ನಮ್ಮನ್ನು ಸೇವೆಗೆ ಸಿದ್ಧಗೊಳಿಸುವ ಕ್ಷೇತ್ರ ಸೇವಾ ಕೂಟ
1. ಕ್ಷೇತ್ರ ಸೇವಾ ಕೂಟಗಳ ಉದ್ದೇಶವೇನು?
1 ಒಮ್ಮೆ ಯೇಸು 70 ಮಂದಿ ಶಿಷ್ಯರನ್ನು ಸುವಾರ್ತೆ ಸಾರಲು ಕಳುಹಿಸುವ ಮುಂಚೆ ಒಂದು ಕೂಟವನ್ನು ನಡೆಸಿದನು. (ಲೂಕ 10:1-11) ಆ ಕೂಟದಲ್ಲಿ, ಸುವಾರ್ತೆ ಸಾರಲು ತನ್ನ ಶಿಷ್ಯರು ಹೆದರಬೇಕಾಗಿಲ್ಲ, ‘ಕೊಯ್ಲಿನ ಯಜಮಾನನಾದ’ ಯೆಹೋವನು ಅವರೊಂದಿಗೆ ಇದ್ದಾನೆ ಎಂದು ಉತ್ತೇಜನ ಕೊಟ್ಟನು. ಅವರು ಸೇವೆಗೆ ಹೋದಾಗ ಏನು ಮಾಡಬೇಕು, ಏನು ಮಾಡಬಾರದು ಅಂತ ಸಲಹೆ ಕೊಟ್ಟು ಅವರನ್ನು ಸಿದ್ಧಗೊಳಿಸಿದನು. ನಂತರ ಸುವಾರ್ತೆ ಸಾರಲು “ಇಬ್ಬಿಬ್ಬರನ್ನಾಗಿ” ಸಂಘಟಿಸಿ ಕಳುಹಿಸಿದನು. ಇಂದು ನಡೆಯುವ ಕ್ಷೇತ್ರ ಸೇವಾ ಕೂಟಗಳು ಸಹ ನಮ್ಮನ್ನು ಉತ್ತೇಜಿಸಿ, ಸಿದ್ಧಗೊಳಿಸಿ, ಸಂಘಟಿಸುತ್ತವೆ.
2. ಏಪ್ರಿಲ್ನಿಂದ ಕ್ಷೇತ್ರ ಸೇವಾ ಕೂಟ ಎಷ್ಟು ನಿಮಿಷಗಳೊಳಗೆ ಮುಗಿಯಬೇಕು?
2 ಇಲ್ಲಿಯವರೆಗೂ, ಕ್ಷೇತ್ರ ಸೇವಾ ಕೂಟ 10ರಿಂದ 15 ನಿಮಿಷಗಳು ನಡೆಯುತ್ತಿತ್ತು. ಅದರಲ್ಲಿ ಇಬ್ಬಿಬ್ಬರನ್ನು ನೇಮಿಸಿ ಕಳುಹಿಸುವುದು, ಸೇವಾಕ್ಷೇತ್ರವನ್ನು ಕೊಡುವುದು, ಪ್ರಾರ್ಥನೆ ಮಾಡುವುದೆಲ್ಲ ಸೇರಿತ್ತು. ಆದರೆ ಇನ್ನು ಮುಂದಕ್ಕೆ ಈ ಸಮಯವನ್ನು ಇನ್ನಷ್ಟು ಕಡಿಮೆ ಮಾಡಲಾಗಿದೆ. ಏಪ್ರಿಲ್ನಿಂದ, ಕ್ಷೇತ್ರ ಸೇವಾ ಕೂಟ 5ರಿಂದ 7 ನಿಮಿಷಗಳೊಳಗೆ ಮುಗಿಯಬೇಕು. ಒಂದುವೇಳೆ, ಕ್ಷೇತ್ರ ಸೇವಾ ಕೂಟ ನಡೆಯುವ ಸ್ಥಳದಲ್ಲಿ ಇನ್ನೊಂದು ಸಭೆಯ ಕೂಟವು ಪ್ರಾರಂಭವಾಗಲಿದ್ದರೆ, ಕ್ಷೇತ್ರ ಸೇವಾ ಕೂಟವನ್ನು ಇನ್ನೂ ಬೇಗ ಮುಗಿಸಬೇಕು. ಹೇಗೂ ಬೇರೆ ಕೂಟಗಳಿಂದ ನೀವು ಪ್ರಯೋಜನ ಪಡೆದಿರುತ್ತೀರಿ. ಕ್ಷೇತ್ರ ಸೇವಾ ಕೂಟದ ಸಮಯ ಕಡಿಮೆ ಆಗುವುದರಿಂದ, ಸೇವೆಯಲ್ಲಿ ಹೆಚ್ಚು ಸಮಯ ಕಳೆಯಬಹುದು. ಜೊತೆಗೆ, ಈ ಕೂಟ ನಡೆಯುವ ಮುಂಚೆಯೇ ಯಾರಾದರೂ ಸೇವೆಗೆ ಹೋಗಿದ್ದರೆ, ಈ ಚಿಕ್ಕ ಕೂಟವನ್ನು ಹಾಜರಾಗಿ ಮತ್ತೆ ಸೇವೆಗೆ ಹೋಗಲು ಅವರಿಗೇನು ಕಷ್ಟವಾಗುವುದಿಲ್ಲ.
3. ಪ್ರಚಾರಕರಿಗೆ ಸಹಾಯವಾಗುವ ರೀತಿಯಲ್ಲಿ ಕ್ಷೇತ್ರ ಸೇವಾ ಕೂಟವನ್ನು ನಡೆಸಲು ಏನು ಮಾಡಬಹುದು?
3 ಕ್ಷೇತ್ರ ಸೇವಾ ಕೂಟ ಪ್ರಚಾರಕರಿಗೆ ಸಹಾಯವಾಗುವಂತೆ ಇರಬೇಕು. ಕೆಲವು ಸಭೆಗಳಲ್ಲಿ, ಕ್ಷೇತ್ರ ಸೇವಾ ಕೂಟವನ್ನು ಇಡೀ ಸಭೆ ಒಟ್ಟಾಗಿ ಸೇರಿ ನಡೆಸದೆ ಚಿಕ್ಕ-ಚಿಕ್ಕ ಗುಂಪುಗಳಾಗಿ ನಡೆಸಿದರೆ ಸಾಕಷ್ಟು ಪ್ರಯೋಜನಗಳಿವೆ. ಹೀಗೆ ಗುಂಪು ಮಾಡುವುದರಿಂದ ಪ್ರಚಾರಕರು ಕೂಟ ನಡೆಯುವ ಸ್ಥಳಕ್ಕೆ ಅಥವಾ ಅವರಿಗೆ ಕೊಡುವ ಸೇವಾಕ್ಷೇತ್ರಕ್ಕೆ ಪ್ರಯಾಣಿಸುವ ದೂರ ಕಡಿಮೆಯಾಗಬಹುದು. ಜೊತೆಗೆ, ಪ್ರಚಾರಕರನ್ನು ಇಬ್ಬಿಬ್ಬರನ್ನಾಗಿ ನೇಮಿಸಿ ಬೇಗನೇ ಸೇವಾಕ್ಷೇತ್ರಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ. ಗುಂಪು ಮೇಲ್ವಿಚಾರಕನಿಗೆ ಗುಂಪಿನಲ್ಲಿರುವ ಪ್ರತಿಯೊಬ್ಬರ ಬಗ್ಗೆ ಹೆಚ್ಚು ಆಸಕ್ತಿ ವಹಿಸಲು ಸಾಧ್ಯವಾಗುತ್ತದೆ. ಆದರೆ, ಈ ಕೂಟವನ್ನು ಒಟ್ಟಾಗಿ ಸೇರಿ ಮಾಡುವುದಾ ಅಥವಾ ಚಿಕ್ಕ ಗುಂಪುಗಳಾಗಿ ಮಾಡುವುದಾ ಎನ್ನುವುದನ್ನು ಹಿರಿಯರ ಮಂಡಲಿಯು ತಮ್ಮ ಸಭೆಯ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುತ್ತದೆ. ಕೂಟದ ಕೊನೆಯಲ್ಲಿ ಮಾಡುವ ಪ್ರಾರ್ಥನೆಯ ಮುಂಚೆಯೇ ಯಾರು ಯಾರ ಜೊತೆ, ಎಲ್ಲಿ ಸೇವೆಗೆ ಹೋಗುತ್ತಾರೆ ಅನ್ನೋದು ಹಾಜರಾಗಿರುವ ಎಲ್ಲರಿಗೆ ಗೊತ್ತಿರಬೇಕು.
4. ಕ್ಷೇತ್ರ ಸೇವಾ ಕೂಟ ಇತರ ಕೂಟಗಳಷ್ಟೇ ಪ್ರಾಮುಖ್ಯವೇಕೆ?
4 ಕ್ಷೇತ್ರ ಸೇವಾ ಕೂಟವು ಸಭಾ ಕೂಟಗಳಷ್ಟೇ ಪ್ರಾಮುಖ್ಯ: ಸೇವೆಗೆ ಹೋಗುವವರಿಗೆ ಅಂತಾನೇ ಕ್ಷೇತ್ರ ಸೇವಾ ಕೂಟದ ಏರ್ಪಾಡು ಇರುವುದು. ಆದ್ದರಿಂದ, ಬೇರೆ ಕೂಟಗಳಿಗೆ ಹಾಜರಾದಷ್ಟು ಜನ ಈ ಕೂಟಕ್ಕೆ ಹಾಜರಾಗದೇ ಇರಬಹುದು. ಇದರರ್ಥ, ಕ್ಷೇತ್ರ ಸೇವಾ ಕೂಟ ಅಷ್ಟೇನು ಪ್ರಾಮುಖ್ಯವಲ್ಲ ಎಂದಲ್ಲ. ಏಕೆಂದರೆ, ಇತರ ಕೂಟಗಳಂತೆ ಈ ಕೂಟವನ್ನು ಏರ್ಪಾಡು ಮಾಡಿರುವುದೂ ಯೆಹೋವ ದೇವರೇ. ಈ ಕೂಟಗಳಲ್ಲಿ ಸಹ ಪ್ರೀತಿಸುವಂತೆ, ಒಳ್ಳೆಯ ಕೆಲಸಗಳನ್ನು ಮಾಡುವಂತೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಅವಕಾಶ ಸಿಗುತ್ತದೆ. (ಇಬ್ರಿ. 10:24, 25) ಈ ಕೂಟವನ್ನು ನಡೆಸುವ ಸಹೋದರನು ಒಳ್ಳೇ ತಯಾರಿ ಮಾಡಬೇಕು. ಅವನು ಕೂಟದಲ್ಲಿ ಮಾಡುವ ಚರ್ಚೆ ಯೆಹೋವ ದೇವರಿಗೆ ಘನತೆ ತಂದು, ಹಾಜರಾಗುವ ಎಲ್ಲರಿಗೆ ಪ್ರಯೋಜನ ತರುವಂತಿರಬೇಕು. ಹಾಗಾಗಿ, ಪ್ರತಿಯೊಬ್ಬ ಪ್ರಚಾರಕನು ಕ್ಷೇತ್ರ ಸೇವಾ ಕೂಟಕ್ಕೆ ತಪ್ಪದೆ ಹಾಜರಾಗಲು ಪ್ರಯತ್ನಿಸಬೇಕು.
5. (ಎ) ಕ್ಷೇತ್ರ ಸೇವಾ ಕೂಟಕ್ಕಾಗಿ ಸೇವಾ ಮೇಲ್ವಿಚಾರಕನು ಏನೇನು ಮಾಡಬೇಕು? (ಬಿ) ಕ್ಷೇತ್ರ ಸೇವಾ ಕೂಟವನ್ನು ಒಬ್ಬ ಸಹೋದರಿ ಹೇಗೆ ನಡೆಸಬೇಕು?—ಪುಟ 6ರಲ್ಲಿರುವ ಲೇಖನವನ್ನು ನೋಡಿ.
5 ಕೂಟ ನಡೆಸುವವರು ಮಾಡಬೇಕಾದ ತಯಾರಿ: ಯಾರಿಗಾದರೂ ಸಭಾ ಕೂಟದಲ್ಲಿ ನೇಮಕವಿರುವುದಾದರೆ ಚೆನ್ನಾಗಿ ತಯಾರಿ ಮಾಡಬೇಕೆಂದು ಸಾಕಷ್ಟು ಮುಂಚೆಯೇ ಅದನ್ನು ಅವರಿಗೆ ತಿಳಿಸಲಾಗುತ್ತದೆ. ಈ ವಿಷಯ ಕ್ಷೇತ್ರ ಸೇವಾ ಕೂಟ ನಡೆಸುವವರನ್ನು ನೇಮಿಸುವಾಗ ಸಹ ಅನ್ವಯವಾಗುತ್ತದೆ. ಚಿಕ್ಕ-ಚಿಕ್ಕ ಗುಂಪುಗಳಾಗಿ ಕೂಟವನ್ನು ಏರ್ಪಡಿಸಿದರೆ, ಗುಂಪು ಮೇಲ್ವಿಚಾರಕನೋ ಅಥವಾ ಅವನ ಸಹಾಯಕನೋ ಆ ಕೂಟವನ್ನು ನಡೆಸುತ್ತಾನೆ. ಆದರೆ ಇಡೀ ಸಭೆ ಒಟ್ಟಾಗಿ ಕೂಡಿ ಬಂದರೆ, ಆ ಕೂಟವನ್ನು ಯಾರು ನಡೆಸಬೇಕೆಂದು ಸೇವಾ ಮೇಲ್ವಿಚಾರಕನು ನಿರ್ಣಯಿಸುತ್ತಾನೆ. ಕೆಲವು ಸೇವಾ ಮೇಲ್ವಿಚಾರಕರು ಒಂದು ಶೆಡ್ಯೂಲನ್ನು ಮಾಡಿ ಅದನ್ನು ನೇಮಕವಿರುವ ಸಹೋದರರಿಗೆ ಕೊಡುತ್ತಾರೆ ಮತ್ತು ಮಾಹಿತಿ ಫಲಕದಲ್ಲೂ ಹಾಕುತ್ತಾರೆ. ಕೂಟ ನಡೆಸುವ ಸಹೋದರನು ಚೆನ್ನಾಗಿ ಬೋಧಿಸಿದರೆ ಮತ್ತು ವ್ಯವಸ್ಥಿತವಾಗಿ ನಡೆಸಿದರೆ ಮಾತ್ರ ಕೂಟದ ಗುಣಮಟ್ಟ ಚೆನ್ನಾಗಿರುತ್ತದೆ. ಆದ್ದರಿಂದ ಸೇವಾ ಮೇಲ್ವಿಚಾರಕನು ಚೆನ್ನಾಗಿ ಯೋಚನೆ ಮಾಡಿ ಅರ್ಹ ಸಹೋದರರನ್ನು ನೇಮಿಸಬೇಕು. ಹಿರಿಯರು, ಶುಶ್ರೂಷಾ ಸೇವಕರು ಮತ್ತು ದೀಕ್ಷಾಸ್ನಾನ ಪಡೆದುಕೊಂಡ ಸಹೋದರರು ಇಲ್ಲದೇ ಹೋದ ಸಮಯದಲ್ಲಿ ಈ ಕೂಟವನ್ನು ನಡೆಸಲು ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ಅರ್ಹ ಸಹೋದರಿಯನ್ನು ಸೇವಾ ಮೇಲ್ವಿಚಾರಕನು ನೇಮಿಸಬೇಕು.—“ಒಬ್ಬ ಸಹೋದರಿ ನಡೆಸಬೇಕಾದಲ್ಲಿ . . .” ಎಂಬ ಲೇಖನ ನೋಡಿ.
6. ಕ್ಷೇತ್ರ ಸೇವಾ ಕೂಟವನ್ನು ನಡೆಸುವವರು ಯಾಕೆ ಒಳ್ಳೆಯ ತಯಾರಿ ಮಾಡಿರಬೇಕು?
6 ಶುಶ್ರೂಷಾ ಶಾಲೆಯಲ್ಲೋ, ಸೇವಾ ಕೂಟದಲ್ಲೋ ನಮಗೆ ನೇಮಕಗಳು ಸಿಕ್ಕಿದರೆ ಒಳ್ಳೆಯ ತಯಾರಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ, ಕೊನೆಯ ಗಳಿಗೆಯಲ್ಲಿ ನಾವು ತಯಾರಿ ಮಾಡುವುದಿಲ್ಲ. ಅದೇ ರೀತಿಯಲ್ಲಿ ಕ್ಷೇತ್ರ ಸೇವಾ ಕೂಟ ನಡೆಸುವವರು ಸಹ ಸಾಕಷ್ಟು ಮುಂಚೆಯೇ ತಯಾರಿ ಮಾಡಬೇಕು. ಇನ್ನು ಮುಂದೆಯಂತೂ, ಕೂಟದ ಸಮಯ ಕಡಿಮೆಯಾಗುವುದರಿಂದ ಒಳ್ಳೆಯ ತಯಾರಿ ತುಂಬ ಪ್ರಾಮುಖ್ಯ. ಮುಂಚಿತವಾಗಿ ತಯಾರಿ ಮಾಡಿದರೆ ಮಾತ್ರ ಆ ಕೂಟ ಚೆನ್ನಾಗಿರುತ್ತದೆ ಮತ್ತು ಸರಿಯಾದ ಸಮಯಕ್ಕೆ ಮುಗಿಸಬಹುದು. ಒಳ್ಳೆಯ ತಯಾರಿಯಲ್ಲಿ, ಸೇವೆಗಾಗಿ ಸೇವಾಕ್ಷೇತ್ರವನ್ನು ಸಾಕಷ್ಟು ಮುಂಚೆಯೇ ಪಡೆದುಕೊಳ್ಳುವುದು ಸಹ ಸೇರಿದೆ.
7. ಕ್ಷೇತ್ರ ಸೇವಾ ಕೂಟವನ್ನು ನಡೆಸುವವರು ಕೂಟದಲ್ಲಿ ಯಾವ ವಿಷಯಗಳ ಬಗ್ಗೆ ಮಾತಾಡಬಹುದು?—ಪುಟ 6ರಲ್ಲಿರುವ ಚೌಕವನ್ನು ನೋಡಿ.
7 ಕೂಟದಲ್ಲಿ ಯಾವ ವಿಷಯಗಳ ಬಗ್ಗೆ ಮಾತಾಡಬಹುದು: ಬೇರೆ ಬೇರೆ ಸೇವಾಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಪರಿಸ್ಥಿತಿಗಳಿರುತ್ತವೆ. ಆದ್ದರಿಂದ ನಂಬಿಗಸ್ತ ಆಳು ಪ್ರತಿ ಕ್ಷೇತ್ರ ಸೇವಾ ಕೂಟಕ್ಕಾಗಿ ಹೊರಮೇರೆಯನ್ನು ಕೊಟ್ಟಿಲ್ಲ. ಆದರೆ ಕೂಟದಲ್ಲಿ ಏನೆಲ್ಲ ಮಾತಾಡಬಹುದು ಅಂತ ಸಲಹೆ ಕೊಟ್ಟಿದ್ದಾರೆ. ಅದನ್ನು ಪುಟ 6ರಲ್ಲಿರುವ “ಕ್ಷೇತ್ರ ಸೇವಾ ಕೂಟದಲ್ಲಿ . . .” ಎಂಬ ಚೌಕದಲ್ಲಿ ನೋಡಬಹುದು. ಸಾಮಾನ್ಯವಾಗಿ, ಈ ಕೂಟವನ್ನು ಚರ್ಚೆಯಾಗಿ ನಡೆಸಲಾಗುತ್ತದೆ. ಕೆಲವೊಮ್ಮೆ, ಚೆನ್ನಾಗಿ ತಯಾರಿ ಮಾಡಿರುವ ಒಂದು ಪ್ರಾತ್ಯಕ್ಷಿಕೆಯನ್ನೋ ಅಥವಾ jw.org ವೆಬ್ಸೈಟ್ನಲ್ಲಿರುವ ಸೇವೆಗೆ ಸೂಕ್ತವಾದ ವಿಡಿಯೋಗಳಲ್ಲಿ ಒಂದನ್ನೋ ತೋರಿಸಬಹುದು. ಕೂಟದಲ್ಲಿ ಆ ದಿನ ಯಾವ ವಿಷಯದ ಬಗ್ಗೆ ಚರ್ಚೆ ಮಾಡಿದರೆ ಪ್ರಚಾರಕರಿಗೆ ಉತ್ತೇಜನ ಸಿಗುತ್ತದೆ, ಅವರನ್ನು ಸೇವೆಗೆ ಸಿದ್ಧಗೊಳಿಸುತ್ತದೆ ಎನ್ನುವುದರ ಬಗ್ಗೆ ಕೂಟವನ್ನು ನಡೆಸುವ ಸಹೋದರನು ತಯಾರಿ ಮಾಡುವಾಗ ಚೆನ್ನಾಗಿ ಯೋಚಿಸಬೇಕು.
8. ಶನಿವಾರ ಮತ್ತು ಭಾನುವಾರಗಳಂದು ನಡೆಯುವ ಕ್ಷೇತ್ರ ಸೇವಾ ಕೂಟದಲ್ಲಿ ಯಾವ ವಿಷಯಗಳ ಬಗ್ಗೆ ಚರ್ಚೆ ಮಾಡಿದರೆ ತುಂಬ ಪ್ರಯೋಜನವಾಗುತ್ತದೆ?
8 ಸಾಮಾನ್ಯವಾಗಿ, ಶನಿವಾರಗಳಂದು ಅನೇಕ ಪ್ರಚಾರಕರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯನ್ನು ಕೊಡುತ್ತಾರೆ. ಶನಿವಾರಗಳಂದು ಸೇವೆಗೆ ಹೋಗುವವರಲ್ಲಿ ಅನೇಕರು ವಾರದ ಬೇರೆ ದಿನಗಳಲ್ಲಿ ಸೇವೆಗೆ ಹೋಗುವುದಿಲ್ಲ. ಹಾಗಾಗಿ, ಅವರು ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟಿಸ್ ಮಾಡಿದ ನಿರೂಪಣೆಯನ್ನು ಮರೆತುಬಿಟ್ಟಿರುತ್ತಾರೆ. ಆದ್ದರಿಂದ, ನಮ್ಮ ರಾಜ್ಯ ಸೇವೆಯ ಕೊನೆಯ ಪುಟದಲ್ಲಿರುವ ಒಂದು ಮಾದರಿ ನಿರೂಪಣೆಯನ್ನು ಕ್ಷೇತ್ರ ಸೇವಾ ಕೂಟದಲ್ಲಿ ಚರ್ಚಿಸಿದರೆ ಶನಿವಾರಗಳಂದು ಸೇವೆ ಮಾಡುವವರಿಗೆ ಪ್ರಯೋಜನವಾಗುತ್ತದೆ. ಟಿ.ವಿ. ಅಥವಾ ವಾರ್ತಾ ಪತ್ರಿಕೆಗಳಲ್ಲಿ ಬರುವ ಸುದ್ದಿಗಳು, ಸುತ್ತಮುತ್ತಲಿನ ಘಟನೆಗಳು ಅಥವಾ ರಜಾದಿನಗಳ ಬಗ್ಗೆ ಮಾತಾಡುತ್ತ ಹೇಗೆ ಜನರಿಗೆ ಪತ್ರಿಕೆಗಳನ್ನು ಕೊಡಬಹುದು ಎಂಬ ವಿಷಯದ ಬಗ್ಗೆಯೂ ಕೂಟದಲ್ಲಿ ಚರ್ಚೆ ಮಾಡಬಹುದು. ಪತ್ರಿಕೆಗಳನ್ನು ತೆಗೆದುಕೊಂಡರೆ ಪುನರ್ಭೇಟಿಗೆ ಹೇಗೆ ತಳಪಾಯ ಹಾಕಬಹುದೆಂಬ ವಿಷಯವನ್ನು ಸಹ ಚರ್ಚಿಸಬಹುದು. ಪ್ರಚಾರಕರು ಒಂದು ನಿರ್ದಿಷ್ಟ ಪತ್ರಿಕೆಯನ್ನು ಈಗಾಗಲೇ ಜನರಿಗೆ ಕೊಟ್ಟಿರುವುದಾದರೆ, ಅದನ್ನು ಹೇಗೆ ಕೊಟ್ಟರು ಅಥವಾ ಯಾವ ಅನುಭವ ಸಿಕ್ಕಿತು ಎಂದು ಹೇಳುವಂತೆ ಅವರನ್ನು ಕೇಳಬಹುದು. ಭಾನುವಾರದಂದು ನಡೆಯುವ ಕ್ಷೇತ್ರ ಸೇವಾ ಕೂಟಗಳಲ್ಲಿ ಆ ತಿಂಗಳ ಸಾಹಿತ್ಯವನ್ನು ಹೇಗೆ ಕೊಡಬಹುದೆಂದು ಚರ್ಚಿಸಬಹುದು. ಬೈಬಲ್ ಅಧ್ಯಯನಕ್ಕೆಂದು ಇರುವ ಸಾಹಿತ್ಯಗಳಾದ ಸಿಹಿಸುದ್ದಿ, ದೇವರ ಮಾತನ್ನು ಆಲಿಸಿ ಕಿರುಹೊತ್ತಗೆ ಮತ್ತು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಯಾವ ದಿನ ಬೇಕಾದರೂ ಕೊಡಬಹುದು. ಹಾಗಾಗಿ, ಇವುಗಳಲ್ಲಿ ಒಂದನ್ನು ಹೇಗೆ ಕೊಡಬಹುದು ಎನ್ನುವುದನ್ನು ಸಹ ಕೂಟದಲ್ಲಿ ಆಗಾಗ ಚರ್ಚೆ ಮಾಡಬಹುದು.
9. ಶನಿವಾರ ಮತ್ತು ಭಾನುವಾರದಂದು ವಿಶೇಷ ಅಭಿಯಾನದಲ್ಲಿ ಭಾಗವಹಿಸುವುದಾದರೆ ಯಾವ ವಿಷಯಗಳನ್ನು ಚರ್ಚಿಸಬಹುದು?
9 ಶನಿವಾರ ಮತ್ತು ಭಾನುವಾರದಂದು ವಿಶೇಷ ಅಭಿಯಾನದಲ್ಲಿ ಇಡೀ ಸಭೆಯು ಭಾಗವಹಿಸುವುದಾದರೆ, ಕ್ಷೇತ್ರ ಸೇವಾ ಕೂಟ ನಡೆಸುವವನು ಕೂಟದಲ್ಲಿ ಯಾವ ವಿಷಯಗಳನ್ನು ಚರ್ಚಿಸಬಹುದು? ಅಭಿಯಾನದಲ್ಲಿ ಕೊಡುವ ಕರಪತ್ರ ಅಥವಾ ಆಮಂತ್ರಣ ಪತ್ರದ ಜೊತೆಗೆ ಪತ್ರಿಕೆಗಳನ್ನು ಹೇಗೆ ಕೊಡಬಹುದು, ಕರಪತ್ರವನ್ನು ಕೊಡುವಾಗ ಮನೆಯವರು ಆಸಕ್ತಿ ತೋರಿಸಿದರೆ ಏನು ಮಾಡಬಹುದು ಅಥವಾ ಅಭಿಯಾನಗಳು ಎಷ್ಟು ಪ್ರಾಮುಖ್ಯವಾಗಿವೆ ಎಂದು ತಿಳಿಸುವ ಅನುಭವಗಳನ್ನು ಚರ್ಚಿಸಬಹುದು.
10, 11. ಪ್ರಚಾರಕರು ಯಾಕೆ ಒಳ್ಳೆಯ ತಯಾರಿ ಮಾಡಬೇಕು ಮತ್ತು ಕೂಟ ಪ್ರಾರಂಭವಾಗುವ ಸ್ವಲ್ಪ ಮುಂಚೆಯೇ ಬರಲು ಯೋಜನೆ ಮಾಡಬೇಕು?
10 ಪ್ರಚಾರಕರು ಮಾಡಬೇಕಾದ ತಯಾರಿ: ಕ್ಷೇತ್ರ ಸೇವಾ ಕೂಟಕ್ಕೆ ಬರುವ ಪ್ರಚಾರಕರಿಗೂ ಒಂದು ಜವಾಬ್ದಾರಿಯಿದೆ. ಅದೇನೆಂದರೆ ಸೇವೆಯಲ್ಲಿ ಹೇಗೆ ಮಾತಾಡಬಹುದೆಂದು ಮೊದಲೇ ತಯಾರಿ ಮಾಡಿರಬೇಕು. ಇದನ್ನು ಕುಟುಂಬ ಆರಾಧನೆಯಲ್ಲಿ ಮಾಡಬಹುದು. ಇದರಿಂದ, ತಯಾರಿಸಿದ ಅಂಶವನ್ನು ಜೊತೆ ಪ್ರಚಾರಕರಿಗೆ ತಿಳಿಸಲು ಸಾಧ್ಯವಾಗುತ್ತದೆ. ತಯಾರಿ ಮಾಡುವುದರಲ್ಲಿ, ಕೂಟಕ್ಕೆ ಬರುವ ಮುಂಚೆಯೇ ಸೇವೆಗಾಗಿ ಪತ್ರಿಕೆಗಳನ್ನು ಮತ್ತು ಸಾಹಿತ್ಯವನ್ನು ತೆಗೆದುಕೊಳ್ಳುವುದು ಸಹ ಸೇರಿದೆ. ಹೀಗೆ ಮಾಡಿದರೆ, ತಡಮಾಡದೆ ಸೇವೆಗೆ ಹೋಗಬಹುದು.
11 ಕ್ಷೇತ್ರ ಸೇವಾ ಕೂಟ ಪ್ರಾರಂಭವಾಗುವ ಸ್ವಲ್ಪ ಮುಂಚೆಯೇ ಬರಲು ಯೋಜನೆ ಮಾಡುವುದು ಸಹ ತುಂಬ ಪ್ರಾಮುಖ್ಯ. ಸಭಾ ಕೂಟಗಳಿಗೆ ಸರಿಯಾದ ಸಮಯಕ್ಕೆ ಬರಲು ನಾವು ಪ್ರಯತ್ನಿಸುತ್ತೇವೆ. ಅದೇ ರೀತಿ, ಕ್ಷೇತ್ರ ಸೇವಾ ಕೂಟಕ್ಕೂ ಸರಿಯಾದ ಸಮಯಕ್ಕೆ ಬರಬೇಕು. ಇಲ್ಲದಿದ್ದರೆ, ಕೂಟ ನಡೆಸುವ ಸಹೋದರನು ಮಾಡಿದ ಯೋಜನೆಗಳೆಲ್ಲ ತಲೆಕೆಳಗಾಗುತ್ತವೆ. ಅದು ಹೇಗೆ? ಅವನು ಯಾರು-ಯಾರ ಜೊತೆ ಸೇವೆ ಮಾಡಬೇಕೆಂದು ನೇಮಿಸುವಾಗ ಅನೇಕ ಅಂಶಗಳನ್ನು ಮನಸ್ಸಿನಲ್ಲಿಟ್ಟು ನೇಮಿಸಿರುತ್ತಾನೆ. ಪ್ರಚಾರಕರು ಕಡಿಮೆಯಿದ್ದರೆ ಅವರೆಲ್ಲರನ್ನು ಈಗಾಗಲೇ ಸ್ವಲ್ಪ ಸೇವೆ ಮಾಡಿದಂಥ ಸೇವಾಕ್ಷೇತ್ರಕ್ಕೆ ಕಳುಹಿಸಲು ಯೋಚಿಸಿರಬಹುದು. ಕೆಲವರು ಕೂಟಕ್ಕೆ ನಡೆದುಕೊಂಡು ಬಂದಿರುತ್ತಾರೆ. ಒಂದುವೇಳೆ ಸೇವಾಕ್ಷೇತ್ರ ದೂರವಿರುವುದಾದರೆ ಅವರನ್ನು ಯಾರ ಹತ್ತಿರ ವಾಹನವಿದೆಯೋ ಅಂಥವರ ಜೊತೆ ಸೇವೆಗೆ ಹೋಗುವಂತೆ ಹೇಳಿರಬಹುದು. ಹೆಚ್ಚಿನ ಅಪರಾಧ ನಡೆಯುವಂಥ ಸೇವಾಕ್ಷೇತ್ರಗಳಿಗೆ ಸಹೋದರಿಯರನ್ನು ನೇಮಿಸಿರುವುದಾದರೆ ಅವರ ಜೊತೆ ಸಹೋದರರನ್ನು ನೇಮಿಸಿರಬಹುದು ಅಥವಾ ಸಹೋದರರ ಒಂದು ಗುಂಪನ್ನು ಹತ್ತಿರದ ಸೇವಾಕ್ಷೇತ್ರಕ್ಕೆ ನೇಮಿಸಿರಬಹುದು. ಆರೋಗ್ಯದ ಸಮಸ್ಯೆಯಿರುವವರಿಗೆ ನಡೆಯಲು ಕಷ್ಟವಾಗದೇ ಇರುವಂಥ ರಸ್ತೆಗಳಿಗೆ ಅಥವಾ ಹೆಚ್ಚು ಮೆಟ್ಟಿಲುಗಳಿಲ್ಲದ ಮನೆಗಳಿಗೆ ಹೋಗಲು ನೇಮಿಸಿರಬಹುದು. ಹೊಸಬರನ್ನು ಅನುಭವ ಇರುವ ಪ್ರಚಾರಕರೊಂದಿಗೆ ನೇಮಿಸಿರಬಹುದು. ಹೀಗೆ ಅನೇಕ ಅಂಶಗಳನ್ನು ಮನಸ್ಸಿನಲ್ಲಿಟ್ಟು ಅವನು ಗುಂಪನ್ನು ನೇಮಿಸುವುದರಿಂದ, ನಾವು ಕೂಟಕ್ಕೆ ತಡವಾಗಿ ಹೋದರೆ ಮತ್ತೆ ಬದಲಾವಣೆ ಮಾಡಬೇಕಾಗಿ ಬರುತ್ತದೆ. ಕಾರಣಾಂತರಗಳಿಂದ ನಾವು ಕೆಲವೊಮ್ಮೆ ತಡವಾಗಿ ಬರುವುದರಲ್ಲಿ ತಪ್ಪೇನಿಲ್ಲ. ಆದರೆ ನಾವು ಪದೇ ಪದೇ ತಡವಾಗಿ ಬರುವುದಾದರೆ, ಆ ಕೂಟದ ಮೇಲಿನ ನಮ್ಮ ಗಣ್ಯತೆ ಕಡಿಮೆಯಾಗುತ್ತಿದೆಯಾ ಅಥವಾ ನಮ್ಮ ಕೆಲಸಗಳನ್ನು ಸರಿಯಾದ ಯೋಜನೆಯಿಲ್ಲದೇ ಮಾಡುತ್ತಿದ್ದೇವಾ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.
12. ನಾವು ವಿಶಾಲ ಮನೋಭಾವವನ್ನು ಹೇಗೆ ತೋರಿಸಬಹುದು?
12 ಕ್ಷೇತ್ರ ಸೇವಾ ಕೂಟಕ್ಕೆ ಬರುವ ಪ್ರಚಾರಕರು ಸೇವೆ ಮಾಡಲು ಮೊದಲೇ ಏನಾದರೂ ಏರ್ಪಾಡು ಮಾಡಿಕೊಳ್ಳಬಹುದು ಅಥವಾ ತಮ್ಮ ಜೊತೆಗೆ ಬರುವವರನ್ನು ಮೊದಲೇ ಆರಿಸಿಕೊಳ್ಳಬಹುದು. ಆದರೆ ಈ ವಿಷಯದಲ್ಲಿ ನಮಗೆ “ವಿಶಾಲ” ಮನೋಭಾವವಿರಬೇಕು. ಪ್ರತಿ ಸಲ ನಮಗೆ ಇಷ್ಟ ಆಗುವವರ ಜೊತೆ ಮಾತ್ರ ಸೇವೆಗೆ ಹೋಗದೆ, ಯಾರೊಂದಿಗೆ ಇನ್ನೂ ಸೇವೆ ಮಾಡಿಲ್ಲವೋ ಅಂಥವರ ಜೊತೆ ಹೋದರೆ ಚೆನ್ನಾಗಿರುತ್ತದೆ. (2 ಕೊರಿಂ. 6:11-13) ಆಗಾಗ ಹೊಸ ಪ್ರಚಾರಕರ ಜೊತೆ ಕೆಲಸ ಮಾಡಿ, ಅವರನ್ನು ಉತ್ತೇಜಿಸಬೇಕು. (1 ಕೊರಿಂ. 10:24; 1 ತಿಮೊ. 4:13, 15) ಕೂಟದಲ್ಲಿ ನಿಮಗೆ ಕೊಡುವ ನಿರ್ದೇಶನಗಳಿಗೆ ಸರಿಯಾದ ಗಮನ ಕೊಡಿ. ಎಲ್ಲಿ ಸೇವೆ ಮಾಡಬೇಕು ಅಂತ ಹೇಳಿದ್ದಾರೋ ಅಲ್ಲೇ ಸೇವೆ ಮಾಡಿ. ಕೂಟವಾದ ನಂತರ ಇದರಲ್ಲಿ ಯಾವುದೇ ಬದಲಾವಣೆ ಮಾಡಬೇಡಿ, ತಡಮಾಡದೆ ಸೇವೆಗೆ ಹೋಗಿ.
13. ಕ್ಷೇತ್ರ ಸೇವಾ ಕೂಟವನ್ನು ಎಲ್ಲರೂ ತುಂಬ ಪ್ರಾಮುಖ್ಯವಾದದ್ದು ಎಂದು ಪರಿಗಣಿಸಿ, ತಮಗಿರುವ ಜವಾಬ್ದಾರಿಯನ್ನು ನಿರ್ವಹಿಸಿದರೆ ಯಾವ ಪ್ರಯೋಜನ ಸಿಗುತ್ತದೆ?
13 ಸೇವೆಗೆ ಹೋದಂಥ ಆ 70 ಮಂದಿ ಯೇಸುವಿನ ಶಿಷ್ಯರು ‘ಆನಂದದಿಂದ ಹಿಂದಿರುಗಿದರು.’ (ಲೂಕ 10:17) ಸೇವೆಗೆ ಮುಂಚೆ ಯೇಸು ನಡೆಸಿದ ಕೂಟ ಅವರಿಗೆ ಚೈತನ್ಯಕರವಾಗಿತ್ತು ಮತ್ತು ಅದರಿಂದಲೇ ಅವರಿಗೆ ಸೇವೆಯಲ್ಲಿ ಒಳ್ಳೇ ಪ್ರತಿಫಲ ಸಿಕ್ಕಿತು. ಇಂದು ಸಹ, ಕ್ಷೇತ್ರ ಸೇವಾ ಕೂಟವು ನಮಗೆ ಸೇವೆಯಲ್ಲಿ ಸಂತೋಷವನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಎಲ್ಲರೂ ಈ ಕೂಟವನ್ನು ತುಂಬ ಪ್ರಾಮುಖ್ಯವಾದದ್ದು ಎಂದು ಪರಿಗಣಿಸಬೇಕು ಮತ್ತು ತಮಗಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆಗ ಮಾತ್ರ “ಎಲ್ಲ ಜನಾಂಗಗಳಿಗೆ” ಸುವಾರ್ತೆ ಸಾರಲು ಉತ್ತೇಜನ ಪಡೆದು, ಸಿದ್ಧರಾಗಿ, ಸಂಘಟಿತರಾಗುತ್ತೇವೆ.—ಮತ್ತಾ. 24:14.
ಕ್ಷೇತ್ರ ಸೇವಾ ಕೂಟ ಇತರ ಸಭಾ ಕೂಟಗಳಷ್ಟು ಪ್ರಾಮುಖ್ಯವಲ್ಲ ಅಂತ ಯೋಚಿಸಲೇಬಾರದು
ಕೂಟದಲ್ಲಿ ಆ ದಿನ ಯಾವ ವಿಷಯದ ಬಗ್ಗೆ ಚರ್ಚೆ ಮಾಡಿದರೆ ಪ್ರಚಾರಕರಿಗೆ ಉತ್ತೇಜನ ಸಿಗುತ್ತದೆ, ಅವರನ್ನು ಸೇವೆಗೆ ಸಿದ್ಧಗೊಳಿಸುತ್ತದೆ ಎನ್ನುವುದರ ಬಗ್ಗೆ ಕೂಟವನ್ನು ನಡೆಸುವ ಸಹೋದರನು ತಯಾರಿ ಮಾಡುವಾಗ ಚೆನ್ನಾಗಿ ಯೋಚಿಸಬೇಕು