ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 10/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಧೂಮಪಾನದಿಂದಾಗುವ ಹಾನಿ ಸರಿಪಡಿಸಲಾಗದ್ದೋ?
  • ಒತ್ತಡವು ಕಾರ್‌ ಅಪಘಾತಗಳನ್ನು ಹೆಚ್ಚಿಸುತ್ತದೆ
  • ಲೋಕಾರೋಗ್ಯ ಸಂಕಟಗಳು
  • ಮಕ್ಕಳ ದುಃಸ್ವಪ್ನ ಸರ್ವಸಾಮಾನ್ಯ
  • ಹೆಚ್ಚು ಟಿವಿ, ಕಡಿಮೆ ಓದುವಿಕೆ
  • ವೃದ್ಧರಿಗೆ ಸಂಪೂರ್ಣ ಪೋಷಣೆಯು ಸಿಗುತ್ತಿಲ್ಲ
  • ಬೈಬಲ್‌ 2,197 ಭಾಷೆಗಳಲ್ಲಿ ಲಭ್ಯವಿದೆ
  • ಕಾರ್ನಿವಲ್‌ ಆಚರಣೆಗಳು ಸರಿಯೊ ತಪ್ಪೊ?
    ಎಚ್ಚರ!—1996
  • ಲಾಟರಿಗಳು ಅಷ್ಟು ಜನಪ್ರಿಯವೇಕೆ?
    ಎಚ್ಚರ!—1992
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
  • ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧ
    ಎಚ್ಚರ!—1999
ಇನ್ನಷ್ಟು
ಎಚ್ಚರ!—1998
g98 10/8 ಪು. 28-29

ಜಗತ್ತನ್ನು ಗಮನಿಸುವುದು

ಧೂಮಪಾನದಿಂದಾಗುವ ಹಾನಿ ಸರಿಪಡಿಸಲಾಗದ್ದೋ?

ಅಪಧಮನಿಗಳಿಗೆ ಧೂಮಪಾನದಿಂದಾಗುವ ಹಾನಿಯು ಶಾಶ್ವತವಾಗಿರಬಹುದು ಎಂದು ಇತ್ತೀಚಿನ ಒಂದು ಅಧ್ಯಯನವು ಹೇಳುತ್ತದೆ. ದ ಜರ್ನಲ್‌ ಆಫ್‌ ದ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಪತ್ರಿಕೆಯಲ್ಲಿ, ಸಿಗರೇಟ್‌ ಸೇದುವುದು ಮತ್ತು ಅದರ ಹೊಗೆಗೆ ಒಡ್ಡಲ್ಪಡುವುದು, ಅಪಧಮನಿಗಳಿಗೆ ಸರಿಪಡಿಸಲಾಗದಂತಹ ರೀತಿಯಲ್ಲಿ ಹಾನಿಯನ್ನು ಉಂಟುಮಾಡಸಾಧ್ಯವಿದೆ ಎಂದು ಸಂಶೋಧಕರು ವರದಿಸಿದರು. 45ರಿಂದ 65 ವಯಸ್ಸಿನವರ ನಡುವಿನ 10,914 ಸ್ತ್ರೀಪುರಷರನ್ನು ಆ ಅಧ್ಯಯನವು ಒಳಗೊಂಡಿತು. ಧೂಮಪಾನಿಗಳು, ಹಿಂದೆ ಧೂಮಪಾನಮಾಡುತ್ತಿದ್ದವರು, ಧೂಮಪಾನಮಾಡದ ಆದರೆ ಧೂಮಪಾನದ ಹೊಗೆಗೆ ಕ್ರಮವಾಗಿ ಒಡ್ಡಲ್ಪಟ್ಟವರು ಮತ್ತು ಧೂಮಪಾನಮಾಡದ ಆದರೆ ಧೂಮಪಾನದ ಹೊಗೆಗೆ ಯಾವಾಗಲಾದರೊಮ್ಮೆ ಒಡ್ಡಲ್ಪಟ್ಟವರನ್ನು ಆ ಗುಂಪು ಒಳಗೊಂಡಿತು. ಕತ್ತಿನಲ್ಲಿರುವ ಶೀರ್ಷಧಮನಿಯ ದಪ್ಪವನ್ನು ಅಳತೆಮಾಡಲು ಸಂಶೋಧಕರು ಅಲ್ಟ್ರಾಸೌಂಡನ್ನು ಉಪಯೋಗಿಸಿದರು. ಈ ಅಳತೆಗಳ ಕಾರ್ಯವಿಧಾನವು ಮೂರು ವರ್ಷಗಳ ಅನಂತರ ಪುನರಾವರ್ತಿಸಲಾಯಿತು.

ನಿರೀಕ್ಷಿಸಿದಂತೆ, ಕ್ರಮವಾಗಿ ಧೂಮಪಾನಮಾಡುವವರ ಅಪಧಮನಿಗಳ ಗಡುಸಾಗುವಿಕೆಯಲ್ಲಿ ತುಂಬ ಹೆಚ್ಚಳವಿತ್ತು—33 ವರ್ಷಗಳ ವರಗೆ ಪ್ರತಿ ದಿನ ಒಂದು ಪ್ಯಾಕ್‌ ಸಿಗರೇಟುಗಳನ್ನು ಸೇದಿದ್ದ ವ್ಯಕ್ತಿಗಳ ವಿದ್ಯಮಾನದಲ್ಲಿ ಸರಾಸರಿ 50 ಪ್ರತಿಶತ ಹೆಚ್ಚಳವಿತ್ತು. ಹಿಂದೆ ಧೂಮಪಾನಮಾಡುತ್ತಿದ್ದವರ ಅಪಧಮನಿಗಳು ಸಹ, ಧೂಮಪಾನಮಾಡದವರಿಗಿಂತಲೂ ಹೆಚ್ಚು ಶೀಘ್ರವಾಗಿ ಶೇಕಡ 25ರಷ್ಟು ಪ್ರಮಾಣದಲ್ಲಿ—ಕೆಲವರಿಗೆ ಸೇದುವುದನ್ನು ನಿಲ್ಲಿಸಿದ 20 ವರ್ಷಗಳ ಅನಂತರವೂ—ಸಂಕುಚಿತಗೊಂಡಿದ್ದವು. ಧೂಮಪಾನಮಾಡದವರು ಆದರೆ ಧೂಮಪಾನದ ಹೊಗೆಗೆ ಒಡ್ಡಲ್ಪಟ್ಟಿದ್ದವರ ಅಪಧಮನಿಗಳು ಒಡ್ಡಲ್ಪಡದವರಿಗಿಂತ ಶೇಕಡ 20ರಷ್ಟು ಹೆಚ್ಚು ಗಡುಸಾಗುವಿಕೆಯನ್ನು ತೋರಿಸಿತು. ಒಂದು ಅಧ್ಯಯನಕ್ಕನುಸಾರ, ಅಮೆರಿಕವೊಂದರಲ್ಲೇ ಪ್ರತಿ ವರ್ಷ ಅಂದಾಜುಮಾಡಲ್ಪಟ್ಟ 30,000ದಿಂದ 60,000ದ ವರೆಗಿನ ಮರಣಗಳು, ಧೂಮಪಾನದ ಹೊಗೆಗೆ ಒಡ್ಡಲ್ಪಟ್ಟ ಕಾರಣದಿಂದಾಗಿಯೇ ಎಂದು ಹೇಳಸಾಧ್ಯವಿದೆ.

ಒತ್ತಡವು ಕಾರ್‌ ಅಪಘಾತಗಳನ್ನು ಹೆಚ್ಚಿಸುತ್ತದೆ

ವ್ಯಕ್ತಿಯೊಬ್ಬನಿಗೆ ತನ್ನ ಕೆಲಸದ ಕಡೆಗಿರುವ ಮನೋಭಾವವು, ಅವನು ಕಾರನ್ನು ಚಲಾಯಿಸುತ್ತಿರುವಾಗ ಅವನ ನಡವಳಿಕೆಯ ಮೇಲೆ ಅತ್ಯಧಿಕ ಪ್ರಭಾವವನ್ನು ಬೀರುತ್ತದೆಯೆಂದು, ಜರ್ಮನಿಯ ಆರೋಗ್ಯ ಸೇವೆ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ವೃತ್ತಿಪರ ಒಕ್ಕೂಟದಿಂದ ನಡೆಸಲ್ಪಟ್ಟ ಅಧ್ಯಯನವೊಂದು ಹೇಳುತ್ತದೆ. ತಮ್ಮ ಕೆಲಸದಿಂದ ಒತ್ತಡಕ್ಕೊಳಗಾದವರು, ರಸ್ತೆ ಅಪಘಾತಕ್ಕೀಡಾಗುವುದು ತೀರ ಹೆಚ್ಚಾಗಿರುತ್ತದೆ ಎಂದು ಸ್ಯುಯೆಟ್‌ಡೈಚಿ ಟ್ಸೀಟಂಗ್‌ ವರದಿಸಿತು. “ಬಾಸ್‌ನ ಅಥವಾ ಸಹೋದ್ಯೋಗಿಗಳ ಕುರಿತಾಗಿ ಅದುಮಿಡಲ್ಪಟ್ಟ ಹತಾಶೆಯು, ವಾಹನವನ್ನು ಚಲಾಯಿಸುತ್ತಿರುವಾಗ ಗಮನವನ್ನು ಕೊಡುವುದಕ್ಕೆ ಕಷ್ಟವಾಗುವಂತೆ ಮಾಡುತ್ತದೆ” ಎಂದು ಆ ವರದಿಯು ಹೇಳುತ್ತದೆ. ಅಧ್ಯಯನದಲ್ಲಿ, ಕೆಲಸಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಅಥವಾ ಕೆಲಸದಿಂದ ಬರುವಾಗ ರಸ್ತೆ ಅಪಘಾತಕ್ಕೀಡಾದ ಶೇಕಡ 75ರಷ್ಟು ಜನರು, “ಗಮನಕೊಡುವುದರಲ್ಲಿ ಕೊರತೆ, ತುಂಬ ವೇಗ, ಸಮಯ ಅಥವಾ ಒತ್ತಡಕ್ಕಾಗಿ ಕಟ್ಟುಬಿದ್ದದ್ದರ” ಮೇಲೆ ಆರೋಪವನ್ನು ಹೊರಿಸಿದರು. ತುಂಬ ಒತ್ತಡದ ಕೆಳಗಿರುವಾಗ ಹೆಚ್ಚಾಗಿ ಪುರಷರು ಅಪಘಾತಕ್ಕೀಡಾಗುವ ಸಂಭವನೀಯತೆ ಇರುವುದಾದರೂ, ಯುವ ಮಕ್ಕಳಿರುವ ತಾಯಂದಿರು ಸಹ ವಿಶೇಷವಾಗಿ ಗಂಡಾಂತರದಲ್ಲಿದ್ದಾರೆ ಎಂಬುದನ್ನು ಆ ಅಧ್ಯಯನವು ತಿಳಿಸಿತು. ವಾರ್ತಾಪತ್ರಿಕೆಯು ಗಮನಿಸುವುದು: “ಕಿಂಡರ್‌ಗಾರ್ಟನ್‌ನಿಂದ ಮಕ್ಕಳನ್ನು ಕರೆದುಕೊಂಡು ಬರಬೇಕಾಗಿರುವುದರಿಂದ ಅಥವಾ ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ಅಡುಗೆ ಮಾಡಬೇಕಾಗಿರುವುದರಿಂದ, ಅವರು ಅನೇಕ ವೇಳೆ ತುಂಬ ಒತ್ತಡಕ್ಕೊಳಗಾಗಿರುತ್ತಾರೆ.”

ಲೋಕಾರೋಗ್ಯ ಸಂಕಟಗಳು

“ನಾವು 21ನೇ ಶತಮಾನವನ್ನು ಪ್ರವೇಶಿಸಿದಂತೆ, ಲೋಕದಾದ್ಯಂತದ ಮರಣಕ್ಕೆ ಶೇಕಡ 33ರಷ್ಟು, ಸಾಂಕ್ರಾಮಿಕ ರೋಗಗಳು ಕಾರಣವಾಗಿರುವುದನ್ನು ನಾವು ಇನ್ನೂ ಕಾಣುತ್ತೇವೆ” ಎಂದು ಲೋಕಾರೋಗ್ಯ ಸಂಸ್ಥೆಯ ಡಾ. ಡೇವಿಡ್‌ ಹೇಮನ್‌ ಹೇಳುತ್ತಾರೆ. ಅನೇಕ ಅಂಶಗಳು ಈ ಸಮಸ್ಯೆಗೆ ಕೂಡಿಸುತ್ತವೆ. ದ ಜರ್ನಲ್‌ ಆಫ್‌ ದ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಹೇಳುವುದು, ಜನಸಂಖ್ಯಾ ವೃದ್ಧಿ, ಲಸಿಕೆ ಹಾಕುವಿಕೆಯ ಕಾರ್ಯಕ್ರಮಗಳ ವಿಫಲತೆ, ಜನರ ಕಿಕ್ಕಿರಿದು ತುಂಬಿರುವಿಕೆ, ಪರಿಸರೀಯ ಬದಲಾವಣೆಗಳು ಮತ್ತು ಲೋಕದಾದ್ಯಂತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕ್ಷೀಣಿಸುವಿಕೆ ಇವೆಲ್ಲವೂ ಇದಕ್ಕೆ ಕಾರಣವಾಗಿವೆ. ವಲಸೆಹೋಗುವಿಕೆ, ನಿರಾಶ್ರಿತರು, ಮತ್ತು ಭೌಗೋಲಿಕ ಪ್ರಯಾಣದಲ್ಲಿನ ಹೆಚ್ಚಳದಂತಹ ಇತರ ಅಂಶಗಳು, ಹೀಗೆ ಇವೆಲ್ಲವೂ ಸಾಂಕ್ರಾಮಿಕ ರೋಗಗಳು ಹರಡುವಂತೆ ಸಹಾಯಮಾಡಿವೆ. “ಸಾಂಕ್ರಾಮಿಕ ರೋಗಗಳನ್ನು ವಾಸ್ತವದಲ್ಲಿ ತಡೆಗಟ್ಟಸಾಧ್ಯವಿದೆ ಮತ್ತು ಈ ರೋಗಗಳೊಂದಿಗೆ ಹೋರಾಡಲು ಅಥವಾ ಅದನ್ನು ನಿರ್ಮೂಲಗೊಳಿಸಲು ಔಷಧಗಳು ಲಭ್ಯವಿವೆ” ಎಂದು ಡಾ. ಹೇಮನ್‌ ಹೇಳುತ್ತಾರೆ.

ಮಕ್ಕಳ ದುಃಸ್ವಪ್ನ ಸರ್ವಸಾಮಾನ್ಯ

ಭಯಂಕರ ಸ್ವಪ್ನಗಳು ಹೆಚ್ಚುಕಡಿಮೆ ಎಲ್ಲ ಮಕ್ಕಳನ್ನು ಬಾಧಿಸುತ್ತವೆ. ಜರ್ಮನಿಯ, ಮಾನ್‌ಹೀಮ್‌ನಲ್ಲಿರುವ ಮಾನಸಿಕ ಆರೋಗ್ಯದ ಕೇಂದ್ರ ಸಂಸ್ಥೆಯಿಂದ ಮಾಡಲ್ಪಟ್ಟ ಒಂದು ಅಧ್ಯಯನಕ್ಕನುಸಾರ, 10 ಮಕ್ಕಳಲ್ಲಿ 9 ಮಕ್ಕಳು ಸ್ವಪ್ನಗಳಿಂದ ಎಚ್ಚರವಾಗುವುದನ್ನು ಜ್ಞಾಪಿಸಿಕೊಳ್ಳುತ್ತಾರೆ. ಸರ್ವಸಾಮಾನ್ಯವಾದ ದುಃಸ್ವಪ್ನಗಳು, ಯಾರೋ ಬೆನ್ನಟ್ಟುತ್ತಿರುವಂತೆ, ಎತ್ತರವಾದ ಸ್ಥಳಗಳಿಂದ ಕೆಳಗೆ ಬೀಳುತ್ತಿರುವಂತೆ, ಅಥವಾ ಯುದ್ಧ ಇಲ್ಲವೇ ನೈಸರ್ಗಿಕ ವಿಪತ್ತಿನಿಂದ ಬಾಧಿಸಲ್ಪಟ್ಟಿರುವಂತಹದ್ದನ್ನು ಒಳಗೂಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಂಥ ಸ್ವಪ್ನಗಳು, ಭ್ರಾಂತಿ ಮತ್ತು ವಾಸ್ತವಿಕ ಲೋಕದ ಅಂಶಗಳ ಮಿಶ್ರಣವಾಗಿವೆ. ಸಾಮಾನ್ಯವಾಗಿ ಹುಡುಗರು ಸ್ವಪ್ನಗಳನ್ನು ಮರೆತುಬಿಡುತ್ತಾರೆ. ಹುಡುಗಿಯರಾದರೋ, ಸ್ವಪ್ನಗಳ ಬಗ್ಗೆ ಮಾತಾಡುತ್ತಾರೆ ಅಥವಾ ಅದನ್ನು ಬರೆದಿಡುತ್ತಾರೆ. ದುಃಸ್ವಪ್ನಗಳಿಂದ ಆಗುವ ಯಾವುದೇ ಚಿಂತೆಯನ್ನು ಹೊಡೆದೋಡಿಸಲು, ಮಕ್ಕಳು, ತಾವು ಕಂಡಂತಹ ಸ್ವಪ್ನಗಳ ಕುರಿತು ಮಾತಾಡಬೇಕು, ಅದರ ಒಂದು ಚಿತ್ರವನ್ನು ಬರೆಯಬೇಕು ಅಥವಾ ಅದರಿಂದ ಒಂದು ಪಾತ್ರವನ್ನು ಅಭಿನಯಿಸಬೇಕು ಎಂದು ವಿಶೇಷಜ್ಞರು ಸಲಹೆನೀಡುತ್ತಾರೆ ಎಂಬುದಾಗಿ ಬರ್ಲಿನರ್‌ ಟ್ಸೀಟಂಗ್‌ ವರದಿಸುತ್ತದೆ. ಈ ಸಲಹೆಗಳು ಅನುಸರಿಸಲ್ಪಡುವಲ್ಲಿ, ಕೆಲವೊಂದು ವಾರಗಳೊಳಗೆ ಅಂಥ ರೀತಿಯ ಸ್ವಪ್ನಗಳು ಸಾಮಾನ್ಯವಾಗಿ ಕಡಿಮೆಯಾಗಬಹುದು ಮತ್ತು ಇನ್ನು ಮುಂದೆ ಅದು ಭಯಹುಟ್ಟಿಸುವಂತಹದ್ದು ಆಗಿರಲಾರದು.

ಹೆಚ್ಚು ಟಿವಿ, ಕಡಿಮೆ ಓದುವಿಕೆ

ಗ್ರೀಸಿನ ವಾಕ್‌ಶ್ರವಣ ಮಾಧ್ಯಮ ಸಂಸ್ಥೆಯಿಂದ ಮಾಡಲ್ಪಟ್ಟ ಒಂದು ಸಮೀಕ್ಷೆಗನುಸಾರ, ಆ ದೇಶದಲ್ಲಿರುವ 35 ಲಕ್ಷ ಮನೆಗಳಲ್ಲಿ 38 ಲಕ್ಷ ಟಿವಿಗಳಿವೆ. ಪ್ರತಿ 3 ಮನೆಗಳಲ್ಲಿ, ಒಂದು ಮನೆಯಲ್ಲಿ ವಿಡಿಯೋಕ್ಯಾಸೆಟ್ಟು ರೆಕಾರ್ಡರು ಸಹ ಇದೆ. ದಿನಾಲೂ ಗ್ರೀಕರು ಟಿವಿ ವೀಕ್ಷಿಸುವ ಸರಾಸರಿ ಸಮಯವು, 1996ರಲ್ಲಿ ಹೆಚ್ಚುಕಡಿಮೆ ನಾಲ್ಕು ತಾಸುಗಳಾಗಿದ್ದವು. ಇದನ್ನು ಹೋಲಿಸುವಾಗ 1990ರಲ್ಲಿ, ಎರಡೂವರೆ ತಾಸುಗಳಿಗಿಂತ ಕಡಿಮೆ ಸಮಯ ವೀಕ್ಷಿಸುತ್ತಿದ್ದರು ಎಂದು ಅಥೇನಿನ ವಾರ್ತಾಪತ್ರಿಕೆಯಾದ ಟಾ ವೀಮ ವರದಿಸಿತು. 1989ರಲ್ಲಿ ಗ್ರೀಕರು ಸರಾಸರಿ 42.2 ವಾರ್ತಾಪತ್ರಿಕೆಗಳನ್ನು ಓದಿದರು. ಆದರೆ 1995ರಲ್ಲಿ ಆ ಸಂಖ್ಯೆಯು 28.3ಕ್ಕೆ ಇಳಿಯಿತು ಎಂದು ಆ ಸಮೀಕ್ಷೆಯು ಪ್ರಕಟಿಸಿತು. ತದ್ರೀತಿಯಲ್ಲಿ, ಅದೇ ಸಮಯಾವಧಿಯಲ್ಲಿ ಪತ್ರಿಕೆಯನ್ನು ಓದುವುದು ಶೇಕಡ 10ಕ್ಕೆ ಇಳಿಯಿತು.

ವೃದ್ಧರಿಗೆ ಸಂಪೂರ್ಣ ಪೋಷಣೆಯು ಸಿಗುತ್ತಿಲ್ಲ

“ವೃದ್ಧರು ಅನೇಕ ವೇಳೆ ಸಾಕಷ್ಟು ತಿನ್ನುವುದಿಲ್ಲವಾದುದರಿಂದ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ” ಎಂದು ಜರ್ಮನಿಯ ಫ್ರಾಂಕ್‌ಫರ್ಟ್‌ನ ನಾಸ್ಯುಯಿಶಿ ನೊಯಿ ಪ್ರೆಸೆ ವರದಿಸುತ್ತದೆ. ಹತ್ತು ಐರೋಪ್ಯ ದೇಶಗಳಲ್ಲಿ 70ಕ್ಕಿಂತ ಹೆಚ್ಚು ವಯಸ್ಸಾಗಿರುವ 2,500ಕ್ಕಿಂತಲೂ ಹೆಚ್ಚಿನ ಸ್ತ್ರೀಪುರುಷರನ್ನು ಸಮೀಕ್ಷೆಮಾಡಿದ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು. ವೃದ್ಧರಿಗೆ ಸ್ವಲ್ಪವೇ ಆಹಾರವು ಸಾಕೆಂದು ಅನೇಕರು ನೆನಸುತ್ತಾರೆ, ಆದರೆ ತುಂಬ ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರಿಂದ ನಿರೋಧಕವು ದುರ್ಬಲಗೊಳ್ಳುತ್ತದೆ. ಅಷ್ಟುಮಾತ್ರವಲ್ಲದೆ, ವೃದ್ಧರು ಸೇವಿಸುವ ಆಹಾರಗಳು ಅಷ್ಟೇನೂ ಪೌಷ್ಟಿಕವಾಗಿರುವುದಿಲ್ಲ, ಏಕೆಂದರೆ ಆಹಾರವು ಮೊದಲೇ ತಯಾರುಮಾಡಲ್ಪಟ್ಟು, ಅದನ್ನು ತುಂಬ ಸಮಯದ ತನಕ ಇಡಲಾಗುತ್ತದೆ. ಇದಕ್ಕೆ ಕೂಡಿಸಿ, ಅನೇಕರು ತುಂಬ ಕಡಿಮೆ ತಾಜಾ ಹಣ್ಣುಹಂಪಲು ಮತ್ತು ಕಾಯಿಪಲ್ಯಗಳನ್ನು ತಿನ್ನುತ್ತಾರೆ. ವಿಶೇಷವಾಗಿ ಇವುಗಳು ಸಿಗದೇ ಇದ್ದಾಗ. ವೃದ್ಧ ರೋಗಿಗಳಿಗೆ “ಚೆನ್ನಾಗಿ ಕ್ರಮವಾಗಿ ತಿನ್ನುವಂತೆ” ವೈದ್ಯರು ಜ್ಞಾಪಿಸಬೇಕೆಂದು ಆ ಅಧ್ಯಯನವು ಮುಕ್ತಾಯಗೊಳಿಸಿತು. ಶಾರೀರಿಕ ಪ್ರಯಾಸವು ಹಸಿವನ್ನು ಹೆಚ್ಚಿಸುವುದರಿಂದ, ಹೆಚ್ಚು ವ್ಯಾಯಾಮ ತರಬೇತಿಯನ್ನು ವೃದ್ಧರಿಗೆ ನೀಡಬೇಕೆಂದು ಸಹ ಅದು ಶಿಫಾರಸ್ಸುಮಾಡಿತು.

ಬೈಬಲ್‌ 2,197 ಭಾಷೆಗಳಲ್ಲಿ ಲಭ್ಯವಿದೆ

“ಕಳೆದ ವರ್ಷ ಇನ್ನೂ 30 ಭಾಷೆಗಳಲ್ಲಿ ಬೈಬಲಿನ ಕೆಲವು ಭಾಗಗಳನ್ನು ಭಾಷಾಂತರಿಸಲಾಯಿತು. ಇದು ಶಾಸ್ತ್ರವಚನಗಳು ಒಟ್ಟು 2,197 ಭಾಷೆಗಳಲ್ಲಿ ಲಭ್ಯವಿವೆ” ಎಂದು ಸ್ವಿಟ್ಸರ್ಲೆಂಡಿನ ಜನೀವದ ಇಎನ್‌ಐ ಬುಲೆಟಿನ್‌ ವರದಿಸುತ್ತದೆ. ಎಸ್‌ಪ್ರ್ಯಾಂಟೋನಂಥ ರಚಿಸಲ್ಪಟ್ಟ ಭಾಷೆಗಳನ್ನು ಸೇರಿಸಿ, ಇಡೀ ಬೈಬಲು ಈಗ 363 ಭಾಷೆಗಳಲ್ಲಿ ಲಭ್ಯವಿದೆ. ಯುನೈಟೆಡ್‌ ಬೈಬಲ್‌ ಸೊಸೈಟಿಗಳು (ಯುಬಿಎಸ್‌) ಭಾಷೆಗಳ ಲೆಕ್ಕವನ್ನು ಇಟ್ಟುಕೊಳ್ಳುತ್ತವೆ. ಇದರಲ್ಲಿ ಕಡಿಮೆಪಕ್ಷ ಬೈಬಲಿನ ಒಂದು ಪುಸ್ತಕವು ಪ್ರಕಾಶಿಸಲ್ಪಟ್ಟಿದೆ. “ದೇವರ ವಾಕ್ಯವನ್ನು ಜನರ ಮಾತೃಭಾಷೆಯಲ್ಲಿ ಲಭ್ಯಗೊಳಿಸುವಂತೆ” ಮಾಡುವ ಗುರಿಯಿದೆ ಎಂದು, ಯುಬಿಎಸ್‌ ಜೆನೆರಲ್‌ ಸೆಕ್ರಿಟರಿಯಾದ ಫೆರ್ಗಸ್‌ ಮ್ಯಾಕ್‌ಡೊನಾಲ್ಡ್‌ ಹೇಳಿದರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ