ಬೈಬಲಿನ ಕಿರುಪರಿಚಯ ಪುಸ್ತಿಕೆಯನ್ನು ಉಪಯೋಗಿಸಿ, ಸಂಭಾಷಣೆ ಆರಂಭಿಸಿ
1. ಸುವಾರ್ತೆ ಸಾರಲು ಸಹಾಯ ಮಾಡುವ ಯಾವ ಹೊಸ ಸಾಧನವನ್ನು ನಾವು ಪಡೆದಿದ್ದೇವೆ?
1 “ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ!” ಎಂಬ ಪ್ರಾದೇಶಿಕ ಅಧಿವೇಶನದಲ್ಲಿ ಬೈಬಲಿನ ಕಿರುಪರಿಚಯ ಎಂಬ ಪುಸ್ತಿಕೆಯನ್ನು ಬಿಡುಗಡೆ ಮಾಡಲಾಯಿತು. ಸುವಾರ್ತೆ ಸಾರಲು ನಿರೂಪಣೆಗಳನ್ನು ತಯಾರಿಸುವಾಗ ಈ ಹೊಸ ಸಾಧನವನ್ನು ಹೇಗೆ ಉಪಯೋಗಿಸಬಹುದು? ರೀಸನಿಂಗ್ (ಇಂಗ್ಲಿಷ್) ಪುಸ್ತಕದಲ್ಲಿರುವಂತೆ ಈ ಪುಸ್ತಿಕೆಯಲ್ಲೂ ಅನೇಕ ಬೈಬಲ್ ವಿಷಯಗಳು ಮತ್ತು ಅವುಗಳ ಕೆಳಗೆ ಆ ವಿಷಯಗಳಿಗೆ ಸಂಬಂಧಿಸಿದ ವಚನಗಳೂ ಇವೆ. ಆದ್ದರಿಂದ ಇದನ್ನು ಉಪಯೋಗಿಸಿ ಸಂಭಾಷಣೆ ಆರಂಭಿಸುವುದು ತುಂಬ ಸುಲಭ.
2. ಬೈಬಲಿನ ಕಿರುಪರಿಚಯ ಪುಸ್ತಿಕೆಯನ್ನು ಸುವಾರ್ತೆ ಸಾರಲು ಹೇಗೆ ಉಪಯೋಗಿಸಬಹುದು?
2 ನೀವು ಈ ಪುಸ್ತಿಕೆಯಲ್ಲಿರುವ 8ನೇ ಪ್ರಶ್ನೆಯನ್ನು ಉಪಯೋಗಿಸುವುದಾದರೆ ಹೀಗೆ ಮಾತಾಡಬಹುದು: “ನಾವು ಇಂದು ಜನರನ್ನು ಭೇಟಿಯಾಗಿ ಅನೇಕರಿಗೆ ಇರುವ ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇವೆ. ಪ್ರಶ್ನೆ ಏನೆಂದರೆ, ‘ನಾವು ಅನುಭವಿಸುತ್ತಿರುವ ಕಷ್ಟಗಳಿಗೆ ದೇವರು ಕಾರಣನಾ? [ಕೆಲವು ಸೇವಾ ಕ್ಷೇತ್ರಗಳಲ್ಲಿ ಮುದ್ರಿತ ಪ್ರಶ್ನೆಯನ್ನು ತೋರಿಸಿದರೆ ಮನೆಯವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ.] ನಿಮಗೇನು ಅನಿಸುತ್ತೆ? [ಉತ್ತರಕ್ಕಾಗಿ ಕಾಯಿರಿ.] ಈ ಪ್ರಶ್ನೆಗೆ ಸರಿಯಾದ ಉತ್ತರ ಬೈಬಲಿನಲ್ಲಿದೆ.” ನಂತರ, ಆ ಪ್ರಶ್ನೆಗೆ ಕೊಡಲಾದ ಒಂದೆರಡು ವಚನಗಳನ್ನು ಬೈಬಲಿನಿಂದಲೇ ಓದಿ, ಚರ್ಚಿಸಿ. ಮನೆಯವನು ಹೆಚ್ಚಿನ ವಿಷಯ ತಿಳಿದುಕೊಳ್ಳಲು ಬಯಸುವುದಾದರೆ, ಮೊದಲನೇ ಪುಟದಲ್ಲಿರುವ ಎಲ್ಲ 20 ಪ್ರಶ್ನೆಗಳನ್ನು ಅವನಿಗೆ ತೋರಿಸಿ, ಯಾವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಇಷ್ಟಪಡುತ್ತೀರಿ ಎಂದು ಕೇಳಿ. ಅವನು ಆರಿಸಿದ ಪ್ರಶ್ನೆಯ ಬಗ್ಗೆ ಮುಂದಿನ ಭೇಟಿಯಲ್ಲಿ ಚರ್ಚಿಸಲು ಏರ್ಪಾಡುಗಳನ್ನು ಮಾಡಿ. ಬೈಬಲ್ ಅಧ್ಯಯನಕ್ಕಾಗಿ ಇರುವ ಸಾಹಿತ್ಯಗಳಲ್ಲಿ ನೀವು ಚರ್ಚಿಸಿರುವ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಹಾಗಾಗಿ ಅವುಗಳಲ್ಲಿ ಒಂದನ್ನು ಕೊಟ್ಟು ಸಹ ಪುನರ್ಭೇಟಿಗಾಗಿ ಏರ್ಪಾಡು ಮಾಡಬಹುದು.
3. ಕ್ರೈಸ್ತರಲ್ಲದ ಜನರೊಂದಿಗೆ ಸಂಭಾಷಣೆ ಆರಂಭಿಸಲು ಬೈಬಲಿನ ಕಿರುಪರಿಚಯ ಪುಸ್ತಿಕೆಯನ್ನು ಹೇಗೆ ಉಪಯೋಗಿಸಬಹುದು?
3 ಈ ಪುಸ್ತಿಕೆಯಲ್ಲಿರುವ 4ನೇ ಮತ್ತು 13ರಿಂದ 17ನೇ ಪ್ರಶ್ನೆಗಳು ಕ್ರೈಸ್ತರಲ್ಲದ ಜನರೊಂದಿಗೆ ಸಂಭಾಷಣೆಯನ್ನು ಆರಂಭಿಸಲು ಸಹಾಯ ಮಾಡುತ್ತವೆ. ಉದಾಹರಣೆಗೆ, ನೀವು 17ನೇ ಪ್ರಶ್ನೆಯನ್ನು ಉಪಯೋಗಿಸುವುದಾದರೆ ಹೀಗೆ ಹೇಳಿ: “ಕುಟುಂಬಕ್ಕೆ ಸಹಾಯ ಮಾಡುವಂಥ ವಿಷಯಗಳ ಬಗ್ಗೆ ನಾವು ಮಾತಾಡುತ್ತಿದ್ದೇವೆ. ಯಾಕೆಂದರೆ ಇವತ್ತು ಕುಟುಂಬದಲ್ಲಿ ಸಮಸ್ಯೆಗಳು ತುಂಬ ಜಾಸ್ತಿಯಾಗಿ ಬಿಟ್ಟಿವೆ. ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯನಾ? ನೀವೇನು ಹೇಳ್ತೀರಾ? [ಉತ್ತರಕ್ಕಾಗಿ ಕಾಯಿರಿ.] ಆದರೆ ಒಂದು ಸಲಹೆ ಅನೇಕ ದಂಪತಿಗಳಿಗೆ ಸಹಾಯ ಮಾಡಿದೆ. ಅದೇನೆಂದರೆ, ‘ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕಂತೆ.’ [ಇದು ಎಫೆಸ 5:33ರಲ್ಲಿದೆ ಎಂದು ಮನೆಯವರಿಗೆ ಹೇಳಬೇಕೆಂದೇನಿಲ್ಲ. ನೀವೊಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದಾದರೆ ಎಫೆಸ 5:28ನ್ನು ಬೈಬಲ್ ತೆರೆಯದೆ ಹಾಗೆಯೇ ತಿಳಿಸಬಹುದು.] ಈ ಸಲಹೆಯನ್ನು ಅನ್ವಯಿಸುವುದಾದರೆ ವಿವಾಹ ಜೀವನ ಚೆನ್ನಾಗಿರುತ್ತದೆ ಅಂತ ನಿಮಗನಿಸುವುದಿಲ್ವಾ?”
4. ಕ್ರೈಸ್ತನಲ್ಲದ ವ್ಯಕ್ತಿಯೊಂದಿಗಿನ ಸಂಭಾಷಣೆಯನ್ನು ಮುಗಿಸುವಾಗ ಏನು ಮಾಡಬಹುದು?
4 ನಿಮ್ಮ ಸಂಭಾಷಣೆಯನ್ನು ಮುಗಿಸುವಾಗ, ಹೆಚ್ಚಿನ ವಿಷಯವನ್ನು ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ. ಮುಂದಿನ ಭೇಟಿಯಲ್ಲಿ, ಉಳಿದ ವಚನಗಳನ್ನು ಚರ್ಚಿಸಬಹುದು. ಅವರ ಆಸಕ್ತಿ ಬೆಳೆಯುತ್ತಿದ್ದಂತೆ ಪರಿಸ್ಥಿತಿ ನೋಡಿ, ನೀವು ತಿಳಿಸುತ್ತಿರುವ ವಿಷಯ ಬೈಬಲಿನಲ್ಲಿರುವ ವಿಷಯಗಳಾಗಿವೆ ಎಂದು ಅವರಿಗೆ ಹೇಳಿ. ನೀವು ಅವರನ್ನು ಭೇಟಿಯಾದ ಪ್ರತಿ ಸಾರಿ ಬೈಬಲಿನ ಬಗ್ಗೆ ಅವರ ಅಭಿಪ್ರಾಯವೇನು, ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಹೀಗೆ, ಅವರಿಗೆ ಇಷ್ಟವಾಗುವಂಥ ಮಾಹಿತಿ ಇರುವ ಸಾಹಿತ್ಯಗಳನ್ನು ಕೊಡಿ.—ಡಿಸೆಂಬರ್ 2013ರ ನಮ್ಮ ರಾಜ್ಯ ಸೇವೆಯ ಪುರವಣಿಯನ್ನು ನೋಡಿ.