ಉಲ್ಕಾ ನಕ್ಷತ್ರಗಳು ಎಲ್ಲಿಂದ ಬರುತ್ತವೆ?
“ಓ, ನೋಡಿ! ಅಲ್ಲಿ ಇನ್ನೊಂದು ಹೋಗುತ್ತದೆ!” “ಎಲ್ಲಿ?, ಎಲ್ಲಿ?” ರಾತ್ರಿಯ ಗಗನದಲ್ಲಿ ಉಲ್ಕಾ ನಕ್ಷತ್ರಗಳಿಗಾಗಿ ಹುಡುಕುವಾಗ ನೀವು ಎಂದಾದರೂ ಹಾಗೆ ಹೇಳಿದ್ದುಂಟೊ? ತಾರಾಮಯ ಆಕಾಶದಲ್ಲಿ ತೇಜೋಮಯವಾಗಿ ಥಟ್ಟನೆ ನಿಮ್ಮ ಮೇಲಿಂದ ಹಾರಿ ಹೋದ ಒಂದನ್ನು ಪ್ರಥಮ ಬಾರಿ ನೋಡಿದ ನಿಮಗೆ ಪ್ರಾಯಶಃ ನಕ್ಷತ್ರಗಳಲ್ಲಿ ಒಂದು ಹಠಾತ್ತಾಗಿ ಆಕಾಶದಲ್ಲಿ ಹಾರಿ ಹೋಗುತ್ತಿದೆ ಎಂಬಂತೆ ಕಂಡಿರಬಹುದು. ಉಲ್ಕಾ ನಕ್ಷತ್ರಗಳು ನಿಜವಾಗಿಯೂ ತಪ್ಪಾದ ಹೆಸರಿಂದ ಕರೆಯಲ್ಪಟ್ಟಿವೆಯೆಂಬುದು ನಿಶ್ಚಯ. ಅವು ‘ಹಾರುವುದು’ ಏನೋ ನಿಶ್ಚಯವಾದರೂ ಅವು ನಕ್ಷತ್ರಗಳಾಗಿರುವುದಕ್ಕಿಂತ ಎಷ್ಟೋ ಭಿನ್ನವಾಗಿವೆ.
ಖಗೋಲ ಶಾಸ್ತ್ರಜ್ಞರು ಅವುಗಳನ್ನು ಉಲ್ಕೆಗಳೆಂದು ಕರೆಯುತ್ತಾರೆ. ಮತ್ತು ಒಂದು ಸರಾಸರಿ ಗಾತ್ರದ ನಕ್ಷತ್ರವು ನಮ್ಮ ಇಡೀ ಭೂಗ್ರಹದ ದಶಲಕ್ಷದಷ್ಟು ಗಾತ್ರವನ್ನು ಕಬಳಿಸಬಲ್ಲದಾಗಿರುವಾಗ, ಈ ಉಲ್ಕೆಗಳ ದಶಲಕ್ಷದಷ್ಟು ಗಾತ್ರವನ್ನು ಕಬಳಿಸುವುದು ನಮ್ಮ ಗ್ರಹವೇ. ಉಲ್ಕೆಗಳೆಂದರೇನು, ಮತ್ತು ಅವು ಎಲ್ಲಿಂದ ಬರುತ್ತವೆ?
ಅವುಗಳಿಗೂ ಧೂಮಕೇತುಗಳಿಗೂ ತುಂಬ ಸಂಬಂಧವಿದೆ. ಒಂದು ಪ್ರಸಿದ್ಧ ಉದಾಹರಣೆಯಾದ ಹ್ಯಾಲೀಸ್ ಧೂಮಕೇತು ಸೂರ್ಯನ ಸುತ್ತಲಿನ ತನ್ನ 76 ವರ್ಷ ಉದ್ದದ ಅಂಡಾಕಾರದ ಪ್ರಯಾಣವನ್ನು ಮಾಡುವಾಗ 1986ರಲ್ಲಿ ಭೂಮಿಯ ಬಳಿ ವೇಗದಲ್ಲಿ ದಾಟಿಹೋಯಿತು. ಧೂಮಕೇತುಗಳಲ್ಲಿ ಅಧಿಕಾಂಶ ಹಿಮ ಮತ್ತು ದೂಳು ಸೇರಿರುವುದರಿಂದ, ಅವುಗಳನ್ನು ಕೆಲವು ಬಾರಿ ಕೊಳೆಯಾದ ಮಂಜಿನ ಚೆಂಡುಗಳೆಂದು ಕರೆಯಲಾಗುತ್ತದೆ. ಒಂದು ಧೂಮಕೇತು ಸೂರ್ಯನನ್ನು ಸಮೀಪಿಸುವಾಗ, ಅದರ ಮೇಲ್ಮೈ ಬೆಚ್ಚಗಾಗುತ್ತದೆ ಮತ್ತು ಅದು ದೂಳು ಮತ್ತು ಅನಿಲವನ್ನು ಹೊರಬಿಡುತ್ತದೆ. ಸೂರ್ಯಪ್ರಕಾಶದ ವಿಕಿರಣ ಒತ್ತಡವು ಗಟ್ಟಿ ಪದಾರ್ಥವನ್ನು ಜ್ವಲಿಸುವ ದೂಳಿನ ಬಾಲವಾಗಿ ಹಿಂದೆ ತಳ್ಳುತ್ತದೆ. ಹೀಗೆ ಧೂಮಕೇತು ತನ್ನ ಹಿಂದೆ ಭಗ್ನಾವಶೇಷದ ಒಂದು ದೂಳಿನ ಪಥ—ಅವು ಇನ್ನೂ ಅಂತರಿಕ್ಷದಲ್ಲಿರುವಾಗ ಅವುಗಳು ಉಲ್ಕಾ ಕಲ್ಪವೆಂದು ಕರೆಯಲ್ಪಡುತ್ತವೆ—ವನ್ನು ಬಿಟ್ಟು ಹೋಗುತ್ತದೆ. ಧೂಮಕೇತುವಿನ ಹೆಚ್ಚಿನ ದೂಳು ಕಾಣಸಿಗುವ ಉಲ್ಕೆಗಳಾಗಲು ತೀರಾ ಚಿಕ್ಕವಾಗಿರುತ್ತವೆ. ದೂಳಿನ ಕಣಗಳಲ್ಲಿ ಲೇಶವು ಒಂದು ಮರಳ ಕಣದ ಗಾತ್ರದ್ದಾಗಿರುವಾಗ ಕೆಲವು ಕಣಗಳು ಕಲ್ಲು ಹರಳುಗಳಷ್ಟು ದೊಡ್ಡದಾಗಿರುತ್ತವೆ.
ಕೆಲವೇ ಸಂದರ್ಭಗಳಲ್ಲಿ ಧೂಮಕೇತುವಿನ ಕಕ್ಷೆ ಭೂಮಿಯದ್ದನ್ನು ಛೇದಿಸುತ್ತದೆ. ಅಂದರೆ ಧೂಮಕೇತುವಿನ ಕಕ್ಷೆಯನ್ನು ಹಾದುಹೋಗುವಾಗ ಭೂಮಿಯು ಅದೇ ದೂಳಿನ ಪಥವನ್ನು ಸಂಧಿಸುತ್ತದೆಂದು ಅರ್ಥ. ಇದು ಸಂಭವಿಸುವಾಗ, ಆ ಸೂಕ್ಷ್ಮ ಉಲ್ಕಾ ಕಲ್ಪಗಳು ಜಾಸ್ತಿ ವೇಗದಲ್ಲಿ—ಸೆಕೆಂಡಿಗೆ 44 ಮೈಲುಗಳಂತೆ—ವಾತಾವರಣದೊಳಕ್ಕೆ ದುಮುಕುತ್ತವೆ. ಅವು ಹೀಗೆ ಬೀಳುವಾಗ ಅವುಗಳಲ್ಲಿ ದೊಡ್ಡವು ಕಾಯಿಸಲ್ಪಟ್ಟು ಸುಟ್ಟುಹೋಗುತ್ತವೆ. ಹೀಗೆ ಆಕಾಶದಾದ್ಯಂತ ಬಿಳಿ-ಬಿಸಿ ಗೆರೆಗಳಾಗುವ ಉಲ್ಕೆಗಳೆಂದು ಹೆಸರಾಗಿರುವುವುಗಳನ್ನು ಅವು ಉಂಟುಮಾಡುತ್ತವೆ.
ಭೂಮಿ ಧೂಮಕೇತುವಿನ ಪಥವನ್ನು ದಾಟುವಾಗ, ಉಲ್ಕೆಗಳು ಆಕಾಶದ ಒಂದೇ ಸ್ಥಾನದಿಂದ, ವಿಕಿರಣ ನಾಭಿಯೆಂದು ಕರೆಯಲ್ಪಡುವ ಸ್ಥಳದಿಂದ ಹೊರಹಾರುವಂತೆ ಕಂಡುಬರುತ್ತವೆ. ಈ ನಾಭಿಗಳಿಂದ ಉಲ್ಕೆಗಳ ವೃಷ್ಟಿಯು ವರ್ಷದ ನಿಯತಕಾಲಗಳಲ್ಲಿ ಬೀಳುತ್ತದೆ. ಒಂದು ಜನಪ್ರಿಯ ಪ್ರದರ್ಶನವು ಪರ್ಸೀಅಡ್ಸ್ ಷೌಅರ್. ಇದನ್ನು ಹೀಗೆ ಕರೆಯಲು ಕಾರಣವೇನಂದರೆ ಅದರ ನಾಭಿ ಪರ್ಸೀಅಸ್ ತಾರಾಪುಂಜದಲ್ಲಿದೆ. ಈ ಪರ್ಸೀಅಡ್ಸ್ ಪ್ರತಿ ವರ್ಷ ಸುಮಾರು ಆಗಸ್ಟ್ 12 ಯಾ 13ರಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟುವಾಗ, ಅದೊಂದು ವಿಸ್ಮಯಕಾರಿ ಪ್ರದರ್ಶನವಾಗಿರುತ್ತದೆ. ಪ್ರತಿ ತಾಸಿಗೆ 60ಕ್ಕೂ ಹೆಚ್ಚು ಉಲ್ಕಾಪಾತಗಳಾಗುತ್ತವೆ.
ಸುಮಾರು ಅಕ್ಟೋಬರ್ 21ರಂದು ನೀವು ಮೃಗಶಿರಾ (ಒರೈಅನಿಡ್) ವೃಷ್ಟಿಯನ್ನು ನೋಡಿರಿ. ಇದು ಮೊದಲಿನ ಕುಂಭ (ಆ್ಯಕ್ವರಿಡ್ಸ್) ವೃಷ್ಟಿಯಂತೆಯೇ, ಹ್ಯಾಲೀಸ್ ಧೂಮಕೇತುವಿನ ಉಲ್ಕಾ ಕಲ್ಪಗಳ ಕಾರಣ ಸಂಭವಿಸುತ್ತದೆಂದು ಹೇಳಲಾಗುತ್ತದೆ. ಆ್ಯಸ್ಟ್ರಾನಮಿ ಪತ್ರಿಕೆಗನುಸಾರ, ಹ್ಯಾಲೀಸ್ ಧೂಮಕೇತು, “ಅದರ ಎಲ್ಲ ಪದಾರ್ಥಗಳನ್ನು ಕಳೆದುಕೊಳ್ಳುವ ಮೊದಲು 1,00,000 ಕಕ್ಷೆಗಳನ್ನು ಮಾಡಬಲ್ಲದು” ಎಂದು ವಿಜ್ಞಾನಿಗಳ ಅಂದಾಜು. ಅವರ ಪೂರ್ವ ಸಿದ್ಧಾಂತವು ಸರಿಯಾಗಿರುವಲ್ಲಿ, ಹ್ಯಾಲೀಸ್ ಧೂಮಕೇತು ಮುಂದಿನ 76,00,000 ವರ್ಷಗಳಲ್ಲಿ ನಿಯತಕಾಲಿಕವಾಗಿ ಭೇಟಿ ಕೊಡುತ್ತಾ ಇರುವುದು! ಮತ್ತು ಅದು ಗತಿಸಿ ಹೋಗಿ ಬಹಳ ಕಾಲವಾದ ಬಳಿಕವೂ ಅದರ ದೂಳಿನ ಬಾಲವು ಭೂನಿವಾಸಿಗಳಿಗೆ ಮುಂದಿನ ಯುಗಾಂತರಗಳಲ್ಲಿ ಉಲ್ಕಾ ನಕ್ಷತ್ರಗಳನ್ನು ಕೊಡುತ್ತಾ ಮುಂದುವರಿಯುವುದು ನಿಸ್ಸಂದೇಹ. ನಾವು ಪ್ರಚಲಿತವಾಗಿ ನೋಡುತ್ತಿರುವ ಉಲ್ಕೆಗಳಲ್ಲಿ ಅನೇಕ, ಎಷ್ಟೋ ಕಾಲದಿಂದ ಗತಿಸಿಹೋಗಿರುವ ಧೂಮಕೇತುಗಳಿಂದ ಬರುತ್ತವೆಂಬುದು ವ್ಯಕ್ತ.
ಲೋಕವ್ಯಾಪಕವಾಗಿ ನಮ್ಮ ವಾತಾವರಣದಲ್ಲಿ ಪ್ರತಿದಿನ ಸುಮಾರು 20 ಕೋಟಿ ದೃಶ್ಯ ಉಲ್ಕೆಗಳಿವೆಯೆಂದು ವಿಜ್ಞಾನಿಗಳು ಲೆಕ್ಕ ಹಾಕುತ್ತಾರೆ. ಮತ್ತು ಇನ್ನೂ ಹೆಚ್ಚು ಪ್ರೇಕ್ಷಣೀಯವಾದ ಉಲ್ಕಾ ವೃಷ್ಟಿಯನ್ನು ನೋಡಬೇಕಾಗಿರುವಲ್ಲಿ, ಹೇಗೂ ಮುಂದಿನ ವರ್ಷ—ಮತ್ತು ಬರಲಿರುವ ಲಕ್ಷಾಂತರ ವರ್ಷಗಳು—ಇದ್ದೇ ಇದೆಯಲ್ಲ! (g93 3/22)