‘ಅದು ಕೇವಲ ತಾತ್ಕಾಲಿಕ!’ ಮೂತ್ರಜನಕಾಂಗದ ರೋಗದೊಂದಿಗೆ ನನ್ನ ಜೀವಿತ
1980ರ ಜನವರಿ ತಿಂಗಳಿನ ಆರಂಭದ ಆ ದಿನವನ್ನು ನಿನ್ನೆಯೊ ಎಂಬಂತೆ ನಾನಿನ್ನೂ ಜ್ಞಾಪಿಸಿಕೊಳ್ಳುತ್ತೇನೆ. ಅಂಗಡಿಗೆ ಹೋಗಿ ರೊಟ್ಟಿಯನ್ನು ತರುವಂತೆ ನನ್ನ ತಾಯಿ ನನಗೆ ಹೇಳಿದರು, ಆದರೆ ನಾನು ಮನೆಯಿಂದ ಹೊರಡುವಾಗಲೆ ಫೋನ್ ಕರೆಬಂತು. ಅದು ನನ್ನ ಲ್ಯಾಬ್ ಟೆಸ್ಟಿನ ಫಲಿತಾಂಶಗಳನ್ನು ನಮಗೆ ಕೊಡಲು ನನ್ನ ಡಾಕ್ಟರರ ಕರೆಯಾಗಿತ್ತು. ಥಟ್ಟನೆ ಅಮ್ಮ ಅಳತೊಡಗಿದರು. ಅಳುತ್ತಳುತ್ತಾ ಅವರು ಆ ದುರ್ವಾರ್ತೆಯನ್ನು ನನಗೆ ತಿಳಿಸಿದರು. ನನ್ನ ಮೂತ್ರಜನಕಾಂಗಗಳು ದುರ್ಬಲಗೊಳ್ಳುತ್ತಿದ್ದವು. ಒಂದು, ಹೆಚ್ಚೆಂದರೆ ಎರಡು ವರ್ಷದ ಮೂತ್ರಜನಕಾಂಗದ ಕಾರ್ಯಗತಿಯು ನನಗೆ ಉಳಿದಿತ್ತು. ಡಾಕ್ಟರರು ಹೇಳಿದ್ದು ಸರಿಯಾಗಿತ್ತು—ಒಂದು ವರ್ಷದ ಅನಂತರ ನಾನು ರಕ್ತ ಶುದ್ಧೀಕರಣ (ಡೈಆ್ಯಲಿಸಿಸ್)ದಲ್ಲಿದ್ದೆ.
ನಾನು 1961, ಮೇ 20ರಂದು, ಆರು ಮಕ್ಕಳಲ್ಲಿ ಮೊದಲನೆಯವನಾಗಿ ಜನಿಸಿದೆ. ನಾನು ಸುಮಾರು ಆರು ತಿಂಗಳಿನವನಾಗಿದ್ದಾಗ, ನನ್ನ ಡೈಆಪರ್ನಲ್ಲಿ ಮೂತ್ರದೊಂದಿಗೆ ರಕ್ತವಿದ್ದುದನ್ನು ನನ್ನ ತಾಯಿ ಗಮನಿಸಿದರು. ಸವಿಸ್ತಾರ ರೋಗ ಪರೀಕ್ಷೆಗಳ ಅನಂತರ, ನನ್ನ ಪರಿಸ್ಥಿತಿಯು ಒಂದು ಅಪೂರ್ವವಾದ ಆಜನ್ಮ ನ್ಯೂನತೆಯಾದ, ಆಲ್ಪೊರ್ಟ್ಸ್ ಸಹಲಕ್ಷಣವಾಗಿ ರೋಗನಿರ್ಣಯ ಮಾಡಲ್ಪಟ್ಟಿತು. ಕೆಲವು ಅಜ್ಞಾತ ಕಾರಣಗಳಿಂದಾಗಿ, ಈ ರೋಗವಿರುವ ಪುರುಷರು ಅನೇಕಾವರ್ತಿ ಕೆಲವು ಕಾಲಾವಧಿಯ ಬಳಿಕ ಮೂತ್ರಜನಕಾಂಗದ ವೈಫಲ್ಯವನ್ನು ಅನುಭವಿಸುತ್ತಾರೆ. ನನ್ನ ಹೆತ್ತವರಿಗೆ ಮತ್ತು ನನಗೆ ಇದು ಹೇಳಲ್ಪಡಲಿಲ್ಲವಾದುದರಿಂದ, ಮೂತ್ರಜನಕಾಂಗದ ರೋಗದ ಕುರಿತು ನಾನು ಚಿಂತಿಸಲಿಲ್ಲ.
ಬಳಿಕ 1979ರ ಬೇಸಗೆಯಲ್ಲಿ, ಬೆಳಗಾತ ನನ್ನ ಉಸಿರಿನಲ್ಲಿ ಅಮೋನಿಯದಂತಹ ವಾಸನೆಯನ್ನು ನಾನು ಗಮನಿಸಿದೆ. ನಿಜವಾಗಿಯೂ ಹೆಚ್ಚು ಗಮನವನ್ನು ನಾನದಕ್ಕೆ ಕೊಡಲಿಲ್ಲವಾದರೂ, ಬಳಿಕ ನನಗೆ ಆಯಾಸವಾಗತೊಡಗಿತು. ದೇಹಕ್ಕೇನೊ ಸ್ವಸ್ಥವಿಲ್ಲವೆಂದು ನೆನಸಿ ನಾನದನ್ನು ಅಲಕ್ಷಿಸಿದೆ. ಡಿಸೆಂಬರ್ ತಿಂಗಳಿನಲ್ಲಿ ನಾನು ನನ್ನ ವಾರ್ಷಿಕ ದೇಹಪರೀಕ್ಷೆ ಮಾಡಿಸಿದೆ, ಮತ್ತು ಜನವರಿಯಲ್ಲಿ ಈ ಮೇಲೆ ತಿಳಿಸಲಾದ ಟೆಲಿಫೋನ್ ಕರೆಯು ನನಗೆ ದೊರಕಿತು.
ಕಾರನ್ನು ನಡೆಸುತ್ತಾ ಅಂಗಡಿಗೆ ಹೋದಾಗ—ಎಷ್ಟೆಂದರೂ ನನ್ನ ತಾಯಿಗೆ ಇನ್ನೂ ರೊಟ್ಟಿಯ ಅಗತ್ಯವಿತ್ತು—ನನಗೆ ಧಕ್ಕೆತಗಲಿದಂತಾಗಿತ್ತು. ನನಗಿದು ಸಂಭವಿಸುತ್ತಿತ್ತೆಂದು ನನಗೆ ನಂಬಲಾಗಲಿಲ್ಲ. “ನಾನು ಕೇವಲ 18 ವಯಸ್ಸಿನವನು!” ಎಂದು ಅತ್ತೆ ನಾನು. ಕಾರನ್ನು ಪಕ್ಕಕ್ಕೆ ಸರಿಸಿ, ನಿಲ್ಲಿಸಿದೆ. ಸಂಭವಿಸುತ್ತಲಿದ್ದ ಸಂಗತಿಯ ವೈಪರೀತ್ಯವು ನನ್ನ ಮನಸ್ಸಿಗೆ ಹೊಳೆಯತೊಡಗಿತು.
“ನನಗೇ ಏಕೆ?”
ನಾನು ಅಲ್ಲಿ ದಾರಿಯ ಪಕ್ಕದಲ್ಲಿ ಕುಳಿತುಕೊಂಡಂತೆ, ನಾನು ಅಳತೊಡಗಿದೆ. ಅಶ್ರುಗಳು ಇಳಿಯುತ್ತಾ ನನ್ನ ಮೋರೆಯನ್ನು ತೋಯಿಸಿದಾಗ ನಾನು ಒದರಿದ್ದು: “ಇದು ನನಗೇ ಏಕೆ ದೇವರೇ? ನನಗೇ ಏಕೆ? ದಯವಿಟ್ಟು ನನ್ನ ಮೂತ್ರಜನಕಾಂಗಗಳು ಕೆಲಸನಿಲ್ಲಿಸುವಂತೆ ಬಿಡಬೇಡ!”
1980ರ ತಿಂಗಳುಗಳು ದಾಟಿಹೋದಂತೆ, ನನ್ನ ಕಾಯಿಲೆ ಹೆಚ್ಚು ಕೆಡುತ್ತ, ಕೆಡುತ್ತ ಹೋಯಿತು; ಮತ್ತು ನನ್ನ ಪ್ರಾರ್ಥನೆಗಳು ಇನ್ನಷ್ಟು ತೀವ್ರವೂ ಅಶ್ರುಭರಿತವೂ ಆದವು. ಆ ವರ್ಷದ ಅಂತ್ಯದಷ್ಟಕ್ಕೆ ನನಗೆ ಮೂರ್ಛೆತಪ್ಪುತ್ತಾ ಆಗಾಗ ವಾಂತಿಯಾಗತೊಡಗಿತ್ತು, ಯಾಕಂದರೆ ನನ್ನ ರಕ್ತದಲ್ಲಿ ಶೇಖರವಾದ ವಿಷಕಾರಿ ಕಲ್ಮಶವನ್ನು ನನ್ನ ನ್ಯೂನ ಮೂತ್ರಜನಕಾಂಗಗಳು ಸೋಸುತ್ತಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ನಾನು ಕೆಲವು ಮಿತ್ರರೊಂದಿಗೆ ಒಂದು ಕೊನೆಯ ಶಿಬಿರ ಲಘುಪ್ರವಾಸಕ್ಕೆ ಹೋದೆ. ಆದರೆ ನಾನೆಷ್ಟು ಅಸ್ವಸ್ಥನಿದ್ದೆನೆಂದರೆ ಚಳಿಯಿಂದ ನಡುಗುತ್ತಾ, ಇಡೀ ವಾರಾಂತ್ಯವನ್ನು ಕಾರಿನಲ್ಲಿ ಕುಳಿತೇ ಕಳೆದೆ. ನಾನು ಏನು ಮಾಡಿದರೂ ನನ್ನ ಮೈಬೆಚ್ಚಗಾಗಲಿಲ್ಲ. ಕೊನೆಗೆ, 1981ರ ಜನವರಿಯಲ್ಲಿ ಅನಿವಾರ್ಯವು ಸಂಭವಿಸಿತು—ನನ್ನ ಮೂತ್ರಜನಕಾಂಗಗಳು ಪೂರ್ತಿ ಕಾರ್ಯನಿಲ್ಲಿಸಿದವು. ಡೈಆ್ಯಲಿಸಿಸ್ ಆರಂಭಿಸದಿದ್ದಲ್ಲಿ ನಾನು ಸಾಯಲಿದ್ದೆ.
ಡೈಆ್ಯಲಿಸಿಸ್ನಲ್ಲಿ ಜೀವನ
ಕೆಲವು ತಿಂಗಳುಗಳ ಮುಂಚೆ ನಮ್ಮ ಕುಟುಂಬ ಡಾಕ್ಟರರು, ಪಿಚಕಾರಿಯನ್ನೊಳಗೊಳ್ಳದ ಮತ್ತು ದೇಹದ ಒಳಗಿಂದ ರಕ್ತವನ್ನು ಶುದ್ಧೀಕರಿಸುವ ಒಂದು ಹೊಸ ರೀತಿಯ ಡೈಆ್ಯಲಿಸಿಸ್ನ ಕುರಿತು ನನಗೆ ತಿಳಿಸಿದ್ದರು. ಈ ಕಾರ್ಯವಿಧಾನವು ಪೆರಿಟೊನೀಯಲ್ ಡೈಆ್ಯಲಿಸಿಸ್ (ಪಿಡಿ) ಎಂದು ಜ್ಞಾತವಾಗಿದೆ. ಇದು ನನಗೆ ಕೂಡಲೆ ಹಿಡಿಸಿತು, ಯಾಕಂದರೆ ಪಿಚಕಾರಿಗಳಿಗೆ ಬಲವಾದ ಹೇವರಿಕೆ ನನಗಿದೆ. ಈ ಕಾರ್ಯಗತಿಯು ಕೆಲವು ಡೈಆ್ಯಲಿಸಿಸ್ ರೋಗಿಗಳಿಗೆ ಬದುಕಬಲ್ಲ ಬದಲಿಯಾಗಿ ಪರಿಣಮಿಸಿತ್ತು.
ಆಶ್ಚರ್ಯಕರವಾಗಿ, ನಮ್ಮ ಶರೀರದಲ್ಲಿ ಕೃತಕ ಮೂತ್ರಜನಕಾಂಗದೋಪಾದಿ ಕಾರ್ಯನಡಿಸಬಲ್ಲ ಒಂದು ಒಳಚರ್ಮವಿದೆ. ಪಚನಾಂಗಗಳ ಸುತ್ತಲೂ ಒಂದು ಕೋಶವನ್ನು ರೂಪಿಸುವ, ನುಣುಪಾದ ಪಾರದರ್ಶಕ ಒಳಚರ್ಮವಾದ ಈ ಪೆರಿಟೊನೀಯಮನ್ನು, ರಕ್ತಶೋಧಕ (ಫಿಲ್ಟರ್)ವಾಗಿ ಉಪಯೋಗಿಸಬಹುದು. ಈ ಒಳಚರ್ಮದ ಒಳಭಾಗದ ಸುತ್ತ ಪೆರಿಟೊನೀಯಲ್ ಪೊಳ್ಳು ಎಂದು ಕರೆಯಲ್ಪಡುವ ಒಂದು ಎಡೆಯಿದೆ. ಪೆರಿಟೊನೀಯಮ್ ಒಂದು ಗಾಳಿಹೋಗಿರುವ ಚೀಲದಂತಿದ್ದು, ಕಿಬ್ಬೊಟ್ಟೆಯ ಅಂಗಗಳ ನಡುವೆ ಸೇರಿಸಲ್ಪಟ್ಟಿರುತ್ತದೆ.
ಪಿಡಿ ಹೀಗೆ ಕಾರ್ಯನಡಿಸುತ್ತದೆ: ಶಸ್ತ್ರಕ್ರಿಯೆಯಿಂದ ಕಿಬ್ಬೊಟ್ಟೆಯೊಳಗೆ ಸೇರಿಸಲ್ಪಡುವ ಒಂದು ಮೂತ್ರಾಪಕರ್ಷಕ (ನಳಿಗೆ)ದ ಮೂಲಕ, ಈ ಪೆರಿಟೊನೀಯಲ್ ಪೊಳ್ಳಿನೊಳಗೆ ಒಂದು ವಿಶಿಷ್ಟ ಡೈಆ್ಯಲಿಸಿಸ್ ದ್ರವವನ್ನು ಇಡಲಾಗುತ್ತದೆ. ಈ ದ್ರವದಲ್ಲಿ ಡೆಕ್ಸ್ಟ್ರಾಸ್ ಇದೆ, ಮತ್ತು ಸೂಕ್ಷ್ಮಾಭಿಸರಣ (ಆಸ್ಮೋಸಿಸ್)ದ ಸಹಾಯದಿಂದ, ಪೆರಿಟೊನೀಯಮ್ನ ಮೂಲಕ ರಕ್ತದಲ್ಲಿರುವ ಕಲ್ಮಶ ಉತ್ಪನ್ನಗಳನ್ನು ಮತ್ತು ಹೆಚ್ಚಿನ ದ್ರವಗಳನ್ನು ಪೆರಿಟೊನೀಯಲ್ ಪೊಳ್ಳಿನೊಳಗಿರುವ ಡೈಆ್ಯಲಿಸಿಸ್ ದ್ರವದೊಳಕ್ಕೆ ಸೆಳೆಯಲಾಗುತ್ತದೆ. ಸರ್ವಸಾಮಾನ್ಯವಾಗಿ ಮೂತ್ರವಾಗಿ ತೆಗೆದುಹಾಕಲ್ಪಡುತ್ತಿದ್ದ ಕಲ್ಮಶಗಳು ಈಗ ಡೈಆ್ಯಲಿಸಿಸ್ ದ್ರವದಲ್ಲಿ ಇರುತ್ತವೆ. ದಿನಕ್ಕೆ ನಾಲ್ಕು ಸಾರಿ ವಿನಿಮಯವನ್ನು ನೀವು ನಡಿಸಬೇಕು—ಬಳಸಿದ ದ್ರವವನ್ನು ಬಸಿದುತೆಗೆದು, ಬಳಿಕ ಪೊಳ್ಳನ್ನು ಹೊಸ ದ್ರವದಿಂದ ತುಂಬಿಸಬೇಕು. ಈ ವಿನಿಮಯವನ್ನು ಮುಗಿಸಲು ಸುಮಾರು 45 ನಿಮಿಷಗಳು ಬೇಕಾಗುತ್ತವೆ. ಇದು ಹೆಚ್ಚುಕಡಿಮೆ ಎಣ್ಣೆ ಬದಲಾಯಿಸುವುದಕ್ಕೆ ಸಮಾನವಾಗಿದೆ—ಹಳೆತನ್ನು ಬಸಿದುತೆಗೆದು, ಹೊಸತನ್ನು ಭರ್ತಿಮಾಡುವುದು, ನಿಮ್ಮ ಜೀವವನ್ನು ಲಂಬಿಸಿ, ದೇಹವನ್ನು ಸುಗಮವಾಗಿ ಮುಂದೆಸಾಗಿಸಲಿಕ್ಕಾಗಿ!
1981ರ ಜನವರಿ ತಿಂಗಳಿನ ಆರಂಭದಲ್ಲಿ ನನ್ನ ಕೆಳಗಣ ಬಲಪಾರ್ಶ್ವದಲ್ಲಿ ಆವಶ್ಯಕ ಮೂತ್ರಾಪಕರ್ಷಕ ನಳಿಗೆಯು ಒಳಸೇರಿಸಲ್ಪಟ್ಟಿತು. ಅನಂತರ ಅದರ ಕಾರ್ಯವಿಧಾನದ ಕುರಿತ ಎರಡು ವಾರಗಳ ತರಬೇತಿಯನ್ನು ನಾನು ಪಡೆದೆ. ನಿರ್ವಿಷೀಕೃತ (ಏಸೆಪ್ಟಿಕ್) ತಂತ್ರವನ್ನು ಬಳಸಿ ಕಾರ್ಯವಿಧಾನವನ್ನು ಸರಿಯಾಗಿ ನಡೆಸದಿದ್ದಲ್ಲಿ, ವ್ಯಕ್ತಿಯೊಬ್ಬನು ಪೆರಿಟೊನೀಯಮ್ನ ಗಂಭೀರ ಹಾಗೂ ತೀವ್ರ ಮಾರಕ ಸೋಂಕಾದ ಪೆರಿಟೊನೈಟಿಸನ್ನು ವಿಕಸಿಸಿಕೊಳ್ಳಬಲ್ಲನು.
1981ರ ಬೇಸಿಗೆಯಲ್ಲಿ, ನಾನು ಪಿಡಿ ಆರಂಭಿಸಿದ ಸುಮಾರು ಆರು ತಿಂಗಳುಗಳ ಬಳಿಕ, ನನ್ನ ಜೀವನದ ಮೇಲೆ ಒಂದು ಪ್ರಚಂಡವಾದ ಪ್ರಭಾವವನ್ನು ಹಾಕಲಿದ್ದ ಇನ್ನೊಂದು ಫೋನ್ ಕರೆಯನ್ನು ನನ್ನ ಹೆತ್ತವರು ಪಡೆದರು.
ಹೊಸ ಮೂತ್ರಜನಕಾಂಗಕ್ಕಾಗಿ ಷಾಪಿಂಗ್
ಜನವರಿ 1981ರಿಂದ ನಾನು, ಮೂತ್ರಜನಕಾಂಗದ ಸ್ಥಳಾಂತರ (ಟ್ರ್ಯಾನ್ಸ್ಪ್ಲಾಂಟ್)ಕ್ಕಾಗಿ ರಾಷ್ಟ್ರೀಯ ಪಟ್ಟಿಯಲ್ಲಿದ್ದೆ.a ಸ್ಥಳಾಂತರದಿಂದಾಗಿ ನನ್ನ ಜೀವನವು ಅದು ಹಿಂದಿದ್ದ ವಿಧಾನಕ್ಕೆ ಮರಳುವುದೆಂದು ನಾನು ನಿರೀಕ್ಷಿಸಿದೆ. ನನ್ನ ಮುಂದೇನು ಕಾದಿತ್ತೆಂದು ನನಗೆ ಕೊಂಚವೂ ತಿಳಿದಿರಲಿಲ್ಲ!
ಆಗಸ್ಟ್ ತಿಂಗಳಿನ ನಡುಭಾಗದಲ್ಲಿ ಬಂದ ಒಂದು ಫೋನ್ ಕರೆಯು, ದಾನಿಯೊಬ್ಬನು ಸಿಕ್ಕಿದ್ದಾನೆಂದು ನಮಗೆ ತಿಳಿಸಿತು. ರಾತ್ರಿ ಸುಮಾರು 10 ಗಂಟೆಗೆ ನಾನು ಆಸ್ಪತ್ರೆ ಸೇರಿದಾಗ, ಸ್ಥಳಾಂತರಕ್ಕಾಗಿ ನಾನು ತಕ್ಕದ್ದಾಗಿ ಹೊಂದಿಕೆಯಾಗುವೆನೊ ಎಂದು ನಿಶ್ಚಯಿಸಲಿಕ್ಕಾಗಿ, ರಕ್ತದ ಗುಣಪರೀಕ್ಷೆಗಳು ಮಾಡಲ್ಪಟ್ಟವು. ಆ ದಿನದಾರಂಭದಲ್ಲಿ ಅಪಘಾತದಲ್ಲಿ ಸತ್ತ ಒಬ್ಬ ಯೌವನಸ್ಥನ ಕುಟುಂಬವು ಮೂತ್ರಜನಕಾಂಗವನ್ನು ಲಭ್ಯಗೊಳಿಸಿತ್ತು.
ಶಸ್ತ್ರಚಿಕಿತ್ಸೆಯನ್ನು ಮಾರಣೆಯ ದಿನ ಬೆಳಿಗ್ಗೆ ಮಾಡುವ ಏರ್ಪಾಡುಮಾಡಲಾಗಿತ್ತು. ಶಸ್ತ್ರಕ್ರಿಯೆಯನ್ನು ನಡಿಸುವ ಮೊದಲು ಒಂದು ದೊಡ್ಡ ವಿವಾದಾಂಶವನ್ನು ನಿರ್ವಹಿಸಲಿಕ್ಕಿತ್ತು. ನಾನು ಒಬ್ಬ ಯೆಹೋವನ ಸಾಕ್ಷಿಯಾಗಿರುವುದರಿಂದ, ರಕ್ತಪೂರಣವನ್ನು ತೆಗೆದುಕೊಳ್ಳಲು ನನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು ನನ್ನನ್ನು ಅನುಮತಿಸುವುದಿಲ್ಲ. (ಅ. ಕೃತ್ಯಗಳು 15:28, 29) ಆ ಮೊದಲನೆಯ ರಾತ್ರಿ ಅರಿವಳಿಕೆಯ ಚಿಕಿತ್ಸಕನು ನನ್ನನ್ನು ನೋಡಲು ಬಂದನು. ಶಸ್ತ್ರಕ್ರಿಯೆಯ ಕೋಣೆಯಲ್ಲಿ ರಕ್ತವು ಲಭ್ಯವಿರುವುದಕ್ಕೆ ನಾನು ಒಪ್ಪಿಗೆ ಕೊಡುವಂತೆ ಅವನು ಒತ್ತಾಯಿಸಿದನು, ಒಂದುವೇಳೆ ಬೇಕಾದಲ್ಲಿ. ನಾನು ಬೇಡವೆಂದೆ.
“ಏನಾದರೂ ಸಂಭವಿಸುವುದಾದರೆ ನಾನೇನು ಮಾಡಿಯೇನು? ನಿನ್ನನ್ನು ಸಾಯುವಂತೆ ಬಿಡಲೊ?” ಎಂದು ಅವನು ಕೇಳಿದನು.
“ಬೇರೇನು ಮಾಡಬೇಕಾದರೂ ಮಾಡಿರಿ, ಆದರೆ ಏನೇ ಆಗಲಿ, ರಕ್ತವು ನನಗೆ ಕೊಡಲ್ಪಡಬಾರದು.”
ಅವನು ಹೊರಟುಹೋದ ನಂತರ, ಶಸ್ತ್ರಚಿಕಿತ್ಸಕರು ಒಳಗೆ ಬಂದರು. ಇದೇ ಪ್ರಶ್ನೆಯನ್ನು ಅವರೊಂದಿಗೂ ನಾನು ಚರ್ಚಿಸಿದೆ. ನನ್ನ ಹೆಚ್ಚಿನ ಉಪಶಮನಕ್ಕೆ ಅವರು ರಕ್ತರಹಿತ ಶಸ್ತ್ರಕ್ರಿಯೆಗೆ ಒಪ್ಪಿದರು.
ಮೂರೂವರೆ ತಾಸಿನ ಶಸ್ತ್ರಕ್ರಿಯೆಯು ಸುಗಮವಾಗಿ ಸಾಗಿತು. ನಾನು ತೀರ ಕೊಂಚ ರಕ್ತವನ್ನು ಕಳೆದುಕೊಂಡೆನೆಂದು ಶಸ್ತ್ರಚಿಕಿತ್ಸಕನು ಹೇಳಿದನು. ಗುಣಹೊಂದುವ ಕೋಣೆಯಲ್ಲಿ ನಾನು ಎಚ್ಚೆತ್ತಾಗ, ಒಡನೆ ಮೂರು ವಿಷಯಗಳನ್ನು ಗ್ರಹಿಸಿಕೊಂಡೆ—ಮೊದಲು ಹಸಿವು ಮತ್ತು ಬಾಯಾರಿಕೆ ಮತ್ತು ನೋವು! ಆದರೆ ಎಳೆಗೆಂಪು-ಹಳದಿ ಬಣ್ಣದ ದ್ರವವು ನೆಲದ ಮೇಲಿನ ಚೀಲವೊಂದನ್ನು ತುಂಬುವುದನ್ನು ನಾನು ಕಂಡಾಗ, ಅವೆಲ್ಲವೂ ಹಿನ್ನೆಲೆಗೆ ಮಾಯವಾದವು. ಅದು ನನ್ನ ಹೊಸ ಮೂತ್ರಜನಕಾಂಗದಿಂದ ಬಂದ ಮೂತ್ರವಾಗಿತ್ತು. ಕೊನೆಗೂ ನಾನು ಮೂತ್ರವನ್ನು ವಿಸರ್ಜಿಸುತ್ತಿದ್ದೆ! ಮೂತ್ರಕೋಶದಿಂದ ಮೂತ್ರಾಪಕರ್ಷಕ ನಳಿಗೆಯು ತೆಗೆಯಲ್ಪಟ್ಟು ನಾನು ಎಲ್ಲರಂತೆ ಮೂತ್ರಮಾಡಲು ಶಕ್ತನಾದಾಗ, ನಾನು ಅತ್ಯಾನಂದ ಪಟ್ಟೆ.
ಆದರೆ ನನ್ನ ಆನಂದವಾದರೊ ಕ್ಷಣಿಕವಾಗಿತ್ತು. ಎರಡು ದಿನಗಳ ಬಳಿಕ ಹತಾಶೆಗೊಳಿಸುವ ವಾರ್ತೆ ನನಗೆ ಸಿಕ್ಕಿತು—ನನ್ನ ಹೊಸ ಮೂತ್ರಜನಕಾಂಗವು ಕೆಲಸಮಾಡುತ್ತಿರಲಿಲ್ಲ. ಹೊಸ ಮೂತ್ರಜನಕಾಂಗಕ್ಕೆ ಕೆಲಸಮಾಡಲು ಅದು ಸಮಯವನ್ನು ಕೊಡುವುದೆಂಬ ಆಶೆಯಲ್ಲಿ, ನಾನು ಪುನಃ ಡೈಆ್ಯಲಿಸಿಸ್ ಆರಂಭಿಸಬೇಕಾಗಿತ್ತು. ಹಲವಾರು ವಾರಗಳ ತನಕ ನಾನು ಡೈಆ್ಯಲಿಸಿಸ್ ಮುಂದುವರಿಸಿದೆ.
ಇದೀಗ ಸೆಪ್ಟಂಬರ್ ತಿಂಗಳ ನಡುಭಾಗ, ನಾನು ಆಸ್ಪತ್ರೆಯಲ್ಲಿದ್ದು ಸುಮಾರು ಒಂದು ತಿಂಗಳು ದಾಟಿತ್ತು. ಆಸ್ಪತ್ರೆಯು ಮನೆಯಿಂದ 80 ಕಿಲೊಮೀಟರ್ ದೂರವಿತ್ತಾದುದರಿಂದ, ನನ್ನ ಕ್ರೈಸ್ತ ಸಹೋದರ ಸಹೋದರಿಯರಿಗೆ ನನ್ನನ್ನು ಭೇಟಿಮಾಡುವುದು ಕಷ್ಟಕರವಾಗಿತ್ತು. ನಾನು ನನ್ನ ಸಭಾ ಅನುಪಸ್ಥಿತಿಗಾಗಿ ತುಂಬ ವಿಷಾದಿಸಿದೆ. ಸಭಾ ಕೂಟಗಳ ಟೇಪ್ ರೆಕಾರ್ಡಿಂಗ್ಗಳು ನನಗೆ ದೊರೆತರೂ, ನಾನದಕ್ಕೆ ಕಿವಿಗೊಟ್ಟಾಗ ನನ್ನ ಕಂಠಕಟ್ಟಿತು. ಪ್ರಾರ್ಥನೆಯಲ್ಲಿ ಯೆಹೋವ ದೇವರೊಂದಿಗೆ ಮಾತಾಡುತ್ತಾ ಅನೇಕ ಏಕಾಂತ ತಾಸುಗಳನ್ನು ನಾನು ಕಳೆದೆ, ಸಹಿಸಿಕೊಳ್ಳಲು ಬೇಕಾದ ಬಲಕ್ಕಾಗಿ ಬೇಡಿಕೊಂಡೆ. ಆಗ ನನಗೆ ತಿಳಿದಿರಲಿಲ್ಲವಾದರೂ, ಇನ್ನೂ ಹೆಚ್ಚು ಕಷ್ಟದ ಪರೀಕ್ಷೆಗಳು ಮುಂದಿದ್ದವು.
ಸಾಯಲು ಹೆದರುವುದಿಲ್ಲ
ಮೂತ್ರಜನಕಾಂಗದ ಸ್ಥಳಾಂತರದಂದಿನಿಂದ ಆರು ದೀರ್ಘ ವಾರಗಳು ಕಳೆದಿದ್ದವು, ಮತ್ತು ಇಷ್ಟರೊಳಗೆ ವೇದನಾಮಯವಾಗಿ ಸ್ಪಷ್ಟವಾಗಿತ್ತೇನಂದರೆ ನನ್ನ ದೇಹವು ಮೂತ್ರಜನಕಾಂಗವನ್ನು ನಿರಾಕರಿಸಿತ್ತು. ನನ್ನ ಕಿಬ್ಬೊಟ್ಟೆಯು ವಿಕಾರವಾಗಿ ಊದಿತ್ತು; ನಿರಾಕರಿಸಲ್ಪಟ್ಟ ಮೂತ್ರಜನಕಾಂಗವನ್ನು ಹೊರತೆಗೆಯಲೇಬೇಕೆಂದು ನನ್ನ ಡಾಕ್ಟರರು ಹೇಳಿದರು. ಪುನಃ ರಕ್ತದ ವಿವಾದಾಂಶವು ಮೇಲೆಬಂತು. ಈ ಬಾರಿ ಶಸ್ತ್ರಚಿಕಿತ್ಸೆಯು ಮತ್ತೂ ಹೆಚ್ಚು ಗಂಭೀರವಾದುದೆಂದು ಡಾಕ್ಟರರು ವಿವರಿಸಿದರು, ಯಾಕಂದರೆ ನನ್ನ ರಕ್ತದೆಣಿಕೆಯು ತುಂಬಾ ಇಳಿದಿತ್ತು. ನಾನು ತಾಳ್ಮೆಯಿಂದ ಆದರೂ ದೃಢವಾಗಿ ನನ್ನ ಬೈಬಲಾಧಾರಿತ ನಿಲುವನ್ನು ವಿವರಿಸಿದೆ, ಮತ್ತು ಕೊನೆಗೆ ರಕ್ತರಹಿತ ಶಸ್ತ್ರಚಿಕಿತ್ಸೆಮಾಡಲು ಅವರು ಒಪ್ಪಿಕೊಂಡರು.b
ಶಸ್ತ್ರಚಿಕಿತ್ಸೆಯ ಅನಂತರ, ವಿಷಯಗಳು ಬಹು ಬೇಗನೆ ತಳಕ್ಕಿಳಿದವು. ನಾನು ಗುಣಹೊಂದುವ ಕೋಣೆಯಲ್ಲಿರುವಾಗಲೆ, ನನ್ನ ಶ್ವಾಸಕೋಶಗಳು ದ್ರವದಿಂದ ತುಂಬತೊಡಗಿದವು. ಇಡಿ ರಾತ್ರಿಯ ತೀವ್ರ ಡೈಆ್ಯಲಿಸಿಸ್ನ ಬಳಿಕ, ನನಗೆ ತುಸು ಆರಾಮವಾಯಿತು. ಆದರೆ ಎರಡು ದಿನಗಳ ನಂತರ ನನ್ನ ಶ್ವಾಸಕೋಶಗಳು ಪುನಃ ತುಂಬಿಕೊಂಡವು. ಇನ್ನೊಂದು ರಾತ್ರಿಯ ಡೈಆ್ಯಲಿಸಿಸ್ ಹಿಂಬಾಲಿಸಿತು. ಆ ರಾತ್ರಿಯ ಕುರಿತು ನನಗೆ ಹೆಚ್ಚು ನೆನಪಿಲ್ಲವಾದರೂ, ನನ್ನ ತಂದೆ ನನ್ನ ಪಕ್ಕದಲ್ಲಿ ನಿಂತು ಹೀಗಂದದ್ದು ನನಗೆ ನೆನಪಿದೆ: “ಇನ್ನೊಂದು ಉಸಿರು ತೆಗೆ, ಲೀ! ಬಾ, ನೀನು ಅದನ್ನು ಮಾಡಬಲ್ಲೆ! ಇನ್ನೊಂದು ಉಸಿರು ತೆಗೆ. ಉತ್ತಮ, ಉಸಿರಾಡುತ್ತಾ ಇರು!” ನಾನು ಬಹಳ ದಣಿದಿದ್ದೆ, ಎಂದೂ ಇಷ್ಟು ದಣಿದಿರಲಿಲ್ಲ. ನಾನದನ್ನು ಕೇವಲ ಮುಗಿಸಿಬಿಟ್ಟು, ದೇವರ ಹೊಸ ಲೋಕದಲ್ಲಿ ಎದ್ದೇಳಲು ಬಯಸಿದೆ. ಸಾಯಲು ನಾನು ಹೆದರಿರಲಿಲ್ಲ.—ಪ್ರಕಟನೆ 21:3, 4.
ಮರುದಿನ ಬೆಳಗ್ಗೆ ನನ್ನ ಸ್ಥಿತಿಯು ಚಿಂತಾಜನಕವಾಗಿತ್ತು. ನನ್ನ ಹಿಮ್ಯಾಟೊಕ್ರಿಟ್, ಪರಿಚಲಿಸುವ ಕೆಂಪು ರಕ್ತ ಕಣಗಳ ಅಳತೆಯು, 7.3ಕ್ಕೆ ಇಳಿದಿತ್ತು, ಅದರ ಸರ್ವಸಾಮಾನ್ಯ ಅಳತೆ 40ಕ್ಕಿಂತಲೂ ಹೆಚ್ಚು! ಡಾಕ್ಟರರು ನನ್ನ ಪರಿಸ್ಥಿತಿಯ ಕುರಿತು ಆಶಾವಾದಿಗಳಾಗಿರಲಿಲ್ಲ. ನಾನು ರಕ್ತಪೂರಣವನ್ನು ತೆಗೆದುಕೊಳ್ಳುವಂತೆ ಅವರು ಸತತವಾಗಿ ಪ್ರಯತ್ನಿಸಿದರು, ನನ್ನ ವಾಸಿಯಾಗುವಿಕೆಗೆ ಅದು ಆವಶ್ಯಕವಾಗಿತ್ತೆಂದರವರು.
ತುರ್ತುಚಿಕಿತ್ಸೆಯ ವಾರ್ಡಿಗೆ ನನ್ನನ್ನು ಸಾಗಿಸಲಾಯಿತು, ಆಗ ನನ್ನ ಹಿಮ್ಯಾಟೊಕ್ರಿಟ್ 6.9ಕ್ಕೆ ಇಳಿಯಿತು. ಆದರೆ ನನ್ನ ತಾಯಿಯ ಸಹಾಯದಿಂದಾಗಿ ನನ್ನ ಹಿಮ್ಯಾಟೊಕ್ರಿಟ್ ನಿಧಾನವಾಗಿ ಏರಲಾರಂಭಿಸಿತು. ಮನೆಯಲ್ಲಿದ್ದ ಬ್ಲೆಂಡರ್ನ ಮೂಲಕ, ಕಬ್ಬಿಣದ ಧಾತು ಹೆಚ್ಚಿರುವ ಆಹಾರಗಳಿಂದ ಪಾನೀಯವನ್ನು ತಯಾರಿಸಿ, ಅವರು ಅದನ್ನು ನನಗೆ ತಂದುಕೊಟ್ಟರು. ನನ್ನನ್ನು ಉತ್ತೇಜಿಸುವುದಕ್ಕಾಗಿ ಅದನ್ನು ಅವರು ನನ್ನೊಂದಿಗೆ ಕುಡಿದರು ಸಹ. ತನ್ನ ಮಕ್ಕಳಿಗಾಗಿರುವ ತಾಯಿಯ ಪ್ರೀತಿಯು ಆಶ್ಚರ್ಯಕರವೇ ಸರಿ.
ನವೆಂಬರ್ ತಿಂಗಳಿನ ಮಧ್ಯದಲ್ಲಿ ನಾನು ಆಸ್ಪತ್ರೆಯಿಂದ ಬಿಡುಗಡೆಹೊಂದಿದಾಗ, ನನ್ನ ಹಿಮ್ಯಾಟೊಕ್ರಿಟ್ 11 ಆಗಿತ್ತು. 1987ರ ಆರಂಭದಲ್ಲಿ, ರಕ್ತಪ್ರವಾಹದೊಳಗೆ ಹೊಸ ಕೆಂಪು ರಕ್ತ ಕಣಗಳನ್ನು ಕಳುಹಿಸಲಿಕ್ಕಾಗಿ, ಮೂಳೆ ಮಜ್ಜೆಯನ್ನು ಪ್ರಚೋದಿಸುವ ಕೃತ್ರಿಮ ಹಾರ್ಮೋನಾದ ಇಪಿಓ (ಇರಿತ್ರೋಪಾಯಟಿನ್) ಅನ್ನು ನಾನು ಸೇವಿಸಲಾರಂಭಿಸಿದೆ, ಮತ್ತು ಈಗ ನನ್ನ ಹಿಮ್ಯಾಟೊಕ್ರಿಟ್ ಸುಮಾರು 33 ಆಗಿದೆ.c
‘ಅದು ಕೇವಲ ತಾತ್ಕಾಲಿಕ, ಲೀ!’
ಬೇರೆ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು 1984, 1988, 1990, 1993, 1995, ಮತ್ತು 1996ರಲ್ಲಿ ನಾನು ಮಾಡಿಸಿಕೊಳ್ಳುತ್ತಾ ಹೋದೆ—ಎಲ್ಲವೂ ನನ್ನ ವಿಫಲ ಮೂತ್ರಜನಕಾಂಗಗಳ ಪರಿಣಾಮವಾಗಿಯೇ. ಮೂತ್ರಜನಕಾಂಗದ ರೋಗದೊಡನೆ ಜೀವಿಸಿದ ಈ ಅನೇಕ ವರ್ಷಗಳ ಸಮಯದಲ್ಲಿ, ನನ್ನನ್ನು ಪೋಷಿಸಲು ಸಹಾಯಮಾಡಿದ ಒಂದು ವಿಚಾರವು ಅದೇನಂದರೆ, ‘ಇದು ಕೇವಲ ತಾತ್ಕಾಲಿಕ.’ ನಮ್ಮ ಸಮಸ್ಯೆಯು—ಶಾರೀರಿಕ ಅಥವಾ ಬೇರೆ ಯಾವುದೇ ರೀತಿಯ—ಏನೇ ಇರಲಿ, ಬರುತ್ತಿರುವ ನೂತನ ಲೋಕದಲ್ಲಿ ದೇವರ ರಾಜ್ಯದ ಕೆಳಗೆ ಅವು ಸರಿಪಡಿಸಲ್ಪಡುವವು. (ಮತ್ತಾಯ 6:9, 10) ಒಂದು ಹೊಸ ಪಂಥಾಹ್ವಾನವನ್ನು ನಾನು ಎದುರಿಸಿ, ಹತಾಶೆಯನ್ನು ಅನುಭವಿಸಿದಾಗಲೆಲ್ಲ, ‘ಇದು ಕೇವಲ ತಾತ್ಕಾಲಿಕ, ಲೀ!’ ಎಂದು ನನಗೆ ನಾನೇ ಅಂದುಕೊಳ್ಳುತ್ತೇನೆ ಮತ್ತು ಅದು ವಿಷಯಗಳನ್ನು ಯಥಾದೃಷ್ಟಿಗೆ ಹಿಂದೆಹಾಕಲು ನನಗೆ ನೆರವಾಗುತ್ತದೆ.—2 ಕೊರಿಂಥ 4:17, 18.
1986ನೆಯ ಇಸವಿಯು ನನಗೆ ಅತಿ ದೊಡ್ಡ ಆಶ್ಚರ್ಯವನ್ನು ಕೊಟ್ಟಿತು—ನಾನು ವಿವಾಹವಾದೆ. ನಾನೆಂದೂ ವಿವಾಹವಾಗುವುದಿಲ್ಲವೆಂದು ನಾನು ನೆನಸಿದ್ದೆ. ‘ನನ್ನನ್ನು ಎಂದೂ ವಿವಾಹವಾಗಲು ಬಯಸುವವರಾದರೂ ಯಾರು?’ ಎಂದು ನಾನು ಭಾವಿಸಿದ್ದೆ. ಆದರೆ ಆಗ ಕಿಂಬರ್ಲಿ ಬಂದಳು. ಅವಳು ಕಂಡದ್ದು ನನ್ನ ಆಂತರ್ಯದ ಮನುಷ್ಯತ್ವವನ್ನು, ನಶಿಸಿಹೋಗುತ್ತಿರುವ ಹೊರತೋರಿಕೆಯ ವ್ಯಕ್ತಿಯನ್ನಲ್ಲ. ನನ್ನ ಪರಿಸ್ಥಿತಿಯು ಕೇವಲ ತಾತ್ಕಾಲಿಕವೆಂದು ಅವಳೂ ಕಂಡಳು.
1986, ಜೂನ್ 21ರಂದು, ಕಿಂಬರ್ಲಿ ಮತ್ತು ನಾನು, ಕ್ಯಾಲಿಫೋರ್ನಿಯದ ಪ್ಲೆಸೆಂಟನ್ನ ನಮ್ಮ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ವಿವಾಹವಾದೆವು. ನನ್ನ ರೋಗವು ಆನುವಂಶಿಕವಾಗಿರುವುದರಿಂದ, ಯಾವುದೇ ಮಕ್ಕಳನ್ನು ಹೊಂದದಿರಲು ನಾವು ನಿರ್ಣಯಿಸಿದ್ದೇವೆ. ಆದರೆ ಪ್ರಾಯಶಃ ಇದು ಕೂಡ ತಾತ್ಕಾಲಿಕ. ದೇವರ ನೂತನ ಲೋಕದಲ್ಲಿ ಅದು ಯೆಹೋವನ ಚಿತ್ತವಾಗಿರುವುದಾದರೆ, ನಾವು ಮಕ್ಕಳನ್ನು ಹೊಂದಲು ಬಯಸುವೆವು.
ನನಗೆ ಕ್ಯಾಲಿಫೋರ್ನಿಯದ ಹೈಲೆಂಡ್ ಓಕ್ಸ್ ಸಭೆಯಲ್ಲಿ ಹಿರಿಯನಾಗಿ ಕಾರ್ಯನಡಿಸುವ ಸುಯೋಗವಿದೆ, ಮತ್ತು ಕಿಂಬರ್ಲಿ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಮಾಡುತ್ತಿದ್ದಾಳೆ. 1981ರ ವಿಷಮ ಪರೀಕ್ಷೆಯು ನನ್ನ ದೇಹವನ್ನು ಧ್ವಂಸಮಾಡಿ, ನನ್ನನ್ನು ನಿತ್ರಾಣಗೊಳಿಸಿದೆ. ಅಂದಿನಿಂದ, ನನ್ನ ಸೋದರಿಯು ಸಹ ಆಲ್ಪೊರ್ಟ್ಸ್ ಸಹಲಕ್ಷಣಗಳ ಸೌಮ್ಯ ರೋಗವಿಧಾನವನ್ನು ವಿಕಸಿಸಿಕೊಂಡಿದ್ದಾಳೆ, ಮತ್ತು ಈ ರೋಗವಿರುವ ನನ್ನ ಸೋದರರಲ್ಲಿ ಇಬ್ಬರು ಮೂತ್ರಜನಕಾಂಗದ ವೈಫಲ್ಯವನ್ನು ಅನುಭವಿಸಿ, ಡೈಆ್ಯಲಿಸಿಸ್ನಲ್ಲಿದ್ದಾರೆ. ನನ್ನ ಬೇರೆ ಇಬ್ಬರು ಸೋದರರು ಉತ್ತಮ ಆರೋಗ್ಯದಲ್ಲಿದ್ದಾರೆ.
ನಾನು ಪೆರಿಟೊನೀಯಲ್ ಡೈಆ್ಯಲಿಸಿಸನ್ನು ಮುಂದುವರಿಸುತ್ತಾ ಇದ್ದೇನೆ, ಮತ್ತು ಅದು ನನಗೆ ಕೊಡುವ ಸುಲಭಸಾಗಣೆಗಾಗಿ ನಾನು ಕೃತಜ್ಞನು. ನಾನು ಭವಿಷ್ಯತ್ತನ್ನು ನಿರೀಕ್ಷೆ ಮತ್ತು ಭರವಸೆಯಿಂದ ಮುನ್ನೋಡುತ್ತೇನೆ, ಯಾಕಂದರೆ, ಎಷ್ಟೆಂದರೂ ಇಂದಿನ ಸಮಸ್ಯೆಗಳು—ಮೂತ್ರಜನಕಾಂಗದ ರೋಗವೂ ಸೇರಿ—ಕೇವಲ ತಾತ್ಕಾಲಿಕ.—ಈ ಲೇಖನವು ಮುದ್ರಿಸಲ್ಪಡುವ ಮುಂಚೆಯೇ ಮರಣಹೊಂದಿದ ಲೀ ಕಾರ್ಡೆವೆ ಇವರಿಂದ ಹೇಳಲ್ಪಟ್ಟಂತೆ.
ಎಚ್ಚರ! ಪತ್ರಿಕೆಯು ಯಾವುದೇ ವಿಶಿಷ್ಟ ಔಷಧೋಪಚಾರ ವಿಧಾನವನ್ನು ಶಿಫಾರಸ್ಸು ಮಾಡುವುದಿಲ್ಲ. ಈ ಲೇಖನವು ಹೀಮೊಡೈಆ್ಯಲಿಸಿಸ್ನಂತಹ ಬೇರೆ ಚಿಕಿತ್ಸಾ ವಿಧಾನಗಳನ್ನು ನಿರುತ್ತೇಜಿಸುವುದಕ್ಕಾಗಿರುವುದಿಲ್ಲ. ಪ್ರತಿಯೊಂದು ವಿಧಾನಕ್ಕೂ ಸಾಧಕ ಬಾಧಕಗಳಿವೆ ಮತ್ತು ವ್ಯಕ್ತಿಯೊಬ್ಬನು ತಾನು ಉಪಯೋಗಿಸುವ ವಿಧಾನದ ಕುರಿತು ತನ್ನ ಸ್ವಂತ ಶುದ್ಧಾಂತಃಕರಣದ ನಿರ್ಣಯವನ್ನು ಮಾಡಬೇಕು.
[ಅಧ್ಯಯನ ಪ್ರಶ್ನೆಗಳು]
a ಕ್ರೈಸ್ತನೊಬ್ಬನು ಸ್ಥಳಾಂತರವನ್ನು ಸ್ವೀಕರಿಸುವನೊ ಇಲ್ಲವೊ ಎಂಬುದು ಅವನ ವೈಯಕ್ತಿಕ ನಿರ್ಣಯವಾಗಿರುತ್ತದೆ.—ಮಾರ್ಚ್ 15, 1980ರ ದ ವಾಚ್ಟವರ್, ಪುಟ 31ನ್ನು ನೋಡಿರಿ.
b ದೊಡ್ಡ ರಕ್ತರಹಿತ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಇವರಿಂದ ಪ್ರಕಾಶಿತವಾಗಿರುವ, ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರ್ನ 16-17ನೆಯ ಪುಟಗಳನ್ನು ನೋಡಿರಿ.
c ಕ್ರೈಸ್ತನೊಬ್ಬನು ಇಪಿಓವನ್ನು ಸ್ವೀಕರಿಸುವನೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ.—ಅಕ್ಟೋಬರ್ 1, 1994ರ ದ ವಾಚ್ಟವರ್ನ 31ನೆಯ ಪುಟವನ್ನು ನೋಡಿರಿ.
[ಪುಟ 22 ರಲ್ಲಿರುವ ಚಿತ್ರ]
ನನ್ನ ಪತ್ನಿ ಕಿಂಬರ್ಲಿಯೊಂದಿಗೆ
[Diagram on page 12]
ಪೆರಿಟೊನೀಯಲ್ ಡೈಆ್ಯಲಿಸಿಸ್ ಕೆಲಸನಡಿಸುವ ವಿಧ
ಯಕೃತ್ತು
ಸಣ್ಣಕರುಳಿನ ಕುಣಿಕೆಗಳು
ಮೂತ್ರಾಪಕರ್ಷಕ ನಳಿಗೆ (ಶುದ್ಧ ದ್ರಾವಣವನ್ನು ಪಡೆಯುತ್ತದೆ; ಹಳೆಯ ದ್ರಾವಣವನ್ನು ಬಿಡುಗಡೆಮಾಡುತ್ತದೆ)
ಪೆರಿಟೊನೀಯಮ್
ಪೆರಿಟೊನೀಯಲ್ ಪೊಳ್ಳು
ಮೂತ್ರಕೋಶ