ಅವರು ಧರ್ಮವನ್ನು ಏಕೆ ತೊರೆಯುತ್ತಿದ್ದಾರೆ?
ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ, ಪ್ರಷ್ಯ (ಈಗ ಉತ್ತರ ಜರ್ಮನಿ)ದ ಒಬ್ಬ ನಿವಾಸಿಯು, ತಾನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೇರಿದವನಲ್ಲವೆಂದು ಹೇಳುವುದನ್ನು ಕಾರ್ಯತಃ ಕೇಳಲು ಸಾಧ್ಯವೇ ಇರಲಿಲ್ಲ. ವಾಸ್ತವದಲ್ಲಿ, ಒಂದು ಪ್ರಧಾನ ಧರ್ಮದಿಂದ ಒಂದು ಅಸಂಪ್ರದಾಯಿತ್ವದ ಚರ್ಚ್ಗೆ ಮತಾಂತರ ಹೊಂದಿದರೆ ಸಾಕು, ಅವನು ಪೊಲೀಸರ ಗಮನಕ್ಕೆ ಗುರಿಯಾಗುತ್ತಿದ್ದನು. ಕಾಲ ಎಷ್ಟೊಂದು ಬದಲಾಗಿದೆ!
ಇಂದು, ದೊಡ್ಡ ಸಂಖ್ಯೆಯಲ್ಲಿ ಜರ್ಮನರು, ಚರ್ಚುಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. 4 ಜನರಲ್ಲಿ ಒಬ್ಬನು ಯಾವುದೇ ಧರ್ಮಕ್ಕೆ ಸೇರದವನಾಗಿದ್ದಾನೆಂದು ಹೇಳಲಾಗುತ್ತದೆ. ಆಸ್ಟ್ರಿಯ ಮತ್ತು ಸ್ವಿಟ್ಸರ್ಲೆಂಡ್ನಲ್ಲೂ ತದ್ರೀತಿಯ ಪ್ರವೃತ್ತಿಯು ಕಂಡುಬರುತ್ತಿದೆ. ಸದಸ್ಯತನವು ಒಂದು ಧರ್ಮದ ಜೀವರಕ್ತವಾಗಿರುವಲ್ಲಿ, ಜರ್ಮನ್ ಲೇಖಕ ರೈಮರ್ ಗ್ರೊನೆಮಯರ್ ಹೇಳಿದಂತೆ, “ಯೂರೋಪಿನ ಚರ್ಚುಗಳು ರಕ್ತಸ್ರಾವವಾಗುತ್ತ ಸಾಯುತ್ತಿವೆ.”
ಅವರು ಧರ್ಮವನ್ನು ತೊರೆಯುತ್ತಿರುವುದರ ಕಾರಣ
ಅನೇಕರು ಸಂಘಟಿತ ಧರ್ಮವನ್ನು ತೊರೆಯುತ್ತಿರುವುದೇಕೆ? ಅನೇಕವೇಳೆ, ಹಣಕಾಸಿನ ಕಾರಣಗಳಿಗಾಗಿಯೇ. ವಿಶೇಷವಾಗಿ ಸದಸ್ಯರು ಚರ್ಚಿನ ತೆರಿಗೆಯನ್ನು ತೆರುವಂತೆ ಅಪೇಕ್ಷಿಸಲ್ಪಟ್ಟಿರುವ ದೇಶಗಳಲ್ಲಿ ಇದು ಸತ್ಯವಾಗಿದೆ. ‘ನಾನು ಕಷ್ಟಪಟ್ಟು ಸಂಪಾದಿಸಿರುವ ಹಣವನ್ನು ಚರ್ಚಿಗೆ ಏಕೆ ಕೊಡಬೇಕು?’ ಎಂದು ಅನೇಕರು ಕೇಳುತ್ತಾರೆ. ಚರ್ಚಿನ ಅಪಾರ ಧನ ಮತ್ತು ಅಧಿಕಾರದಿಂದಾಗಿ ಕೆಲವರು ಅಪಕರ್ಷಿತರಾಗಿದ್ದಾರೆ. ಚರ್ಚಿನ ಧನವು, ಅದು ಭೌತಿಕ ವಿಷಯಗಳಿಗೆ ತೀರ ಹೆಚ್ಚಿನ ಗಮನವನ್ನು ಕೊಡುವಂತೆ ಮತ್ತು “ಕ್ರಿಸ್ತನಲ್ಲಿನ ನಂಬಿಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದಂತೆ” ಮಾಡಿರಬಹುದೆಂದು ಹೇಳಿದ, ಜರ್ಮನಿಯ ಕಲೊನ್ನ ಕಾರ್ಡಿನಲ್ ಯೋಆಕಿಮ್ ಮೈಸ್ನರ್ರೊಂದಿಗೆ ಅವರು ಬಹುಶಃ ಒಪ್ಪಿಕೊಳ್ಳುತ್ತಾರೆ.
ಕೆಲವರು ತಮ್ಮ ಚರ್ಚನ್ನು ಬಿಟ್ಟುಹೋಗುತ್ತಿರುವುದರ ಕಾರಣವು, ಅದು ಬೇಸರಹಿಡಿಸುವಂತಹದ್ದೂ, ಅನಾಸಕ್ತಿಕರವಾದದ್ದೂ, ತಮ್ಮ ಆತ್ಮಿಕ ಹಸಿವನ್ನು ತಣಿಸಲು ಅಶಕ್ತವಾದದ್ದೂ ಆಗಿರುವುದರಿಂದಲೇ. ಪ್ರವಾದಿಯಾದ ಆಮೋಸನಿಂದ ಮುಂತಿಳಿಸಲ್ಪಟ್ಟ ಕ್ಷಾಮದಿಂದ ಅವರು ಕಷ್ಟಪಡುತ್ತಾರೆ. “ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.” (ಆಮೋಸ 8:11) ತಮ್ಮ ಧರ್ಮದಿಂದ ಸ್ವಲ್ಪವೇ ಪೋಷಣೆಯನ್ನು ಪಡೆಯುವುದರಿಂದ, ಅವರು ಅದನ್ನು ತೊರೆಯುತ್ತಾರೆ.
ಎದುರಿಸಲ್ಪಡುವ ಸಮಸ್ಯೆಗಳು ನೈಜವಾಗಿರುವುದಾದರೂ, ಎಲ್ಲ ವಿಧದ ಧರ್ಮವನ್ನು ತೊರೆಯುವುದು ಸರಿಯಾದ ಪ್ರತಿಕ್ರಿಯೆಯೊ? ಮಾವಿನಹಣ್ಣಿನಂತೆ ತೋರುವ ಏನನ್ನೋ ನೋಡುವ ಒಬ್ಬ ಹಸಿದ ಮನುಷ್ಯನನ್ನು ಊಹಿಸಿಕೊಳ್ಳಿರಿ. ಅವನದನ್ನು ತಿನ್ನಲು ಪ್ರಯತ್ನಿಸುವಾಗ, ಅದು ಮೇಣದಿಂದ ಮಾಡಲ್ಪಟ್ಟಿದೆಯೆಂದು ಅವನಿಗೆ ಗೊತ್ತಾಗುತ್ತದೆ. ತನ್ನ ಹಸಿವನ್ನು ನೀಗಿಸಲು ಏನಾದರೂ ತಿನ್ನಬೇಕೆಂಬ ಆಲೋಚನೆಯನ್ನೇ ಅವನು ಬಿಟ್ಟುಬಿಡುವನೊ? ಇಲ್ಲ, ಅವನು ನಿಜವಾದ ಆಹಾರಕ್ಕಾಗಿ ಹುಡುಕುವನು. ಹಾಗೆಯೇ, ಒಂದು ಧರ್ಮವು ತನ್ನ ಸದಸ್ಯರ ಆತ್ಮಿಕ ಹಸಿವನ್ನು ತೃಪ್ತಿಪಡಿಸದಿದ್ದರೆ, ಅವರು ಧರ್ಮವನ್ನು ತೊರೆಯಬೇಕೊ? ಅಥವಾ ತಮ್ಮ ಆತ್ಮಿಕ ಹಸಿವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಯಾವುದಾದರೂ ಮಾರ್ಗವನ್ನು ಹುಡುಕುವುದರಿಂದ ಅವರು ಹೆಚ್ಚು ವಿವೇಕಯುತವಾದ ಕೆಲಸವನ್ನು ಮಾಡುತ್ತಿರುವರೊ? ಮುಂದಿನ ಲೇಖನವು ತೋರಿಸುವಂತೆ, ಅನೇಕರು ಇದನ್ನೇ ಮಾಡಿದ್ದಾರೆ.