ಜಗತ್ತನ್ನು ಗಮನಿಸುವುದು
ಆನೆಗಳು “ತಮ್ಮ ಸ್ನೇಹಿತರನ್ನು ಮರೆತುಬಿಡುವುದಿಲ್ಲ”
“ಆನೆಗಳು ಮರೆತುಬಿಡುವುದೇ ಇಲ್ಲ—ಅಥವಾ ಕಡಿಮೆಪಕ್ಷ ಅವು ತಮ್ಮ ಸ್ನೇಹಿತರನ್ನು ಮರೆತುಬಿಡುವುದಿಲ್ಲ,” ಎಂದು ನ್ಯೂ ಸೈಯನ್ಸ್ ಪತ್ರಿಕೆ ವರದಿಸುತ್ತದೆ. ಇಂಗ್ಲೆಂಡ್‌ನ ಸಸಿಕ್ಸ್ ವಿಶ್ವವಿದ್ಯಾನಿಲಯದ ಡಾ. ಕ್ಯಾರನ್ ಮಕೊಂ, ಕೆನ್ಯದ ಆಂಬೊಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕದ ಹೆಣ್ಣು ಆನೆಗಳ ತಗ್ಗು-ಸ್ವರದ “ಸಂಪರ್ಕ ಕರೆಗಳನ್ನು” ರೆಕಾರ್ಡ್‌ಮಾಡುತ್ತಾ, ಯಾವ ಆನೆಗಳು ಕೊಂಚ ಸಮಯದಲ್ಲಿ ಪದೇ ಪದೇ ಭೇಟಿಯಾಗುತ್ತವೆ ಮತ್ತು ಯಾವುವು ಅಪರಿಚಿತವಾಗಿದ್ದವು ಎಂಬುದನ್ನು ಗಮನಿಸಿದರು. ತದನಂತರ ಅವುಗಳ ರೆಕಾರ್ಡ್‌ಮಾಡಲ್ಪಟ್ಟ ಕರೆಗಳನ್ನು 27 ಆನೆ ಕುಟುಂಬಗಳಿಗೆ ಪುನಃ ನುಡಿಸುವ ಮೂಲಕ, ಅವುಗಳ ಪ್ರತಿಕ್ರಿಯೆಯನ್ನು ಅಭ್ಯಾಸಮಾಡಲು ಪ್ರಯತ್ನಿಸಿದರು. ಈ ಆನೆಗಳಿಗೆ ಕರೆಯುವ ಆನೆಯು ಸುಪರಿಚಿತವಾಗಿದ್ದಲ್ಲಿ ಅವು ಕೂಡಲೇ ಮರುಕರೆಯನ್ನು ಕೊಟ್ಟವು. ಕರೆಯುವ ಆನೆಯ ಪರಿಚಯ ಕೇವಲ ಸ್ವಲ್ಪವಾಗಿದ್ದಲ್ಲಿ, ಅವು ಕಿವಿಗೊಟ್ಟರೂ ಮರುಕರೆಯನ್ನು ಕೊಡಲಿಲ್ಲ. ಮತ್ತು ಅಪರಿಚಿತವಾದ ಕರೆಯು ಅವುಗಳನ್ನು ಉದ್ರೇಕಿಸಿ, ಆಕ್ರಮಣಕಾರಿಯಾಗಿ ಮಾಡಿತು. “ಕಡಿಮೆಪಕ್ಷ ಅವು 14 ಬೇರೆ ಕುಟುಂಬಗಳನ್ನು ಅವುಗಳ ಕರೆಯಿಂದ ಗುರುತಿಸಲು ಶಕ್ತವಾದವು. ಇದು, ಪ್ರತಿಯೊಂದು ಆನೆಯು ಸರಿಸುಮಾರು 100 ಬೇರೆ ಬೆಳೆದ ಆನೆಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಿದೆಯೆಂಬುದನ್ನು ಸೂಚಿಸುತ್ತದೆ,” ಎಂದು ಲೇಖನವು ತಿಳಿಸಿತು. ಆನೆಗಳು ಮನುಷ್ಯರನ್ನು ಕೂಡ ಜ್ಞಾಪಕದಲ್ಲಿಟ್ಟುಕೊಳ್ಳಬಹುದು. ತಾನು 18 ವರ್ಷಗಳ ವರೆಗೆ ಏಷ್ಯದ ಒಂದು ಆನೆಯೊಂದಿಗೆ ಕೆಲಸಮಾಡಿದ್ದು, ಮೂರು ವರ್ಷಗಳ ಬಿಡುವಿನ ನಂತರ ತಿರುಗಿ ಬಂದಾಗ ಅದು ತನ್ನನ್ನು ಗುರುತಿಸಿತು ಎಂದು ಇಂಗ್ಲೆಂಡಿನ ಬ್ರಿಸ್ಟಲ್ ಮೃಗಾಲಯದ ಮೇಲ್ವಿಚಾರಕರಾದ ಜಾನ್ ಪಾರ್‌ಟ್ರಿಜ್ ಹೇಳಿದರು.(g01 5/22)
ಮಧ್ಯಾಹ್ನದ ಒತ್ತಡಭರಿತ ಊಟದ ವಿರಾಮಗಳು
“ಪುರುಷತ್ವ ಪ್ರದರ್ಶಕ ಬ್ರಿಟನ್‌ನಲ್ಲಿ ಮಧ್ಯಾಹ್ನದ ಊಟವನ್ನು ಮಾಡಲು ಸಮಯ ಕಳೆಯುವವರನ್ನು ದುರ್ಬಲ ವ್ಯಕ್ತಿಗಳೆಂದು ಎಣಿಸಲಾಗುತ್ತದೆ. ಕಾರ್ಯವ್ಯಸನಿ ನೌಕರರು, ಮಧ್ಯಾಹ್ನದ ಊಟವನ್ನು ಮಾಡದೆ, ತಮ್ಮ ಮೇಜಿನ ಬಳಿಯೇ ಒಂದು ಸ್ಯಾಂಡ್‌ವಿಚನ್ನು ಮಾತ್ರ ತಿನ್ನುತ್ತಾರೆ,” ಎಂದು ಲಂಡನ್‌ನ ಫೈನಾನ್ಶಿಯಲ್ ಟೈಮ್ಸ್ ವರದಿಸುತ್ತದೆ. ಇತ್ತೀಚಿನ ಸಂಶೋಧನೆಯು ತೋರಿಸುವ ಪ್ರಕಾರ, ಬ್ರಿಟನ್‌ನ ಸರಾಸರಿ “ಊಟದ ವೇಳೆ” ಈಗ ಕೇವಲ 36 ನಿಮಿಷಗಳಷ್ಟು ಉದ್ದದ್ದಾಗಿದೆ. ಮಧ್ಯಾಹ್ನದ ವಿರಾಮವು ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂಬುದಾಗಿ ವೈದ್ಯಕೀಯ ನಿಪುಣರು ಹೇಳುತ್ತಾರೆ. ಆದರೆ ಕೆಲವು ಧಣಿಗಳು ಮಧ್ಯಾಹ್ನ ಊಟದ ವೇಳೆಯಲ್ಲೇ ಮೀಟಿಂಗ್‌ಗಳನ್ನು ಏರ್ಪಡಿಸುತ್ತಾರೆ, ಮತ್ತು ಹೀಗೆ ಕೆಲಸಗಾರರಿಗೆ ವಿರಾಮವನ್ನೇ ಕೊಡುವುದಿಲ್ಲ. ಈ ವರದಿಯನ್ನು ಸಂಕಲಿಸಿದ ಸಂಶೋಧನಾ ಸಂಸ್ಥೆಯಾದ ಡಾಟಾಮೊನಿಟರ್ ಗಮನಿಸುವುದು: “ಕಾರ್ಮಿಕರಿಂದ ಹೆಚ್ಚಿನ ಕೆಲಸವನ್ನು ಬಯಸಿ, ಸಮಯವು ದುಬಾರಿ ಪದಾರ್ಥವೆಂದೆಣಿಸುವ ಸಮಾಜದಲ್ಲಿ ಸಿಕ್ಕಿಬಿದ್ದಿರುವವರಿಗೆ, ಮಧ್ಯಾಹ್ನದೂಟದ ವಿರಾಮವು ಪೆಟ್ರೋಲ್ ತುಂಬಿಸಲಿಕ್ಕಾಗಿ ನಿಂತಿರುವ ವಾಹನದ ಅನನುಕೂಲ ವಿರಾಮದಂತಿದೆ.” ಡಾಟಾಮೊನಿಟರ್ ವಿಶ್ಲೇಷಕಿ ಸೇರ ನನೀ ಕೂಡಿಸುವುದು: “ನಾವು ಅಂತಾರಾಷ್ಟ್ರೀಯ ಮಾರ್ಕೆಟ್‌ಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ‘ನಾನು ಅದನ್ನು ಆಮೇಲೆ ಮಾಡುತ್ತೇನೆ’ ಎಂದು ಹೇಳುವ ಸಾಧ್ಯತೆಗಳೇ ಇನ್ನಿಲ್ಲ. ಅದನ್ನು ಈಗಲೇ ಮಾಡಬೇಕು.”(g01 5/22)
ರೆಫ್ರಿಜರೇಟರ್ ಇಲ್ಲದೇ ತಾಜಾ ಆಹಾರ
ಕೆಟ್ಟುಹೋಗಬಹುದಾದ ಆಹಾರವನ್ನು ಒಂದು ವಿದ್ಯುತ್‌ಸಜ್ಜಿತ ರೆಫ್ರಿಜರೇಟರ್‌ನ ಉಪಯೋಗವಿಲ್ಲದೆ ತಣ್ಣಗೆ ಹಾಗೂ ತಾಜಾ ಇಡುವುದು ಒಂದು ಪಂಥಾಹ್ವಾನವಾಗಿದೆ. ಆದರೂ, ಒಂದು ಸರಳವಾದ, ಅಲ್ಪಬೆಲೆಯುಳ್ಳ ಕಂಡುಹಿಡಿತವು, ಅರ್ಧನಿರ್ಜಲವಾಗಿರುವ ಉತ್ತರ ನೈಜೀರಿಯದಲ್ಲಿ ತುಂಬ ಯಶಸ್ವಿಕರವಾಗಿ ಪರಿಣಮಿಸುತ್ತದೆ. ಒಂದು ಮಡಕೆಯನ್ನು ಮತ್ತೊಂದು ಮಡಕೆಯಲ್ಲಿ ಇಟ್ಟು, ಅವುಗಳ ಮಧ್ಯೆಯಿರುವ ಸ್ಥಳವನ್ನು ನೆನೆದ ಮರಳಿನಿಂದ ತುಂಬಿಸುವುದು ಇದರಲ್ಲಿ ಒಳಗೂಡಿದೆ. ಆಹಾರವನ್ನು ಚಿಕ್ಕ ಮಡಕೆಯಲ್ಲಿ ಇಡಲಾಗುತ್ತದೆ, ಮತ್ತು ಮಡಕೆಯನ್ನು ತೊಯ್ದ ಬಟ್ಟೆಯಿಂದ ಮುಚ್ಚಲಾಗುತ್ತದೆ. “ಹೊರಗಿರುವ ಬೆಚ್ಚಗಿನ ವಾಯು ತೇವವನ್ನು ಹೊರಗಿನ ಮಡಕೆಯ ಮೇಲ್ಮೈಗೆ ಎಳೆಯುತ್ತದೆ, ಮತ್ತು ಇಲ್ಲಿ ಅದು ಆವಿಯಾಗಿಹೋಗುತ್ತದೆ,” ಎಂಬುದಾಗಿ ನ್ಯೂ ಸೈಂಟಿಸ್ಟ್ ಪತ್ರಿಕೆಯು ಹೇಳುತ್ತದೆ. “ನೀರಾವಿಯು ಅದರೊಟ್ಟಿಗೆ ಶಾಖವನ್ನು ಕೊಂಡೊಯ್ಯುತ್ತದೆ, ಆದುದರಿಂದ ಈ ಒಣಗಿಸುವ ಕಾರ್ಯವು, ಮರಳು ಮತ್ತು ಬಟ್ಟೆ ಒದ್ದೆಯಾಗಿರುವ ವರೆಗೂ, ಮಡಕೆಯ ಒಳಗಿನಿಂದ ಸತತವಾದ ಶಾಖದ ಹರಿವನ್ನು ಉಂಟುಮಾಡುತ್ತದೆ.” ಈ ವಿಧಾನವು ಉಪಯೋಗಿಸಲ್ಪಡುವಾಗ, ಟೊಮಾಟೋಗಳು ಮತ್ತು ಮೆಣಸಿನಕಾಯಿಗಳು ಮೂರು ವಾರಗಳಿಗಿಂತ ಹೆಚ್ಚು ಸಮಯದ ವರೆಗೆ ತಾಜಾ ಉಳಿಯುತ್ತವೆ ಮತ್ತು ಬಿಳಿ ಬದನೆಕಾಯಿಗಳು ಹತ್ತಿರ ಹತ್ತಿರ ಒಂದು ತಿಂಗಳು ಉಳಿಯಬಲ್ಲವು. “ಮಡಕೆಯಲ್ಲಿ-ಮಡಕೆ”ಯ ಈ ವ್ಯವಸ್ಥೆಯನ್ನು ಕಂಡುಹಿಡಿದ ಮೊಹಾಮ್ಮದ್ ಬಾ ಆಬಾ ಹೇಳುವುದೇನೆಂದರೆ, ಈಗ ವ್ಯವಸಾಯಗಾರರು ತಮ್ಮ ಬೆಳೆಗಳನ್ನು ಅಗತ್ಯಕ್ಕನುಸಾರ ಮಾರಬಹುದು; ಮತ್ತು ಸಾಧಾರಣವಾಗಿ ಪ್ರತಿದಿನ ಆಹಾರವನ್ನು ಮಾರಲಿಕ್ಕಾಗಿ ಮನೆಯಲ್ಲಿಯೇ ಉಳಿಯುತ್ತಿದ್ದ ಅವರ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಪುರುಸೊತ್ತು ಸಿಗುತ್ತದೆ.(g01 6/8)
ಸೆಲ್ ಫೋನ್ ಅಪಘಾತಗಳು
ಸೆಲ್ಯುಲರ್ ಟೆಲಿಫೋನ್‌ಗಳ ಉಪಯೋಗದಿಂದ ಅಪಘಾತವಾಗಬಹುದಾದ ಸ್ಥಳಗಳು, ರಸ್ತೆಗಳು ಮಾತ್ರವೇ ಅಲ್ಲ. ಜಪಾನಿನ ರೈಲ್ವೇ ಅಧಿಕಾರಿಗಳು ಹೇಳುವುದೇನೆಂದರೆ, ಪ್ಲ್ಯಾಟ್‌ಫಾರ್ಮ್‌ಗಳ ಮೇಲೆ ಕಾಯುತ್ತಿರುವ ಪ್ರಯಾಣಿಕರು ಸೆಲ್-ಫೋನ್ ಸಂಭಾಷಣೆಗಳಲ್ಲಿ ತಲ್ಲೀನರಾಗಿ ತಾವು ಎಲ್ಲಿದ್ದೇವೆ ಎಂಬುದನ್ನೇ ಮರೆತುಬಿಡುತ್ತಾರೆ. ಆಸಾಹೀ ಈವ್ನಿಂಗ್ ನ್ಯೂಸ್‌ನಿಂದ ವರದಿಸಲ್ಪಟ್ಟ ಇತ್ತೀಚೆಗೆ ನಡೆದ ಅಪಘಾತಗಳಲ್ಲಿ ಇದು ಒಂದಾಗಿದೆ: ಒಬ್ಬ ಯುವಕನು ತನ್ನ ಟೆಲಿಫೋನ್‌ನಲ್ಲಿ ಮಾತಾಡುತ್ತಿರುವಾಗ ಪ್ಲ್ಯಾಟ್‌ಫಾರ್ಮ್‌ನ ಅಂಚಿನಲ್ಲಿ ನಿಂತಿದ್ದನು. ಪ್ರಜ್ಞೆಯಿಲ್ಲದೆ, ಅವನು ಮಾತಾಡುತ್ತಿದ್ದ ವ್ಯಕ್ತಿಗೆ ಬಗ್ಗಿ ನಮಸ್ಕರಿಸಿದಾಗ, ಅವನ ತಲೆ ಒಳಬರುತ್ತಿದ್ದ ಟ್ರೇನಿಗೆ ಹಗುರವಾಗಿ ಹೊಡೆಯಿತು. ಸಂತೋಷಕರವಾಗಿ, “ತನ್ನ ಬಲಗಡೆಯ ಕಣ್ಣಿನ ಮೇಲೆ ಒಂದು ಗಾಯ”ದೊಂದಿಗೆ ಮಾತ್ರ ಅವನು ತಪ್ಪಿಸಿಕೊಂಡನು. ಆದರೆ, ಮತ್ತೊಂದು ಘಟನೆಯಲ್ಲಿ, “ಸೆಲ್‌ಫೋನ್‌ನಲ್ಲಿ ಮಾತಾಡುತ್ತಿದ್ದ ಒಬ್ಬ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ಲ್ಯಾಟ್‌ಫಾರ್ಮ್‌ನ ಅಂಚಿನಲ್ಲಿ ಓಲಿಕೊಂಡಾಗ, ಒಂದು ಗೂಡ್ಸ್ ಟ್ರೇನಿನಿಂದ ಹೊಡೆಯಲ್ಪಟ್ಟು ಕೊಲ್ಲಲ್ಪಟ್ಟನು.” ಕೆಲವೊಮ್ಮೆ ಜನರು ತಮ್ಮ ಟೆಲಿಫೋನ್‌ಗಳನ್ನು ಟ್ರ್ಯಾಕ್‌ಗಳ ಮೇಲೆ ಬೀಳಿಸಿಬಿಡುತ್ತಾರೆ ಎಂಬುದಾಗಿ ಸ್ಟೇಷನ್ ಸಿಬ್ಬಂದಿಗಳು ಹೇಳುತ್ತಾರೆ. ತನ್ನ ಟೆಲಿಫೋನನ್ನು ಎತ್ತಿಕೊಳ್ಳಲು ದುಮುಕಿದ 26 ವರ್ಷ ಪ್ರಾಯದ ಒಬ್ಬ ವ್ಯಕ್ತಿಯು, ಒಂದು ಟ್ರೇನಿನ ಕೆಳಗೆ “ನುಜ್ಜುಗುಜ್ಜಾಗಿ ಸತ್ತನು.” “ರೈಲ್ವೇ ಪ್ಲ್ಯಾಟ್‌ಫಾರ್ಮ್‌ಗಳು ಅತ್ಯಪಾಯಕಾರಿ ಸ್ಥಳಗಳಾಗಿವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ” ರೈಲ್ವೇ ಅಧಿಕಾರಿಗಳು ಜನರನ್ನು ಕೇಳಿಕೊಳ್ಳುತ್ತಾರೆ.(g01 6/22)