ನಮ್ಮ ವಾಚಕರಿಂದ
ಧಾರ್ಮಿಕ ಸ್ವಾತಂತ್ರ್ಯ ಅನೇಕ ದಶಕಗಳಿಂದಲೂ ನಾನು ಎಚ್ಚರ! ಪತ್ರಿಕೆಯ ಓದುಗನಾಗಿದ್ದೇನೆ. “ನಿಮ್ಮ ಧಾರ್ಮಿಕ ಸ್ವಾತಂತ್ರ್ಯ—ಬೆದರಿಕೆಗೊಳಪಟ್ಟಿದೆಯೋ?” (ಫೆಬ್ರವರಿ 8, 1999) ಎಂಬ ಲೇಖನಮಾಲೆಗಾಗಿ ನನ್ನ ಪ್ರಶಂಸೆಯನ್ನು ವ್ಯಕ್ತಪಡಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ. ಕಗ್ಗತ್ತಲೆಯ ಯುಗಗಳೆಂದು ಕರೆಯಲ್ಪಡುತ್ತಿದ್ದ ಸಮಯಗಳಲ್ಲಿ ಅಸಹಿಷ್ಣುತೆಯು ಯೂರೋಪಿನಲ್ಲಿತ್ತೆಂದು ನನಗೆ ಗೊತ್ತು ಮತ್ತು ಕ್ಯಾಥೊಲಿಕ್ ಚರ್ಚು ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡು ಮನಸ್ಸಾಕ್ಷಿಯ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಜನರು ಚಲಾಯಿಸದಂತೆ ತಡೆಯುವುದರಲ್ಲಿ ಸಫಲಗೊಂಡಿತ್ತು. ಇಂದು ಫ್ರಾನ್ಸ್‌ನಲ್ಲಿ ಏನು ನಡೆಯುತ್ತಿದೆಯೆಂಬುದನ್ನು ನಾನು ಈಗ ತಿಳಿದುಕೊಂಡಿರುವುದರಿಂದ ‘ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನೀಡಿರುವ ಭರವಸೆಯನ್ನು ಅಲ್ಲಗಳೆಯುವ ಮೂಲಕ ಈ ದೇಶವು ತನ್ನ ಹೆಸರಿಗೆ ಏಕೆ ಕಳಂಕವನ್ನು ತರುತ್ತಿದೆ?’ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಈ ಪರಿಸ್ಥಿತಿಯ ಪರಿಣಾಮದ ಕುರಿತು ನಿಮ್ಮ ಲಕ್ಷಾಂತರ ಓದುಗರಿಗೆ ದಯವಿಟ್ಟು ತಿಳಿಸಿರಿ. ಫ್ರಾನ್ಸ್ ಸಹಿಷ್ಣುತೆಯನ್ನು ತೋರಿಸುವುದು ಮತ್ತು ಇತರ ರಾಷ್ಟ್ರಗಳಿಗೆ ಒಂದು ಉತ್ತಮ ಮಾದರಿಯನ್ನು ಇಡುವುದೆಂದು ನಾನು ನಂಬುತ್ತೇನೆ.
ಕೆ. ಕೆ., ಪೋರ್ಟರೀಕೊ
ಏಳು ಮಂದಿ ಪುತ್ರರನ್ನು ಬೆಳೆಸುವುದು ಫೆಬ್ರವರಿ 8, 1999ರ ಪ್ರತಿಯಲ್ಲಿ ಬರ್ಟ್ ಮತ್ತು ಮಾರ್ಗರೆಟ್ ಡಿಕ್‌ಮನ್‌ರಿಂದ ಹೇಳಲ್ಪಟ್ಟಿದ್ದ ಅನುಭವಕ್ಕಾಗಿ ಉಪಕಾರಗಳು. ಈ ಲೇಖನವು ಉತ್ತಮ ಆತ್ಮಿಕ ಪರಂಪರೆಯನ್ನು ನೀಡುವಂಥ ವಿಧದಲ್ಲಿ ನಮ್ಮ ಮೂರು ಮಕ್ಕಳನ್ನು ಬೆಳೆಸುವಂತೆ ನಮ್ಮನ್ನು ನಿಜವಾಗಿಯೂ ಹುರಿದುಂಬಿಸಿತು. ನಮ್ಮ ಮಕ್ಕಳು ಸಹ ಲೇಖನವನ್ನು ಓದಿ ಆನಂದಿಸಿದರು. ಕೇಕ್ ಸಿಗದಿದ್ದ ಡಗ್‌ನ ಪಾಠವನ್ನು ಅವರು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿರುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಇಂಥ ಪ್ರೋತ್ಸಾಹನದಾಯಕ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ಉಪಕಾರಗಳು.
ಎಸ್. ಜೆ., ಇಂಡಿಯ
ಪವಿತ್ರಾತ್ಮ “ಬೈಬಲಿನ ದೃಷ್ಟಿಕೋನ: ದೇವರ ಪವಿತ್ರಾತ್ಮವೆಂದರೇನು?” (ಫೆಬ್ರವರಿ 8, 1999) ಎಂಬ ಉತ್ತಮ ಲೇಖನಕ್ಕಾಗಿ ನಿಮಗೆ ಉಪಕಾರವನ್ನು ತಿಳಿಸಲು ಬಯಸುತ್ತೇನೆ. ಕೆಲವು ವರ್ಷಗಳಿಂದ ನಾನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದರೂ ಯಾವಾಗಲೂ ಯೆಹೋವ ದೇವರ ಕುರಿತು ಹೆಚ್ಚು ಕಲಿಯಲು ಬಯಸುತ್ತೇನೆ. ಈ ಲೇಖನವು, ಶೀರ್ಷಿಕೆಯ ಪ್ರಶ್ನೆಯನ್ನು ಬಹಳ ಸ್ವಾರಸ್ಯಕರವಾಗಿ ಉತ್ತರಿಸಿತು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿತ್ತು. ಯೆಹೋವನನ್ನು ಮತ್ತು ಆತನ ಕೆಲಸಗಳನ್ನು ಹೆಚ್ಚೆಚ್ಚು ಅರ್ಥಮಾಡಿಕೊಂಡಂತೆ ಆತನಿಗಾಗಿರುವ ಪ್ರೀತಿಯು ನನ್ನ ಹೃದಯದಲ್ಲಿ ತುಂಬಿತುಳುಕುತ್ತದೆ.
ವೈ. ಬಿ., ರಷ್ಯ
ಚಿನ್ನ “ಚಿನ್ನ—ಅದರ ರಹಸ್ಯ” (ಅಕ್ಟೋಬರ್ 8, 1998) ಎಂಬ ನಿಮ್ಮ ಲೇಖನವನ್ನು ಓದಿದೆ. 1945ರಲ್ಲಿ ಜರ್ಮನಿಯ ಸರಕಾರದ ಶರಣಾಗತಿಯ ಅನಂತರ ಮಿತ್ರರಾಷ್ಟ್ರ ಪಡೆಗಳು, ಜರ್ಮನಿಯ ಕೀಸರೋಡ ಉಪ್ಪುಗಣಿಗಳಲ್ಲಿ ಅತಿದೊಡ್ಡ ಚಿನ್ನದ ನಿಧಿಯನ್ನು ಕಂಡುಹಿಡಿದವು ಎಂದು ನಿಮ್ಮ ಲೇಖನದಲ್ಲಿ ತಿಳಿಸಿದ್ದೀರಿ. ವಾಸ್ತವದಲ್ಲಿ, ಯುದ್ಧವು ಮುಗಿಯಲು ಮೂರು ವಾರಗಳಿಗೆ ಮುಂಚೆಯೇ ಮಿತ್ರಪಡೆಗಳು ಈ ಗಣಿಗಳನ್ನು ವಶಪಡಿಸಿಕೊಂಡಿದ್ದವು.
ಜೆ. ಎಸ್., ಜರ್ಮನಿ
ಈ ಸ್ಪಷ್ಟೀಕರಣಕ್ಕಾಗಿ ಉಪಕಾರಗಳು. ಕೀಸರೋಡ ಗಣಿಗಳು ಏಪ್ರಿಲ್ 4, 1945ರಲ್ಲಿ ವಶಪಡಿಸಿಕೊಂಡಿದ್ದು ನಿಜ. ಆದರೆ, ಇದು ಮೇ 8, 1945ರಲ್ಲಿ ಜರ್ಮನಿಯ ಶರಣಾಗತಿಗೆ ಒಂದು ತಿಂಗಳಿಗಿಂತಲೂ ಹೆಚ್ಚು ಮುಂಚಿತವಾಗಿತ್ತು.—ಸಂಪಾ.
ಬಹುದೂರದ ಪ್ರಣಯಾಚರ “ಯುವಜನರು ಪ್ರಶ್ನಿಸುವುದು . . . ತುಂಬ ದೂರ ವಾಸಿಸುತ್ತಿರುವಲ್ಲಿ ಪ್ರಣಯಾಚರಣೆಯನ್ನು ಹೇಗೆ ನಡೆಸಸಾಧ್ಯವಿದೆ?” (ಫೆಬ್ರವರಿ 8, 1999) ಎಂಬ ಲೇಖನವು ನನಗೆ ತುಂಬ ತಡವಾಗಿ ಬಂದು ಸೇರಿತು. ನಾನು ಅಮೆರಿಕದವಳಾಗಿದ್ದು, ಲ್ಯಾಟಿನ್ ಅಮೆರಿಕದ ಒಬ್ಬ ಯೌವನಸ್ಥನೊಂದಿಗೆ ಪತ್ರವ್ಯವಹಾರವನ್ನು ಮಾಡುತ್ತಿದ್ದೆ. ನನ್ನ ಜೀವನದಲ್ಲಿ ಇಷ್ಟೊಂದು ಕಷ್ಟಕರವಾದದ್ದನ್ನು ಅನುಭವಿಸಿಯೇ ಇಲ್ಲ. ನೀವು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಎಷ್ಟೇ ನಿಷ್ಠೆಯಿಂದ ಮಾಡಿದರೂ ಅಂಚೆಯ ಮೂಲಕ ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಇಬ್ಬರ ನಡುವೆ ಸಾವಿರಾರು ಮೈಲಿಗಳಷ್ಟು ಅಂತರವಿರುವುದರಿಂದ, ನೀವು ಭ್ರಮೆಯಲ್ಲಿ ಮುಳುಗಲಾರಂಭಿಸುತ್ತೀರಿ. ನಮ್ಮ ವಿಷಯದಲ್ಲಿ ನಮ್ಮ ಸಂಸ್ಕೃತಿಗಳು ಬೇರೆಬೇರೆಯಾಗಿದ್ದವು. ನಮ್ಮ ಸಂಬಂಧವು ಅಂತಿಮವಾಗಿ ಕಡಿದುಹೋದಾಗಲಂತೂ ಜೀವಿಸಲು ಇನ್ನೇನಿದೆ ಎಂಬಂತೆ ಬದುಕೇ ಬೇಡವೆನ್ನಿಸಿತು. ನನ್ನ ಕುಟುಂಬದ ಪ್ರೀತಿಯ ಬೆಂಬಲದ ಫಲವಾಗಿ ನಾನು ಈ ಅನುಭವದಿಂದ ಚೇತರಿಸಿಕೊಂಡೆ.
ಎಸ್. ಎಚ್., ಅಮೆರಿಕ
ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಾನು ಭೇಟಿಯಾದ ಒಬ್ಬ ಹುಡುಗಿಗೆ ಪತ್ರವನ್ನು ಬರೆಯುತ್ತಿದ್ದೇನೆ. ಭಾಷೆ ಮತ್ತು ಸಂಸ್ಕೃತಿಯು ಬೇರೆ ಬೇರೆಯಾಗಿರುವಾಗ ಒಬ್ಬ ವ್ಯಕ್ತಿಯ ಅನಿಸಿಕೆಗಳನ್ನು ಮತ್ತೊಬ್ಬ ವ್ಯಕ್ತಿಗೆ ವಿವರಿಸುವುದು ತುಂಬ ಕಷ್ಟ. ಆದ್ದರಿಂದ, ನಾನು ಆಕೆಯ ಭಾಷೆಯನ್ನು ಕಲಿಯಲು ಶುರುಮಾಡಿದ್ದೇನೆ. ಟೇಪ್ ರೆಕಾರ್ಡರನ್ನು ಉಪಯೋಗಿಸುವ ಸೂಚನೆಯು ತುಂಬ ಒಳ್ಳೆಯ ಸಲಹೆಯಾಗಿದೆ. ತುಂಬ ಧನ್ಯವಾದಗಳು.
ಎ. ಎಸ್., ಜರ್ಮನಿ
ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪೂರ್ವ ದೇಶದ ಓರ್ವ ಸಹೋದರಿಯನ್ನು ನಾನು ಭೇಟಿಯಾದೆ. ಆಕೆಯೊಂದಿಗೆ ಪತ್ರವ್ಯವಹಾರವನ್ನು ಹೇಗೆ ಮುಂದುವರಿಸಿಕೊಂಡು ಹೋಗುವುದು ಎಂಬ ವಿಷಯದಲ್ಲಿ ನಾನು ತುಂಬ ಅನಿಶ್ಚಿತನಾಗಿದ್ದೆ. ನಾನು ಅದರ ಕುರಿತು ಪ್ರಾರ್ಥಿಸಿದೆ. ಕೆಲವು ದಿನಗಳ ನಂತರ, ಈ ಅತ್ಯುತ್ತಮ ಲೇಖನವು ನನಗೆ ಸಿಕ್ಕಿತು. ಅದನ್ನು ಪದೇಪದೇ ಓದಿದೆ. ಈ ಲೇಖನವು ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ.
ಜಿ. ಆರ್., ಇಟಲಿ