ನಾವು ಎಷ್ಟು ದೀರ್ಘಕಾಲ ಜೀವಿಸಬಲ್ಲೆವು?
ಸಾಮಾನ್ಯವಾಗಿ ಜನರು ಈಗ ಹೆಚ್ಚು ದೀರ್ಘಕಾಲದ ವರೆಗೆ ಜೀವಿಸುತ್ತಿರುವ ವಿಷಯವು, ‘ನಾವು ಎಷ್ಟು ದೀರ್ಘಕಾಲ ಜೀವಿಸಬಲ್ಲೆವು?’ ಎಂದು ಅನೇಕರು ಯೋಚಿಸುವಂತೆ ಮಾಡುತ್ತದೆ.
ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ (1995)ಕ್ಕನುಸಾರ, ಗತಕಾಲದಲ್ಲಿ ಪಿಯರ್ ಸೂಬರ್ ಎಂಬವನು ಅತ್ಯಂತ ದೀರ್ಘಕಾಲ ಜೀವಿಸಿದ ವ್ಯಕ್ತಿಯೆಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಯಿತು. 1814ರಲ್ಲಿ ಅವನು 113ರ ವಯಸ್ಸಿನಲ್ಲಿ ಮೃತಪಟ್ಟನು. ಇದಕ್ಕಿಂತಲೂ ಹೆಚ್ಚಿನ ಕಾಲ ಜೀವಿಸಿದವರಿದ್ದರೂ, ಅವರ ವಯಸ್ಸುಗಳು ಸರಿಯಾಗಿ ದಾಖಲಿಸಲ್ಪಟ್ಟಿರಲಿಲ್ಲ. ಆದರೆ ಸರಿಯಾದ ದಾಖಲೆಗಳಿಂದಾಗಿ, ಪಿಯರ್ ಸೂಬರಿಗಿಂತಲೂ ಹೆಚ್ಚಿನ ಕಾಲ ಜೀವಿಸಿದವರು ಅನೇಕರಿದ್ದರೆಂದು ತಿಳಿದುಬಂದಿದೆ.
ಸಾನ್ ಲ್ವೀಸ್ ಕಾಲ್ಮಾನ್, ಆಗ್ನೇಯ ಫ್ರಾನ್ಸಿನ ಆರ್ಲ್ಸ್ನಲ್ಲಿ, ಫೆಬ್ರವರಿ 21, 1875ರಂದು ಜನಿಸಿದಳು. 122 ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ನಂತರ, ಅಂದರೆ ಆಗಸ್ಟ್ 4, 1997ರಲ್ಲಿ ಸಂಭವಿಸಿದ ಅವಳ ಮರಣವು ಸಾಕಷ್ಟು ಪ್ರಚಾರವನ್ನು ಪಡೆಯಿತು. 1986ರಲ್ಲಿ, ಜಪಾನಿನ ಶೀಗೆಚೀಯೋ ಈಸೂಮೀ 120ರ ಪ್ರಾಯದಲ್ಲಿ ಮರಣಹೊಂದಿದಳು. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ 1999, 118 ವಯಸ್ಸಿನ ಸೇರ ನೌಸ್ ಅತ್ಯಂತ ದೀರ್ಘಕಾಲ ಜೀವಿಸಿದ ವ್ಯಕ್ತಿಯಾಗಿ ಪಟ್ಟಿಮಾಡುತ್ತದೆ. ಆಕೆ ಸೆಪ್ಟೆಂಬರ್ 24, 1880ರಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ಜನಿಸಿದ್ದಳು. ಕೆನಡದ ಕ್ವಿಬೆಕ್ನಲ್ಲಿದ್ದ ಮಾರೀ ಲ್ವೀಸ್ ಫೆಬ್ರೋನೀ ಮೇಯರ್, 1998ರಲ್ಲಿ ಮರಣಹೊಂದಿದಾಗ, ಅವಳ ಪ್ರಾಯ 118 ಆಗಿತ್ತು. ಅವಳು ಸೇರಗಿಂತ 26 ದಿನ ದೊಡ್ಡವಳಾಗಿದ್ದಳು.
ಹೌದು, ತೀರ ವೃದ್ಧರಾಗಿರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಶತಾಯುಷಿಗಳ ಸಂಖ್ಯೆಯು ಮುಂದಿನ ಶತಮಾನದ ಪ್ರಥಮ ಭಾಗದಲ್ಲಿ 22 ಲಕ್ಷಕ್ಕಿಂತಲೂ ಹೆಚ್ಚಾಗಲಿದೆಯೆಂದು ಅಂದಾಜು ಮಾಡಲಾಗುತ್ತದೆ! ತದ್ರೀತಿಯಲ್ಲಿ, 80 ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಾಯದವರ ಸಂಖ್ಯೆಯು, 1970ರಲ್ಲಿದ್ದ 2.67 ಕೋಟಿಯಿಂದ 1998ರಲ್ಲಿ 6.6 ಕೋಟಿಯಷ್ಟು ಹೆಚ್ಚಾಯಿತು. ಇಡೀ ಲೋಕದ ಜನಸಂಖ್ಯೆಯಲ್ಲಾದ 60 ಪ್ರತಿಶತ ಅಭಿವೃದ್ಧಿಯೊಂದಿಗೆ ಇದನ್ನು ಹೋಲಿಸುವಾಗ, ಇದು 147 ಪ್ರತಿಶತದಷ್ಟು ಅಭಿವೃದ್ಧಿಯಾಗಿದೆ.
ಮತ್ತು ಜನರು ದೀರ್ಘಕಾಲದ ವರೆಗೆ ಜೀವಿಸುತ್ತಿದ್ದಾರೆ ಎಂದಷ್ಟೇ ಅಲ್ಲ. ಅವರಲ್ಲಿ ಅನೇಕರು, 20 ವರ್ಷ ಪ್ರಾಯದವರೂ ಮಾಡಲಸಾಧ್ಯವಾದ ವಿಷಯಗಳನ್ನು ಸಾಧಿಸುತ್ತಿದ್ದಾರೆ. 1990ರಲ್ಲಿ, 82 ವರ್ಷ ಪ್ರಾಯದ ಜಾನ್ ಕೆಲಿ, 42.195 ಕಿಲೋಮೀಟರ್ ಮ್ಯಾರತನ್ ಪಂದ್ಯವನ್ನು ಐದು ತಾಸುಗಳು ಮತ್ತು ಐದು ನಿಮಿಷಗಳಲ್ಲಿ ಪೂರ್ಣಗೊಳಿಸಿದರು. 1991ರಲ್ಲಿ, 84 ವರ್ಷದ ಮೇವಿಸ್ ಲಿಂಡ್ಗ್ರನ್ ಎಂಬ ಮುತ್ತಜ್ಜಿ, ಅದೇ ಅಂತರವನ್ನು ಏಳು ತಾಸುಗಳು ಮತ್ತು ಒಂಬತ್ತು ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಮತ್ತು ಇತ್ತೀಚೆಗೆ, 91 ವರ್ಷ ಪ್ರಾಯದ ಒಬ್ಬ ಪುರುಷನು, ನ್ಯೂ ಯಾರ್ಕ್ ಸಿಟಿ ಮ್ಯಾರತನ್ ಪಂದ್ಯವನ್ನು ಪೂರ್ಣಗೊಳಿಸಿದನು!
ಇದರ ಅರ್ಥ, ಗತಕಾಲದ ವೃದ್ಧರು ಸಾಹಸಕಾರ್ಯಗಳನ್ನು ಮಾಡಲಿಲ್ಲ ಎಂದಲ್ಲ. 99ರ ಪ್ರಾಯದಲ್ಲಿ, ಬೈಬಲಿನ ಪೂರ್ವಜನಾದ ಅಬ್ರಹಾಮನು ತನ್ನ ಅತಿಥಿಗಳನ್ನು ‘ಎದುರುಗೊಳ್ಳುವದಕ್ಕೆ ಓಡಿ ಹೋದನು.’ 85ರ ಪ್ರಾಯದಲ್ಲಿ ಕಾಲೇಬನು ಘೋಷಿಸಿದ್ದು: “ಮೋಶೆಯು ನನ್ನನ್ನು ಕಳುಹಿಸಿದಾಗ [45 ವರ್ಷಗಳ ಹಿಂದೆ] ನನಗೆಷ್ಟು ಬಲವಿತ್ತೋ ಈಗಲೂ ಅಷ್ಟಿದೆ. ಯುದ್ಧಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿರುತ್ತದೆ.” ಮತ್ತು ಮೋಶೆಯು 120 ವರ್ಷ ಪ್ರಾಯದವನಾಗಿದ್ದಾಗ, ಬೈಬಲು ಹೇಳುವುದು, “ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.”—ಆದಿಕಾಂಡ 18:2; ಯೆಹೋಶುವ 14:10, 11; ಧರ್ಮೋಪದೇಶಕಾಂಡ 34:7.
ಯೇಸು ಕ್ರಿಸ್ತನು ಪ್ರಥಮ ಮನುಷ್ಯನಾದ ಆದಾಮನ ಕುರಿತು, ಮತ್ತು ನಾವೆಯನ್ನು ಕಟ್ಟಿದ ನೋಹನ ಕುರಿತು ಐತಿಹಾಸಿಕ ವ್ಯಕ್ತಿಗಳಂತೆ ಮಾತಾಡಿದನು. (ಮತ್ತಾಯ 19:4-6; 24:37-39) ಆದಾಮನು 930 ವರ್ಷಗಳ ಕಾಲ ಮತ್ತು ನೋಹನು 950 ವರ್ಷಗಳ ಕಾಲ ಜೀವಿಸಿದರೆಂದು ಆದಿಕಾಂಡ ಹೇಳುತ್ತದೆ. (ಆದಿಕಾಂಡ 5:5; 9:29) ಜನರು ನಿಜವಾಗಿಯೂ ಅಷ್ಟು ದೀರ್ಘಕಾಲ ಜೀವಿಸಿದ್ದಾರೊ? ನಾವು ಅದಕ್ಕಿಂತಲೂ ಹೆಚ್ಚು ಕಾಲ, ಬಹುಶಃ ಸದಾಕಾಲ ಜೀವಿಸಬಲ್ಲೆವೊ? ಇದರ ಸಾಕ್ಷ್ಯವನ್ನು ದಯವಿಟ್ಟು ಮುಂದಿನ ಲೇಖನದಲ್ಲಿ ಪರಿಶೀಲಿಸಿರಿ.