ಟ್ರೂಬಡೋರರು—ಕೇವಲ ಪ್ರೇಮ ಗೀತೆಗಳ ಗಾಯಕರಲ್ಲ
ಫ್ರಾನ್ಸ್ನ ಎಚ್ಚರ! ಸುದ್ದಿಗಾರರಿಂದ
ಟ್ರೂಬಡೋರರು ಮತ್ತು ಅಲೆಮಾರಿ ಗಾಯಕರು—ಆ ಮಾತುಗಳು ನಿಮ್ಮ ಮನಸ್ಸಿಗೆ ಏನನ್ನು ತರುತ್ತವೆ? ಬಹುಶಃ ಪ್ರೇಮಾದಾರಗಳು ಮತ್ತು ವೀರಪುರುಷರ ಗೀತೆಗಳನ್ನು. ನಿಮ್ಮ ಯೋಚನೆ ತಪ್ಪಾಗಿಲ್ಲ, ಆದರೆ ಟ್ರೂಬಡೋರರಿಗೆ ಅದಕ್ಕಿಂತಲೂ ಹೆಚ್ಚಿನ ವಿಷಯವು ಸಂಬಂಧಿಸಿದೆ. ಅವರು ಕಾನ್ಸೋ ಡಾಮೋರ್ ಅಥವಾ ಪ್ರೇಮ ಗೀತೆಗಾಗಿ ಬಹುಶಃ ಸುಪ್ರಸಿದ್ಧರಾಗಿದ್ದಾರೆ—ಆದುದರಿಂದ ಕೈಯಲ್ಲಿ ಲೂಟ್ವಾದ್ಯವನ್ನು ಹಿಡಿದುಕೊಂಡು, ಯಾವುದೊ ಸ್ತ್ರೀಗಾಗಿ ಬಾಜಿಸುತ್ತಿರುವಂತೆ ಅನೇಕ ವೇಳೆ ಚಿತ್ರಿಸಲ್ಪಟ್ಟಿರುತ್ತಾರೆ—ಆದರೂ, ಪ್ರೀತಿಯು ಅವರ ಏಕಮಾತ್ರ ಚಿಂತೆಯಾಗಿರಲಿಲ್ಲ. ಟ್ರೂಬಡೋರರು ತಮ್ಮ ದಿನದ ಅನೇಕ ಸಾಮಾಜಿಕ, ರಾಜಕೀಯ, ಮತ್ತು ಧಾರ್ಮಿಕ ವಿವಾದಾಂಶಗಳಲ್ಲಿ ಒಳಗೊಂಡಿದ್ದರು.
ಟ್ರೂಬಡೋರರು 12ನೆಯ ಮತ್ತು 13ನೆಯ ಶತಮಾನಗಳಲ್ಲಿ, ಇಂದು ಯಾವುದು ದಕ್ಷಿಣ ಫ್ರಾನ್ಸ್ ಆಗಿದೆಯೊ ಆ ಕ್ಷೇತ್ರದ ಆದ್ಯಂತ ಏಳಿಗೆಹೊಂದಿದರು. ಅವರು ಕವಿ-ಸಂಗೀತಗಾರರಾಗಿದ್ದು, ದೇಶೀಯ ಪ್ರಣಯಾತ್ಮಕ ಭಾಷೆಗಳಲ್ಲೇ ಅತ್ಯಂತ ಮನೋಹರವಾಗಿದ್ದ ಭಾಷೆಯಲ್ಲಿ ಬರೆದರು. ಅದು ಲಾಙ ಡಾಕ್a—ಬಹುಮಟ್ಟಿಗೆ ಇಡೀ ಫ್ರಾನ್ಸಿನ, ಲ್ವಾರ್ ನದಿಯ ದಕ್ಷಿಣಭಾಗ ಮತ್ತು ಇಟಲಿ ಮತ್ತು ಸ್ಪೆಯ್ನ್ನ ಗಡಿ ಪ್ರಾಂತಗಳಲ್ಲಿನ ಸಾಮಾನ್ಯ ಭಾಷೆ—ಎಂದು ಕರೆಯಲ್ಪಟ್ಟಿತು.
“ಟ್ರೂಬಡೋರ್” ಪದದ ಮೂಲವು ಹೆಚ್ಚಿನ ವಿವಾದಕ್ಕೆ ಒಳಗಾಗಿದೆಯಾದರೂ, ಅದು “ರಚಿಸು, ಶೋಧಿಸು, ಇಲ್ಲವೆ ಕಂಡುಹಿಡಿ” ಎಂಬ ಅರ್ಥವುಳ್ಳ ಅಕ್ಸಿಟನ್ ಕ್ರಿಯಾಪದವಾದ ಟ್ರೋಬಾರ್ನಿಂದ ಬಂದಿರುವುದಾಗಿ ತೋರುತ್ತದೆ. ಹೀಗೆ, ತಮ್ಮ ಮನೋಹರವಾದ ವಚನಕ್ಕೆ ಹೊಂದುವಂತಹ ಸೂಕ್ತವಾದ ಪದ ಇಲ್ಲವೆ ಪ್ರಾಸವನ್ನು ಟ್ರೂಬಡೋರರು ಕಂಡುಹಿಡಿಯಬಲ್ಲವರಾಗಿದ್ದರು. ಅವರ ಕವಿತೆಯು ಸಂಗೀತಕ್ಕೆ ಹೊಂದಿಸಲ್ಪಟ್ಟು, ಹಾಡಲ್ಪಡುತ್ತಿತ್ತು. ಪಟ್ಟಣದಿಂದ ಪಟ್ಟಣಕ್ಕೆ ಸಂಚರಿಸುತ್ತಾ, ಜಾಙಲರ್ಸ್ (ಚಾರಣಗಾಯಕರು) ಎಂಬುದಾಗಿ ಕರೆಯಲ್ಪಟ್ಟ ವೃತ್ತಿಪರ ಗಾಯಕರೊಂದಿಗೆ ಅನೇಕ ವೇಳೆ ಸೇರಿಕೊಂಡಿದ್ದು, ಟ್ರೂಬಡೋರರು ತಮ್ಮ ಗೀತೆಗಳನ್ನು ಕಿನ್ನರಿ, ಪಿಟೀಲು, ಕೊಳಲು, ಲೂಟ್ವಾದ್ಯ, ಇಲ್ಲವೆ ಗಿಟಾರಿನೊಂದಿಗೆ ನುಡಿಸಿದರು. ಅರಮನೆಗಳಲ್ಲಿ, ಅಲ್ಲದೆ ಮಾರುಕಟ್ಟೆಗಳಲ್ಲಿ ಇಲ್ಲವೆ ಕ್ರೀಡಾಕೂಟಗಳಲ್ಲಿ, ಜಾತ್ರೆಗಳು, ಉತ್ಸವಗಳು, ಇಲ್ಲವೆ ಹಬ್ಬಗಳಲ್ಲಿ, ಸಂಗೀತದ ಕಾರ್ಯಕ್ರಮವು ಸಾಮಾನ್ಯವಾಗಿ ಎಲ್ಲ ಔಪಚಾರಿಕ ಮನೋರಂಜನೆಯ ಭಾಗವಾಗಿರುತ್ತಿತ್ತು.
ವಿಭಿನ್ನ ಹಿನ್ನೆಲೆಗಳು
ಟ್ರೂಬಡೋರರು ಹಲವಾರು ಹಿನ್ನೆಲೆಗಳಿಂದ ಬಂದವರಾಗಿದ್ದರು. ಕೆಲವರು ಪ್ರಖ್ಯಾತ ಕುಟುಂಬಗಳಲ್ಲಿ ಜನಿಸಿದವರಾಗಿದ್ದರು; ಕೆಲವರು ರಾಜರಾಗಿದ್ದರು; ಮತ್ತು ಇತರರು ಹುಟ್ಟಿದಾಗ ಬಡವರಾಗಿದ್ದು ಅನಂತರ ಟ್ರೂಬಡೋರ್ ಪಟ್ಟಕ್ಕೆ ಏರಿದರು. ಕೆಲವರು ಬಹಳಷ್ಟು ಸ್ಥಾನಮಾನವನ್ನು ಪಡೆದರು. ಅನೇಕರು ಉನ್ನತ ಶಿಕ್ಷಣವನ್ನು ಪಡೆದವರೂ ವ್ಯಾಪಕವಾಗಿ ಸಂಚರಿಸಿದವರೂ ಆಗಿದ್ದರು. ಎಲ್ಲರೂ ಸ್ತ್ರೀಯರ ಕಡೆಗೆ ಆದರ, ನಯ ವಿನಯ, ಕವಿತೆ, ಮತ್ತು ಸಂಗೀತದಲ್ಲಿ ವ್ಯಾಪಕವಾದ ತರಬೇತಿಯನ್ನು ಪಡೆದರು. ಒಬ್ಬ ಒಳ್ಳೆಯ ಟ್ರೂಬಡೋರನಿಂದ ಈ ಕೆಳಗಿನ ವಿಷಯಗಳು ಅಪೇಕ್ಷಿಸಲ್ಪಟ್ಟವೆಂದು ಒಂದು ಮೂಲವು ಹೇಳುತ್ತದೆ: “ಎಲ್ಲ ಪ್ರಚಲಿತ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿದಿರಬೇಕು, ವಿಶ್ವವಿದ್ಯಾನಿಲಯಗಳ ಎಲ್ಲ ಗಮನಾರ್ಹ ಪ್ರಬಂಧಗಳನ್ನು ಪುನರುಚ್ಚರಿಸಬೇಕು, ಅರಮನೆಯ ಇತ್ತೀಚಿನ ಗೊಡ್ಡುಹರಟೆಯ ಕುರಿತು ಒಳ್ಳೆಯ ಮಾಹಿತಿಯುಳ್ಳವನಾಗಿರಬೇಕು, . . . ಕ್ಷಣಮಾತ್ರದಲ್ಲಿ ಒಬ್ಬ ರಾಜ ಅಥವಾ ರಾಣಿಗಾಗಿ ಚರಣಗಳನ್ನು ರಚಿಸಲು ಶಕ್ತನಾಗಿರಬೇಕು, ಮತ್ತು ಅರಮನೆಯಲ್ಲಿ ಆಗ ಇಷ್ಟಪಡುತ್ತಿದ್ದ ಕಡಿಮೆಪಕ್ಷ ಎರಡು ವಾದ್ಯಗಳನ್ನು ನುಡಿಸಬೇಕಿತ್ತು.”
12ನೆಯ ಶತಮಾನದಲ್ಲಾದ ವಾಣಿಜ್ಯದ ವಿಕಸನೆಯು, ಫ್ರಾನ್ಸಿನ ದಕ್ಷಿಣ ಪ್ರಾಂತಗಳಿಗೆ ಬಹಳಷ್ಟು ಸಂಪತ್ತನ್ನು ತಂದಿತು. ಏಳಿಗೆಯೊಂದಿಗೆ, ಬಿಡುವಿನ ಸಮಯ, ಶಿಕ್ಷಣ, ಮತ್ತು ಕಲೆ ಹಾಗೂ ಐಷಾರಾಮದ ಜೀವನಕ್ಕಾಗಿ ಪರಿಷ್ಕರಿಸಲ್ಪಟ್ಟ ಅಭಿರುಚಿಗಳು ಬಂದವು. ಲಾಙಡಾಕ್ ಮತ್ತು ಪ್ರೊವೆನ್ಸ್ನ ಶ್ರೀಮಂತ ವರ್ಗದವರು, ಟ್ರೂಬಡೋರರ ಅತ್ಯಂತ ನಿಷ್ಠಾವಂತ ಆಶ್ರಯದಾತರಾಗಿದ್ದರು. ಈ ಕವಿಗಳು ಬಹಳವಾಗಿ ಆದರಿಸಲ್ಪಟ್ಟರು ಮತ್ತು ಅವರು ಶ್ರೀಮಂತರ ಅಭಿರುಚಿ, ಫ್ಯಾಶನ್, ಮತ್ತು ಶಿಷ್ಟಾಚಾರಗಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿದರು. ಅವರು ಯೂರೋಪಿನ ಬಾಲ್ರೂಮ್ ನೃತ್ಯದ ಮೂಲಪಿತರಾದರು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದೇನೆಂದರೆ, “ಅವರ ಮಹಾ ಸಾಧನೆಯು, ಈ ಹಿಂದೆ ಯಾವ ವಿಷಯವೂ ಸೃಷ್ಟಿಸದೇ ಇದ್ದ, ಸಂಸ್ಕೃತಿ ಮತ್ತು ಮನೋಹರತೆಯ ವ್ಯತ್ಯಾಸಮಯವಾದ ವಾತಾವರಣವನ್ನು ಅರಮನೆಯ ಸ್ತ್ರೀಯರ ಸುತ್ತಲೂ ಸೃಷ್ಟಿಸುವುದಾಗಿತ್ತು.”
ಸ್ತ್ರೀಯರಿಗಾಗಿ ಹೊಸ ಆದರ
ಪುರುಷನೊಬ್ಬನು ಸ್ತ್ರೀಗಾಗಿ ಬಾಗಿಲನ್ನು ತೆರೆಯುವಾಗ, ಕೋಟನ್ನು ಹಾಕಿಕೊಳ್ಳಲು ಅವಳಿಗೆ ಸಹಾಯಮಾಡುವಾಗ, ಇಲ್ಲವೆ ಪಶ್ಚಿಮ ಯೂರೋಪಿನಲ್ಲಿ ಶತಮಾನಗಳಿಂದ ಮಾಡಲ್ಪಟ್ಟಿರುವ “ಸ್ತ್ರೀಯರು ಮೊದಲು” ಎಂಬ ಶಿಷ್ಟಾಚಾರಗಳ ಅನೇಕ ಬಗೆಗಳಲ್ಲಿ ಯಾವುದನ್ನೇ ಮಾಡಿತೋರಿಸಲಿ, ಟ್ರೂಬಡೋರರಿಂದ ಬಹುಶಃ ಆರಂಭವಾದ ಒಂದು ರೂಢಿಯನ್ನು ಅವನು ಅನುಸರಿಸುತ್ತಿದ್ದಾನೆ.
ಮಧ್ಯಯುಗದಲ್ಲಿ ಸ್ತ್ರೀಯರ ಕಡೆಗಿದ್ದ ಮನೋಭಾವಗಳು, ಚರ್ಚಿನ ಬೋಧನೆಗಳಿಂದ ಬಹಳವಾಗಿ ಪ್ರಭಾವಿತವಾಗಿದ್ದವು. ಪಾಪದೊಳಕ್ಕೆ ಮನುಷ್ಯನ ಬೀಳುವಿಕೆ ಮತ್ತು ಪ್ರಮೋದವನದಿಂದ ಅವನ ಹೊರಹಾಕುವಿಕೆಗೆ ಸ್ತ್ರೀಯು ಹೊಣೆಯಾಗಿದ್ದಳೆಂಬ ವೀಕ್ಷಣೆ ಅದಕ್ಕಿತ್ತು. ಅವಳು ಒಬ್ಬ ಮಾಟಗಾತಿಯಾಗಿ, ಪಿಶಾಚನ ಸಾಧನವಾಗಿ, ಅನಿವಾರ್ಯವಾದ ಅನಿಷ್ಟವಾಗಿ ಪರಿಗಣಿಸಲ್ಪಟ್ಟಳು. ವಿವಾಹವು ಅನೇಕ ವೇಳೆ ಜೀವನದ ಹೀನ ಸ್ಥಿತಿಯಾಗಿ ಪರಿಗಣಿಸಲ್ಪಟ್ಟಿತು. ಚರ್ಚಿನ ನಿಯಮವು ಹೆಂಡತಿಯನ್ನು ಹೊಡೆಯುವುದನ್ನು ಮತ್ತು ಅವಳ ಪರಿತ್ಯಾಗಮಾಡುವುದನ್ನು ಅನುಮತಿಸಿತು. ಇದು ಸ್ತ್ರೀಯರ ಅವಮಾನ ಹಾಗೂ ನಿಗ್ರಹಕ್ಕೆ ನೆರವುನೀಡಿತು. ಬಹುಮಟ್ಟಿಗೆ ಎಲ್ಲ ವಿಷಯಗಳಲ್ಲಿಯೂ ಸ್ತ್ರೀಯರು ಪುರುಷರಿಗಿಂತ ಕೆಳಮಟ್ಟದವರಾಗಿ ಪರಿಗಣಿಸಲ್ಪಟ್ಟರು. ಆದರೆ ಟ್ರೂಬಡೋರರ ಆಗಮನದೊಂದಿಗೆ, ಪುರುಷರ ಮನಸ್ಸು ಬದಲಾಗತೊಡಗಿತು.
ಪ್ರಥಮ ಜ್ಞಾತ ಟ್ರೂಬಡೋರ್, ಆ್ಯಕ್ವಿಟೇನ್ನ ಪ್ರಭುವಾದ IXನೆಯ ವಿಲಿಯಮ್ ಆಗಿದ್ದನು. ಅವನ ಕವಿತೆಯು, ಪ್ರೀತಿಯ ವಿಷಯದಲ್ಲಿ ಟ್ರೂಬಡೋರರ ಅಪೂರ್ವವಾದ ಪರಿಕಲ್ಪನೆಯನ್ನು ವೈಶಿಷ್ಟ್ಯಗೊಳಿಸಿದ ಅಂಶಗಳನ್ನು ಹೊಂದಿದ್ದ ಪ್ರಥಮ ಕವಿತೆಯಾಗಿತ್ತು. ಇದು ಪ್ರೇಮಾದಾರವೆಂದು ವಿದಿತವಾಯಿತು. ಪ್ರಾವೆನ್ಸ್ ಪ್ರಾಂತದ ಕವಿಗಳು, ಅದನ್ನು ವಿರಾಮೋರ್ (ನಿಜ ಪ್ರೀತಿ) ಇಲ್ಲವೆ ಫಿನಾಮೋರ್ (ಉತ್ಕೃಷ್ಟ ಪ್ರೀತಿ) ಎಂಬುದಾಗಿ ಸ್ವತಃ ಕರೆದರು. ಅದೊಂದು ಮೂಲತಃ ಕ್ರಾಂತಿಕರವಾಗಿತ್ತು, ಏಕೆಂದರೆ ಇನ್ನು ಮುಂದೆ ಸ್ತ್ರೀಯು ಪುರುಷನಿಗೆ ತುಚ್ಛವಾದ ಕೆಳಮಟ್ಟದ ಸ್ಥಾನದಲ್ಲಿ ಇರಿಸಲ್ಪಡಲಿಲ್ಲ.
ಟ್ರೂಬಡೋರ್ ಕವಿತೆಯು ಸ್ತ್ರೀಯರ ಮೇಲೆ ಮಹಾ ಘನತೆ, ಆದರ, ಮತ್ತು ಗೌರವವನ್ನು ಅನುಗ್ರಹಿಸಿತು. ಅವಳು ಉದಾತ್ತ ಹಾಗೂ ಸದ್ಗುಣಶೀಲ ಗುಣಗಳ ಮೂರ್ತೀಕರಣವಾದಳು. ಕೆಲವು ಗೀತೆಗಳು, ಶ್ಲಾಘಿಸುತ್ತಿರುವ ಹಾಡುಕವಿಯ ಕಡೆಗೆ ಸ್ತ್ರೀಯೊಬ್ಬಳ ತಾತ್ಸಾರ ಭಾವದ ಕುರಿತು ಪ್ರಲಾಪಿಸಿದವು. ಸಿದ್ಧಾಂತದಲ್ಲಿಯಾದರೊ, ಟ್ರೂಬಡೋರರ ಪ್ರೀತಿ ನಿರ್ಮಲವಾಗಿ ಉಳಿಯಲಿಕ್ಕಿತ್ತು. ಅವನ ಪ್ರಧಾನ ಗುರಿಯು ಸ್ತ್ರೀಯ ಅನುಭೋಗವಲ್ಲ, ಬದಲಿಗೆ, ಅವಳಿಗಾಗಿರುವ ಅವನ ಪ್ರೀತಿಯು ಅವನಲ್ಲಿ ಪ್ರೇರಿಸಿದ ನೈತಿಕ ಶುದ್ಧೀಕರಣವಾಗಿತ್ತು. ತನ್ನನ್ನು ಅರ್ಹ ವ್ಯಕ್ತಿಯನ್ನಾಗಿ ಮಾಡಿಕೊಳ್ಳಲು, ಈ ಉತ್ಕಾಂಕ್ಷಿ ಕವಿಯು, ದೀನತೆ, ಆತ್ಮನಿಯಂತ್ರಣ, ತಾಳ್ಮೆ, ನಿಷ್ಠೆ, ಮತ್ತು ಆ ಸ್ತ್ರೀಯಲ್ಲಿದ್ದ ಎಲ್ಲ ಉದಾತ್ತ ಗುಣಗಳನ್ನು ವಿಕಸಿಸಿಕೊಳ್ಳುವಂತೆ ಒತ್ತಾಯಿಸಲ್ಪಟ್ಟನು. ಹೀಗೆ, ಪುರುಷರಲ್ಲೇ ಅತ್ಯಂತ ಅನಾಗರಿಕನಾದವನು, ಪ್ರೀತಿಯಿಂದ ರೂಪಾಂತರಿಸಲ್ಪಡಬಹುದಿತ್ತು.
ಪ್ರೇಮಾದಾರಗಳು ಸಾಮಾಜಿಕ ಮತ್ತು ನೈತಿಕ ಶುದ್ಧೀಕರಣದ ಮೂಲವಾಗಿದ್ದವೆಂದು, ಮತ್ತು ವಿನೀತ ಕ್ರಿಯೆಗಳು ಹಾಗೂ ಉದಾತ್ತ ಕೃತ್ಯಗಳ ಉಗಮವು ಪ್ರೀತಿಯಾಗಿತ್ತೆಂದು ಟ್ರೂಬಡೋರರು ನಂಬಿದರು. ಈ ವಿಚಾರವು ವಿಸ್ತರಿಸಲ್ಪಟ್ಟಂತೆ, ಅದು ಸಂಪೂರ್ಣ ನಡೆವಳಿಕೆಸೂತ್ರಕ್ಕೆ ಆಧಾರವಾಯಿತು. ಇದು ಸಕಾಲದಲ್ಲಿ ಸಮಾಜದ ಸಾಮಾನ್ಯ ವರ್ಗಗಳಲ್ಲಿ ಹೀರಿಕೊಳ್ಳಲ್ಪಟ್ಟಿತು. ಒರಟಾಗಿಯೂ ಕ್ರೂರವಾಗಿಯೂ ಇದ್ದ ಊಳಿಗ ಮಾನ್ಯ ಪದ್ಧತಿಗೆ ವ್ಯತಿರಿಕ್ತವಾಗಿ, ಹೊಸ ವಿಧದ ಜೀವನವು ಆರಂಭಿಸಿತ್ತು. ತಮ್ಮ ಪುರುಷರು ಸಂಭಾವಿತರಾಗಿರಬೇಕೆಂದು—ಸ್ವತ್ಯಾಗಿಗಳು, ದಾಕ್ಷಿಣ್ಯಪರರು ಮತ್ತು ದಯಾಪರರಾಗಿರುವಂತೆ ಸ್ತ್ರೀಯರು ಈಗ ಅಪೇಕ್ಷಿಸಿದರು.
ಬೇಗನೆ, ಯೂರೋಪಿನ ಹೆಚ್ಚಿನ ಭಾಗವು, ಟ್ರೂಬಡೋರರ ಕಲೆಯನ್ನು ರೂಢಿಸಿಕೊಳ್ಳುತ್ತಿತ್ತು. ಸ್ಪೆಯ್ನ್ ಮತ್ತು ಪೋರ್ಚುಗಲ್ ಅವರ ಮುಖ್ಯವಿಷಯಗಳನ್ನು ಅಂಗೀಕರಿಸಿಕೊಂಡವು. ಉತ್ತರ ಫ್ರಾನ್ಸಿನಲ್ಲಿ ಟ್ರೂವರರಿದ್ದರು; ಜರ್ಮನಿಯಲ್ಲಿ ಮಿನೆಸಿಂಗರ್ಸ್; ಇಟಲಿಯಲ್ಲಿ ಟ್ರೋವಾಟೋರೀ ಇದ್ದರು. ಶೌರ್ಯದ ಆದರ್ಶಗಳೊಂದಿಗೆ ಒಂದಾದ ಪ್ರೇಮಾದಾರಗಳ ವಿಷಯವಾದ ಟ್ರೂಬಡೋರರ ಮುಖ್ಯವಿಷಯವು, ರೊಮಾನ್ಸ್ ಎಂಬುದಾಗಿ ವಿದಿತವಾದ ಸಾಹಿತ್ಯದ ಒಂದು ಶೈಲಿಯನ್ನು ಸೃಷ್ಟಿಸಿತು.b ಉದಾಹರಣೆಗೆ, ಪ್ರೇಮಾದಾರದ ಆದರ್ಶವನ್ನು ಕೆಲ್ಟಿಕ್ ಬ್ರಿಟನಿಯ ದಂತಕಥೆಗಳೊಂದಿಗೆ ಸೇರಿಸುತ್ತಾ, ಟ್ರೂವರ್ ಕ್ರೇಟಯನ್ ಟ್ರೆವಾ ರಾಜ ಆರ್ಥರ್ ಮತ್ತು ಅವರ ವೀರ ಪುರುಷರ ಕಥೆಗಳಲ್ಲಿ ಉದಾರತೆಯ ಸದ್ಗುಣಗಳನ್ನು ಮತ್ತು ಬಲಹೀನರ ಸಂರಕ್ಷಣೆಯನ್ನು ಸೂಕ್ಷ್ಮವಾಗಿ ಪಡಿಮೂಡಿಸಿದರು.
ಅವರು ಬೀರಿದ ಸಾಮಾಜಿಕ ಪರಿಣಾಮ
ಹೆಚ್ಚಿನ ಟ್ರೂಬಡೋರ್ ಗೀತೆಗಳು ಪ್ರೇಮಾದಾರದ ಸದ್ಗುಣಗಳನ್ನು ಶ್ಲಾಘಿಸಿದವಾದರೂ, ಇತರ ಗೀತೆಗಳು ಆ ದಿನದ ಸಾಮಾಜಿಕ ಹಾಗೂ ರಾಜಕೀಯ ವಿವಾದಾಂಶಗಳೊಂದಿಗೆ ವ್ಯವಹರಿಸಿದವು. ಲಾ ವ್ಯೆಯ್ ಏ ಲೇಪೇ (ಪಿಟೀಲು ಮತ್ತು ಖಡ್ಗ) ಎಂಬ ಪುಸ್ತಕದಲ್ಲಿ, ಫ್ರೆಂಚ್ ಗ್ರಂಥಕರ್ತರಾದ ಮಾರ್ಟನ್ ಆರಲ್ ವಿವರಿಸಿದ್ದೇನೆಂದರೆ, ಟ್ರೂಬಡೋರರು ‘ತಮ್ಮ ಸಮಕಾಲೀನರನ್ನು ಬೇರ್ಪಡಿಸಿದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ತಮ್ಮ ರಚನೆಗಳ ಮೂಲಕ ಟ್ರೂಬಡೋರರು ಈ ಪಕ್ಷ ಇಲ್ಲವೆ ಆ ಪಕ್ಷದ ಸಫಲತೆಗೂ ನೆರವುನೀಡಿದರು.’
ಮಧ್ಯಯುಗದ ಸಮಾಜದಲ್ಲಿ ಟ್ರೂಬಡೋರರ ಅದ್ವಿತೀಯ ಸ್ಥಾನದ ಬಗ್ಗೆ ಹೇಳಿಕೆ ನೀಡುತ್ತಾ ರಾಬರ್ಟ್ ಸಾಬಾಟೀರ್ ಹೇಳುವುದು: “ಈ ಮೊದಲು ಕವಿಗಳಿಗೆಂದೂ ಇಷ್ಟು ಮಹಾನ್ ಪ್ರಖ್ಯಾತಿಯು ಕೊಡಲ್ಪಟ್ಟಿರಲಿಲ್ಲ; ಈ ಮೊದಲು ಯಾರಿಗೂ ಇಷ್ಟೊಂದು ವಾಕ್ಸ್ವಾತಂತ್ರ್ಯವಿರಲಿಲ್ಲ. ಟ್ರೂಬಡೋರರು ಹೊಗಳಿದರು ಮತ್ತು ತೆಗಳಿದರು, ಅವರು ಜನಸಾಮಾನ್ಯರ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದರು, ಅವರು ರಾಜಕೀಯ ಕಾರ್ಯನೀತಿಗಳ ಮೇಲೆ ಪ್ರಭಾವಬೀರಿದರು, ಮತ್ತು ಅವರು ಹೊಸ ವಿಚಾರಗಳ ಮಾಧ್ಯಮವಾದರು.”—ಲಾ ಪೊಏಸೀ ಡ್ಯೂ ಮ್ವಾಯೆನ್ ಆಸ್.
ತಮ್ಮ ದಿನದ ವಾರ್ತಾ ಮಾಧ್ಯಮ
ಮುದ್ರಣಾಲಯದ ಕಂಡುಹಿಡಿತಕ್ಕಿಂತಲೂ ಬಹಳ ಸಮಯದ ಹಿಂದೆಯೇ, ಟ್ರೂಬಡೋರರು ಮತ್ತು ಇತರ ಅಲೆಮಾರಿ ಗಾಯಕರು ತಮ್ಮ ದಿನದ ವಾರ್ತಾ ಮಾಧ್ಯಮವಾಗಿ ಕಾರ್ಯಮಾಡಿದರೆಂದು ಸರಿಯಾಗಿಯೇ ಹೇಳಸಾಧ್ಯವಿದೆ. ಮಧ್ಯಯುಗದ ಗಾಯಕರು ಅಂತಾರಾಷ್ಟ್ರೀಯ ಸಂಚಾರಿಗಳಾಗಿದ್ದರು. ಯೂರೋಪಿನ ಅರಮನೆಗಳಾದ್ಯಂತ—ಅವರು ಎಲ್ಲಿಯೇ ಹೋಗಲಿ, ಸೈಪ್ರಸ್ನಿಂದ ಸ್ಕಾಟ್ಲೆಂಡ್ ವರೆಗೆ ಮತ್ತು ಪೋರ್ಚುಗಲ್ನಿಂದ ಪೂರ್ವ ಯೂರೋಪಿನ ವರೆಗೆ—ಅವರು ಸುದ್ದಿಗಳನ್ನು ಸಂಗ್ರಹಿಸಿ, ಕಥೆಗಳು, ರಾಗಗಳು, ಮತ್ತು ಗೀತೆಗಳನ್ನೂ ವಿನಿಮಯಮಾಡಿಕೊಂಡರು. ಬಾಯಿಮಾತಿನ ಮೂಲಕ, ಒಬ್ಬ ಚಾರಣಗಾಯಕನಿಂದ ಇನ್ನೊಬ್ಬನಿಗೆ ಬೇಗನೆ ಹರಡುತ್ತಾ, ಟ್ರೂಬಡೋರರ ಗೀತೆಗಳ ಆಕರ್ಷಕ ರಾಗಗಳು ಜನರಿಂದ ಬೇಗನೆ ಕಲಿತುಕೊಳ್ಳಲ್ಪಟ್ಟವು. ಇವು ಸಾರ್ವಜನಿಕ ಅಭಿಪ್ರಾಯವನ್ನು ಬಹಳವಾಗಿ ಪ್ರಭಾವಿಸಿದವು ಮತ್ತು ಜನಸಾಮಾನ್ಯರನ್ನು ಒಂದಲ್ಲ ಒಂದು ಚಳವಳಿಗಾಗಿ ಕೆರಳಿಸಿದವು.
ಟ್ರೂಬಡೋರರಿಂದ ಉಪಯೋಗಿಸಲ್ಪಟ್ಟ ಅನೇಕ ಕಾವ್ಯಾತ್ಮಕ ಬಗೆಗಳಲ್ಲಿ ಒಂದು, ಸಿರ್ವೆಂಟ್ ಎಂದು ಕರೆಯಲ್ಪಟ್ಟಿದೆ, ಅದರ ಅಕ್ಷರಾರ್ಥ ಅರ್ಥ “ಸೇವಕನ ಗೀತೆ” ಎಂಬುದಾಗಿದೆ. ಇಂತಹ ಕೆಲವು ಗೀತೆಗಳು, ಪ್ರಭುಗಳ ಅನ್ಯಾಯವನ್ನು ಬಯಲುಪಡಿಸಿದವು. ಇತರ ಗೀತೆಗಳು, ಶೌರ್ಯ, ಸ್ವತ್ಯಾಗ, ಉದಾರತೆ, ಮತ್ತು ಕರುಣೆಯ ಕೃತ್ಯಗಳನ್ನು ಕೊಂಡಾಡಿದವಾದರೂ, ಒರಟಾದ ಕ್ರೂರತೆ, ಹೇಡಿತನ, ಕಪಟ, ಸ್ವಾರ್ಥಪರತೆಯನ್ನು ಟೀಕಿಸಿದವು. 13ನೆಯ ಶತಮಾನದ ಆದಿಭಾಗದಲ್ಲಿ ಬರೆಯಲ್ಪಟ್ಟ ಸಿರ್ವೆಂಟ್ಗಳು, ಮಹಾ ಉಪ್ಲವನದ ಸಮಯದಲ್ಲಿ ಲ್ಯಾಂಗ್ಡಾಕ್ನ ರಾಜಕೀಯ ಹಾಗೂ ಧಾರ್ಮಿಕ ವಾತಾವರಣದ ಬಗ್ಗೆ ಇತಿಹಾಸಗಾರರಿಗೆ ಮಾಹಿತಿಯನ್ನು ಪಡೆದುಕೊಳ್ಳುವ ಒಂದು ಸಾಧನವಾಗಿವೆ.
ಚರ್ಚಿನ ವಿಮರ್ಶೆ
ಧಾರ್ಮಿಕ ಯುದ್ಧಗಳ ವೈಫಲ್ಯದೊಂದಿಗೆ, ಅನೇಕ ಜನರು ಕ್ಯಾತೊಲಿಕ್ ಚರ್ಚಿನ ಆತ್ಮಿಕ ಹಾಗೂ ಪೌರ ಅಧಿಕಾರದ ಬಗ್ಗೆ ಸಂಶಯಪಡತೊಡಗಿದರು. ಕ್ರಿಸ್ತನನ್ನು ಪ್ರತಿನಿಧಿಸುತ್ತೇವೆಂದು ವೈದಿಕರು ಹೇಳಿಕೊಂಡರೂ, ಅವರ ಕೃತ್ಯಗಳು ಖಂಡಿತವಾಗಿಯೂ ಕ್ರಿಸ್ತಸದೃಶವಾಗಿರಲಿಲ್ಲ. ಅವರ ಕಪಟ, ಲೋಭ, ಮತ್ತು ಭ್ರಷ್ಟಾಚಾರದ ಕುರಿತು ಎಲ್ಲರಿಗೂ ಗೊತ್ತಿತ್ತು. ಸದಾ ಹೆಚ್ಚಿನ ಸಂಪತ್ತು ಮತ್ತು ರಾಜಕೀಯ ಅಧಿಕಾರವನ್ನು ಕೋರುತ್ತಾ, ಚರ್ಚಿನ ಬಿಷಪರು ಮತ್ತು ಪಾದ್ರಿಗಳು, ಶ್ರೀಮಂತರ ಅಗತ್ಯಗಳನ್ನು ಪೂರೈಸಿದರು. ಬಡವರ ಮತ್ತು ಮಧ್ಯಮ ವರ್ಗದವರ ಆತ್ಮಿಕ ಅಗತ್ಯಗಳ ವಿಷಯದಲ್ಲಿ ಇವರ ಕಡೆಗಣಿಕೆಯು, ಅನಿವಾರ್ಯವಾಗಿ ಮನಸ್ತಾಪವನ್ನು ಕೆರಳಿಸಿತು.
ಲ್ಯಾಂಗ್ಡಾಕ್ನಲ್ಲಿನ ಮಧ್ಯಮ ವರ್ಗದ ಅನೇಕ ಜನರು ಅಲ್ಲದೆ ಶ್ರೀಮಂತರು ಅಕ್ಷರಸ್ತರಾಗಿದ್ದರು. ಇತಿಹಾಸಕಾರ ಏಚ್. ಆರ್. ಟ್ರೆವರ್-ರೋಪರ್ ಗಮನಿಸಿದ್ದೇನೆಂದರೆ, 12ನೆಯ ಶತಮಾನದ ಚರ್ಚು “ಅದು ಅನುಕರಿಸುತ್ತಿರುವುದಾಗಿ ಪ್ರತಿಪಾದಿಸಿದ ಪ್ರಾಚೀನ ಚರ್ಚುಗಳಿಗಿಂತ ಬಹಳ ಭಿನ್ನವಾಗಿತ್ತೆಂದು” ಅಕ್ಷರಸ್ತ ಜನಸಾಮಾನ್ಯರು ಕಂಡುಕೊಳ್ಳುತ್ತಿದ್ದರು. ಅನೇಕ ಪುರುಷರು ಹೀಗೆ ಆಲೋಚಿಸಲು ತೊಡಗುತ್ತಿದ್ದರೆಂದು ಅವನು ಕೂಡಿಸುತ್ತಾನೆ: “ಪೋಪ್ ಇಲ್ಲವೆ ಊಳಿಗ ಮಾನ್ಯ ಬಿಷಪರು ಇಲ್ಲದ ಅಥವಾ ಅದರ ಸಂಪತ್ತು ಮತ್ತು ಅಧಿಕಾರವನ್ನು ಹೆಚ್ಚಿಸಲು ರಚಿಸಲ್ಪಟ್ಟ ಸಮೃದ್ಧವಾದ ಉಂಬಳಿಗಳಿಲ್ಲದ ಅಥವಾ ಹೊಸ ಲೇಖನಗಳು ಇಲ್ಲವೆ ವಿಧರ್ಮಿ ಸಿದ್ಧಾಂತಗಳು ಇಲ್ಲದ ಒಂದು ಚರ್ಚು, ಕಾನ್ಸ್ಟೆಂಟೀನ್ನ ಮೊದಲು ರಾಷ್ಟ್ರೀಯ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿರದ ಚರ್ಚು, ಅಪೊಸ್ತಲರ ಚರ್ಚು, . . . ಹಿಂಸೆಯ ಚರ್ಚಿಗಿಂತ . . . ಎಷ್ಟೊಂದು ಭಿನ್ನವಾಗಿತ್ತು!”
ಲ್ಯಾಂಗ್ಡಾಕ್ ಸಹಿಷ್ಣುತೆಯ ದೇಶವಾಗಿತ್ತು. ಟೌಲೂಸ್ನ ಶ್ರೀಮಂತರು (ಕೌಂಟ್ ಪದವಿಯುಳ್ಳವರು) ಮತ್ತು ದಕ್ಷಿಣದ ಇತರ ಪ್ರಭುಗಳು ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದರು. ವಾಲ್ಡೆನೀಸ್c ಬೈಬಲನ್ನು ಲಾಙಡಾಕ್ ಭಾಷೆಯಲ್ಲಿ ಭಾಷಾಂತರಿಸಿ, ಪ್ರಾಂತದಾದ್ಯಂತ ಇಬ್ಬಿಬ್ಬರಾಗಿ ಹುರುಪಿನಿಂದ ಅದನ್ನು ಸಾರುತ್ತಿದ್ದರು. ಕ್ಯಾತರೈ (ಆ್ಯಲ್ಬಿಜೆನೀಸ್ ಎಂಬುದಾಗಿಯೂ ಕರೆಯಲ್ಪಟ್ಟವರು) ಕೂಡ ತಮ್ಮ ಸಿದ್ಧಾಂತವನ್ನು ಹಬ್ಬಿಸುತ್ತಾ, ಶ್ರೀಮಂತ ವರ್ಗದಿಂದ ಅನೇಕ ಮತಾಂತರಿಗಳನ್ನು ಪಡೆದುಕೊಳ್ಳುತ್ತಿದ್ದರು.
ಟ್ರೂಬಡೋರರ ಸಿರ್ವೆಂಟ್ಗಳಲ್ಲಿ ಹೆಚ್ಚಿನವು, ಕ್ಯಾತೊಲಿಕ್ ವೈದಿಕರ ವಿಷಯದಲ್ಲಿ ಜನರ ನಿರಾಶೆ, ಅಗೌರವ, ಮತ್ತು ಜುಗುಪ್ಸೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದವು. ಗೀ ಡ ಕಾವ್ಯಾನ್ ಅವರಿಂದ ಬರೆಯಲ್ಪಟ್ಟ ಒಂದು ಸಿರ್ವೆಂಟ್, ಹೆಚ್ಚಿನ ಲೌಕಿಕ ಆಸಕ್ತಿಗಳಿಗಾಗಿ “ತಮ್ಮ ಪ್ರಾಥಮಿಕ ವೃತ್ತಿಯನ್ನು ತ್ಯಜಿಸಿ”ಬಿಟ್ಟದಕ್ಕಾಗಿ ವೈದಿಕರನ್ನು ಖಂಡಿಸುತ್ತದೆ. ಟ್ರೂಬಡೋರರ ಗೀತೆಗಳ ಪದಗಳು, ನರಕಾಗ್ನಿ, ಶಿಲುಬೆ, ಪಾಪನಿವೇದನೆ, ಮತ್ತು “ಪವಿತ್ರಜಲವನ್ನು” ಗೇಲಿಮಾಡಿದವು. ಅವು ಶೇಷಪಾಪಕ್ಷಮೆಗಳನ್ನು ಮತ್ತು ಸ್ಮಾರಕವಸ್ತುಗಳನ್ನು ಅಪಹಾಸ್ಯಮಾಡಿ, ಅನೈತಿಕ ಪಾದ್ರಿಗಳು ಮತ್ತು ಭ್ರಷ್ಟ ಬಿಷಪರನ್ನು “ದೇಶದ್ರೋಹಿಗಳು, ಸುಳ್ಳುಗಾರರು, ಮತ್ತು ಕಪಟಿ”ಗಳಾಗಿ ಕುಚೋದ್ಯ ಮಾಡಿದವು.
ಸ್ವಾತಂತ್ರ್ಯದ ವಿರುದ್ಧ ಚರ್ಚಿನ ಹೋರಾಟ
ಆದರೆ ರೋಮನ್ ಚರ್ಚು, ತನ್ನನ್ನು ಪ್ರತಿಯೊಂದು ಸಾಮ್ರಾಜ್ಯ ಹಾಗೂ ರಾಜ್ಯದ ಮೇಲೆ ಶ್ರೇಷ್ಠ ಅಧಿಕಾರಿಯಾಗಿ ಪರಿಗಣಿಸಿಕೊಂಡಿತು. ಯುದ್ಧವು ಅದರ ಅಧಿಕಾರದ ಸಾಧನವಾಯಿತು. ರಾಜಕುಮಾರರನ್ನು ನಿಗ್ರಹಿಸಿ, ಫ್ರಾನ್ಸಿನ ದಕ್ಷಿಣ ಕ್ಷೇತ್ರಗಳಲ್ಲಿನ ಎಲ್ಲ ಅಸಮ್ಮತಿಯನ್ನು ಅದುಮಿಬಿಡಸಾಧ್ಯವಿದ್ದ ಯಾವುದೇ ಸೇನೆಗೆ IIIನೆಯ ಪೋಪ್ ಇನೋಸೆಂಟ್ ಲ್ಯಾಂಗ್ಡಾಕ್ನ ಎಲ್ಲ ಸಂಪತ್ತನ್ನು ಕೊಡುವುದಾಗಿ ಮಾತುಕೊಟ್ಟರು. ಹಿಂಬಾಲಿಸಿಬಂದ ಅವಧಿಯು, ಫ್ರೆಂಚ್ ಇತಿಹಾಸದಲ್ಲಿ ಚಿತ್ರಹಿಂಸೆ ಹಾಗೂ ಕೊಲೆಯ ಅತ್ಯಂತ ರಕ್ತಮಯ ಅವಧಿಗಳಲ್ಲಿ ಒಂದಾಗಿತ್ತು. ಅದು ಆ್ಯಲ್ಬಿಜೆನ್ಸೀಯನ್ ಧರ್ಮಯುದ್ಧ (1209-29)ವಾಗಿ ವಿದಿತವಾಯಿತು.d
ಟ್ರೂಬಡೋರರು ಅದನ್ನು ಸುಳ್ಳು ಧರ್ಮಯುದ್ಧವೆಂದು ಕರೆದರು. ಸಮ್ಮತಿಸದಿದ್ದವರನ್ನು ಚರ್ಚು ಕ್ರೂರವಾಗಿ ಉಪಚರಿಸಿದ್ದಕ್ಕೆ ಮತ್ತು ನಾಸ್ತಿಕರೆಂದು ಪರಿಗಣಿಸಲ್ಪಟ್ಟ ಮುಸ್ಲಿಮರನ್ನು ಕೊಂದುದಕ್ಕಾಗಿ ಅದು ನೀಡಿದ ಪಾಪಕ್ಷಮೆಯಂತೆಯೇ, ಅಸಮ್ಮತಿ ಸೂಚಿಸಿದ ಫ್ರೆಂಚರನ್ನು ಕೊಂದುದಕ್ಕಾಗಿ ಪೋಪ್ ನೀಡಿದ ಅದೇ ಪಾಪಕ್ಷಮೆಗಾಗಿ ಅವರ ಗೀತೆಗಳು ಕ್ರೋಧವನ್ನು ವ್ಯಕ್ತಪಡಿಸಿದವು. ಆ್ಯಲ್ಬಿಜೆನ್ಸೀಯನ್ ಧರ್ಮಯುದ್ಧವನ್ನು ಮತ್ತು ಅದನ್ನು ಅನುಸರಿಸಿ ಬಂದ ವಿಚಾರಣೆಯ ಸಮಯದಲ್ಲಿ ಚರ್ಚು ತನಗಾಗಿ ಬಹಳಷ್ಟು ಸಂಪತ್ತನ್ನು ಗಿಟ್ಟಿಸಿಕೊಂಡಿತು. ಕುಟುಂಬಗಳಿಗಿದ್ದ ಉತ್ತರಾಧಿಕಾರವು ತಪ್ಪಿಸಲಾಯಿತು, ಅವರ ಜಮೀನು ಮತ್ತು ಮನೆಗಳನ್ನು ವಶಪಡಿಸಿಕೊಳ್ಳಲಾಯಿತು.
ಕ್ಯಾತರೈ ಪಾಷಂಡಿಗಳೆಂದು ಆರೋಪಿಸಲ್ಪಟ್ಟ ಕಾರಣ, ಹೆಚ್ಚಿನ ಟ್ರೂಬಡೋರರು ಕಡಿಮೆ ವಿರೋಧ ತೋರಿಸಿದ ದೇಶಗಳಿಗೆ ಓಡಿಹೋದರು. ಈ ಧರ್ಮಯುದ್ಧವು ಅಕ್ಸಿಟನ್ ನಾಗರಿಕತೆ, ಅದರ ಜೀವನ ಶೈಲಿ, ಅದರ ಕವಿತೆಯ ಅಂತ್ಯವನ್ನು ಗುರುತಿಸಿತು. ಟ್ರೂಬಡೋರ್ ಗೀತೆಯನ್ನು ಹಾಡುವುದನ್ನು ಇಲ್ಲವೆ ಗುನುಗುನಿಸುವುದನ್ನೂ ಮಠೀಯ ನ್ಯಾಯಸ್ಥಾನವು ನ್ಯಾಯವಿರುದ್ಧವಾದದ್ದಾಗಿ ಕಟ್ಟಳೆ ವಿಧಿಸಿತು. ಆದರೆ ಅವರ ಪರಂಪರೆ ಉಳಿಯಿತು. ಅವರ ವೈದಿಕವಿರುದ್ಧ ಗೀತೆಗಳು, ಯಾವುದು ಸುಧಾರಣೆಯ ಕಾಲವಾಗಲಿತ್ತೊ ಅದಕ್ಕೆ ತಕ್ಕದಾದ ಮನಸ್ಸಿನ ಸ್ಥಿತಿಯನ್ನು ನಿಶ್ಚಯವಾಗಿಯೂ ಸ್ಥಾಪಿಸಿದವು. ನಿಜವಾಗಿಯೂ, ಟ್ರೂಬಡೋರರು ತಮ್ಮ ಪ್ರೇಮ ಗೀತೆಗಳಿಗಿಂತಲೂ ಹೆಚ್ಚಿನ ವಿಷಯಕ್ಕಾಗಿ ಜ್ಞಾಪಿಸಿಕೊಳ್ಳಲ್ಪಡಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ರೋಮನ್ ಎಂಬುದಾಗಿ ಕರೆಯಲ್ಪಟ್ಟ, ರೋಮನ್ ಸೇನೆಗಳಿಂದ ಪಿತ್ರಾರ್ಜಿತವಾಗಿ ಪಡೆದುಕೊಂಡ ಲ್ಯಾಟಿನ್ ಭಾಷೆಯು, ಆ ಸಮಯದೊಳಗಾಗಿ ಫ್ರಾನ್ಸ್ನಲ್ಲಿ ಎರಡು ದೇಶೀಯ ಭಾಷೆಗಳಾಗಿ ವಿಕಸಿಸಿತ್ತು: ದಕ್ಷಿಣ ಫ್ರಾನ್ಸ್ ಲಾಙ ಡಾಕ್ (ಅಕ್ಸಿಟನ್ ಇಲ್ಲವೆ ಪ್ರೊವೆನ್ಸಾಲ್ ಎಂದೂ ವಿದಿತ) ಭಾಷೆಯನ್ನು ಬಳಸಿತಾದರೂ, ಉತ್ತರ ಫ್ರಾನ್ಸ್ (ಹಳೆಯ ಫ್ರೆಂಚ್ ಎಂಬುದಾಗಿ ಕೆಲವೊಮ್ಮೆ ಕರೆಯಲ್ಪಟ್ಟ ಫ್ರೆಂಚ್ ಭಾಷೆಯ ಆದಿಯ ರೂಪವಾಗಿದ್ದ) ಲಾಙ ಡಾಇಲ್ ಭಾಷೆಯನ್ನು ಬಳಸಿತು. ಹೌದು ಎಂಬ ಪದಕ್ಕೆ ಅವರು ಬಳಸಿದ ಶಬ್ದದಿಂದಲೇ ಈ ಎರಡೂ ಭಾಷೆಗಳು ಪರಸ್ಪರ ಬೇರೆಯಾಗಿ ಗುರುತಿಸಲ್ಪಟ್ಟವು. ದಕ್ಷಿಣದಲ್ಲಿ ಅದು ಆಕ್ (ಲ್ಯಾಟಿನಿಂದ ಹಾಕ್) ಆಗಿತ್ತು; ಉತ್ತರದಲ್ಲಿ ಆಯಿಲ್ (ಲ್ಯಾಟಿನಿಂದ ಹಾಕ್ ಇಲ್) ಆಗಿತ್ತು, ಇದು ಆಧುನಿಕ ಫ್ರೆಂಚ್ ಭಾಷೆಯಲ್ಲಿ ವೀ ಆಯಿತು.
b ಉತ್ತರ ಇಲ್ಲವೆ ದಕ್ಷಿಣ ದೇಶೀಯ ಭಾಷೆಯಲ್ಲಿ ಬರೆಯಲ್ಪಟ್ಟ ಯಾವುದೇ ಕೃತಿಯನ್ನು ರೋಮನ್ ಎಂದು ಕರೆದರು. ಈ ಶೌರ್ಯದ ಕಥೆಗಳಲ್ಲಿ ಹೆಚ್ಚಿನವು ಪ್ರೇಮಾದಾರದ ಭಾವನೆಯೊಂದಿಗೆ ವ್ಯವಹರಿಸಿದ ಕಾರಣ, ಪ್ರಣಯ ಇಲ್ಲವೆ ಪ್ರಣಯಾತ್ಮಕವಾದ ಸಕಲಕ್ಕೂ ಅವು ಒಂದು ಪ್ರಮಾಣವಾಗಿದ್ದವು.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, 1981, ಆಗಸ್ಟ್ 1ರ ದ ವಾಚ್ಟವರ್, 12-15ನೆಯ ಪುಟಗಳನ್ನು ನೋಡಿರಿ.
d ಸೆಪ್ಟೆಂಬರ್ 1, 1995ರ ದ ವಾಚ್ಟವರ್, 27-30ನೆಯ ಪುಟಗಳನ್ನು ನೋಡಿರಿ.
[ಪುಟ 18 ರಲ್ಲಿರುವ ಚಿತ್ರ ಕೃಪೆ]
ಮುದ್ರಣಕಾರರ ಅಲಂಕಾರಗಳು/by Carol Belanger Grafton/Dover Publications, Inc.
Bibliothèque Nationale, Paris
[ಪುಟ 19 ರಲ್ಲಿರುವ ಚಿತ್ರ]
12ನೆಯ ಶತಮಾನದ ಹಸ್ತಪ್ರತಿಯಿಂದ ಒಂದು ವರ್ಣಚಿತ್ರ
[ಕೃಪೆ]
Bibliothèque Nationale, Paris