ಕ್ಯಾತರೈಗಳು—ಅವರು ಕ್ರೈಸ್ತ ಹುತಾತ್ಮರಾಗಿದ್ದರೋ?
“ಅವರೆಲ್ಲರನ್ನೂ ವಧಿಸಿರಿ; ತನ್ನ ಸ್ವಂತ ಮಕ್ಕಳನ್ನು ದೇವರು ಗುರುತಿಸುವನು.” 1209ರ ಬೇಸಗೆಯ ಆ ದಿನದಂದು, ದಕ್ಷಿಣ ಫ್ರಾನ್ಸ್ನಲ್ಲಿರುವ ಬೇಸ್ಯೆಯ ಜನಸಂಖ್ಯೆಯು ಸಾಮೂಹಿಕವಾಗಿ ಸಂಹರಿಸಲ್ಪಟ್ಟಿತು. ಕ್ಯಾಥೊಲಿಕ ಧಾರ್ಮಿಕಯೋಧರ ಮೇಲಧಿಕಾರಿಯಾಗಿ ಪೋಪ್ಗುರುವಿನ ರಾಯಭಾರಿಯಾಗಿ ನಿಯುಕ್ತನಾದ, ಸಂನ್ಯಾಸಿ ಆ್ಯರ್ನಾಲ್ಡ್ ಆಮಾಲ್ರೀಕ್, ದಯೆಯನ್ನು ತೋರಿಸಲೇ ಇಲ್ಲ. ಕ್ಯಾಥೊಲಿಕರ ಮತ್ತು ಪಾಷಂಡವಾದಿಗಳ ನಡುವೆ ತಾವು ಹೇಗೆ ಭೇದ ಗುರುತಿಸುವುದೆಂದು ಅವನ ವ್ಯಕ್ತಿಗಳು ಕೇಳಿದಾಗ, ಮೇಲೆ ಉದ್ಧರಿಸಲ್ಪಟ್ಟ ಹೇಯ ಉತ್ತರವನ್ನು ಅವನು ನೀಡಿದನೆಂದು ಹೇಳಲಾಗುತ್ತದೆ. ಕ್ಯಾಥೊಲಿಕ ಇತಿಹಾಸಗಾರರು ಅದನ್ನು ನಿಸ್ಸಾರಗೊಳಿಸುವುದು: “ಆತಂಕಗೊಳ್ಳದಿರಿ. ಕೊಂಚ ಜನರು ಮಾತ್ರ ಪರಿವರ್ತಿಸಲ್ಪಡುವರೆಂದು ನಾನು ನೆನಸುತ್ತೇನೆ.” ಅವನ ನಿಖರವಾದ ಉತ್ತರವು ಏನೇ ಆಗಿರಲಿ, ಫಲಿತಾಂಶವು ಕ್ಯಾಥೊಲಿಕ್ ಚರ್ಚಿನ ಧರ್ಮಾಧ್ಯಕ್ಷರಿಂದ ಮಾರ್ಗದರ್ಶಿಸಲ್ಪಟ್ಟ, ಸುಮಾರು 3,00,000 ಧಾರ್ಮಿಕಯೋಧರ ಕೈಗಳಿಂದ ಕಡಿಮೆಪಕ್ಷ 20,000 ಪುರುಷರ, ಸ್ತ್ರೀಯರ, ಮತ್ತು ಮಕ್ಕಳ ಸಂಹಾರವಾಗಿತ್ತು.
ಈ ಸಂಹಾರದ ಕಾರಣವೇನಾಗಿತ್ತು? ದಕ್ಷಿಣ-ಮಧ್ಯ ಫ್ರಾನ್ಸ್, ಲ್ಯಾಂಗ್ಡಾಕ್ನ ಪ್ರಾಂತದಲ್ಲಿ ಪಾಷಂಡವಾದಿಗಳೆಂದು ಕರೆಯಲ್ಪಟ್ಟವರ ವಿರುದ್ಧ ಪೋಪ್ ಇನೊಸೆಂಟ್ III ಸ್ಥಾಪಿಸಿದ ಆ್ಯಲ್ಬಿಜೆನ್ಸೀಯನ್ ಧಾರ್ಮಿಕಯುದ್ಧದ ಕೇವಲ ಪ್ರಾರಂಭವು ಅದಾಗಿತ್ತು. ಸುಮಾರು 20 ವರ್ಷಗಳ ಅನಂತರ ಅದು ಮುಕ್ತಾಯವಾಗುವ ಮುನ್ನ, ಸಂಭವತಃ ಹತ್ತು ಲಕ್ಷ ಜನರು—ಕ್ಯಾತರೈ, ವಾಲ್ಡೆನ್ಸೀಸ್, ಮತ್ತು ಅನೇಕ ಕ್ಯಾಥೊಲಿಕರು ಕೂಡ—ತಮ್ಮ ಜೀವಗಳನ್ನು ಕಳೆದುಕೊಂಡಿದ್ದರು.
ಮಧ್ಯಯುಗಗಳ ಯೂರೋಪಿನಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯ
ಸಾ.ಶ. 11ನೇ ಶತಮಾನದಲ್ಲಿನ ವ್ಯಾಪಾರದ ವ್ಯಾಪಕ ಬೆಳವಣಿಗೆಯು, ಮಧ್ಯಯುಗಗಳ ಯೂರೋಪಿನ ಸಾಮಾಜಿಕ ಮತ್ತು ಆರ್ಥಿಕ ರಚನೆಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದಿತು. ಕುಶಲಕರ್ಮಿಗಳ ಮತ್ತು ವ್ಯಪಾರಿಗಳ ಬೆಳೆಯುತ್ತಿದ್ದ ಸಂಖ್ಯೆಯ ವಸತಿಗಾಗಿ ಪಟ್ಟಣಗಳು ತಲೆದೋರಿದವು. ಇದು ಹೊಸ ವಿಚಾರಗಳಿಗೆ ಅವಕಾಶವನ್ನೊದಗಿಸಿತು. ಯೂರೋಪಿನಲ್ಲಿ ಬೇರೆಲ್ಲೂ ಆಗದ ಒಂದು ಗಮನಾರ್ಹವಾಗಿ ಸಹಿಷ್ಣುವಾದ ಮತ್ತು ಮುಂದುವರಿದ ನಾಗರಿಕತೆಯು ಎಲ್ಲಿ ಸಮೃದ್ಧಗೊಂಡಿತೋ, ಆ ಲ್ಯಾಂಗ್ಡಾಕ್ನಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯವು ಬೇರೂರಿತು. ಲ್ಯಾಂಗ್ಡಾಕ್ನಲ್ಲಿನ ಟುಲೂಸ್ ಪಟ್ಟಣವು ಯೂರೋಪಿನಲ್ಲಿ ಅತ್ಯಂತ ಸಮೃದ್ಧಿಯನ್ನು ಹೊಂದಿದ್ದ ಮುಖ್ಯನಗರಗಳಲ್ಲಿ ಮೂರನೆಯದ್ದಾಗಿತ್ತು. ಯಾರ ಕೆಲವು ಗೀತೆಗಳು ರಾಜಕೀಯ ಮತ್ತು ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸಿದ್ದವೋ, ಅಂಥ ಕವಿಗಾಯಕರು ಏಳಿಗೆ ಹೊಂದಿದ್ದ ಜಗತ್ತು ಅದಾಗಿತ್ತು.
11ನೇ ಮತ್ತು 12ನೇ ಶತಮಾನಗಳಲ್ಲಿನ ಧಾರ್ಮಿಕ ಪರಿಸ್ಥಿತಿಯನ್ನು ವರ್ಣಿಸುತ್ತಾ, ರವ್ಯೂ ಡಿಸ್ಟ್ವರ್ ಏ ಡ ಫೀಲಾಸಾಫಿ ರೆಲೀಸ್ಯೋಸ್ ಹೇಳುವುದು: “ಹಿಂದಿನ ಶತಮಾನದಲ್ಲಿದ್ದಂತೆ, 12ನೇ ಶತಮಾನದಲ್ಲಿ ವೈದಿಕರ ನೀತಿಗಳು, ಅವರ ಸಮೃದ್ಧಿಯು, ಅವರ ಲಂಚಕೋರತನವು ಮತ್ತು ಅವರ ಅನೈತಿಕತೆಯು, ಆಕ್ಷೇಪಣೆಯನ್ನು ಹೊಂದುತ್ತಾ ಮುಂದುವರಿಯಿತು, ಆದರೆ ಪ್ರಧಾನವಾಗಿ ಟೀಕಿಸಲ್ಪಟ್ಟದ್ದು, ಅವರ ಸಂಪತ್ತು ಮತ್ತು ಅಧಿಕಾರ, ಐಹಿಕ ಅಧಿಕಾರಿಗಳೊಂದಿಗಿನ ಅವರ ವಂಚನೆ, ಮತ್ತು ಅವರ ದಾಸ್ಯವೃತ್ತಿಯಾಗಿತ್ತು.”
ಸಂಚಾರೀ ಉಪದೇಶಕರು
ಚರ್ಚಿನೊಳಗೆ ಅತಿಯಾಗಿ ಹಬ್ಬಿರುವ ಭ್ರಷ್ಟಾಚಾರವು ಯೂರೋಪಿನಲ್ಲಿ, ವಿಶೇಷವಾಗಿ ದಕ್ಷಿಣ ಫ್ರಾನ್ಸ್ ಮತ್ತು ಉತ್ತರ ಇಟಲಿಯಲ್ಲಿನ ಭಿನ್ನಮತೀಯ ಸಂಚಾರೀ ಉಪದೇಶಕರ, ಅಧಿಕಗೊಳ್ಳುತ್ತಿರುವ ಸಂಖ್ಯೆಗೆ ಹೊಣೆಯಾಗಿದೆ ಎಂದು ಪೋಪ್ ಇನೊಸೆಂಟ್ III ಕೂಡ ಗ್ರಹಿಸಿದನು. ಇವರಲ್ಲಿ ಅಧಿಕಾಂಶ ಜನರು ಕ್ಯಾತರೈ ಅಥವಾ ವಾಲ್ಡೆನ್ಸೀಸ್ ಆಗಿದ್ದರು. ಜನರಿಗೆ ಬೋಧಿಸದೆ ಇದ್ದುದ್ದಕ್ಕಾಗಿ ಅವನು ಪಾದ್ರಿಗಳನ್ನು ಹೀಗೆ ಹೇಳುತ್ತಾ, ದೂಷಿಸಿದ್ದು: “ಮಕ್ಕಳು ಆಹಾರದ ಕೊರತೆಯಲ್ಲಿದ್ದಾರೆ, ಆದರೆ ಅವರಲ್ಲಿ ಹಂಚಿಕೊಳ್ಳಲು ನೀವು ಕಾಳಜಿ ವಹಿಸುತ್ತಿಲ್ಲ.” ಆದರೂ, ಜನರಿಗಾಗಿ ಬೈಬಲ್ ಶಿಕ್ಷಣವನ್ನು ಪ್ರವರ್ಧಿಸುವ ಬದಲಿಗೆ, ಇನೊಸೆಂಟನು ಪ್ರತಿಪಾದಿಸಿದ್ದೇನೆಂದರೆ, “ದೈವಿಕ ಶಾಸ್ತ್ರವಚನವು ಎಷ್ಟೊಂದು ಆಳವಾಗಿದೆಯೆಂದರೆ, ಕೇವಲ ಸಾಮಾನ್ಯರು ಮತ್ತು ಅನಕ್ಷರಸ್ಥರು ಮಾತ್ರವಲ್ಲ, ಬದಲಿಗೆ ಯುಕ್ತಾಯುಕ್ತ ಪರಿಜ್ಞಾನವುಳ್ಳವರೂ, ಕಲಿತವರೂ, ಅದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಲು ಸಂಪೂರ್ಣವಾಗಿ ಸಮರ್ಥರಾಗಿರುವುದಿಲ್ಲ.” ಬೈಬಲ್ ವಾಚನವು ವೈದಿಕರ ಹೊರತು ಎಲ್ಲರಿಗೂ ನಿಷೇಧಿಸಲ್ಪಟ್ಟಿತ್ತು, ಮತ್ತು ಅದು ಲ್ಯಾಟಿನ್ ಭಾಷೆಯಲ್ಲಿ ಮಾತ್ರ ಅನುಮತಿಸಲ್ಪಟ್ಟಿತ್ತು.
ಭಿನ್ನಮತೀಯರ ಸಂಚಾರೀ ಪ್ರಚಾರವನ್ನು ನಿಷ್ಫಲಗೊಳಿಸಲು, ಕ್ರೈಸ್ತ ಭಿಕ್ಷು ಪ್ರಚಾರಕರ ಅಥವಾ ಡೊಮಿನಿಕನ್ಗಳ ವ್ಯವಸ್ಥೆಯ ಸ್ಥಾಪನೆಯನ್ನು ಪೋಪ್ ಅನುಮೋದಿಸಿದನು. ಸಮೃದ್ಧ ಕ್ಯಾಥೊಲಿಕ್ ವೈದಿಕರೊಂದಿಗೆ ವೈದೃಶ್ಯದಲ್ಲಿ, ದಕ್ಷಿಣ ಫ್ರಾನ್ಸ್ನಲ್ಲಿ “ಪಾಷಂಡವಾದಿಗಳ” ವಿರುದ್ಧವಾಗಿ ಕ್ಯಾಥೊಲಿಕ ಸಂಪ್ರದಾಯ ಬದ್ಧತೆಯ ಸಂರಕ್ಷಣೆಗೆ ಆಯೋಗಿಸಲ್ಪಟ್ಟ ಈ ಕ್ರೈಸ್ತಭಿಕ್ಷುಗಳು, ಸಂಚರಿಸುವ ಪ್ರಚಾರಕರಾಗಿರಬೇಕಿತ್ತು. ಕ್ಯಾತರೈಗಳೊಂದಿಗೆ ತರ್ಕಿಸಲು ಮತ್ತು ಅವರನ್ನು ಪುನಃ ಕ್ಯಾಥೊಲಿಕ ಸಭೆಯೊಳಗೆ ಕರೆತರುವಂತೆ ಪ್ರಯತ್ನಿಸಲು ಪೋಪ್ಗುರುವಿನ ರಾಯಭಾರಿಗಳನ್ನು ಸಹ ಪೋಪ್ ಕಳುಹಿಸಿದನು. ಈ ಯತ್ನಗಳು ನಿಷ್ಫಲಗೊಂಡ ಕಾರಣ, ಮತ್ತು ಪ್ರಾಯಶಃ ಒಬ್ಬ ಪಾಷಂಡವಾದಿಯಿಂದ ಅವನ ರಾಯಭಾರಿಗಳಲ್ಲಿ ಒಬ್ಬನು ಕೊಲ್ಲಲ್ಪಟ್ಟ ಕಾರಣ, 1209 ರಲ್ಲಿ ಇನೊಸೆಂಟ್ III ಆ್ಯಲ್ಬಿಜೆನ್ಸಿ ಧಾರ್ಮಿಕಯುದ್ಧವನ್ನು ಆಜ್ಞಾಪಿಸಿದನು. ಕ್ಯಾತರೈಗಳು ವಿಶೇಷವಾಗಿ ಎಲ್ಲಿ ಕಿಕ್ಕಿರಿದಿದ್ದರೋ, ಆ ಪಟ್ಟಣಗಳಲ್ಲಿ ಆ್ಯಲ್ಬಿ ಒಂದಾಗಿತ್ತು, ಹೀಗೆ ಚರ್ಚಿನ ಚರಿತ್ರಾ ಲೇಖಕರು ಕ್ಯಾತರೈಗಳನ್ನು ಆ್ಯಲ್ಬಿಜೆನ್ಸೀಸ್ (ಫ್ರೆಂಚ್, ಆ್ಯಲ್ಬಿಜಿಯೋಸ್) ಆಗಿ ಉಲ್ಲೇಖಿಸಿದರು ಮತ್ತು ವಾಲ್ಡೆನ್ಸೀಸ್ಗಳನ್ನೊಳಗೊಂಡು, ಆ ಪ್ರದೇಶದಲ್ಲಿನ ಎಲ್ಲ “ಪಾಷಂಡವಾದಿಗಳ”ನ್ನು ಹೆಸರಿಸಲು ಈ ಪದವನ್ನು ಉಪಯೋಗಿಸಿದರು. (ಕೆಳಗಿನ ರೇಖಾಚೌಕವನ್ನು ನೋಡಿರಿ.)
ಕ್ಯಾತರೈಗಳು ಯಾರಾಗಿದ್ದರು?
“ಕ್ಯಾತಾರ್” ಎಂಬ ಪದವು “ಶುದ್ಧ” ವೆಂಬುದನ್ನು ಅರ್ಥೈಸುವ, ಗ್ರೀಕ್ ಪದವಾದ ಕ್ಯಾತರಾಸ್ ನಿಂದ ಬರುತ್ತದೆ. 11 ರಿಂದ 14ನೇ ಶತಮಾನದ ವರೆಗೆ, ಕ್ಯಾತರಿಸ್ಮ್ ಪರಿಶುದ್ಧತಾ ಸಿದ್ಧಾಂತ ವಿಶೇಷವಾಗಿ ಲಾಂಬರ್ಡಿ, ಉತ್ತರ ಇಟಲಿಯಲ್ಲಿ, ಮತ್ತು ಲ್ಯಾಂಗ್ಡಾಕ್ನಲ್ಲಿ ಹರಡಿತು. ಕ್ಯಾತಾರ್ ವಿಶ್ವಾಸಗಳು ಪ್ರಾಯಶಃ ವಿದೇಶೀ ವ್ಯಾಪರಸ್ಥರಿಂದ ಮತ್ತು ಮಿಷನೆರಿಗಳಿಂದ ತರಲ್ಪಟ್ಟ, ಮೂಡಲ ದಿಕ್ಕಿನ ದ್ವೈತ ಸಿದ್ಧಾಂತ ಮತ್ತು ಅಧ್ಯಾತ್ಮ ರಹಸ್ಯ ಜ್ಞಾನವಾದದ ಒಂದು ಮಿಶ್ರಣವಾಗಿತ್ತು. ಕ್ಯಾತಾರ್ ದ್ವೈತ ಸಿದ್ಧಾಂತವನ್ನು “ದ್ವಿತ್ತತ್ವಗಳು: ಆತ್ಮಿಕವಾಗಿರುವ ಎಲ್ಲವನ್ನು ಪ್ರಭುತ್ವ ಮಾಡುವ ಒಂದು ಒಳ್ಳೆಯ ತತ್ತ್ವ, ಮತ್ತೊಂದು ಮಾನವನ ದೇಹವನ್ನೊಳಗೊಂಡು, ಭೌತದ್ರವ್ಯ ಲೋಕಕ್ಕಾಗಿ ಜವಾಬ್ದಾರಿಯಾಗಿರುವ ಕೆಟ್ಟ ತತ್ತ್ವ” ದಲ್ಲಿನ ವಿಶ್ವಾಸವಾಗಿ ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಅರ್ಥ ನಿರೂಪಿಸುತ್ತದೆ. ಮಾರ್ಪಡಿಸಲಾಗದ ರೀತಿಯಲ್ಲಿ ನಾಶನದ ದಂಡನೆಗೊಳಗಾಗಿದ್ದ, ಭೌತದ್ರವ್ಯ ಲೋಕವನ್ನು ಸೈತಾನನು ಸೃಷ್ಟಿಸಿದನೆಂದು ಕ್ಯಾತರೈ ನಂಬಿದ್ದರು. ಅವರ ನಿರೀಕ್ಷೆಯು, ಕೆಟ್ಟದ್ದರಿಂದ, ಭೌತದ್ರವ್ಯ ಲೋಕದಿಂದ ಪಾರಾಗುವುದೇ ಆಗಿತ್ತು.
ಕ್ಯಾತರೈ ಎರಡು ವರ್ಗಗಳಾಗಿ ವಿಭಾಗಗೊಂಡಿದ್ದರು, ಪರಿಪೂರ್ಣರು ಮತ್ತು ವಿಶ್ವಾಸಿಗಳು. ಪರಿಪೂರ್ಣರು ಕಾನ್ಸೊಲಾಮೆನ್ಟುಮ್ ಎಂದು ಕರೆಯಲ್ಪಡುವ, ಆತ್ಮಿಕ ದೀಕ್ಷಾಸ್ನಾನದ ಒಂದು ಸಂಸ್ಕಾರದಿಂದ ದೀಕ್ಷಿತರಾಗಿದ್ದರು. ಇದು ಉಮೇದುವಾರಿಕೆಯ ಒಂದು ವರ್ಷದ ಅನಂತರ, ಕೈಗಳನ್ನಿಡುವ ಮೂಲಕ ಮಾಡಲ್ಪಡುವಂಥದ್ದಾಗಿತ್ತು. ಈ ಸಂಸ್ಕಾರವು, ಉಮೇದುವಾರನನ್ನು ಸೈತಾನನ ಆಳಿಕ್ವೆಯಿಂದ ಬಿಡುಗಡೆಗೊಳಿಸಿ, ಸಕಲ ಪಾಪದಿಂದ ಅವನನ್ನು ಶುದ್ಧಗೊಳಿಸಿ, ಪವಿತ್ರಾತ್ಮವನ್ನು ನೀಡುವುದೆಂದು ನೆನಸಲಾಗಿತ್ತು. ಇದು ವಿಶ್ವಾಸಿಗಳೆಡೆಗೆ ಶುಶ್ರೂಷಕರಾಗಿ ಕಾರ್ಯನಡೆಸಿದ ಸಂಬಂಧ ಸೂಚಕವಾದ ಚಿಕ್ಕ ಪ್ರಮುಖ ಗುಂಪಿಗೆ ಅನ್ವಯಿಸಿದ, “ಪರಿಪೂರ್ಣ” ಎಂಬ ಹೆಸರನ್ನು ಎಬ್ಬಿಸಿತು. ಪರಿಪೂರ್ಣರು ಆಂಶಿಕ ಉಪವಾಸದ, ಸಂಭೋಗರಹಿತತೆಯ ಮತ್ತು ದಾರಿದ್ರ್ಯದ ಪ್ರತಿಜ್ಞೆಗಳನ್ನು ತೆಗೆದುಕೊಂಡರು. ವಿವಾಹವಾಗಿದ್ದಲ್ಲಿ, ಒಬ್ಬ ಪರಿಪೂರ್ಣ ವ್ಯಕ್ತಿಯು ಅವನ ಅಥವಾ ಅವಳ ಸಂಗಾತಿಯನ್ನು ಬಿಡಬೇಕಾಗಿತ್ತು, ಏಕೆಂದರೆ, ಲೈಂಗಿಕ ಸಂಭೋಗವು ಮೂಲ ಪಾಪವಾಗಿತ್ತೆಂದು ಕ್ಯಾತರೈಗಳು ನಂಬಿದ್ದರು.
ವಿಶ್ವಾಸಿಗಳು, ಬೈರಾಗಿ ಜೀವನ ಶೈಲಿಯನ್ನು ಅನುಮೋದಿಸದಿದ್ದರೂ, ಕ್ಯಾತಾರ್ ಬೋಧನೆಗಳನ್ನು ಅಂಗೀಕರಿಸಿದ ವ್ಯಕ್ತಿಗಳಾಗಿದ್ದರು. ಮೆಲ್ಯೊರಾಮೆನ್ಟುಮ್ ಎಂದು ಕರೆಯಲ್ಪಡುವ ಒಂದು ಸಂಸ್ಕಾರದಲ್ಲಿ ಪರಿಪೂರ್ಣರ ಗೌರವಾರ್ಥದಲ್ಲಿ ಮೊಣಕಾಲೂರುವ ಮೂಲಕ, ವಿಶ್ವಾಸಿಯು ಕ್ಷಮಾಪಣೆಯನ್ನೂ ಆಶೀರ್ವಾದವೊಂದನ್ನೂ ವಿನಂತಿಸಿದನು. ಸಾಮಾನ್ಯ ಜೀವಿತಗಳನ್ನು ಸ್ವತಃ ನಡೆಸಶಕ್ತರಾಗಲು, ವಿಶ್ವಾಸಿಗಳು, ಆತ್ಮಿಕ ದೀಕ್ಷಾಸ್ನಾನವನ್ನು ಮೃತ್ಯುಶಯ್ಯೆಯಲ್ಲಿ ಕೊಡುವಿಕೆಗಾಗಿ, ಅಥವಾ ಕಾನ್ಸೊಲಾಮೆನ್ಟುಮ್ ಗಾಗಿ ಪರಿಪೂರ್ಣರೊಂದಿಗೆ ಒಂದು ಕಾನ್ವೆನೆನ್ಸಾ, ಅಥವಾ ಒಪ್ಪಿಗೆಯ ಕರಾರನ್ನು ಮಾಡಿದರು.
ಬೈಬಲಿನೆಡೆಗಿನ ಮನೋಭಾವ
ಕ್ಯಾತರೈಗಳು ಬೈಬಲನ್ನು ವ್ಯಾಪಕವಾಗಿ ಉದ್ಧರಿಸಿದರಾದರೂ, ಅದನ್ನು ಅವರು ಪ್ರಾಥಮಿಕವಾಗಿ ಅರ್ಥಾಂತರೋಕಿಗ್ತಳ ಮತ್ತು ಕಲ್ಪನಾ ಕಥೆಗಳ ಒಂದು ಆಕರದಂತೆ ವೀಕ್ಷಿಸಿದರು. ಹೀಬ್ರು ಶಾಸ್ತ್ರವಚನಗಳ ಹೆಚ್ಚಿನ ಭಾಗವು ಪಿಶಾಚನಿಂದ ಬಂತೆಂದು ಅವರು ಪರಿಗಣಿಸಿದರು. ತಮ್ಮ ದ್ವೈತ ಸಿದ್ಧಾಂತ ತತ್ತವ್ವನ್ನು ಪುಷ್ಟೀಕರಿಸಲಿಕ್ಕೆ, ಆತ್ಮದೊಂದಿಗೆ ಶರೀರವನ್ನು ವೈದೃಶ್ಯಗೊಂಡಿರುವ ವಚನಗಳಂಥ, ಗ್ರೀಕ್ ಶಾಸ್ತ್ರವಚನಗಳ ಭಾಗಗಳನ್ನು ಅವರು ಉಪಯೋಗಿಸಿದರು. ಉದಾಹರಣೆಗಾಗಿ, ಕರ್ತನ ಪ್ರಾರ್ಥನೆಯಲ್ಲಿ ಅವರು “ನಮ್ಮ ಅನುದಿನದ ಆಹಾರ”ಕ್ಕೆ ಬದಲಾಗಿ “ನಮ್ಮ ಭೌತಾತೀತ ಆಹಾರ” (“ಆತ್ಮಿಕ ಆಹಾರ” ವೆಂದರ್ಥ) ಕ್ಕಾಗಿ ಪ್ರಾರ್ಥಿಸಿದರು, ಏಕೆಂದರೆ ಪ್ರಾಪಂಚಿಕ ಆಹಾರವು ಅವರ ದೃಷ್ಟಿಯಲ್ಲಿ ಅನಿವಾರ್ಯವಾಗಿ ಕೆಟ್ಟದ್ದಾಗಿತ್ತು.
ಅನೇಕ ಕ್ಯಾತಾರ್ ಬೋಧನೆಗಳು ಬೈಬಲಿಗೆ ನೇರವಾಗಿ ವಿರೋಧೋಕ್ತಿಯಲ್ಲಿದ್ದವು. ದೃಷ್ಟಾಂತಕ್ಕಾಗಿ, ಪ್ರಾಣದ ಅಮರತ್ವದಲ್ಲಿ ಮತ್ತು ಪುನರವತಾರದಲ್ಲಿ ಅವರು ನಂಬಿಕೆಯನ್ನಿಟ್ಟಿದ್ದರು. (ಪ್ರಸಂಗಿ 9:5, 10ನ್ನು ಹೋಲಿಸಿ; ಯೆಹೆಜ್ಕೇಲ 18:4, 20.) ಸಂದಿಗ್ಧಮೂಲದ ಶಾಸ್ತ್ರವಚನಗಳ ಮೇಲೆ ಸಹ ಅವರು ತಮ್ಮ ವಿಶ್ವಾಸಗಳನ್ನು ಆಧರಿಸಿದರು. ಆದರೂ, ಎಷ್ಟರ ಮಟ್ಟಿಗೆ, ಶಾಸ್ತ್ರವಚನಗಳ ಭಾಗಗಳನ್ನು ದೇಶೀಯ ಭಾಷೆಯಲ್ಲಿ ಕ್ಯಾತರೈಗಳು ಭಾಷಾಂತರಿಸಿದರೋ, ಅದರಲ್ಲಿ ಸ್ವಲ್ಪಮಟ್ಟಿಗೆ, ಅವರು ಮಧ್ಯಯುಗಗಳಲ್ಲಿ ಬೈಬಲನ್ನು ಒಂದು ಉತ್ತಮ ಪ್ರಸಿದ್ಧಿಯ ಪುಸ್ತಕವನ್ನಾಗಿ ಮಾಡಿದರು.
ಕ್ರೈಸ್ತರಲ್ಲ
ಪರಿಪೂರ್ಣರು ತಮ್ಮನ್ನು ತಾವೇ ಅಪೊಸ್ತಲರ ಹಕ್ಕುಳ್ಳ ಉತ್ತರಾಧಿಕಾರಿಗಳನ್ನಾಗಿ ಪರಿಗಣಿಸಿದರು ಮತ್ತು ಪರಿಣಾಮವಾಗಿ, “ಸತ್ಯ” ಅಥವಾ “ಒಳ್ಳೆಯ” ಎಂಬುದನ್ನು ಕೂಡಿಸುವ ಮೂಲಕ ಇದನ್ನು ಒತ್ತಿ ಹೇಳುತ್ತಾ, ತಮ್ಮನ್ನು ಸ್ವತಃ “ಕ್ರೈಸ್ತರು” ಎಂದು ಕರೆದುಕೊಂಡರು. ಹಾಗಿದ್ದರೂ, ವಾಸ್ತವದಲ್ಲಿ, ಅನೇಕ ಕ್ಯಾತಾರ್ ವಿಶ್ವಾಸಗಳು ಕ್ರೈಸ್ತತ್ವಕ್ಕೆ ಅಸಂಗತವಾಗಿದ್ದವು. ಕ್ಯಾತರೈಗಳು ಯೇಸುವನ್ನು ದೇವರ ಕುಮಾರನಾಗಿ ಗ್ರಹಿಸಿರುವಾಗಲೇ, ಆತನು ಶರೀರದಲ್ಲಿ ಬರುವನೆಂಬುದನ್ನು ಮತ್ತು ಆತನ ಬಿಡುಗಡೆಯ ಯಜ್ಞವನ್ನು ಅವರು ತಿರಸ್ಕರಿಸಿದರು. ಶರೀರದ ಮತ್ತು ಲೋಕದ ಕುರಿತಾದ ಬೈಬಲಿನ ಖಂಡನೆಯನ್ನು ಅಪಾರ್ಥಮಾಡಿಕೊಂಡು, ಎಲ್ಲ ಭೌತದ್ರವ್ಯವು ಕೆಟ್ಟದ್ದರಿಂದ ಉತ್ಪತ್ತಿಯಾಗುವುದೆಂದು ಅವರು ಪರಿಗಣಿಸಿದರು. ಹೀಗೆ, ಅವರು ಯೇಸು ಕೇವಲ ಒಂದು ಆತ್ಮಿಕ ದೇಹವನ್ನು ಹೊಂದಿರಸಾಧ್ಯವಿತ್ತು ಮತ್ತು ಭೂಮಿಯಲ್ಲಿದ್ದಾಗ ಆತನು ಒಂದು ಶಾರೀರಿಕ ದೇಹವನ್ನು ಬರಿಯ ತೋರಿಕೆಗೆ ಹೊಂದಿದ್ದನೆಂಬುದನ್ನು ಸಮರ್ಥಿಸಿದರು. ಪ್ರಥಮ ಶತಮಾನದ ಮತಭ್ರಷ್ಟರಂತೆ, ಕ್ಯಾತರೈಗಳು “ಶರೀರದಲ್ಲಿ ಬಂದಿರುವ ಯೇಸು ಕ್ರಿಸ್ತನನ್ನು ಒಪ್ಪಿಕೊಳ್ಳದ ವ್ಯಕ್ತಿಗಳು” ಆಗಿದ್ದರು.—2 ಯೋಹಾನ 7, NW.
ಪರಿಶುದ್ಧತಾ ಸಿದ್ಧಾಂತವು, “ಒಂದು ಬಲಾತ್ಕಾರ ಸಂನ್ಯಾಸದಿಂದ ಒಂದು ಕ್ರೈಸ್ತ ನೈತಿಕತೆಯನ್ನು ಸ್ಥಾನಪಲ್ಲಟಗೊಳಿಸಿ, . . . [ಕ್ರಿಸ್ತನ ಮರಣ]ದ ರಕ್ಷಣಾ ಶಕ್ತಿಯನ್ನು ಅಂಗೀಕರಿಸಲು ನಿರಾಕರಿಸುವ ಮೂಲಕ ವಿಮೋಚನೆಯನ್ನು ವರ್ಜಿಸಿತು,” ಎಂದು ಎಮ್. ಡಿ. ಲ್ಯಾಮ್ಬರ್ಟ್, ಮೆಡಿವಿಯಲ್ ಹೆರೆಸಿ ಎಂಬ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. “ಪರಿಪೂರ್ಣರ ಸತ್ಯವಾದ ನೆಂಟಸಿಕ್ತೆಗಳು ಮೂಡಲ ದಿಕ್ಕಿನ ಸಂನ್ಯಾಸಿ ಬೋಧಕರ ಮತ್ತು ಚೀನಾ ಅಥವಾ ಭಾರತದ ಬೌದ್ಧ ಸಂನ್ಯಾಸಿ ಮತ್ತು ಫಕೀರರ, ಅರ್ಫ್ಯೂಸ್ ಗೂಢ ರಹಸ್ಯಗಳ ನಿಪುಣರ, ಅಥವಾ ಅಧ್ಯಾತ್ಮ ರಹಸ್ಯ ಜ್ಞಾನ ವಾದದ ಬೋಧಕರೊಂದಿಗಿತ್ತು,” ಎಂದು ಅವರು ಪರಿಗಣಿಸುತ್ತಾರೆ. ಕ್ಯಾತಾರ್ ವಿಶ್ವಾಸದಲ್ಲಿ, ರಕ್ಷಣೆಯು ಅವಲಂಬಿತವಾಗಿದ್ದದ್ದು, ಯೇಸು ಕ್ರಿಸ್ತನ ಪ್ರಾಯಶ್ಚಿತ ಯಜ್ಞದ ಮೇಲಲ್ಲ, ಬದಲಿಗೆ ಕಾನ್ಸೊಲಾಮೆನ್ಟುಮ್, ಅಥವಾ ಪವಿತ್ರಾತ್ಮದೊಳಗಿನ ದೀಕ್ಷಾಸ್ನಾನದ ಮೇಲೆಯೇ. ಹಾಗೆ ಶುದ್ಧಗೊಳಿಸಲ್ಪಟ್ಟವರಿಗೆ, ಮರಣವು ಭೌತದ್ರವ್ಯದಿಂದ ಒಂದು ಬಿಡುಗಡೆಯನ್ನು ತರಲಿತ್ತು.
ಒಂದು ಅಪವಿತ್ರ ಧಾರ್ಮಿಕಯುದ್ಧ
ವೈದಿಕರ ಬಲಾತ್ಕಾರದ ತಗಾದೆಗಳಿಂದ ಮತ್ತು ವ್ಯಾಪಕ ಅಧೋಗತಿಯಿಂದ ಬಳಲಿದ ಸಾಮಾನ್ಯ ಜನರು, ಕ್ಯಾತರೈಗಳ ಜೀವನದ ರೀತಿಯಿಂದ ಆಕರ್ಷಿಸಲ್ಪಟ್ಟರು. ಪರಿಪೂರ್ಣರು ಕ್ಯಾಥೊಲಿಕ್ ಚರ್ಚನ್ನು ಮತ್ತು ಅದರ ಪುರೋಹಿತ ಪ್ರಭುತ್ವವನ್ನು ಪ್ರಕಟನೆ 3:9 ಮತ್ತು 17:5ರ “ಸೈತಾನನ ಸಮಾಜ” ಮತ್ತು “ಜಾರಸ್ತ್ರೀಯರಿಗೂ . . . ತಾಯಿ” ಎಂಬುದರೊಂದಿಗೆ ಗುರುತಿಸಿದರು. ದಕ್ಷಿಣ ಫ್ರಾನ್ಸಿನಲ್ಲಿ ಪರಿಶುದ್ಧತಾ ಸಿದ್ಧಾಂತವು ಸಮೃದ್ಧಗೊಳ್ಳುತ್ತಾ ಚರ್ಚನ್ನು ನಿರ್ಮೂಲಮಾಡುತ್ತಾ ಇತ್ತು. ಕ್ರೈಸ್ತರಾಗಿದ್ದೇವೆಂದು ಪ್ರತಿಪಾದಿಸುತ್ತಿದ್ದ ಜನರ ವಿರುದ್ಧವಾಗಿ ಕ್ರೈಸ್ತಪ್ರಪಂಚದೊಳಗೆ ಸಂಘಟಿಸಲ್ಪಟ್ಟಿದ್ದ ಆ್ಯಲ್ಬಿಜೆನ್ಸೀಸ್ ಧಾರ್ಮಿಕಯುದ್ಧವೆಂದೆನಿಸಿಕೊಂಡಿರುವ ಪ್ರಥಮ ಧಾರ್ಮಿಕಯುದ್ಧವನ್ನು ಹೂಡುವುದು ಮತ್ತು ಹಣಸಹಾಯವನ್ನು ನೀಡುವುದು, III ನೆಯ ಪೋಪ್ ಇನೊಸೆಂಟ್ನ ಪ್ರತಿಕ್ರಿಯೆಯಾಗಿತ್ತು.
ಯೂರೋಪಿನ ಕ್ಯಾಥೊಲಿಕ್ ಅರಸರನ್ನು, ಶ್ರೀಮಂತರನ್ನು, ಸಂಸ್ಥಾನಿಕರನ್ನು ಮತ್ತು ಶ್ರೀಮಂತ ವೀರರನ್ನು, ಪತ್ರಗಳ ಮತ್ತು ರಾಯಭಾರಿಗಳ ಮುಖಾಂತರ ಪೋಪ್ ಪೀಡಿಸಿದನು. “ಯಾವ ಪ್ರಕಾರದಿಂದಲೇ ಆಗಲಿ” ಪಾಷಂಡವಾದವನ್ನು ತೆಗೆದುಹಾಕಲು ಹೋರಾಡುವವರೆಲ್ಲರಿಗೆ, ಪಾಪಕ್ಷಮೆಗಳನ್ನು ಮತ್ತು ಲ್ಯಾಂಗ್ಡಾಕ್ನ ಸಂಪತ್ತನ್ನು ಅವನು ವಾಗ್ದಾನಿಸಿದನು. ಅವನ ಕರೆಯು ಕಿವಿಗೆ ಬೀಳದೆ ಹೋಗಲಿಲ್ಲ. ಕ್ಯಾಥೊಲಿಕ್ ಧರ್ಮಾಧ್ಯಕ್ಷರಿಂದ ಮತ್ತು ಸಂನ್ಯಾಸಿಗಳಿಂದ ನಡೆಸಲ್ಪಟ್ಟ, ಫ್ರಾನ್ಸ್, ಫ್ಲ್ಯಾಂಡರ್ಸ್, ಮತ್ತು ಜರ್ಮನಿಯ ಉತ್ತರದಿಂದ ಬಂದ ಧಾರ್ಮಿಕಯೋಧರ ಒಂದು ಅಸಮಂಜಸ ಮಿಶ್ರಣವು, ರೋನ್ ಕಣಿವೆಯ ಮುಖಾಂತರ ದಕ್ಷಿಣಕ್ಕೆ ಪಯಣಿಸಿತು.
ಬೇಸ್ಯೆ ಪಟ್ಟಣದ ನಾಶವು, ಲ್ಯಾಂಗ್ಡಾಕನ್ನು ಅಗ್ನಿ, ರಕ್ತಗಳ ಸ್ವೇಚ್ಛಾಚಾರದಿಂದ ನಾಶಮಾಡಿದ ಯುದ್ಧದ ಜಯದ ಆರಂಭವನ್ನು ಗುರುತಿಸಿತು. ಆ್ಯಲ್ಬಿ, ಕಾರ್ಕಸೋನ್, ಕಾಸ್ಟ್ರಸ್, ಫಾಯ್ಕ್ಸ್, ನಾರ್ಬಾನ್, ಟರ್ಮ್, ಮತ್ತು ಟುಲೂಸ್ ಎಲ್ಲವು ರಕ್ತಪಿಪಾಸಿ ಧಾರ್ಮಿಕಯೋಧರಿಗೆ ಬಲಿಬಿದ್ದವು. ಕಾಸೇ, ಮಿನರ್ವ್, ಮತ್ತು ಲಾವಾರ್ನಂಥ ಕ್ಯಾತಾರ್ ಪ್ರಬಲ ಸ್ಥಾನಗಳಲ್ಲಿ, ಸಾವಿರಾರು ಪರಿಪೂರ್ಣರು ಕಂಬದ ಮೇಲೆ ದಹಿಸಲ್ಪಟ್ಟರು. ಸಂನ್ಯಾಸಿ ಚರಿತ್ರ ಲೇಖಕನಾದ, ಪಿಯೆರ್ ಡೇ ವೋಡಸರ್ನೆಗನುಸಾರ, ಧಾರ್ಮಿಕಯೋಧರು ‘ತಮ್ಮ ಹೃದಯಗಳಲ್ಲಿ ಹರ್ಷದಿಂದ, ಪರಿಪೂರ್ಣರನ್ನು ಸಜೀವವಾಗಿ ದಹಿಸಿದರು.’ 1229 ರಲ್ಲಿ, ಕಲಹ ಮತ್ತು ವಿಧ್ವಂಸನದ 20 ವರ್ಷಗಳ ಅನಂತರ, ಲ್ಯಾಂಗ್ಡಾಕ್ ಫ್ರೆಂಚ್ ಆಳಿಕ್ವೆಯ ಕೆಳಗೆ ಬಂತು. ಆದರೆ ಸಂಹಾರವು ಇನ್ನೂ ಕೊನೆಗೊಂಡಿರಲಿಲ್ಲ.
ಮಠೀಯ ನ್ಯಾಯಸ್ಥಾನವು ಮಾರಕ ಪೆಟ್ಟನ್ನು ಹೊಡೆಯುತ್ತದೆ
1231 ರಲ್ಲಿ, ಸಶಸ್ತ್ರಸಜ್ಜಿತ ಹೋರಾಟಕ್ಕೆ ಬೆಂಬಲವನ್ನೀಯಲು ಪೋಪ್ ಗ್ರೆಗರಿ IX ಪೋಪ್ಗುರುವಿನ ನ್ಯಾಯಸ್ಥಾನವನ್ನು ಸ್ಥಾಪಿಸಿದನು.a ಈ ವಿಚಾರಣಾಧಿಕಾರ ವ್ಯವಸ್ಥೆಯ ಮೊದಲು ಬಹಿರಂಗ ಆಪಾದನೆಗಳ ಮತ್ತು ಬಲಾತ್ಕಾರದ ಮೇಲೆ, ಅನಂತರ ಯೋಜಿತ ಚಿತ್ರಹಿಂಸೆಯ ಮೇಲೆ ಆಧರಿತವಾಗಿತ್ತು. ಅದರ ಲಕ್ಷ್ಯವು, ಖಡ್ಗವು ಯಾವುದನ್ನು ನಾಶಮಾಡಲು ಅಸಮರ್ಥವಾಗಿತ್ತೋ, ಅದನ್ನು ಬುಡ ಸಮೇತ ಕಿತ್ತುಹಾಕುವುದಾಗಿತ್ತು. ಹೆಚ್ಚಾಗಿ ಡೊಮಿನಿಕನ್ ಮತ್ತು ಫ್ರಾನ್ಸಿಸ್ಕನ್ ಕ್ರೈಸ್ತ ಭಿಕ್ಷುಗಳಾಗಿದ್ದ ಮಠೀಯ ನ್ಯಾಯಸ್ಥಾನದ ನ್ಯಾಯಾಧಿಪತಿಗಳು, ಕೇವಲ ಪೋಪನಿಗೆ ಉತ್ತರದಾಯಿಗಳಾಗಿದ್ದರು. ದಹಿಸುವ ಮೂಲಕ ನೀಡಲ್ಪಡುವ ಮರಣವು ಪಾಷಂಡವಾದಕ್ಕೆ ಅಧಿಕಾರ ಸಹಜವಾದ ಶಿಕ್ಷೆಯಾಗಿತ್ತು. ಪಾಷಂಡ ವಿಚಾರಣಾಧಿಕಾರಿಗಳ ಧರ್ಮಾಂಧತೆ ಮತ್ತು ಪಾಶವೀಯತೆಯು ಎಷ್ಟಾಗಿತ್ತೆಂದರೆ, ಆ್ಯಲ್ಬಿ ಮತ್ತು ಟುಲೂಸ್ ಮತ್ತು ಇತರ ಸ್ಥಳಗಳಲ್ಲಿ ದಂಗೆಗಳೆದ್ದವು. ಆವಿನ್ಯೋನೆಯಲ್ಲಿ, ವಿಚಾರಣಾಧಿಕಾರಿ ನ್ಯಾಯಪೀಠದ ಎಲ್ಲ ಸದಸ್ಯರು ಸಾಮೂಹಿಕವಾಗಿ ಸಂಹರಿಸಲ್ಪಟ್ಟರು.
1244 ರಲ್ಲಿ ಹಲವಾರು ಪರಿಪೂರ್ಣರ ಅಂತಿಮ ಆಶ್ರಯಸ್ಥಾನವಾದ, ಮಾಂಟ್ಸೆಗೂರ್ವ್ನ ಬೆಟ್ಟ ದುರ್ಗದ ಶರಣಾಗುವಿಕೆಯು, ಪರಿಶುದ್ಧತಾ ಸಿದ್ಧಾಂತಕ್ಕೆ ಸಾವೇಟು ಹೊಡೆದಂತಿತ್ತು. ಕಂಬದ ಮೇಲಿನ ಒಂದು ಗುಂಪು ದಹನದಲ್ಲಿ ಸುಮಾರು 200 ಮಂದಿ ಪುರುಷರೂ ಸ್ತ್ರೀಯರೂ ಮರಣ ಹೊಂದಿದರು. ಅನೇಕ ವರ್ಷಗಳಲ್ಲಿ, ನ್ಯಾಯಸ್ಥಾನವು ಉಳಿದ ಕ್ಯಾತರೈಗಳನ್ನು ಬಯಲಿಗೆ ತಂದಿತು. 1330 ರಲ್ಲಿ ಕೊನೆಯ ಕ್ಯಾತಾರ್ ಲ್ಯಾಂಗ್ಡಾಕ್ನಲ್ಲಿ ಕಂಬದ ಮೇಲೆ ದಹಿಸಲ್ಪಟ್ಟನೆಂದು ಹೇಳಲಾಗುತ್ತದೆ. ಮೆಡಿವಿಯಲ್ ಹೆರೆಸಿ ಪುಸ್ತಕವು ಅವಲೋಕಿಸುವುದು: “ಪರಿಶುದ್ಧತಾ ಸಿದ್ಧಾಂತದ ಪತನವು ಮಠೀಯ ನ್ಯಾಯಸ್ಥಾನದ ಪ್ರಮುಖ ಕದನಲಾಂಛನವಾಗಿತ್ತು.”
ಕ್ಯಾತರೈಗಳು ನಿಶ್ಚಯವಾಗಿಯೂ ಸತ್ಕ್ರೈಸ್ತರಾಗಿರಲಿಲ್ಲ. ಆದರೆ ಕ್ಯಾಥೊಲಿಕ್ ಚರ್ಚಿನ ಕುರಿತಾದ ಅವರ ಟೀಕೆಯು, ಕ್ರೈಸ್ತರೆಂದು ಹೇಳಿಕೊಂಡವರಿಂದ ಅವರ ಕ್ರೂರ ಹುಟ್ಟಡಗಿಸುವಿಕೆಯನ್ನು ಸಮರ್ಥಿಸಿತೋ? ಅವರ ಕ್ಯಾಥೊಲಿಕ್ ಹಿಂಸಕರು ಮತ್ತು ಕೊಲೆಗಾರರು ದೇವರನ್ನು ಮತ್ತು ಕ್ರಿಸ್ತನನ್ನು ಅಗೌರವಿಸಿದರು ಹಾಗೂ ಅವರು ಹತ್ತಾರು ಸಾವಿರಾರು ಭಿನ್ನಮತೀಯರಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕವಾಗಿ ಸಂಹರಿಸಿದಾಗ ಸತ್ಯ ಕ್ರೈಸ್ತತ್ವವನ್ನು ತಪ್ಪಾಗಿ ನಿರೂಪಿಸಿದರು.
[ಅಧ್ಯಯನ ಪ್ರಶ್ನೆಗಳು]
a ಮಧ್ಯಯುಗದ ನ್ಯಾಯಸ್ಥಾನದ ಕುರಿತಾದ ಅಧಿಕ ವಿವರಗಳಿಗಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್ಕ್., ಇವರಿಂದ ಪ್ರಕಾಶಿಸಲ್ಪಟ್ಟ, ಎಪ್ರಿಲ್ 22, 1986ರ ಅವೇಕ್! ಪುಟಗಳು 20-3 ರಲ್ಲಿರುವ “ಭಯಹುಟ್ಟಿಸುವ ನ್ಯಾಯಸ್ಥಾನ” ವನ್ನು ನೋಡಿರಿ.
[ಪುಟ 28 ರಲ್ಲಿರುವ ಚೌಕ]
ವಾಲ್ಡೆನ್ಸೀಸ್
ಸಾ.ಶ. 12 ನೆಯ ಶತಮಾನದ ಅಂತ್ಯ ಸಮಯದಲ್ಲಿ, ಲಿಯಾನ್ಸ್ನ ಒಬ್ಬ ಶ್ರೀಮಂತ ವ್ಯಾಪಾರಿಯಾದ, ಪಿಯೆರ್ ವಾಲೆಸ್ಡ್, ಅಥವಾ ಪೀಟರ್ ವಾಲ್ಡೋ, ದಕ್ಷಿಣ ಮತ್ತು ಆಗ್ನೇಯ ಫ್ರಾನ್ಸಿನ ಪ್ರಾವನ್ಸಾಲ್ ಎಂಬ ದೇಶಭಾಷೆಯ ವಿವಿಧ ಸ್ಥಳಿಕ ಪ್ರಾಂತಭಾಷೆಗಳಲ್ಲಿ ಬೈಬಲಿನ ಭಾಗಗಳ ಪ್ರಥಮ ಭಾಷಾಂತರಗಳಿಗೆ ಹಣಸಹಾಯವನ್ನು ಮಾಡಿದನು. ಒಬ್ಬ ಪ್ರಾಮಾಣಿಕ ಕ್ಯಾಥೊಲಿಕನಾಗಿ, ಅವನು ತನ್ನ ವ್ಯಾಪಾರವನ್ನು ಬಿಟ್ಟುಬಿಟ್ಟು ಸುವಾರ್ತೆಯನ್ನು ಸಾರುವುದಕ್ಕೆ ತನ್ನನ್ನು ಸಮರ್ಪಿಸಿಕೊಂಡನು. ಭ್ರಷ್ಟ ವೈದಿಕರೊಂದಿಗೆ ಜುಗುಪ್ಸೆಗೊಂಡು, ಅನೇಕ ಇತರ ಕ್ಯಾಥೊಲಿಕರು ಅವನನ್ನು ಹಿಂಬಾಲಿಸಿದರು ಮತ್ತು ಸಂಚಾರೀ ಉಪದೇಶಕರಾಗಿ ಪರಿಣಮಿಸಿದರು.
ಅವನ ಸಾರ್ವಜನಿಕ ಸಾಕ್ಷಿಕಾರ್ಯವನ್ನು ನಿಷೇಧಿಸುವಂತೆ ಯಾರು ಪೋಪಿನ ಮನವೊಪ್ಪಿಸಿದರೋ, ಆ ಸ್ಥಳಿಕ ವೈದಿಕರಿಂದ ಶತ್ರುತ್ವವನ್ನು ವಾಲ್ಡೋ ಶೀಘ್ರದಲ್ಲಿ ಎದುರಿಸಿದನು. “ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗಿರತಕ್ಕದ್ದು,” ಎಂಬುದು ಅವನ ಉತ್ತರವಾಗಿತ್ತೆಂದು ಹೇಳಲಾಗುತ್ತದೆ. (ಅ. ಕೃತ್ಯಗಳು 5:29ನ್ನು ಹೋಲಿಸಿ.) ಅವನ ಪಟ್ಟುಹಿಡಿಯುವಿಕೆಯಿಂದಾಗಿ, ವಾಲ್ಡೋ ಬಹಿಷ್ಕರಿಸಲ್ಪಟ್ಟನು. ಜನರ ಮನೆಗಳಲ್ಲಿ ಇಬ್ಬಿಬ್ಬರಾಗಿ ಸಾರುತ್ತಾ, ಅವನ ಉದಾಹರಣೆಯನ್ನು ಅನುಸರಿಸಲು ಹುರುಪಿನಿಂದ ಹೆಣಗಿದ, ಅವನ ಹಿಂಬಾಲಕರು ವಾಲ್ಡೆನ್ಸೀಸ್ ಅಥವಾ ಲಿಯಾನ್ಸ್ನ ಬಡ ಪುರುಷರೆಂದು ಕರೆಯಲ್ಪಟ್ಟರು. ಇದು ದಕ್ಷಿಣ, ಮೂಡಲ ದಿಕ್ಕಿನ, ಮತ್ತು ಫ್ರಾನ್ಸಿನ ಉತ್ತರದ ಭಾಗಗಳಲ್ಲಿ, ಹಾಗೂ ಉತ್ತರ ಇಟಲಿಯಾದ್ಯಂತ ಅವರ ಬೋಧನೆಗಳ ವ್ಯಾಪಕ ಹರಡುವಿಕೆಯಲ್ಲಿ ಫಲಿಸಿತು.
ಹೆಚ್ಚಾಗಿ, ಅವರು ಆದಿ ಕ್ರೈಸ್ತತ್ವದ ನಂಬಿಕೆಗಳು ಮತ್ತು ಆಚಾರಗಳಿಗೆ ಹಿಂದಿರುಗುವ ಪಕ್ಷವಾಗಿ ವಾದಿಸಿದರು. ಇತರ ಬೋಧನೆಗಳಲ್ಲದೆ, ಪರ್ಗೆಟರಿ, ಮೃತರಾದವರಿಗಾಗಿ ಪ್ರಾರ್ಥನೆಗಳು, ಮರಿಯಳ ಆರಾಧನೆ, “ಸಂತರಿಗೆ” ಪ್ರಾರ್ಥನೆಗಳು, ಶಿಲುಬೆಯ ಪೂಜೆ, ಪಾಪಕ್ಷಮೆಗಳು, ಪ್ರಭು ಭೋಜನ ಸಂಸ್ಕಾರ, ಮತ್ತು ಶಿಶು ದೀಕ್ಷಾಸ್ನಾನವನ್ನು ಅವರು ಪ್ರತಿಭಟಿಸಿದರು.b
ಯಾರನ್ನು ಅನೇಕವೇಳೆ ಕ್ಯಾತರೈಗಳೆಂದು ತಪ್ಪಾಗಿ ಗ್ರಹಿಸಲಾಗುತ್ತದೆಯೋ, ಆ ಕ್ಯಾತರೈಗಳ ಕ್ರೈಸ್ತೇತರ ದ್ವೈತ್ಯದ ಬೋಧನೆಗಳೊಂದಿಗೆ ವಾಲ್ಡೆನ್ಸೀಸ್ನ ಬೋಧನೆಗಳು ಸ್ಫುಟವಾಗಿ ವೈದೃಶ್ಯವಾಗಿದ್ದವು. ಈ ತಪ್ಪು ಗ್ರಹಿಕೆಯು ಪ್ರಮುಖವಾಗಿ ಯಾರು ವಾಲ್ಡೆನ್ಸೀಯನ್ ಸಾರುವಿಕೆಯನ್ನು ಆಲ್ಬಿಜೆನ್ಸೀಸ್ನ ಅಥವಾ ಕ್ಯಾತರೈಗಳ ಬೋಧನೆಗಳೊಂದಿಗೆ ಗುರುತಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಪಟ್ಟರೋ, ಆ ಕ್ಯಾಥೊಲಿಕ್ ವಾದಚತುರರಿಂದಲೇ ಆಗಿದೆ.
[ಅಧ್ಯಯನ ಪ್ರಶ್ನೆಗಳು]
b ವಾಲ್ಡೆನ್ಸೀಸ್ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಆಗಸ್ಟ್ 1, 1981ರ ದ ವಾಚ್ಟವರ್, ಪುಟಗಳು 12-15 ರಲ್ಲಿರುವ “ವಾಲ್ಡೆನ್ಸೀಸ್—ಪಾಷಂಡವಾದಿಗಳೋ ಅಥವಾ ಸತ್ಯ-ಅನ್ವೇಷಕರೋ?” ಎಂಬ ಲೇಖನವನ್ನು ನೋಡಿರಿ.
[ಪುಟ 29 ರಲ್ಲಿರುವ ಚಿತ್ರ]
ಎಲ್ಲಿ ಧಾರ್ಮಿಕಯೋಧರು 20,000 ಪುರುಷರನ್ನು, ಸ್ತ್ರೀಯರನ್ನು, ಮತ್ತು ಮಕ್ಕಳನ್ನು ಸಾಮೂಹಿಕವಾಗಿ ಸಂಹರಿಸಿದರೋ, ಆ ಬೇಸ್ಯೆಯಲ್ಲಿರುವ ಸೆಂಟ್ ಮೇರಿ ಮ್ಯಾಗಲ್ದಿನ್ ಚರ್ಚಿನಲ್ಲಿ ಏಳು ಸಾವಿರ ಮಂದಿ ಮೃತರಾದರು