ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿತರು
ನಿನ್ನೆ ಐದು ವಯಸ್ಸಿಗೆ ಕೆಳಗಿನ 40,000 ಮಂದಿ ಮಕ್ಕಳು ವಿಕಾಸಶೀಲ ಜಗತ್ತಿನಲ್ಲಿ ಸತ್ತರು. ಇನ್ನು 40,000 ಮಕ್ಕಳು ಇಂದು ಸಾಯುವರು. ಮತ್ತು 40,000 ಮಂದಿ ಮಕ್ಕಳು ನಾಳೆ ಸಾಯಲಿದ್ದಾರೆ. ಇದರಲ್ಲಿ ಬಹುತೇಕ ಮರಣಗಳನ್ನು ತಡೆಯಸಾಧ್ಯವಿತ್ತು.
ಈ ಸ್ಥಿತಿಗತಿಯನ್ನು ಅನೇಕ ವರ್ಷಗಳಿಂದ “ಮೌನ ತುರ್ತು” ಅಥವಾ “ಪ್ರಶಾಂತ ವಿಪತ್ತು” ಎಂದು ಕರೆಯಲಾಗುತ್ತದೆ, ಅಂದರೆ ಇದು ಲೋಕದ ಗಮನದಿಂದ ಅಧಿಕಾಂಶ ತಪ್ಪಿದೆ ಎಂದರ್ಥ. “ಪ್ರತಿ ದಿನ 40,000 ಮಚ್ಚೆ ಗೂಗೆಗಳು ಸಾಯುತ್ತಿದ್ದಲ್ಲಿ, ಅದು ಅತ್ಯಾಚಾರವಾಗುತ್ತಿತ್ತು. ಆದರೆ 40,000 ಮಕ್ಕಳು ಸಾಯುತ್ತಿರುವುದು ಗಮನಕ್ಕೇ ಬರುತ್ತಿಲ್ಲ,” ಎಂದು 1990ರಲ್ಲಿ ನ್ಯೂ ಯಾರ್ಕಿನ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಮಕ್ಕಳ ಯುಎನ್ ವರ್ಲ್ಡ್ ಸಮಿಟ್ನಲ್ಲಿ ಅಮೆರಿಕದ ಪ್ರತಿನಿಧಿ ಪೀಟರ್ ಟೀಲೀ ಪ್ರಲಾಪಿಸಿದರು.
ಈ ಶೃಂಗ ಸಭೆ ಇದನ್ನೆಲ್ಲ ಕ್ರಮೇಣ ಬದಲಾಯಿಸೀತು, ಎಂದು ಕೆಲವರ ಅಭಿಪ್ರಾಯ. ನೂರ ಐವತ್ತೊಂಬತ್ತು ದೇಶಗಳಿಂದ 71 ರಾಷ್ಟ್ರ ನಾಯಕರುಗಳು ಸೇರಿದ ಉನ್ನತಾಧಿಕಾರಿಗಳು ಇದರಲ್ಲಿ ಹಾಜರಾಗಿದ್ದರು. ಒಟ್ಟಿಗೆ ಇವರು ಲೋಕ ಜನಸಂಖ್ಯೆಯಲ್ಲಿ 99 ಪ್ರತಿಶತವನ್ನು ಪ್ರತಿನಿಧಿಕರಿಸಿದರು. ಅಲ್ಲಿದ್ದ ಮನೋವೃತ್ತಿಯನ್ನು ಮೀಕಾಯೇಲ್ ಗಾರ್ಬಚೆವ್ ಹೀಗೆಂದು ತಾತ್ಪರ್ಯ ರೂಪದಲ್ಲಿ ಹೇಳಿದರು: “ಲಕ್ಷಗಟ್ಟಲೆ ಮಕ್ಕಳು ಪ್ರತಿ ವರ್ಷ ಸಾಯುತ್ತಾರೆಂಬ ನಿಜತ್ವವನ್ನು ಮಾನವ ಸಂತತಿ ಇನ್ನು ಮುಂದೆ ಸಹಿಸಿಕೊಳ್ಳಸಾಧ್ಯವಿಲ್ಲ.”
ಶೃಂಗ ಸಭೆ ನಡೆಯುವುದಕ್ಕೆ ತುಸು ಮೊದಲಿನ ದಿನಗಳಲ್ಲಿ, ಲೋಕವು ಇದಕ್ಕೆ ತನ್ನ ಬೆಂಬಲವನ್ನು ತೋರಿಸಿತು. ಅಕ್ಷರಶಃ ನೂರಾರು ರಾಷ್ಟ್ರೀಯ ಮತ್ತು ಸಾಮಾಜಿಕ ಕೂಟಗಳು, ಸಭೆಗಳು, ಶಿಕ್ಷಣ ಕೂಟಗಳು, ಮತ್ತು ಚರ್ಚೆಗಳು ಮಕ್ಕಳ ದುರವಸ್ಥೆಯ ಮೇಲೆ ತಮ್ಮ ನೋಟವನ್ನು ಕೇಂದ್ರೀಕರಿಸಿದುವು. ಎಂಬತ್ತು ದೇಶಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು, ಮುಂದಿರುವ ಸಮಸ್ಯೆ ಮತ್ತು ಅಪಾಯಗಳ ಎದುರಿನಲ್ಲಿಯೂ ಜಗತ್ತನ್ನು ಹೆಚ್ಚು ಉತ್ತಮ ಸ್ಥಳವಾಗಿ ಮಾಡಸಾಧ್ಯವಿದೆಯೆಂಬ ನಿರೀಕ್ಷೆಯನ್ನು ತೋರಿಸಲು ಮೋಂಬತ್ತಿಗಳನ್ನು ಉರಿಸಿದರು.
ಶೃಂಗ ಸಭೆಯ ಕೊನೆಯ ದಿನವನ್ನು ಯೂನಿಸೆಫ್ (ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ), “ಲೋಕವ್ಯಾಪಕವಾಗಿ ಮಕ್ಕಳಿಗೆ ಪ್ರಾಯಶಃ ಬಹು ಮುಖ್ಯವಾದ ದಿವಸ” ವೆಂದು ಹೇಳಿ ಸ್ವಾಗತಿಸಿತು. ಇಂಥ ಉತ್ಸಾಹವೇಕೆ? ಏಕೆಂದರೆ ಲೋಕ ನಾಯಕರುಗಳು ಭೂಮ್ಯಾದ್ಯಂತ ಎಳೆಯರ ನರಳಾಟ ಮತ್ತು ಮರಣಗಳನ್ನು ಕಡಮೆ ಮಾಡಲು ಒಂದು ನಿರ್ದಿಷ್ಟ “ಕಾರ್ಯಕ್ರಮ”ವನ್ನು ಆಯ್ದುಕೊಂಡಿದ್ದರು.
ಇಂಥ ಸಂಮೇಳನ ಸಾಮೋಪಾಯವು ವಾಗ್ದಾನ ವೈಫಲ್ಯಗಳಿಂದ ವಿಪುಲವಾಗಿದೆಯೆಂದು ಒಪ್ಪಿಕೊಳ್ಳಬೇಕು. ಆದರೂ, ಶೀತಲ ಯುದ್ಧದ ಪರಿಣಾಮವಾಗಿ ಅನೇಕರು ಯಥಾರ್ಥತೆ ಮತ್ತು ಸಹಕಾರದ ಹೊಸ ಮನೋಭಾವವನ್ನು ಕಂಡರು. ಯೂನಿಸೆಫ್ನ ಕಾರ್ಯನಿರ್ವಾಹಕ ಡೈರೆಕ್ಟರ್, ಜೇಮ್ಸ್ ಗ್ರಾಂಟ್ ಉತ್ಸಾಹದಿಂದ ಹೇಳಿದ್ದು: “ಸರಕಾರದ ಶಿರಸ್ಸುಗಳು ಮತ್ತು ಸರಕಾರ ಕಾರ್ಯತಃ ಎಲ್ಲ ಜನರ—‘ಬೆಳೆದ ಮಕ್ಕಳ’ ಹಾಗೂ ಮಕ್ಕಳ—ಹಿತವನ್ನು ಸ್ಥಾಪಿಸುವುದೇ ಒಂದು ಹೊಸ ಜಗತ್ತಿನ ವ್ಯವಸ್ಥೆಯ ವಿಕಸನದಲ್ಲಿ ಪ್ರಧಾನ ಧ್ಯೇಯವೆಂಬುದರ ಕಡೆಗೆ ಪ್ರಥಮ ಹೆಜ್ಜೆಯನ್ನಿಟ್ಟರು.”
ಶೃಂಗ ಸಭೆಯನ್ನು ಅನುಸರಿಸಿ ಒಂದು ವರ್ಷದೊಳಗೆ, ಶೃಂಗ ಸಭೆಯ ಠರಾವುಗಳನ್ನು ಕಾರ್ಯರೂಪಕ್ಕೆ ಹಾಕಲು ಬಹುತೇಕ ರಾಷ್ಟ್ರಗಳು ಆಗಲೆ ತಮ್ಮ ರಾಷ್ಟ್ರೀಯ ಯೋಜನೆಗಳನ್ನು ರಚಿಸಿದ್ದವು. ಇದರಿಂದ ಡೈರೆಕ್ಟರ್ ಗ್ರಾಂಟ್, “ನಾವೀಗ ಇಸವಿ 2000ದೊಳಗೆ ಎಲ್ಲ ಮಕ್ಕಳಿಗೆ ಆರೋಗ್ಯವು ಸಾಧಿಸಲ್ಪಡುವುದೆಂಬ ಅತಿ ನೈಜ ಪ್ರತೀಕ್ಷೆಯನ್ನು ನೋಡುತ್ತೇವೆ” ಎಂದು ಹೇಳುವಂತೆ ಪ್ರೇರಿಸಲ್ಪಟ್ಟರು.
ಆದರೆ ಅಂತಾರಾಷ್ಟ್ರೀಯ ಮಾಧ್ಯಮಗಳು ಬಯಲು ಪಡಿಸಿದ ಈ ಮಕ್ಕಳ ದುರವಸ್ಥೆ, ಲೋಕದ ಲಜ್ಜಾಸ್ಪದವಾದ ಕುಟುಂಬ ಗುಟ್ಟು, ಅದೇನು? ಈಗ, ಅಂತಾರಾಷ್ಟ್ರೀಯ ಸಹಕಾರದ ಶೀತಲ ಯುದ್ಧಾನಂತರದ ವಾತಾವರಣದಲ್ಲಿ, ಸಂಯುಕ್ತ ರಾಷ್ಟ್ರ ಸಂಸ್ಥೆಯು ಒಂದು ಆಶ್ಚರ್ಯಕರವಾದ ಹೊಸ ಜಾಗತಿಕ ವ್ಯವಸ್ಥೆಗೆ ನುಗ್ಗುಮೊನೆಯಾಗುತ್ತದೆಂದು ನಂಬಲು ಸ್ವಸ್ಥ ಕಾರಣಗಳಿವೆಯೆ? ನಾವು ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯತ್ತನ್ನು ವ್ಯಾವಹಾರಿಕವಾಗಿ ನಿರೀಕ್ಷಿಸಬಹುದೊ? ಈ ಪ್ರಶ್ನೆಗಳನ್ನು ಮುಂದಿನ ಎರಡು ಲೇಖನಗಳು ಪರಿಗಣಿಸುವುವು. (g92 12/8)