ಬಿಲ್ ಡೀನ್, ಪುಸ್ತಕದ ತನ್ನ ವಿಮರ್ಶೆಯಲ್ಲಿ, ಈ ಆಲೋಚನಾಶೀಲ ತೀರ್ಮಾನವನ್ನು ಮಾಡುತ್ತಾನೆ: “ತಮ್ಮ ಕ್ರಿಯೆಗಳಿಗೆ ಯಾರೂ ಹೊಣೆಗಾರರಾಗಿ ತೀರ್ಮಾನಿಸಲ್ಪಡಬಾರದೆಂಬ ತಮ್ಮ ತತ್ವಜ್ಞಾನವನ್ನು ಸಮರ್ಥಿಸಲು, ತಾವು ಬಹುಮಟ್ಟಿಗೆ ನಿಶ್ಚಿತವಾದ ಸಾಕ್ಷ್ಯವನ್ನು ಕಂಡುಕೊಂಡಿದ್ದೇವೆಂದು ಸಾಮಾಜಿಕ ನಿಯಂತ್ರಣವಾದಿಗಳು ಇತ್ತೀಚೆಗೆ ನಂಬಲು ತೊಡಗಿರುವಂತೆ ತೋರುತ್ತದೆ: ‘ಆಕೆಯ ಕೊರಳು ಕೊಯ್ಯುವುದನ್ನು ಅವನಿಂದ ತಡೆಯಲು ಸಾಧ್ಯವಿರಲಿಲ್ಲ ನ್ಯಾಯಮೂರ್ತಿಗಳೇ—ಅದು ಅವನ ವಂಶವಾಹಿಗಳಲ್ಲಿದೆ.’”
ವಾಸ್ತವವಾಗಿ ಒಂದು ಹೊಸ ಪ್ರವೃತ್ತಿಯಲ್ಲ
ಈ ಸಂತತಿಯು, ಯಾವುದನ್ನು ಒಬ್ಬ ಬರಹಗಾರನು “ನಾನಲ್ಲ” ಸಂತತಿ ಎಂಬುದಾಗಿ ಕರೆಯುತ್ತಾನೊ, ಅಂತಹ ಒಂದು ಸಂತತಿಯಾಗಿ ತ್ವರಿತಗತಿಯಲ್ಲಿ ವಿಕಸಿಸುತ್ತಿರುವುದರೊಂದಿಗೆ, ಈ ಪ್ರವೃತ್ತಿಯು ಹೆಚ್ಚಾಗುತ್ತಿರುವಂತೆ ತೋರಬಹುದು. ಹಾಗಿದ್ದರೂ, ದಾಖಲಿಸಲ್ಪಟ್ಟ ಇತಿಹಾಸವು ಪ್ರಕಟಿಸುವುದೇನೆಂದರೆ, “ನಿಜವಾಗಿಯೂ ತಪ್ಪಿಗೆ ನಾನು ಜವಾಬ್ದಾರನಲ್ಲ” ಎಂಬ ನೆಪದೊಂದಿಗೆ ಆರೋಪವನ್ನು ಇತರರ ಮೇಲೆ ಹೊರಿಸುವುದು, ಮನುಷ್ಯನ ಆರಂಭದಿಂದಲೂ ಅಸ್ತಿತ್ವದಲ್ಲಿದೆ. ತಮ್ಮ ಪ್ರಥಮ ಪಾಪ—ದೇವರು ನಿಷೇಧಿಸಿದ್ದ ಹಣ್ಣನ್ನು ತಿನ್ನುವುದು—ದ ನಂತರ, ಆದಾಮಹವ್ವರ ಪ್ರತಿಕ್ರಿಯೆಯು ಆರೋಪ ಹೊರಿಸುವಿಕೆಯ ಅತ್ಯುತ್ಕೃಷ್ಟ ಉದಾಹರಣೆಯಾಗಿತ್ತು. ದೇವರು ಪ್ರಥಮವಾಗಿ ಮಾತಾಡಿದುದರೊಂದಿಗೆ, ಆದಿಕಾಂಡದ ವೃತ್ತಾಂತವು ನಡೆದ ಸಂಭಾಷಣೆಯನ್ನು ಹೀಗೆ ವರದಿಸುತ್ತದೆ: “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿಯಾ ಎಂದು ಕೇಳಲು ಆ ಮನುಷ್ಯನು—ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು. ಯೆಹೋವ ದೇವರು ಸ್ತ್ರೀಯನ್ನು—ಇದೇನು ನೀನು ಮಾಡಿದ್ದು ಎಂದು ಕೇಳಲು ಸ್ತ್ರೀಯು—ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು ಎಂದು ಉತ್ತರ ಕೊಟ್ಟಳು.”—ಆದಿಕಾಂಡ 3:11-13.
ಆ ಸಮಯದಂದಿನಿಂದ, ಮಾನವರು ನಂಬಿಕೆಯ ವಿಭಿನ್ನ ನಮೂನೆಗಳನ್ನು ಕಲ್ಪಿಸಿದ್ದಾರೆ ಮತ್ತು ತಮ್ಮ ಕ್ರಿಯೆಗಳಿಗೆ ಯಾವುದೇ ನಿಜವಾದ ಹೊಣೆಗಾರಿಕೆಯಿಂದ ತಮ್ಮನ್ನು ದೋಷಮುಕ್ತಮಾಡಲಿರುವ ವೈವಿಧ್ಯಮಯ ಹಾಗೂ ಅಸಾಧಾರಣ ನೆಪಗಳಿಗಾಗಿ ಹುಡುಕಿದ್ದಾರೆ. ಅವುಗಳಲ್ಲಿ, ಅದೃಷ್ಟದಲ್ಲಿನ ಪ್ರಾಚೀನ ನಂಬಿಕೆಯು ಗಮನಾರ್ಹವಾದದ್ದಾಗಿತ್ತು. ಕರ್ಮದಲ್ಲಿ ಪ್ರಾಮಾಣಿಕವಾಗಿ ವಿಶ್ವಾಸವಿಟ್ಟ ಒಬ್ಬ ಬೌದ್ಧಮತೀಯ ಸ್ತ್ರೀಯು ಹೇಳಿದ್ದು: “ನಾನು ಯಾವ ವಿಷಯದೊಂದಿಗೆ ಜನಿಸಿದ್ದೆನೊ, ಆದರೆ ಯಾವ ವಿಷಯವಾಗಿ ನನಗೆ ಏನೂ ಗೊತ್ತಿರಲಿಲ್ಲವೊ, ಅದಕ್ಕಾಗಿ ಕಷ್ಟಾನುಭವಿಸಬೇಕಾದದ್ದು ಅರ್ಥವಿಲ್ಲದ್ದಾಗಿತ್ತೆಂದು ನಾನು ನೆನಸಿದೆ. ಅದನ್ನು ನಾನು ನನ್ನ ವಿಧಿಯಾಗಿ ಸ್ವೀಕರಿಸಬೇಕಿತ್ತು.” ಜಾನ್ ಕ್ಯಾಲ್ವಿನ್‌ನ ಮೂಲಕ ಕಲಿಸಲ್ಪಟ್ಟ ಪೂರ್ವನಿರ್ಣಯದ ಸಿದ್ಧಾಂತದಿಂದ ಪೋಷಿಸಲ್ಪಟ್ಟು, ಅದೃಷ್ಟದಲ್ಲಿನ ನಂಬಿಕೆಯು ಕ್ರೈಸ್ತಪ್ರಪಂಚದಲ್ಲೂ ಸಾಮಾನ್ಯವಾಗಿದೆ. ನಿರ್ದಿಷ್ಟವಾದೊಂದು ಅಪಘಾತವು ದೇವರ ಚಿತ್ತವಾಗಿತ್ತೆಂದು ಪಾದ್ರಿಗಳು ಅನೇಕ ವೇಳೆ ದುಃಖಿಸುತ್ತಿರುವ ಸಂಬಂಧಿಕರಿಗೆ ಹೇಳುತ್ತಾರೆ. ಹಾಗಿದ್ದರೂ, ಸದುದ್ದೇಶವುಳ್ಳ ಕೆಲವು ಕ್ರೈಸ್ತರು ತಮ್ಮ ಜೀವಿತಗಳಲ್ಲಿ ಸಂಭವಿಸುವ ಎಲ್ಲ ತಪ್ಪಿಗೆ ಸೈತಾನನನ್ನು ದೂಷಿಸುತ್ತಾರೆ.
ಈಗ, ನ್ಯಾಯಸಮ್ಮತವಾಗಿಯೂ ಸಾಮಾಜಿಕವಾಗಿಯೂ ಅನುಮೋದಿಸಲ್ಪಟ್ಟಿರುವ ಹೊಣೆಗಾರಿಕೆಯಿಲ್ಲದ ವರ್ತನೆಯನ್ನು ನಾವು ಪ್ರತ್ಯಕ್ಷವಾಗಿ ನೋಡಲಾರಂಭಿಸುತ್ತಿದ್ದೇವೆ. ನಾವು ವ್ಯಕ್ತಿಯ ಹೆಚ್ಚುತ್ತಿರುವ ಹಕ್ಕುಗಳು ಮತ್ತು ಕಡಮೆಯಾಗುತ್ತಿರುವ ಕರ್ತವ್ಯಗಳ ಒಂದು ಯುಗದಲ್ಲಿ ಜೀವಿಸುತ್ತೇವೆ.
ಮಾನವ ವರ್ತನೆಯ ವಿಷಯದಲ್ಲಿನ ಸಂಶೋಧನೆಯು ಊಹಿತ ವೈಜ್ಞಾನಿಕ ಸಾಕ್ಷ್ಯವನ್ನು ಉತ್ಪಾದಿಸಿದೆ, ಇದು ಅನೈತಿಕತೆಯಿಂದ ಕೊಲೆಯ ವರೆಗೆ ವ್ಯಾಪಿಸುವ ವರ್ತನೆಗೆ ಮುಕ್ತ ಅವಕಾಶವನ್ನು ಕೊಡಸಾಧ್ಯವಿದೆಯೆಂದು ಕೆಲವರಿಗೆ ಅನಿಸುತ್ತದೆ. ಇದು ವ್ಯಕ್ತಿಯ ಹೊರತು ಯಾವುದಾದರೂ ವಿಷಯದ ಮೇಲೆ ಅಥವಾ ಯಾರಾದರೂ ಒಬ್ಬ ವ್ಯಕ್ತಿಯ ಮೇಲೆ ಆರೋಪವನ್ನು ಹೊರಿಸಲಿಕ್ಕಾಗಿ, ಸಮಾಜಕ್ಕಿರುವ ಆತುರಭಾವದ ಒಂದು ಪ್ರತಿಬಿಂಬವಾಗಿದೆ.
ಇಂತಹ ಪ್ರಶ್ನೆಗಳಿಗೆ ನಮಗೆ ಉತ್ತರಗಳು ಬೇಕಾಗಿವೆ: ವಿಜ್ಞಾನವು ನಿಜವಾಗಿಯೂ ಏನನ್ನು ಕಂಡುಹಿಡಿದಿದೆ? ಮಾನವ ವರ್ತನೆಯು ಕೇವಲ ನಮ್ಮ ವಂಶವಾಹಿಗಳ ಮೂಲಕ ನಿರ್ಧರಿಸಲ್ಪಡುತ್ತದೊ? ಅಥವಾ ಆಂತರಿಕ ಹಾಗೂ ಬಾಹ್ಯ—ಎರಡೂ—ಶಕ್ತಿಗಳು ನಮ್ಮ ವರ್ತನೆಯನ್ನು ನಿಯಂತ್ರಿಸುತ್ತವೊ? ಸಾಕ್ಷ್ಯವು ನಿಜವಾಗಿಯೂ ಏನನ್ನು ತೋರಿಸುತ್ತದೆ?