ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಆಗಸ್ಟ್‌ ಪು. 2-7
  • ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಮನುಷ್ಯರನ್ನ ತುಂಬ ಅಮೂಲ್ಯರಾಗಿ ನೋಡ್ತಾರೆ
  • ಯೆಹೋವ ದೇವರ ಕುಟುಂಬದವರಾಗೋಕೆ ಇಷ್ಟ ಇದೆ ಅಂತ ತೋರಿಸಿ
  • ದೇವರ ಮಕ್ಕಳಿಗೆ ಸಿಗೋ ಆಶೀರ್ವಾದಗಳು
  • ಯೆಹೋವನ ಉದ್ದೇಶ ಖಂಡಿತ ನೆರವೇರುತ್ತದೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ನಾವು ಶಾಶ್ವತವಾಗಿ ಜೀವಿಸಬಹುದು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ದೇವರು ಏನು ಮಾಡಿದ್ದಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಆಗಸ್ಟ್‌ ಪು. 2-7

ಅಧ್ಯಯನ ಲೇಖನ 30

ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ

“ನೀನು ಅವನನ್ನ ದೇವದೂತರಿಗಿಂತ ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ, ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.”—ಕೀರ್ತ. 8:5.

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

ಕಿರುನೋಟa

1. ಯೆಹೋವನ ಸೃಷ್ಟಿಗಳ ಬಗ್ಗೆ ಯೋಚಿಸುವಾಗ ನಮಗೆ ಯಾವ ಪ್ರಶ್ನೆಗಳು ಬರುತ್ತೆ?

ದಾವೀದ ಸೃಷ್ಟಿಯನ್ನೆಲ್ಲಾ ನೋಡಿ ಯೆಹೋವನ ಹತ್ರ “ನೀನು ಸೃಷ್ಟಿಸಿರೋ ಆಕಾಶವನ್ನ, ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ, ನಾನು ಹೀಗೆ ಯೋಚಿಸಿದೆ, ‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ? ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?’” ಅಂತ ಆಶ್ಚರ್ಯದಿಂದ ಕೇಳಿದ. (ಕೀರ್ತ. 8:3, 4) ದಾವೀದನ ತರ ನೀವು ಹೀಗೆ ಯೋಚಿಸಿರಬಹುದಲ್ವಾ? ನಕ್ಷತ್ರಗಳ ಮುಂದೆ ಸಾಸಿವೆ ತರ ಇರೋ ನಮ್ಮನ್ನ ಯೆಹೋವ ದೇವರು ಗಮನಿಸ್ತಾನೆ ಅಂತ ಗೊತ್ತಾದಾಗ ಆಶ್ಚರ್ಯ ಆಗುತ್ತೆ. ಆದ್ರೆ ಒಂದು ನಿಮಿಷ ಯೋಚನೆ ಮಾಡಿ, ಆದಾಮ ಹವ್ವರನ್ನ ಯೆಹೋವ ಸೃಷ್ಟಿ ಮಾಡಿದಾಗ ಅವರನ್ನ ಚೆನ್ನಾಗಿ ನೋಡಿಕೊಂಡಿದ್ದು ಮಾತ್ರ ಅಲ್ಲ, ತನ್ನ ಕುಟುಂಬಕ್ಕೆ ಅವರನ್ನ ಸೇರಿಸಿಕೊಂಡಿಲ್ವಾ?

2. ಆದಾಮ ಹವ್ವರಿಗೆ ಏನು ಮಾಡಬೇಕು ಅಂತ ಯೆಹೋವ ದೇವರು ಹೇಳಿದ್ರು?

2 ಭೂಮಿಯಲ್ಲಿ ಯೆಹೋವ ಸೃಷ್ಟಿಮಾಡಿದ ಮೊದಲ ಮಣ್ಣಿನ ಮಕ್ಕಳೇ ಆದಾಮ ಹವ್ವರು. ಯೆಹೋವ ದೇವರೇ ಅವರ ಪ್ರೀತಿಯ ತಂದೆಯಾಗಿದ್ರು. ಯೆಹೋವ ದೇವರು ಅವರ ಹತ್ರ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ” ಅಂತ ಹೇಳಿದ್ರು. (ಆದಿ. 1:28) ಮಕ್ಕಳನ್ನ ಮಾಡಿ ಇಡೀ ಭೂಮಿಯನ್ನ ಅವರು ಮನೆ ತರ ಮಾಡಬೇಕಿತ್ತು. ಭೂಮಿಯನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆದಾಮ ಹವ್ವರು ಯೆಹೋವನ ಮಾತು ಕೇಳಿ ಅದೇ ತರ ಮಾಡಿದ್ರೆ ಅವರು ಮತ್ತು ಅವರ ಮಕ್ಕಳು ಯೆಹೋವನ ಕುಟುಂಬದಲ್ಲಿ ಶಾಶ್ವತವಾಗಿ ಇರುತ್ತಿದ್ರು.

3. ಆದಾಮ ಹವ್ವನ ಯೆಹೋವ ದೇವರು ಸೃಷ್ಟಿಮಾಡಿ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಗೌರವ ಕೊಟ್ರು ಅಂತ ಹೇಗೆ ಹೇಳಬಹುದು?

3 ಯೆಹೋವ ದೇವರು ಆದಾಮ ಹವ್ವನಾ ತನ್ನ ಕುಟುಂಬದಲ್ಲಿ ಸೇರಿಸಿಕೊಂಡು ಅವರಿಗೆ ಗೌರವ ಕೊಟ್ಟಿದ್ದಾರೆ. ಕೀರ್ತನೆ 8:5ರಲ್ಲಿ ಯೆಹೋವ ಮನುಷ್ಯರನ್ನು ಸೃಷ್ಟಿ ಮಾಡಿರೋ ಬಗ್ಗೆ ದಾವೀದ ಹೀಗೆ ಹೇಳಿದ್ದಾನೆ “ನೀನು ಅವನನ್ನ ದೇವದೂತರಿಗಿಂತ ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ, ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.” ಹೌದು, ಮನುಷ್ಯರಿಗೆ ದೇವದೂತರಷ್ಟು ಶಕ್ತಿ, ಬುದ್ಧಿ ಸಾಮರ್ಥ್ಯ ಕೊಟ್ಟಿಲ್ಲ. (ಕೀರ್ತ. 103:20) ಅವರನ್ನ ದೇವದೂತರಿಗಿಂತ ಒಂಚೂರು ಕಮ್ಮಿಯಾಗಿ ಸೃಷ್ಟಿಮಾಡಿದ್ದಾರೆ ಅಷ್ಟೆ.

4. (ಎ) ದೇವರ ಮಾತು ಕೇಳದೇ ಇದ್ದದರಿಂದ ಆದಾಮ ಹವ್ವರಿಗೆ ಏನಾಯ್ತು? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ?

4 ಆದಾಮ ಹವ್ವ ಯೆಹೋವ ದೇವರ ಮಾತು ಕೇಳದೇ ಇದ್ದದರಿಂದ ಆತನ ಕುಟುಂಬದಿಂದ ಹೊರಗೆ ಬರಬೇಕಾಯಿತು. ಇದ್ರಿಂದ ಅವರು ಮಾತ್ರ ಅಲ್ಲ, ಅವರ ಮಕ್ಕಳೂ ಕಷ್ಟ ಅನುಭವಿಸಬೇಕಾಗಿ ಬಂತು. ಆದ್ರೆ ಯೆಹೋವ ದೇವರ ಉದ್ದೇಶ ಇನ್ನೂ ಬದಲಾಗಿಲ್ಲ. ಈಗಲೂ ಯಾರೆಲ್ಲಾ ಆತನ ಮಾತು ಕೇಳ್ತಾರೋ, ಅವರನ್ನ ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳೋಕೆ ಕಾಯ್ತಾ ಇದ್ದಾನೆ. ಅದರ ಬಗ್ಗೆ ನಾವೀಗ ಕಲಿಯೋಣ. ಅಷ್ಟೇ ಅಲ್ಲ, ಯೆಹೋವ ದೇವರು ನಮ್ಮನ್ನ ಅಮೂಲ್ಯವಾಗಿ ನೋಡ್ತಾರೆ ಅಂತ ನಮಗೆ ಹೇಗೆ ಗೊತ್ತು? ಆತನ ಕುಟುಂಬದಲ್ಲಿ ಸೇರೋಕೆ ನಾವೇನು ಮಾಡಬೇಕು? ತನ್ನ ಮಕ್ಕಳಿಗೆ ಯೆಹೋವ ದೇವರು ಏನೆಲ್ಲಾ ಆಶೀರ್ವಾದ ಮಾಡ್ತಾರೆ? ಅಂತನೂ ಈ ಲೇಖನದಲ್ಲಿ ನೋಡೋಣ.

ಯೆಹೋವ ಮನುಷ್ಯರನ್ನ ತುಂಬ ಅಮೂಲ್ಯರಾಗಿ ನೋಡ್ತಾರೆ

ಚಿಕ್ಕ ಗಂಡು ಮಕ್ಕಳಿಗೆ ತಂದೆ ತಾಯಿ ಕಲಿಸ್ತಿದ್ದಾರೆ. ಒಬ್ಬನಿಗೆ ಬಿಡುಗಡೆ ಬೆಲೆಯ ಬಗ್ಗೆ ಇರೋ ವಿಡಿಯೋ ಮತ್ತು ಇನ್ನೊಬ್ಬನಿಗೆ “ಬೈಬಲ್‌ ನಮಗೆ ಕಲಿಸುವ ಪಾಠಗಳು” ಅನ್ನೋ ಪುಸ್ತಕದಿಂದ ಕಲಿಸ್ತಿದ್ದಾರೆ. ಆ ಕುಟುಂಬ ಪರದೈಸ್‌ನಲ್ಲಿ ಬೇರೆ ಬೇರೆ ಪ್ರಾಣಿಗಳ ಜೊತೆ ಇರೋದನ್ನ ಕಲ್ಪಿಸಿಕೊಳ್ತಿದ್ದಾರೆ.

ಯೆಹೋವ ದೇವರು ನಮ್ಮನ್ನ ಹೇಗೆಲ್ಲಾ ಗೌರವಿಸಿದ್ದಾರೆ? (ಪ್ಯಾರ 5-11 ನೋಡಿ)b

5. ನಾವು ಯೆಹೋವ ದೇವರಿಗೆ ಋಣಿಗಳಾಗಿದ್ದೀವಿ ಅಂತ ಹೇಗೆ ತೋರಿಸಬಹುದು?

5 ಯೆಹೋವ ನಮ್ಮನ್ನ ಆತನ ಹೋಲಿಕೆಯಲ್ಲಿ ಸೃಷ್ಟಿ ಮಾಡಿದ್ದಾರೆ. (ಆದಿ. 1:26, 27) ಯೆಹೋವ ದೇವರಲ್ಲಿ ಪ್ರೀತಿ, ಕರುಣೆ, ನಿಯತ್ತು ಮತ್ತು ನೀತಿ ಇಂಥ ಎಷ್ಟೋ ಒಳ್ಳೇ ಗುಣಗಳಿವೆ. ನಮ್ಮನ್ನ ಆತನ ಹೋಲಿಕೆಯಲ್ಲಿ ಸೃಷ್ಟಿ ಮಾಡಿರೋದ್ರಿಂದ ನಾವು ಇಂಥ ಗುಣಗಳನ್ನ ಬೆಳೆಸಿಕೊಂಡು ತೋರಿಸೋಕೆ ಆಗುತ್ತೆ. (ಕೀರ್ತ. 86:15; 145:17) ನಾವು ಈ ಗುಣಗಳನ್ನ ಬೆಳೆಸಿಕೊಂಡ್ರೆ ನಾವು ಯೆಹೋವ ದೇವರನ್ನ ಗೌರವಿಸ್ತೀವಿ, ಆತನಿಗೆ ಋಣಿಗಳಾಗಿದ್ದೀವಿ ಅಂತ ತೋರಿಸಿ ಕೊಡ್ತೀವಿ. (1 ಪೇತ್ರ 1:14-16) ನಾವು ಯೆಹೋವ ದೇವರಿಗೆ ಇಷ್ಟ ಆಗೋ ತರ ನಡ್ಕೊಂಡ್ರೆ ತುಂಬ ಖುಷಿಯಾಗಿ ಇರ್ತೀವಿ. ಯೆಹೋವ ದೇವರು ತನ್ನಲ್ಲಿರೋ ಗುಣಗಳನ್ನ ನಮ್ಮಲ್ಲಿ ಇಟ್ಟು ಸೃಷ್ಟಿಸಿ ಆತನ ಕುಟುಂಬಕ್ಕೆ ಸೇರೋ ಅರ್ಹತೆಯನ್ನ ನಮಗೆ ಕೊಟ್ಟಿದ್ದಾನೆ.

6. ಯೆಹೋವ ದೇವರು ಮನುಷ್ಯರನ್ನ ಹೇಗೆ ಗೌರವಿಸಿದ್ದಾರೆ?

6 ಯೆಹೋವ ದೇವರು ನಮಗೆ ಸುಂದರವಾದ ಮನೆ ಸಿದ್ಧಮಾಡಿದ್ರು. ಮೊದಲ ಮನುಷ್ಯನನ್ನ ಸೃಷ್ಟಿ ಮಾಡೋಕೂ ಮುಂಚೆ ಯೆಹೋವ ದೇವರು ಈ ಭೂಮಿನ ಸಿದ್ಧಮಾಡಿದ್ರು. (ಯೋಬ 38:4-6; ಯೆರೆ. 10:12) ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇರೋದ್ರಿಂದ ನಾವು ಖುಷಿಯಾಗಿರೋಕೆ ಬೇಕಾದ ವಿಷಯಗಳನ್ನ ಧಾರಾಳವಾಗಿ ಕೊಟ್ಟಿದ್ದಾರೆ. (ಕೀರ್ತ. 104:14, 15, 24) ಯೆಹೋವ ತಾನು ಮಾಡಿದ ಸೃಷ್ಟಿನೆಲ್ಲಾ ನೋಡಿದಾಗ ‘ಅವು ಚೆನ್ನಾಗಿತ್ತು.’ (ಆದಿ. 1:10, 12, 31) ಯೆಹೋವ ದೇವರು ಮನುಷ್ಯನಿಗೆ ತನ್ನ ಎಲ್ಲಾ ಅದ್ಭುತ ಸೃಷ್ಟಿಗಳ ಮೇಲೆ “ಅಧಿಕಾರ” ಕೊಟ್ಟು ಗೌರವ ಕೊಟ್ಟಿದ್ದಾನೆ. (ಕೀರ್ತ. 8:6) ಮನುಷ್ಯರು ಪರಿಪೂರ್ಣರಾಗಿ ಸದಾಕಾಲ ಜೀವಿಸಬೇಕು ಮತ್ತು ತನ್ನ ಸೃಷ್ಟಿನ ಖುಷಿಖುಷಿಯಾಗಿ ನೋಡಿಕೊಳ್ಳಬೇಕು ಅನ್ನೋದು ಯೆಹೋವನ ಇಷ್ಟ. ಇದು ಮುಂದೆ ಖಂಡಿತ ನಡಿಯುತ್ತೆ ಅಂತ ಯೆಹೋವ ದೇವರು ಮಾತು ಕೊಟ್ಟಿದ್ದಾರೆ. ಅದಕ್ಕೆ ನಾವು ಎಷ್ಟು ಥ್ಯಾಂಕ್ಸ್‌ ಹೇಳಿದ್ರು ಸಾಕಾಗಲ್ಲ ಅಲ್ವಾ?

7. ಮನುಷ್ಯರಿಗೆ ಇಚ್ಛಾಸ್ವಾತಂತ್ರ್ಯ ಇದೆ ಅಂತ ಯೆಹೋಶುವ 24:15ರಿಂದ ಹೇಗೆ ಗೊತ್ತಾಗುತ್ತೆ?

7 ಯೆಹೋವ ದೇವರು ನಮಗೆ ಇಚ್ಛಾಸ್ವಾತಂತ್ರ್ಯ ಅನ್ನೋ ಉಡುಗೊರೆ ಕೊಟ್ಟಿದ್ದಾರೆ. ನಮ್ಮ ಜೀವನದಲ್ಲಿ ನಾವೇನು ಮಾಡಬೇಕು ಅಂತ ಆಯ್ಕೆ ಮಾಡೋ ಸ್ವಾತಂತ್ರ್ಯ ನಮಗಿದೆ. ಅದೇ ಇಚ್ಛಾಸ್ವಾತಂತ್ರ್ಯ. (ಯೆಹೋಶುವ 24:15 ಓದಿ.) ನಾವು ಯೆಹೋವ ದೇವರನ್ನ ಆರಾಧಿಸೋ ಆಯ್ಕೆ ಮಾಡಿದ್ರೆ ಆತನಿಗೆ ತುಂಬ ಖುಷಿ ಆಗುತ್ತೆ. (ಕೀರ್ತ. 84:11; ಜ್ಞಾನೋ. 27:11) ಅದೇ ತರ ಇನ್ನೂ ಬೇರೆ-ಬೇರೆ ಒಳ್ಳೇ ತೀರ್ಮಾನಗಳನ್ನು ಮಾಡೋಕೆ ಈ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಬೇಕು. ಇದಕ್ಕೆ ಒಳ್ಳೇ ಮಾದರಿ ಯೇಸು.

8. ಯೇಸು ತನ್ನ ಇಚ್ಛಾಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿದ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

8 ನಾವು ಯೇಸು ತರ ನಮ್ಮ ಇಷ್ಟಕ್ಕಿಂತ ಬೇರೆಯವರ ಇಷ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡೋ ಆಯ್ಕೆ ಮಾಡಬೇಕು. ಒಂದು ಸಲ ಯೇಸು ಮತ್ತು ಅವನ ಅಪೊಸ್ತಲರಿಗೆ ತುಂಬ ಸುಸ್ತಾಗಿತ್ತು. ಆಗ ಅವರು ವಿಶ್ರಾಂತಿ ತಗೊಳ್ಳೋಕೆ ಒಂದು ಪ್ರಶಾಂತವಾಗಿರೋ ಜಾಗಕ್ಕೆ ಹೋದ್ರು. ಆದ್ರೆ ಅಲ್ಲಿ ಅವರಿಗೆ ವಿಶ್ರಾಂತಿ ತಗೊಳ್ಳೋಕೆ ಆಗಲಿಲ್ಲ. ಯಾಕಂದ್ರೆ ಜನ ಯೇಸು ಹತ್ರ ಕಲಿಯೋಕೆ ಅವನನ್ನ ಹುಡುಕಿಕೊಂಡು ಅಲ್ಲಿಗೆ ಬಂದುಬಿಟ್ರು. ಆಗ ಯೇಸು ಅವರ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ. ಬದಲಿಗೆ ಅವರ ಮೇಲೆ ಕನಿಕರ ಪಟ್ಟ. “ಅವ್ರಿಗೆ ತುಂಬ ವಿಷ್ಯ ಕಲಿಸೋಕೆ ಶುರುಮಾಡಿದನು.” (ಮಾರ್ಕ 6:30-34) ನಾವು ನಮ್ಮ ಸಮಯ ಮತ್ತು ಶಕ್ತಿನ ಬೇರೆಯವರಿಗೆ ಸಹಾಯ ಮಾಡೋಕೆ ಉಪಯೋಗಿಸಿದ್ರೆ ಯೇಸು ತರ ನಡ್ಕೊಳ್ತೀವಿ ಮತ್ತು ಯೆಹೋವನ ಹೆಸರಿಗೆ ಗೌರವನೂ ತರುತ್ತೀವಿ. (ಮತ್ತಾ. 5:14-16) ಅಷ್ಟೇ ಅಲ್ಲ, ನಾವು ಯೆಹೋವನ ಕುಟುಂಬದಲ್ಲಿ ಇರೋಕೆ ಇಷ್ಟ ಪಡ್ತೀವಿ ಅಂತನೂ ತೋರಿಸ್ತೀವಿ.

9. ಯೆಹೋವ ದೇವರು ಹೆತ್ತವರಿಗೆ ಯಾವ ಉಡುಗೊರೆ ಕೊಟ್ಟಿದ್ದಾರೆ?

9 ಯೆಹೋವ ಮನುಷ್ಯರಿಗೆ ಮಕ್ಕಳನ್ನ ಮಾಡಿಕೊಳ್ಳೋ ಸಾಮರ್ಥ್ಯ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ತನ್ನನ್ನ ಪ್ರೀತಿಸೋಕೆ, ಆರಾಧಿಸೋಕೆ ಕಲಿಸೋ ಜವಾಬ್ದಾರಿನೂ ಕೊಟ್ಟಿದ್ದಾರೆ. ಹೆತ್ತವರೇ, ನಿಮಗೆ ಕೊಟ್ಟಿರೋ ಈ ಉಡುಗೊರೆಗೆ ನೀವು ತುಂಬ ಥ್ಯಾಂಕ್ಸ್‌ ಹೇಳಬೇಕು. ಯಾಕಂದ್ರೆ ತುಂಬ ಸಾಮರ್ಥ್ಯ ಇರೋ ದೇವದೂತರಿಗೂ ಕೊಡದೇ ಇರೋ ಜವಾಬ್ದಾರಿನ ಯೆಹೋವ ದೇವರು ನಿಮಗೆ ಕೊಟ್ಟಿದ್ದಾರೆ. ಇದನ್ನ ಮನಸ್ಸಲ್ಲಿ ಇಟ್ರೆ ಮಕ್ಕಳನ್ನ ಬೆಳೆಸೋದು ಭಾರ ಅಲ್ಲ, ಬಹುಮಾನ ಅನಿಸುತ್ತೆ. ಹೆತ್ತವರೇ, ನಿಮ್ಮ ಮಕ್ಕಳಿಗೆ “ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ ಕೊಡ್ತಾ” ಬೆಳೆಸೋದು ಒಂದು ಪವಿತ್ರವಾದ ಕೆಲಸ. ಯೆಹೋವ ದೇವರು ನಿಮ್ಮನ್ನ ನಂಬಿ ಆ ಕೆಲಸನಾ ನಿಮಗೆ ಕೊಟ್ಟಿದ್ದಾರೆ. (ಎಫೆ. 6:4; ಧರ್ಮೋ. 6:5-7; ಕೀರ್ತ. 127:3) ಆ ಜವಾಬ್ದಾರಿನ ಸರಿಯಾಗಿ ಮಾಡೋಕೆ ಯೆಹೋವನ ಸಂಘಟನೆಯಿಂದ ನಿಮಗೆ ಸಹಾಯ ಸಿಗುತ್ತೆ. ಬೈಬಲಾಧರಿತ ಪ್ರಕಾಶನಗಳಿಂದ, ವಿಡಿಯೋಗಳಿಂದ, ಸಂಗೀತಗಳಿಂದ ಮತ್ತು jw.org ವೆಬ್‌ಸೈಟಿಂದನೂ ನಿಮಗೆ ತುಂಬ ಸಹಾಯ ಸಿಗುತ್ತೆ. ಯೆಹೋವ ಮತ್ತು ಯೇಸುಗೆ ಮಕ್ಕಳಂದ್ರೆ ತುಂಬ ಇಷ್ಟ. ಅದಕ್ಕೆ ಅವರು ನಿಮಗೆ ಇಷ್ಟೆಲ್ಲಾ ಸಹಾಯ ಮಾಡ್ತಿದ್ದಾರೆ. (ಲೂಕ 18:15-17) ಯೆಹೋವನ ಮಾರ್ಗದರ್ಶನದ ಪ್ರಕಾರ ಹೆತ್ತವರು ಮಕ್ಕಳನ್ನ ಚೆನ್ನಾಗಿ ನೋಡಿಕೊಂಡ್ರೆ ಆತನಿಗೆ ತುಂಬ ಇಷ್ಟ ಆಗುತ್ತೆ. ಇದ್ರಿಂದ ಮಕ್ಕಳು ಯೆಹೋವ ದೇವರ ಕುಟುಂಬಕ್ಕೆ ಸೇರೋಕೆ ಹೆತ್ತವರು ಸಹಾಯ ಮಾಡಿದ ಹಾಗೆ ಆಗುತ್ತೆ.

10-11. ಬಿಡುಗಡೆ ಬೆಲೆಯಿಂದ ನಮಗೇನು ಪ್ರಯೋಜನ ಆಗಿದೆ?

10 ಯೆಹೋವ ದೇವರು ತನ್ನ ಮುದ್ದು ಮಗನನ್ನೇ ನಮಗೋಸ್ಕರ ಕೊಟ್ಟು ನಾವು ಪುನಃ ಆತನ ಕುಟುಂಬಕ್ಕೆ ಸೇರೋ ಅವಕಾಶ ಮಾಡಿ ಕೊಟ್ಟಿದ್ದಾರೆ. ಪ್ಯಾರ 4ರಲ್ಲಿ ನೋಡಿದ ಹಾಗೆ ಆದಾಮ ಹವ್ವ ಯೆಹೋವ ದೇವರ ಕುಟುಂಬದಲ್ಲಿರೋ ಅವಕಾಶ ಕಳಕೊಂಡರು. ಅವರ ಮಕ್ಕಳಿಗೂ ಜಾಗ ಇಲ್ಲದಿರೋ ತರ ಮಾಡಿಬಿಟ್ರು. (ರೋಮ. 5:12) ಆದಾಮ ಹವ್ವ ಬೇಕುಬೇಕು ಅಂತ ದೇವರ ಮಾತನ್ನ ಕೇಳದೇ ಇದ್ದದರಿಂದ ಅವರನ್ನ ತನ್ನ ಕುಟುಂಬದಿಂದ ಹೊರಗೆ ಹಾಕಿದ್ದು ತಪ್ಪೇನಲ್ಲ, ನ್ಯಾಯನೇ. ಆದ್ರೆ ಅವರ ಮಕ್ಕಳಿಗೆ ಏನಾಯ್ತು? ತನ್ನ ಮಾತನ್ನ ಕೇಳೋ ಜನರನ್ನ ದತ್ತು ತಗೊಂಡು ಮತ್ತೆ ತನ್ನ ಕುಟುಂಬಕ್ಕೆ ಸೇರೋ ಅವಕಾಶ ದೇವರು ಕೊಟ್ಟಿದ್ದಾರೆ. ತನ್ನ ಒಬ್ಬನೇ ಮಗನಾದ ಯೇಸು ಕ್ರಿಸ್ತನನ್ನ ನಮಗಾಗಿ ಬಿಡುಗಡೆಯ ಬೆಲೆಯಾಗಿ ಕೊಟ್ಟು ನಮ್ಮ ಮೇಲೆ ಪ್ರೀತಿ ತೋರಿಸಿದ್ದಾರೆ. (ಯೋಹಾ. 3:16; ರೋಮ. 5:19) ಯೇಸು ಮಾಡಿದ ಈ ತ್ಯಾಗದಿಂದಾಗಿ ನಿಯತ್ತಾಗಿರೋ 1,44,000 ಜನರನ್ನ ಯೆಹೋವ ದೇವರು ತನ್ನ ಮಕ್ಕಳಾಗಿ ಸ್ವರ್ಗಕ್ಕೆ ದತ್ತು ತಗೊಂಡಿದ್ದಾರೆ.—ರೋಮ. 8:15-17; ಪ್ರಕ. 14:1.

11 ಈ ಭೂಮಿ ಮೇಲೆ ಇನ್ನೂ ಲಕ್ಷಾಂತರ ಜನ ಯೆಹೋವನ ಮಾತು ಕೇಳ್ತಾ ಆತನಿಗೆ ಇಷ್ಟ ಆಗೋ ತರ ನಡ್ಕೊಳ್ತಾ ಇದ್ದಾರೆ. ಅವರಿಗೆ ಸಾವಿರ ವರ್ಷದ ಕೊನೆಯಲ್ಲಿ ಆಗೋ ಪರೀಕ್ಷೆಯ ನಂತರನೂ ದೇವರ ಕುಟುಂಬದಲ್ಲಿ ಇರೋ ಅವಕಾಶ ಸಿಗುತ್ತೆ. ಅದಕ್ಕಾಗಿ ಅವರು ಎದುರು ನೋಡುತ್ತಿದ್ದಾರೆ. (ಕೀರ್ತ. 25:14; ರೋಮ. 8:20, 21) ಈ ನಿರೀಕ್ಷೆ ಅವರಿಗೆ ಇರೋದ್ರಿಂದ ಈಗ್ಲಿಂದಾನೆ ಅವರು ಯೆಹೋವನನ್ನ “ಅಪ್ಪಾ” ಅಂತ ಕರೆಯುತ್ತಿದ್ದಾರೆ. (ಮತ್ತಾ. 6:9) ಇವರಷ್ಟೇ ಅಲ್ಲ, ಪುನರುತ್ಥಾನ ಆಗೋರು ಕೂಡ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋ ಅವಕಾಶ ಪಡಕೊಳ್ತಾರೆ. ಅವ್ರಲ್ಲಿ ಯೆಹೋವ ದೇವರ ಮಾತು ಕೇಳುವವರಿಗೆ ಕುಟುಂಬದ ಭಾಗವಾಗೋ ಅವಕಾಶವಿದೆ.

12. ನಾವೀಗ ಯಾವ ಪ್ರಶ್ನೆಗೆ ಉತ್ತರ ತಿಳಿದುಕೊಳ್ತೀವಿ?

12 ಇಲ್ಲಿ ತನಕ ಯೆಹೋವ ದೇವರು ನಮ್ಮನ್ನ ಹೇಗೆಲ್ಲಾ ಗೌರವಿಸಿದ್ದಾರೆ, ನಮಗೆ ಎಷ್ಟು ಪ್ರೀತಿ ತೋರಿಸಿದ್ದಾರೆ ಅಂತ ನೋಡಿದ್ವಿ. ದೇವರು ಈಗಾಗಲೇ ಅಭಿಷಿಕ್ತ ಕ್ರೈಸ್ತರನ್ನ ತನ್ನ ದತ್ತು ಮಕ್ಕಳಾಗಿ ತಗೊಂಡಿದ್ದಾರೆ. ಅಷ್ಟೇ ಅಲ್ಲ, ನಂಬಿಗಸ್ತರಾಗಿ ಸೇವೆ ಮಾಡುತ್ತಿರೋ ‘ದೊಡ್ಡ ಗುಂಪಿಗೆ’ ಮುಂದೆ ತನ್ನ ಮಕ್ಕಳಾಗೋ ಅವಕಾಶ ಕೊಟ್ಟಿದ್ದಾರೆ. (ಪ್ರಕ. 7:9) ನಾವು ಆತನ ಕುಟುಂಬದವರಾಗೋಕೆ ಇಷ್ಟ ಪಡ್ತೀವಿ ಅಂತ ಹೇಗೆಲ್ಲಾ ತೋರಿಸಬಹುದು?

ಯೆಹೋವ ದೇವರ ಕುಟುಂಬದವರಾಗೋಕೆ ಇಷ್ಟ ಇದೆ ಅಂತ ತೋರಿಸಿ

13. ಯೆಹೋವ ದೇವರ ಕುಟುಂಬದಲ್ಲಿ ನಾವು ಇರಬೇಕಂದ್ರೆ ಏನು ಮಾಡಬೇಕು? (ಮಾರ್ಕ 12:30)

13 ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡ್ತಾ ಆತನ ಮೇಲೆ ಪ್ರೀತಿ ಇದೆ ಅಂತ ತೋರಿಸಿ. (ಮಾರ್ಕ 12:30 ಓದಿ.) ಯೆಹೋವ ದೇವರು ನಮಗೆ ತುಂಬ ಉಡುಗೊರೆಗಳನ್ನ ಕೊಟ್ಟಿದ್ದಾರೆ. ಯೆಹೋವನನ್ನ ಆರಾಧಿಸೋ ಅವಕಾಶ ಆ ಎಲ್ಲಾ ಉಡುಗೊರೆಗಿಂತ ದೊಡ್ಡದು. ‘ಆತನ ಆಜ್ಞೆಗಳನ್ನ ಪಾಲಿಸೋ’ ಮೂಲಕ ನಾವು ಆತನನ್ನ ಪ್ರೀತಿಸ್ತೀವಿ ಅಂತ ತೋರಿಸ್ತೀವಿ. (1 ಯೋಹಾ. 5:3) ನಾವು ಯೇಸು ಕ್ರಿಸ್ತನ ಮಾತನ್ನ ಪಾಲಿಸಬೇಕು ಅಂತ ಯೆಹೋವ ದೇವರು ಬಯಸುತ್ತಾರೆ. ಜನರನ್ನ ಶಿಷ್ಯರಾಗಿ ಮಾಡಿ ಅವರಿಗೆ ದೀಕ್ಷಾಸ್ನಾನ ಮಾಡಿಸಿ ಅಂತ ಯೇಸು ನಮಗೆ ಆಜ್ಞೆ ಕೊಟ್ಟಿದ್ದಾರೆ. (ಮತ್ತಾ. 28:19) ಅಷ್ಟೇ ಅಲ್ಲ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಅಂತನೂ ಯೇಸು ಆಜ್ಞೆ ಕೊಟ್ಟಿದ್ದಾರೆ. (ಯೋಹಾ. 13:35) ಯಾರೆಲ್ಲಾ ಯೆಹೋವ ದೇವರ ಆಜ್ಞೆ ಪಾಲಿಸ್ತಾರೋ ಅವರನ್ನ ತನ್ನ ಲೋಕವ್ಯಾಪಕ ಕುಟುಂಬಕ್ಕೆ ಸೇರಿಸ್ತಾರೆ.—ಕೀರ್ತ. 15:1, 2.

14. ನಾವು ಬೇರೆಯವರನ್ನ ಹೇಗೆ ಪ್ರೀತಿಸಬೇಕು? (ಮತ್ತಾಯ 9:36-38; ರೋಮನ್ನರಿಗೆ 12:10)

14 ಬೇರೆಯವರಿಗೆ ಪ್ರೀತಿ ತೋರಿಸಿ. ಯೆಹೋವ ದೇವರಲ್ಲಿ ಎದ್ದುಕಾಣುವ ಗುಣನೇ ಪ್ರೀತಿ. (1 ಯೋಹಾ. 4:8) ನಾವು ಯೆಹೋವನನ್ನ ತಿಳಿದುಕೊಳ್ಳೋ ಮುಂಚೆನೇ ಆತನು ನಮ್ಮನ್ನ ಪ್ರೀತಿಸಿದ್ದಾನೆ. (1 ಯೋಹಾ. 4:9, 10) ನಾವು ಯೆಹೋವನ ತರಾನೇ ಬೇರೆಯವರನ್ನ ಪ್ರೀತಿಸಬೇಕು. (ಎಫೆ. 5:1) ನಾವು ಅವರನ್ನ ಪ್ರೀತಿಸೋ ಒಂದು ವಿಧ ಅವರಿಗೆ ಯೆಹೋವ ದೇವರ ಬಗ್ಗೆ ಕಲಿಯೋಕೆ ಸಹಾಯ ಮಾಡೋದು. ನಾವು ಅದನ್ನ ಈಗಲೇ ಮಾಡಬೇಕು. (ಮತ್ತಾಯ 9:36-38 ಓದಿ.) ಆಗ ಅವರೂ ಯೆಹೋವನ ಕುಟುಂಬದವರಾಗೋಕೆ ಸಹಾಯ ಮಾಡಿದ ಹಾಗೆ ಆಗುತ್ತೆ. ಒಬ್ಬ ವ್ಯಕ್ತಿ ದೇವರ ಬಗ್ಗೆ ಕಲಿತು ದೀಕ್ಷಾಸ್ನಾನ ತಗೊಂಡ ಮೇಲೂ ನಾವು ಆ ವ್ಯಕ್ತಿಯನ್ನ ಪ್ರೀತಿಸುತ್ತಾ ಇರಬೇಕು ಮತ್ತು ಗೌರವಿಸಬೇಕು. (1 ಯೋಹಾ. 4:20, 21) ನಾವು ಇದನ್ನ ಹೇಗೆ ಮಾಡಬಹುದು ಅಂದ್ರೆ ನಾವು ಅವರನ್ನ ನಂಬಬೇಕು, ಅವರ ಮೇಲೆ ಸಂಶಯ ಪಡಬಾರದು. ಉದಾಹರಣೆಗೆ ಆ ವ್ಯಕ್ತಿ ಒಂದು ಕೆಲಸ ಮಾಡಿದಾಗ ಅದನ್ನ ಒಳ್ಳೇ ಉದ್ದೇಶದಿಂದ ಮಾಡಿದ್ದಾನೆ ಅಂತ ಯೋಚಿಸಬೇಕು. ಅವನು ಸ್ವಾರ್ಥಕ್ಕಾಗಿ ಮಾಡಿದ್ದಾನೆ ಅಂತ ಯೋಚಿಸಬಾರದು. ನಾವು ಅವರಿಗೆ ಗೌರವ ತೋರಿಸಬೇಕು ಮತ್ತು ಅವರನ್ನ ನಮಗಿಂತ ಶ್ರೇಷ್ಠವಾಗಿ ನೋಡಬೇಕು.—ರೋಮನ್ನರಿಗೆ 12:10 ಓದಿ; ಫಿಲಿ. 2:3.

15. ನಾವು ಯಾರಿಗೆಲ್ಲಾ ದಯೆ, ಕರುಣೆ ತೋರಿಸಬೇಕು?

15 ಎಲ್ಲರಿಗೂ ಕರುಣೆ, ಅನುಕಂಪ ತೋರಿಸಿ. ನಾವು ಯೆಹೋವ ದೇವರ ಕುಟುಂಬದವರಾಗಬೇಕು ಅಂದ್ರೆ ಬೈಬಲಲ್ಲಿ ಹೇಳಿರೋದನ್ನ ಜೀವನದಲ್ಲಿ ಪಾಲಿಸಬೇಕು. ಉದಾಹರಣೆಗೆ, ನಾವು ಎಲ್ಲರಿಗೂ ಅಂದರೆ ಶತ್ರುಗಳಿಗೂ ದಯೆ, ಕರುಣೆ ತೋರಿಸಬೇಕು ಅಂತ ಯೇಸು ಕಲಿಸಿಕೊಟ್ಟಿದ್ದಾರೆ. (ಲೂಕ 6:32-36) ಇದನ್ನ ಮಾಡೋಕೆ ಕೆಲವೊಮ್ಮೆ ನಮಗೆ ಕಷ್ಟ ಅನಿಸಬಹುದು. ಆದ್ರೆ ಯೇಸು ತರ ಯೋಚನೆ ಮಾಡೋಕೆ, ಆತನ ತರ ನಡ್ಕೊಳ್ಳೋಕೆ ನಾವು ಕಲಿಬೇಕು. ನಾವು ಯೆಹೋವ ದೇವರ ಮಾತು ಕೇಳಿದ್ರೆ ಮತ್ತು ಯೇಸು ತರ ನಡ್ಕೊಳ್ಳೋಕೆ ಪ್ರಯತ್ನ ಹಾಕಿದ್ರೆ ಯೆಹೋವ ದೇವರ ಕುಟುಂಬದವರಾಗೋಕೆ ನಮಗೆ ಇಷ್ಟ ಇದೆ ಅಂತ ತೋರಿಸಿಕೊಡ್ತೀವಿ.

16. ಯೆಹೋವ ದೇವರ ಕುಟುಂಬದ ಹೆಸರನ್ನ ಉಳಿಸೋಕೆ ನಾವೇನು ಮಾಡಬೇಕು?

16 ಯೆಹೋವನ ಕುಟುಂಬದ ಹೆಸರನ್ನ ಉಳಿಸಿ. ಸಾಮಾನ್ಯವಾಗಿ ಕುಟುಂಬದಲ್ಲಿ ದೊಡ್ಡ ಮಕ್ಕಳು ಏನು ಮಾಡ್ತಾರೋ ಅದನ್ನ ನೋಡಿ ಚಿಕ್ಕವರೂ ಹಾಗೇ ಮಾಡ್ತಾರೆ. ಅವರು ಬೈಬಲಲ್ಲಿ ಇರೋ ತರ ನಡಕೊಂಡ್ರೆ ಚಿಕ್ಕವರಿಗೆ ಒಳ್ಳೇ ಮಾದರಿಯಾಗಿ ಇರ್ತಾರೆ. ಅವರೇನಾದ್ರು ತಪ್ಪು ಮಾಡಿಬಿಟ್ರೆ ಚಿಕ್ಕವರೂ ಅದನ್ನೇ ಮಾಡಿಬಿಡಬಹುದು. ಯೆಹೋವನ ಕುಟುಂಬದಲ್ಲೂ ಹೀಗೆನೇ. ಯೆಹೋವನನ್ನ ಪ್ರೀತಿಸೋ ಒಬ್ಬ ವ್ಯಕ್ತಿ ಧರ್ಮಭ್ರಷ್ಟನಾದ್ರೆ ಅಥವಾ ಅನೈತಿಕ ಜೀವನ ನಡೆಸಿದ್ರೆ, ಬೇರೆಯವರೂ ಅವನನ್ನ ನೋಡಿ ತಪ್ಪು ದಾರಿ ಹಿಡೀತಾರೆ. ಇದರಿಂದ ಯೆಹೋವ ದೇವರ ಕುಟುಂಬದ ಹೆಸರು ಹಾಳಾಗುತ್ತೆ. (1 ಥೆಸ. 4:3-8) ಆದ್ರೆ ನಾವು ಇವರನ್ನ ನೋಡಿ ಕಲಿಬಾರದು. ಯಾವ ವಿಷಯನೂ ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ಬಿಟ್ಟುಕೊಡಬಾರದು.

17. ನಮ್ಮಲ್ಲಿ ಯಾವ ಯೋಚನೆ ಬರೋಕೆ ಬಿಡಬಾರದು ಮತ್ತು ಯಾಕೆ?

17 ಹಣ ಆಸ್ತಿ ಮೇಲಲ್ಲ, ಯೆಹೋವನ ಮೇಲೆ ನಂಬಿಕೆ ಇಡಿ. ನಾವು ದೇವರ ಆಳ್ವಿಕೆಗೆ ಮತ್ತು ಆತನ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಟ್ರೆ ನಮಗೆ ಊಟ, ಬಟ್ಟೆ ಮತ್ತು ಇರೋಕೆ ಮನೆ ಕೊಡ್ತೀನಿ ಅಂತ ದೇವರು ಮಾತುಕೊಟ್ಟಿದ್ದಾರೆ. (ಕೀರ್ತ. 55:22; ಮತ್ತಾ. 6:33) ನಾವು ಈ ಮಾತಿನ ಮೇಲೆ ನಂಬಿಕೆ ಇಟ್ರೆ ಹಣ ಆಸ್ತಿ ನಮ್ಮನ್ನು ರಕ್ಷಿಸುತ್ತೆ, ಅದ್ರಿಂದಾನೇ ನಮಗೆ ಖುಷಿ ಸಿಗೋದು ಅಂತೆಲ್ಲಾ ಯೋಚನೆ ಮಾಡಲ್ಲ. ಯೆಹೋವ ದೇವರಿಗೆ ಏನು ಇಷ್ಟಾನೋ ಅದನ್ನ ಮಾಡೋದ್ರಿಂದಾನೇ ಖುಷಿ ಸಿಗೋದು ಅಂತ ನಮಗೆ ಅರ್ಥ ಆಗುತ್ತೆ. (ಫಿಲಿ. 4:6, 7) ತುಂಬ ವಸ್ತುಗಳನ್ನ ನಮ್ಮಿಂದ ತಗೊಳ್ಳೋಕೆ ಆಗೋದಾದ್ರೂ ಅದನ್ನ ನೋಡಿಕೊಳ್ಳೋಕೆ ಆಗುತ್ತಾ, ಅದನ್ನ ನಿಜವಾಗಲೂ ಬಳಸ್ತೀವಾ ಅಂತ ಯೋಚನೆ ಮಾಡಬೇಕು. ಎಚ್ಚರವಹಿಸಿಲ್ಲಾಂದ್ರೆ ಹಣ ಆಸ್ತಿ ಮಾಡೋದ್ರಲ್ಲೇ ಗಮನ ಹೋಗಿಬಿಡುತ್ತೆ. ಆದ್ರೆ ನಮಗೆ ದೇವರು ಕೊಟ್ಟಿರೋ ಕೆಲಸ ತುಂಬ ಇದೆ, ಅದನ್ನ ನಾವು ಮಾಡಬೇಕು ಅದಕ್ಕೆ ಸಮಯ ಕೊಡಬೇಕು. ನಮ್ಮ ಗಮನ ಎಲ್ಲಾ ದೇವರ ಕೆಲಸದ ಮೇಲೆ ಇರಬೇಕು, ಬೇರೆ ಕಡೆ ಹೋಗೋಕೆ ಬಿಡಬಾರದು. ಹೀಗೆ ಮಾಡಿದ್ರೆ ನಾವು ಶ್ರೀಮಂತ ಯುವ ವ್ಯಕ್ತಿ ತರ ಇವತ್ತು ಇದ್ದು ನಾಳೆ ಹೋಗೋ ಆಸ್ತಿಗೋಸ್ಕರ ಯೆಹೋವ ದೇವರ ಸೇವೆನ, ಆತನ ಮಕ್ಕಳಾಗೋ ಅವಕಾಶನ ಕಳಕೊಳ್ಳಲ್ಲ.—ಮಾರ್ಕ 10:17-22.

ದೇವರ ಮಕ್ಕಳಿಗೆ ಸಿಗೋ ಆಶೀರ್ವಾದಗಳು

18. ಭೂಮಿ ಮೇಲೆ ನಿರೀಕ್ಷೆ ಇರೋ ಯೆಹೋವನ ಮಕ್ಕಳಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

18 ದೇವರ ಮಕ್ಕಳಿಗೆ ಸಿಗೋ ಆಶೀರ್ವಾದಗಳಲ್ಲಿ ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಯಾವುದು ಗೊತ್ತಾ? ಯೆಹೋವ ದೇವರನ್ನ ಪ್ರೀತಿಸ್ತಾ ಆತನನ್ನ ಶಾಶ್ವತವಾಗಿ ಆರಾಧಿಸೋ ಸುಯೋಗ. ಈ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋರು ಯೆಹೋವ ದೇವರು ಕೊಟ್ಟಿರೋ ಈ ಸುಂದರವಾದ ಮನೆಯನ್ನು ಚೆನ್ನಾಗಿ ನೋಡಿಕೊಳ್ತಾರೆ. ಆದಷ್ಟು ಬೇಗ ಈ ಭೂಮಿ ಸುಂದರ ಆಗುತ್ತೆ ಮತ್ತು ನಮ್ಮ ಜೀವನ ಆನಂದ ಸಾಗರ ಆಗುತ್ತೆ. ಆದಾಮ ಹವ್ವ ಯೆಹೋವನ ಕುಟುಂಬನ ಬಿಟ್ಟು ಹೋದಾಗ ಏನೆಲ್ಲಾ ಕಷ್ಟಗಳು ನಮಗೆ ಬಂತೋ ಅದನ್ನೆಲ್ಲಾ ಯೇಸು ತೆಗೆದು ಹಾಕ್ತಾರೆ. ತೀರಿಹೋಗಿರೋ ಕೊಟ್ಯಾಂತರ ಜನರನ್ನ ಯೆಹೋವ ದೇವರು ಮತ್ತೆ ಬದುಕಿಸುತ್ತಾರೆ. ಅವರಿಗೆ ಈ ಭೂಮಿ ಪರದೈಸ್‌ ಆದಮೇಲೆ ಒಳ್ಳೇ ಆರೋಗ್ಯದಿಂದ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ. (ಲೂಕ 23:42, 43) ಯೆಹೋವನ ಕುಟುಂಬದಲ್ಲಿರೋ ಆತನ ಆರಾಧಕರು ಪರಿಪೂರ್ಣರಾಗ್ತಾರೆ, ಅವರಿಗೆ ದಾವೀದ ಹೇಳಿದ ಹಾಗೆ “ಗೌರವ ಮತ್ತು ವೈಭವ” ಸಿಗುತ್ತೆ.—ಕೀರ್ತ. 8:5.

19. ನಾವು ಯಾವುದನ್ನ ನೆನೆಸಿಕೊಳ್ತಾ ಇರಬೇಕು?

19 ನೀವು ‘ದೊಡ್ಡ ಗುಂಪಿಗೆ’ ಸೇರಿದವರಾದ್ರೆ ನಿಮಗೆ ಅದ್ಭುತವಾದ ಆಶೀರ್ವಾದಗಳು ಸಿಗುತ್ತೆ. ಯೆಹೋವ ದೇವರು ನಿಮ್ಮನ್ನ ತುಂಬ ಪ್ರೀತಿಸ್ತಾರೆ, ನೀವು ಆತನ ಕುಟುಂಬದವರಾಗಬೇಕು ಅಂತ ದೇವರು ಬಯಸ್ತಾರೆ. ಹಾಗಾಗಿ ಆತನನ್ನ ಮೆಚ್ಚಿಸೋಕೆ ನಿಮ್ಮ ಕೈಲಾಗಿದ್ದನ್ನೆಲ್ಲಾ ಮಾಡಿ. ಯೆಹೋವ ದೇವರು ಕೊಡೋ ಆಶೀರ್ವಾದಗಳ ಬಗ್ಗೆ ಪ್ರತಿ ದಿನ ನೆನೆಸಿಕೊಳ್ತಾ ಇರಿ. ನಮ್ಮ ಪ್ರೀತಿಯ ತಂದೆಯಾದ ಯೆಹೋವನನ್ನ ಆರಾಧಿಸೋಕೆ ಸಿಕ್ಕಿರೋ ಈ ಸುಯೋಗ ಒಂದು ಉಡುಗೊರೆ. ಹಾಗಾಗಿ ಯಾವಾಗ್ಲೂ ಆತನನ್ನ ಆರಾಧಿಸುತ್ತಾ ಆತನಿಗೆ ಚಿರಋಣಿಗಳಾಗಿರಿ.

ನಿಮ್ಮ ಉತ್ತರವೇನು?

  • ಯೆಹೋವ ದೇವರು ನಮ್ಮನ್ನ ಪ್ರೀತಿಸ್ತಾರೆ, ಗೌರವಿಸ್ತಾರೆ ಅಂತ ಹೇಗೆ ತೋರಿಸಿ ಕೊಟ್ಟಿದ್ದಾರೆ?

  • ನಾವು ಯೆಹೋವ ದೇವರ ಕುಟುಂಬದವರಾಗೋಕೆ ಇಷ್ಟ ಪಡ್ತೀವಿ ಅಂತ ಹೇಗೆ ತೋರಿಸಿಕೊಡ್ತೀವಿ?

  • ದೇವರ ಮಕ್ಕಳಿಗೆ ಮುಂದೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

ಗೀತೆ 50 ಪ್ರೀತಿಯ ದೈವಿಕ ಆದರ್ಶ

a ಒಂದು ಕುಟುಂಬ ಚೆನ್ನಾಗಿರಬೇಕು ಅಂದ್ರೆ ಆ ಕುಟುಂಬದಲ್ಲಿರೋ ಪ್ರತಿಯೊಬ್ರೂ ತಾವು ಏನೇನು ಮಾಡಬೇಕು ಅಂತ ಚೆನ್ನಾಗಿ ತಿಳುಕೊಂಡಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ತಂದೆ ಮುಂದೆ ನಿಂತು ಕುಟುಂಬದಲ್ಲಿ ಎಲ್ಲಾ ನೋಡಿಕೊಳ್ತಾರೆ, ಅದಕ್ಕೆ ತಾಯಿ ಬೆಂಬಲ ಕೊಡುತ್ತಾರೆ. ಮಕ್ಕಳು ತಂದೆ-ತಾಯಿ ಮಾತನ್ನ ಕೇಳಬೇಕು. ಯೆಹೋವ ದೇವರ ಕುಟುಂಬನೂ ಇದೇ ತರ ಇದೆ. ನಮ್ಮ ತಂದೆಯಾಗಿರೋ ಯೆಹೋವ ನಾವೇನು ಮಾಡಬೇಕು ಅಂತ ಹೇಳಿದ್ದಾರೆ. ಅದನ್ನ ಮಾಡುತ್ತಾ ನಾವೆಲ್ರೂ ಒಗ್ಗಟ್ಟಾಗಿ ಇರೋದಾದ್ರೆ ಖುಷಿಖುಷಿಯಾಗಿ ಯೆಹೋವನನ್ನ ಆರಾಧಿಸ್ತಾ ಆತನ ಕುಟುಂಬದಲ್ಲಿ ನಾವು ಶಾಶ್ವತವಾಗಿ ಇರ್ತೀವಿ.

b ಚಿತ್ರ ವಿವರಣೆ ಪುಟ: ಯೆಹೋವ ದೇವರು ಆತನ ಗುಣಗಳನ್ನ ನಮ್ಮಲ್ಲಿಟ್ಟು ಸೃಷ್ಟಿ ಮಾಡಿದ್ದಾರೆ. ಒಬ್ಬ ದಂಪತಿ ಆ ಗುಣಗಳನ್ನ ಒಬ್ಬರಿಗೊಬ್ರು ಮತ್ತು ಮಕ್ಕಳಿಗೂ ತೋರಿಸ್ತಿದ್ದಾರೆ. ಈ ದಂಪತಿ ಯೆಹೋವನನ್ನ ಪ್ರೀತಿಸ್ತಿದ್ದಾರೆ. ಹಾಗಾಗಿ ತಮ್ಮ ಮಕ್ಕಳಿಗೂ ಯೆಹೋವನನ್ನ ಪ್ರೀತಿಸೋಕೆ ಮತ್ತು ಆರಾಧಿಸೋಕೆ ಕಲಿಸಿಕೊಡ್ತಿದ್ದಾರೆ. ಯೆಹೋವ ದೇವರು ಯೇಸುವನ್ನು ನಮಗೋಸ್ಕರ ಬಿಡುಗಡೆ ಬೆಲೆಯಾಗಿ ಯಾಕೆ ಕೊಟ್ರು ಅಂತ ವಿಡಿಯೋ ತೋರಿಸಿ ಹೇಳಿಕೊಡ್ತಿದ್ದಾರೆ. ಅಷ್ಟೇ ಅಲ್ಲ, ಮುಂದೆ ಪರದೈಸ್‌ ಬಂದಾಗ ಈ ಭೂಮಿಯನ್ನ ಮತ್ತು ಪ್ರಾಣಿಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತಾನೂ ಕಲಿಸಿಕೊಡ್ತಾ ಇದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ