ಎಲ್ಲಾ ಸಂದರ್ಭದಲ್ಲೂ ಉಪಯೋಗಿಸಿ
1. ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಎಂಬ ಟ್ರ್ಯಾಕ್ಟ್ ಯಾವುದಕ್ಕೆ ಉಪಯುಕ್ತ?
1 ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್ನ ಉದ್ದೇಶ ಬೈಬಲ್ ಅಧ್ಯಯನ ಆರಂಭಿಸಲು ನಮಗೆ ಸಹಾಯ ಮಾಡುವುದೇ ಆಗಿದೆ. ಈ ಟ್ರ್ಯಾಕ್ಟ್ ಸತ್ಯದ ಬೀಜವನ್ನು ಎಲ್ಲೆಡೆ ಬಿತ್ತಲು ಪರಿಣಾಮಕಾರಿ ಸಾಧನವೂ ಆಗಿದೆ. (ಪ್ರಸಂ. 11:6) ಇದರ ಸದ್ಬಳಕೆಗಾಗಿ ಕೆಲವೊಂದು ಸಲಹೆಗಳು ಇಲ್ಲಿವೆ.
2. ಮೊದಲ ಭೇಟಿಯಲ್ಲಿ ಈ ಟ್ರ್ಯಾಕ್ಟನ್ನು ಹೇಗೆ ಬಳಸಬಹುದು?
2 ಮೊದಲ ಭೇಟಿಯಲ್ಲಿ: ಮನೆಯವರಿಗೆ ಆಸಕ್ತಿಯಿರುವ ವಿಷಯದ ಬಗ್ಗೆ ಸಂಭಾಷಣೆ ಆರಂಭಿಸಲು ಪ್ರಯತ್ನಿಸಿ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತಾಡಲು ಅವರಿಗೆ ಆಸಕ್ತಿಯಿದೆ ಎಂದು ತೋರುವಲ್ಲಿ ಈ ಟ್ರ್ಯಾಕ್ಟನ್ನು ತೋರಿಸಿ ಮುಖಪುಟದಲ್ಲಿರುವ ಆರು ಪ್ರಶ್ನೆಗಳೆಡೆಗೆ ಬೊಟ್ಟುಮಾಡಿ “ಇದರಲ್ಲಿ ಯಾವ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬಂದಿವೆ?” ಎಂದು ಕೇಳಿ. ಅವರು ಹೇಳಿದ ಬಳಿಕ, ಆ ಪ್ರಶ್ನೆಗಳಲ್ಲಿ ಯಾವುದಾದರೊಂದಕ್ಕೆ ಬೈಬಲ್ ಕೊಡುವ ಉತ್ತರವನ್ನು ಟ್ರ್ಯಾಕ್ಟ್ನಿಂದಲೇ ಚರ್ಚಿಸಿ, ಕೊಡಲಾದ ವಚನವೊಂದನ್ನು ಓದಿ. ಆಮೇಲೆ ಕೊನೆಪುಟವನ್ನು ಓದಿ ಅಥವಾ ಸಾರಾಂಶಿಸಿ. ಟ್ರ್ಯಾಕ್ಟನ್ನು ಓದಲು ಅವರಿಗೆ ಆಸಕ್ತಿಯಿದ್ದರೆ ಅದನ್ನು ನೀಡಿ. ಈ ಟ್ರ್ಯಾಕ್ಟ್ನಿಂದಾಗಿ ಸತ್ಯ ಅವರ ಹೃದಯದಲ್ಲಿ ಬೇರೂರಬಹುದು. (ಮತ್ತಾ. 13:23) ಅವರಿಗೆ ಬೈಬಲ್ ಮೇಲೆ ನಿಜವಾಗಿಯೂ ಗೌರವ ಇದೆಯೆಂದು ನಿಮಗೆ ಗೊತ್ತಾದರೆ, ಪುನರ್ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕ ನೀಡಿ.
3. ಆಸಕ್ತ ಮನೆಯವರು ಬ್ಯುಸಿ ಇರುವಲ್ಲಿ ನಾವೇನು ಮಾಡಬಹುದು?
3 ಆಸಕ್ತ ಮನೆಯವರು ಬ್ಯುಸಿ ಇರುವಾಗ: ನೀವು ಹೀಗನ್ನಬಹುದು: “ನಿಮಗೆ ಈಗ ಸಮಯವಿಲ್ಲ ಅಂತ ಕಾಣಿಸುತ್ತದೆ. ಬೈಬಲಿಗೆ ಸಂಬಂಧಪಟ್ಟ ಈ ಟ್ರ್ಯಾಕ್ಟನ್ನು ನಿಮಗೆ ಕೊಟ್ಟು ಹೋಗಬಹುದಾ? ಸಾಮಾನ್ಯವಾಗಿ ಹೆಚ್ಚಿನವರು ಕೇಳುವ ಆರು ಪ್ರಶ್ನೆಗಳನ್ನು ಇದರಲ್ಲಿ ಪಟ್ಟಿಮಾಡಲಾಗಿದೆ. ಇವುಗಳಿಗೆ ಶಾಸ್ತ್ರಗ್ರಂಥದಿಂದ ನೇರ ಉತ್ತರಗಳನ್ನೂ ಕೊಡಲಾಗಿದೆ. ಈ ಪ್ರಶ್ನೆಗಳಲ್ಲಿ ಯಾವುದನ್ನಾದರೂ ನೀವು ಚರ್ಚಿಸಲು ಇಚ್ಛಿಸುವಲ್ಲಿ ನಿಮ್ಮನ್ನು ಪುನಃ ಭೇಟಿಯಾಗುವೆ.”
4. ಸಹಪಾಠಿಗಳಿಗೊ ಸಹೋದ್ಯೋಗಿಗಳಿಗೊ ಟ್ರ್ಯಾಕ್ಟನ್ನು ನೀಡಲು ನಾವೇನು ಹೇಳಬಹುದು?
4 ಶಾಲೆಯಲ್ಲಿ ಇಲ್ಲವೆ ಕೆಲಸದ ಸ್ಥಳದಲ್ಲಿ: ಮಧ್ಯಾಹ್ನ ಊಟದ ಸಮಯದಲ್ಲಿ ನಿಮ್ಮ ಮಿತ್ರನೊಂದಿಗೆ ಮಾತಾಡುತ್ತಾ ನೀವು ಹೀಗನ್ನಬಹುದು: “ಇದರಲ್ಲಿರುವ ಯಾವುದಾದರೂ ಪ್ರಶ್ನೆ ನಿನ್ನ ಮನಸ್ಸಿಗೆ ಬಂದಿದೆಯೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಅವನಿಗೆ ಆಸಕ್ತಿಯಿದ್ದರೆ ಮಾತು ಮುಂದುವರಿಸಿ.] ಈ ಪ್ರಶ್ನೆಗಳಿಗೆ ಶಾಸ್ತ್ರಗ್ರಂಥ ಕೊಡುವ ಸ್ಪಷ್ಟವಾದ, ಸಂತೃಪ್ತಿಕರ ಉತ್ತರಗಳೂ ಇದರಲ್ಲಿವೆ.” ಅವನಿಗೆ ಸಮಯವಿರುವಲ್ಲಿ, ಟ್ರ್ಯಾಕ್ಟ್ನಲ್ಲಿರುವ ಯಾವುದಾದರೂ ಒಂದು ಉತ್ತರವನ್ನು ಚರ್ಚಿಸಬಹುದು ಹಾಗೂ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನೂ ನೀಡಬಹುದು.
5. ಸಾರುವ ಕಾರ್ಯಕ್ಕಾಗಿ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಟ್ರ್ಯಾಕ್ಟ್ ಪರಿಣಾಮಕಾರಿ ಸಾಧನವಾಗಿದೆ ಏಕೆ?
5 ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಟ್ರ್ಯಾಕ್ಟಲ್ಲಿ ಸತ್ಯವನ್ನು ಸರಳವಾಗಿ ಮತ್ತು ನೇರವಾಗಿ ತಿಳಿಸಲಾಗಿದೆ. ಈ ಟ್ರ್ಯಾಕ್ಟ್ ಎಲ್ಲಾ ಧರ್ಮ, ಸಂಸ್ಕೃತಿಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ. ಇದನ್ನು ನೀಡುವುದು ತುಂಬ ಸುಲಭ; ಎಳೆಯ ಪ್ರಚಾರಕರು ಹಾಗೂ ಹೊಸ ಪ್ರಚಾರಕರು ಸಹ ಇದನ್ನು ಸುಲಭವಾಗಿ ನೀಡಬಹುದು. ಸೂಕ್ತವಾದ ಎಲ್ಲಾ ಸಂದರ್ಭಗಳಲ್ಲಿ ನೀವದನ್ನು ಉಪಯೋಗಿಸುತ್ತಿದ್ದೀರೋ?
6. ಟ್ರ್ಯಾಕ್ಟನ್ನು ಕೊಡುವ ಮುಂಚೆ ಮನೆಯವರ ಮನೋಭಾವ ಹೇಗಿದೆಯೆಂದು ಯಾವಾಗಲೂ ವಿವೇಚಿಸಿ ತಿಳಿದುಕೊಳ್ಳಬೇಕು ಏಕೆ?
6 ನಾವು ವಿವೇಚನೆಯನ್ನು ಉಪಯೋಗಿಸತಕ್ಕದ್ದು ಏಕೆಂದರೆ ಟ್ರ್ಯಾಕ್ಟ್ನಲ್ಲಿರುವ ವಿಷಯಗಳನ್ನು ನೋಡಿ ವಿರೋಧಿಗಳು ನಮ್ಮ ಉದ್ದೇಶಗಳನ್ನು ತಪ್ಪಾರ್ಥ ಮಾಡಿಕೊಳ್ಳಬಹುದು. ಸಾಹಿತ್ಯವನ್ನು ತೆಗೆದುಕೊಳ್ಳುವಂತೆ ನಾವು ಯಾರನ್ನೂ ಒತ್ತಾಯಿಸುವುದಿಲ್ಲ. ಹೀಗಿರುವುದರಿಂದ ವ್ಯಕ್ತಿಯ ಮನೋಭಾವ ಹೇಗಿದೆ ಎಂಬುದನ್ನು ಯಾವಾಗಲೂ ಮೊದಲು ವಿವೇಚಿಸಿ ತಿಳಿದುಕೊಂಡು ಅವರಿಗೆ ಸತ್ಯವನ್ನು ತಿಳಿಯಲು ನಿಜವಾಗಿ ಮನಸ್ಸಿದ್ದರೆ ಮಾತ್ರ ಟ್ರ್ಯಾಕ್ಟನ್ನು ಕೊಡಿ.