ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಫಿಲಿಪೀನ್ಸ್ನಲ್ಲಿ
ಸುಮಾರು ಹತ್ತು ವರ್ಷಗಳ ಮುಂಚಿನ ಮಾತು. 30ರ ಪ್ರಾಯದಲ್ಲಿರುವ ದಂಪತಿ ಗ್ರೆಗೋರಿಯೊ ಮತ್ತು ಮಾರೀಲೂ ಮನೀಲಾದಲ್ಲಿ ಪಯನೀಯರ್ ಸೇವೆಮಾಡುತ್ತಿದ್ದರು. ಅದರೊಟ್ಟಿಗೆ ಪೂರ್ಣಕಾಲಿಕ ಕೆಲಸ ಕೂಡ ಮಾಡುತ್ತಿದ್ದರು. ಅದು ಕಷ್ಟವಾಗಿದ್ದರೂ ಅವರಿಗೆ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಾಯಿತು. ನಂತರ ಸಹೋದರಿ ಮಾರೀಲೂಗೆ ಅವರು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲಿ ಮ್ಯಾನೆಜರ್ ಭಡ್ತಿ ಸಿಕ್ಕಿತು. ಆಕೆ ಹೇಳುತ್ತಾರೆ: “ನಮ್ಮಿಬ್ಬರಿಗೂ ಒಳ್ಳೆ ಕೆಲಸ ಇರೋದರಿಂದ ಆರಾಮದಾಯಕ ಜೀವನ ನಡೆಸುತ್ತಿದ್ದೆವು.” ಹೀಗೆ ಆರ್ಥಿಕವಾಗಿ ಒಳ್ಳೆ ಸ್ಥಿತಿಯಲ್ಲಿ ಇದ್ದದ್ದರಿಂದ ಅವರು ಒಂದು ಯೋಜನೆ ಮಾಡಿದರು. ತಮ್ಮ ಕನಸಿನ ಮನೆಯನ್ನು ನನಸಾಗಿಸಲು ಮುಂದಾದರು. ಹಾಗಾಗಿ ಮನೀಲಾದಿಂದ ಪೂರ್ವಕ್ಕೆ 19 ಕಿ.ಮೀ. ದೂರದಲ್ಲಿ ಒಂದು ಒಳ್ಳೆ ಜಾಗ ನೋಡಿ ಮನೆಯನ್ನು ಕಟ್ಟಿಸಲು ಒಂದು ಕಂಪನಿಗೆ ಗುತ್ತಿಗೆ ಕೊಟ್ಟರು. 10 ವರ್ಷದವರೆಗೆ ಹಣವನ್ನು ಕಂತಿನಲ್ಲಿ ಕಟ್ಟುವ ಕಾಂಟ್ರ್ಯಾಕ್ಟ್ಗೆ ಸಹಿ ಹಾಕಿದರು.
“ಯೆಹೋವನಿಂದಲೇ ಕದಿಯುತ್ತಿದ್ದೇನೆ ಎಂದನಿಸಿತು”
ಮಾರೀಲೂ ಹೇಳ್ತಾರೆ: “ನನ್ನ ಕೆಲಸಕ್ಕೆ ಹೆಚ್ಚು ಸಮಯ ಶಕ್ತಿ ಕೊಡಬೇಕಾದ್ದರಿಂದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹುರುಪು ಕಡಿಮೆಯಾಯಿತು. ಯೆಹೋವನ ಸೇವೆಮಾಡಲು ಸಮರ್ಪಿಸಿಕೊಂಡ ನನಗೆ ಆತನಿಗೆ ಸಮಯಕೊಡಲು ಆಗಲಿಲ್ಲ. ಯೆಹೋವನಿಂದಲೇ ಕದಿಯುತ್ತಿದ್ದೇನೆ ಎಂದನಿಸಿತು.” ಈ ಸನ್ನಿವೇಶದಿಂದ ಬೇಜಾರಾದ ಗ್ರೆಗೋರಿಯೊ ಮತ್ತು ಮಾರೀಲೂ ತಮ್ಮ ಜೀವನ ಎತ್ತ ಸಾಗುತ್ತಿದೆ ಎಂಬ ಕುರಿತು ಕೂತು ಮಾತಾಡಿದರು. ಗ್ರೆಗೋರಿಯೊ ಹೇಳ್ತಾರೆ: “ನಾವು ಬದಲಾಗಬೇಕು ಅಂತ ಗೊತ್ತಾಯಿತು. ಆದರೆ ಹೇಗೆ ಅಂತ ಗೊತ್ತಾಗಲಿಲ್ಲ. ನಮಗೆ ಮಕ್ಕಳಿಲ್ಲದ ಕಾರಣ ಯೆಹೋವನ ಸೇವೆಯಲ್ಲಿ ನಮ್ಮನ್ನು ಹೆಚ್ಚು ಕೊಟ್ಟುಕೊಳ್ಳಬೇಕೆಂದು ಬಯಸಿದೆವು. ಮಾರ್ಗದರ್ಶನಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿದೆವು.”
ಪ್ರಚಾರಕರ ಅಗತ್ಯವಿರುವಲ್ಲಿ ಹೋಗಿ ಸೇವೆಮಾಡುವುದರ ಕುರಿತಾದ ಅನೇಕ ಭಾಷಣಗಳನ್ನು ಆ ಸಮಯದಲ್ಲಿ ಅವರು ಕೇಳಿದರು. “ಈ ಭಾಷಣಗಳು ಯೆಹೋವನು ನಮಗೆ ಕೊಟ್ಟ ಉತ್ತರ ಎಂದು ನಮಗನಿಸಿತು” ಎನ್ನುತ್ತಾರೆ ಗ್ರೆಗೋರಿಯೊ. ಸರಿಯಾದ ಆಯ್ಕೆಗಳನ್ನು ಧೈರ್ಯದಿಂದ ಮಾಡಲು ನಂಬಿಕೆಯನ್ನು ಬಲಪಡಿಸುವಂತೆ ಅವರು ಪ್ರಾರ್ಥಿಸಿದರು. ಅವರಿಗಿದ್ದ ದೊಡ್ಡ ತಲೆನೋವು ಅಂದರೆ ಮನೆಯ ಕಾಂಟ್ರ್ಯಾಕ್ಟ್. ಈಗಾಗಲೇ ಅವರು ಮೂರು ವರ್ಷ ದುಡ್ಡು ತುಂಬಿದ್ದರು. ಮಾರೀಲೂ ಹೇಳುವುದು: “ಒಂದುವೇಳೆ ಆ ಕಾಂಟ್ರ್ಯಾಕ್ಟನ್ನು ಕೈಬಿಟ್ಟರೆ, ಇಲ್ಲಿವರೆಗೆ ಕಟ್ಟಿರುವ ಅಷ್ಟೆಲ್ಲ ಹಣವನ್ನು ಕಳೆದುಕೊಳ್ಳುತ್ತಿದ್ವಿ. ಆದರೆ ಈ ಸನ್ನಿವೇಶವನ್ನು ನಾವು ಒಂದು ಆಯ್ಕೆಯಂತೆ ನೋಡಿದ್ವಿ. ನಮ್ಮ ಸ್ವಂತ ಇಚ್ಛೆಗಳು ಮುಖ್ಯನಾ ಇಲ್ಲವೆ ಯೆಹೋವನ ಚಿತ್ತ ಮುಖ್ಯನಾ?” ಅವರು ಅಪೊಸ್ತಲ ಪೌಲನ ಮಾತುಗಳನ್ನು ಮನಸ್ಸಿನಲ್ಲಿಟ್ಟು ಎಲ್ಲವನ್ನೂ “ನಷ್ಟವೆಂದು ಪರಿಗಣಿಸಿ,” ಆ ಕಾಂಟ್ರ್ಯಾಕ್ಟನ್ನು ತೊರೆದರು. ಕೆಲಸ ಬಿಟ್ಟರು. ಹೆಚ್ಚಿನ ವಸ್ತುಗಳನ್ನು ಮಾರಿದರು. ಮನೀಲಾದಿಂದ 480 ಕಿ.ಮೀ. ದಕ್ಷಿಣಕ್ಕಿರುವ ಪ್ಯಾಲವಾನ್ ದ್ವೀಪದಲ್ಲಿರುವ ದೂರದ ಒಂದು ಹಳ್ಳಿಗೆ ಸ್ಥಳಾಂತರಿಸಿದರು.—ಫಿಲಿ. 3:8.
“ಗುಟ್ಟು” ಅವರಿಗೆ ಗೊತ್ತಾಯಿತು
ಸ್ಥಳಾಂತರಿಸುವ ಮುಂಚೆ ಈ ದಂಪತಿ ಸರಳ ಜೀವನ ನಡೆಸಲು ತಮ್ಮನ್ನೇ ಸಿದ್ಧಪಡಿಸಿಕೊಂಡಿದ್ದರು. ಆದರೆ ತಾವು ನೆನಸಿದ್ದಕ್ಕಿಂತಲೂ ಹೆಚ್ಚು ಸರಳ ಜೀವನ ಅದಾಗಿದೆಯೆಂದು ಅಲ್ಲಿ ಹೋದ ಮೇಲೆ ಅವರಿಗೆ ತಿಳಿಯಿತು. ಮಾರೀಲೂ ಹೇಳುತ್ತಾರೆ: “ನಾನು ನೋಡಿ ಅವಾಕ್ಕಾದೆ. ಏಕೆಂದರೆ ಕರೆಂಟ್ ಇಲ್ಲ, ಯಾವುದೇ ಸೌಲಭ್ಯಗಳಿರಲಿಲ್ಲ. ಮುಂಚೆಯಾದರೆ ಅನ್ನದ ಕುಕ್ಕರ್ ಆನ್ ಮಾಡಿದರೆ ಸಾಕಿತ್ತು. ಆದರೆ ಇಲ್ಲಿ ಕಟ್ಟಿಗೆಯನ್ನು ಕಡಿದು ಒಲೆಯ ಮೇಲೆ ಅಡಿಗೆ ಮಾಡಬೇಕಿತ್ತು. ಮಾಲ್ಗೆ ಹೋಗುವುದು, ಹೊರಗೆ ತಿನ್ನುವುದು ಮತ್ತು ನಗರಗಳಲ್ಲಿದ್ದ ಅನೇಕ ಸೌಲಭ್ಯಗಳು ಯಾವುದೂ ಇಲ್ಲಿರಲಿಲ್ಲ.” ಹಾಗಿದ್ದರೂ ಆ ದಂಪತಿ ತಾವು ಅಲ್ಲಿಗೆ ಬಂದಿರುವುದರ ಉದ್ದೇಶವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಸಮಯದ ನಂತರ ಆ ಜೀವನಕ್ಕೆ ಹೊಂದಿಕೊಂಡರು. ಮಾರೀಲೂ ಹೇಳುತ್ತಾರೆ: “ಈಗ ನಾನು ಇಲ್ಲಿನ ಸುಂದರ ಪ್ರಕೃತಿಯನ್ನು ನೋಡಿ ಆನಂದಿಸುತ್ತೇನೆ. ರಾತ್ರಿಯಲ್ಲಿ ಮಿನುಗುವ ತಾರೆಗಳನ್ನು ನೋಡಿ ಖುಷಿಪಡುತ್ತೇನೆ. ನಾವು ಸುವಾರ್ತೆ ಸಾರಿದಾಗ ಜನರ ಮುಖಗಳು ಅರಳುವಾಗ ಅದಕ್ಕಿಂತಲೂ ಹೆಚ್ಚು ಸಂತೋಷವಾಗುತ್ತದೆ. ಇಲ್ಲಿ ಸೇವೆ ಮಾಡುವ ಮೂಲಕ ನಾವು ಸಂತೃಪ್ತಿಯ ‘ಗುಟ್ಟನ್ನು’ ಕಲಿತಿದ್ದೇವೆ.”—ಫಿಲಿ. 4:12.
“ಅನೇಕ ಹೊಸಬರು ಸಭೆಗೆ ಬರುವುದನ್ನು ನೋಡುವುದರಲ್ಲಿ ಸಿಗುವ ಆನಂದಕ್ಕಿಂತ ಹೆಚ್ಚಾದ ಆನಂದ ಬೇರೆ ಯಾವುದೂ ಇಲ್ಲ. ಹಿಂದೆಂದಿಗಿಂತಲೂ ಈಗ ನಮ್ಮ ಜೀವನ ಹೆಚ್ಚು ಅರ್ಥಪೂರ್ಣವಾಗಿದೆ.”—ಗ್ರೆಗೋರಿಯೊ ಮತ್ತು ಮಾರೀಲೂ
ಗ್ರೆಗೋರಿಯೊ ಹೇಳುತ್ತಾರೆ: “ನಾವಿಲ್ಲಿಗೆ ಬಂದಾಗ ನಾಲ್ಕೇ ಮಂದಿ ಸಾಕ್ಷಿಗಳಿದ್ದರು. ನಾನು ಪ್ರತಿವಾರ ಸಾರ್ವಜನಿಕ ಭಾಷಣ ಕೊಡುವಾಗ, ಗಿಟಾರ್ನಿಂದ ಸಂಗೀತ ನುಡಿಸುತ್ತಾ ಅವರೊಂದಿಗೆ ರಾಜ್ಯಗೀತೆಗಳನ್ನು ಹಾಡುವಾಗ ಅವರಿಗೆ ತುಂಬ ಸಂತೋಷವಾಗುತ್ತಿತ್ತು.” ಆ ಚಿಕ್ಕ ಗುಂಪು ಒಂದೇ ವರ್ಷದಲ್ಲಿ 24 ಪ್ರಚಾರಕರ ಒಂದು ಸಭೆಯಾಯಿತು! “ಸಹೋದರ ಸಹೋದರಿಯರು ತೋರಿಸುವ ಪ್ರೀತಿ ನಮ್ಮ ಮನಸ್ಪರ್ಶಿಸುತ್ತದೆ” ಎನ್ನುತ್ತಾರವರು. ಈ ದಂಪತಿ ಈ ದೂರದ ಪ್ರದೇಶದಲ್ಲಿ ಆರು ವರ್ಷಗಳ ಸೇವೆಯ ಕುರಿತು ಹೀಗೆ ಹೇಳುತ್ತಾರೆ: “ಅನೇಕ ಹೊಸಬರು ಸಭೆಗೆ ಬರುವುದನ್ನು ನೋಡುವುದರಲ್ಲಿ ಸಿಗುವ ಆನಂದಕ್ಕಿಂತ ಹೆಚ್ಚಾದ ಆನಂದ ಬೇರೆ ಯಾವುದೂ ಇಲ್ಲ. ಹಿಂದೆಂದಿಗಿಂತಲೂ ಈಗ ನಮ್ಮ ಜೀವನ ಹೆಚ್ಚು ಅರ್ಥಪೂರ್ಣವಾಗಿದೆ.”
“ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು” ನೋಡಿದ್ದೇನೆ!
ಫಿಲಿಪ್ಪೀನ್ಸ್ನ ಪ್ರಚಾರಕರ ಅಗತ್ಯವಿರುವ ಪ್ರದೇಶಗಳಿಗೆ ಸುಮಾರು 3,000 ಸಹೋದರ ಸಹೋದರಿಯರು ಸ್ಥಳಾಂತರಿಸಿದ್ದಾರೆ. ಅವರಲ್ಲಿ ಸುಮಾರು 500 ಮಂದಿ ಅವಿವಾಹಿತ ಸಹೋದರಿಯರು. ಅವರಲ್ಲಿ ಒಬ್ಬಳು ಕ್ಯಾರನ್.
ಈಗ 24-25ರ ಪ್ರಾಯದಲ್ಲಿರುವ ಕ್ಯಾರನ್ ಕ್ಯಾಬೇನದ ಬಾಗಾವ್ನಲ್ಲಿ ಬೆಳೆದವಳು. ತನ್ನ ಸೇವೆಯನ್ನು ಹೆಚ್ಚಿಸಬೇಕೆಂಬ ಹಂಬಲ ಹದಿಪ್ರಾಯದಲ್ಲಿದ್ದಾಗಲೇ ಅವಳಲ್ಲಿ ಬೇರುಬಿಡತೊಡಗಿತು. ಅದನ್ನು ಅವಳೇ ಹೀಗೆ ಹೇಳುತ್ತಾಳೆ: “ಇನ್ನು ಉಳಿದಿರುವುದು ಸ್ವಲ್ಪವೇ ಸಮಯ. ಆ ಸ್ವಲ್ಪ ಸಮಯದಲ್ಲಿ ಎಷ್ಟೋ ಜನರು ಸತ್ಯವನ್ನು ತಿಳಿದುಕೊಳ್ಳಬೇಕು ಎನ್ನುವುದು ನನಗೆ ಗೊತ್ತಿತ್ತು. ಹಾಗಾಗಿ ಪ್ರಚಾರಕರ ಅಗತ್ಯ ಹೆಚ್ಚಿರುವಲ್ಲಿ ಹೋಗಿ ಸೇವೆಮಾಡಲು ಬಯಸಿದೆ.” ಆದರೆ ಕುಟುಂಬದ ಕೆಲವರು ಅವಳು ದೂರದ ಸ್ಥಳಕ್ಕೆ ಹೋಗಿ ಸೇವೆ ಮಾಡದೆ ಉನ್ನತ ಶಿಕ್ಷಣವನ್ನು ಮಾಡುವಂತೆ ಒತ್ತಾಯಿಸಿದರು. ಕ್ಯಾರನ್ ಯೆಹೋವನಲ್ಲಿ ಪ್ರಾರ್ಥಿಸಿ ಮಾರ್ಗದರ್ಶನ ಕೋರಿದಳು. ಈಗಾಗಲೇ ದೂರದ ಸ್ಥಳಗಳಿಗೆ ಹೋಗಿ ಸೇವೆ ಮಾಡುತ್ತಿರುವವರೊಂದಿಗೆ ಮಾತಾಡಿದಳು. 18ರ ಪ್ರಾಯದಲ್ಲಿ ಮನೆಯಿಂದ 64 ಕಿ.ಮೀ. ದೂರದಲ್ಲಿರುವ ಒಂದು ಪ್ರದೇಶದಲ್ಲಿ ಸೇವೆಮಾಡಲು ಹೊರಟಳು.
ಪೆಸಿಫಿಕ್ ಕರಾವಳಿಯುದ್ದಕ್ಕೂ ಇದ್ದ ಪರ್ವತ ಪ್ರದೇಶವು ಕ್ಯಾರನ್ ಬೆಂಬಲಿಸಲು ಹೋದ ಆ ಚಿಕ್ಕ ಸಭೆಯ ಕ್ಷೇತ್ರದ ಭಾಗವಾಗಿತ್ತು. ಕ್ಯಾರನ್ ಹೇಳುತ್ತಾಳೆ: “ಬಾಗಾವ್ನಿಂದ ಹೊಸ ಸಭೆಗೆ ಹೋಗಲು ನಾವು ಮೂರು ದಿನ ನಡೆದೆವು. 30ಕ್ಕಿಂತ ಹೆಚ್ಚು ಬಾರಿ ಪರ್ವತಗಳನ್ನು ಹತ್ತಿ ಇಳಿದು, ನದಿಗಳನ್ನು ದಾಟಿದೆವು.” ಅಷ್ಟೆ ಅಲ್ಲದೆ ಅವಳು ಹೇಳುತ್ತಾಳೆ: “ನಾನೀಗ ಕೆಲವು ಬೈಬಲ್ ಅಧ್ಯಯನ ಮಾಡಲು ಆರು ತಾಸು ನಡೆದು ಹೋಗುತ್ತೇನೆ. ಬೈಬಲ್ ಅಧ್ಯಯನ ಮಾಡಿ ವಿದ್ಯಾರ್ಥಿಯ ಮನೆಯಲ್ಲೇ ಉಳಿಯುತ್ತೇನೆ. ಮಾರನೇ ದಿನ ಆರು ತಾಸು ನಡೆದು ವಾಪಸ್ ಬರುತ್ತೇನೆ.” ಇಷ್ಟೆಲ್ಲ ಕಷ್ಟಪಟ್ಟದ್ದು ಸಾರ್ಥಕವಾಯಿತಾ? “ಆಗಾಗ ಕಾಲು ನೋವಾಗುತ್ತದೆ. ಆದರೆ ನಾನು 18 ಬೈಬಲ್ ಅಧ್ಯಯನ ಮಾಡುತ್ತಿದ್ದೇನೆ. ‘ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು’ ನೋಡಿದ್ದೇನೆ” ಎಂದು ಖುಷಿಯಿಂದ ಹೇಳುತ್ತಾಳೆ ಕ್ಯಾರನ್.—ಕೀರ್ತ. 34:8.
“ಯೆಹೋವನ ಮೇಲೆ ಅವಲಂಬಿಸಲು ಕಲಿತೆ”
40 ದಾಟಿದ ಅವಿವಾಹಿತ ಸಹೋದರಿ ಸುಖೀ ಅಮೆರಿಕಾದಿಂದ ಫಿಲಿಪೀನ್ಸ್ಗೆ ಹೋಗಿ ಸೇವೆಮಾಡುತ್ತಿದ್ದಾರೆ. ಹೀಗೆ ಮಾಡಲು ಅವರನ್ನು ಯಾವುದು ಉತ್ತೇಜಿಸಿತು? 2011ರಲ್ಲಿ ಅವರು ಹಾಜರಾದಾಗ ಸರ್ಕಿಟ್ ಸಮ್ಮೇಳನದಲ್ಲಿ ಒಂದು ದಂಪತಿಯನ್ನು ಸಂದರ್ಶನ ಮಾಡಲಾಗಿತ್ತು. ಆ ದಂಪತಿ ತಮ್ಮ ವಸ್ತುಗಳೆನ್ನೆಲ್ಲ ಮಾರಿ ಮೆಕ್ಸಿಕೊಗೆ ಹೋಗಿ ಸೇವೆಮಾಡುತ್ತಿದ್ದಾರೆ ಎಂದು ಹೇಳಿದರು. ಸುಖೀ ಹೇಳುತ್ತಾರೆ: “ನಾನು ಯಾವತ್ತೂ ಯೋಚಿಸದ ಗುರಿಗಳ ಕುರಿತು ಯೋಚಿಸುವಂತೆ ಆ ಸಂದರ್ಶನ ಪ್ರಚೋದಿಸಿತು.” ಸುಖೀ ಭಾರತದ ಮೂಲದವರು. ಫಿಲಿಪೀನ್ಸ್ನಲ್ಲಿರುವ ಪಂಜಾಬಿ ಜನರಿಗೆ ಸುವಾರ್ತೆ ಸಾರಲು ಪ್ರಚಾರಕರ ಅಗತ್ಯವಿದೆ ಎಂದು ತಿಳಿದುಬಂದಾಗ ಅಲ್ಲಿಗೆ ಹೋಗಿ ಸಹಾಯಮಾಡಲು ನಿರ್ಣಯಿಸಿದರು. ಏನಾದರೂ ಅಡ್ಡಿತಡೆಗಳು ಬಂದವೋ?
“ಯಾವುದನ್ನು ಮಾರೋದು, ಯಾವುದನ್ನು ಬಿಡೋದು ಅಂತ ನಿರ್ಧಾರ ಮಾಡೋದು ನೆನಸಿದ್ದಷ್ಟು ಸುಲಭವಾಗಿರಲಿಲ್ಲ” ಎನ್ನುತ್ತಾರೆ ಸುಖಿ. “ಅದೂ ಅಲ್ಲದೆ 13 ವರ್ಷ ನನ್ನದೇ ಸ್ವಂತ ಮನೆಯಲ್ಲಿ ಆರಾಮದ ಜೀವನ ನಡಿಸಿದೆ. ನಂತರ ನನ್ನ ಕುಟುಂಬ ಎಲ್ಲಿತ್ತೋ ಅಲ್ಲಿಗೆ ಹೋದೆ. ಅದು ಸುಲಭವಾಗಿರಲಿಲ್ಲವಾದರೂ ಸರಳ ಜೀವನ ನಡೆಸಲು ಅದು ನನ್ನನ್ನು ತಯಾರುಮಾಡಿತು.” ಆಕೆ ಫಿಲಿಪ್ಪೀನ್ಸ್ಗೆ ಹೋದ ಮೇಲೆ ಯಾವ ಸವಾಲು ಎದುರಿಸಿದರು? ಆಕೆ ಹೇಳುತ್ತಾರೆ: “ಹುಳ, ಕೀಟಗಳೆಂದರೆ ನನಗೆ ತುಂಬ ಭಯ. ಅದೂ ಅಲ್ಲದೆ ಮನೆನೆನಪು ಕಾಡುತ್ತಿತ್ತು. ಆದರೆ ಹಿಂದೆಂದಿಗಿಂತಲೂ ಹೆಚ್ಚು ಯೆಹೋವನ ಮೇಲೆ ಅವಲಂಬಿಸಲು ಕಲಿತೆ.” ಸುಖೀ ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿ ಅಲ್ಲಿಗೆ ಹೋದದ್ದು ಸಾರ್ಥಕವಾಗಿತ್ತಾ? ಆಕೆ ನಗುಮುಖದೊಂದಿಗೆ ಹೀಗನ್ನುತ್ತಾರೆ: “ಯೆಹೋವನು ನಮಗೆ ಹೇಳುತ್ತಾನೆ, ‘ನಾನು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಪರೀಕ್ಷಿಸಿ’ ನೋಡಿ ಎಂದು. ಸುವಾರ್ತೆ ಸಾರಿದಾಗ ಮನೆಯವರು ‘ಇನ್ನೊಮ್ಮೆ ಯಾವಾಗ ಬರ್ತೀರಾ? ನನಗೆ ಇನ್ನೂ ತುಂಬ ಪ್ರಶ್ನೆಗಳಿವೆ’ ಎಂದು ಹೇಳಿದಾಗ ಯೆಹೋವನ ಆ ಮಾತುಗಳು ನಿಜವಾಗುವುದನ್ನು ನಾನು ಸ್ವತಃ ಅನುಭವಿಸುತ್ತೇನೆ. ಹೀಗೆ ಆಧ್ಯಾತ್ಮಿಕವಾಗಿ ಹಸಿದಿರುವವರಿಗೆ ಸಹಾಯ ಮಾಡುತ್ತಿದ್ದೇನೆಂಬ ತೃಪ್ತಿ ಮತ್ತು ಆನಂದ ನನಗಿದೆ.” (ಮಲಾ. 3:10) ನಂತರ ಅವರು ಹೇಳುತ್ತಾರೆ: “ಇಲ್ಲಿಗೆ ಬರುವ ನಿರ್ಧಾರ ಮಾಡುವುದು ದೊಡ್ಡ ಕಷ್ಟವಾಗಿತ್ತು. ಆದರೆ ಒಮ್ಮೆ ನಾನು ಇಲ್ಲಿಗೆ ಬಂದಮೇಲೆ ಯೆಹೋವ ದೇವರು ಎಲ್ಲವನ್ನೂ ನನಗಾಗಿ ಸಿದ್ಧಮಾಡಿದ್ದನ್ನು ನೋಡಿ ನಾನು ಮೂಕವಿಸ್ಮಿತಳಾದೆ.”
“ಭಯವನ್ನು ಮೆಟ್ಟಿನಿಂತೆ”
ಹತ್ತಿರತ್ತಿರ 40 ಪ್ರಾಯದ ಸಿಮೇ ಎಂಬ ವಿವಾಹಿತ ಸಹೋದರ ಕೆಲಸದ ಕಾರಣ ಫಿಲಿಪ್ಪೀನ್ಸ್ ಬಿಟ್ಟು ಮಧ್ಯಪ್ರಾಚ್ಯದ ಒಂದು ದೇಶಕ್ಕೆ ಹೋದರು. ಅಲ್ಲಿ ಸರ್ಕಿಟ್ ಮೇಲ್ವಿಚಾರಕರು ಕೊಟ್ಟ ಪ್ರೋತ್ಸಾಹ ಹಾಗೂ ಆಡಳಿತ ಮಂಡಲಿಯ ಸದಸ್ಯರೊಬ್ಬರು ಕೊಟ್ಟ ಭಾಷಣ, ಜೀವನದಲ್ಲಿ ಯೆಹೋವನಿಗೆ ಮೊದಲ ಸ್ಥಾನ ಕೊಡುವಂತೆ ಅವರನ್ನು ಉತ್ತೇಜಿಸಿತು. “ಆದರೆ ಕೆಲಸ ಬಿಡುವುದರ ಬಗ್ಗೆ ಯೋಚನೆ ಮಾಡಿದ್ರೇನೆ ನಾನು ಬೆಚ್ಚಿಬೀಳುತ್ತಿದ್ದೆ” ಎನ್ನುತ್ತಾರೆ ಸಿಮೇ. ಆದರೂ ಕೆಲಸ ಬಿಟ್ಟು ಫಿಲಿಪ್ಪೀನ್ಸ್ಗೆ ಹಿಂದಿರುಗಿದರು. ಫಿಲಿಪ್ಪೀನ್ಸ್ನ ದಕ್ಷಿಣ ಭಾಗದ ಡೆವೋ ಡೆಲ್ ಸೂರ್ ಎಂಬ ಪ್ರಾಂತ್ಯದ ವಿಸ್ತಾರವಾದ ಕ್ಷೇತ್ರದಲ್ಲಿ ಸುವಾರ್ತೆ ಸಾರಲು ಪ್ರಚಾರಕರ ಅಗತ್ಯವಿತ್ತು. ಈಗ ಆ ಪ್ರದೇಶದಲ್ಲೇ ಸಹೋದರ ಸಿಮೇ ಹಾಗೂ ಅವರ ಪತ್ನಿ ಹೈಡೀ ಸೇವೆಮಾಡುತ್ತಿದ್ದಾರೆ. ಈಗ ಸಿಮೇ ಹೇಳುತ್ತಾರೆ: “ನಾನು ಏನು ಮಾಡಿದೆನೋ ಅದರ ಬಗ್ಗೆ ನೆನಸಿದಾಗ ಖುಷಿಯಾಗುತ್ತದೆ. ಕೆಲಸ ಕಳೆದುಕೊಳ್ಳುವ ಭಯವನ್ನು ಮೆಟ್ಟಿನಿಂತು ನನ್ನ ಜೀವನದಲ್ಲಿ ಯೆಹೋವ ದೇವರಿಗೆ ಮೊದಲ ಸ್ಥಾನ ಕೊಟ್ಟಿದ್ದು ಎಷ್ಟೋ ಒಳ್ಳೇದಾಗಿತ್ತು! ನಮ್ಮಲ್ಲಿರುವುದರಲ್ಲೇ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡುವುದರಲ್ಲಿ ಇರುವ ಸಂತೃಪ್ತಿ ಬೇರೆ ಯಾವುದರಲ್ಲೂ ಇಲ್ಲ!”
“ಸಿಗುವ ನೆಮ್ಮದಿ ಅಪಾರ!”
30ರ ಪ್ರಾಯದಲ್ಲಿರುವ ಪಯನೀಯರ್ ದಂಪತಿ ರಾಮೀಲೋ ಮತ್ತು ಜೂಲ್ಯಟ್ 30 ಕಿ.ಮೀ ದೂರದಲ್ಲಿರುವ ಒಂದು ಸಭೆಗೆ ಸಹಾಯದ ಅಗತ್ಯವಿದೆ ಎಂದು ತಿಳಿಯಿತು. ಹಾಗಾಗಿ ಬೆಂಬಲಿಸಲು ತಾವಾಗಿಯೇ ಮುಂದೆ ಬಂದರು. ಪ್ರತಿವಾರ ಬಿಸಿಲಾದರೂ ಮಳೆಯಾದರೂ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಕೂಟಗಳಿಗೆ ಮತ್ತು ಸೇವೆಗೆ ಹೋಗುತ್ತಾರೆ. ಅವರಿಗೆ ಸವಾಲುಗಳೇ ಇಲ್ಲ ಎಂದಲ್ಲ. ಏರುಪೇರು ರಸ್ತೆಗಳನ್ನು, ತೂಗುಸೇತುವೆಗಳನ್ನು ದಾಟಿಕೊಂಡು ಹೋಗಬೇಕು. ಹಾಗಿದ್ದರೂ ತಮ್ಮ ಸೇವೆಯನ್ನು ಹೆಚ್ಚಿಸಲು ಆಗಿದ್ದರಿಂದ ಅವರು ಖುಷಿಯಾಗಿ ಇದ್ದಾರೆ. ರಾಮೀಲೋ ಹೇಳುತ್ತಾರೆ: “ನಾನೂ ನನ್ನ ಹೆಂಡತಿ ಒಟ್ಟು 11 ಬೈಬಲ್ ಅಧ್ಯಯನ ನಡಿಸುತ್ತೇವೆ! ಹೌದು ಎಲ್ಲಿ ಅಗತ್ಯ ಇದೆಯೋ ಅಲ್ಲಿ ಸೇವೆ ಮಾಡಬೇಕಾದರೆ ತ್ಯಾಗಗಳನ್ನು ಮಾಡಲೇಬೇಕು. ಆದರೆ ಅದರಿಂದ ಸಿಗುವ ತೃಪ್ತಿ ಅಪಾರ!”—1 ಕೊರಿಂ. 15:58.
ನಿಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಪ್ರಚಾರಕರ ಅಗತ್ಯವಿರುವಲ್ಲಿಗೆ ಹೋಗಿ ಸೇವೆಮಾಡುವುದರ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಏನು ಮಾಡಬೇಕು? ನಿಮ್ಮ ಸಭೆಯನ್ನು ಸಂದರ್ಶಿಸುವ ಸಂಚರಣಾ ಮೇಲ್ವಿಚಾರಕರೊಂದಿಗೆ ಮಾತಾಡಿ ಹಾಗೂ 2011, ಆಗಸ್ಟ್ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿರುವ “ನೀವು ‘ಮಕೆದೋನ್ಯಕ್ಕೆ’ ಹೋಗಬಲ್ಲಿರೊ?” ಎಂಬ ಲೇಖನ ಓದಿ.