ರಾಜ್ಯದ ಸುವಾರ್ತೆ ಖಂಡಿತ ಸಾರಲ್ಪಡುವುದು!
1. ಸಾರುವ ಕೆಲಸವನ್ನು ಯಾವುದೂ ನಿಲ್ಲಿಸಲಾರದೆಂದು ನಮಗೆ ಹೇಗೆ ಗೊತ್ತು?
1 ಯೆಹೋವನು ತನ್ನ ಚಿತ್ತವನ್ನು ಪೂರೈಸದಂತೆ ಮಾಡುವ ಶಕ್ತಿ ಯಾವುದಕ್ಕೂ ಇಲ್ಲ. (ಯೆಶಾ. 14:24) ನ್ಯಾಯಸ್ಥಾಪಕ ಗಿದ್ಯೋನ್ ಮತ್ತವನ 300 ಮಂದಿ ಸೈನಿಕರು ಮಿದ್ಯಾನ್ಯರ 1,35,000 ಮಂದಿ ಸೈನಿಕರನ್ನು ಸೋಲಿಸುವುದು ಅಸಾಧ್ಯವೆಂದು ತೋರುತ್ತಿತ್ತು. ಆದರೂ ಯೆಹೋವನು ಗಿದ್ಯೋನನಿಗೆ ‘ನಾನು ನಿನ್ನನ್ನು ಕಳುಹಿಸುತ್ತೇನೆ. ನೀನು ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಖಂಡಿತ ಬಿಡಿಸುವಿ’ ಎಂದು ಹೇಳಿದನು. (ನ್ಯಾಯ. 6:14, NW) ಇಂದು ಯಾವ ಕೆಲಸಕ್ಕೆ ಯೆಹೋವನ ಬೆಂಬಲವಿದೆ? ಯೇಸು ಹೇಳಿದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು.” (ಮತ್ತಾ. 24:14) ಈ ಕೆಲಸ ಪೂರ್ಣಗೊಳ್ಳದಂತೆ ಯಾರೂ ತಡೆಯಲಾರರು!
2. ಶುಶ್ರೂಷೆಯನ್ನು ಪೂರೈಸಲು ಯೆಹೋವನು ನಮ್ಮಲ್ಲಿ ಒಬ್ಬೊಬ್ಬರಿಗೂ ಸಹಾಯಮಾಡುವನೆಂದು ಹೇಗೆ ಹೇಳಬಹುದು?
2 ಯೆಹೋವನು ನಮ್ಮಲ್ಲಿ ಒಬ್ಬೊಬ್ಬರಿಗೂ ಸಹಾಯಮಾಡುತ್ತಾನೆ: ಯೆಹೋವನು ತನ್ನ ಸಾಕ್ಷಿಗಳನ್ನು ಒಂದು ಗುಂಪಾಗಿ ಸಫಲಗೊಳಿಸುತ್ತಾನೆಂಬ ಪೂರ್ಣ ಭರವಸೆ ನಮಗಿದೆ. ಆದರೆ ಆತನು ನಮ್ಮಲ್ಲಿ ಒಬ್ಬೊಬ್ಬರಿಗೂ ಸಹಾಯಮಾಡುವನೋ? ಅಪೊಸ್ತಲ ಪೌಲನು ಕಷ್ಟದಲ್ಲಿದ್ದಾಗ ಯೆಹೋವನು ತನ್ನ ಪುತ್ರನಾದ ಯೇಸುವಿನ ಮೂಲಕ ವೈಯಕ್ತಿಕ ಬೆಂಬಲವನ್ನು ಕೊಟ್ಟನು. (2 ತಿಮೊ. 4:17) ನಾವು ಆತನ ಚಿತ್ತವನ್ನು ಪೂರೈಸಲು ವೈಯಕ್ತಿಕವಾಗಿ ಮಾಡುವ ಪ್ರಯತ್ನಗಳನ್ನು ಯೆಹೋವನು ಅದೇ ರೀತಿ ಹರಸುವನೆಂದು ನಾವು ದೃಢ ಭರವಸೆಯಿಂದಿರಬಲ್ಲೆವು.—1 ಯೋಹಾ. 5:14.
3. ಯೆಹೋವನು ನಮಗೆ ಯಾವೆಲ್ಲ ಪರಿಸ್ಥಿತಿಗಳಲ್ಲಿ ಸಹಾಯಮಾಡುತ್ತಾನೆ?
3 ದೈನಂದಿನ ಜೀವನಾವಶ್ಯಕತೆಗಳನ್ನು ಪೂರೈಸಲು ನೀವು ಶ್ರಮಿಸುವುದರಿಂದ ಶುಶ್ರೂಷೆಗೆ ಹೋಗಲು ನಿಮ್ಮಲ್ಲಿ ಶಕ್ತಿಯೇ ಇಲ್ಲವೆಂದು ಅನಿಸುತ್ತಿದೆಯೇ? ಹಾಗಾದರೆ ‘ಆತನು ಸೋತವನಿಗೆ ತ್ರಾಣವನ್ನು ಅನುಗ್ರಹಿಸುತ್ತಾನೆ.’ (ಯೆಶಾ. 40:29-31) ನೀವು ಹಿಂಸೆ ಇಲ್ಲವೆ ವಿರೋಧವನ್ನು ಎದುರಿಸುತ್ತಿದ್ದೀರೋ? ಹಾಗಿರುವಲ್ಲಿ “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” (ಕೀರ್ತ. 55:22) ಕೆಲವೊಮ್ಮೆ ಆತ್ಮವಿಶ್ವಾಸ ಇಲ್ಲವೆಂದನಿಸುತ್ತದೋ? ‘ನೀನು ಹೊರಟುಹೋಗು; ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು’ ಎನ್ನುತ್ತಾನೆ ಯೆಹೋವನು. (ವಿಮೋ. 4:11, 12) ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡದಂತೆ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ತಡೆಯುತ್ತಿವೆಯೇ? ನೀವು ಮಾಡುವ ಸೇವೆ ಸ್ವಲ್ಪವಾಗಿದ್ದರೂ ಪೂರ್ಣಪ್ರಾಣದಿಂದ ಮಾಡುವ ಕಾರಣ ಯೆಹೋವನು ಅದನ್ನು ಅಮೂಲ್ಯವೆಂದೆಣಿಸುತ್ತಾನೆ ಮತ್ತು ಉಪಯೋಗಿಸುತ್ತಾನೆ.—1 ಕೊರಿಂ. 3:6, 9.
4. ಯೆಹೋವನ ಮೇಲಿನ ಭರವಸೆ ನಮ್ಮನ್ನು ಯಾವ ರೀತಿಯಲ್ಲಿ ಪ್ರಭಾವಿಸುವುದು?
4 ಯೆಹೋವನ “ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು?” (ಯೆಶಾ. 14:27) ಆತನು ನಮ್ಮ ಶುಶ್ರೂಷೆಯನ್ನು ಆಶೀರ್ವದಿಸುವನೆಂಬ ಭರವಸೆಯೊಂದಿಗೆ, “ಯೆಹೋವನಿಂದ ಅಧಿಕಾರಹೊಂದಿದವರಾಗಿ ಧೈರ್ಯದಿಂದ” ನಾವು ಜಾಣ್ಮೆತೋರಿಸುತ್ತಾ, ಪಟ್ಟುಬಿಡದೆ ಸಾರುವುದನ್ನು ಮುಂದುವರಿಸೋಣ.—ಅ. ಕಾ. 14:3.