ಅಧ್ಯಯನ ಲೇಖನ 22
ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?
ಮದುವೆ ಆಗೋ ಮುಂಚೆ ಒಳ್ಳೇ ತೀರ್ಮಾನ ಮಾಡೋದು ಹೇಗೆ?
‘ಒಳಗಿನ ರಹಸ್ಯ ವ್ಯಕ್ತಿಗೆ ಬೆಲೆ ಜಾಸ್ತಿ.’—1 ಪೇತ್ರ 3:4, ಪಾದಟಿಪ್ಪಣಿ.
ಈ ಲೇಖನದಲ್ಲಿ ಏನಿದೆ?
ಡೇಟಿಂಗ್ ಮಾಡ್ತಿರೋ ಹುಡುಗ ಹುಡುಗಿ ಒಳ್ಳೆ ತೀರ್ಮಾನ ಮಾಡೋಕೆ ಏನು ಮಾಡಬೇಕು ಮತ್ತು ಸಭೆಯಲ್ಲಿ ಇರೋರು ಅವರಿಗೆ ಹೇಗೆ ಬೆಂಬಲ ಕೊಡಬಹುದು ಅಂತ ನೋಡೋಣ.
1-2. ಡೇಟಿಂಗ್ ಬಗ್ಗೆ ಕೆಲವರು ಏನು ಹೇಳ್ತಾರೆ?
ಡೇಟಿಂಗ್ ಮಾಡೋ ಸಮಯದಲ್ಲಿ ಹುಡುಗ ಹುಡುಗಿ ತುಂಬ ಖುಷಿಯಾಗಿರ್ತಾರೆ. ಒಂದುವೇಳೆ ನೀವೀಗ ಡೇಟಿಂಗ್ ಮಾಡ್ತಿರೋದಾದ್ರೆ ಎಲ್ಲ ಚೆನ್ನಾಗಿ ಆಗಬೇಕು ಅಂತ ನೀವು ಆಸೆಪಡ್ತೀರ ಅಲ್ವಾ? ಹೆಚ್ಚಿನವ್ರಿಗೆ ಡೇಟಿಂಗ್ ಚೆನ್ನಾಗೇ ಆಗಿದೆ. ಇಥಿಯೋಪಿಯಾದಲ್ಲಿರೋ ಸೆಯಾನ್a ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ. “ನಾನು, ನನ್ನ ಗಂಡ ಡೇಟಿಂಗ್ ಮಾಡುವಾಗ ತುಂಬ ಖುಷಿಯಾಗಿದ್ವಿ. ನಾವು ತುಂಬ ಪ್ರಾಮುಖ್ಯವಾದ ವಿಷ್ಯಗಳ ಬಗ್ಗೆ ಮಾತಾಡಿದ್ವಿ, ತುಂಬ ನಗಾಡಿದ್ವಿ. ನಾನು ಪ್ರೀತಿಸೋ ಮತ್ತು ನನ್ನನ್ನ ಪ್ರೀತಿಸೋ ಒಬ್ಬ ವ್ಯಕ್ತಿಯನ್ನ ಕಂಡ್ಕೊಂಡಿದ್ದಕ್ಕೆ ತುಂಬ ಖುಷಿಯಾಯ್ತು.”
2 ಆದ್ರೆ ಡೇಟಿಂಗ್ ಬಗ್ಗೆ ನೆದರ್ಲೆಂಡ್ಸ್ನಲ್ಲಿರೋ ಸಹೋದರ ಅಲೇಷಿಯಾ ಏನು ಹೇಳ್ತಾರೆ ನೋಡಿ. “ನಾವು ಡೇಟಿಂಗ್ ಮಾಡ್ತಿರುವಾಗ ತುಂಬ ಖುಷಿಯಾಗಿದ್ವಿ. ಯಾಕಂದ್ರೆ ನನ್ನ ಹೆಂಡ್ತಿ ಬಗ್ಗೆ ಆಗ ನನಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಯ್ತು. ಆದ್ರೆ ಹೋಗ್ತಾಹೋಗ್ತಾ ಕೆಲವೊಂದು ಸಮಸ್ಯೆಗಳೂ ಬಂತು” ಅಂತ ಅವರು ಹೇಳ್ತಾರೆ. ನಾವು ಈ ಲೇಖನದಲ್ಲಿ ಡೇಟಿಂಗ್ ಮಾಡುವಾಗ ಏನೆಲ್ಲಾ ಸಮಸ್ಯೆಗಳು ಬರಬಹುದು ಅಂತ ನೋಡೋಣ ಮತ್ತು ಆ ಸಮಯದಲ್ಲಿ ಒಳ್ಳೆ ನಿರ್ಣಯ ಮಾಡೋಕೆ ಯಾವ ಬೈಬಲ್ ತತ್ವಗಳು ಸಹಾಯ ಮಾಡುತ್ತೆ ಅಂತ ಕಲಿಯೋಣ. ಅಷ್ಟೇ ಅಲ್ಲ ಸಭೆಯಲ್ಲಿ ಇರೋರು ಡೇಟಿಂಗ್ ಮಾಡೋರಿಗೆ ಹೇಗೆ ಸಹಾಯ ಮಾಡಬಹುದು ಅಂತಾನೂ ಚರ್ಚಿಸೋಣ.
ಡೇಟಿಂಗ್ ಮಾಡೋದ್ರ ಉದ್ದೇಶ ಏನು?
3. ಡೇಟಿಂಗ್ ಮಾಡೋದ್ರ ಉದ್ದೇಶ ಏನು? (ಜ್ಞಾನೋಕ್ತಿ 20:25)
3 ಡೇಟಿಂಗ್ ಮಾಡೋದು ಚೆನ್ನಾಗೇ ಇರುತ್ತೆ. ಆದ್ರೆ ಇದನ್ನ ಒಂದು ಚಿಕ್ಕ ವಿಷ್ಯವಾಗಿ ನೋಡಬಾರದು. ಯಾಕಂದ್ರೆ ಒಂದು ಹುಡುಗ, ಹುಡುಗಿ ಮದುವೆ ಆಗಬೇಕಾ ಅಂತ ತೀರ್ಮಾನ ಮಾಡೋದು ಡೇಟಿಂಗ್ ಮಾಡೋವಾಗನೇ. ಮದುವೆ ದಿನದಲ್ಲಿ ಹುಡುಗ ಹುಡುಗಿ ಬದುಕಿರೋ ತನಕ ಸಂಗಾತಿಯನ್ನ ಪ್ರೀತಿಸ್ತಾರೆ, ಗೌರವಿಸ್ತಾರೆ ಅಂತ ಯೆಹೋವನ ಮುಂದೆ ಮಾತು ಕೊಡ್ತಾರೆ. ಹಾಗಾಗಿ ಯಾವುದೇ ಒಂದು ಮಾತು ಕೊಡೊ ಮುಂಚೆ ಚೆನ್ನಾಗಿ ಯೋಚ್ನೆ ಮಾಡಬೇಕು. (ಜ್ಞಾನೋಕ್ತಿ 20:25 ಓದಿ.) ಅದಕ್ಕೇ ಡೇಟಿಂಗ್ ಮಾಡ್ತಿರೋ ಹುಡುಗ, ಹುಡುಗಿ ಮದುವೆ ಆಗ್ತೀನಿ ಅಂತ ಮಾತು ಕೊಡುವಾಗ ಚೆನ್ನಾಗಿ ಯೋಚ್ನೆ ಮಾಡಬೇಕು. ಡೇಟಿಂಗ್ ಮಾಡುವಾಗ ಒಬ್ಬ ಹುಡುಗ ಹುಡುಗಿ ಒಬ್ರನ್ನೊಬ್ರು ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ಆಗುತ್ತೆ ಮತ್ತು ಒಳ್ಳೆ ತೀರ್ಮಾನ ತಗೊಳ್ಳೋಕೆ ಆಗುತ್ತೆ. ಹಾಗಾಗಿ ಕೆಲವರು ಮದುವೆ ಆಗ್ತೀನಿ ಅಂತ ತೀರ್ಮಾನ ಮಾಡಬಹುದು. ಇನ್ನು ಕೆಲವರು ಮದುವೆ ಆಗಲ್ಲ ಅಂತ ತೀರ್ಮಾನ ಮಾಡಬಹುದು. ಮದುವೆ ಆಗಲ್ಲ ಅಂತ ತೀರ್ಮಾನ ಮಾಡಿದ್ರೆ ಅದು ತಪ್ಪಲ್ಲ. ಯಾಕಂದ್ರೆ ಡೇಟಿಂಗ್ನ ಉದ್ದೇಶ ಒಬ್ಬ ವ್ಯಕ್ತಿನ ಚೆನ್ನಾಗಿ ತಿಳ್ಕೊಂಡು ಸರಿಯಾದ ನಿರ್ಣಯ ಮಾಡೋದೇ.
4. ಡೇಟಿಂಗ್ ಮಾಡೋದ್ರ ಉದ್ದೇಶ ಏನು ಅಂತ ತಿಳ್ಕೊಳೋದು ಯಾಕೆ ಪ್ರಾಮುಖ್ಯ?
4 ಡೇಟಿಂಗ್ನ ಉದ್ದೇಶ ಏನು ಅಂತ ತಿಳ್ಕೊಳ್ಳೋದು ತುಂಬ ಪ್ರಾಮುಖ್ಯ ಯಾಕೆ? ಇದ್ರ ಉದ್ದೇಶ ತಿಳ್ಕೊಂಡ್ರೆ ಒಬ್ಬ ಹುಡುಗ, ಹುಡುಗಿ ಮದುವೆ ಆಗೋ ಉದ್ದೇಶ ಇಲ್ಲದೇ ಸುಮ್ಸುಮ್ಮನೆ ಡೇಟಿಂಗ್ ಮಾಡೋಕೆ ಹೋಗಲ್ಲ. ಮದುವೆ ಆಗೋರು ಮಾತ್ರ ಅಲ್ಲ, ಎಲ್ರೂ ಈ ವಿಷ್ಯದ ಬಗ್ಗೆ ಚೆನ್ನಾಗಿ ತಿಳ್ಕೊಂಡಿರಬೇಕು. ಯಾಕಂದ್ರೆ ಒಂದು ಹುಡುಗ ಹುಡುಗಿ ಡೇಟಿಂಗ್ ಮಾಡ್ತಿದ್ರೆ ಅವರು ಮದುವೆ ಆಗ್ಲೇಬೇಕು ಅಂತ ಕೆಲವರು ಅಂದ್ಕೊಳ್ತಾರೆ. ಈ ತರ ಮಾಡಿದ್ರೆ ಮದುವೆ ಆಗದೆ ಇರೋರಿಗೆ ಹೇಗೆ ಅನಿಸುತ್ತೆ? ಅಮೆರಿಕದಲ್ಲಿರೋ ಮದುವೆ ಆಗದಿರೋ ಮೆಲಿಸಾ ಅನ್ನೋ ಸಹೋದರಿ ಹೀಗೆ ಹೇಳ್ತಾರೆ: “ಒಂದು ಹುಡುಗ ಹುಡುಗಿ ಡೇಟಿಂಗ್ ಮಾಡುವಾಗ ಅವರು ಮದುವೆ ಆಗ್ಲೇಬೇಕು ಅಂತ ಕೆಲವು ಸಹೋದರ ಸಹೋದರಿಯರು ಅಂದ್ಕೊಳ್ತಾರೆ. ಇದ್ರಿಂದ ಹುಡುಗ ಹುಡುಗಿಗೆ ತುಂಬ ಒತ್ತಡ ಆಗುತ್ತೆ. ಅದಕ್ಕೇ ಕೆಲವ್ರಿಗೆ ಡೇಟಿಂಗ್ ನಿಲ್ಲಿಸಬೇಕು ಅಂತ ಅನಿಸಿದ್ರೂ ಅವರು ಅದನ್ನ ನಿಲ್ಲಿಸಲ್ಲ. ಇನ್ನು ಕೆಲವರು ಡೇಟಿಂಗ್ ಮಾಡೋದೇ ಬೇಡ. ಸುಮ್ನೆ ಯಾಕೆ ತಲೆನೋವು ಅಂದ್ಕೊಳ್ತಾರೆ.”
ಒಬ್ರನ್ನೊಬ್ರು ಚೆನ್ನಾಗಿ ತಿಳ್ಕೊಳ್ಳಿ
5-6. ಡೇಟಿಂಗ್ ಮಾಡುವಾಗ ಯಾವೆಲ್ಲ ವಿಷ್ಯಗಳನ್ನ ತಿಳ್ಕೊಬೇಕು? (1 ಪೇತ್ರ 3:4)
5 ಡೇಟಿಂಗ್ ಮಾಡುವಾಗ ಆ ವ್ಯಕ್ತಿನ ಮದುವೆ ಆಗ್ತೀರಾ ಇಲ್ವಾ ಅಂತ ಹೇಗೆ ತೀರ್ಮಾನ ಮಾಡ್ತೀರಾ? ಮೊದ್ಲು ನೀವು ಅವ್ರನ್ನ ಚೆನ್ನಾಗಿ ತಿಳ್ಕೊಳ್ಳಿ. ಡೇಟಿಂಗ್ ಮಾಡೋ ಮುಂಚೆ ನೀವು ಆ ವ್ಯಕ್ತಿ ಬಗ್ಗೆ ಕೆಲವು ವಿಷ್ಯಗಳನ್ನ ತಿಳ್ಕೊಂಡಿರುತ್ತೀರ. ಆದ್ರೆ ಡೇಟಿಂಗ್ ಶುರುಮಾಡಿದ ಮೇಲೆ ಅವ್ರ ‘ಒಳಗಿನ ರಹಸ್ಯ ವ್ಯಕ್ತಿಯನ್ನ’ ತಿಳ್ಕೊಳ್ಳೋಕೆ ಅವಕಾಶ ಸಿಗುತ್ತೆ. (1 ಪೇತ್ರ 3:4 ಓದಿ.) ಅಂದ್ರೆ ಅವ್ರಿಗೆ ಯೆಹೋವನ ಜೊತೆ ಎಷ್ಟು ಒಳ್ಳೆ ಸಂಬಂಧ ಇದೆ, ಅವರು ಎಂಥ ವ್ಯಕ್ತಿಯಾಗಿದ್ದಾರೆ, ಅವರು ಯಾವ ರೀತಿ ಯೋಚಿಸ್ತಾರೆ ಅನ್ನೋದನ್ನ ತಿಳ್ಕೊಳಿ. ಆಗ ನಿಮಗೆ, ‘ಈ ವ್ಯಕ್ತಿ ನನಗೆ ಸರಿಯಾದ ಜೋಡಿ ಆಗಿದ್ದಾರಾ?’ (ಜ್ಞಾನೋ. 31:26, 27, 30; ಎಫೆ. 5:33; 1 ತಿಮೊ. 5:8) ‘ನಾವಿಬ್ರೂ ಒಬ್ರಿಗೊಬ್ರು ಪ್ರೀತಿ, ಕಾಳಜಿ ತೋರಿಸೋಕೆ ಆಗುತ್ತಾ? ಒಬ್ರು ಇನ್ನೊಬ್ರಲ್ಲಿರೋ ಕುಂದುಕೊರತೆಗಳನ್ನ ಸಹಿಸ್ಕೊಂಡು ಜೀವನ ಮಾಡೋಕೆ ಆಗುತ್ತಾ?’ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ. (ರೋಮ. 3:23) ಈ ತರ ನೀವು ಒಬ್ರನ್ನೊಬ್ರು ಚೆನ್ನಾಗಿ ತಿಳ್ಕೊಳ್ಳುವಾಗ ಒಂದು ವಿಷ್ಯ ನೆನಪಿಡಿ. ನೀವಿಬ್ರು ಒಂದೇ ತರ ಇದ್ದೀರಾ ಇಲ್ವಾ ಅನ್ನೋದಕ್ಕಿಂತ ಒಬ್ರಿಗೊಬ್ರು ಎಷ್ಟು ಹೊಂದ್ಕೊಂಡು ಹೋಗ್ತೀರ ಅನ್ನೋದು ತುಂಬ ಮುಖ್ಯ.
6 ಡೇಟಿಂಗ್ ಮಾಡುವಾಗ ಇನ್ನೂ ಯಾವೆಲ್ಲ ವಿಷ್ಯಗಳನ್ನ ತಿಳ್ಕೊಬೇಕು? ಆ ವ್ಯಕ್ತಿಯನ್ನ ತುಂಬ ಮನಸ್ಸಿಗೆ ಹಚ್ಕೊಳ್ಳೋ ಮುಂಚೆ ಪ್ರಾಮುಖ್ಯವಾದ ವಿಷ್ಯಗಳ ಬಗ್ಗೆ ಮಾತಾಡಿ. ಉದಾಹರಣೆಗೆ, ಅವ್ರಿಗಿರೋ ಗುರಿಗಳ ಬಗ್ಗೆ, ಆರೋಗ್ಯ ಸಮಸ್ಯೆಗಳ ಬಗ್ಗೆ, ಹಣಕಾಸಿನ ವಿಚಾರದ ಬಗ್ಗೆ ಅವ್ರ ಜೀವನದಲ್ಲಿ ಯಾವುದಾದ್ರೂ ಕಹಿ ಘಟನೆಗಳು ಆಗಿದ್ಯಾ, ಇದ್ರ ಬಗ್ಗೆ ಎಲ್ಲ ಮಾತಾಡಿ. ಆದ್ರೆ ಈ ಎಲ್ಲಾ ವಿಷ್ಯಗಳ ಬಗ್ಗೆ ಡೇಟಿಂಗ್ ಶುರು ಮಾಡಿದಾಗ್ಲೇ ಮಾತಾಡಬೇಕು ಅಂತೇನಿಲ್ಲ. (ಯೋಹಾನ 16:12 ಹೋಲಿಸಿ.) ಕೆಲವೊಂದು ವಿಷ್ಯಗಳ ಬಗ್ಗೆ ಸ್ವಲ್ಪ ಸಮಯ ಆದ್ಮೇಲೆ ಮಾತಾಡೋಣ ಅಂತ ನಿಮಗೆ ಅನಿಸಿದ್ರೆ ಅದನ್ನೂ ಹೇಳಿ. ಆದ್ರೆ ಆ ವಿಷ್ಯನ ನೀವು ಆಮೇಲಾದ್ರೂ ಹೇಳಲೇಬೇಕು. ಯಾಕಂದ್ರೆ ನಿಮ್ಮ ಜೊತೆ ಡೇಟಿಂಗ್ ಮಾಡ್ತಿರೋ ವ್ಯಕ್ತಿಗೆ ಆಗ್ಲೇ ಒಳ್ಳೆ ತೀರ್ಮಾನ ಮಾಡೋಕೆ ಆಗೋದು. ಅದಕ್ಕೇ ಎಲ್ಲ ವಿಷ್ಯನೂ ಮುಚ್ಚುಮರೆ ಇಲ್ಲದೆ ಮಾತಾಡಿ.
7. ಒಳಗಿನ ರಹಸ್ಯ ವ್ಯಕ್ತಿಯನ್ನ ತಿಳ್ಕೊಳ್ಳೋಕೆ ಏನು ಮಾಡಬೇಕು? (“ನೀವು ಡೇಟಿಂಗ್ ಮಾಡ್ತಿರೋ ವ್ಯಕ್ತಿ ತುಂಬ ದೂರದಲ್ಲಿ ಇದ್ರೆ” ಚೌಕ ನೋಡಿ.) (ಚಿತ್ರಗಳನ್ನ ನೋಡಿ.)
7 ಒಳಗಿನ ರಹಸ್ಯ ವ್ಯಕ್ತಿಯನ್ನ ತಿಳ್ಕೊಳ್ಳೋಕೆ ಏನು ಮಾಡಬೇಕು? ಮುಖ್ಯವಾಗಿ ಮುಚ್ಚುಮರೆ ಇಲ್ಲದೆ ಮಾತಾಡಬೇಕು. ಪ್ರಶ್ನೆಗಳನ್ನ ಕೇಳಬೇಕು, ಅವರು ಮಾತಾಡುವಾಗ ಚೆನ್ನಾಗಿ ಕೇಳಿಸ್ಕೊಬೇಕು. (ಜ್ಞಾನೋ. 20:5; ಯಾಕೋ. 1:19) ಒಟ್ಟಿಗೆ ಊಟ ಮಾಡಿದ್ರೆ, ವಾಕಿಂಗಿಗೆ ಹೋದ್ರೆ, ಸಿಹಿಸುದ್ದಿ ಸಾರೋಕೆ ಹೋದ್ರೆ ಮಾತಾಡೋಕೆ ಇನ್ನೂ ಅವಕಾಶ ಸಿಗುತ್ತೆ. ನೀವಿಬ್ರೂ ಕುಟುಂಬದವ್ರ ಜೊತೆ, ಸ್ನೇಹಿತರ ಜೊತೆ ಒಟ್ಟಿಗೆ ಸಮಯ ಕಳೆಯುವಾಗ ಒಬ್ರು ಇನ್ನೊಬ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ ಬೇರೆಯವ್ರ ಜೊತೆ ಕೆಲವು ಕೆಲಸಗಳನ್ನ ಮಾಡೋಕೆ ಪ್ಲ್ಯಾನ್ ಮಾಡಿ. ಆಗ ಬೇರೆಬೇರೆ ಸನ್ನಿವೇಶದಲ್ಲಿ ಬೇರೆಬೇರೆ ಜನ್ರ ಜೊತೆ ಅವರು ಹೇಗೆ ನಡ್ಕೊಳ್ತಾರೆ ಅಂತ ಗೊತ್ತಾಗುತ್ತೆ. ನೆದರ್ಲೆಂಡ್ಸ್ನಲ್ಲಿರೋ ಅಶ್ವಿನ್ ಅನ್ನೋ ಸಹೋದರ ಅಲಿಶಾ ಜೊತೆ ಡೇಟಿಂಗ್ ಮಾಡಿದಾಗ ಇದನ್ನೇ ಮಾಡಿದ್ರು. “ನಾವು ಒಬ್ರಿಗೊಬ್ರು ಚೆನ್ನಾಗಿ ತಿಳ್ಕೊಳೋಕೆ ಒಟ್ಟಿಗೆ ಕೆಲಸ ಮಾಡಿದ್ವಿ, ಒಟ್ಟಿಗೆ ಅಡಿಗೆ ಮಾಡಿದ್ವಿ ಮತ್ತು ಬೇರೆ ಕೆಲಸಾನೂ ಮಾಡಿದ್ವಿ. ಇದ್ರಿಂದ ಒಬ್ರು ಇನ್ನೊಬ್ರಲ್ಲಿ ಇರೋ ಒಳ್ಳೆ ಗುಣಗಳ ಬಗ್ಗೆ ಮತ್ತು ಬಲಹೀನತೆಗಳ ಬಗ್ಗೆ ತಿಳ್ಕೊಳ್ಳೋಕೆ ಆಯ್ತು.”
ಒಟ್ಟಿಗೆ ಕೆಲಸ ಮಾಡಿದ್ರೆ ಮಾತಾಡೋಕೆ ನಿಮಗೆ ಅವಕಾಶ ಸಿಗುತ್ತೆ ಮತ್ತು ಒಬ್ರನ್ನೊಬ್ರು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ (ಪ್ಯಾರ 7-8 ನೋಡಿ)
8. ಡೇಟಿಂಗ್ ಮಾಡ್ತಿರೋರು ಬೈಬಲ್ ವಿಷ್ಯಗಳ ಬಗ್ಗೆ ಚರ್ಚೆ ಮಾಡೋದ್ರಿಂದ ಯಾವ ಪ್ರಯೋಜನ ಆಗುತ್ತೆ?
8 ನೀವು ಒಬ್ರು ಇನ್ನೊಬ್ರನ್ನ ಚೆನ್ನಾಗಿ ತಿಳ್ಕೊಳ್ಳೋಕೆ ಬೈಬಲ್ ವಿಷ್ಯಗಳ ಬಗ್ಗೆ ಚರ್ಚೆ ಮಾಡಿ. ನೀವು ಮುಂದೆ ಒಂದು ದಿನ ಮದುವೆ ಆದ್ರೆ ಯೆಹೋವ ದೇವರು ನಿಮ್ಮ ಜೀವನದಲ್ಲಿ ತುಂಬ ಮುಖ್ಯ ಆಗಿರಬೇಕು. ಅದಕ್ಕೇ ಕುಟುಂಬ ಆರಾಧನೆ ಮಾಡೋಕೆ ಸಮಯ ಮಾಡ್ಕೋಬೇಕಾಗುತ್ತೆ. (ಪ್ರಸಂ. 4:12) ಹಾಗಾಗಿ ನೀವು ಡೇಟಿಂಗ್ ಮಾಡುವಾಗ್ಲೇ ಈ ವಿಷ್ಯಗಳನ್ನ ಚರ್ಚೆ ಮಾಡೋಕೆ ಸಮಯ ಮಾಡ್ಕೊಳ್ಳಿ. ಆದ್ರೆ ನೀವು ಇನ್ನೂ ಒಂದು ಕುಟುಂಬ ಆಗಿರಲ್ಲ, ಸಹೋದರ ಆ ಸಹೋದರಿಯ ಯಜಮಾನ ಆಗಿರಲ್ಲ ನಿಜ. ಆದ್ರೂ ಈ ರೀತಿ ಆಗಾಗ ಚರ್ಚೆ ಮಾಡಿದ್ರೆ ಯೆಹೋವನಿಗೆ ಎಷ್ಟು ಹತ್ರ ಆಗಿದ್ದೀರಾ ಅಂತ ಪರಸ್ಪರ ತಿಳ್ಕೊಳ್ಳೋಕೆ ಆಗುತ್ತೆ. ಅಮೆರಿಕದಲ್ಲಿರೋ ಮ್ಯಾಕ್ಸ್ ಮತ್ತು ಲೀಸಾಗೆ ಇನ್ನು ಯಾವ ಪ್ರಯೋಜನ ಆಯ್ತು ಅಂತ ನೋಡಿ. ಮ್ಯಾಕ್ಸ್ ಹೀಗೆ ಹೇಳ್ತಾರೆ: “ನಾವು ಡೇಟಿಂಗ್ ಶುರು ಮಾಡಿದಾಗ ನಮ್ಮ ಪ್ರಕಾಶನಗಳಲ್ಲಿ ಡೇಟಿಂಗ್ ಬಗ್ಗೆ, ಮದುವೆ ಬಗ್ಗೆ, ಕುಟುಂಬ ಜೀವನದ ಬಗ್ಗೆ ಇದ್ದ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಾ ಇದ್ವಿ. ಇದ್ರಿಂದ ಮಾತಾಡೋಕೆ ಕಷ್ಟ ಆಗ್ತಿದ್ದ ತುಂಬ ಪ್ರಾಮುಖ್ಯವಾದ ವಿಷ್ಯಗಳ ಬಗ್ಗೆನೂ ನಮಗೆ ಚರ್ಚೆ ಮಾಡೋಕೆ ಆಯ್ತು.”
ನೀವು ಇನ್ನೂ ಏನೆಲ್ಲ ಮಾಡಬೇಕು?
9. ಡೇಟಿಂಗ್ ಬಗ್ಗೆ ಯಾರಿಗೆಲ್ಲ ಹೇಳಬಹುದು ಅಂತ ತೀರ್ಮಾನ ಮಾಡುವಾಗ ಏನು ನೆನಪಲ್ಲಿ ಇಡಬೇಕು?
9 ಡೇಟಿಂಗ್ ಬಗ್ಗೆ ನೀವು ಯಾರಿಗೆಲ್ಲ ಹೇಳಬಹುದು? ಅದನ್ನ ನೀವಿಬ್ರು ಮಾತಾಡಿ ತೀರ್ಮಾನ ಮಾಡಿ. ಡೇಟಿಂಗ್ ಶುರು ಮಾಡುವಾಗ ನೀವು ಇಷ್ಟಪಡೋದಾದ್ರೆ ಅದನ್ನ ಕೆಲವ್ರಿಗೆ ಹೇಳಬಹುದು. (ಜ್ಞಾನೋ. 17:27) ಹೀಗೆ ಮಾಡಿದ್ರೆ ಬೇರೆಯವರು ನಿಮ್ಮತ್ರ ಅನಾವಶ್ಯಕ ಪ್ರಶ್ನೆಗಳನ್ನ ಕೇಳಲ್ಲ. ಅಷ್ಟೇ ಅಲ್ಲ ತಕ್ಷಣ ಒಂದು ತೀರ್ಮಾನ ತಗೋಬೇಕು ಅನ್ನೋ ಚಿಂತೆನೂ ನಿಮಗಿರಲ್ಲ. ಒಂದುವೇಳೆ ನೀವು ಇದನ್ನ ಯಾರಿಗೂ ಹೇಳಿಲ್ಲ ಅಂದ್ರೆ ಯಾರಾದ್ರೂ ಕಂಡುಹಿಡಿದು ಬಿಡ್ತಾರಾ ಅನ್ನೋ ಭಯ ನಿಮಗೆ ಇರುತ್ತೆ. ಅಷ್ಟೇ ಅಲ್ಲ ನೀವು ತಪ್ಪು ಮಾಡೋ ಸಾಧ್ಯತೆನೂ ಜಾಸ್ತಿ ಇರುತ್ತೆ. ಅದಕ್ಕೇ ಕೆಲವ್ರ ಹತ್ರ ಆದ್ರೂ ಹೇಳೋದು ಒಳ್ಳೇದು. ಯಾಕಂದ್ರೆ ಅವ್ರಿಂದ ಒಳ್ಳೇ ಸಲಹೆ ಸಿಗುತ್ತೆ ಮತ್ತು ಅವರು ನಿಮಗೆ ಸಹಾಯನೂ ಮಾಡ್ತಾರೆ. (ಜ್ಞಾನೋ. 15:22) ಉದಾಹರಣೆಗೆ, ಕುಟುಂಬದಲ್ಲಿ ಇರೋ ಕೆಲವ್ರ ಹತ್ರ, ಪ್ರೌಢ ಸ್ನೇಹಿತರ ಹತ್ರ ಅಥವಾ ಸಭೆಯಲ್ಲಿರೋ ಹಿರಿಯರ ಹತ್ರ ಹೇಳಬಹುದು.
10. ಡೇಟಿಂಗ್ ಮಾಡುವಾಗ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ನೀವು ಏನು ಮಾಡಬೇಕು? (ಜ್ಞಾನೋಕ್ತಿ 22:3)
10 ಡೇಟಿಂಗ್ ಮಾಡುವಾಗ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ನೀವೇನು ಮಾಡಬೇಕು? ನೀವು ಒಬ್ರನ್ನೊಬ್ರು ಜಾಸ್ತಿ ತಿಳ್ಕೊಂಡ ಹಾಗೆ ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ಹಾಗಾಗಿ ಈ ಸಮಯದಲ್ಲಿ ಯೆಹೋವನಿಗೆ ಏನು ಇಷ್ಟಾನೋ ಅದನ್ನೇ ಮಾಡಿ. ಅದಕ್ಕೆ ನೀವು ಏನು ಮಾಡಬೇಕು? (1 ಕೊರಿಂ. 6:18) ನೀವಿಬ್ರೂ ಲೈಂಗಿಕ ಆಸೆ ಹುಟ್ಟಿಸೋ ತರ ಮಾತಾಡಬೇಡಿ, ಒಬ್ಬೊಬ್ರೇ ಇರಬೇಡಿ, ಅತಿಯಾಗಿ ಕುಡಿಬೇಡಿ. (ಎಫೆ. 5:3) ಒಂದುವೇಳೆ ನೀವು ಹೀಗೆ ಏನಾದ್ರೂ ಮಾಡಿದ್ರೆ ಲೈಂಗಿಕ ಆಸೆ ಜಾಸ್ತಿ ಆಗುತ್ತೆ. ಸರಿಯಾಗಿರೋದನ್ನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಹಾಗಾಗಿ ನೀವು ಒಬ್ರು ಇನ್ನೊಬ್ರನ್ನ ಗೌರವಿಸೋಕೆ, ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಏನು ಮಾಡಬಹುದು ಅಂತ ಆಗಾಗ ಮಾತಾಡ್ತಾ ಇರಿ. (ಜ್ಞಾನೋಕ್ತಿ 22:3 ಓದಿ.) ಇಥಿಯೋಪಿಯಾದಲ್ಲಿರೋ ದಾವೆತ್ ಮತ್ತು ಅಲ್ಮಾಸ್ ಏನು ಮಾಡಿದ್ರು ಅಂತ ನೋಡಿ. ಅವರು ಹೀಗೆ ಹೇಳ್ತಾರೆ: “ನಾವಿಬ್ರು ಒಟ್ಟಿಗೆ ಸಮಯ ಕಳಿಯೋಕೆ ಜನ ಜಾಸ್ತಿ ಇರೋ ಜಾಗಕ್ಕೆ ಹೋಗ್ತಿದ್ವಿ ಮತ್ತು ಫ್ರೆಂಡ್ಸ್ ಜೊತೆ ಹೋಗ್ತಿದ್ವಿ. ಅಷ್ಟೇ ಅಲ್ಲ ಕಾರಲ್ಲಿ ಆಗ್ಲಿ ಮನೆಯಲ್ಲಿ ಆಗ್ಲಿ ನಾವು ಯಾವತ್ತೂ ಒಬ್ಬೊಬ್ರೇ ಇರ್ತಿರಲಿಲ್ಲ. ಇದ್ರಿಂದ ತಪ್ಪು ಮಾಡೋ ಸನ್ನಿವೇಶನೇ ಬಂದಿಲ್ಲ.”
11. ಡೇಟಿಂಗ್ ಮಾಡೋರು ಪ್ರೀತಿ ತೋರಿಸುವಾಗ ಏನನ್ನ ನೆನಪಲ್ಲಿ ಇಟ್ಕೊಬೇಕು?
11 ನೀವು ಒಬ್ರು ಇನ್ನೊಬ್ರಿಗೆ ಹತ್ರ ಆದಷ್ಟು ಪ್ರೀತಿ ತೋರಿಸೋಕೆ ಇಷ್ಟಪಡ್ತೀರ. ಆದ್ರೆ ನೀವು ಹೇಗೆ ಪ್ರೀತಿ ತೋರಿಸಿದ್ರೆ ಸರಿಯಾಗಿರುತ್ತೆ, ಹೇಗೆ ತೋರಿಸಿದ್ರೆ ತಪ್ಪಾಗಿರುತ್ತೆ ಅಂತ ನೀವೇ ಯೋಚ್ನೆ ಮಾಡಬೇಕು. ನೀವು ಈ ರೀತಿ ಪ್ರೀತಿ ತೋರಿಸುವಾಗ ಒಂದು ವಿಷ್ಯದ ಬಗ್ಗೆ ಎಚ್ಚರವಾಗಿರಬೇಕು. (ಪರಮ. 1:2; 2:6) ಆ ಸಮಯದಲ್ಲಿ ನಿಮಗೆ ಲೈಂಗಿಕ ಆಸೆ ಜಾಸ್ತಿಯಾದ್ರೆ ಸರಿಯಾದ ತೀರ್ಮಾನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಅಷ್ಟೇ ಅಲ್ಲ ಕೆಲವೊಂದು ಸಲ ನೀವು ಸ್ವನಿಯಂತ್ರಣ ಕಳ್ಕೊಂಡು ತಪ್ಪು ಮಾಡಿಬಿಡಬಹುದು. (ಜ್ಞಾನೋ. 6:27) ಹಾಗಾಗಿ ಯೆಹೋವನಿಗೆ ಏನು ಇಷ್ಟ ಆಗುತ್ತೆ, ನೀವು ಪ್ರೀತಿ ತೋರಿಸುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಅಂತ ಮುಂಚೆನೇ ಮಾತಾಡಿ.b (1 ಥೆಸ. 4:3-7) ಅಷ್ಟೇ ಅಲ್ಲ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ನಾನು ಈ ತರ ಪ್ರೀತಿ ತೋರಿಸಿದ್ರೆ ಜನ ಏನು ಅಂದ್ಕೊಳ್ತಾರೆ? ಈ ರೀತಿ ನಾವು ಪ್ರೀತಿ ತೋರಿಸೋದ್ರಿಂದ ನಮ್ಮಲ್ಲಿ ಲೈಂಗಿಕ ಆಸೆ ಹುಟ್ತಾ ಇದ್ಯಾ?’
12. ಡೇಟಿಂಗ್ ಮಾಡುವಾಗ ಯಾವುದಾದ್ರೂ ಸಮಸ್ಯೆಗಳು ಭಿನ್ನಾಭಿಪ್ರಾಯಗಳು ಬಂದ್ರೆ ಏನು ಮಾಡಬೇಕು?
12 ಯಾವುದಾದ್ರೂ ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಬಂದ್ರೆ ಏನು ಮಾಡ್ತೀರಾ? ನಿಮ್ಮ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ಬರ್ತಾ ಇದೆ ಅಂದ್ರೆ ನೀವು ಒಳ್ಳೆ ಜೋಡಿ ಅಲ್ಲ ಅಂತ ಅರ್ಥನಾ? ಹಾಗೇನಿಲ್ಲ. ಈ ತರ ಭಿನ್ನಾಭಿಪ್ರಾಯಗಳು ಎಲ್ಲ ಜೋಡಿ ಮಧ್ಯೆನೂ ಬರುತ್ತೆ. ಒಂದು ಮದುವೆ ಬಂಧ ಬಲವಾಗಿರಬೇಕು ಅಂದ್ರೆ ಒಬ್ರು ಇನ್ನೊಬ್ರಿಗೆ ಗೌರವ ಕೊಡಬೇಕು. ಅಷ್ಟೇ ಅಲ್ಲ ಅವರಿಬ್ರೂ ಹೊಂದ್ಕೊಂಡು ಹೋಗಬೇಕು. ಒಂದು ಸಮಸ್ಯೆ ಬಂದಾಗ ಅದನ್ನ ಈಗ ನೀವು ಚೆನ್ನಾಗಿ ನಿಭಾಯಿಸಿದ್ರೆ ಮುಂದೆ ನಿಮ್ಮ ಮದುವೆ ಬಂಧನೂ ಬಲವಾಗಿರುತ್ತೆ. ಹಾಗಾಗಿ ನೀವು ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ಚರ್ಚೆ ಮಾಡುವಾಗ ಶಾಂತವಾಗಿ ಗೌರವದಿಂದ ಮಾತಾಡ್ತೀವಾ? ತಪ್ಪು ಮಾಡಿದ್ರೆ ಅದನ್ನ ಒಪ್ಕೊಳ್ತೀವಾ ಮತ್ತು ತಿದ್ಕೊಳ್ತಿವಾ? ತಪ್ಪು ಮಾಡಿದಾಗ ಬೇಗ ಕ್ಷಮೆ ಕೇಳ್ತೀವಾ ಮತ್ತು ಕ್ಷಮಿಸ್ತಿವಾ?’ (ಎಫೆ. 4:31, 32) ಒಂದುವೇಳೆ ನೀವು ಡೇಟಿಂಗ್ ಮಾಡುವಾಗ ಯಾವಾಗ್ಲೂ ತರ್ಕ ಮಾಡ್ತಾ, ವಾದ ಮಾಡ್ತಾ ಇದ್ರೆ ಮದುವೆ ಆದ್ಮೇಲೂ ನಿಮ್ಮ ಜೀವನ ಹಾಗೇ ಇರುತ್ತೆ. ಅದಕ್ಕೇ ‘ಇವರು ನನಗೆ ಸರಿ ಹೋಗಲ್ಲ’ ಅಂತ ಅನಿಸಿದ್ರೆ ಆ ಡೇಟಿಂಗ್ ಅಲ್ಲಿಗೆ ನಿಲ್ಲಿಸೋದು ಇಬ್ರಿಗೂ ಒಳ್ಳೇದು.c
13. ಎಷ್ಟು ಸಮಯ ಡೇಟಿಂಗ್ ಮಾಡಬೇಕು ಅಂತ ತಿಳ್ಕೊಳ್ಳೋಕೆ ನೀವೇನು ಮಾಡಬೇಕು?
13 ಎಷ್ಟು ಸಮಯದವರೆಗೆ ಡೇಟಿಂಗ್ ಮಾಡಬೇಕು? ಚೆನ್ನಾಗಿ ಯೋಚ್ನೆ ಮಾಡಿ ತೀರ್ಮಾನ ಮಾಡಿಲ್ಲಾಂದ್ರೆ ಅದ್ರಿಂದ ಅನಾಹುತಗಳೇ ಜಾಸ್ತಿ ಆಗುತ್ತೆ. (ಜ್ಞಾನೋ. 21:5) ಆದ್ರೆ ಒಬ್ರನ್ನೊಬ್ರು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಸಮಯ ತಗೋಬೇಕು ನಿಜ. ಹಾಗಂತ ಸುಮ್ಸುಮ್ಮನೆ ತುಂಬ ಸಮಯ ತಗೊಳೋದು ಸರಿಯಲ್ಲ. ಯಾಕಂದ್ರೆ “ಅಂದ್ಕೊಂಡಿದ್ದು ಆಗೋಕೆ ತಡ ಆದಾಗ ಬೇಜಾರಾಗುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 13:12) ಡೇಟಿಂಗ್ ತುಂಬ ಸಮಯದವರೆಗೆ ಇದ್ರೆ ಲೈಂಗಿಕ ಆಸೆಗಳು ಜಾಸ್ತಿ ಆಗುತ್ತೆ. ಇದ್ರಿಂದ ಕೆಲವೊಮ್ಮೆ ಆ ಆಸೆಗಳನ್ನ ನಿಯಂತ್ರಿಸೋಕೆ ಕಷ್ಟ ಆಗಬಹುದು. (1 ಕೊರಿಂ. 7:9) ಹಾಗಾಗಿ ನೀವು ಎಷ್ಟು ಸಮಯದಿಂದ ಡೇಟಿಂಗ್ ಮಾಡ್ತಾ ಇದ್ದೀರಾ ಅಂತ ಯೋಚಿಸೋದಕ್ಕಿಂತ ‘ನಾನು ಒಂದು ಒಳ್ಳೆ ನಿರ್ಣಯ ಮಾಡೋಕೆ ಆ ವ್ಯಕ್ತಿ ಬಗ್ಗೆ ಇನ್ನೂ ಏನಾದ್ರೂ ತಿಳ್ಕೊಬೇಕಾ?’ ಅನ್ನೋ ಪ್ರಶ್ನೆ ಬಗ್ಗೆ ಯೋಚ್ನೆ ಮಾಡಿ.
ಡೇಟಿಂಗ್ ಮಾಡೋರಿಗೆ ಬೇರೆಯವರು ಹೇಗೆ ಸಹಾಯ ಮಾಡಬಹುದು?
14. ಡೇಟಿಂಗ್ ಮಾಡ್ತಿರೋರಿಗೆ ಬೇರೆಯವರು ಹೇಗೆ ಸಹಾಯ ಮಾಡಬಹುದು? (ಚಿತ್ರ ನೋಡಿ.)
14 ಡೇಟಿಂಗ್ ಮಾಡೋ ಯಾವುದಾದ್ರೂ ಒಂದು ಜೋಡಿ ನಿಮಗೆ ಗೊತ್ತಿದ್ದಾರಾ? ಹಾಗಿದ್ರೆ ನೀವು ಅವ್ರಿಗೆ ಹೇಗೆ ಸಹಾಯ ಮಾಡಬಹುದು? ಅವ್ರನ್ನ ಊಟಕ್ಕೆ, ಕುಟುಂಬ ಆರಾಧನೆಗೆ, ಬೇರೆ ಯಾವುದಾದ್ರೂ ಕೆಲಸಕ್ಕೆ ಅಥವಾ ಆಟ ಆಡೋಕೆ ಕರೀರಿ. (ರೋಮ. 12:13) ಅವರಿಬ್ರೂ ಒಟ್ಟಿಗೆ ಸಮಯ ಕಳಿಯೋಕೆ ನೀವು ಇನ್ನೂ ಕೆಲವು ಸಹಾಯ ಮಾಡಬಹುದು. ಅವರು ಹೋಗುವಾಗ ನೀವು ಅವ್ರ ಜೊತೆ ಹೋಗಬಹುದು, ನಿಮ್ಮ ಕಾರಲ್ಲಿ ಅವ್ರನ್ನ ಕರ್ಕೊಂಡು ಹೋಗಬಹುದು ಅಥವಾ ಅವ್ರನ್ನ ನಿಮ್ಮ ಮನೆಗೆ ಕರೀಬಹುದು. ಹೀಗೆ ಮಾಡಿದ್ರೆ ಅವ್ರಿಬ್ರಿಗೂ ಒಬ್ರನ್ನೊಬ್ರು ಅರ್ಥಮಾಡ್ಕೊಳೋಕೆ ಸಹಾಯ ಆಗುತ್ತೆ. (ಗಲಾ. 6:10) ಅಲಿಶಾ ಮತ್ತು ಅಶ್ವಿನ್ಗೂ ಸಹೋದರ ಸಹೋದರಿಯರು ಹೀಗೇ ಸಹಾಯ ಮಾಡಿದ್ರು. ಅದ್ರ ಬಗ್ಗೆ ಅಲಿಶಾ “ನಾವು ಒಟ್ಟಿಗೆ ಸಮಯ ಕಳಿಯೋಕೆ ಸಹಾಯ ಆಗ್ಲಿ ಅಂತ ಕೆಲವು ಸಹೋದರ ಸಹೋದರಿಯರು ನಮ್ಮನ್ನ ಅವ್ರ ಮನೆಗೆ ಕರೆದ್ರು. ಆಗ ನನಗೆ ತುಂಬ ಖುಷಿ ಆಯ್ತು. ಆದ್ರೆ ನಾವು ಒಬ್ಬೊಬ್ರೇ ಇರೋ ತರ ಅವರು ಬಿಟ್ಟುಬಿಡಲಿಲ್ಲ” ಅಂತ ಹೇಳ್ತಾರೆ. ಹಾಗಾಗಿ ಡೇಟಿಂಗ್ ಮಾಡ್ತಿರೋ ಯಾವುದಾದ್ರೂ ಜೋಡಿ ನಿಮ್ಮನ್ನ ಅವ್ರ ಜೊತೆ ಬರೋಕೆ ಕರೆದ್ರೆ ಅದನ್ನ ಸುಯೋಗ ಅಂತ ನೋಡಿ. ಅವ್ರ ಜೊತೆ ಹೋದ್ಮೇಲೆ ನೀವು ನಿಮ್ಮ ಪಾಡಿಗೆ ಎಲ್ಲೋ ಹೋಗಿಬಿಡಬೇಡಿ. ಹಾಗಂತ ಅವ್ರಿಗೆ ಮಾತಾಡೋಕೆ ಕಷ್ಟ ಆಗೋ ತರ ಯಾವಾಗ್ಲೂ ಅವ್ರ ಹಿಂದೆನೇ ಇರಬೇಡಿ.—ಫಿಲಿ. 2:4.
ಡೇಟಿಂಗ್ ಮಾಡ್ತಿರೋ ಯಾವುದಾದ್ರೂ ಜೋಡಿ ನಿಮಗೆ ಪರಿಚಯ ಇದ್ರೆ ಅವ್ರಿಗೆ ಬೇಕಾದ ಸಹಾಯ ಮಾಡಿ (ಪ್ಯಾರ 14-15 ನೋಡಿ)
15. ಡೇಟಿಂಗ್ ಮಾಡ್ತಿರೋರಿಗೆ ಸಹಾಯ ಮಾಡೋಕೆ ನೀವು ಇನ್ನೂ ಏನೆಲ್ಲಾ ಮಾಡಬಹುದು? (ಜ್ಞಾನೋಕ್ತಿ 12:18)
15 ಡೇಟಿಂಗ್ ಮಾಡ್ತಿರೋರಿಗೆ ಸಹಾಯ ಮಾಡೋಕೆ ನೀವು ಇನ್ನೂ ಏನೆಲ್ಲಾ ಮಾಡಬಹುದು? ಏನು ಮಾತಾಡಬೇಕು, ಏನು ಮಾತಾಡಬಾರದು ಅನ್ನೋದ್ರ ಮೇಲೆ ನಿಗಾ ಇಟ್ಟಿರಬೇಕು. (ಜ್ಞಾನೋಕ್ತಿ 12:18 ಓದಿ.) ಕೆಲವೊಮ್ಮೆ ಡೇಟಿಂಗ್ ಮಾಡ್ತಿರೋ ಜೋಡಿಗಳು ನಮಗೆ ಗೊತ್ತಿರೋದಾದ್ರೆ ಅದನ್ನ ಎಲ್ರಿಗೂ ಹೇಳಬೇಕು ಅಂತ ನಾವು ಆತುರದಲ್ಲಿ ಇರ್ತೀವಿ. ಆದ್ರೆ ಈ ವಿಷ್ಯನ ಅವ್ರಾಗೇ ಹೇಳಬೇಕು ಅಂತ ಹುಡುಗ ಹುಡುಗಿ ಇಷ್ಟಪಡ್ತಾರೆ. ಅಷ್ಟೇ ಅಲ್ಲ, ಡೇಟಿಂಗ್ ಮಾಡ್ತಿರೋರ ಬಗ್ಗೆ ಗಾಳಿಸುದ್ದಿ ಹಬ್ಬಿಸೋಕಾಗ್ಲಿ ವೈಯಕ್ತಿಕ ವಿಷ್ಯದಲ್ಲಿ ಮೂಗು ತೂರಿಸೋಕಾಗ್ಲಿ ಹೋಗಬಾರದು. (ಜ್ಞಾನೋ. 20:19; ರೋಮ. 14:10; 1 ಥೆಸ. 4:11) ಅಷ್ಟೇ ಅಲ್ಲ ಮದುವೆ ಆಗ್ತಾರಾ ಇಲ್ವಾ ಅಂತ ಪ್ರಶ್ನೆ ಕೇಳೋದು ಅಥವಾ ಅವ್ರಿಗೆ ಮುಜುಗರ ಆಗೋ ತರ ಕೆಲವು ಪ್ರಶ್ನೆಗಳನ್ನ ಕೇಳೋದು ಕೆಲವು ಜೋಡಿಗಳಿಗೆ ಇಷ್ಟ ಆಗಲ್ಲ. ಎಲಿಸ್ ಅನ್ನೋ ಸಹೋದರಿ ಮತ್ತು ಅವ್ರ ಗಂಡ ಡೇಟಿಂಗ್ ಮಾಡುವಾಗ ನಡೆದ ವಿಷ್ಯದ ಬಗ್ಗೆ ಏನು ಹೇಳ್ತಾರೆ ನೋಡಿ. “ಕೆಲವರು ನಮ್ಮ ಹತ್ರ ಬಂದು ಮದುವೆ ಪ್ಲ್ಯಾನ್ ಹೇಗೆ ನಡಿತಿದೆ? ಅಂತ ಕೇಳಿದ್ರು. ಆಗ ನಮಗೆ ಒಂಥರ ಆಯ್ತು. ಯಾಕಂದ್ರೆ ಈ ವಿಷ್ಯದ ಬಗ್ಗೆ ನಾವೇ ಇನ್ನೂ ಮಾತಾಡ್ಕೊಂಡಿರಲಿಲ್ಲ” ಅಂತ ಹೇಳ್ತಾರೆ.
16. ಒಂದು ಜೋಡಿ ಡೇಟಿಂಗ್ ಮಾಡೋದನ್ನ ನಿಲ್ಲಿಸಿದ್ರೆ ನಾವು ಏನು ಮಾಡಬಾರದು?
16 ಒಂದು ಜೋಡಿ ಡೇಟಿಂಗ್ ಮಾಡೋದನ್ನ ನಿಲ್ಲಿಸಿದ್ರೆ ನಾವು ಏನು ಮಾಡಬಾರದು? ಯಾಕೆ, ಏನು ಅಂತ ಪ್ರಶ್ನೆ ಕೇಳೋಕೆ ಹೋಗಬೇಡಿ. ಅವ್ರ ವೈಯಕ್ತಿಕ ವಿಷ್ಯದಲ್ಲಿ ತಲೆ ಹಾಕಬೇಡಿ. (1 ಪೇತ್ರ 4:15) ಇದ್ರ ಬಗ್ಗೆ ಲಿಯಾ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ. “ನಾವು ಡೇಟಿಂಗ್ ಮಾಡೋದನ್ನ ನಿಲ್ಲಿಸಿದಾಗ ಕೆಲವರು ವಿಷಯ ತಿಳ್ಕೊಳ್ಳದೆ ನನ್ನ ಬಗ್ಗೆ ಆ ಸಹೋದರನ ಬಗ್ಗೆ ಏನೇನೋ ಹೇಳಿದ್ರು. ಅದನ್ನ ಕೇಳಿಸ್ಕೊಂಡಾಗ ನನಗೆ ತುಂಬ ನೋವಾಯ್ತು.” ನಾವೀಗಾಗ್ಲೇ ನೋಡಿದ ಹಾಗೆ ಒಂದು ಜೋಡಿ ಡೇಟಿಂಗ್ ಮಾಡೋದನ್ನ ನಿಲ್ಲಿಸಿದ್ರೆ ಅವರು ಮಾಡಿದ್ದು ತಪ್ಪು ತೀರ್ಮಾನ ಅಂತ ಹೇಳಬಾರದು. ಯಾಕಂದ್ರೆ ಡೇಟಿಂಗ್ನ ಉದ್ದೇಶ ಒಬ್ಬ ವ್ಯಕ್ತಿನ ಚೆನ್ನಾಗಿ ತಿಳ್ಕೊಂಡು ಸರಿಯಾದ ನಿರ್ಣಯ ಮಾಡೋದೇ. ಹೆಚ್ಚಾಗಿ ಒಂದು ಡೇಟಿಂಗ್ ನಿಂತು ಹೋದಾಗ ಆ ಹುಡುಗ ಹುಡುಗಿಗೆ ತುಂಬ ಬೇಜಾರಾಗುತ್ತೆ, ನೋವಾಗುತ್ತೆ. ಅಷ್ಟೇ ಅಲ್ಲ ಒಬ್ಬಂಟಿ ಆಗಿಬಿಟ್ಟೆ ಅಂತಾನೂ ಅನಿಸುತ್ತೆ. ಹಾಗಾಗಿ ಆ ಸಮಯದಲ್ಲಿ ಅವ್ರ ಜೊತೆ ಇದ್ದು ಅವ್ರಿಗೆ ಬೆಂಬಲ ಕೊಡಬೇಕು.—ಜ್ಞಾನೋ. 17:17.
17. ಡೇಟಿಂಗ್ ಮಾಡ್ತಾ ಇರೋರು ಏನು ಮಾಡ್ತಾ ಇರಬೇಕು?
17 ಡೇಟಿಂಗ್ ಮಾಡೋದು ಚೆನ್ನಾಗೇ ಇರುತ್ತೆ. ಅದನ್ನ ಎಂಜಾಯ್ ಮಾಡಬಹುದು. ಆದ್ರೆ ಕೆಲವೊಮ್ಮೆ ಸಮಸ್ಯೆಗಳು ಬರುತ್ತೆ. ಜೆಸ್ಸಿಕಾ ಏನು ಹೇಳ್ತಾರೆ ನೋಡಿ. “ನಿಜ ಹೇಳಬೇಕು ಅಂದ್ರೆ ಡೇಟಿಂಗ್ ಮಾಡ್ತಿದ್ದಾಗ ತುಂಬ ಸಮಯ, ಶಕ್ತಿ ಕೊಡಬೇಕಾಯ್ತು. ಆದ್ರೆ ಹಾಗೆ ಮಾಡಿದ್ರಿಂದ ನಮಗೆ ತುಂಬ ಪ್ರಯೋಜನ ಆಯ್ತು. ನಾವು ಒಬ್ರನ್ನೊಬ್ರು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಯ್ತು.” ಒಂದುವೇಳೆ ನೀವು ಡೇಟಿಂಗ್ ಮಾಡ್ತಿರೋದಾದ್ರೆ ಒಬ್ರನ್ನೊಬ್ರು ತಿಳ್ಕೊಳ್ಳೋಕೆ ಇನ್ನೂ ಪ್ರಯತ್ನ ಮಾಡಿ. ಆಗ ಡೇಟಿಂಗನ್ನ ನೀವು ಎಂಜಾಯ್ ಮಾಡ್ತೀರ ಮತ್ತು ಒಳ್ಳೆ ತೀರ್ಮಾನನೂ ತಗೊಳ್ತೀರ.
ಗೀತೆ 11 ಯೆಹೋವನ ಹೃದಯವನ್ನು ಸಂತೋಷಪಡಿಸುವುದು
a ಕೆಲವ್ರ ಹೆಸ್ರು ಬದಲಾಗಿದೆ.
b ಒಬ್ಬ ವ್ಯಕ್ತಿಯ ಜನನಾಂಗಗಳನ್ನ ಮುಟ್ಟುವುದು ಅಥವಾ ಕೈಯಾಡಿಸೋದು ಒಂದು ರೀತಿಯ ಲೈಂಗಿಕ ಅನೈತಿಕತೆ ಆಗಿದೆ. ಹೀಗೆ ಮಾಡಿದ್ರೆ ಸಭೆಯಲ್ಲಿರೋ ಹಿರಿಯರು ನ್ಯಾಯನಿರ್ಣಾಯಕ ಕ್ರಮಗಳನ್ನ ತಗೊಳ್ತಾರೆ. ಅಷ್ಟೇ ಅಲ್ಲ ಸ್ತನಗಳನ್ನ ಮುಟ್ಟಿದ್ರೆ ಅಥವಾ ಅದ್ರ ಮೇಲೆ ಕೈಯಾಡಿಸಿದ್ರೆ ಲೈಂಗಿಕ ಆಸೆ ಹುಟ್ಟಿಸೋ ರೀತಿಯ ಮೆಸೇಜ್ಗಳನ್ನ ಕಳಿಸಿದ್ರೆ ಅಥವಾ ಅಶ್ಲೀಲವಾಗಿ ಫೋನಲ್ಲಿ ಮಾತಾಡಿದ್ರೆ ಹಿರಿಯರು ಸನ್ನಿವೇಶವನ್ನ ಪರಿಗಣಿಸಿ ನ್ಯಾಯನಿರ್ಣಾಯಕ ಕ್ರಮ ತಗೊಳ್ತಾರೆ.
c ಹೆಚ್ಚಿನ ಮಾಹಿತಿಗಾಗಿ ಆಗಸ್ಟ್ 15, 1999ರ ಕಾವಲಿನಬುರುಜುವಿನಲ್ಲಿ “ವಾಚಕರಿಂದ ಪ್ರಶ್ನೆಗಳು” ನೋಡಿ.