ಪತ್ರಿಕಾ ಮಾರ್ಗ—ಬೈಬಲ್ ಅಧ್ಯಯನ ಆರಂಭಿಸಲು ಸಹಾಯಕ
1. ತುಂಬ ಸಮಯದಿಂದ ಯೆಹೋವನ ಸಂಘಟನೆ ಪ್ರಚಾರಕರಿಗೆ ಪತ್ರಿಕಾ ಮಾರ್ಗವನ್ನು ಆರಂಭಿಸುವಂತೆ ಉತ್ತೇಜಿಸಿದೆ ಏಕೆ?
1 ಅನೇಕ ಜನರಿಗೆ ಬೈಬಲ್ ಅಧ್ಯಯನ ಮಾಡಲು ಇಷ್ಟವಿರದಿದ್ದರೂ ನಮ್ಮ ಪತ್ರಿಕೆಗಳನ್ನು ಓದಲು ತುಂಬ ಇಷ್ಟಪಡುತ್ತಾರೆ. ಆದ್ದರಿಂದ ತುಂಬ ಸಮಯದಿಂದ ಯೆಹೋವನ ಸಂಘಟನೆ ಪ್ರಚಾರಕರಿಗೆ ಪತ್ರಿಕಾ ಮಾರ್ಗವನ್ನು ಆರಂಭಿಸುವಂತೆ ಉತ್ತೇಜಿಸಿದೆ. ಜನರು ಪತ್ರಿಕೆಗಳನ್ನು ನಿಯಮಿತವಾಗಿ ಓದಿದಾಗ ಹೆಚ್ಚಿನವರಲ್ಲಿ ದೇವರ ವಾಕ್ಯಕ್ಕಾಗಿ ಹಂಬಲ ಬೆಳೆಯುತ್ತದೆ. (1 ಪೇತ್ರ 2:2) ಅವರು ಓದುತ್ತಿರುವ ವಿಷಯದಲ್ಲಿ ಯಾವುದೋ ಒಂದು ಅಂಶ ಅವರ ಮನಸ್ಸನ್ನು ತಟ್ಟಿ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳಬಹುದು.
2. ಪತ್ರಿಕಾ ಮಾರ್ಗದಲ್ಲಿರುವವರ ಆಸಕ್ತಿಯನ್ನು ಹೆಚ್ಚಿಸುವುದು ಹೇಗೆ?
2 ಸತ್ಯದ ಬೀಜಕ್ಕೆ ‘ನೀರುಹೊಯ್ಯಿರಿ’: ಪತ್ರಿಕೆಗಳನ್ನು ಮನೆಯವರಿಗೆ ಕೊಟ್ಟುಬರುವುದಷ್ಟೇ ಅಲ್ಲ ಅವರ ಜತೆ ಮಾತಾಡಿ ಒಂದೊಳ್ಳೆ ಸ್ನೇಹ-ಸಂಬಂಧ ಬೆಳೆಸಲು ಪ್ರಯತ್ನಿಸಿ. ಹೀಗೆ ಮಾಡುವಾಗ ಮನೆಯವರ ಪರಿಸ್ಥಿತಿಗಳು, ಅಭಿರುಚಿಗಳು, ನಂಬಿಕೆಗಳು ಏನೆಂದು ತಿಳಿಯಲು ಆಗುತ್ತದೆ. ಇದರಿಂದ ನೀವು ಜಾಣತನದಿಂದ ಅಥವಾ ಒಳನೋಟದಿಂದ ಅವರೊಂದಿಗೆ ಮಾತಾಡಲು ಸಹಾಯವಾಗುತ್ತದೆ. (ಜ್ಞಾನೋ. 16:23) ನಿಮ್ಮ ಪ್ರತಿ ಭೇಟಿಗೂ ತಯಾರಾಗಿ ಹೋಗಿ. ಸಾಧ್ಯವಾದಲ್ಲಿ ನೀವು ನೀಡಿರುವ ಪತ್ರಿಕೆಗಳಲ್ಲಿನ ಒಂದು ಆಸಕ್ತಿಕರ ವಿಷಯ ಮತ್ತು ಅದಕ್ಕೆ ಸಂಬಂಧಪಟ್ಟ ವಚನವನ್ನು ತೋರಿಸಿ ಅದರ ಬಗ್ಗೆ ಸ್ವಲ್ಪ ಮಾತಾಡಿ. ಹೀಗೆ ಮನೆಯವರ ಹೃದಯದಲ್ಲಿರುವ ಸತ್ಯದ ಬೀಜಕ್ಕೆ ನೀರುಹೊಯ್ಯಿರಿ. (1 ಕೊರಿಂ. 3:6) ಪ್ರತಿ ಸಲ ಭೇಟಿಯಾದಾಗ ಅಂದಿನ ದಿನಾಂಕ, ಕೊಟ್ಟ ಸಾಹಿತ್ಯ, ಚರ್ಚಿಸಿದ ವಿಷಯಗಳನ್ನು ಮತ್ತು ವಚನಗಳನ್ನು ಬರೆದಿಡಿ.
3. ನಿಮ್ಮ ಪತ್ರಿಕಾ ಮಾರ್ಗದಲ್ಲಿರುವವರನ್ನು ಎಷ್ಟು ಬಾರಿ ಭೇಟಿ ಮಾಡಬೇಕು?
3 ಎಷ್ಟು ಬಾರಿ ಭೇಟಿಮಾಡಬೇಕು? ನಿಮಗೆ ಹೊಸ ಪತ್ರಿಕೆಗಳು ಸಿಕ್ಕಿದ ಕೂಡಲೆ ಪತ್ರಿಕಾ ಮಾರ್ಗದಲ್ಲಿರುವವರಿಗೆ ಕೊಡಬೇಕು. ಆದರೆ ನಿಮ್ಮ ಪರಿಸ್ಥಿತಿ ಮತ್ತು ಮನೆಯವರ ಆಸಕ್ತಿಯನ್ನು ಗಮನದಲ್ಲಿಟ್ಟು ನೀವು ಮಧ್ಯೆಮಧ್ಯೆಯೂ ಅವರನ್ನು ಭೇಟಿಮಾಡಬಹುದು. ಉದಾಹರಣೆಗೆ ಪತ್ರಿಕೆಗಳನ್ನು ಕೊಟ್ಟು ಒಂದು ಅಥವಾ ಎರಡು ವಾರಗಳಾದ ಮೇಲೆ ಅವರನ್ನು ಭೇಟಿ ಮಾಡಿ ಹೀಗನ್ನಬಹುದು: “ನಾನು ನಿಮಗೆ ಕೊಟ್ಟ ಪತ್ರಿಕೆಯಲ್ಲಿ ಒಂದೊಳ್ಳೆ ಅಂಶ ಇದೆ. ಅದನ್ನು ಹೇಳಿ ಹೋಗೋಣ ಅಂತ ಬಂದೆ.” ಹೀಗೆ ಮಾಡುವಾಗ ಮನೆಯವನಿಗೆ ಆ ಲೇಖನವನ್ನು ಓದುವ ಆಸೆ ಹೆಚ್ಚಾಗಬಹುದು. ಈಗಾಗಲೇ ಅವನದನ್ನು ಓದಿದ್ದರೆ ಆ ಲೇಖನದ ಬಗ್ಗೆ ಅವನ ಅಭಿಪ್ರಾಯವನ್ನು ತಿಳಿದು ಚಿಕ್ಕದಾಗಿ ಚರ್ಚೆ ನಡೆಸಬಹುದು. ಅಥವಾ ಮನೆಯವನು ನಿಮ್ಮ ಸಾಹಿತ್ಯವನ್ನು ಓದಲು ತುಂಬ ಇಷ್ಟಪಡುವುದಾದರೆ ಆ ತಿಂಗಳ ನೀಡುವಿಕೆಯಾದ ಕರಪತ್ರ, ಕಿರುಹೊತ್ತಗೆ ಅಥವಾ ಪುಸ್ತಕವನ್ನು ಕೊಡಲೆಂದು ಅವರನ್ನು ಭೇಟಿಮಾಡಬಹುದು.
4. ನಿಮ್ಮ ಪತ್ರಿಕಾ ಮಾರ್ಗದಲ್ಲಿರುವವರ ಜತೆ ಬೈಬಲ್ ಅಧ್ಯಯನ ನಡೆಸಬಹುದಾ ಎಂದು ತಿಳಿದುಕೊಳ್ಳಲು ಆಗಾಗ್ಗೆ ಏನು ಮಾಡಬಹುದು?
4 ಮನೆಯವರೇ ತಮಗೆ ಬೈಬಲ್ ಅಧ್ಯಯನ ಬೇಕೆಂದು ಕೇಳುವ ತನಕ ಕಾಯಬೇಡಿ. ನೀವೇ ಮೊದಲ ಹೆಜ್ಜೆ ತೆಗೆದುಕೊಳ್ಳಿ. ಅವರು ಹಿಂದೆ ಬೈಬಲ್ ಅಧ್ಯಯನ ಬೇಡ ಎಂದು ಹೇಳಿದ್ದರೂ ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ “ಬೈಬಲ್ ಕೊಡುವ ಉತ್ತರ” ಲೇಖನಗಳನ್ನು ಆಗಾಗ್ಗೆ ತೋರಿಸಿ ಮಾತಾಡುತ್ತಾ ಅದನ್ನು ಚರ್ಚಿಸಲು ಮನಸ್ಸಿದೆಯಾ ಎಂದು ನೋಡಿ. ಮನೆ ಬಾಗಿಲಲ್ಲಿ ನಿಂತೇ ಮಾಡುವ ಅಧ್ಯಯನವನ್ನು ಶುರುಮಾಡಬಹುದು. ಬೈಬಲ್ ಅಧ್ಯಯನ ಆರಂಭಿಸಲು ಸಾಧ್ಯವಾಗದಿದ್ದರೂ ಮನೆಯವರ ಆಸಕ್ತಿಗೆ ನೀರೆರೆಯಲು ಪತ್ರಿಕೆಗಳನ್ನು ಕೊಡುತ್ತಾ ಇರ್ರಿ.