ಜಗತ್ತನ್ನು ಗಮನಿಸುವುದು
ಕಡಿಮೆ ಜನನಪ್ರಮಾಣದ ಪರಿಣಾಮಗಳು
‘ಕಡಿಮೆ ಜನನಪ್ರಮಾಣವು ಕೈಗಾರಿಕಾ ಲೋಕದಲ್ಲಿ ಈಗ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದೆ’ ಎಂದು ಪ್ಯಾರಿಸಿನ ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ವಾರ್ತಾಪತ್ರಿಕೆಯು ವರದಿಸುತ್ತದೆ. ಏಕೆ? ವೃದ್ಧರಾಗುತ್ತಿರುವವರಿಗೆ ಆಸರೆಯಾಗಿರಲು ಸಾಕಷ್ಟು ಯುವ ಜನರಿರುವುದಿಲ್ಲ ಎಂಬ ಕಾರಣಕ್ಕಾಗಿಯೇ. ಉದಾಹರಣೆಗೆ, ಅನೇಕ ಯೂರೋಪಿಯನ್ ದೇಶಗಳಲ್ಲಿ 20ಕ್ಕಿಂತಲೂ ಕಡಿಮೆ ವಯಸ್ಸಿನವರಿಗಿಂತಲೂ 60 ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನವರು ತುಂಬ ಜನರಿದ್ದಾರೆ. ವೃದ್ಧ ಜನಸಂಖ್ಯೆಯ ಕಾರಣಗಳಲ್ಲಿ ಕೆಲವೊಂದು ಯಾವುವೆಂದರೆ, ದಂಪತಿಗಳು ಸಂಚಾರಗಳನ್ನು ಮಾಡಲಿಕ್ಕಾಗಿ, ಜೀವನೋಪಾಯವನ್ನು ಬೆನ್ನಟ್ಟಲಿಕ್ಕಾಗಿ, ಅಥವಾ ತಮ್ಮ ಶಿಕ್ಷಣವನ್ನು ಮುಂದುವರಿಸಲಿಕ್ಕಾಗಿ ಮಕ್ಕಳನ್ನು ಹಡೆಯುವುದನ್ನು ಮುಂದೂಡುತ್ತಾರೆ. ಇತರ ಕಾರಣಗಳು ಯಾವುವೆಂದರೆ, ಮಕ್ಕಳನ್ನು ಹೊಂದಿರುವುದನ್ನು “ಒಂದು ಹೊರೆ” ಅಥವಾ “ಅನನುಕೂಲತೆ”ಯಾಗಿ ಮಾಡುವ ಆರ್ಥಿಕ ಒತ್ತಡಗಳು ಮತ್ತು ಮಕ್ಕಳನ್ನು ಹಡೆಯದೇ ಇರುವ ಕಾರಣ ಹಿಂದಿಗಿಂತಲೂ ಈಗ ಜನರು ದೀರ್ಘಕಾಲ ಬಾಳುತ್ತಿರುವುದಾಗಿವೆ.
ನಿದ್ರೆಯ ಕೊರತೆಯು ಹೆಚ್ಚಾಗುತ್ತಿದೆ
ಅಮೆರಿಕನರು “ಈ ಶತಮಾನದ ಪ್ರಾರಂಭದಲ್ಲಿ [ಅವರು] ಪ್ರತಿ ರಾತ್ರಿ ನಿದ್ರೆಮಾಡುತ್ತಿದ್ದುದಕ್ಕಿಂತಲೂ ಈಗ ಒಂದು ಅಥವಾ ಒಂದೂವರೆ ತಾಸು ಕಡಿಮೆ ನಿದ್ರಿಸುತ್ತಿದ್ದಾರೆ ಮತ್ತು ಸಮಸ್ಯೆಯು ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ” ಎಂದು ನ್ಯೂಸ್‌ವೀಕ್ ವರದಿಮಾಡಿತು. ಏಕೆ? “ಜನರು ನಿದ್ರೆಯನ್ನು, ಹೆಚ್ಚು ಮತ್ತು ಕಡಿಮೆ ಮಾಡಬಹುದಾದ ಒಂದು ವ್ಯಾಪಾರವಸ್ತುವನ್ನಾಗಿ ನೋಡುತ್ತಾರೆ” ಎಂದು ವಿಸ್‌ಕಾನ್ಸನ್ ವಿಶ್ವವಿದ್ಯಾನಿಲಯದಲ್ಲಿ ಪ್ರಿವೆಂಟಿವ್ ಮೆಡಿಸನ್ ಪ್ರೊಫೆಸರರಾದ ಟೆರೀ ಯಂಗ್ ಹೇಳುತ್ತಾರೆ. “ತೀರ ಕಡಿಮೆ ನಿದ್ರೆ ಮಾಡುವವರು ಪರಿಶ್ರಮಿಗಳೂ ಹೊಂದಿಕೊಳ್ಳುವವರೂ ಎಂದು ನೆನಸಲಾಗುತ್ತದೆ.” ಆದರೆ ನಿದ್ರೆಯಿಂದ ವಂಚಿತರಾಗುವುದು ಪ್ರತಿಘಾತಗಳನ್ನು ತರಸಾಧ್ಯವಿದೆ. ಅದು ಖಿನ್ನತೆಯಿಂದ ಹಿಡಿದು ಹೃದಯ ಸಮಸ್ಯೆಗಳ ವರೆಗಿನ ಕಾಯಿಲೆಗಳನ್ನು ತರಬಲ್ಲದು. ನಿದ್ರೆಯಿಂದ ವಂಚಿತವಾದ ಇಲಿಗಳು ಎರಡೂವರೆ ವಾರಗಳ ನಂತರ ಸತ್ತುಹೋದವು. “ಅದೇ ರೀತಿಯಲ್ಲಿ ನೀವು ಸಾಯುತ್ತೀರೆಂದಲ್ಲ, ಬದಲಿಗೆ ನಿದ್ರೆಯು ನಿಮ್ಮ ಜೀವನಕ್ಕೆ ಪರೋಕ್ಷವಾಗಿ ಹಾನಿಯನ್ನು ಉಂಟುಮಾಡಸಾಧ್ಯವಿದೆ. ಅಂದರೆ, ದಣಿದು ಬಳಲಿರುವ ವೈದ್ಯನು ತಪ್ಪಾದ ಔಷಧಿಯನ್ನು ಬರೆದುಕೊಟ್ಟರೆ ಇಲ್ಲವೆ ನಿದ್ರೆಯ ಮಂಪರಿನಲ್ಲಿರುವ ಡ್ರೈವರ್ ನಿಮ್ಮ ವಾಹನಕ್ಕೆ ಅಡ್ಡಲಾಗಿ ಬಂದಲ್ಲಿ ಅದು ಹಾನಿಕಾರಕವಾಗಿರಬಲ್ಲದು.” ನಿದ್ರಾ ಸಂಶೋಧಕರಾದ ಜೇಮ್ಸ್ ವಾಲ್ಶ್ ಹೇಳುವುದು: “ವಾಹನವನ್ನು ಚಲಾಯಿಸುವಾಗ ಮತ್ತು ಕೆಲಸದ ಸ್ಥಳದಲ್ಲಿ ಎಚ್ಚರದಿಂದಿರಲು, ಸಾಕಷ್ಟು ನಿದ್ರೆಯನ್ನು ಮಾಡುವುದು ಮತ್ತು ಆಗಾಗ್ಗೆ ನಸುನಿದ್ದೆಯನ್ನು ತೆಗೆದುಕೊಳ್ಳುವುದು ಅತ್ಯಂತ ಭರವಸಾರ್ಹ ವಿಧಗಳಾಗಿವೆ. ಇದರ ಬಗ್ಗೆ ಜನರಿಗೆ ತಿಳಿವಳಿಕೆಯನ್ನು ನೀಡುವ ಅಗತ್ಯವಿದೆ.”
ನಿದ್ರಾ ರೋಗವು ಮರಳಿ ಬರುತ್ತದೆ
1974ರಲ್ಲಿ, ಅಂಗೋಲವು ಮೂರು ನಿದ್ರಾ ರೋಗದ ಕೇಸುಗಳನ್ನು ವರದಿಮಾಡಿತು. ಇತ್ತೀಚೆಗೆ, ಅಲ್ಲಿ ಹೆಚ್ಚುಕಡಿಮೆ 3,00,000 ಕೇಸುಗಳಿವೆ ಎಂದು ಲೋಕಾರೋಗ್ಯ ಸಂಸ್ಥೆಯು ಅಂದಾಜುಮಾಡಿತು. ಸಾವಿರಾರು ಜನರು, ಪ್ರಾಯಶಃ ಕೋಟ್ಯಂತರ ಜನರು ಇನ್ನೂ ಅಪಾಯದಲ್ಲಿರಬಹುದು. ಟ್ಸೆಟ್ಸಿ ನೊಣದ ಕಡಿತದಿಂದ ನಿದ್ರಾ ರೋಗವು ಉಂಟಾಗುತ್ತದೆ. ಪರೋಪಜೀವಿಯಿಂದ ಸೋಂಕಿತನಾಗಿರುವ ವ್ಯಕ್ತಿಯ ರಕ್ತವನ್ನು ಹೀರಿದ ಅನಂತರ, ಅದು ಮತ್ತೊಬ್ಬ ವ್ಯಕ್ತಿಗೆ ಸೋಂಕನ್ನು ಹರಡಿಸುತ್ತದೆ. ಹೊಲಗಳಲ್ಲಿ ಕೆಲಸಮಾಡುತ್ತಿರುವವರು ಅಥವಾ ನದಿಯಲ್ಲಿ ಬಟ್ಟೆಗಳನ್ನು ಒಗೆಯುತ್ತಿರುವವರು, ಮತ್ತು ಇನ್ನೂ ಹೆಚ್ಚಾಗಿ, ತಾಯಂದಿರು ಬೆನ್ನಿಗೆ ಕಟ್ಟಿಕೊಂಡಿರುವ ಎಳೆಯ ಕಂದಮ್ಮಗಳು ಈ ರೋಗಕ್ಕೆ ಬಲಿಯಾಗುತ್ತವೆ. ರೋಗಿಗಳಿಗೆ ಮೊದಮೊದಲು ತಲೆನೋವು, ಜ್ವರ ಮತ್ತು ವಾಂತಿಯಾಗುತ್ತದೆ. ಅವರಿಗೆ ರಾತ್ರಿಯ ವೇಳೆಯಲ್ಲಿ ನಿದ್ರಿಸಲಿಕ್ಕಾಗದೇ ಇರುವುದರಿಂದ, ಅವರು ದಿನದ ಸಮಯದಲ್ಲಿ ತೂಕಡಿಸುತ್ತಾರೆ. ಆ ಪರೋಪಜೀವಿಯು ಕೇಂದ್ರ ನರವ್ಯೂಹವನ್ನು ಪ್ರವೇಶಿಸುತ್ತದೆ ಮತ್ತು ಅನಂತರ ಅದು ಮೆದುಳನ್ನು ಸೇರುತ್ತದೆ. ಇದು ಹುಚ್ಚು, ಕೋಮ ಮತ್ತು ಮೃತ್ಯುವನ್ನು ಉಂಟುಮಾಡಬಹುದು. ಈ ರೀತಿಯ ಸೋಂಕು ಹರಡುವಿಕೆಯನ್ನು ನಿಲ್ಲಿಸಲು ಮತ್ತು ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಲು ಭಾರಿ ಖರ್ಚು ಮತ್ತು ಪ್ರಯಾಸ ತಗಲುತ್ತದೆ. ಚಿಕಿತ್ಸೆಗೆ ಸುಮಾರು 90 ಡಾಲರು ಖರ್ಚಾಗುತ್ತದೆ. ಇದು, “ಅಂಗೋಲದಲ್ಲಿ ದೊಡ್ಡ ಖರ್ಚಾಗಿದೆ” ಎಂದು ಲಂಡನಿನ ದ ಡೇಲಿ ಟೆಲಿಗ್ರಾಫ್ ವರದಿಸುತ್ತದೆ.
ಅಪೇಕ್ಷಿಸಲ್ಪಟ್ಟ ಪರಿಣಾಮವಲ್ಲ
ನಗರದ ವಾಹನ ಸಂಚಾರವು ಅನೇಕ ವೇಳೆ ಚಾಲಕನ ತಾಳ್ಮೆಯನ್ನು ತುಂಬ ಪರೀಕ್ಷಿಸುತ್ತದೆ. ರೋಮ್‌ನ ಲಾ ಸಾಪ್ಯೆನ್‌ಸಾ ವಿಶ್ವವಿದ್ಯಾನಿಲಯದಲ್ಲಿ ಮನೋವೈದ್ಯರಿಂದ ನಡೆಸಲ್ಪಟ್ಟ ಒಂದು ಅಧ್ಯಯನವು, ವಾಹನ ಸಂಚಾರ ಹೆಚ್ಚಾದಂತೆ, ಧಾರ್ಮಿಕ ಸಂಗತಿಗಳ ಬಗ್ಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸುವುದು ಹೆಚ್ಚುತ್ತದೆ ಎಂದು ಪ್ರಕಟಿಸಿದೆ. ಕೋರೀಎರೇ ಡೇಲಾ ಸೇರಾ ನ್ಯೂಸ್‌ಪೇಪರಿಗನುಸಾರ, ಗ್ರಾಮೀಣ ಹೆದ್ದಾರಿಗಳಲ್ಲಿ “ಧರ್ಮಕ್ಕೆ ಅಗೌರವವನ್ನು ಸೂಚಿಸುವಂತಹ 54 ಪ್ರತಿಶತ ದುರ್ಭಾಷೆಗಳು ಮತ್ತು ವರ್ತನೆಗಳು” ವಾಹನ ಸಂಚಾರ ಸಂಬಂಧಿತ ಸಮಸ್ಯೆಗಳಿಂದಾಗಿ ಉದ್ಭವಿಸಿದವು. ಮಹಾನಗರದ ವಾಹನ ಸಂಚಾರದ ವಿಷಯದಲ್ಲಿಯಾದರೋ, “ಸಂತರು ಮತ್ತು ಮೇರಿ ಕನ್ಯೆಯನ್ನು ದೂಷಿಸುವುದು” ಹೆಚ್ಚು ಸಾಮಾನ್ಯ. “ಈಗೀಗ ಮಹಾನಗರಗಳಲ್ಲಿ, ಶಪಿಸುವಿಕೆಗಳು ಅಥವಾ ದುರ್ಭಾಷೆಗಳೆಂದು ಸಾಮಾನ್ಯವಾಗಿ ಹೇಳುವ, ಸುಮಾರು 78 ಪ್ರತಿಶತ ಅಪವಿತ್ರ ನುಡಿಗಳು ವಾಹನ ಸಂಚಾರದಿಂದ ಉಂಟಾಗಿದೆ” ಎಂದು ಆ ನ್ಯೂಸ್‌ಪೇಪರ್ ಹೇಳಿತು. ಇತ್ತೀಚೆಗೆ ರೋಮಿನಲ್ಲಿ ವಾಹನ ಸಂಚಾರ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ, ಇಸವಿ 2000ವನ್ನು ಸ್ವಾಗತಿಸಲಿಕ್ಕಾಗಿ ನಿರ್ಮಾಣಕಾರ್ಯವು ನಡೆಯುತ್ತಿದೆ, ಮತ್ತು ಇದನ್ನು ಕ್ಯಾಥೊಲಿಕ್ ಜೂಬಿಲಿ ವರ್ಷವೆಂದು ಘೋಷಿಸಲಾಗಿದೆ, ಆಗ ಪರಿಹಾರಕಾಣಿಕೆಗಳು ಅರ್ಪಿಸಲ್ಪಡುವವು. “ಇದು ಸಂಪ್ರಾದಯಕ್ಕೆ ವಿರುದ್ಧವಾಗಿದೆ, ಆದರೆ ರೋಮಿನ ಜೂಬಿಲಿಯ ಪ್ರಥಮ ಪರಿಣಾಮವು, ಪರಿಹಾರಕಾಣಿಕೆಗಳ ಅಭಿವೃದ್ಧಿಯಲ್ಲ, ಶಪಿಸುವಿಕೆಗಳ ಅಭಿವೃದ್ದಿಯೆಂಬುದು ವಿರೋಧೋಕ್ತಿಯಾದರೂ ಸತ್ಯೋಕ್ತಿಯಾಗಿದೆ” ಎಂದು ಲೌಕಿಕ ಜೂಬಿಲಿ ವೀಕ್ಷಕರ ಸಂಘಟಕನು ಹೇಳುತ್ತಾನೆ.
ಶಾಸ್ತ್ರೀಯ ಸಂಗೀತದಿಂದ ಪ್ರಯಾಣಿಕರನ್ನು ಉಪಶಮನಗೊಳಿಸುವುದು
ಪ್ರಯಾಣಿಕರು ರಿಯೋ ಡೇ ಸನೆರೋದ 18 ಸಬ್‌ವೇ ನಿಲ್ದಾಣಗಳಲ್ಲಿ ಕಾಯುತ್ತಿರುವಾಗ, ಸ್ಟ್ರಾವ್ಸ್, ವಿವಾಲ್ಡೀ, ಶೋಪ್ಯಾನ್ ಚೈಕಾಫ್‌ಸ್ಕೀ, ಮೋಟ್‌ಸಾರ್ಟ್, ಬಾಕ್, ಬೀಸಾ, ಶೂಬರ್ಟ್, ಮತ್ತು ಬ್ರಾಮ್ಸ್‌ನಂತಹ ರಚನಕಾರರ ಶಾಸ್ತ್ರೀಯ ಸಂಗೀತವನ್ನು ಈಗ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ, “ಪ್ರಯಾಣಗಳ ಮಧ್ಯೆ ವಿರಾಮಗಳ ಸಮಯದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು” ಸಬ್‌ವೇ ಅಧಿಕಾರಿಗಳು ನಿರೀಕ್ಷಿಸುತ್ತಾರೆ ಎಂದು ಊ ಗ್ಲೋಬೂ ನ್ಯೂಸ್‌ಪೇಪರ್ ಹೇಳುತ್ತದೆ. ಸಂಗೀತ ಸಂಗ್ರಹವನ್ನು ಆಯ್ಕೆಮಾಡಿದಾಗ, “ಪ್ರಯಾಣಿಕರನ್ನು ಆ ರಚನೆಗಳು ಒತ್ತಡದಿಂದ ಮುಕ್ತಗೊಳಿಸುವಂತೆ—ರೈಲು ನಿಲ್ದಾಣಗಳು ಡ್ಯಾನ್ಸ್ ಹಾಲ್‌ನ ಅನಿಸಿಕೆಯನ್ನು ಕೊಡಲಿಕ್ಕಾಗಿ ಅಲ್ಲ—ಆರಿಸಲಾಯಿತು.” “ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸ್ವೀಕಾರಾರ್ಹವಾಗಿತ್ತು” ಎಂದು ರಿಯೋ ಡೇ ಸನೆರೋದ ಸಬ್‌ವೇ ವ್ಯವಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರರಾದ ಲೂಯೀಶ್ ಮಾರ್ಯೊ ಮೀರಾಂಡ ಹೇಳಿದರು.
ಪ್ರತಿಯೊಬ್ಬರ ಜವಾಬ್ದಾರಿ
“ಮಾನವರು 1970ರಿಂದ ಶೇಕಡ 30ಕ್ಕಿಂತಲೂ ಹೆಚ್ಚಿನ ಪ್ರಕೃತಿಯನ್ನು ನಾಶಮಾಡಿದ್ದಾರೆ. ಮತ್ತು ಇದು ಜೀವನಾಧಾರವಾದ ಅರಣ್ಯ, ಸೀನೀರು ಮತ್ತು ಕಡಲನ್ನು ತೀರ ಕಡಿಮೆಯಾಗಿಸಿದೆ” ಎಂದು ದ ಗಾರ್ಡಿಯನ್ ವೀಕ್ಲಿ ನ್ಯೂಸ್‌ಪೇಪರಿನ ಒಂದು ಲೇಖನವು ತಿಳಿಸಿತು. ನಿಸರ್ಗಕ್ಕಾಗಿ ವಿಶ್ವವ್ಯಾಪಕ ನಿಧಿ (ಡಬ್ಲ್ಯುಡಬ್ಲ್ಯುಎಫ್) ಎಂಬ ಸಂಸ್ಥೆಯನ್ನು ಸೇರಿಸಿ, ಮೂರು ಸಂಬಂಧಿತ ಸಂಸ್ಥೆಗಳಿಂದ ಇತ್ತೀಚೆಗೆ ವರದಿಸಲ್ಪಟ್ಟ ವಿಷಯದ ಮೇಲೆ ಈ ಲೇಖನವು ಆಧಾರಿತವಾಗಿತ್ತು. ಪಾಶ್ಚಿಮಾತ್ಯ ದೇಶಗಳು ನೈಸರ್ಗಿಕ ಸಂಪಲ್ಮೂನಗಳನ್ನು ಸಾಂಪ್ರದಾಯಿಕವಾಗಿ ಹೆಚ್ಚು ಉಪಯೋಗಿಸುವುದಾದರೂ, ವಿಕಾಸಶೀಲ ದೇಶಗಳು ಈಗ “ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಅಪಾಯಕರವಾದ ಮಟ್ಟದಲ್ಲಿ ಬರಿದುಮಾಡುತ್ತಿವೆ” ಎಂದು ಈ ಲೇಖನವು ತಿಳಿಸಿತು. ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆಯ ಅಧಿಕಾರಿಯು ಹೇಳಿದ್ದು: “ಇದು ಬಹಳ ಗಂಭೀರವಾದ ವಿಷಯವಾಗಿತ್ತೆಂದು ನಮಗೆ ತಿಳಿದಿತ್ತು. ಆದರೆ ಈ ವರದಿಯನ್ನು ಕೊಡುವ ವರೆಗೂ ಅದು ಎಷ್ಟು ಗಂಭೀರ ರೀತಿಯದ್ದು ಎಂಬುದು ನಮಗೆ ಗೊತ್ತಿರಲಿಲ್ಲ.” ಈ ರೀತಿಯ ಸಂಪನ್ಮೂಲಗಳ ನಾಶಮಾಡುವಿಕೆಯನ್ನು ತಡೆಯಲು ವಿಫಲವಾಗಿರುವ ಸರಕಾರಗಳನ್ನು ವರದಿಯು ದೂಷಿಸುವುದಾದರೂ, “ವಿಶ್ವದ ಸಂಪನ್ಮೂಲಗಳನ್ನು ಬೇಜವಾಬ್ದಾರಿಯಿಂದ ಬರಿದುಮಾಡುತ್ತಿರುವುದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಹೊಣೆಯನ್ನು ಹೊತ್ತುಕೊಳ್ಳುತ್ತಾನೆ” ಎಂದು ಆ ನ್ಯೂಸ್‌ಪೇಪರ್ ಹೇಳುತ್ತದೆ.
ಧೂಮಪಾನಕ್ಕೆ ಬಹಳ ಬೆಲೆ ತೆರಬೇಕಾಗುತ್ತದೆ
ಅನೇಕ ದೇಶಗಳಲ್ಲಿ ಧೂಮಪಾನಿಗಳು ಕಡಿಮೆಯಾಗುತ್ತಿರುವುದಾದರೂ, ಸ್ವಿಟ್ಸರ್ಲೆಂಡಿನಲ್ಲಿ ಮಾತ್ರ ಅವರ ಸಂಖ್ಯೆಯು ಹಾಗೆಯೇ ಉಳಿದಿದೆ ಎಂದು ಬರ್ನ ಓಬರ್ಲಾಂಡ ನ್ಯೂಸ್‌ಪೇಪರ್ ಹೇಳುತ್ತದೆ. ಜನಸಂಖ್ಯೆಯಲ್ಲಿ ಮೂರರಲ್ಲಿ ಒಂದು ಭಾಗದಷ್ಟು ಜನರು ಧೂಮಪಾನ ಮಾಡುತ್ತಾರೆ. ಪ್ರತಿ ವರ್ಷ 8,000ಕ್ಕಿಂತಲೂ ಹೆಚ್ಚು ಜನರು ಧೂಮಪಾನ ಸಂಬಂಧಿತ ರೋಗಗಳಿಂದ ಸಾಯುತ್ತಾರೆ. ಇದು ಏಡ್ಸ್, ಹೆರೋಯಿನ್, ಕೋಕೇನ್, ಆಲ್ಕೋಹಾಲ್ ಸೇವನೆ, ಬೆಂಕಿ, ವಾಹನ ಅಪಘಾತಗಳು, ಕೊಲೆ ಮತ್ತು ಆತ್ಮಹತ್ಯೆ ಇವೆಲ್ಲವುಗಳಿಂದ ಉಂಟಾಗುವ ಮೃತ್ಯುಗಳಿಗಿಂತಲೂ ಹೆಚ್ಚಾಗಿದೆ. ಸ್ವಿಟ್ಸರ್ಲೆಂಡಿನಲ್ಲಿ ಸಾರ್ವಜನಿಕ ಆರೋಗ್ಯದ ಸಂಯುಕ್ತ ಇಲಾಖೆಯಿಂದ ಪ್ರಸ್ತುತಪಡಿಸಲ್ಪಟ್ಟ ಒಂದು ಅಧ್ಯಯನವು ಹೇಳಿದ್ದು, 1995ರಲ್ಲಿ ಹೊಗೆಸೊಪ್ಪಿನ ಸೇವನೆಯ ಒಟ್ಟು ಮೊತ್ತವು, ಒಂದು ಸಾವಿರ ಕೋಟಿ ಫ್ರಾಂಕ್‌ಗಳಾಗಿದ್ದವು. ಅಂದರೆ ಇದು ಆರು ಬಿಲಿಯನ್ ಯು.ಎಸ್ ಡಾಲರುಗಳಿಗಿಂತಲೂ ಹೆಚ್ಚು. ವೈದ್ಯಕೀಯ ಹಾಗೂ ಆಸ್ಪತ್ರೆಯ ಆರೈಕೆಯ ಖರ್ಚು, ಉದ್ಯೋಗದಲ್ಲಿ ಉತ್ಪಾದನೆಯ ಇಳಿತ, ಧೂಮಪಾನಿ ರೋಗಿಗಳು ಹಾಗೂ ಅವರ ಮೇಲೆ ಅವಲಂಬಿತರಾಗಿರುವವರ ಕೆಳಮಟ್ಟದ ಜೀವನ ಮತ್ತು ಮೃತರಾದವರ ಕುಟುಂಬದ ಸದಸ್ಯರ ಕಷ್ಟಾನುಭವವನ್ನು ತಿಳಿದುಕೊಳ್ಳಲು ಈ ಅಧ್ಯಯನವು ಪ್ರಯತ್ನಿಸಿತು.
ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿರಿ
“ಹೆಚ್ಚು ಶೆಕೆಯು ಹೃದಯಾಘಾತಗಳನ್ನು ಹೆಚ್ಚಿಸುತ್ತದೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಆದರೆ, ಚಳಿಯು ಸಹ ಇದಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಈಗ ತಿಳಿದುಕೊಂಡಿದ್ದೇವೆ” ಎಂದು ಡಾ. ಆಂಟನಿ ಗ್ರೇಹಮ್ ಹೇಳುತ್ತಾರೆ. ಇವರು ಕೆನಡದ ಆಂಟೆರೀಯೋದ ಹೃದಯ ತಜ್ಞರು ಮತ್ತು ಹೃದಯ ಮತ್ತು ಲಕ್ವದ ವಿಭಾಗಕ್ಕೆ ಪ್ರತಿನಿಧಿಯಾಗಿದ್ದಾರೆ. ಸರಾಸರಿ ತಾಪಮಾನದಲ್ಲಿ ಹತ್ತು ಡಿಗ್ರಿ ತಾಪಮಾನವು ಹೆಚ್ಚು ಅಥವಾ ಕಡಿಮೆಯಾಗುವಲ್ಲಿ “13 ಪ್ರತಿಶತದಷ್ಟು ಹೃದಯಾಘಾತಗಳು ಹೆಚ್ಚುತ್ತದೆ” ಎಂದು ಫ್ರ್ಯಾನ್ಸ್‌ನಲ್ಲಿ 2,50,000 ಪುರುಷರ ಕುರಿತು ಹತ್ತು ವರ್ಷಗಳ ವರೆಗೆ ಮಾಡಿದ ಅಧ್ಯಯನವು ತೋರಿಸಿತು ಎಂಬುದಾಗಿ ದ ಗ್ಲೋಬ್ ಆ್ಯಂಡ್ ಮೇಲ್ ವರದಿಸಿತು. ತಾಪಮಾನವು ಕಡಿಮೆಯಾದಾಗ, ಹೃದಯವು ಕಷ್ಟಪಟ್ಟು ಮತ್ತು ಶೀಘ್ರಗತಿಯಲ್ಲಿ ಕೆಲಸಮಾಡುತ್ತದೆ. ಏಕೆಂದರೆ, ರಕ್ತವು ಉಷ್ಣತೆಯನ್ನು ಕಾಪಾಡಿಕೊಳ್ಳಲು ಚರ್ಮದ ಭಾಗದಿಂದ ದೇಹದ ಆಳವಾದ ಭಾಗಗಳಿಗೆ ಹೋಗುತ್ತದೆ. ಜನರು ತುಂಬ ಪ್ರಯಾಸಪಡುವಾಗ ಅಥವಾ ಹವಾಮಾನಕ್ಕೆ ತಕ್ಕಂತೆ ಬಟ್ಟೆಯನ್ನು ಧರಿಸದಿರುವಾಗ ಅಪಾಯವು ಇನ್ನೂ ಹೆಚ್ಚಾಗುತ್ತದೆ. ಡಾ. ಗ್ರೇಹಮ್ ಎಚ್ಚರಿಕೆಯನ್ನು ನೀಡುವುದು: “ನೀವು ಐದು ತಿಂಗಳುಗಳ ವರೆಗೆ ಬೆಚ್ಚಗೆ ಒಳಗೆ ಕುಳಿತಿದ್ದು, ಅನಂತರ ಏಕಾಏಕಿ ಹೊರಹೋಗಿ, ಚಳಿಯಲ್ಲಿ ಹಿಮವನ್ನು ತೆಗೆದುಹಾಕಲು ಸಾಧ್ಯವಿಲ್ಲ. ನೀವು ಅದಕ್ಕಾಗಿ ಕ್ರಮೇಣ ತಯಾರಾಗಬೇಕು.”
ನಿಮ್ಮ ಪುಟಾಣಿಯೊಂದಿಗೆ ಮಾತಾಡಿರಿ
ಪುಟಾಣಿಗಳೊಂದಿಗೆ ದಿನಾಲೂ ಕಡಿಮೆಪಕ್ಷ 30 ನಿಮಿಷಗಳು ಮಾತಾಡುವುದು, ಅವುಗಳ ಬುದ್ಧಿಶಕ್ತಿ ಹಾಗೂ ಭಾಷಾ ಕೌಶಲ್ಯಗಳನ್ನು ಗಮನಾರ್ಹವಾದ ರೀತಿಯಲ್ಲಿ ಹೆಚ್ಚಿಸಬಲ್ಲದು ಎಂದು ಲಂಡನಿನ ಡೇಲಿ ಟೆಲಿಗ್ರಾಫ್ ವರದಿಸುತ್ತದೆ. ಸಂಶೋಧಕರು ಒಂಬತ್ತು ತಿಂಗಳಿನ 140 ಶಿಶುಗಳ ಮೇಲೆ ಅಧ್ಯಯನವನ್ನು ಮಾಡಿದರು. ಆ ಗುಂಪಿನ ಅರ್ಧ ಭಾಗದ ಹೆತ್ತವರಿಗೆ, ತಮ್ಮ ಪುಟಾಣಿಗಳೊಂದಿಗೆ ಮಾತಾಡುವುದು ಎಷ್ಟು ಉತ್ತಮವಾಗಿದೆ ಎಂಬುದನ್ನು ತಿಳಿಸಲಾಯಿತು. ಆದರೆ, ಇನ್ನೂ ಅರ್ಧ ಭಾಗದಷ್ಟು ಹೆತ್ತವರಿಗೆ ಯಾವ ಸಲಹೆಯೂ ನೀಡಲಾಗಲಿಲ್ಲ. ಏಳು ವರ್ಷಗಳ ಅನಂತರ, “[ಮಾತಾಡಿದ] ಗುಂಪಿನ ಮಕ್ಕಳ ಸರಾಸರಿ ಬುದ್ಧಿಶಕ್ತಿಯು ಮತ್ತೊಂದು ಗುಂಪಿನ ಮಕ್ಕಳಿಗಿಂತ ಒಂದು ವರ್ಷ ಮೂರು ತಿಂಗಳುಗಳಿಗಿಂತಲೂ ಮುಂದಿತ್ತು” ಮತ್ತು ಅವರ ಭಾಷಾ ಕೌಶಲ್ಯಗಳು “ಗಮನಾರ್ಹವಾಗಿ ಹೆಚ್ಚಿದ್ದವು” ಎಂದು ಆ ವರದಿಯು ತಿಳಿಸುತ್ತದೆ. ಇಂದು ಹೆತ್ತವರು ತಮ್ಮ ಪುಟಾಣಿಗಳೊಂದಿಗೆ ಹಿಂದೆ ಮಾತಾಡುತ್ತಿದ್ದುದಕ್ಕಿಂತಲೂ ಕಡಿಮೆ ಮಾತಾಡುತ್ತಾರೆ. ಏಕೆಂದರೆ, ಸಮಾಜದಲ್ಲಿ ಅಂತಹ ಮಹತ್ತರವಾದ ಬದಲಾವಣೆಯಾಗಿದೆ ಎಂದು ಸಂಶೋಧಕಿಯಾದ ಡಾ. ಸ್ಯಾಲೀ ವಾರ್ಡ್ ನಂಬುತ್ತಾರೆ. ಉದಾಹರಣೆಗೆ, ಹೆಚ್ಚು ತಾಯಂದಿರು ಕೆಲಸಮಾಡಲು ಮನೆಯಿಂದ ಹೊರಗೆ ಹೋಗುತ್ತಾರೆ ಮತ್ತು ಈ ರೀತಿಯಲ್ಲಿ ಅನೇಕ ಮನೆಗಳಲ್ಲಿ ತಾಯಿಯ ಸ್ಥಾನವನ್ನು ವಿಡಿಯೋಟೇಪ್‌ಗಳು ಆಕ್ರಮಿಸಿಕೊಂಡಿವೆ.