ದೇವರಿಂದ ಬರುವ ಜ್ಞಾನವು ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತದೆ
1 ನೀವು ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಬರುವ ಮುಂಚೆ, ನೀವು ಉತ್ತರಿಸಲು ಅಶಕ್ತರಾಗಿದ್ದ ಜೀವಿತದ ಕುರಿತಾದ ಅನೇಕ ಪ್ರಶ್ನೆಗಳು ನಿಮಗಿದ್ದಿರಬಹುದು. ಆ ಪ್ರಶ್ನೆಗಳಿಗೆ ಬೈಬಲ್ ಆಧಾರಿತ ಉತ್ತರಗಳನ್ನು ಪಡೆದುಕೊಂಡಾಗ ನೀವು ಎಷ್ಟು ಸಂತೋಷಪಟ್ಟಿರಿ! ಈಗ ಅದೇ ರೀತಿಯ ಉತ್ತರಗಳನ್ನು ಇತರರು ಕಂಡುಕೊಳ್ಳುವಂತೆ ಸಹಾಯಮಾಡಲು ನೀವು ಶಕ್ತರಾಗಿದ್ದೀರಿ. (2 ತಿಮೊಥೆಯ 2:2ನ್ನು ಹೋಲಿಸಿರಿ.) ನಿತ್ಯಜೀವಕ್ಕೆ ನಡೆಸುವ ದೇವರ ಜ್ಞಾನವನ್ನು ನೀವು ಅವರೊಂದಿಗೆ ಹಂಚಿಕೊಳ್ಳಬಲ್ಲಿರಿ. (ಯೋಹಾ. 17:3) ಆದರೆ ಈ ಜ್ಞಾನದ ಮೌಲ್ಯವನ್ನು ಯಾರಾದರೂ ಗಣ್ಯಮಾಡುವಂತೆ ನೀವು ಹೇಗೆ ಸಹಾಯಮಾಡಸಾಧ್ಯವಿದೆ? ಒಳ್ಳೇದು, ಸತ್ಯವು ನಿಮಗಾಗಿ ಉತ್ತರಿಸಿದಂತಹ ಪ್ರಶ್ನೆಗಳ ಕುರಿತಾಗಿ ಯೋಚಿಸಿರಿ. ಸತ್ಯಾನ್ವೇಷಕರು ತಿಳಿದುಕೊಳ್ಳಲು ಬಯಸುವಂತಹ ವಿಷಯವೇನು? ಮನಸ್ಸಿನಲ್ಲಿ ಈ ವಿಚಾರಗಳನ್ನಿಡುವುದು, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ನೀಡುವಂತೆ ನಿಮಗೆ ಸಹಾಯ ಮಾಡಸಾಧ್ಯವಿದೆ. ಜೂನ್ ತಿಂಗಳಿನಲ್ಲಿ ಸಾಕ್ಷಿಕಾರ್ಯಕ್ಕಾಗಿ ತಯಾರಿಸುತ್ತಿರುವಾಗ, ಈ ಮುಂದಿನ ಸಲಹೆಗಳು ನಿಮಗೆ ಸಹಾಯ ಮಾಡಬಹುದು.
2 ಲೋಕದಲ್ಲಿ ಇಷ್ಟೊಂದು ಕಷ್ಟಾನುಭವ ಏಕೆ ಇದೆಯೆಂದು ಅನೇಕ ಜನರು ಸೋಜಿಗಪಡುವುದರಿಂದ, ಈ ಪ್ರಸ್ತಾವವು ಒಂದು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಬಹುದು:
◼“ವಿಪತ್ತು ಬಡಿಯುವಾಗ ಅಥವಾ ಪಾತಕ ಮತ್ತು ಹಿಂಸಾಚಾರದ ಕೃತ್ಯಗಳು ವೃದ್ಧಿಯಾಗುತ್ತಿರುವಾಗ, ಇಂತಹ ಭೀಕರ ವಿಷಯಗಳು ಏಕೆ ಸಂಭವಿಸುತ್ತವೆಂದು ಜನರು ಅನೇಕ ವೇಳೆ ಕೇಳುತ್ತಾರೆ. ನಿಮ್ಮ ಉತ್ತರವು ಏನಾಗಿರುವುದು?” ವ್ಯಕ್ತಿಯ ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಅದನ್ನು ಅಂಗೀಕರಿಸಿರಿ. ಅನಂತರ, ಜ್ಞಾನ ಪುಸ್ತಕವನ್ನು 8ನೆಯ ಅಧ್ಯಾಯಕ್ಕೆ ತಿರುಗಿಸಿರಿ ಮತ್ತು ಪ್ಯಾರಗ್ರಾಫ್ 2ರಲ್ಲಿ ಏನು ತಿಳಿಸಲ್ಪಟ್ಟಿದೆಯೊ ಅದರ ಕಡೆಗೆ ಗಮನ ಸೆಳೆಯಿರಿ. ಕೆಟ್ಟ ಸಂಗತಿಗಳು ಏಕೆ ಸಂಭವಿಸುತ್ತವೆಂಬುದರ ಕುರಿತ ಬೈಬಲಿನ ವಿವರಣೆಯನ್ನು ಈ ಪುಸ್ತಕವು ಸಾದರಪಡಿಸುತ್ತದೆಂದು ವಿವರಿಸಿರಿ. ಪುಸ್ತಕವನ್ನು ನೀಡಿರಿ, ಆದರೆ ನೀವು ಕೇವಲ ಪುಸ್ತಕಗಳನ್ನು ವಿತರಿಸುವುದರಲ್ಲಿ ಅಲ್ಲ, ಬದಲಾಗಿ ಅವುಗಳನ್ನು ಅರ್ಥಮಾಡಿಕೊಳ್ಳುವಂತೆ ಜನರಿಗೆ ಸಹಾಯ ಮಾಡುವುದರಲ್ಲಿಯೂ ಆಸಕ್ತರಾಗಿದ್ದೀರೆಂದು ವಿವರಿಸಿರಿ. ಹಿಂದಿರುಗಿ ಹೋಗಲು ಏರ್ಪಡಿಸಿರಿ.
3 ನೀವು “ಜ್ಞಾನ” ಪುಸ್ತಕವನ್ನು ನೀಡಿರುವ ಮನೆಯವನನ್ನು ಪುನಃ ಸಂದರ್ಶಿಸುವಾಗ, ಹೀಗೆ ಹೇಳಸಾಧ್ಯವಿದೆ:
◼“ಲೋಕದಲ್ಲಿ ಇಷ್ಟೊಂದು ಕಷ್ಟಾನುಭವವು ಏಕೆ ಇದೆಯೆಂಬುದರ ಕುರಿತು ನೀವು ಮಾಡಿರುವ ತೀರ್ಮಾನದ ಕುರಿತಾಗಿ ನಾನು ಆಸಕ್ತನಾಗಿದ್ದೇನೆ. ಈ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಬೈಬಲಿನ ಉತ್ತರದೊಂದಿಗೆ ನೀವು ಸಮ್ಮತಿಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಜ್ಞಾನ ಪುಸ್ತಕದ ಪುಟ 77ರಲ್ಲಿರುವ ಪ್ಯಾರಗ್ರಾಫ್ 17ನ್ನು ಓದಿರಿ, ಮತ್ತು ಮನೆಯವನ ಬೈಬಲಿನಿಂದ ರೋಮಾಪುರ 9:14ನ್ನು ಓದಿರಿ. ಅನಂತರ ಹೇಳಿರಿ: “ದೇವರು ನಮಗೆ ಅನ್ಯಾಯವಾಗಿ ನೋವು ಮತ್ತು ಕಷ್ಟಾನುಭವವನ್ನು ಉಂಟುಮಾಡುವುದಿಲ್ಲವೆಂಬುದು ಒಳ್ಳೆಯ ಸುದ್ದಿಯಾಗಿದೆ. ಆತನು ನಮಗೆ ಶಾಂತಿ ಮತ್ತು ಸಂತೋಷದ ನಿತ್ಯಜೀವವನ್ನು ಕೊಡುವ ವಾಗ್ದಾನವನ್ನು ಮಾಡಿದ್ದಾನೆ. ಈ ಪುಸ್ತಕದಲ್ಲಿರುವ ಪ್ರಥಮ ಅಧ್ಯಾಯದ ಶಿರೋನಾಮವು, ‘ನಿಮಗೆ ಒಂದು ಸಂತೋಷಕರವಾದ ಭವಿಷ್ಯವಿರಬಲ್ಲದು!’ ಎಂಬುದಾಗಿದೆ. ಅದು ನಿಮಗೆ ಮತ್ತು ನಿಮ್ಮ ಪ್ರಿಯ ಜನರಿಗೆ ಹೇಗೆ ನಿಜವಾಗಿರಬಲ್ಲದೆಂಬುದನ್ನು ನಾನು ವಿವರಿಸಲು ಇಷ್ಟಪಡುತ್ತೇನೆ.” ಅಧ್ಯಾಯ 1ಕ್ಕೆ ತಿರುಗಿಸಿರಿ, ಮತ್ತು ನಮ್ಮ ಅಧ್ಯಯನ ವಿಧಾನವನ್ನು ಮಾಡಿ ತೋರಿಸಿರಿ. ಅಧ್ಯಾಯದಿಂದ, ಪರಿಸ್ಥಿತಿಗಳಿಗೆ ಸೂಕ್ತವಾಗಿರುವಷ್ಟು ಭಾಗವನ್ನು ಆವರಿಸಿರಿ.
4 “ರೀಸನಿಂಗ್” ಪುಸ್ತಕದ ಪುಟ 14ರಲ್ಲಿ, “ವೃದ್ಧಾಪ್ಯ/ಮರಣ” ಎಂಬ ಶೀರ್ಷಿಕೆಯ ಕೆಳಗೆ ಕಂಡುಬರುವ ಪೀಠಿಕೆಯನ್ನು ನೀವು ಉಪಯೋಗಿಸಲು ಆರಿಸಿಕೊಳ್ಳಬಹುದು:
◼“‘ಮರಣವು ಎಲ್ಲದರ ಅಂತ್ಯವೊ? ಅಥವಾ ಮರಣಾನಂತರ ಏನಾದರೂ ಇದೆಯೋ?’ ಎಂದು ನೀವು ಎಂದಾದರೂ ಕೇಳಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮರಣದ ಕುರಿತು ನಮಗಿರಬಹುದಾದ ಯಾವುದೇ ಪ್ರಶ್ನೆಗೆ ಬೈಬಲ್ ಸ್ಪಷ್ಟವಾದ ಉತ್ತರಗಳನ್ನು ಕೊಡುತ್ತದೆ. [ಪ್ರಸಂಗಿ 9:5, 10ನ್ನು ಓದಿರಿ.] ಯಾರಲ್ಲಿ ನಂಬಿಕೆ ಇದೆಯೊ ಅವರಿಗೆ ಒಂದು ನಿಜ ನಿರೀಕ್ಷೆ ಇದೆಯೆಂದೂ ಅದು ತೋರಿಸುತ್ತದೆ. [ಜ್ಞಾನ ಪುಸ್ತಕದ ಪುಟ 84ರಲ್ಲಿರುವ ಪ್ಯಾರಗ್ರಾಫ್ 13ಕ್ಕೆ ತಿರುಗಿಸಿರಿ; ಯೋಹಾನ 11:25ರಲ್ಲಿ ಕಂಡುಬರುವ ಯೇಸುವಿನ ಮಾತುಗಳನ್ನು ಓದಿ ವಿವರಿಸಿರಿ.] ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ? ಎಂಬ ಪ್ರಶ್ನೆಯನ್ನು ಉತ್ತರಿಸಲು ಈ ಇಡೀ ಅಧ್ಯಾಯವು ಮೀಸಲಾಗಿಡಲ್ಪಟ್ಟಿದೆ. ಮತ್ತು ಈ ಪುಸ್ತಕದಲ್ಲಿರುವ ಇತರ ಅಧ್ಯಾಯಗಳು, ಜನರಿಗೆ ಜೀವ ಮತ್ತು ಭವಿಷ್ಯತ್ತಿನ ಕುರಿತಾಗಿ ಇರುವ ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತವೆ.” ಪುಸ್ತಕವನ್ನು ನೀಡಿರಿ.
5 ಪುನರ್ಭೇಟಿಯನ್ನು ಮಾಡುವಾಗ, ನೀವು ಪುನಃ ಪರಿಚಯವನ್ನು ಮಾಡಿಕೊಂಡು, ಅನಂತರ ಹೀಗೆ ಹೇಳಸಾಧ್ಯವಿದೆ:
◼“ಒಬ್ಬ ವ್ಯಕ್ತಿ ಸತ್ತಾಗ ಏನು ಸಂಭವಿಸುತ್ತದೆ ಎಂಬುದರ ಕುರಿತಾಗಿ ನಾವು ಈ ಮುಂಚೆ ಮಾತಾಡಿದೆವು. ಅನೇಕ ಜನರು ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತಾರೆ, ಅಥವಾ ಮರಣದ ಅನಂತರ ಜೀವವು, ಸ್ವರ್ಗದಲ್ಲೊ ನರಕದಲ್ಲೊ ಮುಂದುವರಿಯುತ್ತದೆಂದು ನಂಬುತ್ತಾರೆ. ಆದರೆ ಸತ್ತವರು ಇಲ್ಲಿಯೇ ಭೂಮಿಯ ಮೇಲೆ ಪುನಃ ಜೀವಿಸುವ ಸಾಧ್ಯತೆಯ ಕುರಿತಾಗಿ ನೀವೆಂದಾದರೂ ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿಗನುಸಾರ, ಪುನರುತ್ಥಿತ ವ್ಯಕ್ತಿಗಳು, ಭೂಮಿಗೆ ಬಾಧ್ಯಸ್ಥರಾಗುವ ದೀನರ ನಡುವೆ ಇರುವರು. [ಕೀರ್ತನೆ 37:11, 29ನ್ನು ಓದಿರಿ, ಅನಂತರ ಜ್ಞಾನ ಪುಸ್ತಕದ ಪುಟ 88ರಲ್ಲಿರುವ ಪ್ಯಾರಗ್ರಾಫ್ 20ನ್ನು ಚರ್ಚಿಸಿರಿ.] ಆ ನಿರೀಕ್ಷೆಯು, ಮರಣದ ಭಯದಲ್ಲಿ ಜೀವಿಸಿದ ಕೋಟಿಗಟ್ಟಲೆ ಜನರಿಗೆ ಸಾಂತ್ವನವನ್ನು ಕೊಟ್ಟಿದೆ. ಈ ಪುಸ್ತಕವು, ಆ ವಿಷಯವನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು. ಹೇಗೆಂದು ನಾನು ತೋರಿಸಬಹುದೊ?”
6 ನೀವು ಒಂದು ಸರಳೀಕರಿಸಲ್ಪಟ್ಟ ನಿರೂಪಣೆಯನ್ನು ಇಷ್ಟಪಡುವಲ್ಲಿ, ನೀವು ಇದನ್ನು ಪ್ರಯತ್ನಿಸಿ ನೋಡಬಹುದು:
◼“ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಈ ಪುಸ್ತಕದಲ್ಲಿ ನಾನು ನಿಮಗೆ ಒಂದು ಚಿತ್ರವನ್ನು ತೋರಿಸಲು ಇಷ್ಟಪಡುವೆ. ಇದು ಒಂದು ಸುಂದರವಾದ ಚಿತ್ರವಲ್ಲವೊ?” ಮನೆಯವನು 4-5ನೆಯ ಪುಟಗಳನ್ನು ನೋಡಸಾಧ್ಯವಾಗುವಂತೆ ಪುಸ್ತಕವನ್ನು ತೆರೆಯಿರಿ. ಅವನ ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಪುಟ 5ರಲ್ಲಿರುವ ಪದಗಳನ್ನು ಓದಿರಿ. ಹೀಗೆ ಹೇಳುತ್ತಾ ಸಮಾಪ್ತಿಗೊಳಿಸಿರಿ: “ನೀವೇ ಓದಿನೋಡಲಿಕ್ಕಾಗಿ ಈ ಪುಸ್ತಕವನ್ನು ನೀವು ಇಟ್ಟುಕೊಳ್ಳಬಹುದು. ನಾವು ಇದನ್ನು ಒಂದು ಪ್ರತಿಗೆ ರೂ. 20ರ ಚಿಕ್ಕ ಕಾಣಿಕೆಗಾಗಿ ವಿತರಿಸುತ್ತೇವೆ.” ತೋರಿಸಲ್ಪಟ್ಟಿರುವ ಯಾವುದೇ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಲು ಯಾವುದು ಒಂದು ಸುಸಮಯವಾಗಿರುವುದೆಂಬುದನ್ನು ಕಂಡುಕೊಳ್ಳಿರಿ.
7 ಜೀವಿತದ ಪ್ರಾಮುಖ್ಯ ಪ್ರಶ್ನೆಗಳನ್ನು ಉತ್ತರಿಸುವ, ದೇವರಿಂದ ಬರುವ ಜ್ಞಾನವು ನಮ್ಮಲ್ಲಿದೆ. ಶ್ರದ್ಧಾಪೂರ್ವಕವಾಗಿ ತಯಾರಿಸಿರಿ, ಮತ್ತು ಸತ್ಯವನ್ನು ಅನ್ವೇಷಿಸುತ್ತಿರುವವರೊಂದಿಗೆ ಈ ಜೀವದಾಯಕ ಮಾಹಿತಿಯನ್ನು ಹಂಚಿಕೊಳ್ಳುವ ನಿಮ್ಮ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನು.