ನಾವು ಏಕೆ ಹಿಂದಿರುಗಿ ಹೋಗುತ್ತಾ ಇರುತ್ತೇವೆ?
1 ಸೇವೆಯಲ್ಲಿ ಒಂದು ದಿನವನ್ನು ಕಳೆಯಲು ನೀವು ತಯಾರಿಸುತ್ತಿದ್ದಂತೆ, ನೀವು ಎಂದಾದರೂ ನಿಮಗೆ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದೀರೊ? ಭಾರತದಲ್ಲಿರುವ ಸಭೆಗಳು, ಅವು ಒಂದು ವರ್ಷದಲ್ಲಿ ಆವರಿಸಲು ಸಾಧ್ಯವಿರುವಷ್ಟು ಪ್ರಮಾಣದ ಟೆರಿಟೊರಿಯನ್ನು ಮಾತ್ರ ಸೊಸೈಟಿಯಿಂದ ವಿನಂತಿಸಿಕೊಳ್ಳುವಂತೆ ಕೇಳಿಕೊಳ್ಳಲ್ಪಟ್ಟಿರುವುದರಿಂದ, ಹೊಸ ಟೆರಿಟೊರಿಗಳಲ್ಲಿ ನಿರಂತರವಾಗಿ ಕೆಲಸಮಾಡಲು ಒಗ್ಗಿಹೋಗಿರುವ ನಮ್ಮಲ್ಲಿನ ಕೆಲವರು, ಪ್ರತಿ ವರ್ಷ ಅದೇ ಟೆರಿಟೊರಿಗೆ ಹಿಂದೆ ಹೋಗುವುದು ಅಸಾಮಾನ್ಯವಾಗಿ ಕಂಡುಕೊಳ್ಳುತ್ತೇವೆ. ಎಲ್ಲಿ ನಮ್ಮ ಟೆರಿಟೊರಿಯು ಪದೇ ಪದೇ ಆವರಿಸಲ್ಪಡುತ್ತದೊ ಆ ಕೆಲವೊಂದು ಕ್ಷೇತ್ರಗಳಲ್ಲಿ ಅನೇಕ ಮನೆಯವರು ನಮ್ಮ ಗುರುತುಹಿಡಿದು, ಕೂಡಲೇ ನಮ್ಮನ್ನು ತಿರಸ್ಕರಿಸಬಹುದು. ಕೆಲವರು ಮಾತ್ರ ಪ್ರಸನ್ನಕರವಾದ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಆದರೂ ನಾವು ಹಿಂದಿರುಗಿ ಹೋಗುವುದಕ್ಕೆ ಅನೇಕ ಬಲವಾದ ಕಾರಣಗಳಿವೆ.
2 ಪ್ರಪ್ರಥಮವಾಗಿ, ಅಂತ್ಯವು ಬರುವ ತನಕ ರಾಜ್ಯ ಸಂದೇಶವನ್ನು ಸಾರುತ್ತಾ ಮುಂದುವರಿಯುವಂತೆ ನಾವು ಆಜ್ಞಾಪಿಸಲ್ಪಟ್ಟಿದ್ದೇವೆ. (ಮತ್ತಾ. 24:14; 28:19, 20) ಪ್ರವಾದಿಯಾದ ಯೆಶಾಯನು, ತನ್ನ ಸಾರುವ ಕಾರ್ಯವನ್ನು ಎಷ್ಟು ಸಮಯದ ತನಕ ಮುಂದುವರಿಸಬೇಕಾಗುವುದು ಎಂದು ವಿಚಾರಿಸಿದನು. ಅವನಿಗೆ ಸಿಕ್ಕಿದಂತಹ ಉತ್ತರವು, ಯೆಶಾಯ 6:11, 12ರಲ್ಲಿ ದಾಖಲಿಸಲ್ಪಟ್ಟಿದೆ. ಸ್ಪಷ್ಟವಾಗಿ, ದೇವರ ಸಂದೇಶದೊಂದಿಗೆ ಅವನು ಜನರ ಬಳಿಗೆ ಹೋಗುತ್ತಾ ಇರಬೇಕೆಂದು ಅವನಿಗೆ ಹೇಳಲಾಯಿತು. ತದ್ರೀತಿಯಲ್ಲಿ ಇಂದು, ಜನರು ನಮಗೆ ಹೊರಟು ಹೋಗುವಂತೆ ಹೇಳಬಹುದಾದರೂ, ನಮ್ಮ ಟೆರಿಟೊರಿಯಲ್ಲಿ ವಾಸಿಸುತ್ತಿರುವ ಜನರನ್ನು ನಾವು ಸಂದರ್ಶಿಸುತ್ತಾ ಮುಂದುವರಿಯುವಂತೆ ಯೆಹೋವನು ನಿರೀಕ್ಷಿಸುತ್ತಾನೆ. (ಯೆಹೆ. 3:10, 11) ನಮಗೆ ವಹಿಸಲ್ಪಟ್ಟಿರುವ ಒಂದು ಪವಿತ್ರ ಜವಾಬ್ದಾರಿ ಇದಾಗಿದೆ.—1 ಕೊರಿಂ. 9:17.
3 ನಾವು ಹಿಂದಿರುಗಿ ಹೋಗುತ್ತಾ ಇರಲು ಇನ್ನೊಂದು ಕಾರಣವು, ಯೆಹೋವನಿಗಾಗಿರುವ ನಮ್ಮ ಭಕ್ತಿಯ ಗಾಢತೆಯನ್ನು ತೋರಿಸಲು ಅದು ನಮಗೊಂದು ಅವಕಾಶವನ್ನು ಕೊಡುತ್ತದೆಂಬುದೇ. (1 ಯೋಹಾ. 5:3) ಅಲ್ಲದೆ, ಮಾನವಕುಲಕ್ಕಾಗಿ ಸಮೀಪದ ಭವಿಷ್ಯತ್ತಿನಲ್ಲಿ ಏನಿದೆಯೆಂಬುದನ್ನು ನಾವು ಪರ್ಯಾಲೋಚಿಸುವಾಗ, ನಮ್ಮ ನೆರೆಹೊರೆಯವರನ್ನು ಪ್ರೀತಿಪೂರ್ವಕವಾಗಿ ಎಚ್ಚರಿಸಲು ಪ್ರಯತ್ನಿಸುವುದರಿಂದ ನಾವು ನಮ್ಮನ್ನು ಹೇಗೆ ನಿಗ್ರಹಿಸಿಕೊಳ್ಳಬಲ್ಲೆವು? (2 ತಿಮೊ. 4:2; ಯಾಕೋ. 2:8) ನಮ್ಮ ನೇಮಕವನ್ನು ಪೂರೈಸುವುದರಲ್ಲಿ ನಾವು ನಂಬಿಗಸ್ತರಾಗಿರುವುದು, ಅವರಿಗೆ ದೇವರ ರಕ್ಷಣೆಯ ಸಂದೇಶಕ್ಕೆ ಪ್ರತಿಕ್ರಿಯಿಸಲು ಪದೇ ಪದೇ ಅವಕಾಶಗಳನ್ನು ಒದಗಿಸುತ್ತದೆ. ಹೀಗೆ, ತಮಗೆ ಎಚ್ಚರಿಕೆ ನೀಡಲ್ಪಟ್ಟಿರಲಿಲ್ಲವೆಂದು ಅವರು ಹೇಳಲು ಶಕ್ತರಾಗಲಿಕ್ಕಿಲ್ಲ.—ಯೆಹೆ. 5:13.
4 ಇನ್ನೂ ಹೆಚ್ಚಾಗಿ, ಜನರು ಯಾವಾಗ ಬದಲಾಗುವರು ಎಂಬುದು ನಮಗೆ ಎಂದೂ ತಿಳಿದಿರುವುದಿಲ್ಲ. ಅವರ ವೈಯಕ್ತಿಕ ಪರಿಸ್ಥಿತಿಗಳಲ್ಲಿ ಒಂದು ಬದಲಾವಣೆ, ಅವರ ಕುಟುಂಬದಲ್ಲಿ ಒಂದು ದುರಂತ, ಅಥವಾ ತಮ್ಮ ಭವಿಷ್ಯತ್ತಿನ ಕುರಿತಾಗಿ ಅವರು ಗಂಭೀರವಾಗಿ ಆಲೋಚಿಸುವಂತೆ ಮಾಡುವ ಲೋಕ ಪರಿಸ್ಥಿತಿಗಳಿಂದ ಅದು ಪ್ರಚೋದಿಸಲ್ಪಡಸಾಧ್ಯವಿದೆ. ಇನ್ನೊಂದು ಕಡೆಯಲ್ಲಿ, ನಾವು ಅವರ ಮನೆಬಾಗಿಲಲ್ಲಿ ಹೇಳುವ ಯಾವುದೊ ವಿಷಯವು ಒಂದು ಪ್ರಸನ್ನಕರ ಪ್ರತಿಕ್ರಿಯೆಯನ್ನು ಕೆರಳಿಸಬಹುದು. (ಪ್ರಸಂ. 9:11; 1 ಕೊರಿಂ. 7:31) ಅಲ್ಲದೆ, ಜನರು ಸ್ಥಳಾಂತರಿಸುತ್ತಾರೆ. ಸುವಾರ್ತೆಗೆ ಪ್ರತಿಕ್ರಿಯಿಸುವ ಹೊಸ ನಿವಾಸಿಗಳನ್ನು ನಾವು ನಮ್ಮ ಟೆರಿಟೊರಿಯಲ್ಲಿ ಕಂಡುಕೊಳ್ಳಬಹುದು. ಈಗ ತಮ್ಮಷ್ಟಕ್ಕೆ ಜೀವಿಸುತ್ತಿರುವ, ಮತ್ತು ಜೀವಿತದಲ್ಲಿನ ತಮ್ಮ ಉದ್ದೇಶದ ಕುರಿತಾಗಿ ಗಂಭೀರವಾಗಿ ಯೋಚಿಸುತ್ತಿರುವ ಯುವ ವಯಸ್ಕರು ಅವರಾಗಿರಬಹುದು.
5 ಭಾರತದಲ್ಲಿರುವ ಟೆರಿಟೊರಿಯು ಅಪರಿಮಿತವಾದುದು ಎಂದು ಕೆಲವೊಮ್ಮೆ ತೋರುವುದಾದರೂ, ಪ್ರಚಾರಕರು ಸುಲಭವಾಗಿ ಪುನಃ ಸಂದರ್ಶಿಸಲಾಗದ, ತಮ್ಮ ಮನೆಗಳಿಂದ ತುಂಬ ದೂರದಲ್ಲಿರುವ ಹೊಸ ಟೆರಿಟೊರಿಗಳಿಗೆ ಹೋಗುತ್ತಾ ಇರುವುದಕ್ಕಿಂತ, ಪುನರ್ಭೇಟಿಗಳನ್ನು ಮಾಡುವ ವಿಷಯಕ್ಕೆ ಯೋಗ್ಯವಾದ ಗಮನವನ್ನು ಕೊಡುತ್ತಾ, ಪ್ರತಿ ವರ್ಷ ಒಂದು ಟೆರಿಟೊರಿಯನ್ನು ಕೇಂದ್ರೀಕೃತ ರೀತಿಯಲ್ಲಿ ಆವರಿಸುವಾಗ, ಹೆಚ್ಚು ಉತ್ತಮವಾದ ಫಲಿತಾಂಶಗಳನ್ನು ಪಡೆಯಲಾಗುತ್ತದೆಂದು ಕಂಡುಕೊಳ್ಳಲಾಗಿದೆ. ನಾವು ಕ್ರಮವಾಗಿ, ಪ್ರತಿ ವರ್ಷ ಕಡಿಮೆ ಪಕ್ಷ ಒಮ್ಮೆಯಾದರೂ ಸಂದರ್ಶಿಸುವುದನ್ನು ಜನರು ನೋಡುವಾಗ, ಇದು ಅವರ ಮೇಲೆ, ನಾವು ಜೀವಮಾನಕಾಲದಲ್ಲಿ ಒಂದೇ ಸಲ ಸಂದರ್ಶಿಸುವುದರಿಂದ ಉಂಟುಮಾಡುವ ಪ್ರಭಾವಕ್ಕಿಂತ ಭಿನ್ನವಾದ ಮತ್ತು ಹೆಚ್ಚು ಉತ್ತಮವಾದ ಪ್ರಭಾವವನ್ನು ಬೀರುತ್ತದೆ. ಸಕಾಲದಲ್ಲಿ, ಒಂದು ಸಭೆಯ ಪ್ರಚಾರಕರ ಸಂಖ್ಯೆಯು ಹೆಚ್ಚಿದಂತೆ, ಅದು ಸೊಸೈಟಿಯಿಂದ ಹೆಚ್ಚು ಟೆರಿಟೊರಿಗಾಗಿ ವಿನಂತಿಸಿಕೊಳ್ಳಸಾಧ್ಯವಿದೆ. ಆದರೆ ಆಗಲೂ ಅದು ಒಂದು ವರ್ಷದಲ್ಲಿ ಆವರಿಸಲು ಸಾಧ್ಯವಿರುವಷ್ಟು ಟೆರಿಟೊರಿಯನ್ನು ಮಾತ್ರ ವಿನಂತಿಸಬೇಕು.
6 ನಾವು ಹಿಂದಿರುಗಿ ಹೋಗುತ್ತಾ ಇರುವೆವೊ? ಹೌದು! ಜನರನ್ನು ಪುನಃ ಪುನಃ ಸಂದರ್ಶಿಸುತ್ತಾ ಇರಲು ಶಾಸ್ತ್ರಗಳು ನಮಗೆ ಸಾಕಷ್ಟು ಪ್ರಚೋದನೆಯನ್ನು ನೀಡುತ್ತವೆ. ಕೊನೆಯಲ್ಲಿ, ಸಾರುವ ಕೆಲಸವು ಮುಗಿದಿರುವಾಗ, ಶುಶ್ರೂಷೆಯಲ್ಲಿನ ನಮ್ಮ ಸತತವಾದ ಪ್ರಯತ್ನಕ್ಕಾಗಿ ಯೆಹೋವನು ನಮ್ಮನ್ನು ಆಶೀರ್ವದಿಸುವನು, ಮತ್ತು ರಾಜ್ಯದ ಸುವಾರ್ತೆಗೆ ಗಣ್ಯಭಾವದಿಂದ ಪ್ರತಿಕ್ರಿಯೆ ತೋರಿಸಿದವರನ್ನು ಆತನು ಆಶೀರ್ವದಿಸುವನು.—1 ತಿಮೊ. 4:16.