ಪೂರ್ಣಸಮಯದ ಸೇವೆಯಲ್ಲಿರುವ ಆನಂದ
1 ಯುವಜನರೇ, ನಿಮ್ಮ ಮುಂದಿನ ಗುರಿಗಳೇನು? “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಸಿಗುತ್ತೆ ಅಂತ ಜ್ಞಾನೋಕ್ತಿ 21:5 ಹೇಳುತ್ತೆ. ಹಾಗಾದರೆ ನಿಮ್ಮ ಗುರಿಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ನಿಮಗೆ ಸಮೃದ್ಧಿ ತರುತ್ತೆ. ನೀವು ಆಯ್ಕೆ ಮಾಡಬಲ್ಲ ಒಂದು ಅತ್ಯುತ್ತಮ ಸೇವೆ ಪೂರ್ಣಸಮಯದ ಸೇವೆ ಅಂತ ಹೇಳಬಹುದು. ಯಾಕೆ ಅಂತೀರಾ? ನೋಡೋಣ ಬನ್ನಿ.
2 ತಮ್ಮ ಯುವ ಪ್ರಾಯದಲ್ಲಿ ಪಯನೀಯರ್ ಸೇವೆ ಮಾಡಿದ ಪ್ರೌಢ ಸಹೋದರ ಸಹೋದರಿಯರನ್ನು ಕೇಳಿ ನೋಡಿ. “ಜೀವನದಲ್ಲಿ ಅಷ್ಟು ಖುಷಿಯಾಗಿ ಕಳೆದಿದ್ದು ಅಂದರೆ ಆ ವರ್ಷಗಳೇ” ಅಂತ ಅವರು ಖಂಡಿತ ಹೇಳ್ತಾರೆ. ತಮ್ಮ ಯೌವನ ಪ್ರಾಯದಿಂದ ಪೂರ್ಣಸಮಯದ ಸೇವೆಯಲ್ಲಿ ಆನಂದಿಸಿದ ಒಬ್ಬ ಸಹೋದರ ನಂತರದ ವರ್ಷಗಳಲ್ಲಿ ಹೇಳಿದ್ದು ಹೀಗೆ: “ಒಂದು ಸಾರಿ ಹಿಂದೆ ತಿರುಗಿ ನನ್ನ ಯೌವನವನ್ನು ನೋಡಿದರೆ ಒಂದು ರೀತಿ ಖುಷಿ, ನೆಮ್ಮದಿ ಆಗುತ್ತೆ, ಯಾಕೆಂದರೆ ‘ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು’ ಅನ್ನೋ ಒಂದು ಒಳ್ಳೇ ಸಲಹೆನಾ ಪಾಲಿಸಿದಿನಲ್ಲ ಅದಕ್ಕೆ.” (ಪ್ರಸಂ. 12:1) ನೋಡಿದ್ರಾ ಹಾಗಾದರೆ ನಿಮಗೆ ಸಹ ನಿಮ್ಮ ಯುವ ಪ್ರಾಯದಲ್ಲೇ ಇಂತಹ ಆನಂದ ಸಿಗಬೇಕಾದರೆ ಪೂರ್ಣಸಮಯದ ಸೇವೆಯನ್ನು ಆಯ್ದುಕೊಳ್ಳಬೇಕು. ಅದಕ್ಕಾಗಿ ನೀವು, ನಿಮ್ಮ ಹೆತ್ತವರು ಈಗಲೇ ಒಳ್ಳೆ ಯೋಜನೆ ಮಾಡಬೇಕು.
3 ಹೆತ್ತವರೇ, ಪೂರ್ಣಸಮಯದ ಸೇವೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ: ಯೆಹೋವ ದೇವರು ಒಬ್ಬ ಕಾಳಜಿ ಇರುವ ತಂದೆಯಂತೆ ನೀವು ಹೋಗಬೇಕಾದ ಸರಿಯಾದ ದಾರಿಯನ್ನು ತೋರಿಸುತ್ತಾನೆ. (ಯೆಶಾ. 30:21) ಹೀಗೆ ಆತನು ತನ್ನ ಪ್ರೀತಿಪೂರ್ವಕ ಮಾರ್ಗದರ್ಶನೆಯಿಂದ ಹೆತ್ತವರಿಗೆ ಒಂದು ಉತ್ತಮ ಮಾದರಿ ಇಟ್ಟಿದ್ದಾನೆ. ‘ಅವರ ದಾರಿ ಅವರೇ ನೋಡಿಕೊಳ್ಳಲಿ, ಅವರ ಕಾಲ ಮೇಲೆ ಅವರೇ ನಿಂತುಕೊಳ್ಳಿ ಅಂತ’ ನಿಮ್ಮ ಮಕ್ಕಳ ಕೈ ಬಿಡಬೇಡಿ. ಅವರು ಯಾವ ದಾರಿಯಲ್ಲಿ ಹೋದರೆ ಯೆಹೋವನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೋ ಅಂತ ದಾರಿಗೆ ಮಾರ್ಗದರ್ಶಿಸಿ, ಸರಿಯಾದ ತರಬೇತು ಕೊಡಿ. ಆಗ ಅವರು ದೊಡ್ಡವರಾದಾಗ “ಸರಿ ಮತ್ತು ತಪ್ಪಿನ ಭೇದವನ್ನು” ತಿಳಿಯಲು ಸಾಧ್ಯವಾಗುತ್ತೆ. (ಇಬ್ರಿ. 5:14) ಸ್ವಂತ ಬುದ್ಧಿಯನ್ನು ಮಾತ್ರ ಅವಲಂಬಿಸಿದರೆ ಸಾಕಾಗದು, ಯೆಹೋವನ ಮಾರ್ಗದರ್ಶನ ಬೇಕೇಬೇಕು ಎಂದು ದೊಡ್ಡವರು ಅನುಭವದಿಂದ ಕಲಿತಿರುತ್ತಾರೆ. (ಜ್ಞಾನೋ. 3:5, 6) ಯುವಜನತೆಗಂತೂ ಯೆಹೋವನ ಮಾರ್ಗದರ್ಶನೆ ಇನ್ನೂ ಹೆಚ್ಚು ಅಗತ್ಯವಿದೆ.
4 ನಿಮ್ಮ ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮುಂಚೆನೇ ಅವರೊಂದಿಗೆ ಅವರ ಗುರಿಗಳ ಬಗ್ಗೆ ಮಾತಾಡಿ. ನೀವು ಮಾತಾಡದಿದ್ದರೆ ಅವರ ಶಾಲಾ ಸಲಹೆಗಾರರು, ಸ್ನೇಹಿತರು, ಶಿಕ್ಷಕರು ಅವರೊಂದಿಗೆ ಮಾತಾಡಿ ಲೌಕಿಕ ಅಂದರೆ ಹೆಚ್ಚು ಹಣ ಹೆಸರು ಸಂಪಾದಿಸುವ ಗುರಿಗಳನ್ನು ಅವರ ಮನಸ್ಸಲ್ಲಿ ಹಾಕಿಬಿಡುತ್ತಾರೆ. ಕರಕುಶಲ ತರಬೇತಿ ನೀಡುವ ಕೋರ್ಸ್ಗಳನ್ನು ತೆಗೆದುಕೊಳ್ಳುವಂತೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ. ಆಧ್ಯಾತ್ಮಿಕ ವಿಷಯಗಳನ್ನು ತ್ಯಾಗ ಮಾಡದೆ ತಮ್ಮ ಶಾರೀರಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ಮಕ್ಕಳಿಗೆ ಕಲಿಸಿ. (1 ತಿಮೊ. 6:6-11) ಪ್ರೌಢ ಶಾಲಾ ಶಿಕ್ಷಣ ಮುಗಿದ ಮೇಲೆ ಯಾವುದಾದರೂ ಒಂದು ಪ್ರಾಯೋಗಿಕ ತರಬೇತಿ ನೀಡುವ ಒಂದು ಕೋರ್ಸ್ ಮಾಡಿಕೊಂಡರೆ ಸಾಕು ರೆಗ್ಯುಲರ್ ಪಯನೀಯರ್ ಸೇವೆ ಮಾಡುತ್ತಾ ಜೀವನ ಸಾಗಿಸಬಹುದು.
5 ಅವಿವಾಹಿತ ಸ್ಥಿತಿ ಎಂಬ ವರವನ್ನು ಒಳ್ಳೆ ವಿಧದಲ್ಲಿ ಉಪಯೋಗಿಸುವಂತೆ ಯುವಜನರನ್ನು ಪ್ರೋತ್ಸಾಹಿಸಿ. ಮುಂದೆ ಅವರು ಮದುವೆ ಆದಾಗಲೂ ಜವಾಬ್ದಾರಿಗಳನ್ನು ನಿಭಾಯಿಸಲು ಅವರಿಂದ ಸಾಧ್ಯವಾಗುತ್ತೆ. (2003ರ ಸೆಪ್ಟೆಂಬರ್ ನಮ್ಮ ರಾಜ್ಯ ಸೇವೆಯ “ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?” ಎಂಬ ಪುರವಣಿಯ ಪ್ಯಾರ 19ನ್ನು ನೋಡಿ) ಯುವಜನರ ಹತ್ತಿರ ಪಯನೀಯರಿಂಗ್ ಬಗ್ಗೆ, ಅಗತ್ಯವಿರುವಲ್ಲಿ ಸಾರುವುದರ ಬಗ್ಗೆ ಮತ್ತು ಬೆತೆಲ್ನಲ್ಲಿ ಸೇವೆ ಸಲ್ಲಿಸುವುದರ ಬಗ್ಗೆ ಸಕಾರಾತ್ಮಕವಾಗಿ ಮಾತಾಡಿ. ಹೀಗೆ ಯೆಹೋವನು ಮೆಚ್ಚುವಂಥ, ಇತರರಿಗೆ ಪ್ರಯೋಜನ ಆಗುವಂಥ ಅಷ್ಟೇ ಯಾಕೆ ತಮಗೇ ಖುಷಿ ನೆಮ್ಮದಿ ತರುವಂಥ ಗುರಿಗಳನ್ನಿಡುವ ಆಸೆಯನ್ನು ಚಿಕ್ಕಪ್ರಾಯದಲ್ಲೇ ಮಕ್ಕಳ ಮನಸ್ಸಿನಲ್ಲಿ ಬೆಳೆಸಿ.
6 ಯುವಜನರೇ, ಪೂರ್ಣಸಮಯದ ಸೇವೆಗೆ ಆದ್ಯತೆ ಕೊಡಿ: ಪಯನೀಯರ್ ಸೇವೆ ಅಂದರೆ ಹೇಗಿರುತ್ತೋ ಏನೋ ಎಂಬ ಅಳುಕೇ ನಿಮಗೆ? ಹಾಗಾದರೆ ಶಾಲಾ ವರ್ಷದ ಸಮಯದಲ್ಲೊ ಶಾಲಾ ರಜಾದಿನಗಳಲ್ಲೊ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿನೋಡಿ. ಆಗ ನಿಮಗೆ ಪಯನೀಯರ್ ಸೇವೆಯಲ್ಲಿ ಇರೋ ಖುಷಿ ಗೊತ್ತಾಗುತ್ತೆ!
7 ನೀವು ಒಬ್ಬ ಯುವ ಸಹೋದರನಾಗಿರುವಲ್ಲಿ, ಶುಶ್ರೂಷಾ ಸೇವಕನಾಗುವ ಗುರಿಯ ಬಗ್ಗೆ ಸಹ ಯೋಚಿಸಿ. (1 ತಿಮೊ. 3:8-10, 12) ಅದರ ಜೊತೆಗೆ ಅರ್ಹ ವಯಸ್ಸಿಗೆ ಬಂದಾಗ ನೀವು ಬೆತೆಲ್ ಸೇವೆ ಮಾಡಬೇಕೆಂದಿದ್ದೀರಾ ಅಥವಾ ಅವಿವಾಹಿತ ಸಹೋದರರಿಗಾಗಿ ಇರುವ ಬೈಬಲ್ಶಾಲೆಯನ್ನು ಹಾಜರಾಗಬೇಕೆಂದಿದ್ದೀರಾ ಎನ್ನುವುದನ್ನು ನಿರ್ಧರಿಸಿ. ಪಯನೀಯರ್ ಸೇವೆಯಲ್ಲಿ ನೀವು ಪಡೆಯುವ ಅನುಭವ ನಿಮಗೆ ಅನೇಕ ಉತ್ತಮ ಪಾಠವನ್ನು ಕಲಿಸುತ್ತೆ. ಉದಾಹರಣೆಗೆ, ಕಾರ್ಯತಖ್ತೆಯನ್ನು ಹೇಗೆ ಚಾಚೂತಪ್ಪದೆ ಅನುಸರಿಸುವುದು, ವೈಯಕ್ತಿಕ ವಿಷಯಗಳನ್ನು ಹೇಗೆ ಸಂಘಟಿಸಬೇಕು, ಇತರರೊಟ್ಟಿಗೆ ಹೇಗೆ ಇರಬೇಕು, ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಅಂತ ಪಯನೀಯರ್ ಸೇವೆ ನಿಮಗೆ ಕಲಿಸಿಕೊಡುತ್ತೆ. ಇದೆಲ್ಲ ಇನ್ನೂ ಹೆಚ್ಚಿನ ಸುಯೋಗಗಳನ್ನು ಪಡೆಯಲು ನಿಮಗೆ ನೆರವಾಗುತ್ತೆ.
8 ಶ್ರಮಪಟ್ಟು ಕೆಲಸ ಮಾಡುವ ಮನಸ್ಸು ನಮ್ಮಲ್ಲಿದ್ದರೆ ಪೂರ್ಣಸಮಯದ ಸೇವೆಯಲ್ಲಿ ಸಾಫಲ್ಯ ಖಂಡಿತ. ಅಪೊಸ್ತಲ ಪೌಲನು ಸಹ ಈ ಮನಸ್ಸನ್ನು ಬೆಳೆಸಿಕೊಳ್ಳುವಂತೆ ಹುರಿದುಂಬಿಸಿದನು ಮತ್ತು ಅದರಿಂದ ಸಿಗುವ ಆಶೀರ್ವಾದಗಳನ್ನು ತಿಳಿಸಿದನು. ‘ನೀವು ಏನೇ ಮಾಡಿದರೂ ಅದನ್ನು ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡಿ. ಏಕೆಂದರೆ ನೀವು ತಕ್ಕ ಫಲವನ್ನು ಯೆಹೋವನಿಂದಲೇ ಪಡೆದುಕೊಳ್ಳುವಿರಿ ಎಂಬುದು ನಿಮಗೆ ತಿಳಿದಿದೆ.’ (ಕೊಲೊ. 3:23, 24) ಪೂರ್ಣಸಮಯದ ಸೇವೆಯಲ್ಲಿ ಆನಂದಿಸುವಂತೆ ಯೆಹೋವನು ನಿಮ್ಮನ್ನು ಹರಸಲಿ!