ವಾಚಕರಿಂದ ಪ್ರಶ್ನೆಗಳು
ಫಿಲಿಪ್ಪಿ 2:9ರಲ್ಲಿ, ಪೌಲನು ಯೇಸುವಿನ ಕುರಿತಾಗಿ ಹೇಳಿದ್ದು: “ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ [“ಇತರ,” NW] ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” ಈ ಹೊಸ ಹೆಸರು ಏನು? ಮತ್ತು ಯೇಸು ಯೆಹೋವನಿಗೆ ಕೆಳ ಮಟ್ಟದಲ್ಲಿರುವಲ್ಲಿ, ಯೇಸುವಿನ ಹೆಸರು ಇತರ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾಗಿದೆ ಹೇಗೆ?
ಫಿಲಿಪ್ಪಿ 2:8, 9 ಓದುವುದು: “ಹೀಗೆ ಆತನು [ಯೇಸು] ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ [“ಇತರ,” NW] ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.”
ಕೇವಲ ಯೆಹೋವನಿಗೆ ಬೇರೆ ಎಲ್ಲಾ ಹೆಸರುಗಳಿಗಿಂತ ಸಂಪೂರ್ಣವಾಗಿ ಶ್ರೇಷ್ಠವಾದ ಹೆಸರಿರುವುದರಿಂದ, ಯೇಸು ಯೆಹೋವನೇ ಆಗಿರಬೇಕೆಂದು ಈ ಭಾಗದ ಅರ್ಥವಲ್ಲ. ಫಿಲಿಪ್ಪಿ ಅಧ್ಯಾಯ 2ರಲ್ಲಿನ ಪೂರ್ವಾಪರವು ತೋರಿಸುವಂತೆ, ಯೇಸು ತನ್ನ ಪುನರುತ್ಥಾನದ ನಂತರ ತನ್ನ ಉನ್ನತಗೊಳಿಸಲ್ಪಟ್ಟ ಹೆಸರನ್ನು ಪಡೆದನು. ಅದರ ಮುಂಚೆ, ಅವನು ಅದನ್ನು ಹೊಂದಿರಲಿಲ್ಲ. ಇನ್ನೊಂದು ಕಡೆಯಲ್ಲಿ, ಯೆಹೋವನು ಯಾವಾಗಲೂ ಸರ್ವಪ್ರಧಾನನು ಆಗಿರುತ್ತಾನೆ, ಮತ್ತು ಆತನ ಸ್ಥಾನವು ಎಂದೂ ಬದಲಾಗಿರುವುದಿಲ್ಲ. ತನ್ನ ಭೂಸೇವೆಯ ಮುಂಚೆ ಅವನಿಗಿದ್ದ ಹೆಸರಿಗಿಂತ ಉನ್ನತವಾದ ಒಂದು ಹೆಸರನ್ನು ಯೇಸು ಪಡೆದನೆಂಬ ವಾಸ್ತವಾಂಶವು, ಆತನು ಯೆಹೋವನಂತೆಯೇ ಇರುವುದಿಲ್ಲವೆಂಬುದನ್ನು ರುಜುಪಡಿಸುತ್ತದೆ. ಯೇಸುವಿಗೆ ಇತರ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರು ಕೊಡಲ್ಪಟ್ಟಿದೆ ಎಂದು ಪೌಲನು ಹೇಳಿದಾಗ, ಯೇಸುವಿಗೆ ಈಗ ದೇವರ ಎಲ್ಲಾ ಸೃಷ್ಟಿಜೀವಿಗಳಲ್ಲಿ ಅತ್ಯುಚವ್ಚಾದ ಹೆಸರಿದೆ ಎಂಬುದನ್ನು ಅವನು ಅರ್ಥೈಸಿದನು.
ಯೇಸುವಿನ ಉಚ್ಚ ಹೆಸರೇನಾಗಿದೆ? ಯೆಶಾಯ 9:6 ನಮಗೆ ಉತ್ತರಿಸಲು ಸಹಾಯ ಮಾಡುತ್ತದೆ. ಬರಲಿರುವ ಮೆಸ್ಸೀಯನ ಕುರಿತಾಗಿ ಪ್ರವಾದಿಸುತ್ತಾ, ಆ ವಚನವು ಹೇಳಿದ್ದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.” (ಓರೆಅಕ್ಷರಗಳು ನಮ್ಮವು.) ಇಲ್ಲಿ ಯೇಸುವಿನ “ಹೆಸರು” ಅವನ ಉಚ್ಚ ಸ್ಥಾನ ಮತ್ತು ಅಧಿಕಾರದೊಂದಿಗೆ ಸಂಬಂಧಿಸಿದೆ, ಮತ್ತು ಫಿಲಿಪ್ಪಿ 2:9ರಲ್ಲಿ ತಿಳಿಸಲ್ಪಟ್ಟಿರುವ “ಇತರ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು” ನಾವು ಇದೇ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಯೆಹೋವನು ಅವನಿಗೆ ಕೊಟ್ಟಿರುವ ಅಧಿಕಾರದ ಉಚ್ಚ ಸ್ಥಾನ—ಬೇರೆ ಯಾವ ಜೀವಿಗೂ ಕೊಡಲ್ಪಟ್ಟಿರುವಂತಹದ್ದಕ್ಕಿಂತ ಉಚ್ಚವಾದ ಅಧಿಕಾರದ ಸ್ಥಾನ—ದ ಅಂಗೀಕಾರದಲ್ಲಿ ಎಲ್ಲರೂ ಯೇಸುವಿಗೆ ಅಡ್ಡಬೀಳುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ. ಈ ಭಾಷಾಂತರದಲ್ಲಿ “ಇತರ” ಎಂಬ ಪದವು ಮೂಲ ಗ್ರೀಕ್ ಪಾಠದಲ್ಲಿ ನೇರವಾಗಿ ಪ್ರತಿನಿಧಿಸಲ್ಪಟ್ಟಿಲ್ಲ, ಆದರೆ ಆ ವಚನದ ಭಾವಾರ್ಥದಿಂದ ಅದು ಸೂಚಿಸಲ್ಪಟ್ಟಿದೆ. ಯೇಸುವಿನ “ಹೆಸರು” ತನ್ನ ಸ್ವಂತ ಹೆಸರಿಗಿಂತ ಶ್ರೇಷ್ಠವಲ್ಲ, ಬದಲಾಗಿ ಇತರ ಪ್ರತಿಯೊಂದು ಜೀವಿಯ ಹೆಸರಿಗಿಂತ ಶ್ರೇಷ್ಠವಾಗಿದೆ.
ಯೇಸುವಿನ ಹೆಸರಿನ ಅಂಗೀಕಾರದಲ್ಲಿ, ಎಲ್ಲಾ ನಂಬಿಗಸ್ತ ದೇವದೂತರು ಮತ್ತು ಮಾನವರೊಂದಿಗೆ ಅಡ್ಡಬೀಳುವುದರಲ್ಲಿ ಜೊತೆಗೂಡಲು ನಾವು ಎಷ್ಟು ಸಂತೋಷಿತರಾಗಿದ್ದೇವೆ! “ತಂದೆಯಾದ ದೇವರಿಗೆ ಘನವನ್ನು” ಸಲ್ಲಿಸುವ—ಆತನಿಗೆ ಯೆಹೋವನಿಂದ ಕೊಡಲ್ಪಟ್ಟಿರುವ ಉಚ್ಚವಾದ ಮತ್ತು ಶಕ್ತಿಶಾಲಿಯಾದ ಸ್ಥಾನದಲ್ಲಿರುವ ಯೇಸುವಿಗೆ ನಮ್ಮನ್ನು ಅಧೀನಪಡಿಸುವ ಮೂಲಕ ನಾವಿದನ್ನು ಮಾಡುತ್ತೇವೆ.—ಫಿಲಿಪ್ಪಿ 2:11; ಮತ್ತಾಯ 28:18.