ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸುವುದು ಹೇಗೆ?
1. ಒಳ್ಳೇ ಪೀಠಿಕೆ ಎಷ್ಟು ಪ್ರಾಮುಖ್ಯ?
1 ಒಳ್ಳೇ ಪೀಠಿಕೆಯು ಸಕಾರಾತ್ಮಕ ಬೈಬಲ್ ಚರ್ಚೆಗೆ ದಾರಿಮಾಡಿಕೊಡುತ್ತದೆ. ಪರಿಣಾಮಕಾರಿ ಪೀಠಿಕೆಗಳು ಉದ್ದವಾಗಿರಬಹುದು, ಚುಟುಕಾಗಿರಬಹುದು, ವಿಷಯವೂ ಭಿನ್ನ ಭಿನ್ನವಾಗಿರಬಹುದು. ಆದರೆ ರುಚಿಕರ ಆಹಾರಕ್ಕೆ ಹೇಗೊ ಹಾಗೆಯೇ ಪೀಠಿಕೆಗೂ ಯಾವಾಗಲೂ ಪೂರ್ವಾಲೋಚನೆ ಮತ್ತು ತಯಾರಿ ಅಗತ್ಯ. (ಜ್ಞಾನೋ. 15:28) ಪೀಠಿಕೆಯನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ?
2. ಆಸಕ್ತಿಕರ ಪೀಠಿಕೆಯೊಂದನ್ನು ಹೇಗೆ ತಯಾರಿಸಬಹುದು?
2 ಆಸಕ್ತಿಕರ ವಿಷಯಗಳನ್ನು ಆರಿಸಿ: ನಮ್ಮ ಪೀಠಿಕೆ ಆಸಕ್ತಿ ಕೆರಳಿಸುವಂಥದ್ದಾಗಿರಬೇಕು. ಇಲ್ಲದಿದ್ದಲ್ಲಿ ಮನೆಯವರು ಸಂಭಾಷಣೆಯನ್ನು ಕೂಡಲೇ ಕೊನೆಗೊಳಿಸುವರು. ಆದ್ದರಿಂದ ತಯಾರಿ ಮಾಡುವಾಗ ಸ್ಥಳೀಯ ಜನರಿಗೆ ಯಾವ ವಿಷಯಗಳ ಬಗ್ಗೆ ಆಸಕ್ತಿಯಿದೆಯೆಂದು ಯೋಚಿಸಿ. ಒಳ್ಳೇ ಸರಕಾರ, ಸುಖೀ ಕುಟುಂಬ ಜೀವನ, ಯುದ್ಧಗಳಿಗೆ ಅಂತ್ಯ, ಇವುಗಳ ಬಗ್ಗೆ ಅವರಿಗೆ ಆಸಕ್ತಿ ಇದೆಯೇ? ಜನರಿಗೆ ಸಾಮಾನ್ಯವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸುವುದೆಂದರೆ ಇಷ್ಟ. ಹಾಗಾಗಿ ಅವರ ಯೋಚನೆಯನ್ನು ಪ್ರೇರಿಸುವಂಥ ದೃಷ್ಟಿಕೋನ ಪ್ರಶ್ನೆಯೊಂದನ್ನು ತಯಾರಿಸಿ. ನಮ್ಮ ರಾಜ್ಯ ಸೇವೆಯಲ್ಲಿನ ಮಾದರಿ ನಿರೂಪಣೆಗಳಲ್ಲಿ ಒಂದನ್ನು ಆರಿಸಿ ನಿಮ್ಮ ಸೇವಾಕ್ಷೇತ್ರಕ್ಕೆ ಬೇಕಾದಂತೆ ಹೊಂದಿಸಿಕೊಳ್ಳಬಹುದಲ್ಲವೇ? ಆಗಾಗ್ಗೆ ಕುಟುಂಬ ಆರಾಧನೆಯಲ್ಲಿ ನೀವು ಕೆಲವೊಂದು ಪೀಠಿಕೆಗಳನ್ನು ಪ್ರ್ಯಾಕ್ಟಿಸ್ ಮಾಡಲೂಬಹುದು.
3. ನಮ್ಮ ಕ್ಷೇತ್ರದವರ ಸಂಸ್ಕೃತಿ, ಹಿನ್ನೆಲೆಗೆ ತಕ್ಕಂತೆ ಪೀಠಿಕೆಯನ್ನು ಹೇಗೆ ಹೊಂದಿಸಿಕೊಳ್ಳಬಲ್ಲೆವು?
3 ಸಂಸ್ಕೃತಿ, ಹಿನ್ನೆಲೆ ಮನಸ್ಸಲ್ಲಿಡಿ: ಕೆಲವು ಸ್ಥಳಗಳಲ್ಲಿ ನಾವೇಕೆ ಬಂದಿದ್ದೇವೆಂದು ತಕ್ಷಣ ತಿಳಿಸುವಂತೆ ಮನೆಯವರು ನಿರೀಕ್ಷಿಸುತ್ತಾರೆ. ಇನ್ನಿತರ ಸ್ಥಳಗಳಲ್ಲಿ ಮನೆಗೆ ಬಂದವರು ಮೊದಲು ಮನೆಯವರ ಯೋಗಕ್ಷೇಮ ವಿಚಾರಿಸಿ, ನಂತರ ತಮ್ಮ ಬಗ್ಗೆಯೂ ಸ್ವಲ್ಪ ಮಾಹಿತಿ ಕೊಡುವುದು ಸೌಜನ್ಯವೆಂದು ಎಣಿಸಲಾಗುತ್ತದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಜನರ ಧಾರ್ಮಿಕ ಹಿನ್ನೆಲೆಯಿಂದಾಗಿ ನಮ್ಮ ಪೀಠಿಕೆಯಲ್ಲೇ ಬೈಬಲ್ಗೆ ಸೂಚಿಸಲು ಸಾಧ್ಯವಾಗುತ್ತದೆ. (ಅ.ಕಾ. 2:14-17) ಆದರೆ ಕ್ರೈಸ್ತರಲ್ಲದವರು ಇಲ್ಲವೆ ಧರ್ಮವನ್ನೇ ಪಾಲಿಸದವರು ಭೇಟಿಯಾದರೆ, ಮೊದಲ ಸಲವೇ ಬೈಬಲ್ ಬಗ್ಗೆ ಮಾತೆತ್ತುವುದರ ಬದಲು ಅದನ್ನು ಪುನರ್ಭೇಟಿಯಲ್ಲಿ ಮಾಡುವುದು ಉತ್ತಮ.—ಅ.ಕಾ. 17:22-31.
4. ನಮ್ಮ ಪೀಠಿಕೆಯ ಮೊದಲ ಮಾತುಗಳಿಗೆ ಯಾವ ರೀತಿಯ ಗಮನಕೊಡಬೇಕು?
4 ಮೊದಲ ಮಾತುಗಳು: ನೀವು ಹೇಳಲಿರುವ ಮೊದಲ ಮಾತುಗಳನ್ನು ಜಾಗ್ರತೆಯಿಂದ ತಯಾರಿಸಿ. ಸರಳ, ಚಿಕ್ಕ ವಾಕ್ಯಗಳೇ ಹೆಚ್ಚಾಗಿ ಅತ್ಯುತ್ತಮ. ಆ ಆರಂಭದ ಮಾತುಗಳನ್ನು ಹೇಳುವ ವಿಧವೂ ಅತೀ ಮುಖ್ಯ. ಹುರುಪಿನಿಂದ ಮಾತಾಡಿ. ಮನೆಯವರಲ್ಲಿ ನಿಮಗೆ ಆಸಕ್ತಿಯಿದೆಯೆಂದು ತೋರಿಸುವ ಮನಃಪೂರ್ವಕ, ಸ್ನೇಹಭರಿತ ನಸುನಗೆ ಮುಖದಲ್ಲಿರಲಿ. ಈ ಎಲ್ಲ ಸಲಹೆಗಳನ್ನು ಪಾಲಿಸಿದರೆ ಆಸಕ್ತಿ ಕೆರಳಿಸುವಂಥ ಪೀಠಿಕೆಗಳನ್ನು ತಯಾರಿಸಲು ನಮಗೆ ಸಹಾಯವಾಗುವುದು. ಇದು ನಮ್ಮ ಕ್ಷೇತ್ರದ ಜನರನ್ನು ‘ಯೆಹೋವನ ಮೇಜಿಗೆ’ ಬಂದು ಉಣ್ಣುವಂತೆ ಪ್ರೋತ್ಸಾಹಿಸುವುದು.—1 ಕೊರಿಂ. 10:21.