ಪ್ರಶ್ನಾ ಚೌಕ
◼ ಸಭಾ ಕೂಟಗಳಲ್ಲಿ ಕಲಿಯಲು ಅನುಕೂಲ ವಾತಾವರಣ ಇರುವಂತೆ ಎಲ್ಲರೂ ಹೇಗೆ ಸಹಕರಿಸಸಾಧ್ಯವಿದೆ? (ಧರ್ಮೋ. 31:12)
ಯೆಹೋವನಿಗೆ ಮತ್ತು ಆತನು ಮಾಡಿರುವ ಸಭಾ ಕೂಟಗಳ ಏರ್ಪಾಡಿಗೆ ಆಳವಾದ ಗೌರವ ತೋರಿಸಲು ಎಲ್ಲರೂ ಸಮಯಕ್ಕೆ ಮುಂಚೆ ಬಂದು, ಆತನಿಂದ ಬೋಧಿಸಲ್ಪಡಲು ಸಿದ್ಧರಾಗುವಂತೆ ಉತ್ತೇಜಿಸುತ್ತೇವೆ. ಮುಂದಿನ ಸೀಟುಗಳಲ್ಲಿ ಕೂತುಕೊಳ್ಳುವುದು ಸಹಾಯಕಾರಿ ಏಕೆಂದರೆ ಚಿಕ್ಕ ಮಕ್ಕಳಿರುವವರು ಮತ್ತು ಅಪರೂಪಕ್ಕೆ ತಡವಾಗಿ ಬರುವವರು ಹಿಂದಿನ ಸೀಟುಗಳಲ್ಲಿ ಕೂತುಕೊಳ್ಳಬಹುದು. ಕೂಟ ಆರಂಭವಾಗುವ ಮುಂಚೆ ಮೊಬೈಲ್, ಪೇಜರ್‌ಗಳಂಥ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಭಿಕರ ಗಮನ ಭಂಗಮಾಡದಂಥ ರೀತಿಯಲ್ಲಿ ಸೆಟ್‌ಮಾಡಿಡಬೇಕು. ಹಾಜರಿರುವವರೆಲ್ಲರೂ ಕೂಟದಾದ್ಯಂತ ಪೂಜ್ಯಭಾವವನ್ನು ಕಾಪಾಡಿಕೊಳ್ಳುವಲ್ಲಿ ಅಡ್ಡಿಅಡಚಣೆಗಳು ತೀರ ಕಡಿಮೆಯೂ ಚಿಕ್ಕಪುಟ್ಟದ್ದೂ ಆಗಿರುವವು.—ಪ್ರಸಂ. 5:1; ಫಿಲಿ. 2:4.
ಹೊಸಬರು ಕೂಟಗಳಿಗೆ ಮೊದಮೊದಲು ಹಾಜರಾಗುವಾಗ, ಸಭೆಯಲ್ಲಿ ಅವರಿಗೆ ಪರಿಚಿತರಾದ ಯಾರಾದರೂ ಅವರೊಂದಿಗೆ ಕೂತುಕೊಳ್ಳಬಹುದು. ವಿಶೇಷವಾಗಿ ತರಬೇತಿ ಬೇಕಾದ ಚಿಕ್ಕ ಮಕ್ಕಳಿರುವಲ್ಲಿ ಅಂಥ ಹೆತ್ತವರೊಂದಿಗೆ ಕೂತುಕೊಳ್ಳುವುದು ಸಹಾಯಕರ. ಕೂಟಗಳಿಗೆ ಹಾಜರಾಗುವುದು ಆ ಕುಟುಂಬಕ್ಕೆ ಒಂದು ಹೊಸ ಸಂಗತಿ ಆಗಿರಬಹುದು. ಹಾಗಿರುವಾಗ, ಅವರನ್ನು ಹಿಂದಿನ ಸೀಟುಗಳಲ್ಲಿ ಕೂರಿಸುವುದಾದರೆ ತಮ್ಮ ಪುಟ್ಟ ಮಕ್ಕಳ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಹೆತ್ತವರು ಸ್ವಲ್ಪ ಹೊತ್ತು ಹಾಲ್‌ನಿಂದ ಹೊರಗೆ ಹೋಗಬೇಕಾಗುವಲ್ಲಿ ಅವರಿಗೆ ಮುಜುಗರವಾಗದು. ಬೇರೆಯವರಿಗೂ ಹೆಚ್ಚು ಅಪಕರ್ಷಣೆಯಾಗದು. (ಜ್ಞಾನೋ. 22:6, 15) ಚಿಕ್ಕ ಮಕ್ಕಳಿರುವ ಕುಟುಂಬಗಳು ಒಂದು ಪ್ರತ್ಯೇಕ ಕೋಣೆಯಲ್ಲಿ ಕೂತುಕೊಳ್ಳಬಾರದು. ಹಾಗೆ ಮಾಡಿದರೆ ಮಕ್ಕಳಿಗೆ ಇನ್ನಷ್ಟು ಗಲಾಟೆ ಇಲ್ಲವೆ ರಂಪಮಾಡಲು ಅವಕಾಶ ಮಾಡಿಕೊಟ್ಟಂತಾಗುವುದು. ಮಕ್ಕಳಿಗೆ ಶಿಸ್ತು ಕೊಡಬೇಕಾದಲ್ಲಿ ಇಲ್ಲವೆ ಬೇರಾವುದೇ ಅಗತ್ಯವನ್ನು ಪೂರೈಸಬೇಕಾಗಿರುವಲ್ಲಿ ಹೆತ್ತವರು ಅವರೊಂದಿಗೆ ಮುಖ್ಯ ಹಾಲ್‌ನಿಂದ ಹೊರಗೆ ಹೋಗಿ ನಂತರ ವಾಪಸ್ಸು ಬಂದು ಕೂತುಕೊಳ್ಳುವುದು ಉತ್ತಮ.
ಆರಾಧನಾ ಸ್ಥಳಕ್ಕೆ ಸೂಕ್ತವಾಗಿರುವಂಥ ವಾತಾವರಣವಿರುವಂತೆ ಅಟೆಂಡೆಂಟರು ನೋಡಿಕೊಳ್ಳುತ್ತಾರೆ. ಕುಟುಂಬಗಳಿಗೆ ಮತ್ತು ಅಪರೂಪಕ್ಕೆ ತಡವಾಗಿ ಬರುವವರಿಗೆ ಸರಿಯಾದ ಸ್ಥಳದಲ್ಲಿ ಸೀಟು ಸಿಗುವಂತೆ ಅವರು ಸಹಾಯ ಮಾಡುತ್ತಾರೆ. ಅನಾವಶ್ಯಕವಾಗಿ ಅಪಕರ್ಷಿಸದೆ ಸೂಕ್ತವಾದ ಸೀಟುಗಳನ್ನು ಕಂಡುಕೊಳ್ಳುವಂತೆ ಇತರರಿಗೆ ಸಹಾಯ ಮಾಡುವಾಗ ಅಟೆಂಡೆಂಟರು ಸದಾ ಜಾಣ್ಮೆ ಮತ್ತು ವಿವೇಚನೆ ತೋರಿಸಬೇಕು. ಯಾವುದೇ ಅನಿರೀಕ್ಷಿತ ಅಡಚಣೆಯನ್ನು ನಿರ್ವಹಿಸಲು ಉತ್ತಮ ತೀರ್ಮಾನಶಕ್ತಿ ಬಳಸಬೇಕು. ಒಂದು ಮಗುವಿನಿಂದಾಗಿ ಬೇರೆಯವರಿಗೆ ಅಪಕರ್ಷಣೆಯಾಗುವಾಗ ಅವರು ದಯೆಯಿಂದ ನೆರವು ನೀಡಲು ಮುಂದಾಗಬಹುದು.
ಆರಾಧನಾ ಕೂಟಗಳಲ್ಲಿ ಯೆಹೋವನ ಕುರಿತಾಗಿಯೂ ಶಾಂತಿಭರಿತ, ನೀತಿಯುತ ಹೊಸ ಲೋಕವನ್ನು ತರುವ ಆತನ ಉದ್ದೇಶದ ಕುರಿತಾಗಿಯೂ ಕಲಿಯುತ್ತೇವೆ. ಹೀಗಿರುವುದರಿಂದ ಕಲಿಯಲು ಅನುಕೂಲ ವಾತಾವರಣ ಇರುವಂತೆ ಹಾಜರಾಗುವವರೆಲ್ಲರೂ ಸಹಕರಿಸಬೇಕು.—ಇಬ್ರಿ. 10:24, 25.