ನಮ್ಮ ವಾಚಕರಿಂದ
ಟ್ರೂಬಡೋರರು “ಟ್ರೂಬಡೋರರು—ಕೇವಲ ಪ್ರೇಮ ಗೀತೆಗಳ ಗಾಯಕರಲ್ಲ” (ಮಾರ್ಚ್ 8, 1998) ಎಂಬ ಲೇಖನವು, ಮಧ್ಯಯುಗದ ಸಮಾಜದಲ್ಲಿ ಈ ಗಾಯಕ-ಕವಿಗಳ ಪಾತ್ರದ ಕೌಶಲಭರಿತ ವಿಶ್ಲೇಷಣೆಯಾಗಿತ್ತು. ಸಾಹಿತ್ಯದ ಶಿಕ್ಷಕಿಯಾಗಿರುವ ನಾನು, ಪೋರ್ಚುಗೀಸ್ ಟ್ರೂಬಡೋರರ ಕುರಿತು ಅಭ್ಯಾಸಮಾಡಿದ್ದೇನೆ, ಹಾಗೂ ಈ ಕಲಾಸೌಂದರ್ಯವುಳ್ಳ ಚಟುವಟಿಕೆಯ ವಿಷಯವನ್ನು ಸವಿಸ್ತಾರವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಲೇಖನವು ನನಗೆ ಸಹಾಯ ಮಾಡಿದೆ. ಈ ರೀತಿಯ ಲೇಖನಗಳಿಂದಾಗಿ ನಿಮ್ಮ ಪತ್ರಿಕೆಯು ಜನರ ಮೆಚ್ಚುಗೆಯನ್ನು ಪಡೆಯುತ್ತದೆ.
ಆರ್. ಎನ್. ಏ., ಬ್ರೆಸಿಲ್
ನಾನು ಈ ಲೇಖನವನ್ನು ಓದಲು ಮನಸ್ಸುಮಾಡಬೇಕಿತ್ತು ಅಷ್ಟೇ, ಆದರೆ ನಾನು ಇದನ್ನು ಓದಲು ಆರಂಭಿಸಿದ ಕೂಡಲೆ, ಇದು ನನ್ನ ಆಸಕ್ತಿಯನ್ನು ಸೆರೆಹಿಡಿಯಿತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ವಿಶೇಷವಾಗಿ, “ಸ್ತ್ರೀಯರು ಮೊದಲು” ಎಂಬ ಪದ್ಧತಿಯನ್ನು ಯಾರು ಪರಿಚಯಿಸಿರಬಹುದು ಎಂಬುದನ್ನು ತಿಳಿದು ನಾನು ಸಂತೋಷಗೊಂಡಿದ್ದೆ. ಜಪಾನಿನಲ್ಲಿ “ಸ್ತ್ರೀಯರು ಮೊದಲು” ಎಂಬ ಪದ್ಧತಿಯಿಲ್ಲ, ಆದರೆ ನನ್ನ ಪತಿ ಚಿಕ್ಕ ಪ್ರಾಯದಿಂದಲೂ ಒಬ್ಬ ಯೆಹೋವನ ಸಾಕ್ಷಿಯಾಗಿ ಬೆಳೆಸಲ್ಪಟ್ಟಿರುವುದರಿಂದ, ನಾವು ವಿವಾಹನಿಶ್ಚಯ ಮಾಡಿಕೊಂಡ ಸಮಯದಿಂದಲೂ ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. (ಈಗ ನಮ್ಮ ಮದುವೆಯಾಗಿ ಐದನೆಯ ವರ್ಷ ನಡೆಯುತ್ತಿದೆ.) ನಾನು ತುಂಬ ಸಂತೋಷದಿಂದಿದ್ದೇನೆ.
ವೈ. ಎನ್., ಜಪಾನ್
ತಾಯಿ ಮತ್ತು ಮಗನ ಪುನರ್ಮಿಲನ “ಒಂದು ಅಪೂರ್ವವಾದ ಪುನರ್ಮಿಲನ” (ಮಾರ್ಚ್ 8 1998) ಎಂಬ ಲೇಖನದಿಂದ ನಾನು ತುಂಬ ಪ್ರಭಾವಿತಳಾದೆ. ನನಗಾದರೋ ನನ್ನ ಮೂಲದ ಕುರಿತು ತಿಳಿದುಕೊಂಡದ್ದು, ಭಾವನಾತ್ಮಕವಾಗಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿತು. ನನ್ನ ತಾಯಿ ಹಾಗೂ ತಂದೆಯವರು ಎಂದೂ ವಿವಾಹವಾಗಿರಲಿಲ್ಲ. ಕೆಲವೊಮ್ಮೆ ನಾನು ನನ್ನ ತಂದೆಯ ಕುರಿತು ತಿಳಿಯಲು ಕುತೂಹಲ ವ್ಯಕ್ತಪಡಿಸುತ್ತಿದ್ದೆ, ಆದರೆ ನನ್ನ ಪ್ರಶ್ನೆಗಳಿಗೆ ಚುಟುಕಾದ ಉತ್ತರ ಮಾತ್ರ ಸಿಗುತ್ತಿತ್ತು. ಸ್ವಲ್ಪ ಸಮಯಾನಂತರ, ನನ್ನ ತಂದೆಯ ಸಂಪೂರ್ಣ ಹೆಸರು ಏನೆಂದು ನನ್ನ ತಾಯಿಯನ್ನು ನಾನು ಕೇಳಿದೆ. ಒಂದು ಟೆಲಿಫೋನ್ ಡೈರೆಕ್ಟರಿಯನ್ನು ಉಪಯೋಗಿಸಿ, ನನ್ನ ತಂದೆಯ ತಂಗಿಯ ವಿಳಾಸವನ್ನು ಪತ್ತೆಹಚ್ಚಿದೆ. ಅವರು ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾರೆಂಬುದನ್ನು ಕೇಳಿ ನನಗೆ ಅತ್ಯಾಶ್ಚರ್ಯವಾಯಿತು! 1980ರಲ್ಲಿ ನಿನ್ನ ತಂದೆ ಮೃತಪಟ್ಟರು, ಅವರು ಎಂದೂ ವಿವಾಹವಾಗಲಿಲ್ಲ ಎಂದು ಅವರು ವಿವರಿಸಿದರು. ಹಾಗಿದ್ದರೂ, ನನ್ನ ಅಗತ್ಯದ ಸಮಯದಲ್ಲಿ ನನ್ನ ತಾಯಿ ಹಾಗೂ ನನ್ನ ಆಂಟಿಯವರು ನನಗೆ ನಿಜ ಸಾಂತ್ವನದ ಮೂಲವಾಗಿದ್ದಾರೆ. ನಿಮ್ಮ ಲೇಖನಗಳು ಸಹ ಪುನಃ ಚೇತರಿಸಿಕೊಳ್ಳುವಂತೆ ನನಗೆ ಸಹಾಯ ಮಾಡಿವೆ.
ಎಲ್. ಡಿ., ಅಮೆರಿಕ
ಕುಲಸಂಬಂಧಿತ ಅಭಿಮಾನ “ಯುವ ಜನರು ಪ್ರಶ್ನಿಸುವುದು . . . ಕುಲಸಂಬಂಧಿತ ಅಭಿಮಾನದ ಕುರಿತೇನು?” (ಮಾರ್ಚ್ 8 1998) ಎಂಬ ಲೇಖನವನ್ನು ಓದಿ ನಾನು ಹಿಗ್ಗಿಹೋದೆ. “ನೀವು ಯಾವ ಜನಾಂಗದವರು?” ಎಂದು ಅನೇಕಬಾರಿ ನನಗೆ ಕೇಳಲಾಗಿದೆ. ನನ್ನ ವಂಶದ ಬಗ್ಗೆ ಪತ್ತೆಹಚ್ಚಲು ಅಸಮರ್ಥಳಾಗಿ, “ಮಿಶ್ರಜನಾಂಗದವಳು!” ಎಂದು ನಾನು ತಮಾಷೆಯಾಗಿ ಉತ್ತರಿಸುತ್ತಿದ್ದೆ. ಒಬ್ಬ ಸಂಚರಣ ಮೇಲ್ವಿಚಾರಕನು ಹೇಳಿದ್ದು: “ನೀವು ಯಾವ ಜನಾಂಗದವರು ಎಂದು ಯಾರಾದರೂ ಕೇಳುವಲ್ಲಿ, ‘ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು’ ಎಂದಷ್ಟೇ ಹೇಳಿ.” ಎಲ್ಲ ಕುಲಗಳು ಒಂದೇ ಎಂದು ಪರಿಗಣಿಸುವಂತಹ ಒಂದು ಸಂಸ್ಥೆಯಲ್ಲಿ ನಾನಿರುವುದಕ್ಕಾಗಿ ನಾನು ಹೆಮ್ಮೆಪಡುತ್ತೇನೆ.
ಡಿ. ಏಚ್., ಅಮೆರಿಕ
ನಾನು 14 ವರ್ಷ ಪ್ರಾಯದವಳು ಮತ್ತು ಈ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ನನ್ನ ಕುಲಸಂಬಂಧಿತ ಅಭಿಮಾನವು ಪೂರ್ವಾಭಿಪ್ರಾಯವಾಗಿ ಮಾರ್ಪಟ್ಟಿತ್ತು. ಯೆಹೋವನ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರಾಗಿದ್ದೇವೆ ಎಂಬುದನ್ನು ಈ ಲೇಖನವು ನನಗೆ ಮನದಟ್ಟುಮಾಡಿಸಿತು.
ಎಲ್. ಪಿ., ಇಟಲಿ
ನಾನು ಚಿಕ್ಕವಳಾಗಿದ್ದಾಗ, ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವಳಾಗಿದ್ದೆ; ನನ್ನ ಸಹಪಾಠಿಗಳಲ್ಲಿ ಅನೇಕರು, ತಾವು ಸ್ಪ್ಯಾನಿಷ್ ವಂಶಜರೆಂದು ಹೇಳಿಕೊಳ್ಳುತ್ತಾ ತಮ್ಮ ಜಾತಿ ಹಾಗೂ ಬಣ್ಣದ ವಿಷಯದಲ್ಲಿ ಅಭಿಮಾನಪಡುತ್ತಿದ್ದರು. ನನ್ನ ಬಗ್ಗೆ ನನಗೆ ಕೀಳು ಮನೋಭಾವವಿತ್ತು ಮತ್ತು ಆತ್ಮವಿಶ್ವಾಸದ ಕೊರತೆಯೂ ಇತ್ತು. ‘ನನ್ನ ಮೈಬಣ್ಣವನ್ನು ನಾನು ದ್ವೇಷಿಸುತ್ತೇನೆ!’ ಎಂಬ ಅನಿಸಿಕೆ ನನಗೆ ಕೆಲವೊಮ್ಮೆ ಉಂಟಾಗಿದೆ. ಈ ಲೇಖನದಲ್ಲಿರುವ ಸಲಹೆಯು, ಪುನಃ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ಮತ್ತು ಯೆಹೋವನು ನನಗೆ ಏನನ್ನು ಕೊಟ್ಟಿದ್ದಾನೋ ಅದರಲ್ಲಿ ಸಂತೃಪ್ತಳಾಗಿರಲು ಸಹಾಯ ಮಾಡಿದೆ.
ಏ. ಜಿ., ಫಿಲಿಪ್ಪೀನ್ಸ್
ಸಂಪದ್ಭರಿತ ದೇಶಗಳಲ್ಲಿ ಹುಟ್ಟಿರುವ ಜನರು ತುಂಬ ಶ್ರೇಷ್ಟರೆಂಬ ತಪ್ಪಾದ ಅಭಿಪ್ರಾಯ ನನಗಿತ್ತು. ವಾಸ್ತವದಲ್ಲಿ ಕೇವಲ ಒಂದೇ ಒಂದು ಕುಲವಿದೆ, ಅದು ಮಾನವಕುಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಲೇಖನವು ನನಗೆ ಸಹಾಯ ಮಾಡಿತು.
ಎಲ್. ಜಿ., ಬ್ರೆಸಿಲ್