ಟೆಲಿಫೋನ್ ಸಾಕ್ಷಿಕಾರ್ಯ ಪರಿಣಾಮಕಾರಿ!
1. ನಮ್ಮ ಶುಶ್ರೂಷೆಯಲ್ಲಿ ಟೆಲಿಫೋನ್ ಸಾಕ್ಷಿಕಾರ್ಯವೂ ಮಹತ್ತ್ವದ್ದೆಂದು ಏಕೆ ಪರಿಗಣಿಸಬಹುದು?
1 ಟೆಲಿಫೋನ್ ಸಾಕ್ಷಿಕಾರ್ಯವನ್ನು ನಾವೇಕೆ ಪ್ರಯತ್ನಿಸಬೇಕು? ಏಕೆಂದರೆ ಜನರು ರಕ್ಷಣೆಗಾಗಿ ನಿಷ್ಕೃಷ್ಟ ಜ್ಞಾನ ಪಡೆಯುವಂತೆ ಸಹಾಯಮಾಡುವ ಇನ್ನೊಂದು ವಿಧ ಇದಾಗಿದೆ. (2 ಪೇತ್ರ 3:9) ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಪ್ರಮುಖ ವಿಧಾನ ಮನೆಮನೆಯ ಸಾಕ್ಷಿಕಾರ್ಯ ಆಗಿದ್ದರೂ, ಮನೆಯಲ್ಲಿ ಸಿಗದವರನ್ನು ತಲಪಲಿಕ್ಕಾಗಿ ನಾವು ಇತರ ವಿಧಾನಗಳನ್ನೂ ಬಳಸಲು ಸಿದ್ಧರು.—ಮತ್ತಾ. 24:14; ಲೂಕ 10:1-7; ಪ್ರಕ. 14:6.
2. ಟೆಲಿಫೋನ್ ಸಾಕ್ಷಿಕಾರ್ಯವನ್ನು ಹೇಗೆ ಸಂಘಟಿಸಬೇಕು?
2 ಹೇಗೆ ಸಂಘಟಿಸಬೇಕು? ಮನೆಮನೆ ಸೇವೆಯಂತೆಯೇ ಟೆಲಿಫೋನ್ ಸಾಕ್ಷಿಕಾರ್ಯಕ್ಕೂ ಪ್ರಚಾರಕರಿಗೆ ಟೆರಿಟೊರಿ ಕೊಡಲಾಗುತ್ತದೆ. ಅದನ್ನು ಪ್ರಚಾರಕರು ಒಬ್ಬರೇ ಮಾಡಬಹುದು ಇಲ್ಲವೆ ಇಬ್ಬರು ಮೂವರು ಸೇರಿ ಚಿಕ್ಕ ಗುಂಪಾಗಿ ಮಾಡಬಹುದು. ಅಪಕರ್ಷಣೆಯಿಲ್ಲದ ಪ್ರಶಾಂತ ಸ್ಥಳವನ್ನು ಆರಿಸಿ. ಒಂದು ಮೇಜಿನ ಬಳಿ ಕುಳಿತು, ಸಾಧಾರಣವಾಗಿ ಮನೆಮನೆಯ ಸೇವೆಯಲ್ಲಿ ಬಳಸುವ ಸಾಧನಸಾಮಗ್ರಿಗಳನ್ನು ತಮ್ಮ ಮುಂದೆ ಇಡುವುದು ತುಂಬ ಉಪಯುಕ್ತವೆಂದು ಅನೇಕರು ಕಂಡುಕೊಂಡಿದ್ದಾರೆ.
3. ಫೋನ್ ಮೂಲಕ ಸಾಕ್ಷಿಕೊಡುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು?
3 ಹೇಗೆ ಸಾಕ್ಷಿಕೊಡಬೇಕು?: ಫೋನ್ ಮೂಲಕ ಸಾಕ್ಷಿಕೊಡುವಾಗ ನಮ್ಮ ನಿರೂಪಣೆ ಸಂಭಾಷಣಾ ಶೈಲಿಯದ್ದಾಗಿರಬೇಕು. ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಹೊಸದಾಗಿ ತೊಡಗುವವರು, ಮನೆಯವರಿಗೆ ನಿರೂಪಣೆಯನ್ನು ಓದಿಹೇಳಬಹುದಾದರೂ ಅದು ಸಂಭಾಷಣಾ ಶೈಲಿಯಲ್ಲಿರಬೇಕು. ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆ ಹಾಗೂ ನಮ್ಮ ರಾಜ್ಯ ಸೇವೆಯಲ್ಲಿರುವ ನಿರೂಪಣೆಗಳು ಮಾತ್ರವಲ್ಲದೆ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್ ಈ ಸಂಬಂಧದಲ್ಲಿ ಸಹಾಯಕಾರಿ. ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸುವಾಗ ಒಂದು ವಿಷಯವನ್ನು ಆರಿಸಿ, ಯಾವ ಪ್ರಶ್ನೆ ಕೇಳಬೇಕೆಂದು ನಿರ್ಧರಿಸಿ, ಉತ್ತರ ಕೊಡುವ ಕೆಲವೊಂದು ವಚನಗಳನ್ನು ಓದಿಹೇಳಲು ಸಿದ್ಧರಾಗಿರಿ. ವ್ಯಕ್ತಿಯ ಪ್ರತಿಕ್ರಿಯೆಗೆ ಜಾಗ್ರತೆಯಿಂದ ಕಿವಿಗೊಡಿ. ಆಗ, ಸಂಭಾಷಣೆ ಮುಂದುವರಿಸಬೇಕೋ ಬಾರದೋ ಎಂದು ಗ್ರಹಿಸಶಕ್ತರಾಗುವಿರಿ. ಅನೇಕವೇಳೆ, ಮನೆಮನೆಯ ಶುಶ್ರೂಷೆಯಲ್ಲಿ ನೀಡಲಾಗುತ್ತಿರುವ ಪ್ರಕಾಶನಗಳ ಬಗ್ಗೆಯೇ ಅವರಿಗೆ ತಿಳಿಸಬಹುದು. ನೆನಪಿನಲ್ಲಿಡಬೇಕಾದ ವಿಷಯಗಳು: ನಿರಾಳವಾಗಿರಿ, ನಿಧಾನವಾಗಿ ಮಾತಾಡಿ. ಸೌಜನ್ಯ, ತಾಳ್ಮೆ ಮತ್ತು ಸ್ನೇಹಭಾವದವರಾಗಿರಿ. ಇದನ್ನು ಮನೆಯವರು ಫೋನ್ ಮೂಲಕವೂ ಗ್ರಹಿಸಬಲ್ಲರು. ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಾಗ ಕಿವಿಗೊಡಿರಿ, ಬಳಿಕ ಪ್ರತಿಕ್ರಿಯಿಸಿರಿ ಮತ್ತು ಅವರ ಹೇಳಿಕೆಗಾಗಿ ಕೃತಜ್ಞತೆ ಸೂಚಿಸಿ. ದಾನದ ಏರ್ಪಾಡಿನ ಕುರಿತು ಹೇಳದಂತೆ ಕಟ್ಟೆಚ್ಚರವಹಿಸಿ. ಏಕೆಂದರೆ ಇದು ಪೋನ್ ಮೂಲಕ ಹಣ ಸುಲಿಯುವ ಪ್ರಯತ್ನವೆಂದು ಅವರು ನೆನಸ್ಯಾರು. ಆ ವ್ಯಕ್ತಿಗೆ ಆಸಕ್ತಿಯಿಲ್ಲವೆಂದು ನೀವು ಗ್ರಹಿಸುವಲ್ಲಿ ವಿನಯಪೂರ್ವಕವಾಗಿ ಸಂಭಾಷಣೆಯನ್ನು ನಿಲ್ಲಿಸಿಬಿಡಿ.
4. ಟೆಲಿಫೋನ್ ಸಾಕ್ಷಿಕಾರ್ಯದ ಮೂಲಕ ನಮ್ಮ ನೇಮಿತ ಟೆರಿಟೊರಿಯಲ್ಲಿ ಏನು ಮಾಡಶಕ್ತರಾಗುವೆವು?
4 ಫೋನ್ನಲ್ಲಿ ನಮ್ಮೊಂದಿಗೆ ಮಾತಾಡುತ್ತಿರುವ ವ್ಯಕ್ತಿ ಮನೆಯಿಂದ ಹೊರ ಬರಲಾಗದ ಅಸ್ವಸ್ಥರು ಇಲ್ಲವೆ ವಿಕಲಾಂಗರು ಆಗಿರಬಹುದು ಅಥವಾ ಮನೆಮನೆಯ ಶುಶ್ರೂಷೆಯಲ್ಲಿ ನಾವು ಸಂಪರ್ಕಿಸಲಾಗದ ಉದ್ಯೋಗಸ್ಥರಾಗಿರಬಹುದು. ಇನ್ನಿತರರು ಬಿಗಿ ಭದ್ರತೆಯಿರುವ ಕಾಲೊನಿಗಳ ಇಲ್ಲವೆ ಅಪಾರ್ಟ್ಮೆಂಟ್ಗಳ ನಿವಾಸಿಗಳಾಗಿರಬಹುದು. ಹೀಗಿರುವುದರಿಂದ ಶುಶ್ರೂಷೆಯನ್ನು ಇನ್ನಷ್ಟು ಪೂರ್ಣ ಹಾಗೂ ಕೂಲಂಕಷವಾಗಿ ಪೂರೈಸಲಿಕ್ಕಾಗಿ ಒಂದು ಪರಿಣಾಮಕಾರಿ ವಿಧಾನವಾಗಿರುವ ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿರಿ.