ನಿಮ್ಮ ಶ್ರವಣಶಕ್ತಿಯನ್ನು ಉಳಿಸಿಕೊಳ್ಳಿರಿ!
ಫ್ರಾ ನ್ಸ್ನಲ್ಲಿ 400 ಯುವಜನರ ಮಧ್ಯೆ ನಡೆಸಿದ ಇತ್ತೀಚಿನ ಸಮೀಕ್ಷೆಯು, ಪ್ರತಿ ಐವರಲ್ಲಿ ಒಬ್ಬರು ಶ್ರವಣಶಕ್ತಿಯ ನಷ್ಟದಿಂದ ನರಳುತ್ತಾರೆಂದು ತೋರಿಸಿತು. ಒಂದು ದಶಕದ ಹಿಂದೆ ನಡೆಸಿದ ತದ್ರೀತಿಯ ಸಮೀಕ್ಷೆಯು, ಪ್ರತಿ 10 ಮಂದಿ ಯುವಜನರಲ್ಲಿ ಒಬ್ಬರು ಮಾತ್ರ ಅಂತಹ ನಷ್ಟವನ್ನು ಪಡೆದಿದ್ದರೆಂದು ತೋರಿಸಿತು. ಯುವಜನರ ಶ್ರವಣಶಕ್ತಿಯ ನಷ್ಟದಲ್ಲಾಗಿರುವ ಅನಿರೀಕ್ಷಿತ ಅಭಿವೃದ್ಧಿಯ ವಿಷಯದಲ್ಲಿ ಕ್ರಮ ಕೈಕೊಳ್ಳುತ್ತ, ಕಳೆದ ವರ್ಷ ಫ್ರೆಂಚ್ ರಾಷ್ಟ್ರೀಯ ವಿಧಾನ ಸಭೆಯು, ವೈಯಕ್ತಿಕ ಸ್ಟೀರಿಯೊಗಳ ಧ್ವನಿಮಟ್ಟವನ್ನು 100 ಡೆಸಿಬೆಲ್ಗಳಿಗೆ ನಿಯಂತ್ರಿಸಲು ಅನುಮೋದಿಸಿತು.
ಹೆಚ್ಚಿನ ಹೊಣೆಗಾರಿಕೆಯನ್ನು ವೈಯಕ್ತಿಕ ಸ್ಟೀರಿಯೊಗಳ ಹೆಡ್ಫೋನ್ (ಗ್ರಾಹಕ)ಗಳಿಂದ ಬರುವ ಉನ್ನತ ಧ್ವನಿಮಟ್ಟಗಳ ಮೇಲೆ ಹಾಕಲಾಗುತ್ತದೆ. 100 ಡೆಸಿಬೆಲ್ಗಳಿಗಿಂತ ಹೆಚ್ಚು ಗಟ್ಟಿಯಾಗಿರುವ ಧ್ವನಿಯು ಕೆಲವೇ ತಾಸುಗಳ ಬಳಿಕ ಖಾಯಂ ಹಾನಿಯಲ್ಲಿ ಪರಿಣಮಿಸಬಲ್ಲದೆಂದು ಕಿವಿಯ ಶಸ್ತ್ರಚಿಕಿತ್ಸಕರಾದ ಸಾನ್-ಪ್ಯೆರ್ ಕಾವ್ ಹೇಳುತ್ತಾರೆ. ಧ್ವನಿಯು 115 ಡೆಸಿಬೆಲ್ಗಳಿಗಿಂತ ಹೆಚ್ಚಾಗುವಾಗ, ಇಂತಹ ಹಾನಿ ಸಂಭವಿಸಲು ಕೆಲವೇ ನಿಮಿಷಗಳು ಹಿಡಿಯುತ್ತವೆ. ತಮ್ಮಲ್ಲಿರುವ ಹೆಚ್ಚಿನ ಪರ್ಸನಲ್ ಸ್ಟೀರಿಯೊಗಳು 100ಕ್ಕಿಂತಲೂ ಹೆಚ್ಚು ಡೆಸಿಬಲ್ಗಳಷ್ಟು ಧ್ವನಿಯನ್ನು ಉಂಟುಮಾಡುತ್ತವೆಂದು ಪ್ರಮುಖ ಫ್ರೆಂಚ್ ಇಲೆಕ್ಟ್ರಾನಿಕ್ ಚಿಲ್ಲರೆ ವ್ಯಾಪಾರ ಸಂಘವಾದ ಎಫ್ಎನ್ಎಸಿ ಹೇಳುತ್ತದೆ. ಕೆಲವು ಪರ್ಸನಲ್ ಸ್ಟೀರಿಯೊಗಳು 126 ಡೆಸಿಬೆಲ್ಗಳಷ್ಟು ಸದ್ದನ್ನು ಮಾಡಬಲ್ಲವು. ಇವು 100 ಡೆಸಿಬೆಲ್ಗಳ ಶಕ್ತಿಗಿಂತ 400 ಪಟ್ಟು ಜಾಸ್ತಿ!
ಫ್ರೆಂಚ್ ಶ್ರವಣಶಕ್ತಿ ವಿಶೇಷಜ್ಞ, ಕ್ರೀಸ್ಟ್ಯಾನ್ ಮೇಯರ್-ಬೀಶ್ ಅವರಿಗನುಸಾರ, ಯುವಜನರಿಗೆ, ಪರ್ಸನಲ್ ಸ್ಟೀರಿಯೊಗಳಿಗಿಂತಲೂ ರಾಕ್ ಗಾನಗೋಷ್ಠಿಗಳು ಹೆಚ್ಚು ಕೆಡುಕನ್ನು ಮಾಡುತ್ತಿರಬಹುದು. ರಾಕ್ ಗಾನಗೋಷ್ಠಿಗಳಿಗೆ ಕ್ರಮವಾಗಿ ಹಾಜರಾಗುವವರನ್ನು 18 ವಯಸ್ಸಿನ ಆರೋಗ್ಯವಂತರಿಗೆ ಹೋಲಿಸಿದಾಗ ಅವರಲ್ಲಿ ಗಮನಾರ್ಹವಾದ ಶ್ರವಣಶಕ್ತಿ ನಷ್ಟವಿತ್ತು. ಹಾಗಿರುವುದರಿಂದ, ಫ್ರೆಂಚ್ ರಾಷ್ಟ್ರೀಯ ವಿಧಾನ ಸಭೆಯ ಉಪನಾಯಕ ಸಾನ್-ಫ್ರಾನ್ಸ್ವಾ ಮಾಟೇ, “ನಾವು ಕಿವುಡರ ಒಂದು ಸಂತತಿಯನ್ನು ಉತ್ಪನ್ನ ಮಾಡುತ್ತಿದ್ದೇವೆ,” ಎಂದು ಎಚ್ಚರಿಸಿದ್ದು ಆಶ್ಚರ್ಯವಲ್ಲ.
ಆದಕಾರಣ, ನಿಮ್ಮ ಶ್ರವಣಶಕ್ತಿಯನ್ನು ಉಳಿಸಿಕೊಳ್ಳಲು, ಆ ಧ್ವನಿಯನ್ನು ಗಮನಿಸಿರಿ!