ನಿಷೇಧದ ಕೆಳಗೆ ಯೆಹೋವನು ನಮ್ಮನ್ನು ಪರಾಮರಿಸಿದನು—ಭಾಗ 3
ಅದು 1990 ರ ಮಾರ್ಚ್ 14 ನೆಯ ತಾರೀಕಾಗಿತ್ತು. ಆ ಸ್ಮರಣೀಯ ದಿನದಲ್ಲಿ, ಯಾವುದು ಆಗ ಜರ್ಮನ್ ಗಣರಾಜ್ಯ ಅಥವಾ ಪೂರ್ವ ಜರ್ಮನಿಯೆಂದು ಕರೆಯಲ್ಪಡುತ್ತಿತ್ತೋ ಅಲ್ಲಿನ ಯೆಹೋವನ ಸಾಕ್ಷಿಗಳಿಗೆ ಶಾಸನ ಬದ್ಧತೆಯನ್ನು ಅನುಗ್ರಹಿಸಿದ ಪ್ರಮಾಣಪತ್ರವನ್ನು, ಪೂರ್ವ ಬರ್ಲಿನ್ ಧಾರ್ಮಿಕ ಕಾರ್ಯಾಧಿಗಳ ಸರಕಾರಿ ಇಲಾಖೆಯ ಒಬ್ಬ ಉಚ್ಛ ಸರಕಾರಿ ಅಧಿಕಾರಿಯು ನೀಡಿದಾಗ ಹಾಜರಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ. ಆ ದಿನದ ಕಾರ್ಯಗತಿಗಳ ಸಮಯದಲ್ಲಿ, ನಾನು ಸಾಕ್ಷಿಯಾಗಿದ್ದ ಹಿಂದಿನ ಸಮಯದ ಕುರಿತು ಆಲೋಚಿಸಿದೆ ಮತ್ತು ನಾವು ಅನುಭವಿಸಿದ್ದ ಕಷ್ಟದ ದಿನಗಳನ್ನು ಪ್ರತಿಬಿಂಬಿಸಿದೆ.
1950 ಗಳ ಮಧ್ಯ ಭಾಗದಲ್ಲಿ, ಸಾಕ್ಷಿಯಾಗಿದ್ದ ಒಬ್ಬ ಸಹೋದ್ಯೋಗಿ ಮಾರ್ಗರೆಟ್ ಮೊದಲ ಬಾರಿ ತನ್ನ ಬೈಬಲಾಧಾರಿತ ನಂಬಿಕೆಗಳ ಕುರಿತು ನನಗೆ ತಿಳಿಸಿದಾಗ, ಪೂರ್ವ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ಹಿಂಸೆಯು ತೀವ್ರವಾಗಿತ್ತು. ಅನಂತರ ಸ್ವಲ್ಪ ಸಮಯದಲ್ಲಿ ಅವಳು ಬೇರೆ ಕಡೆ ಕೆಲಸಮಾಡಲು ಹೋದಳು ಮತ್ತು ನಾನು ಇನ್ನೊಬ್ಬ ಸಾಕ್ಷಿಯೊಂದಿಗೆ ಬೈಬಲಭ್ಯಾಸ ಪ್ರಾರಂಭಿಸಿದೆ. 1956 ರಲ್ಲಿ ನನಗೆ ದೀಕ್ಷಾಸ್ನಾನವಾಯಿತು, ಮತ್ತು ಅದೇ ವರ್ಷ ಮಾರ್ಗರೆಟ್ ಮತ್ತು ನಾನು ಮದುವೆಯಾದೆವು. ನಾವು ಬರ್ಲಿನ್ನ ಲಿಕ್ಟನ್ಬರ್ಗ್ ಸಭೆಯಲ್ಲಿ ಸಹವಸಿಸುತ್ತಿದ್ದೆವು. ಅದರಲ್ಲಿ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಿದ್ದ ಸುಮಾರು 60 ರಾಜ್ಯದ ಪ್ರಚಾರಕರು ಇದ್ದರು.
ನನ್ನ ದೀಕ್ಷಾಸ್ನಾನದ ಎರಡು ವರ್ಷಗಳ ಅನಂತರ, ನಮ್ಮ ಸಭೆಯಲ್ಲಿ ನಾಯಕತ್ವ ವಹಿಸುತ್ತಿದ್ದ ಒಬ್ಬನ ಮನೆಯನ್ನು ಸರಕಾರಿ ಅಧಿಕಾರಿಗಳು ಸಂದರ್ಶಿಸಿದರು. ಅವರು ಅವನನ್ನು ದಸ್ತಗಿರಿ ಮಾಡಲು ಯೋಚಿಸಿದ್ದರು, ಆದರೆ ಅವನು ಪಶ್ಚಿಮ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದನು. ಅವನು ಅಲ್ಲಿಯೇ ಉಳಿಯುವಂತೆ ಅವನ ಕುಟುಂಬವು ಅವನಿಗೆ ತಿಳಿಸಲು ಶಕವ್ತಾಯಿತು ಮತ್ತು ಕೆಲವು ತಿಂಗಳ ಅನಂತರ ಅವರು ಪಶ್ಚಿಮದಲ್ಲಿ ಅವನನ್ನು ಜತೆಗೂಡಿದರು. ನಾನು ಕೇವಲ 24 ವರ್ಷ ವಯಸ್ಸಿನವನಾಗಿದ್ದರೂ, ಸಭೆಯಲ್ಲಿ ನನಗೆ ಆಗ ಭಾರವಾದ ಜವಾಬ್ದಾರಿಕೆಗಳು ಕೊಡಲ್ಪಟ್ಟಿದ್ದವು. ಅಂಥ ಕೆಲಸಗಳನ್ನು ನಿರ್ವಹಿಸಲಿಕ್ಕೆ ಬೇಕಾದ ವಿವೇಕ ಮತ್ತು ಬಲವನ್ನು ಯೆಹೋವನು ಒದಗಿಸುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.—2 ಕೊರಿಂಥ 4:7.
ಆತ್ಮಿಕ ಆಹಾರವನ್ನು ಒದಗಿಸುವುದು
ಆಗಸ್ಟ್ 1961 ರಲ್ಲಿ ಬರ್ಲಿನ್ ಗೋಡೆಯು ಕಟ್ಟಲ್ಪಟ್ಟಾಗ, ಪೂರ್ವ ಜರ್ಮನಿಯ ಯೆಹೋವನ ಸಾಕ್ಷಿಗಳು ಪಶ್ಚಿಮದ ತಮ್ಮ ಸಹೋದರರಿಂದ ಫಕ್ಕನೆ ಪ್ರತ್ಯೇಕಿಸಲ್ಪಟ್ಟರು. ಹೀಗೆ ನಾವು ನಮ್ಮ ಸಾಹಿತ್ಯದ ಪ್ರತಿಗಳನ್ನು, ಮೊದಲು ಟೈಪ್ರೈಟರ್ ಮೂಲಕವಾಗಿ, ಮತ್ತು ನಂತರ ದುಪ್ರತಿ ಮೆಶೀನುಗಳ ನಕಲುಮಾಡುವ ಕಾಲಾವಧಿಯು ಆರಂಭಿಸಿತು. 1963 ರಿಂದ ಆರಂಭಿಸಿ, ನಾನು ನನ್ನ ಮನೆಯಲ್ಲಿ ಈ ಮುದ್ರಣವನ್ನು ಮಾಡಲು ಒಂದು ಮರೆಯಾದ ಸ್ಥಳವನ್ನು ಕಟ್ಟಲು ಎರಡು ವರ್ಷಗಳನ್ನು ಕಳೆದೆ. ದಿನವಿಡೀ ಯಂತ್ರೋಪಕರಣದ ಕೆಲಸವನ್ನು ಮಾಡಿದ ಮೇಲೆ, ರಾತ್ರಿಯನ್ನು ದ ವಾಚ್ಟವರ್ (ಕಾವಲಿನಬುರುಜು) ಪ್ರತಿಗಳನ್ನು ಇತರ ಕೆಲವು ಸಹೋದರರ ಸಹಾಯದಿಂದ ಉತ್ಪಾದಿಸುವುದರಲ್ಲಿ ಕಳೆಯುತ್ತಿದ್ದೆ. ನಮ್ಮ ಮುದ್ರಣ ಸಂಘಟನೆಯನ್ನು ಭೇದಿಸಿ ತಿಳಿಯಲು ಅಧಿಕಾರಿಗಳು ಪಟ್ಟುಹಿಡಿದಿದ್ದರು, ಆದರೆ ನಾವದನ್ನು ಕರೆಯುತ್ತಿದ್ದ ಪ್ರಕಾರ, ನಮ್ಮ ಆಹಾರವು, ಸಮಯಕ್ಕೆ ಸರಿಯಾಗಿ ಗೋಚರವಾಗುವಂತೆ ಯೆಹೋವನು ನಮಗೆ ಸಹಾಯಮಾಡಿದನು.
ನಮ್ಮ ಪತ್ರಿಕೆಗಳ ಸಾಕಷ್ಟು ಪ್ರತಿಗಳನ್ನು ಉತ್ಪಾದಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಗದದ ಆವಶ್ಯಕತೆ ಇತ್ತು, ಮತ್ತು ಅಷ್ಟು ದೊಡ್ಡ ಮೊತ್ತವನ್ನು ಪಡಕೊಳ್ಳುವುದು ಸುಲಭವಾಗಿರಲಿಲ್ಲ. ನಾವು ಕ್ರಮವಾಗಿ ಕಾಗದವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದರೆ, ಅದು ಅಧಿಕಾರಿಗಳ ಗಮನವನ್ನು ಆಕರ್ಷಿಸುತ್ತಿತ್ತು. ಆದುದರಿಂದ ಸಾಕ್ಷಿಗಳು ವೈಯಕ್ತಿಕವಾಗಿ ಚಿಕ್ಕ ಪ್ರಮಾಣದಲ್ಲಿ ಕಾಗದ ಖರೀದಿಸುವಂತೆ ಮತ್ತು ನಮ್ಮ ಗುಂಪು ಬೈಬಲಭ್ಯಾಸಕ್ಕೆ ಅದನ್ನು ತರುವಂತೆ ನಾವು ಏರ್ಪಡಿಸಿದೆವು. ಅಲ್ಲಿಂದ ನಾವು ಪತ್ರಿಕೆಗಳನ್ನು ಉತ್ಪಾದಿಸುತ್ತಿದ್ದ ಸ್ಥಳಕ್ಕೆ ಅದನ್ನು ಒಯ್ಯುತ್ತಿದ್ದೆವು. ಸಿದ್ಧವಾದ ಪತ್ರಿಕೆಗಳನ್ನು ಅನಂತರ ಇತರ ಸಾಕ್ಷಿಗಳು ಹಂಚುತ್ತಿದ್ದರು.
ಸಾಹಿತ್ಯದ ಮುದ್ರಣದಲ್ಲಿ ನಾನು ಒಳಗೂಡಿದ್ದೇನೆಂದು ಅಧಿಕಾರಿಗಳು ಸಂಶಯ ಪಟ್ಟದ್ದರಿಂದ, ಅವರು ನನ್ನ ಮೇಲೆ ನಿಕಟವಾದ ನಿಗವನ್ನಿಟ್ಟಿದ್ದರು. 1965 ರ ಕೊನೆಯಲ್ಲಿ ಅವರು ಎಂದಿಗಿಂತ ಹೆಚ್ಚು ಸಲ ನನ್ನನ್ನು ಹಿಂಬಾಲಿಸುವುದು ಕಂಡುಬಂತು ಮತ್ತು ಅವರೇನಾದರೂ ವ್ಯೂಹ ರಚಿಸುತ್ತಿದ್ದಾರೆಂಬ ಅನಿಸಿಕೆಯಾಯಿತು. ದಿಢೀರನೇ ಒಂದು ಬೆಳಗಾತ ಅವರು ಮೇಲೆರಗಿದರು.
ಅಪಾಯ ಹತ್ತಿರದಲ್ಲಿ
ಆ ಚಳಿಗಾಲದ ಬೆಳಗ್ಗೆ ನಾನು ಕೆಲಸಕ್ಕೆ ಹೊರಟಿದ್ದೆ. ಅದು ಬೆಳಕು ಹರಿಯುವ ಮೊದಲು, ಕೊರೆಯುವ ಚಳಿಯ ಎದುರಾಗಿ ನಾನು ನನ್ನನ್ನು ಬಿಗಿಮಾಡಿಕೊಂಡಿದ್ದೆ. ನಾನಿನ್ನೂ ನಡೆಯುತ್ತಿದ್ದಾಗ, ಬೇಲಿಯ ಮೇಲಿಂದ ನಾಲ್ಕು ತಲೆಗಳು ಕಾಣಿಸಿದವು. ಆ ಪುರುಷರು ಮೂಲೆ ತಿರುಗಿ ನನ್ನ ಕಡೆಗೆ ಬರತೊಡಗಿದರು. ಅವರು ಸರಕಾರಿ ಅಧಿಕಾರಿಗಳೆಂದು ಗುರುತಿಸಿದಾಗ ನನಗೆ ದಿಗಿಲು ತಪ್ಪಿತು. ನಾನೇನು ಮಾಡಲಿ?
ದಟ್ಟವಾದ ಹಿಮವನ್ನು ಬದಿಗೆತಿಹ್ತಾಕಿ ಅಲ್ಲಿ ಒಂದು ಕಿರಿದಾದ ದಾರಿಯನ್ನು ಬಿಡಲಾಗಿತ್ತು. ನಾನು ನಡೆಯುತ್ತಲೇ ಇದ್ದೆ. ತಲೆ ತಗ್ಗಿಸಿಟ್ಟು, ನೆಲದೆಡೆಗೆ ನೆಟ್ಟದೃಷ್ಟಿಯೊಂದಿಗೆ ನಾನು ಮುಂದರಿದೆ. ಒಂದು ತೀವ್ರ ಪ್ರಾರ್ಥನೆಯನ್ನು ಪಿಸುಗುಟ್ಟಿದೆ. ಪುರುಷರು ಹತ್ತಿರ ಮತ್ತು ಇನ್ನೂ ಹತ್ತಿರವಾಗಿ ಬರುತ್ತಿದ್ದರು. ಅವರು ನನ್ನ ಗುರುತು ಹಿಡಿದಿದ್ದಾರೋ? ಇಕ್ಕಟ್ಟಾದ ಆ ಕಾಲುದಾರಿಯಲ್ಲಿ ನಾವು ಒಬ್ಬರನ್ನೊಬ್ಬರು ದಾಟಲು ಅತಿ ಸಮೀಪ ಬಂದಾಗ, ಏನು ಸಂಭವಿಸುತ್ತಾ ಇದೆ ಎಂದು ನನಗೆ ನಂಬಲಾಗಲಿಲ್ಲ. ನಾನು ವೇಗವಾಗಿ ನಡೆಯುತ್ತಲೇ ಹೋದೆ. “ಹೇ,” ಎಂದು ಅರಚಿದ ಅವರಲ್ಲೊಬ್ಬ, “ಅವನೇ ಇವನು. ನಿಲ್ಲು!”
ನಾನು ಶಕ್ಯವಾದಷ್ಟು ವೇಗದಿಂದ ಓಡತೊಡಗಿದೆ. ವೇಗದಿಂದ ಮೂಲೆತಿರುಗಿ ನೆರೆಯವನ ಬೇಲಿಯ ಮೇಲಿಂದ ಹಾರಿ, ನನ್ನ ಸ್ವಂತ ಹಿತ್ತಲಿಗೆ ಧಾವಿಸಿದೆ. ಮನೆಯೊಳಗೆ ರಭಸದಿಂದ ನುಗ್ಗಿ ಬಾಗಿಲಿಗೆ ಬೀಗ ಮತ್ತು ಅಗುಳಿಹಾಕಿಬಿಟ್ಟೆ. “ಪ್ರತಿಯೊಬ್ಬನು ಹಾಸಿಗೆಯಿಂದೇಳಿ!” ಅಬ್ಬರಿಸಿದೆ ನಾನು. “ನನ್ನನ್ನು ಹಿಡಿಯಲು ಇಲ್ಲಿಗೆ ಬಂದಿದ್ದಾರೆ.”
ಮಾರ್ಗರೆಟ್ ತಕ್ಷಣ ಕೆಳಗೆ ಬಂದಳು ಮತ್ತು ಬಾಗಲ ಬಳಿ ನಿಂತಳು. ಆ ಕೂಡಲೇ ನಾನು ನೆಲಮಾಳಿಗೆಗೆ ಓಡಿ ಒಲೆಗೆ ಉರುವಲು ಹಾಕಿದೆ. ನನ್ನಲ್ಲಿದ್ದ ಎಲ್ಲಾ ಸಭಾ ದಾಖಲೆಪತ್ರಗಳನ್ನೆಳೆದು ಬೆಂಕಿಗೆ ಹಾಕಿಬಿಟ್ಟೆನು.
“ತೆರೆ!” ಎಂದು ಗುಡುಗಿದರು ಆ ಪುರುಷರು. “ಬಾಗಲು ತೆರೆ! ನಾವು ಸಾರ್ವಜನಿಕ ಫಿರ್ಯಾದಿ ಅಧಿಕಾರಿಗಳು.”
ನಾನೆಲ್ಲವನ್ನು ಗುರುತು ಸಿಗದಂತೆ ಸುಟ್ಟುಹಾಕುವ ತನಕ ಮಾರ್ಗರೆಟ್ ಅಲ್ಲಿಂದ ಕದಲಲಿಲ್ಲ. ಅನಂತರ ನಾನು ಅವಳ ಬಳಿಗೆ ಬಂದು ಬಾಗಿಲು ತೆರೆಯುವಂತೆ ಸನ್ನೆ ಮಾಡಿದೆ. ಪುರುಷರು ಮನೆಯೊಳಗೆ ನುಗ್ಗಿದರು.
“ನೀನು ಓಡಿಹೋದದ್ದೇಕೆ?” ಕೇಳಿದರವರು.
ಅಷ್ಟರೊಳಗೆ ಇನ್ನೂ ಹೆಚ್ಚು ಅಧಿಕಾರಿಗಳು ಆಗಮಿಸಿದರು ಮತ್ತು ಇಡೀ ಮನೆಯನ್ನು ತಲಾಷು ಮಾಡಲಾಯಿತು. ನನ್ನ ಮುಖ್ಯ ಚಿಂತೆಯು ನಮ್ಮ ಮುದ್ರಣ ಯಂತ್ರ ಮತ್ತು 40,000 ಕಾಗದದ ಶೀಟುಗಳನ್ನು ಇಟ್ಟಿದ್ದ ಆ ಮರೆಯಾದ ಸ್ಥಳ. ಆದರೆ ಮರೆಯಲ್ಲಿದ್ದ ಆ ಬಾಗಲು ಕಣ್ಣಿಗೆ ಬೀಳದೆ ಹೋಯಿತು. ತಾಸುಗಳ ತನಕ ವಿಧಿವತ್ತಾದ ಪ್ರಶ್ನಾವಳಿ ನಡೆದರೂ, ನಾನು ಶಾಂತನಾಗಿರುವಂತೆ ಯೆಹೋವನು ಸಹಾಯ ಮಾಡಿದನು. ಆ ಅನುಭವವು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ನಮ್ಮನ್ನು ಹತ್ತಿರವಾಗಿ ಎಳೆಯಿತು ಮತ್ತು ತಾಳಿಕೊಂಡಿರಲು ನಮ್ಮನ್ನು ಬಲಪಡಿಸಿತು.
ಸೆರೆಮನೆಯಲ್ಲಿ, ಆದರೆ ಮುಕ್ತ
1960 ರ ಕೊನೆಯಲ್ಲಿ ನನಗೆ ಮಿಲಿಟರಿ ಸೇವೆಗಾಗಿ ವರದಿಮಾಡುವಂತೆ ತಿಳಿಸಲಾಯಿತು. ನಾನು ಮನಸ್ಸಾಕ್ಷಿಪೂರ್ವಕವಾಗಿ ಸೇವೆಮಾಡಲು ಶಕ್ತನಾಗದರ್ದಿಂದ, ಏಳು ತಿಂಗಳ ಶ್ರಮ-ಶಿಬಿರದ ಜೈಲುವಾಸವನ್ನು ನನಗೆ ಕೊಡಲಾಯಿತು. ಬರ್ಲಿನ್ನ ಆಗ್ನೇಯದಲ್ಲಿರುವ ಕಾಟ್ಬಸ್ನ ಶಿಬಿರದಲ್ಲಿ 15 ಮಂದಿ ಸಾಕ್ಷಿಗಳಿದ್ದರು. ನಾವೆಲ್ಲರೂ ಅಲ್ಲಿದ್ದದ್ದು ನಮ್ಮ ಕ್ರೈಸ್ತ ತಾಟಸ್ಥ್ಯಕ್ಕಾಗಿ. (ಯೆಶಾಯ 2:2-4; ಯೋಹಾನ 17:16) ನಮ್ಮ ದುಡಿತದ ದಿನಗಳು ದೀರ್ಘವಾಗಿದ್ದವು ಮತ್ತು ಕೆಲಸವು ಕಷ್ಟಕರವಾಗಿತ್ತು. ಬೆಳಗ್ಗೆ 4:15 ಕ್ಕೆ ನಾವು ಏಳುತ್ತಿದೆವ್ದು ಮತ್ತು ರೈಲುಮಾರ್ಗದ ಪಟ್ಟೆಯಲ್ಲಿ ಕೆಲಸ ಮಾಡಲು ಶಿಬಿರದ ಹೊರಗೆ ಒಯ್ಯಲ್ಪಡುತ್ತಿದ್ದೆವು. ಆದರೂ, ಸೆರೆಯಲ್ಲಿರುವಾಗ ಯೆಹೋವನ ರಾಜ್ಯದ ಕುರಿತು ಒಬ್ಬರಿಗೊಬ್ಬರು ಮಾತಾಡುವ ಸಂದರ್ಭಗಳು ನಮಗೆ ದೊರೆಯುತ್ತಿದ್ದವು.
ದೃಷ್ಟಾಂತಕ್ಕಾಗಿ, ಕಾಟ್ಬಸ್ನಲ್ಲಿ ನಮ್ಮೊಂದಿಗೆ ಇಬ್ಬರು ಭವಿಷ್ಯ ಹೇಳುವವರಿದ್ದರು. ಅವರಲ್ಲಿ ಚಿಕ್ಕವನು ನನ್ನೊಂದಿಗೆ ಮಾತಾಡಲು ತೀವ್ರಾಭಿಲಾಶೆ ಪಡುತ್ತಾನೆಂದು ಒಂದು ದಿನ ನನಗೆ ತಿಳಿಯಿತು. ಅವನಿಗೇನು ಬೇಕಿತ್ತು? ನನಗೆಲ್ಲವನ್ನು ಅವನು ತಿಳಿಸಿದನು. ಅವನ ಅಜಿಯ್ಜು ಒಬ್ಬ ಭವಿಷ್ಯ ನುಡಿಯುವವಳಾಗಿದ್ದಳು, ಮತ್ತು ಅವಳ ಪುಸ್ತಕಗಳನ್ನೋದಿದ ನಂತರ ಅವನು ತದ್ರೀತಿಯ ಶಕ್ತಿಯನ್ನು ವಿಕಾಸಿಸಿಕೊಂಡಿದ್ದನು. ಅವನನ್ನು ಅಡಿಯಾಳಾಗಿ ಮಾಡಿದ್ದ ಆ ಶಕಿಗ್ತಳಿಂದ ಬಿಡಿಸಿಕೊಳ್ಳಲು ಅವನು ಬಹಳಷ್ಟು ಬಯಸಿದ್ದರೂ, ಪ್ರತೀಕಾರಗಳಿಗೆ ಹೆದರಿದ್ದನು. ಅವನು ಬಹಳವಾಗಿ ಅತನ್ತು. ಆದರೆ ಇವೆಲ್ಲವುಗಳಿಗೆ ನನ್ನೊಂದಿಗೆ ಏನು ಸಂಬಂಧ?
ಯೆಹೋವನ ಸಾಕ್ಷಿಗಳ ಸಹವಾಸದಲ್ಲಿರುವಾಗ ಭವಿಷ್ಯ ನುಡಿಯುವ ಅವನ ಶಕ್ತಿಯು ಕುಗ್ಗುತ್ತದೆ ಎಂದು ನಮ್ಮ ಸಂಭಾಷಣೆಯ ಸಮಯದಲ್ಲಿ ಅವನು ವಿವರಿಸಿದನು. ಕೆಟ್ಟ ಆತ್ಮಗಳು ಅಥವಾ ದೆವ್ವಗಳು, ಮತ್ತು ಒಳ್ಳೆಯ ಆತ್ಮಗಳು ಅಥವಾ ನೀತಿಯ ದೇವದೂತರುಗಳು ಎರಡೂ ಇವೆಯೆಂದು ನಾನು ವಿವರಿಸಿದೆ. ಪುರಾತನ ಎಫೆಸದಲ್ಲಿ ಕ್ರೈಸ್ತರಾದವರ ಉದಾಹರಣೆಯನ್ನು ಉಪಯೋಗಿಸುತ್ತಾ, ಭವಿಷ್ಯ ನುಡಿಯುವುದಕ್ಕೆ ಅಥವಾ ಬೇರೆ ಯಾವುದೇ ಪ್ರೇತಾರಾಧನಾ ಪದ್ಧತಿಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೊಲಗಿಸಿಬಿಡುವ ಅಗತ್ಯವನ್ನು ನಾನು ಒತ್ತಿಹೇಳಿದೆ. (ಅ.ಕೃತ್ಯಗಳು 19:17-20) “ಅನಂತರ ಸಾಕ್ಷಿಗಳನ್ನು ಸಂಪರ್ಕಿಸು,” ಎಂದೆ ನಾನು ಅವನಿಗೆ. “ಸಾಕ್ಷಿಗಳು ಎಲ್ಲಾ ಕಡೆಗಳಲ್ಲಿಯೂ ವಾಸಿಸುತ್ತಿದ್ದಾರೆ.”
ಕೆಲವು ದಿನಗಳ ಅನಂತರ ಆ ಯುವಕನು ಶಿಬಿರವನ್ನು ಬಿಟ್ಟುಹೋದನು, ಮತ್ತು ಅವನ ಕುರಿತು ಹೆಚ್ಚೇನೂ ನನಗೆ ಕೇಳಸಿಗಲಿಲ್ಲ. ಆದರೆ ಮುಕ್ತತೆಗಾಗಿ ಹಾತೊರೆದಿದ್ದ ಭಯಭೀತನೂ ಸಂತಯಿಸಲಾಗದವನೂ ಆಗಿದ್ದ ಆ ಮನುಷ್ಯನ ಅನುಭವವು, ಯೆಹೋವನಿಗಾಗಿ ನನ್ನ ಪ್ರೀತಿಯನ್ನು ಆಳಗೊಳಿಸಿತು. ಶಿಬಿರದಲ್ಲಿದ್ದ ನಾವು 15 ಸಾಕ್ಷಿಗಳು ನಮ್ಮ ನಂಬಿಕೆಯ ಕಾರಣ ಅಲ್ಲಿದ್ದೆವು, ಆದರೆ ಆತ್ಮಿಕ ರೀತಿಯಲ್ಲಿ ನಾವು ಮುಕ್ತರಾಗಿದ್ದೆವು. ಆ ಯುವಕನು ಸೆರೆಮನೆಯಿಂದ ಮುಕ್ತನಾಗಿ ಮಾಡಲ್ಪಟ್ಟನು, ಆದರೆ ಅವನನ್ನು ಭೀತಿಯಲ್ಲಿಟ್ಟಿದ್ದ ಒಬ್ಬ “ದೇವರಿಗೆ” ಅವನಿನ್ನೂ ದಾಸನಾಗಿದ್ದನು. (2 ಕೊರಿಂಥ 4:4) ನಮ್ಮ ಆತ್ಮಿಕ ಸ್ವಾತಂತ್ರ್ಯವನ್ನು ಸಾಕ್ಷಿಗಳಾದ ನಾವು ಎಷ್ಟು ನೆಚ್ಚಬೇಕು!
ನಮ್ಮ ಮಕ್ಕಳು ಪರೀಕ್ಷಿಸಲ್ಪಟ್ಟರು
ತಮ್ಮ ಬೈಬಲಾಧಾರಿತ ನಂಬಿಕೆಗಳಿಗಾಗಿ ಪ್ರಾಯಸ್ಥರು ದೃಢರಾಗಿ ನಿಲ್ಲಬೇಕಿತ್ತು ಮಾತ್ರವಲ್ಲ ಎಳೆಯರು ಸಹ ಹಾಗೆ ಮಾಡಬೇಕಿತ್ತು. ಶಾಲೆಯಲ್ಲಿ ಮತ್ತು ಕೆಲಸದಲ್ಲಿ ಒಪ್ಪಂದ ಮಾಡಿಕೊಳ್ಳಲು ಅವರನ್ನು ಒತ್ತಾಯಿಸಲಾಗುತ್ತಿತ್ತು. ನಮ್ಮ ನಾಲ್ಕು ಮಕ್ಕಳಲ್ಲಿ ಎಲ್ಲರಿಗೂ ತಮ್ಮ ನಂಬಿಕೆಗಳಿಗಾಗಿ ದೃಢವಾದ ಸ್ಥಾನವನ್ನು ತಕ್ಕೊಳ್ಳಬೇಕಾಯಿತು.
ಪ್ರತಿ ಸೋಮವಾರ ಶಾಲೆಯಲ್ಲಿ ಧ್ವಜ-ವಂದನೆಯ ಸಮಾರಂಭವು ನಡೆಯುತ್ತಿತ್ತು. ಮಕ್ಕಳು ವಠಾರದಲ್ಲಿ ಕೂಡಿಬರುತ್ತಿದ್ದರು, ಒಂದು ಹಾಡನ್ನು ಹಾಡುತ್ತಿದ್ದರು, ಮತ್ತು ಧಜ್ವಾರೋಹಣವಾದಾಗ ಟೆಲ್ಮ್ಯಾನ್ ಸೆಲ್ಯೂಟ್ ಎನ್ನಿಸಿಕೊಂಡ ವಂದನೆಯನ್ನು ಮಾಡುತ್ತಿದ್ದರು. ಅರ್ನ್ಸ್ಟ್ ಟೆಲ್ಮ್ಯಾನನು ನಾಝೀ ಪೊಲೀಸರಿಂದ 1944 ರಲ್ಲಿ ಕೊಲ್ಲಲ್ಪಟ್ಟ ಒಬ್ಬ ಜರ್ಮನ್ ಕಾಮ್ಯೂನಿಸ್ಟನಾಗಿದ್ದನು. ಎರಡನೆಯ ಲೋಕ ಯುದ್ಧದ ಅನಂತರ, ಟೆಲ್ಮ್ಯಾನನು ಪೂರ್ವ ಜರ್ಮನಿಯ ವೀರನೆನಿಸಿಕೊಂಡನು. ಯೆಹೋವ ದೇವರಿಗೆ ಮಾತ್ರವೇ ಪವಿತ್ರ ಸೇವೆಯು ಸಲ್ಲಿಸಲ್ಪಡಬೇಕು ಎಂಬ ಬೈಬಲಾಧಾರಿತ ನಂಬಿಕೆಯ ಕಾರಣ, ಅಂಥ ಸಮಾರಂಭಗಳಲ್ಲಿ ಗೌರವಪೂರ್ವಕವಾಗಿ ನಿಲ್ಲಬಹುದೇ ಹೊರತು ಭಾಗವಹಿಸಬಾರದು ಎಂಬ ಸೂಚನೆಯನ್ನು ನಾನು ಮತ್ತು ನನ್ನ ಪತ್ನಿ ನಮ್ಮ ಮಕ್ಕಳಿಗೆ ಕೊಟ್ಟೆವು.
ಶಾಲಾ ಮಕ್ಕಳಿಗೆ ಸಹ ಕಾಮ್ಯೂನಿಸ್ಟ್ ಹಾಡುಗಳನ್ನು ಕಲಿಸುತ್ತಿದ್ದರು. ನಾನು ಮತ್ತು ಮಾರ್ಗರೆಟ್ ನಮ್ಮ ಮಕ್ಕಳ ಶಾಲೆಗೆ ಹೋಗಿ, ಅಂಥ ರಾಜಕೀಯ ಹಾಡುಗಳನ್ನು ನಾವೇಕೆ ಹಾಡುವುದಿಲ್ಲವೆಂದು ವಿವರಿಸಿದೆವು. ಆದರೂ ಬೇರೆ ರೀತಿಯ ಹಾಡುಗಳನ್ನು ಹಾಡಲು ಅವರು ಸಿದ್ಧರಿದ್ದಾರೆಂದು ತಿಳಿಸಿದೆವು. ಹೀಗೆ ಚಿಕ್ಕ ಪ್ರಾಯದಿಂದಲೇ ನಮ್ಮ ಮಕ್ಕಳು ದೃಢರಾಗಿ ನಿಲ್ಲಲು ಮತ್ತು ತಮ್ಮ ಸಮವಯಸ್ಕರಿಂದ ಬೇರೆಯಾಗಿರಲು ಕಲಿತರು.
1970 ರ ಅಂತ್ಯದ ಸುಮಾರಿಗೆ, ನಮ್ಮ ದೊಡ್ಡ ಮಗಳು ಒಂದು ಆಫೀಸಿನಲ್ಲಿ ಕೆಲಸಕ್ಕೆ ಹೊಸಗಸುಬಿಯಾಗಿ ಸೇವೆಮಾಡಲು ಬಯಸಿದಳು. ಆದರೆ, ಪ್ರತಿ ಹೊಸಗಸುಬಿಗಳು ಮೊದಲಾಗಿ 14 ದಿನಗಳ ಮಿಲಿಟರಿ ತರಬೇತನ್ನು ಪಡೆಯುವ ಆವಶ್ಯಕತೆ ಇತ್ತು. ಇದರಲ್ಲಿ ಭಾಗವಹಿಸಲು ರೆನಾಟೆಯ ಮನಸ್ಸಾಕ್ಷಿಯು ಅನುಮತಿಸಲಿಲ್ಲವಾದ್ದರಿಂದ, ಆಕೆ ಒಂದು ಧೀರ ನಿಲುವನ್ನು ತಕ್ಕೊಂಡಳು ಮತ್ತು ಕೊನೆಗೆ ಅಂಥ ತರಬೇತನ್ನು ಪಡೆಯುವ ಜವಾಬ್ದಾರಿಕೆಯಿಂದ ಮನ್ನಿಸಲ್ಪಟ್ಟಳು.
ಒಮ್ಮೆ ಅವಳ ಕಲಿಕೆಯ ಕೆಲಸದ ಸಮಯದಲ್ಲಿ ರೆನಾಟೆ ಕ್ಲಾಸಿಗೆ ಹೋದಾಗ, ಅವಳನ್ನು ಗುಂಡುಹೊಡೆಯುವ ಪ್ರ್ಯಾಕಿಸ್ಟಿಗೆ ಕರೆಯಲಾಯಿತು. “ರೆನಾಟೆ, ನೀನು ಸಹ ಗುಂಡು ಹೊಡೆಯುವ ಪ್ರ್ಯಾಕಿಸ್ಟಿಗೆ ಬರಬೇಕು,” ಎಂದನು ಅಧ್ಯಾಪಕ. ಅವಳ ಆಕ್ಷೇಪಗಳಿಗೆ ಅವನು ಅಸಡ್ಡೆಯಿಂದದ್ದನು. “ನೀನು ಗುಂಡು ಹೊಡೆಯುವ ಅಗತ್ಯವಿಲ್ಲ,” ಎಂದು ವಚನವಿತ್ತನು ಅವನು. “ತಿಂಡಿ ಪಾನೀಯಗಳ ವ್ಯವಸ್ಥೆಯನ್ನು ನೋಡಿಕೊಂಡರೆ ಸಾಕು.”
ಆ ಸಂಜೆ ನಾವು ಕುಟುಂಬವಾಗಿ ಆ ವಿಷಯ ಮಾತಾಡಿ ನೋಡಿದೆವು. ಗುಂಡು ಹೊಡೆಯುವ ಪ್ರ್ಯಾಕ್ಟಿಸ್ ನಡಿಯುವಲ್ಲಿ ರೆನಾಟೆಯ ಹಾಜರಿಯು, ಅವಳದರಲ್ಲಿ ನೇರವಾಗಿ ಪಾಲು ತಕ್ಕೊಳ್ಳದಿದ್ದರೂ ತಪ್ಪು ಎಂದು ನಾವು ಭಾವಿಸಿದೆವು. ನಮ್ಮೊಂದಿಗೆ ಮಾಡಿದ ಚರ್ಚೆಯಿಂದ ಮತ್ತು ಪ್ರಾರ್ಥನೆಯಿಂದ ಬಲಗೊಂಡವಳಾಗಿ, ಅವಳು ಬೆದರಿಕೆಗೆ ತನ್ನನ್ನು ಬಿಟ್ಟುಕೊಡಲಿಲ್ಲ. ನೀತಿಯ ತತ್ವಗಳಿಗಾಗಿ ನಮ್ಮ ಎಳೆಯ ಮಗಳು ತನ್ನ ದೃಢ ನಿಲುವನ್ನು ತಕ್ಕೊಂಡದ್ದನ್ನು ಕಾಣುವುದು ನಮಗೆಷ್ಟು ಪ್ರೋತ್ಸಾಹನೆಯಾಗಿತ್ತು!
ನಮ್ಮ ಬಹಿರಂಗ ಸೇವಾ ಚಟುವಟಿಕೆಗಳನ್ನು ಹೆಚ್ಚಿಸುವುದು
1970 ರ ಅಂತ್ಯದಲ್ಲಿ ನಮ್ಮ ಕಾರ್ಯಕ್ಕೆ ವಿರೋಧವು ನಿಂತಾಗ, ನಮ್ಮ ಕ್ರೈಸ್ತ ಪ್ರಕಾಶನಗಳ ದೊಡ್ಡ ಸಂಗ್ರಹವು ಪಶ್ಚಿಮದಿಂದ ತರಲ್ಪಡಲಾರಂಭಿಸಿತು. ಇದು ಗಂಡಾಂತರದ ಕೆಲಸವಾಗಿದ್ದರೂ, ಧೀರರಾದ ಸಹೋದರರು ಅದನ್ನು ಮಾಡಲು ತಮ್ಮನ್ನು ನೀಡಿಕೊಂಡರು. ಈ ಸಾಹಿತ್ಯ ಸಂಗ್ರಹಗಳ ವೃದ್ಧಿಯನ್ನು ಮತ್ತು ಅವನ್ನು ಶಕ್ಯವಾಗಿ ಮಾಡಿದವರ ಪ್ರಯತ್ನಗಳನ್ನು ನಾವು ಬಹಳವಾಗಿ ಗಣ್ಯಮಾಡಿದೆವು. ನಿಷೇಧದ ಪ್ರಾರಂಭದ ವರ್ಷಗಳಲ್ಲಿ ಹಿಂಸೆಯು ತೀವ್ರವಾಗಿದ್ದಾಗ, ಮನೆ-ಮನೆಯ ಸೇವೆಯು ಒಂದು ನಿಜ ಪಂಥಾಹ್ವಾನವಾಗಿತ್ತು. ವಾಸ್ತವದಲ್ಲಿ, ಅಧಿಕಾರಿಗಳಿಂದ ಶಿಕ್ಷೆಯ ಭಯದಿಂದಾಗಿ ಕೆಲವರು ಅದನ್ನು ಬಿಟ್ಟುಬಿಟ್ಟರು. ಆದರೆ ತಕ್ಕ ಸಮಯದಲ್ಲಿ ನಮ್ಮ ಬಹಿರಂಗ ಸಾರುವ ಕಾರ್ಯವು ಗಮನಾರ್ಹವಾಗಿ ವೃದ್ಧಿಯಾಯಿತು. 1960 ರ ವರ್ಷಗಳಲ್ಲಿ ಸುಮಾರು 25 ಪ್ರತಿಶತ ಪ್ರಚಾರಕರು ಮಾತ್ರವೇ ಮನೆ-ಮನೆಯ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುತ್ತಿದ್ದರು. ಆದರೆ 1980 ರ ವರ್ಷಗಳ ಅಂತ್ಯದೊಳಗೆ ಶುಶ್ರೂಷೆಯ ಆ ವಿಭಾಗದಲ್ಲಿ ಭಾಗವಹಿಸಿದವರ ಸಂಖ್ಯೆಯು 66 ಪ್ರತಿಶತಕ್ಕೆ ಏರಿತ್ತು! ಅಷ್ಟರೊಳಗೆ ಅಧಿಕಾರಿಗಳು ನಮ್ಮ ಬಹಿರಂಗ ಸಾರುವ ಚಟುವಟಿಕೆಗೆ ಕಡಿಮೆ ಗಮನವನ್ನು ಕೊಡಲಾರಂಭಿಸಿದ್ದರು.
ಒಂದು ಸಂದರ್ಭದಲ್ಲಿ ನನ್ನ ಸಂಗಡ ಸೇವೆ ಮಾಡುತ್ತಿದ್ದ ಒಬ್ಬ ಸಹೋದರನು ತನ್ನ ಚಿಕ್ಕ ಮಗಳನ್ನು ಕರತಂದನು. ನಾವು ಮಾತಾಡುತ್ತಿದ್ದ ವೃದ್ಧ ಮಹಿಳೆ ಆ ಹುಡುಗಿಯನ್ನು ಜೊತೆಯಲ್ಲಿ ಕಂಡು ಪ್ರೇರಿತಳಾಗಿ ನಮ್ಮನ್ನು ಮನೆಯೊಳಗೆ ಕರೆದಳು. ನಮ್ಮ ಶಾಸ್ತ್ರೀಯ ಪ್ರಸಂಗವನ್ನು ಅವಳು ಮೆಚ್ಚಿದಳು ಮತ್ತು ನಮ್ಮ ಪುನಃ ಸಂದರ್ಶನಕ್ಕೆ ಸಮ್ಮತಿಸಿದಳು. ಆ ಮೇಲೆ ನಾನು ಆ ಸಂದರ್ಶನವನ್ನು ನನ್ನ ಹೆಂಡತಿಗೆ ಒಪ್ಪಿಸಲಾಗಿ, ಆಕೆ ಒಡನೇ ಒಂದು ಮನೆ ಬೈಬಲಭ್ಯಾಸವನ್ನು ಆರಂಭಿಸಿದಳು. ಮುದೀ ವಯಸ್ಸು ಮತ್ತು ಅನಾರೋಗ್ಯದ ಮಧ್ಯೆಯೂ, ಈ ಮಹಿಳೆಯು ನಮ್ಮ ಸಹೋದರಿಯಾದಳು ಮತ್ತು ಯೆಹೋವನ ಸೇವೆಯಲ್ಲಿ ಕ್ರಿಯಾಶೀಲಳಾಗಿ ಮುಂದುವರಿಯುತ್ತಿದ್ದಾಳೆ.
ಸ್ವಾತಂತ್ರ್ಯವು ಹತ್ತಿರವಾದ ಹಾಗೆ ಹೊಂದಾಣಿಕೆಗಳು
ಹೆಚ್ಚಿನ ಸ್ವಾತಂತ್ರ್ಯವನ್ನು ನಾವು ಅನುಭವಿಸಲಿರುವ ಸಮಯಕ್ಕಾಗಿ ಯೆಹೋವನು ನಮ್ಮನ್ನು ಸಿದ್ಧಗೊಳಿಸಿದನು. ದೃಷ್ಟಾಂತಕ್ಕಾಗಿ: ನಿಷೇಧವು ತೆಗೆಯಲ್ಪಡುವ ಸ್ವಲ್ಪ ಮುಂಚೆ, ಕೂಟಗಳಲ್ಲಿ ನಾವು ಒಬ್ಬರನ್ನೊಬ್ಬರು ಕರೆಯುತ್ತಿದ್ದ ರೀತಿಯನ್ನು ಬದಲಾಯಿಸುವಂತೆ ನಮಗೆ ಸಲಹೆ ನೀಡಲ್ಪಟ್ಟಿತು. ಸುರಕ್ಷೆಯ ಕಾರಣಗಳಿಂದಾಗಿ, ನಾವು ಒಬ್ಬರನ್ನೊಬ್ಬರು ನಮ್ಮ ಮೊದಲನೆಯ ಹೆಸರುಗಳಿಂದ ಕರೆಯುತ್ತಿದ್ದೆವು. ಒಬ್ಬರನ್ನೊಬ್ಬರು ಅನೇಕ ವರ್ಷಗಳಿಂದ ತಿಳಿದಿದ್ದ ಅನೇಕರಿಗೆ ತಮ್ಮ ಜತೆ ವಿಶ್ವಾಸಿಯ ಕೊನೆಯ ಹೆಸರು ಗೊತ್ತಿರಲಿಲ್ಲ. ನಮ್ಮ ಕೂಟಗಳಿಗೆ ಇನ್ನೂ ಅನೇಕ ಆಸಕ್ತ ಜನರನ್ನು ಸ್ವಾಗತಿಸುವ ಸಿದ್ಧತೆಯಲ್ಲಿ, ಕುಟುಂಬದ ಹೆಸರುಗಳಿಂದ ಒಬ್ಬರನ್ನೊಬ್ಬರು ಕರೆಯುವಂತೆ ನಾವು ಉತ್ತೇಜಿಸಲ್ಪಟ್ಟೆವು. ಇದು ಕೆಲವರಿಗೆ ವ್ಯಕ್ತಿಸ್ವರೂಪರಹಿತವಾದಂತೆ ಕಂಡಿತು, ಆದರೆ ಯಾರು ಸಲಹೆಯನ್ನು ಪಾಲಿಸಿದರೋ ಅವರು, ನಮಗೆ ಸ್ವಾತಂತ್ರ್ಯವು ದೊರೆತಾಗ, ಹೆಚ್ಚು ಸುಲಭವಾಗಿ ಅದನ್ನು ಅಳವಡಿಸಿಕೊಂಡರು.
ನಮ್ಮ ಕೂಟಗಳನ್ನು ಒಂದು ಸಂಗೀತದಿಂದ ಆರಂಭಿಸುವಂತೆ ಸಹ ನಾವು ಪ್ರೋತ್ಸಾಹಿಸಲ್ಪಟ್ಟೆವು. ಈ ರೀತಿಯಲ್ಲಿ ನಾವು ಬೇರೆ ಕಡೆಗಳ ಸಭೆಗಳಿಂದ ಹಿಂಬಾಲಿಸಲ್ಪಡುವ ಕಾರ್ಯವಿಧಾನಕ್ಕೆ ಒಗ್ಗಿಸಿಕೊಳ್ಳುವಂತಾಯಿತು. ಇನ್ನೊಂದು ಬದಲಾವಣೆಯು ನಮ್ಮ ಅಭ್ಯಾಸ ಗುಂಪುಗಳ ಗಾತ್ರ. ಅವುಗಳು ಕ್ರಮೇಣ 1950 ರ ವರ್ಷಗಳಲ್ಲಿ ಇದ್ದ ನಾಲ್ಕರಿಂದ ಎಂಟಕ್ಕೆ ವೃದ್ಧಿಗೊಂಡಿತು. ಅನಂತರ 10 ಕ್ಕೇರಿತು, ಕೊನೆಗೆ 12 ಆಯಿತು. ಅದಲ್ಲದೆ, ಪ್ರತಿ ಸಭೆಯ ಕೂಟದ ಸ್ಥಳವು ಅಧಿಕಾಂಶ ಸಾಕ್ಷಿಗಳಿಗೆ ಕೇಂದ್ರವಾಗಿರುವ ಸ್ಥಳದಲ್ಲಿ ನೆಲೆಸಿರುವಂತೆ ನಿರ್ಣಯಿಸಲು ಪರಿಸ್ಥಿತಿಯ ಪರೀಕ್ಷೆಯನ್ನು ಮಾಡಲಾಯಿತು.
ಕೆಲವೊಮ್ಮೆ ಒಂದು ಸೂಚಿತ ಬದಲಾವಣೆಯ ವಿವೇಕವನ್ನು ಅದನ್ನು ಮಾಡಿದ ಅನಂತರ ಮಾತ್ರವೇ ನಾವು ಕಾಣಶಕ್ತರಾಗಿದ್ದೆವು. ಎಷ್ಟೊಂದು ಸಲ ಯೆಹೋವನು ತನ್ನನ್ನು ವಿವೇಕವುಳ್ಳ ಮತ್ತು ಪರಿಗಣನೆಯ ತಂದೆಯಾಗಿ ತೋರಿಸಿಕೊಟ್ಟನು! ನಿಧಾನವಾಗಿ ಆತನು ನಮ್ಮನ್ನು ತನ್ನ ಐಹಿಕ ಸಂಸ್ಥೆಯ ಉಳಿದ ಭಾಗದೊಂದಿಗೆ ಹೊಂದಾಣಿಕೆಯಾಗಲು ನಡಿಸಿದನು, ಮತ್ತು ನಾವು ಹೆಚ್ಚೆಚ್ಚಾಗಿ ಆತನ ಜನರ ವಿಶ್ವವ್ಯಾಪಕ ಸಹೋದರತ್ವದ ಒಂದು ಭಾಗವಾದೆವು. ನಿಶ್ಚಯವಾಗಿಯೂ, ಪೂರ್ವ ಜರ್ಮನಿಯಲ್ಲಿ ಆತನ ಜನರು ನಿಷೇಧದ ಕೆಳಗೆ ಕೆಲಸ ಮಾಡಿದ ಸುಮಾರು 40 ವರ್ಷಗಳಲ್ಲೆಲ್ಲಾ ಯೆಹೋವ ದೇವರು ಅವರನ್ನು ಪ್ರೀತಿಯಿಂದ ಸಂರಕ್ಷಿಸಿದನು. ಶಾಸನಬದ್ಧ ದರ್ಜೆಯು ನಮಗೆ ದೊರಕಿದ್ದಕ್ಕಾಗಿ ಈಗ ನಾವೆಷ್ಟು ಉಲ್ಲಾಸಿಸುತ್ತೇವೆ!
ಯಾವುದು ಹಿಂದೆ ಪೂರ್ವ ಜರ್ಮನಿಯಾಗಿತ್ತೋ ಅದರಲ್ಲಿ ಈಗ 22,000 ಅಥವಾ ಹೆಚ್ಚು ಯೆಹೋವನ ಸಾಕ್ಷಿಗಳು ಇದ್ದಾರೆ. ಅವರು ಯೆಹೋವ ದೇವರ ವಿವೇಕವುಳ್ಳ ಮಾರ್ಗದರ್ಶನ ಮತ್ತು ಪ್ರೀತಿಯ ಪರಾಮರಿಕೆಗೆ ಒಂದು ರುಜುವಾತಾಗಿದ್ದಾರೆ. ನಾವು ನಿಷೇಧದ ಕೆಳಗಿದ್ದ ವರ್ಷಗಳಲ್ಲಿ ಆತನ ಬೆಂಬಲವು, ಆತನು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಶಕ್ತನು ಎಂಬದನ್ನು ತೋರಿಸುತ್ತದೆ. ಆತನ ಜನರ ವಿರುದ್ಧವಾಗಿ ಯಾವ ಶಸ್ತ್ರವನ್ನೇ ಹೂಡಲಿ, ಅದು ಸಾಫಲ್ಯಗೊಳ್ಳದು. ಯಾರು ಆತನಲ್ಲಿ ಭರವಸೆ ಇಡುತ್ತಾರೋ ಅವರನ್ನು ಯೆಹೋವನು ಯಾವಾಗಲೂ ಚೆನ್ನಾಗಿ ಪರಾಮರಿಸುತ್ತಾನೆ. (ಯೆಶಾಯ 54:17; ಯೆರೆಮೀಯ 17:7, 8)—ಹಾಸ್ಟ್ ಶ್ಲಯಿಸ್ನರ್ರಿಂದ ಹೇಳಲ್ಪಟ್ಟದ್ದು.
[ಪುಟ 31 ರಲ್ಲಿರುವ ಚಿತ್ರ]
ಹಾರ್ಸ್ಟ್ ಮತ್ತು ಮಾರ್ಗರೆಟ್ ಶ್ಲಯಿಸ್ನರ್ ಪೂರ್ವ ಬರ್ಲಿನ್ನ ಸೊಸೈಟಿಯ ಕಟ್ಟಡದಲ್ಲಿ