ವಾಲ್ರಸ್ ಮತ್ತು ಮಾದಕ ದ್ರವ್ಯ ವ್ಯಾಪಾರ
ವಾಲ್ರಸ್ ಕಡಲ್ಗುದುರೆ ಮತ್ತು ಆನೆ—ಈ ಬೃಹದ್ದೇಹಿಗಳಷ್ಟು ಭಿನ್ನವಾಗಿರುವ ಎರಡು ಸಸ್ತನಿ ಜೀವಿಗಳ ಕುರಿತು ಯೋಚಿಸುವುದೇ ಕಷ್ಟ. ಆದರೆ ಬೇರಿಂಗ್ ಕಡಲಿನ ತೇಲುವ ನೀರ್ಗಲ್ಲಿನ ಮೇಲೆ ಹಾಯಾಗಿ ಮಲಗಿರುವ ಈ ಮಜಬೂತಾದ ಜಡತೆಯ ಸೀಲ್ಗಳಿಗೂ ಆಫ್ರಿಕಾದ ಹುಲ್ಲುಗಾಡುಗಳಲ್ಲಿ ವೈಭವದಿಂದ ಸುತ್ತಾಡುವ ಪ್ರಾಣಿಗಳಿಗೂ ಒಂದು ಸಾಮಾನ್ಯ ಸಮಸ್ಯೆಯಿದೆ. ಅವುಗಳ ಅತ್ಯಂತ ಅಮೂಲ್ಯ ಸೊತ್ತೇ ಹಲವು ವೇಳೆ ಅವುಗಳ ಅಕಾಲಿಕ ಮರಣವಾಗಿ ಪರಿಣಮಿಸುತ್ತದೆ. ಅವೆರಡಕ್ಕೂ ದಾಡೆಗಳಿವೆ.
ಪ್ರಾಯಶಃ ಆನೆಗಿಂತಲೂ ಹೆಚ್ಚಾಗಿ, ಈ ವಾಲ್ರಸ್ ಈ ದಾಡೆಯನ್ನುಪಯೋಗಿಸಿ ಜೀವಿಸುತ್ತದೆ. ಅದು ಆಹಾರ ಹುಡುಕಲು ಸಮುದ್ರ ತಳಕ್ಕೆ ಮುಳುಗುವಾಗ ಅದು ದಾಡೆಗಳನ್ನುಪಯೋಗಿಸುತ್ತಾ ಜಾರಿ ಚಲಿಸಿ ತನ್ನ ತುಟಿಗಳಿಂದ ಚಿಪ್ಪು ಮೀನು ಮತ್ತು ಸಿಂಪಿಗಳನ್ನು ಹೀರುತ್ತದೆ. ಮತ್ತು ಬಿಸಿಲು ಕಾಯಿಸಿಕೊಳ್ಳಲಿಕ್ಕಾಗಿ ನೀರ್ಗಲ್ಲನ್ನು ಹತ್ತುವಾಗ, ತನ್ನ 2000—3000 ಪೌಂಡು ಭಾರವನ್ನು ನೀರಿನಿಂದ ಎತ್ತಲು ಈ ದಾಡೆಗಳನ್ನು ಕೊಕ್ಕೆಯಾಗಿ ಉಪಯೋಗಿಸುತ್ತದೆ. ತಾಯಿ ವಾಲ್ರಸ್, ತನ್ನ ಮರಿಗಳನ್ನು ಅಪಾಯಕ್ಕೊಳಪಡಿಸುವ ಯಾವ ಪ್ರಾಣಿಯೊಡನಾದರೂ ಮರಣಪರ್ಯಂತ ಕಾದಾಡಲು ತನ್ನ ಕೋರೆ ಹಲ್ಲುಗಳನ್ನು ಉಪಯೋಗಿಸುತ್ತದೆ.
ಆದರೆ, ವಾಲ್ರಸಿಗೆ ವಿಷಾಧದ ವಾರ್ತೆಯೇನಂದರೆ ಅದರ ದಾಡೆಗಳನ್ನು ಮನುಷ್ಯರು ಬೆಲೆಯುಳ್ಳದೆಂದು ಎಣಿಸುತ್ತಾರೆ. ಮನುಷ್ಯನಿಗೆ ದಂತ ತೃಷೆ ಅನಂತ. ಮತ್ತು ಸೆಮಿ ಆ್ಯಟೊಮ್ಯಾಟಿಕ್ ರೈಫಲಿರುವ ಒಬ್ಬನಿಗೆ ಉತ್ತರ ಧ್ರುವದ ಸೂರ್ಯ ಪ್ರಕಾಶದಲ್ಲಿ ಮಲಗಿರುವ 10—12ಅಡಿ ಉದ್ದದ ಈ ಕಡಲ್ಗುದುರೆ ಕಷ್ಟದ ಗುರಿಹಲಗೆಯಲ್ಲ. ಹೀಗೆ, ಅಲಾಸ್ಕದ ಕೆಲವರು ಸಣ್ಣ ದೋಣಿಗಳಲ್ಲಿ ಬೇರಿಂಗ್ ಸಮುದ್ರದಲ್ಲಿ ಸುಳಿದಾಡಿ, ಎದುರಿಗೆ ಸಿಕ್ಕಿದ ಈ ಪ್ರಾಣಿಗಳನ್ನು ಕೊಂದು ತಲೆಗಳನ್ನು ಚೆಯ್ನ್ ಗರಗಸದಿಂದ ಕತ್ತರಿಸಿ ದೋಣಿ ತುಂಬಾ ದಾಡೆಗಳುಳ್ಳ ತಲೆಗಳನ್ನು ತರುವುದು ಅಸಾಮಾನ್ಯವಲ್ಲ.
ಇದು ವರೆಗೆ ಕೇಳಿದ ಕಥೆ ತೀರಾ ಪರಿಚಿತವಾಗಿ ಕೇಳಿ ಬರುವುದಾದರೂ ಈ ಬಾರಿ ಇದಕ್ಕೊಂದು ವಿಲಕ್ಷಣ ತಿರುವು ಇದೆ: ಮಾದಕ ದ್ರವ್ಯ. ಅಲಾಸ್ಕದ ಯುವ ಎಸ್ಕಿಮೊ ಜನರು ತಮ್ಮ ಮಾದಕ ದ್ರವ್ಯ ಚಟಕ್ಕೆ ಹಣ ತೆರಲು ಈ ವಾಲ್ರಸ್ ದಾಡೆಗಳನ್ನು ಉಪಯೋಗಿಸುತ್ತಾರಂತೆ. ಮತ್ತು ನ್ಯೂಸ್ವೀಕ್ ಪತ್ರಿಕೆ ಗಮನಿಸುವಂತೆ “ವಿನಿಮಯ ದರ ವಿಪರೀತ ಅಗ್ಗ.” ಅಮೆರಿಕದ ಮತ್ಸ ಮತ್ತು ವನ್ಯ ಜೀವಿ ಸಂಸ್ಥೆಯ ಒಬ್ಬ ಸ್ಪೆಶಲ್ ಏಜೆಂಟ್ ಪತ್ರಿಕೆಗೆ ಸುಮಾರು ರೂ.14,000ದಷ್ಟೂ ಬೆಲೆ ಬಾಳುವ ಒಂದು ಜೊತೆ ದಾಡೆಯನ್ನು ಕಳ್ಳ ಸಂತೆಯವರು ಆರು ಮಾರಿವಾನ ಸಿಗರೇಟುಗಳನ್ನು ಪಡೆಯ ಬಹುದು ಎಂದು ಹೇಳಿದನು.
ಕಾಯಿದೆಯ ಈ ಬೇಟೆಯಾಡಲ್ಪಡುವ ಪ್ರಾಣಿಗಳಿಗಿಂತ ಹೆಚ್ಚಾಗಿ ಬೇಟೆಯಾಡುವವರಿಗೆ ರಕ್ಷೆಯನ್ನು ನೀಡುತ್ತದೆ. ಅಲಾಸ್ಕದ ಮೂಲ ನಿವಾಸಿಗಳು ಆಹಾರಕ್ಕಾಗಿ ವಾಲ್ರಸನ್ನು ಬೇಟೆಯಾಡಬಹುದೆಂದೂ ಉಪ ಪದಾರ್ಥವಾಗಿ ದಾಡೆಗಳನ್ನು ಶಿಲ್ಪ ಕೌಶಲ್ಯದ ವಸ್ತುಗಳನ್ನು ತಯಾರಿಸಲು ಇಟ್ಟು ಕೊಳ್ಳಬಹುದೆಂದೂ ಕಾಯಿದೆ ಹೇಳುತ್ತದೆ. ಇದು ನ್ಯಾಯವಾಗಿ ಕಂಡು ಬರುವುದಾದರೂ ನಿರ್ಲಜ್ಞೆಯ ಜನರಿಗೆ ಇದು ಆಶ್ರಯ ಸ್ಥಾನ. ಕೆಲವು ಮೂಲ ನಿವಾಸಿಗಳಲ್ಲದ ದಂತ ವ್ಯಾಪಾರಿಗಳು, ತಾವು ಶೇಖರಿಸಿರುವ ದಾಡೆಗಳು ಸ್ಥಳೀಕ ಶಿಲ್ಪ ಕೌಶಲ್ಯತೆಗಳಿಗೆಂದು ಹೇಳಲಿಕ್ಕಾಗಿ ಎಸ್ಕಿಮೊ ಸ್ತ್ರೀಯರೊಂದಿಗೆ ವಾಸಿಸುತ್ತಾರೆ.
ಸಂಹಾರ ಮುಂದುವರಿಯುವಾಗ ಚಿಂತೆಯೂ ಹೆಚ್ಚಾಗುತ್ತದೆ. ವಾಲ್ರಸನ್ನು ನ್ಯಾಯಾನುಸಾರ ಬೇಟೆಯಾಡುವವರೂ ದಂತವನ್ನು ಶಿಲ್ಪಕೌಶಲಗಳಿಗಾಗಿ ಉಪಯೋಗಿಸುವವರೂ ತಮ್ಮ ಹೊಟ್ಟೆಪಾಡಿಗೆ ಅಪಾಯಬಂದಿದೆಯೆಂದು ಎಣಿಸುತ್ತಾರೆ. ವೃದ್ಧ ಎಸ್ಕಿಮೊ ಜನರು, ತಮ್ಮ ಯುವ ಜನರ ಮಧ್ಯೆ ಏರುತ್ತಿರುವ ಅಮಲೌಷಧ ಚಟವನ್ನು ನೋಡಿ ಗಾಬರಿಗೊಂಡಿದ್ದಾರೆ. ಮತ್ತು ವಾಲ್ರಸ್ ಕಡಲ್ಗುದುರೆಯ ವಿಷಯವೇನು? ಶಾಂತಿ ಸಾಗರದಲ್ಲಿ ಅವುಗಳ ಸಂಖ್ಯೆ 2,50,000 ಇನ್ನೂ ಇರುವುದರಿಂದ ಅವು ಅಪಾಯಕ್ಕೊಳಗಾಗಿರುವ ಜೀವಿಗಳೆಂದು ಇದು ವರೆಗೆ ಎಣಿಸಲ್ಪಟ್ಟಿರುವುದಿಲ್ಲ. ಆದರೆ ಅವುಗಳ ನೂರಾರು ಶಿರರಹಿತ ಹೆಣಗಳು ಸಮುದ್ರ ತೀರಕ್ಕೆ ತೇಲಿ ಕೊಂಡು ಬರುತ್ತಿವೆ. ಸೈಬಿರೀಯನ್ ಸಮುದ್ರ ತೀರಕ್ಕೆ ಅವು ಎಷ್ಟೊಂದು ತೇಲಿ ಕೊಂಡು ಬಂದಿವೆಯೆಂದರೆ ಅಮೆರಿಕ ಅದರ ಹತ್ಯೆಯನ್ನು ನಿಲ್ಲಿಸಬೇಕೆಂದು ರಷ್ಯಾ ಒತ್ತಾಯ ಪಡಿಸಿದೆ. ದಾಡೆಗಳು ಲೋಭಿಗಳಿಗೆ ಹಣ ಮತ್ತು ದುರ್ವ್ಯಸನಿಗಳಿಗೆ ಅಮಲೌಷಧವನ್ನು ತರುವಾಗ ಈ ವಾಲ್ರಸ್ ಇನ್ನೆಷ್ಟು ಕಾಲ ನಿರ್ಮೂಲವಾಗುವುದರಿಂದ ರಕ್ಷಿಸಲ್ಪಟ್ಟೀತು? (g90 1/22)
[ಪುಟ 31 ರಲ್ಲಿರುವ ಚಿತ್ರ ಕೃಪೆ]
H. Armstrong Roberts