ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಬಳಸಿ
1. ಯಾವ ವಿಧದಲ್ಲಿ ಪ್ರಚಾರಕರು ಬಡಗಿಯಂತಿರಬೇಕು?
1 ಮರಗೆಲಸ ಮಾಡುವ ಬಡಗಿ ಅನೇಕ ಸಲಕರಣೆಗಳನ್ನು ಬಳಸುತ್ತಾನೆ. ಕೆಲವೊಂದು ಸಲಕರಣೆಗಳನ್ನು ಅಪರೂಪಕ್ಕೊಮ್ಮೆ ಬಳಸಿದರೆ ಮುಖ್ಯವಾದ ಸಲಕರಣೆಗಳನ್ನು ಯಾವಾಗಲೂ ಬಳಸುತ್ತಾನೆ. ಅನುಭವಸ್ಥ ಬಡಗಿ ಸಲಕರಣೆಗಳ ಪೆಟ್ಟಿಗೆಯಲ್ಲಿ ಮುಖ್ಯವಾದ ಸಲಕರಣೆಗಳನ್ನು ಯಾವಾಗಲೂ ಇಟ್ಟುಕೊಂಡಿರುತ್ತಾನೆ. ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂದೂ ಆತನಿಗೆ ಚೆನ್ನಾಗಿ ಗೊತ್ತಿರುತ್ತದೆ. ಬಡಗಿಯಂತೆ ನಾವು ಸಾರುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಮತ್ತು ನಮಗಿರುವ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಲು ತಿಳಿದವರಾಗಿರಬೇಕು. ಹೀಗೆ ಮಾಡಿದರೆ, ನಾವು ಲಜ್ಜಿತರಾಗದ ಕೆಲಸಗಾರರಾಗುತ್ತೇವೆ ಅಂದರೆ ಸುವಾರ್ತೆ ಸಾರುವ ಕೆಲಸದಲ್ಲಿ ನಾಚಿಕೆ ಪಡುವುದಿಲ್ಲ. (2 ತಿಮೊ. 2:15) ‘ಶಿಷ್ಯರನ್ನಾಗಿ ಮಾಡಲು’ ನಾವು ಉಪಯೋಗಿಸುವ ಪ್ರಾಮುಖ್ಯ ಸಲಕರಣೆ ಯಾವುದು? ದೇವರ ವಾಕ್ಯವಾದ ಬೈಬಲ್. (ಮತ್ತಾ. 28:19, 20) ಆದ್ದರಿಂದ, ಆ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ’ ನಿಪುಣತೆಯನ್ನು ಪಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು. ಬೈಬಲ್ ಅಲ್ಲದೆ ಇನ್ನೂ ಕೆಲವು ಸಲಕರಣೆಗಳಿವೆ. ಜನರಿಗೆ ಸತ್ಯವನ್ನು ಬೋಧಿಸಬೇಕೆಂದರೆ ಅವುಗಳನ್ನೂ ಚೆನ್ನಾಗಿ ಬಳಸಲು ನಾವು ಕಲಿತುಕೊಳ್ಳಬೇಕು.—ಜ್ಞಾನೋ. 22:29.
2. ಪ್ರಾಮುಖ್ಯವಾದ ಬೋಧನಾ ಸಲಕರಣೆಗಳು ಯಾವುವು?
2 ಪ್ರಾಮುಖ್ಯವಾದ ಬೋಧನಾ ಸಲಕರಣೆಗಳು: ಬೈಬಲ್ ಅಲ್ಲದೆ ಇನ್ನೂ ಯಾವ ಪ್ರಾಮುಖ್ಯ ಸಲಕರಣೆಗಳನ್ನು ನಾವು ಬಳಸಬೇಕು? ಮೊದಲಾಗಿ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಬಳಸಬೇಕು. ಈ ಪುಸ್ತಕ ಬೈಬಲಿನ ಮೂಲಭೂತ ಸತ್ಯವನ್ನು ಕಲಿಸಲು ಸಹಾಯ ಮಾಡುತ್ತದೆ. ಇದರ ನಂತರ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ ಪುಸ್ತಕದಿಂದ ಅಧ್ಯಯನ ಮಾಡಬೇಕು. ಈ ಪುಸ್ತಕ ದಿನನಿತ್ಯ ಜೀವನದಲ್ಲಿ ಬೈಬಲ್ ಮೂಲತತ್ವಗಳನ್ನು ಅನ್ವಯಿಸುವುದು ಹೇಗೆಂದು ಕಲಿಸಲು ಸಹಾಯ ಮಾಡುತ್ತದೆ. ಹಾಗಾಗಿ, ಈ ಎರಡು ಪುಸ್ತಕಗಳನ್ನು ಹೇಗೆ ಬಳಸಬೇಕೆಂದು ನಮಗೆ ಚೆನ್ನಾಗಿ ತಿಳಿದಿರಬೇಕು. ಕೆಲವೊಂದು ಕಿರುಹೊತ್ತಗೆಗಳು ಸಹ ಪ್ರಾಮುಖ್ಯ ಬೋಧನಾ ಸಲಕರಣೆಗಳಾಗಿವೆ. ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆ ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಲು ಉಪಯುಕ್ತವಾಗಿದೆ. ಕ್ರೈಸ್ತರಲ್ಲದವರಿಗೆ ಸುಖೀ ಸಂಸಾರ ಸಾಧ್ಯ! ಎಂಬ ಕಿರುಹೊತ್ತಗೆ ಕೊಟ್ಟರೆ ಒಳ್ಳೆಯದು. ಅವರ ಆಸಕ್ತಿ ಬೆಳೆದ ನಂತರ ಸಿಹಿಸುದ್ದಿ! ಕಿರುಹೊತ್ತಗೆ ಕೊಡಬಹುದು. ಓದಲು ಅಲ್ಪ-ಸ್ವಲ್ಪ ಬರುವವರಿಗೆ ಅಥವಾ ಹೆಚ್ಚು ಪ್ರಕಾಶನಗಳಿಲ್ಲದ ಭಾಷೆಯನ್ನಾಡುವ ಜನರಿಗೆ ನಾವು ದೇವರ ಮಾತನ್ನು ಆಲಿಸಿ ಅಥವಾ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನ ಮಾಡಬೇಕು. ನಮ್ಮ ಸಂಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಕಿರುಹೊತ್ತಗೆಯನ್ನು ಬಳಸಿ. ಶಿಷ್ಯರನ್ನಾಗಿ ಮಾಡಲು ಕೆಲವೊಂದು ವಿಡಿಯೋಗಳು ಸಹ ಉಪಯುಕ್ತವಾಗಿವೆ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಮತ್ತು ದೇವರಿಗೊಂದು ಹೆಸರಿದೆಯಾ? ವಿಡಿಯೋಗಳನ್ನು ಬಳಸಲೂ ನಾವು ಕಲಿತುಕೊಳ್ಳಬೇಕು.
3. ನಮ್ಮ ರಾಜ್ಯ ಸೇವೆಯ ಮುಂದಿನ ಸಂಚಿಕೆಗಳಲ್ಲಿ ಯಾವುದರ ಬಗ್ಗೆ ತಿಳಿಸಲಾಗುತ್ತದೆ?
3 ನಮ್ಮ ರಾಜ್ಯ ಸೇವೆಯ ಮುಂದಿನ ಸಂಚಿಕೆಗಳಲ್ಲಿ ಕೆಲವು ಪ್ರಾಮುಖ್ಯ ಬೋಧನಾ ಸಲಕರಣೆಗಳನ್ನು ಹೇಗೆ ಚೆನ್ನಾಗಿ ಬಳಸಬೇಕೆಂದು ತಿಳಿಸಲಾಗುವುದು. ಈ ಸಲಕರಣೆಗಳನ್ನು ಚೆನ್ನಾಗಿ ಬಳಸಲು ಕಲಿತರೆ ಈ ವಚನದಲ್ಲಿರುವ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ. ಅದು ಹೇಳುವುದು: “ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು. ಈ ವಿಷಯಗಳಲ್ಲಿ ನಿರತನಾಗಿರು; ಹೀಗೆ ಮಾಡುವ ಮೂಲಕ ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.”—1 ತಿಮೊ. 4:16.