ಕಾಡು ಪ್ರಾಣಿಗಳ ಆಕಳಿಕೆ
ಯಾರಾದರೊಬ್ಬನು ಸಾರ್ವಜನಿಕವಾಗಿ ಆಕಳಿಸುವಾಗ, ಅವನು ಅಸಭ್ಯನೆಂದು, ಅಥವಾ ಕಡಿಮೆ ಪಕ್ಷ ಬಹಳವಾಗಿ ಬೇಸರಗೊಂಡಿರುವನೆಂದು ಜನರು ನೆನಸಬಹುದು. ಶಿಷ್ಟಾಚಾರದ ನಿಯಮಗಳು ಹಾಗಿದ್ದರೂ, ವಾಸ್ತವವಾಗಿ ಆಕಳಿಕೆಯು ಬಹಳಷ್ಟು ಉಪಯೋಗಕರವಾದ ಉದ್ದೇಶವನ್ನು ಪೂರೈಸುತ್ತದೆ. ಆಕಳಿಕೆಯು ಒಂದು ಅನಿಯಂತ್ರಿತ ಉಸಿರೆಳೆತವಾಗಿದೆ. ನಾವು ಸಾಮಾನ್ಯವಾಗಿ ಸಾಯಂಕಾಲ, ದಿನದ ಚಟುವಟಿಕೆಗಳಿಂದ ಬಳಲಿಹೋಗಿರುವಾಗ ಇಲ್ಲವೆ ನಾವು ಎಚ್ಚೆತ್ತ ಮೇಲೆ ಬೆಳಗ್ಗೆ ಆಕಳಿಸುತ್ತೇವೆ. ಒಂದು ಆಳವಾದ ಆಕಳಿಕೆಯು ಆಮ್ಲಜನಕದ ನಮ್ಮ ಸರಬರಾಯಿಯನ್ನು ಹೆಚ್ಚಿಸಲು ಕಾರ್ಯಮಾಡುತ್ತದೆ ಮತ್ತು ನಮ್ಮನ್ನು ಕ್ಷಣಿಕವಾಗಿ ಚೈತನ್ಯಗೊಳಿಸಬಹುದು; ಇದು ಅನೇಕ ವೇಳೆ ಎಚ್ಚೆತ್ತುಕೊಳ್ಳುವ ಪ್ರಕ್ರಿಯೆಯ ಭಾಗವಾಗಿದೆ.
ಪ್ರಾಣಿಗಳು ಸಹ ಆಕಳಿಸುತ್ತವೆ—ಆದರೂ, ಯಾವಾಗಲೂ ಉತ್ತಮ ಗಾಳಿಯಾಟಕ್ಕಾಗಿಯಲ್ಲ—ಎಂದು ನಿಮಗೆ ಗೊತ್ತಿತ್ತೊ? ಅವು ಹಾಗೆ ಮಾಡುವ ಕಾರಣವು ಅನೇಕ ವೇಳೆ ಆಕರ್ಷಕವಾಗಿರುತ್ತದೆ. ಉದಾಹರಣೆಗಾಗಿ ಮಂಗಗಳು, ಒಂದು ಸಂದೇಶವನ್ನು ತಿಳಿಯಪಡಿಸುವ ಸಲುವಾಗಿ ಕೆಲವೊಮ್ಮೆ ಆಕಳಿಸುತ್ತವೆ. ಅಗಲವಾಗಿ ತೆರೆದಿರುವ ಬಾಯಿ ಮತ್ತು ಹಲ್ಲುಗಳ ಉಗ್ರವಾದ ಪ್ರದರ್ಶನವು, ಒಬ್ಬ ಪ್ರತಿಸ್ಪರ್ಧಿ ಮಂಗನಿಗೆ ಇಲ್ಲವೆ ಕೊಳ್ಳೆ ಹೊಡೆಯಲಿರುವ ಒಂದು ಪ್ರಾಣಿಗೆ ಎಚ್ಚರಿಕೆಯನ್ನು ನೀಡುವ ಒಂದು ವಿಧವಾಗಿದೆ. ಸಂದೇಶವು, ‘ನನ್ನ ಕಡಿತವು ಭಯಂಕರವಾಗಿದೆ. ಅಂತರವನ್ನು ಕಾಪಾಡಿಕೊ!’ ಎಂದಾಗಿರುತ್ತದೆ.
ಆಫ್ರಿಕನ್ ಸಮತಲ ಪ್ರದೇಶಗಳ ಕೊಳ್ಳೆ ಹೊಡೆಯುವ ಬೆಕ್ಕು ಜಾತಿಗಳು, ಬೇಟೆಯಾಡಲು ಹೊರಡುವ ಮೊದಲು ಅನೇಕ ವೇಳೆ ಮೈಮುರಿದು ಆಕಳಿಸುವವು ಎಂಬುದನ್ನೂ ಗಮನಿಸಲಾಗಿದೆ. ಮನುಷ್ಯರಲ್ಲಿ ಆಗಿರುವಂತೆ, ಆ ಬೆಕ್ಕು ಜಾತಿಗಳ ಆಕಳಿಕೆಯು ಒಂದು ಶಾರೀರಿಕ ಕಾರ್ಯವನ್ನು—ಶ್ವಾಸಕೋಶಗಳೊಳಗೆ ಹೆಚ್ಚಿನ ಗಾಳಿಯನ್ನು ತೆಗೆದುಕೊಳ್ಳುವುದನ್ನು—ಪೂರೈಸುತ್ತದೆ. ಇದು ರಕ್ತದಲ್ಲಿರುವ ಆಮ್ಲಜನಕವನ್ನು ಹೆಚ್ಚಿಸುತ್ತದೆ. ತದನಂತರ ಹೃದಯವು ಅದನ್ನು ಬೇಗನೆ ದೇಹದ ಇತರ ಭಾಗಗಳಿಗೆ ಕಳುಹಿಸುತ್ತದೆ. ಇದು ಅಲ್ಪ ಅಂತರಗಳ, ಉನ್ನತ-ವೇಗದ ಬೇಟೆಗಳಿಗೆ ತತ್‌ಕ್ಷಣದ ಶಕ್ತಿಯನ್ನು ಒದಗಿಸುತ್ತದೆ.
ಅಷ್ಟೇಕೆ, ಮೀನುಗಳು ಸಹ ಆಕಳಿಸುತ್ತಿರುವುದನ್ನು ಗಮನಿಸಲಾಗಿದೆ! ಪ್ರಾಣಿ ಪ್ರಪಂಚದೊಳಗೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದೇನೆಂದರೆ, ಕೆಲವೊಮ್ಮೆ ಮೀನುಗಳು “ತ್ವರಿತವಾಗಿ ಚಲಿಸುವುದಕ್ಕೆ ಒಂದು ಪೀಠಿಕೆಯಾಗಿ ಆಕಳಿಸುತ್ತವೆ. . . . ಒಂದು ಮೀನು, ತಾನು ಉದ್ರೇಕಗೊಂಡಾಗ ಇಲ್ಲವೆ ಒಂದು ವೈರಿ ಅಥವಾ ಆಹಾರವನ್ನು ನೋಡಿದಾಗ, ವೇಗವಾದ ಕ್ರಿಯೆಯು ಅಗತ್ಯವಾಗಿರುವ ಎಲ್ಲ ಸಂದರ್ಭಗಳಲ್ಲಿಯೂ ಆಕಳಿಸಬಹುದು.”
ಬಹುಶಃ ಎಲ್ಲಕ್ಕಿಂತಲೂ ಅತ್ಯಂತ ಪ್ರಭಾವಕಾರಿಯಾದ ಆಕಳಿಕೆಯು, ನೀರಾನೆ ಇಲ್ಲವೆ ಬಿಹೀಮತ್ ಆಕಳಿಕೆಯಾಗಿದೆ. ಈ ಬೃಹದ್ಗಾತ್ರದ ಜೀವಿಯು, ವಿಶಾಲವಾದ ಗುಹೆಯಂತಹ ತನ್ನ ಬಾಯಿಯನ್ನು ನಂಬಲಾಗದಂತಹ 150 ಡಿಗ್ರಿಗಳಷ್ಟು ಅಗಲವಾಗಿ ತೆರೆಯಬಲ್ಲದು! ಆಕಳಿಕೆಯು ಒಂದು ವೃದ್ಧ ಗಂಡು ನೀರಾನೆಗೆ, ನೀರಾನೆಯ ಕೊಳದಲ್ಲಿ ಯಾರು ನಾಯಕನೆಂದು ಇತರರೆಲ್ಲರಿಗೆ ತೋರಿಸಲು ಅವನನ್ನು ಶಕ್ತಗೊಳಿಸುತ್ತದೆ. ತನ್ನ ನದಿಯ ಕ್ಷೇತ್ರದೊಳಗೆ ಅತಿಕ್ರಮಿಸುವ ಸಾಹಸವನ್ನು ಮಾಡುವ ಯಾವನೇ ಮಧ್ಯ ಪ್ರವೇಶಕನಿಗೆ ಒಂದು ಕಡಿತದ ಎಚ್ಚರಿಕೆಯಾಗಿಯೂ ಅದು ಕಾರ್ಯಮಾಡುತ್ತದೆ.
ಹೀಗೆ, ಅದು ಒಂದು ಸಿಂಹದ ಗರ್ಜನೆಯ ನಾಟಕೀಯ ಪ್ರಭಾವವನ್ನು ಉದ್ಭವಿಸದೆ ಇರಬಹುದಾದರೂ, ಒಂದು ಆಕಳಿಕೆಯು—ನಿದ್ರಾಮಯ ಆಕಳಿಕೆಯಾಗಿರಲಿ, ಬೆದರಿಕೆ ನೀಡುವ ಆಕಳಿಕೆಯಾಗಿರಲಿ, ಅಥವಾ ಸುಮ್ಮನೆ ಶಕ್ತಿತುಂಬುವ ಆಕಳಿಕೆಯಾಗಿರಲಿ—ಪ್ರಯೋಜನದಾಯಕವಾದೊಂದು ಉದ್ದೇಶವನ್ನು ಪೂರೈಸುತ್ತದೆ. ಅದು, ಪ್ರಾಣಿ ರಾಜ್ಯದ ವಿನ್ಯಾಸಕನ ಆಶ್ಚರ್ಯಕರ ಸೃಜನಶೀಲತೆಯ ಕೇವಲ ಮತ್ತೊಂದು ಉದಾಹರಣೆ ಆಗಿದೆ!