ಅದು ಯಾರ ದೋಷ?
ಪ್ರಥಮ ಮನುಷ್ಯನಾದ ಆದಾಮನು ಆ ಪ್ರವೃತ್ತಿಯನ್ನು ಆರಂಭಿಸಿದನು. ಅವನು ಪಾಪಗೈದ ಮೇಲೆ, ದೇವರಿಗೆ ಹೇಳಿದ್ದು: “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು.” ಕಾರ್ಯತಃ ಅವನು ಹೇಳುತ್ತಿದ್ದದ್ದು: “ಅದು ನನ್ನ ದೋಷವಲ್ಲ!” ಪ್ರಥಮ ಸ್ತ್ರೀಯಾದ ಹವ್ವಳು , “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಹೇಳಿದಾಗ, ಅದನ್ನೇ ಮಾಡಿದಳು.—ಆದಿಕಾಂಡ 3:12, 13.
ಹೀಗೆ, ತಮ್ಮ ಸ್ವಂತ ಕೃತ್ಯಗಳಿಗೆ ಹೊಣೆಗಾರಿಕೆಯನ್ನು ಸ್ವೀಕರಿಸಲು ಮಾನವರ ತಿರಸ್ಕಾರಕ್ಕೆ ಏದೆನ್ ತೋಟದಲ್ಲಿ ಪೂರ್ವ ನಿದರ್ಶನವನ್ನು ಸ್ಥಾಪಿಸಲಾಯಿತು. ನೀವು ಎಂದಾದರೂ ಈ ವಿಷಯದಲ್ಲಿ ದೋಷಿಗಳಾಗಿದ್ದುಂಟೊ? ಸಮಸ್ಯೆಗಳು ಏಳುವಾಗ, ನೀವು ಬೇಗನೆ ಇತರರನ್ನು ಆರೋಪಿಸುತ್ತೀರೊ? ಅಥವಾ ನಿಜವಾಗಿಯೂ ದೋಷ ಯಾರದ್ದಾಗಿದೆ ಎಂದು ನೋಡಲು ನೀವು ಸನ್ನಿವೇಶವನ್ನು ವಿಶ್ಲೇಷಿಸುತ್ತೀರೊ? ದೈನಂದಿನ ಜೀವಿತದಲ್ಲಿ, ನಮ್ಮ ತಪ್ಪುಗಳಿಗಾಗಿ ಇತರರನ್ನು ಆರೋಪಿಸುವ ಮತ್ತು “ಅದು ನನ್ನ ದೋಷವಲ್ಲ!” ಎಂದು ಹೇಳುವ ಪಾಶದೊಳಗೆ ಬೀಳುವುದು ಬಹಳ ಸುಲಭವಾಗಿದೆ. ಸಾಮಾನ್ಯ ಸನ್ನಿವೇಶಗಳ ಕಡೆಗೆ ದೃಷ್ಟಿಹರಿಸಿ, ಕೆಲವು ಜನರು ಏನನ್ನು ಮಾಡುವ ಪ್ರವೃತ್ತಿಯುಳ್ಳವರಾಗಿದ್ದಾರೆಂದು ನೋಡೋಣ. ಹೆಚ್ಚು ಪ್ರಾಮುಖ್ಯವಾಗಿ, ಅದೇ ಪರಿಸ್ಥಿತಿಗಳಲ್ಲಿ ನೀವು ಏನು ಮಾಡುವಿರೆಂಬ ವಿಷಯದ ಕುರಿತು ಪ್ರತಿಬಿಂಬಿಸಿರಿ.
ಹಣಕಾಸಿನ ದಾರಿದ್ರ್ಯ
ಕೆಲವರು ತಾವು ಆಳವಾದ ಹಣಕಾಸಿನ ತೊಂದರೆಯಲ್ಲಿ ಇರುವುದನ್ನು ಕಂಡುಕೊಳ್ಳುವಾಗ, “ಅದು ನನ್ನ ದೋಷವಲ್ಲ, ಅದು ಆರ್ಥಿಕ ಪರಿಸ್ಥಿತಿಯ, ಕುಟಿಲ ವ್ಯಾಪಾರಿಗಳ, ಅತಿಯಾದ ಜೀವನವೆಚ್ಚದ ದೋಷವಾಗಿದೆ,” ಎಂದು ಹೇಳಬಹುದು. ಆದರೆ ಈ ಅಂಶಗಳ ಮೇಲೆ ನಿಜವಾಗಿಯೂ ಜವಾಬ್ದಾರಿ ಹೊರಿಸಬಹುದೊ? ಬಹುಶಃ ಅನಿಶ್ಚಿತ ಪರಿಸ್ಥಿತಿಗಳು ಅವರನ್ನು ಸಂದೇಹಾಸ್ಪದ ಅಥವಾ ಊಹಾತ್ಮಕ ವ್ಯಾಪಾರೋದ್ಯಮಗಳಲ್ಲಿ ತೊಡಗಿಸಿದವು. ಕೆಲವೊಮ್ಮೆ ಅತ್ಯಾಶೆಯು ವಾಸ್ತವಿಕತಾ ಪ್ರವೃತ್ತಿಯನ್ನು ಮರೆಮಾಡುತ್ತದೆ, ಮತ್ತು ಜನರು ಸುಲಿಗೆಕೋರರಿಗೆ ಸರಳವಾದ ಬಲಿಗಳಾಗುತ್ತಾ, ಗೊತ್ತಿರದ ವ್ಯಾಪಾರೋದ್ಯಮಗಳನ್ನು ತಾವು ನಿರ್ವಹಿಸುತ್ತಿದ್ದೇವೆಂದು ಕಂಡುಕೊಳ್ಳುತ್ತಾರೆ. “ವಾಸ್ತವಿಕವಾಗಿರಲು ಯಾವುದಾದರೊಂದು ವಿಷಯವು ತೀರ ಒಳ್ಳೆಯದಾಗಿ ತೋರುವುದಾದರೆ, ಅದು ಸಾಮಾನ್ಯವಾಗಿ ತೋರಿದಷ್ಟು ಒಳ್ಳೆಯದಾಗಿರುವುದಿಲ್ಲ,” ಎಂಬ ಲೋಕೋಕ್ತಿಯನ್ನು ಅವರು ಮರೆತುಬಿಡುತ್ತಾರೆ. ಅವರು ಕೇಳಲು ಬಯಸುವ ಬುದ್ಧಿವಾದಕ್ಕಾಗಿ ಅವರು ಹುಡುಕುತ್ತಾರೆ, ಆದರೆ ಆರ್ಥಿಕ ದಾರಿದ್ರ್ಯವು ಅದರ ಅಸಹ್ಯವಾದ ತಲೆಯನ್ನು ಎತ್ತುವಾಗ, ತಪ್ಪು ಹೊರಿಸಲು ಅವರು ಬೇರೆ ಯಾರಾದರೊಬ್ಬರನ್ನು ಹುಡುಕುತ್ತಾರೆ. ಇದು, ದುಃಖಕರವಾಗಿ ಕೆಲವೊಮ್ಮೆ ಕ್ರೈಸ್ತ ಸಭೆಯಲ್ಲಿಯೂ ಸಂಭವಿಸುತ್ತದೆ.
ಕೆಲವರು ಅಸ್ತಿತ್ವದಲ್ಲಿರದ ವಜ್ರಗಳ ಖರೀದಿ, ಬೇಗನೆ ಅಸಫಲಗೊಂಡ ಅತ್ಯಂತ ಪ್ರಸಿದ್ಧವಾದ ಟೆಲಿವಿಷನ್ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವ, ಅಥವಾ ದಿವಾಳಿಯಾದ ಸ್ಥಿರಾಸ್ತಿಯ ಬೆಳವಣಿಗೆಗಳನ್ನು ಬೆಂಬಲಿಸುವಂತಹ ಅವಿವೇಕದ ಅಥವಾ ಯಥಾರ್ಥವಲ್ಲದ ಬಂಡವಾಳ ಯೋಜನೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಸಂಪತ್ತಿಗಾಗಿ ಮಿತಿಮೀರಿದ ಒಂದು ಬಯಕೆಯು ಬೈಬಲ್ ಸಲಹೆಯ ಅವರ ಜ್ಞಾಪಕವನ್ನು ಮಬ್ಬುಗೊಳಿಸಿರಬಹುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
ಅಶಿಸ್ತಿನ ವೆಚ್ಚಮಾಡುವಿಕೆ ಸಹ ಹಣಕಾಸಿನ ಧ್ವಂಸಕ್ಕೆ ನಡೆಸಬಲ್ಲದು. ಇತ್ತೀಚಿನ ಫ್ಯಾಶನ್ ಪತ್ರಿಕೆಗಳಲ್ಲಿರುವ ಜನರಂತೆ ಕಾಣಬೇಕೆಂದು, ದುಬಾರಿಯಾದ ವಿರಾಮ ಕಾಲಗಳನ್ನು ಕೈಗೊಳ್ಳಬೇಕೆಂದು, ವಿಶೇಷವಾದ ಶ್ರೇಷ್ಠತೆಯುಳ್ಳ ಹೋಟೆಲುಗಳಲ್ಲಿ ಊಟಮಾಡಬೇಕೆಂದು, ಮತ್ತು ಮನೋರಂಜನಾ ವಾಹನಗಳು, ದೋಣಿಗಳು, ಕ್ಯಾಮರಗಳು, ಸ್ಟೀರಿಯೊ ಸಜ್ಜುಗಳಂತಹ ಇತ್ತೀಚಿನ ವಯಸ್ಕರ “ಆಟದ ಸಾಮಾನುಗಳನ್ನು” ಕೊಂಡುಕೊಳ್ಳಬೇಕೆಂದು ಕೆಲವರಿಗೆ ಅನಿಸುತ್ತದೆ. ನಿಶ್ಚಯವಾಗಿ, ಸಕಾಲದಲ್ಲಿ ಕೆಲವರು ಬುದ್ಧಿವಂತಿಕೆಯ ಯೋಜನೆ ಮತ್ತು ಉಳಿತಾಯದ ಮುಖಾಂತರ ಈ ವಿಷಯಗಳನ್ನು ಪಡೆಯಲು ಶಕ್ತರಾಗಬಹುದು. ಆದರೂ ಅವುಗಳನ್ನು ಪಡೆಯಲು ಅವಸರ ಪಡುವವರು ತಮ್ಮನ್ನು ಅತಿಯಾದ ಸಾಲದಲ್ಲಿ ಇರುವವರಾಗಿ ಕಂಡುಕೊಳ್ಳಬಹುದು. ಅವರು ಹಾಗೆ ಮಾಡುವುದಾದರೆ, ಅದು ಯಾರ ದೋಷ? ಸ್ಪಷ್ಟವಾಗಿಗಿ ಅವರು ಜ್ಞಾನೋಕ್ತಿ 13:18ರ ಸ್ವಸ್ಥ ಬುದ್ಧಿವಾದವನ್ನು ಕಡೆಗಣಿಸಿದ್ದಾರೆ: “ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ.”
ಮಕ್ಕಳಿಂದ ನಿರಾಶೆ
“ನನ್ನ ಮಕ್ಕಳು ಸತ್ಯವನ್ನು ಬಿಟ್ಟದ್ದು ಹಿರಿಯರ ದೋಷ,” ಎಂದು ಕೆಲವು ಹೆತ್ತವರು ಹೇಳಬಹುದು. “ನನ್ನ ಮಕ್ಕಳ ಕಡೆಗೆ ಸಾಕಷ್ಟು ಗಮನವನ್ನು ಅವರು ನೀಡಲಿಲ್ಲ.”
ಮಂದೆಯನ್ನು ಪಾಲಿಸುವ ಮತ್ತು ಪರಾಮರಿಸುವ ಹೊಣೆ ಹಿರಿಯರಿಗೆ ಇದ್ದೇ ಇದೆ, ಆದರೆ ಸ್ವತಃ ಹೆತ್ತವರ ಕುರಿತೇನು? ತಮ್ಮ ಎಲ್ಲ ವ್ಯವಹಾರಗಳಲ್ಲಿ ದೇವರ ಆತ್ಮದ ಫಲವನ್ನು ಪ್ರದರ್ಶಿಸುವುದರಲ್ಲಿ ಅವರು ಆದರ್ಶಪ್ರಾಯರಾಗಿದ್ದಾರೊ? ಬೈಬಲಿನ ಕುಟುಂಬ ಅಧ್ಯಯನವನ್ನು ಕ್ರಮಬದ್ಧತೆಯಿಂದ ನಡೆಸಲಾಗಿತ್ತೊ? ಯೆಹೋವನ ಸೇವೆಯಲ್ಲಿ ಹೆತ್ತವರು ಹುರುಪನ್ನು ತೋರಿಸಿ, ಮಕ್ಕಳು ಅದಕ್ಕಾಗಿ ತಯಾರಿಸುವಂತೆ ಸಹಾಯ ಮಾಡಿದರೊ? ತಮ್ಮ ಮಕ್ಕಳ ಸಹವಾಸಿಗಳ ವಿಷಯದಲ್ಲಿ ಅವರು ಜಾಗರೂಕರಾಗಿದ್ದರೊ?
ತದ್ರೀತಿಯಲ್ಲಿ, ಶಾಲಾಕೆಲಸದ ಸಂಬಂಧದಲ್ಲಿ ಹೀಗೆ ಹೇಳುವುದು ಒಬ್ಬ ಹೆತ್ತವರಿಗೆ ಸುಲಭ: “ಶಾಲೆಯಲ್ಲಿ ನನ್ನ ಮಗ ಚೆನ್ನಾಗಿ ಮಾಡದೇ ಇದ್ದದ್ದು ಶಿಕ್ಷಕರ ದೋಷ. ಅವರು ನನ್ನ ಮಗನನ್ನು ಇಷ್ಟಪಡಲಿಲ್ಲ. ಹೇಗಿದ್ದರೂ ಆ ಶಾಲೆಗೆ ಬಹಳ ಕಡಿಮೆ ಶಿಕ್ಷಣ ಮಟ್ಟವಿದೆ.” ಆದರೆ ಹೆತ್ತವರಲ್ಲೊಬ್ಬರು, ಶಾಲೆಯೊಂದಿಗೆ ನಿಕಟವಾಗಿ ಸಂಸರ್ಗ ಮಾಡಿದರೊ? ಹೆತ್ತವರಲ್ಲೊಬ್ಬರು ಮಗುವಿನ ಪಾಠಕ್ರಮ ಮತ್ತು ಅಭ್ಯಾಸಗಳಲ್ಲಿ ಆಸಕ್ತರಾಗಿದ್ದರೊ? ಅವನ ಶಾಲಾ ಮನೆಗೆಲಸಕ್ಕೆ ಒಂದು ವೇಳಾಪಟ್ಟಿಯಿತ್ತೊ, ಮತ್ತು ಅಗತ್ಯವಿರುವಾಗ ನೆರವು ನೀಡಲ್ಪಟ್ಟಿತೊ? ಸಂಬಂಧಪಟ್ಟ ಸಮಸ್ಯೆಯು ಮಗುವಿನ ಅಥವಾ ತಂದೆ ಯಾ ತಾಯಿಯ ವಿಷಯದಲ್ಲಿ ಮನೋಭಾವದ ಅಥವಾ ಸೋಮಾರಿತನದ ವಿಷಯವಾಗಿರಬಲ್ಲದೊ?
ಶಾಲಾ ವ್ಯವಸ್ಥೆಯನ್ನು ಹೆತ್ತವರು ದೂಷಿಸುವ ಬದಲು, ತಮ್ಮ ಮಕ್ಕಳಲ್ಲಿ ಸರಿಯಾದ ಮನೋಭಾವವಿದೆ ಎಂಬುದನ್ನು ಮತ್ತು ತಮಗೆ ಶಾಲೆಯಲ್ಲಿ ಲಭ್ಯವಿರುವ ಕಲಿಕೆಯ ಅವಕಾಶಗಳ ಉಪಯೋಗವನ್ನು ಅವರು ಮಾಡುತ್ತಾರೆಂಬುದನ್ನು ಖಚಿತಮಾಡಿಕೊಳ್ಳಲು ಅವರು ಸಕಾರಾತ್ಮಕವಾಗಿ ಕ್ರಿಯೆಗೈಯುವುದಾದರೆ, ಅದು ಅತಿ ಹೆಚ್ಚು ಉತ್ಪನ್ನಕಾರಕವಾಗಿದೆ.
ಆತ್ಮಿಕವಾಗಿ ಅಭಿವೃದ್ಧಿ ಪಡೆಯುವುದರಲ್ಲಿ ವೈಫಲ್ಯ
ಪ್ರಾಸಂಗಿಕವಾಗಿ ಯಾರಾದರೊಬ್ಬರು ಹೀಗೆ ಹೇಳುವುದನ್ನು ನಾವು ಕೇಳುತ್ತೇವೆ: “ನಾನು ಆತ್ಮಿಕವಾಗಿ ಪ್ರಬಲನಾಗಿರುತ್ತಿದ್ದೆ, ಆದರೆ ನಾನು ಪ್ರಬಲನಾಗಿರದೆ ಇರುವುದು ನನ್ನ ದೋಷವಲ್ಲ. ಹಿರಿಯರು ನನಗೆ ಸಾಕಷ್ಟು ಗಮನವನ್ನು ನೀಡುವುದಿಲ್ಲ. ನನಗೆ ಮಿತ್ರರೇ ಇಲ್ಲ. ಯೆಹೋವನ ಆತ್ಮವು ಈ ಸಭೆಯ ಮೇಲೆ ಇಲ್ಲ.” ಈ ಮಧ್ಯೆ, ಸಭೆಯಲ್ಲಿರುವ ಇತರರಿಗೆ ಮಿತ್ರರಿದ್ದಾರೆ, ಸಂತೋಷದಿಂದಿದ್ದಾರೆ, ಮತ್ತು ಒಳ್ಳೆಯ ಆತ್ಮಿಕ ಪ್ರಗತಿಯನ್ನು ಮಾಡುತ್ತಾರೆ; ಮತ್ತು ಸಭೆಯು ಬೆಳವಣಿಗೆ ಹಾಗೂ ಆತ್ಮಿಕ ಏಳಿಗೆಯಿಂದ ಆಶೀರ್ವದಿಸಲ್ಪಟ್ಟಿದೆ. ಆದುದರಿಂದ ಕೆಲವರಿಗೆ ಸಮಸ್ಯೆಗಳಿರುವುದು ಏಕೆ?
ಒಂದು ನಕಾರಾತ್ಮಕ ಹಾಗೂ ಆಪಾದಕ ಆತ್ಮವನ್ನು ಪ್ರದರ್ಶಿಸುವವರೊಂದಿಗೆ, ನಿಕಟ ಸಂಗಾತಿಗಳಾಗಿರಲು ಕೊಂಚ ಜನರು ಬಯಸುತ್ತಾರೆ. ತೀಕ್ಷೈವಾದ ಮನಚುಚ್ಚುವ ನಾಲಿಗೆ ಮತ್ತು ಸತತವಾದ ಆಪಾದನೆಗಳು ಅತ್ಯಂತ ನಿರುತ್ಸಾಹಕಾರಿಯಾಗಿರಬಲ್ಲವು. ಆತ್ಮಿಕವಾಗಿ ದುರ್ಬಲಗೊಳ್ಳಲು ಬಯಸದೆ ಇರುವ ಕೆಲವರು, ಅಂತಹ ವ್ಯಕ್ತಿಗಳೊಂದಿಗೆ ತಮ್ಮ ಸಾಮಾಜಿಕ ಸಹವಾಸವನ್ನು ಸೀಮಿತಗೊಳಿಸಬಹುದು. ಸಭೆಯ ವತಿಯಿಂದ ಇದು ಉದಾಸೀನತೆಯ ಪ್ರದರ್ಶನವೆಂದು ಭಾವಿಸುತ್ತಾ, ಮೊದಲು ಒಂದು ಸಭೆಗೆ, ಆಮೇಲೆ ಮತ್ತೊಂದಕ್ಕೆ, ಮತ್ತು ಇನ್ನೊಂದಕ್ಕೆ ಸ್ಥಳಾಂತರಿಸುತ್ತಾ, ವಲಸೆ ಹೋಗುವುದನ್ನು ಒಬ್ಬನು ಆರಂಭಿಸಬಹುದು. ಹೆಚ್ಚು ಹಸಿರಾದ ಹುಲ್ಲುಗಾವಲಿಗಾಗಿ ಸದಾ ಹುಡುಕುತ್ತಿರುವ ಆಫ್ರಿಕದ ಬಯಲಿನ ವಲಸೆ ಹೋಗುವ ಮಂದೆಯಂತೆ, ಈ “ವಲಸೆ ಹೋಗುವ” ಕ್ರೈಸ್ತರು ಸರಿಯಾದ ಸಭೆಗಾಗಿ ಸದಾ ಹುಡುಕುತ್ತಿರುತ್ತಾರೆ. ಬದಲಿಗೆ, ಇತರ ಜನರಲ್ಲಿರುವ ಒಳ್ಳೆಯ ಗುಣಗಳನ್ನು ನೋಡುವುದಾದರೆ ಮತ್ತು ತಮ್ಮ ಸ್ವಂತ ಜೀವಿತಗಳಲ್ಲಿ ದೇವರ ಆತ್ಮದ ಫಲವನ್ನು ಇನ್ನೂ ಪೂರ್ತಿಯಾಗಿ ಪ್ರದರ್ಶಿಸಲು ಯತ್ನಿಸುವುದಾದರೆ ಅವರೆಷ್ಟು ಸಂತೋಷಿತರಾಗಿರುವರು!—ಗಲಾತ್ಯ 5:22, 23.
ರಾಜ್ಯ ಸಭಾಗೃಹದಲ್ಲಿನ ಪ್ರತಿಯೊಂದು ಕೂಟದಲ್ಲಿ ಭಿನ್ನವಾದ ವ್ಯಕ್ತಿಯೊಂದಿಗೆ ಮಾತಾಡಲು ಮತ್ತು ಅವನನ್ನು ಪ್ರಾಮಾಣಿಕವಾಗಿ ಒಂದು ಒಳ್ಳೆಯ ವಿಷಯದ ಮೇಲೆ ಪ್ರಶಂಸಿಸಲು ವಿಶೇಷವಾದ ಪ್ರಯತ್ನವನ್ನು ಮಾಡುವ ಮೂಲಕ ಕೆಲವರು ಹಾಗೆ ಮಾಡುತ್ತಾರೆ. ಅದು ತನ್ನ ಸ್ವದರ್ತನೆಯುಳ್ಳ ಮಕ್ಕಳ ಕುರಿತು, ಕ್ರೈಸ್ತ ಕೂಟಗಳಲ್ಲಿ ಕ್ರಮಬದ್ಧತೆಯ ಕುರಿತು, ಕಾವಲಿನಬುರುಜು ಅಭ್ಯಾಸದಲ್ಲಿ ಚೆನ್ನಾಗಿ ತಯಾರಿಸಿದ ಹೇಳಿಕೆಗಳ ಕುರಿತು, ಸಭಾ ಪುಸ್ತಕ ಅಭ್ಯಾಸಕ್ಕಾಗಿ ಮತ್ತು ಕ್ಷೇತ್ರ ಸೇವೆಗಾಗಿರುವ ಕೂಟಗಳಿಗಾಗಿ ತನ್ನ ಮನೆಯನ್ನು ನೀಡಿಕೊಂಡ ತನ್ನ ಆತಿಥ್ಯದ, ಮುಂತಾದ ವಿಷಯಗಳ ಕುರಿತು ಇರಬಲ್ಲದು. ಅಪರಿಪೂರ್ಣತೆಯ ಹೊದಿಕೆಯ ಕೆಳಗೆ ಇಣಿಕಿ ನೋಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡುವ ಮೂಲಕ, ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರಲ್ಲಿ ಉದಾತ್ತ ಗುಣಗಳನ್ನು ನೀವು ಖಂಡಿತವಾಗಿ ಕಂಡುಹಿಡಿಯುವಿರಿ. ಇದು ನಿಮ್ಮನ್ನು ಅವರಿಗೆ ಪ್ರೀತಿಪಾತ್ರರನ್ನಾಗಿ ಮಾಡುವುದು, ಮತ್ತು ನಿಮಗೆ ನಿಷ್ಠಾವಂತ ಮಿತ್ರರ ಕೊರತೆಯಿಲ್ಲವೆಂದು ನೀವು ಕಂಡುಕೊಳ್ಳುವಿರಿ.
ಕಟ್ಟಕಡೆಯ ನೆಪ
“ಅದು ದೇವರ ಚಿತ್ತ.” “ಪಿಶಾಚನ ಮೇಲೆ ಆರೋಪ ಹೊರಿಸು.” ಪ್ರಾಯಶಃ ನಮ್ಮ ಸ್ವಂತ ಅಪಜಯಗಳಿಗಾಗಿ ದೇವರನ್ನು ಇಲ್ಲವೆ ಪಿಶಾಚನನ್ನು ದೂಷಿಸುವುದು ಕಟ್ಟಕಡೆಯ ನೆಪವಾಗಿದೆ. ನಮ್ಮ ಜೀವಿತಗಳಲ್ಲಿ ಕೆಲವು ಘಟನೆಗಳನ್ನು ದೇವರು ಅಥವಾ ಸೈತಾನನು ಪ್ರಭಾವಿಸಬಹುದೆಂಬುದು ಸತ್ಯ. ಆದರೂ, ತಮ್ಮ ಜೀವಿತದಲ್ಲಿ ಬಹುಮಟ್ಟಿಗೆ ಎಲ್ಲವು, ಒಳ್ಳೆಯದು ಅಥವಾ ಕೆಟ್ಟದ್ದು, ದೇವರ ಇಲ್ಲವೆ ಸೈತಾನನ ಅಡಬ್ಡರುವಿಕೆಯ ಪರಿಣಾಮವಾಗಿದೆ ಎಂದು ಕೆಲವರು ನಂಬುತ್ತಾರೆ. ಅವರಿಗೆ ಸಂಭವಿಸುವ ಯಾವ ವಿಷಯವೂ ತಮ್ಮ ಸ್ವಂತ ಕ್ರಿಯೆಗಳ ಪರಿಣಾಮವಲ್ಲವೇನೊ ಎಂಬಂತಿದೆ. “ಆ ಹೊಸ ಕಾರನ್ನು ನಾನು ಪಡೆಯಬೇಕೆಂದು ದೇವರು ಬಯಸುವುದಾದರೆ, ನಾನು ಅದನ್ನು ಪಡೆಯುವಂತೆ ಆತನು ಸಾಧ್ಯಗೊಳಿಸುವನು.”
ದೇವರು ಅವರನ್ನು ರಕ್ಷಿಸುವನೆಂಬ ಕಲ್ಪನೆಯ ಮೇಲೆ, ಹಣಕಾಸಿನ ಮತ್ತು ಇತರ ನಿರ್ಣಯಗಳನ್ನು ಮಾಡುತ್ತಾ, ಇಂತಹವರು ತಮ್ಮ ಜೀವಿತಗಳನ್ನು ಅನೇಕ ವೇಳೆ ಮುಂದಾಲೋಚನೆಯಿಲ್ಲದೆ ಜೀವಿಸುತ್ತಾರೆ. ಅವರ ಉದ್ಧತ ಕ್ರಿಯೆಗಳು ಆರ್ಥಿಕ ಅಥವಾ ಬೇರೆ ರೀತಿಯ ಯಾವುದೊ ವಿಪತ್ತನ್ನು ಫಲಿಸುವುದಾದರೆ, ಅವರು ಪಿಶಾಚನನ್ನು ದೂಷಿಸುತ್ತಾರೆ. ಪ್ರಥಮವಾಗಿ ‘ಲೆಕ್ಕಾಚಾರ ಮಾಡದೆ’ ಯಾವ ವಿಷಯವನ್ನೊ ದುಡುಕಿ ಮಾಡುವುದು ಮತ್ತು ತದನಂತರ ಅಪಜಯಕ್ಕೆ ಸೈತಾನನನ್ನು ದೂಷಿಸುವುದು, ಇಲ್ಲವೆ ಇನ್ನೂ ಕೆಟ್ಟದ್ದಾಗಿ, ಯೆಹೋವನು ಅಡಬ್ಡರುವಂತೆ ನಿರೀಕ್ಷಿಸುವುದು, ದುರಹಂಕಾರಕವಾಗಿರುವುದು ಮಾತ್ರವಲ್ಲ ಶಾಸ್ತ್ರಕ್ಕೆ ವಿರುದ್ಧವಾಗಿಯೂ ಇರುವುದು.—ಲೂಕ 14:28, 29.
ಆ ವಿಧದಲ್ಲಿ ಯೇಸು ಯೋಚಿಸುವಂತೆ ಮತ್ತು ತನ್ನ ಕ್ರಿಯೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದಂತೆ ಮಾಡಲು ಸೈತಾನನು ಪ್ರಯತ್ನಿಸಿದನು. ಎರಡನೆಯ ಶೋಧನೆಯ ಸಂಬಂಧದಲ್ಲಿ, ಮತ್ತಾಯ 4:5-7 ವರದಿಸುವುದು: “ಆಗ ಸೈತಾನನು ಆತನನ್ನು ಪರಿಶುದ್ಧಪಟ್ಟಣಕ್ಕೆ ಕರಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ—ನೀನು ದೇವರ ಮಗನಾಗಿದ್ದರೆ ಕೆಳಕ್ಕೆ ದುಮುಕು; ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು.” ಅವನು ಸ್ಪಷ್ಟವಾಗಿಗಿ ಹುಚ್ಚು ಸಾಹಸದ, ಆತ್ಮಘಾತಕವಾಗಿಯೂ ಇದ್ದ ಮಾರ್ಗವನ್ನು ತೆಗೆದುಕೊಳ್ಳುವುದಾದರೆ, ಯೆಹೋವನು ಅಡಬ್ಡರುವನೆಂದು ನಿರೀಕ್ಷಿಸುವುದು ಸಾಧ್ಯವಿಲ್ಲವೆಂದು ಯೇಸು ಗ್ರಹಿಸಿದನು. ಆದಕಾರಣ, ಅವನು ಉತ್ತರಿಸಿದ್ದು: “ನಿನ್ನ ದೇವರಾಗಿರುವ ಕರ್ತ (“ಯೆಹೋವ,” NW) ನನ್ನು ಪರೀಕ್ಷಿಸಬಾರದು ಎಂಬದಾಗಿ ಬರೆದದೆ.”
ತಮ್ಮ ಸ್ವಂತ ಸಂದೇಹಾಸ್ಪದ ಕ್ರಿಯೆಗಳಿಗೆ ಪಿಶಾಚನನ್ನು ಅಥವಾ ದೇವರನ್ನು ದೂಷಿಸುವ ಪ್ರವೃತ್ತಿಯುಳ್ಳ ಜನರು, ದೇವರಿಗೆ ಅಥವಾ ಪಿಶಾಚನಿಗೆ ಕೇವಲ ಬದಲಿಯಾಗಿ ನಕ್ಷತ್ರಗಳನ್ನು ಇಡುವ ಜ್ಯೋತಿಷದ ಹಿಂಬಾಲಕರಿಗೆ ಸಮಾನರಾಗಿದ್ದಾರೆ. ಬಹುಮಟ್ಟಿಗೆ ಸಂಭವಿಸುವ ಎಲ್ಲ ವಿಷಯಗಳು ತಮ್ಮ ನಿಯಂತ್ರಣ ಮೀರಿ ಇದೆ ಎಂದು ಸಂಪೂರ್ಣವಾಗಿ ಮನಗಂಡ ಇವರು, ಗಲಾತ್ಯ 6:7 ರಲ್ಲಿ ತಿಳಿಸಲ್ಪಟ್ಟ ಸರಳವಾದ ಮೂಲಸೂತ್ರವನ್ನು ಅಲಕ್ಷಿಸುತ್ತಾರೆ: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”
ವಾಸ್ತವಿಕತೆಯನ್ನು ಎದುರಿಸುವುದು
ಒಂದು ಅಪರಿಪೂರ್ಣ ಲೋಕದಲ್ಲಿ ನಾವು ಜೀವಿಸುತ್ತಾ ಇದ್ದೇವೆಂಬುದನ್ನು ಯಾರೂ ವಿರೋಧಿಸರು. ಇಲ್ಲಿ ಚರ್ಚಿಸಲಾದ ಸಮಸ್ಯೆಗಳು ಸಾಕಷ್ಟು ನೈಜವಾಗಿವೆ. ಹಣಕಾಸಿನ ವಿಷಯದಲ್ಲಿ ಜನರು ನಮ್ಮನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳುವರು. ಕೆಲವು ಧಣಿಗಳು ಪಕ್ಷಪಾತಿಗಳಾಗಿರುವರು. ಪರಿಚಯಸ್ಥರು ನಮ್ಮ ಮಕ್ಕಳನ್ನು ತಪ್ಪಾದ ವಿಧದಲ್ಲಿ ಪ್ರಭಾವಿಸಬಹುದು. ಕೆಲವು ಶಿಕ್ಷಕರಿಗೆ ಮತ್ತು ಶಾಲೆಗಳಿಗೆ ಅಭಿವೃದ್ಧಿಮಾಡುವ ಅಗತ್ಯವಿದೆ. ಕೆಲವೊಮ್ಮೆ ಹಿರಿಯರು ಹೆಚ್ಚು ಪ್ರೀತಿಪರರೂ ಕಾಳಜಿಯುಳ್ಳವರೂ ಆಗಿರಬಲ್ಲರು. ಆದರೆ ಅಪರಿಪೂರ್ಣತೆಯ ಪರಿಣಾಮವನ್ನು ಮತ್ತು ಬೈಬಲು ಸೂಚಿಸುವಂತೆ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ” ಎಂಬುದನ್ನು ನಾವು ಅಂಗೀಕರಿಸಲೇಬೇಕು. ಆದುದರಿಂದ ಜೀವಿತದ ಉದ್ದಕ್ಕೂ ನಮ್ಮ ಪಥವು ಎಲ್ಲ ಸಮಯದಲ್ಲೂ ಸುಗಮವಾಗಿರುವುದೆಂದು ಅಪೇಕ್ಷಿಸುವುದು ವಾಸ್ತವಿಕವಲ್ಲ.—1 ಯೋಹಾನ 5:19.
ಅದಕ್ಕೆ ಕೂಡಿಸಿ, ನಮ್ಮ ಸ್ವಂತ ಅಪರಿಪೂರ್ಣತೆಗಳನ್ನು ಹಾಗೂ ಮಿತಿಗಳನ್ನು ನಾವು ಗುರುತಿಸಬೇಕು ಮತ್ತು ಅನೇಕ ವೇಳೆ ನಮ್ಮ ಸಮಸ್ಯೆಗಳು ನಮ್ಮ ಸ್ವಂತ ಮೂರ್ಖತನದ ಪರಿಣಾಮವಾಗಿವೆ ಎಂಬುದನ್ನು ಗ್ರಹಿಸಬೇಕು. ರೋಮ್ನಲ್ಲಿದ್ದ ಕ್ರೈಸ್ತರಿಗೆ ಪೌಲನು ಸಲಹೆ ನೀಡಿದ್ದು: “ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ” ಇರ್ರಿ. (ರೋಮಾಪುರ 12:3) ಆ ಬುದ್ಧಿವಾದವು ಇಂದು ನಮಗೆ ಸಮವಾದ ಶಕಿಯ್ತಿಂದ ಅನ್ವಯಿಸುತ್ತದೆ. ನಮ್ಮ ಜೀವಿತಗಳಲ್ಲಿ ಯಾವುದೇ ಅಹಿತಕರವಾದ ಸಂಗತಿಯು ಸಂಭವಿಸುವಾಗ, ನಮ್ಮ ಪೂರ್ವಜರಾದ ಆದಾಮ ಮತ್ತು ಹವ್ವರನ್ನು ಅನುಸರಿಸುತ್ತಾ ಕೂಡಲೇ ನಾವು “ಅದು ನನ್ನ ದೋಷವಲ್ಲ!” ಎಂದು ಹೇಳೆವು. ಬದಲಿಗೆ, ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವೆವು, ‘ಈ ಅಸಂತೋಷಕರ ಪರಿಣಾಮವನ್ನು ತೊರೆಯಲು, ನಾನು ಏನನ್ನು ಭಿನ್ನವಾಗಿ ಮಾಡಸಾಧ್ಯವಿತ್ತು? ವಿಷಯದ ಕುರಿತು ಸರಿಯಾದ ತೀರ್ಪನ್ನು ಮಾಡಿ, ವಿವೇಕದ ಮೂಲದಿಂದ ನಾನು ಸಲಹೆಯನ್ನು ಹುಡುಕಿದೆನೊ? ಒಳಗೊಂಡ ಇತರ ಪಕ್ಷ ಅಥವಾ ಪಕ್ಷಗಳ ಸದಸ್ಯರು ನಿರ್ದೋಷಿಗಳೆಂದು ಊಹಿಸುತ್ತಾ, ಅವರಿಗೆ ಘನತೆಯನ್ನು ನೀಡಿದೆನೊ?’
ನಾವು ಕ್ರೈಸ್ತೋಚಿತ ತತ್ವಗಳನ್ನು ಅನುಸರಿಸಿ ತರ್ಕಬದ್ಧವಾದ ತೀರ್ಪನ್ನು ನೀಡುವುದಾದರೆ, ನಮಗೆ ಹೆಚ್ಚು ಮಿತ್ರರು ಮತ್ತು ಕಡಿಮೆ ಸಮಸ್ಯೆಗಳು ಇರುವವು. ನಮ್ಮ ದಿನನಿತ್ಯದ ಜೀವಿತಗಳಲ್ಲಿನ ಅನೇಕ ಅನಾವಶ್ಯಕ ಸಮಸ್ಯೆಗಳು ಬಗೆಹರಿಸಲ್ಪಡುವವು. ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಾವು ಆನಂದವನ್ನು ಕಂಡುಕೊಳ್ಳುವೆವು ಮತ್ತು “ಅದು ಯಾರ ದೋಷ?” ಎಂಬ ಪ್ರಶ್ನೆಯಿಂದ ಬಾಧಿಸಲ್ಪಡಲಾರೆವು.
[ಪುಟ 28 ರಲ್ಲಿರುವ ಚಿತ್ರಗಳು]
ತಮ್ಮ ಮಕ್ಕಳು ಆತ್ಮಿಕವಾಗಿ ಅಭಿವೃದ್ಧಿ ಹೊಂದುವಂತೆ ಸಹಾಯ ಮಾಡಲು, ಹೆತ್ತವರು ಹೆಚ್ಚನ್ನು ಮಾಡಬಲ್ಲರು