ತಪ್ಪುಮಾಡುವಿಕೆಗೆ ಇಲ್ಲವೆಂದು ಹೇಳುವಂತೆ ಬಲಪಡಿಸಲ್ಪಟ್ಟದ್ದು
“ನಾನು ಇನ್ನೂ 15 ವರ್ಷ ಪ್ರಾಯದವನಾಗಿದ್ದು ಕಿರಾಣಿ ಅಂಗಡಿಯೊಂದರಲ್ಲಿ ಕೆಲಸಮಾಡುತ್ತಿದ್ದಾಗ, ನನ್ನ ಸಹೋದ್ಯೋಗಿಯು ನನ್ನನ್ನು ತನ್ನ ಮನೆಗೆ ಆಮಂತ್ರಿಸಿದನು” ಎಂದು ತಿಮೊಥಿ ವಿವರಿಸುತ್ತಾನೆ. “ತನ್ನ ಹೆತ್ತವರು ಮನೆಯಲ್ಲಿ ಇರುವುದಿಲ್ಲ, ಕೆಲವು ಹುಡುಗಿಯರು ಅಲ್ಲಿರುವರು ಮಾತ್ರವಲ್ಲ ಸೆಕ್ಸ್ನಲ್ಲಿ ಒಳಗೂಡುವ ಅವಕಾಶವಿರುವುದೆಂದು ಅವನು ನನಗೆ ಹೇಳಿದನು.” ಇಂದಿರುವ ಅನೇಕ ಯುವ ಜನರು ಇಂತಹ ಆಮಂತ್ರಣಕ್ಕೆ ಒಡನೆಯೇ ಹೌದು ಎಂದು ಹೇಳುವರು. ಆದರೆ ತಿಮೊಥಿಯ ಪ್ರತಿಕ್ರಿಯೆಯೇನಾಗಿತ್ತು? “ನಾನು ಬರುವುದಿಲ್ಲವೆಂದು ಆ ಕ್ಷಣವೇ ಅವನಿಗೆ ಹೇಳಿಬಿಟ್ಟೆ ಮತ್ತು ನನ್ನ ಕ್ರೈಸ್ತ ಮನಸ್ಸಾಕ್ಷಿಯ ಕಾರಣ, ನನ್ನ ಹೆಂಡತಿಯಾಗಿಲ್ಲದವಳೊಂದಿಗೆ ಸೆಕ್ಸ್ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುವುದಿಲ್ಲವೆಂದು ಸಹ ಹೇಳಿದೆ.”
ತಿಮೊಥಿ ತನ್ನ ನಿರಾಕರಣೆಯನ್ನು ವಿವರಿಸುತ್ತಿರುವಾಗಲೇ, ಯುವ ಸಹೋದ್ಯೋಗಿಯೊಬ್ಬಳು ಇದನ್ನು ಕೇಳಿಸಿಕೊಳ್ಳುತ್ತಿದ್ದದ್ದು ಅವನಿಗೆ ಗೊತ್ತಿರಲಿಲ್ಲ. ಅವನ ಮುಗ್ಧತೆ ಅವಳು ಅವನನ್ನು ಪರೀಕ್ಷಿಸುವಂತೆ ಪಂಥಾಹ್ವಾನಿಸಿದಾಗ, ನಾವು ಮುಂದೆ ನೋಡಲಿರುವಂತೆ, ಅವಳಿಗೂ ಅವನು ಬೇಗನೇ ಅನೇಕ ಬಾರಿ ಇಲ್ಲವೆಂದು ಹೇಳಬೇಕಾಯಿತು.
ನಮ್ಮ ಮೇಲೆ ಶೋಧನೆಯ ಸುರಿಮಳೆಯು ಸುರಿಸಲ್ಪಡುತ್ತಿರುವುದು ನಾವು ಜೀವಿಸುತ್ತಿರುವ ಸಮಯಗಳಿಗೆ ಅಸಾಮಾನ್ಯವಾದ ವಿಷಯವಾಗಿರುವುದಿಲ್ಲ. ಕೆಲವು 3,000 ವರ್ಷಗಳ ಹಿಂದೆ ರಾಜ ಸೊಲೊಮೋನನು ಬರೆದದ್ದು: “ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ. . . . ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.” (ಜ್ಞಾನೋಕ್ತಿ 1:10, 15) ಯೆಹೋವನು ತಾನೇ ಇಸ್ರಾಯೇಲ್ಯ ಜನಾಂಗಕ್ಕೆ ಆಜ್ಞೆಯನ್ನಿತ್ತದ್ದು: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.” (ವಿಮೋಚನಕಾಂಡ 23:2) ಹೌದು, ತಪ್ಪುಮಾಡುವುದಕ್ಕಾಗಿರುವ ಶೋಧನೆಯನ್ನು ಪ್ರತಿರೋಧಿಸುತ್ತಾ ಅದಕ್ಕೆ ಮಾಡುವುದಿಲ್ಲವೆಂದು ಹೇಳುವುದು ಜನಪ್ರಿಯ ಮಾರ್ಗವಾಗಿಲ್ಲದೆ ಇರಬಹುದಾದರೂ ನಾವು ಕೆಲವೊಮ್ಮೆ ಹಾಗೆ ಮಾಡಲೇಬೇಕು.
ಮಾಡುವುದಿಲ್ಲವೆಂದು ಹೇಳುವುದು ಇಂದು ವಿಶೇಷ ಮಹತ್ವವುಳ್ಳದ್ದು
ತಪ್ಪುಮಾಡುವಿಕೆಗೆ ಮಾಡುವುದಿಲ್ಲವೆಂದು ಹೇಳುವುದು ಹಿಂದೆಯೂ ಸುಲಭವಾಗಿರಲಿಲ್ಲ ಮತ್ತು ಈಗಲಂತೂ ಅದು ವಿಶೇಷವಾಗಿ ಕಷ್ಟಕರ, ಏಕೆಂದರೆ ಬೈಬಲು ಯಾವುದನ್ನು ವಿಷಯಗಳ ವ್ಯವಸ್ಥೆ ಎಂದು ಕರೆಯುತ್ತದೋ ಆ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿದ್ದೇವೆ. ಬೈಬಲಿನ ಪ್ರವಾದನೆಗೆ ಅನುಸಾರವಾಗಿ, ಜನರು ಒಟ್ಟಿನಲ್ಲಿ ಆತ್ಮಿಕತೆ ಮತ್ತು ನೈತಿಕತೆ ಇಲ್ಲದವರಾಗಿ ಭೋಗಾಸಕ್ತಿ ಮತ್ತು ಹಿಂಸಾಚಾರವನ್ನು ಪ್ರೀತಿಸುವವರಾಗಿ ಕಂಡುಬಂದಿದ್ದಾರೆ. (2 ತಿಮೊಥೆಯ 3:1-5) ಜೆಸುವಿಟ್ ವಿಶ್ವವಿದ್ಯಾನಿಲಯದ ಅಧ್ಯಕ್ಷನೊಬ್ಬನು ತಿಳಿಸಿದ್ದು: “ನಮ್ಮ ಬಳಿ ಇದ್ದಂತಹ ಸಾಂಪ್ರದಾಯಿಕ ಮಟ್ಟಗಳಿಗೆ ಸವಾಲನ್ನೊಡ್ಡಲಾಗಿದೆ. ಅವು ಕೊರತೆಯುಳ್ಳದ್ದೂ, ಇನ್ನು ಮುಂದೆ ರೂಢಿಯಲ್ಲಿಲ್ಲದವುಗಳೂ ಆಗಿ ಪರಿಗಣಿಸಲ್ಪಟ್ಟಿವೆ. ಈಗ ಯಾವುದೇ ನೈತಿಕ ಮಾರ್ಗದರ್ಶಿ ಸೂತ್ರಗಳು ಇಲ್ಲದಿರುವುದು ಸ್ಪಷ್ಟವಾಗುತ್ತಿದೆ.” ತದ್ರೀತಿಯಲ್ಲಿ, ಉಚ್ಚ ಕೋರ್ಟ್ ನ್ಯಾಯಾಧೀಶನೊಬ್ಬನು ಹೇಳಿದ್ದು: “ಸರಿ ಮತ್ತು ತಪ್ಪುಗಳ ಸ್ಪಷ್ಟವಾದ ವ್ಯತ್ಯಾಸಗಳು ಈಗ ಇರುವುದಿಲ್ಲ. ಎಲ್ಲವೂ ಅಸ್ಪಷ್ಟ. . . . ಸರಿ ಮತ್ತು ತಪ್ಪುಗಳ ವ್ಯತ್ಯಾಸವನ್ನು ಕೆಲವೇ ಜನರು ಗ್ರಹಿಸುತ್ತಾರೆ. ಇಂದು ಯಾವುದೇ ಒಂದು ವಿಷಯವನ್ನು ಉಲ್ಲಂಘಿಸುವುದು ಪಾಪವಾಗಿರುವುದಿಲ್ಲ ಅದಕ್ಕೆ ಬದಲಾಗಿ ಸಿಕ್ಕಿಬೀಳುವುದು ಪಾಪವಾಗಿರುತ್ತದೆ.”
ಇಂತಹ ಮನೋಭಾವಗಳುಳ್ಳ ಜನರ ಕುರಿತು ಅಪೊಸ್ತಲ ಪೌಲನು ಬರೆದದ್ದು: “ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.” (ಎಫೆಸ 4:18, 19) ಆದರೆ ಸಂಕಟವು ಇವರಿಗಾಗಿ ಕಾದಿರುತ್ತದೆ. ಯೆಶಾಯನು ಪ್ರಕಟಿಸುವುದು: “ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ . . . ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ.” (ಯೆಶಾಯ 5:20) ಈಗ ಇವರು ತಾವು ಬಿತ್ತಿದ್ದನ್ನು ಕೊಯ್ಯುವರು ಮಾತ್ರವಲ್ಲ ಯೆಹೋವನಿಂದ ಪ್ರತಿಕೂಲ ನ್ಯಾಯತೀರ್ಪನ್ನೂ ಹೊಂದುವ ತೀರ ಕೆಟ್ಟ “ಗತಿ”ಯನ್ನು ಬೇಗನೇ ಅನುಭವಿಸಲಿರುವರು.—ಗಲಾತ್ಯ 6:7.
“ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ,” ಎಂದು ಕೀರ್ತನೆ 92:7 ಹೇಳುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಎಲ್ಲರಿಗೂ ಜೀವಿತವನ್ನು ಸಹಿಸಲಾರದ್ದಾಗಿ ಮಾಡುತ್ತಾ, ದುಷ್ಟತನದ ಭಾರಿ ಪ್ರಮಾಣದ ಬೆಳೆಯು ಅನಿಶ್ಚಿತ ಕಾಲದ ವರೆಗೆ ಮುಂದುವರಿಯುವುದಿಲ್ಲ. ವಾಸ್ತವದಲ್ಲಿ, ಈ ದುಷ್ಟತನವನ್ನು ಪ್ರಾಯೋಜಿಸುತ್ತಿರುವ ಇದೇ “ಸಂತತಿ”ಯನ್ನು ದೇವರು “ಮಹಾ ಸಂಕಟ”ದಲ್ಲಿ ನಾಶಮಾಡಿಬಿಡುವನೆಂದು ಯೇಸು ಹೇಳಿದನು. (ಮತ್ತಾಯ 24:3, 21, 34) ಆದುದರಿಂದ, ಆ ಸಂಕಟದಿಂದ ನಾವು ಪಾರಾಗಲು ಬಯಸುವುದಾದರೆ, ದೇವರ ಮಟ್ಟಗಳಿಗನುಸಾರವಾಗಿ ಸರಿಯಾಗಿರುವುದನ್ನು ತಿಳಿದುಕೊಳ್ಳುವುದು ಅಗತ್ಯ, ಮತ್ತು ತಪ್ಪು ಮಾಡುವಿಕೆಯ ಎಲ್ಲ ವಿಧಗಳಿಗೆ ಇಲ್ಲವೆಂದು ಹೇಳುವ ನೈತಿಕ ಬಲವನ್ನು ಸಹ ಹೊಂದಿರುವುದು ಆವಶ್ಯಕ. ಇದು ಅಷ್ಟೇನು ಸುಲಭವಾಗಿಲ್ಲದಿರುವುದಾದರೂ, ಬೈಬಲ್ ಸಮಯಗಳಲ್ಲಿ ಮತ್ತು ನಮ್ಮ ಸಮಯಗಳಲ್ಲಿನ ಕೆಲವೊಂದು ಉತ್ತೇಜನದಾಯಕ ಉದಾಹರಣೆಗಳನ್ನು ನಮಗೆ ಯೆಹೋವನು ಒದಗಿಸಿದ್ದಾನೆ.
ಇಲ್ಲವೆಂದು ಹೇಳಿದ ಯುವಕನಿಂದ ಕಲಿತುಕೊಳ್ಳುವುದು
ಕ್ರೈಸ್ತ ಸಭೆಯಲ್ಲಿರುವ ಕೆಲವರಿಗೂ ಜಾರತ್ವ ಮತ್ತು ವ್ಯಭಿಚಾರಕ್ಕೆ ಇಲ್ಲವೆಂದು ಹೇಳುವುದು ವಿಶೇಷವಾಗಿ ಕಷ್ಟವಾಗಿರುವಂತೆ ಕಾಣುತ್ತದೆ. ಆರಂಭದ ಪ್ಯಾರಗ್ರಾಫ್ನಲ್ಲಿ ತಿಳಿಸಲಾದ ತಿಮೊಥಿ, ಆದಿಕಾಂಡ 39:1-12ರ ವಚನಗಳಲ್ಲಿ ದಾಖಲಿಸಲ್ಪಟ್ಟ ಯುವ ಯೋಸೇಫನ ಮಾದರಿಯನ್ನು ಹೃದಯಕ್ಕೆ ತೆಗೆದುಕೊಂಡನು. ಐಗುಪ್ತದ ಉದ್ಯೋಗಸ್ಥನಾಗಿದ್ದ ಪೋಟೀಫರನ ಹೆಂಡತಿಯು ಯೋಸೇಫನನ್ನು ತನ್ನೊಂದಿಗೆ ಸಂಗಮಿಸಲು ಪುನಃ ಪುನಃ ಆಮಂತ್ರಿಸಿದಾಗ, ನೈತಿಕ ಬಲವನ್ನು ಅವನು ಪ್ರದರ್ಶಿಸಿದನು. ದಾಖಲೆಯು ಹೇಳುವುದೇನೆಂದರೆ, ‘ಅವನು ಒಪ್ಪದೆ ಹೀಗೆ ಹೇಳುತ್ತಿದ್ದನು . . . ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ?’
ಪೋಟೀಫರನ ಹೆಂಡತಿಗೆ ದಿನದಿಂದ ದಿನಕ್ಕೆ ಇಲ್ಲವೆಂದು ಹೇಳುವುದಕ್ಕೆ ನೈತಿಕ ಬಲವನ್ನು ಅವನು ಹೊಂದಿದ್ದು ಹೇಗೆ? ಮೊದಲನೆಯದಾಗಿ, ಅವನು ಯೆಹೋವನೊಂದಿಗಿರುವ ತನ್ನ ಸಂಬಂಧವನ್ನು ಕ್ಷಣಿಕ ಸುಖಾನುಭವಕ್ಕಿಂತಲೂ ಹೆಚ್ಚು ಅಮೂಲ್ಯವೆಂದೆಣಿಸಿದನು. ಇದಕ್ಕೆ ಕೂಡಿಸಿ, ಯೋಸೇಫನು ದೈವಿಕ ನಿಯಮಾವಳಿಯ ಕೆಳಗೆ ಇದ್ದಿರದಿದ್ದರೂ (ಮೋಶೆಯ ನಿಯಮಶಾಸ್ತ್ರವು ಆಮೇಲೆ ಕೊಡಲ್ಪಡಲಿಕ್ಕಿತ್ತು), ಅವನಿಗೆ ನೈತಿಕ ತತ್ವಗಳ ಸ್ಪಷ್ಟವಾದ ತಿಳಿವಳಿಕೆಯಿತ್ತು. ಮೋಹಪರವಶಳಾದ ಪೋಟೀಫರನ ಹೆಂಡತಿಯೊಂದಿಗೆ ಜಾರತ್ವವನ್ನು ನಡಿಸುವುದು ಅವಳ ಗಂಡನ ವಿರುದ್ಧವಾಗಿ ಮಾತ್ರವಲ್ಲ, ದೇವರ ವಿರುದ್ಧವಾಗಿಯೂ ಪಾಪವಾಗಿರುವುದು ಎಂಬುದು ಅವನಿಗೆ ಗೊತ್ತಿತ್ತು.—ಆದಿಕಾಂಡ 39:8, 9.
ಆಸೆಯ ಸಣ್ಣ ಕಿಡಿಯು ಅನಿಯಂತ್ರಿತ ಮೋಹದ ಬೆಂಕಿಯನ್ನು ಹೊತ್ತಿಸಸಾಧ್ಯವಿದೆ ಎಂಬುದರ ಮಹತ್ವವನ್ನು ಯೋಸೇಫನು ಸ್ಪಷ್ಟವಾಗಿ ಅರಿತಿದ್ದನು. ಯೋಸೇಫನ ಮಾದರಿಯನ್ನು ಪಾಲಿಸುವುದು ಕ್ರೈಸ್ತನಿಗೆ ವಿವೇಕಯುತವಾಗಿರುತ್ತದೆ. ಜುಲೈ 1, 1957ರ ವಾಚ್ಟವರ್ ತಿಳಿಸಿದ್ದು: “ಅವನು ತನ್ನ ಶಾರೀರಿಕ ಬಲಹೀನತೆಗಳನ್ನು ಮನಗಾಣಲೇಬೇಕು ಮತ್ತು ಶಾಸ್ತ್ರೀಯ ಎಲ್ಲೆಯ ವರೆಗೆ ಇಂದ್ರಿಯ ಸುಖಾನುಭವಗಳನ್ನು ಅನುಸರಿಸಿ, ನಂತರ ಅಲ್ಲಿಗೆ ನಿಲ್ಲಿಸಬಹುದೆಂಬುದನ್ನು ಯೋಚಿಸಬಾರದು. ಇದನ್ನು ಮಾಡಲು ಅವನು ಸ್ವಲ್ಪಮಟ್ಟಿಗೆ ಯಶಸ್ಸನ್ನು ಗಳಿಸಬಹುದಾದರೂ, ಅವನು ಕ್ರಮೇಣವಾಗಿ ಪಾಪದ ಸೀಮೆಯೊಳಗೆ ಸೆಳೆಯಲ್ಪಡುವನು. ಇದು ಸಂಭವಿಸುವುದು ನಿಶ್ಚಿತ, ಯಾಕೆಂದರೆ ಪೋಷಿಸಲ್ಪಟ್ಟ ವಿಷಯಾಭಿಲಾಷೆಗಳು ಬಲಗೊಂಡು ವ್ಯಕ್ತಿಯ ಮೇಲೆ ಬಿಗಿಯಾದ ಹಿಡಿತವನ್ನು ಹೊಂದುವವು. ಅನಂತರ ತನ್ನ ಮನಸ್ಸನ್ನು ನಿಗ್ರಹಿಸಲು ಅವನಿಗೆ ತೀರ ಕಷ್ಟವಾಗುವುದು. ಅದನ್ನು ಆರಂಭದಲ್ಲಿಯೇ ಪ್ರತಿರೋಧಿಸುವುದು ಅತ್ಯುತ್ತಮವಾದ ರಕ್ಷಣೆಯಾಗಿರುತ್ತದೆ.”
ಯಾವುದು ಸರಿಯಾಗಿದೆಯೋ ಅದಕ್ಕಾಗಿ ಪ್ರೀತಿಯನ್ನು ಮತ್ತು ಯಾವುದು ತಪ್ಪಾಗಿದೆಯೋ ಅದಕ್ಕಾಗಿ ದ್ವೇಷವನ್ನು ನಾವು ಬೆಳೆಸಿಕೊಳ್ಳುವಾಗ, ಆರಂಭದಿಂದಲೇ ಪ್ರತಿರೋಧಿಸುವುದು ಹೆಚ್ಚು ಸುಲಭವಾಗುವುದು. (ಕೀರ್ತನೆ 37:27) ಆದರೆ ನಾವು ಇದನ್ನು ಮಾಡುತ್ತಾ ಇರಬೇಕು, ಅಂದರೆ ಪಟ್ಟುಹಿಡಿದವರಾಗಿರಬೇಕು. ನಾವು ಹೀಗೆ ಮಾಡುತ್ತಾ ಇರುವುದಾದರೆ, ಯೆಹೋವನ ಸಹಾಯದಿಂದ ಸರಿಯಾಗಿರುವುದರ ಕಡೆಗೆ ನಮ್ಮ ಪ್ರೀತಿಯು ಮತ್ತು ತಪ್ಪಾಗಿರುವುದರ ಕಡೆಗೆ ನಮ್ಮ ತಾತ್ಸಾರವು ಇನ್ನೂ ಬಲವಾಗಿ ಬೆಳೆಯುವುದು. ಈ ಮಧ್ಯೆ, ನಿಜವಾಗಿಯೂ ಯೇಸು ಹೇಳಿದಂತೆ, ನಾವು ಎಚ್ಚೆತ್ತವರಾಗಿ ಉಳಿಯಬೇಕು ಮತ್ತು ಕೆಡುಕನಿಂದ ಬರುವ ಶೋಧನೆಗಳಿಂದ ನಾವು ರಕ್ಷಿಸಲ್ಪಡುವಂತೆ ಹಾಗೂ ತಪ್ಪಿಸಿಕೊಳ್ಳಸಾಧ್ಯವಾಗುವಂತೆ ಪಟ್ಟುಹಿಡಿದು ಪ್ರಾರ್ಥಿಸುತ್ತಿರಬೇಕು.—ಮತ್ತಾಯ 6:13; 1 ಥೆಸಲೊನೀಕ 5:17.
ಸಮಾನಸ್ಥರ ಒತ್ತಡಕ್ಕೆ ಇಲ್ಲವೆಂದು ಹೇಳುವುದು
ತಪ್ಪು ಮಾಡುವಿಕೆಯ ಕಡೆಗಿರುವ ಇನ್ನೊಂದು ಪ್ರಭಾವವು ಸಮಾನಸ್ಥರ ಒತ್ತಡವಾಗಿದೆ. ಒಬ್ಬ ಯುವತಿ ಒಪ್ಪಿಕೊಂಡದ್ದು: “ನಾನು ಇಬ್ಬಗೆಯ ಜೀವಿತವನ್ನು ನಡೆಸುತ್ತಿದ್ದೇನೆ—ಶಾಲೆಯಲ್ಲೊಂದು, ಮನೆಯಲ್ಲೊಂದು. ಶಾಲೆಯಲ್ಲಿ ಲೌಕಿಕ ಸಹಪಾಠಿಗಳೊಂದಿಗಿನ ಸಹವಾಸದಲ್ಲಿ ಸಮಯವನ್ನು ಕಳೆಯುತ್ತೇನೆ. ಆದರೆ ಈ ಸಹಪಾಠಿಗಳು ಮಾತಾಡುವಾಗ ಹೆಚ್ಚುಕಡಿಮೆ ಪ್ರತಿಯೊಂದು ಸಂದರ್ಭದಲ್ಲಿಯೂ ಹೊಲಸು ಭಾಷೆಯನ್ನು ಉಪಯೋಗಿಸುತ್ತಾರೆ. ಮತ್ತು ನಾನು ಅವರಂತೆ ಆಗುತ್ತಿದ್ದೇನೆ. ನಾನೇನು ಮಾಡಲಿ?” ಮಾಡಬೇಕಾದ ವಿಷಯವು ಯಾವುದೆಂದರೆ, ಭಿನ್ನರಾಗಿರುವುದಕ್ಕೆ ಧೈರ್ಯದ ನಿಲುವನ್ನು ತೆಗೆದುಕೊಳ್ಳುವುದಾಗಿದೆ ಮತ್ತು ಅದನ್ನು ಪಡೆದುಕೊಳ್ಳುವ ಒಂದು ಮಾರ್ಗವು, ಯೋಸೇಫನಂತಹ ದೇವರ ನಿಷ್ಠಾವಂತ ಸೇವಕರ ಕುರಿತಾಗಿ ಬೈಬಲಿನಲ್ಲಿರುವ ವೃತ್ತಾಂತಗಳನ್ನು ಓದುವುದು ಮತ್ತು ಮನನಮಾಡುವುದಾಗಿದೆ. ತಮ್ಮ ಸಮಾನಸ್ಥರಿಂದ ಭಿನ್ನರಾಗಿರುವುದಕ್ಕೆ ಧೈರ್ಯದ ನಿಲುವನ್ನು ತೆಗೆದುಕೊಂಡ ನಾಲ್ಕು ಯುವ ಪುರುಷರಾದ ದಾನಿಯೇಲ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಇತರ ಅತ್ಯುತ್ತಮ ಉದಾಹರಣೆಗಳು ಕೂಡ ಇವೆ.
ಬಾಬೆಲಿನ ಆಸ್ಥಾನದಲ್ಲಿ ಇತರ ಯುವ ಪುರುಷರೊಂದಿಗೆ ಶಿಕ್ಷಿತರಾಗಿದ್ದವರಾಗಿ, ಈ ನಾಲ್ಕು ಯುವ ಇಸ್ರಾಯೇಲ್ಯರು ‘ದಿನವಹಿ ಬಡಿಸುವ ರಾಜನ ಭೋಜನಪದಾರ್ಥಗಳನ್ನು’ ತಿನ್ನಬೇಕಾಗಿತ್ತು. ಮೋಶೆಯ ನಿಯಮಶಾಸ್ತ್ರದ ಆಹಾರಪಥ್ಯ ಅಂಶಗಳನ್ನು ಉಲ್ಲಂಘಿಸಲು ಬಯಸದಿದ್ದವರಾಗಿ, ಇವರು ಆ ಆಹಾರವನ್ನು ಸೇವಿಸಲು ನಿರಾಕರಿಸಿದರು. ಇದಕ್ಕೆ ನಿಜವಾಗಿಯೂ ಅತ್ಯಧಿಕ ಬಲವು ಬೇಕಾಗಿತ್ತು, ಯಾಕೆಂದರೆ “ರಾಜನ ಭೋಜನಪದಾರ್ಥಗಳು” ಪ್ರಾಯಶಃ ಬಾಯಲ್ಲಿ ನೀರೂರಿಸುತ್ತಿದ್ದವು. ಮದ್ಯಪಾನೀಯಗಳಲ್ಲಿ ಮಿತಿಮೀರಿ ಲೋಲುಪರಾಗುವ, ಅಮಲೌಷಧಗಳನ್ನು ಮತ್ತು ತಂಬಾಕನ್ನು ಸೇವಿಸುವುದಕ್ಕಾಗಿ ಶೋಧನೆಗೆ ಅಥವಾ ಒತ್ತಡಕ್ಕೆ ಒಳಗಾಗಬಹುದಾದ ಇಂದಿನ ಕ್ರೈಸ್ತರಿಗೆ ಈ ಯುವ ಪುರುಷರು ಎಂಥ ಒಂದು ಉತ್ತಮ ಮಾದರಿಯಾಗಿದ್ದಾರೆ!—ದಾನಿಯೇಲ 1:3-17.
ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಸಹ ಯೇಸು ಕ್ರಿಸ್ತನು ತದನಂತರ ತಿಳಿಸಿದ ಆ ಸತ್ಯವನ್ನೇ ಪ್ರದರ್ಶಿಸಿದರು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು.” (ಲೂಕ 16:10) ತುಲನಾತ್ಮಕವಾಗಿ ಆಹಾರದ ಕುರಿತಾದ ಅಲ್ಪ ವಿಷಯದ ಕಡೆಗಿನ ಅವರ ಧೈರ್ಯದ ನಿಲುವು ಮತ್ತು ಯೆಹೋವನು ನಂತರ ಅವರಿಗೆ ನೀಡಿದ ಅತ್ಯುತ್ತಮವಾದ ಫಲಿತಾಂಶವು, ಮುಂದೆ ಇನ್ನೂ ಗಂಭೀರವಾದ ಪರೀಕ್ಷೆಯನ್ನು ಎದುರಿಸಲಿಕ್ಕಾಗಿ ಅವರನ್ನು ಬಲಗೊಳಿಸಿತು ಎಂಬುದರಲ್ಲಿ ಸಂದೇಹವಿಲ್ಲ. (ದಾನಿಯೇಲ 1:18-20) ವಿಗ್ರಹಾರಾಧನೆಯಲ್ಲಿ ಒಳಗೂಡುವಂತೆ ಮತ್ತು ಅದನ್ನು ಮಾಡಲು ತಪ್ಪಿಹೋದಲ್ಲಿ ಬೆಂಕಿಯ ಮೂಲಕ ಮೃತರಾಗುವ ಶಿಕ್ಷೆಯು ವಿಧಿಸಲ್ಪಡುವುದೆಂದು ಆಜ್ಞಾಪಿಸಲ್ಪಟ್ಟಾಗ ಅವರ ಮೇಲೆ ಆ ಪರೀಕ್ಷೆಯು ಬಂತು. ಧೈರ್ಯದಿಂದ, ಈ ಮೂವರು ಯುವ ಪುರುಷರು ಯೆಹೋವನನ್ನು ಮಾತ್ರವೇ ಆರಾಧಿಸುವುದಕ್ಕೆ ದೃಢನಿಶ್ಚಯವನ್ನು ಮಾಡಿಕೊಂಡರು, ಹೀಗೆ ಫಲಿತಾಂಶವು ಏನೇ ಆಗಿದ್ದರೂ ಆತನ ಮೇಲೆ ಸಂಪೂರ್ಣವಾಗಿ ಭರವಸೆಯನ್ನಿಟ್ಟರು. ಪುನಃ ಒಮ್ಮೆ ಯೆಹೋವನು ಅವರ ನಂಬಿಕೆ ಮತ್ತು ಧೈರ್ಯಕ್ಕಾಗಿ ಅವರನ್ನು ಆಶೀರ್ವದಿಸಿದನು. ಅತಿಯಾಗಿ ಕಾಯಿಸಿದ ಕುಲುಮೆಯೊಳಗೆ ಇವರು ಬಿಸಾಡಲ್ಪಟ್ಟಾಗ ಆ ಅಗ್ನಿಜ್ವಾಲೆಯಿಂದ ಅದ್ಭುತಕರವಾಗಿ ಪಾರುಗೊಳಿಸುವ ಮೂಲಕ ಯೆಹೋವನು ಈ ಸಲ ಅವರನ್ನು ಆಶೀರ್ವದಿಸಿದನು.—ದಾನಿಯೇಲ 3:1-30.
ತಪ್ಪು ಮಾಡುವಿಕೆಗೆ ಮಾಡುವುದಿಲ್ಲವೆಂದು ಹೇಳಿದ ಇತರರ ಅನೇಕ ಉದಾಹರಣೆಗಳು ದೇವರ ವಾಕ್ಯದಲ್ಲಿ ಅಡಕವಾಗಿವೆ. “ಫರೋಹನ ಕುಮಾರ್ತೆಯ ಮಗನೆನಿಸಿ”ಕೊಂಡು ಹೀಗೆ ಐಗುಪ್ತದಲ್ಲಿ “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವ” ಧಾರಾಳವಾದ ಅವಕಾಶವನ್ನು ಒದಗಿಸಸಾಧ್ಯವಿರುವ ಜೀವಿತವೊಂದಕ್ಕೆ ಮೋಶೆಯು ಇಲ್ಲವೆಂದು ಹೇಳಿದನು. (ಇಬ್ರಿಯ 11:24-26) ಲಂಚವನ್ನು ಸ್ವೀಕರಿಸುವ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಿಸುವುದಕ್ಕೆ ಪ್ರವಾದಿಯಾದ ಸಮುವೇಲನು ಇಲ್ಲವೆಂದು ಹೇಳಿದನು. (1 ಸಮುವೇಲ 12:3, 4) ಸಾರುವುದನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಲ್ಪಟ್ಟಾಗ ಯೇಸು ಕ್ರಿಸ್ತನ ಅಪೊಸ್ತಲರು ಇಲ್ಲವೆಂದು ಧೈರ್ಯದಿಂದ ಉತ್ತರಿಸಿದರು. (ಅ. ಕೃತ್ಯಗಳು 5:27-29) ಯೇಸು ಸಹ ಎಲ್ಲ ರೀತಿಯ ತಪ್ಪುಮಾಡುವಿಕೆಗೆ ಇಲ್ಲವೆಂದು ಹೇಳಿದನು—ತನ್ನ ಜೀವಿತದ ಅಂತಿಮ ಕ್ಷಣಗಳಲ್ಲಿ ಸೈನಿಕರು “ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟ” ಸಮಯದಲ್ಲಿಯೂ ದೃಢತೆಯನ್ನು ಅವನು ತೋರಿಸಿದನು. ಆ ಸಂದಿಗ್ಧ ಸಮಯದಲ್ಲಿ ಇದನ್ನು ಸ್ವೀಕರಿಸಿದ್ದರೆ, ಅದು ಅವನ ನಿರ್ಧಾರವನ್ನು ಬಲಹೀನಗೊಳಿಸಸಾಧ್ಯವಿತ್ತು.—ಮಾರ್ಕ 15:23; ಮತ್ತಾಯ 4:1-10.
ಇಲ್ಲವೆಂದು ಹೇಳುವುದು—ಜೀವ ಮತ್ತು ಮರಣದ ವಿಷಯ
ಯೇಸು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14.
ಅಗಲವಾದ ದಾರಿಯು ಜನಪ್ರಿಯವಾಗಿದೆ ಯಾಕೆಂದರೆ ಅದರಲ್ಲಿ ಪ್ರಯಾಣಿಸುವುದು ಸುಲಭ. ಇದರ ಪ್ರಯಾಣಿಕರು ಭೋಗಾಸಕ್ತರಾಗಿದ್ದು, ಶಾರೀರಿಕ ಆಲೋಚನೆ ಮತ್ತು ಮಾರ್ಗಗಳ ಕಡೆಗೆ ಒಲವುಳ್ಳವರಾಗಿದ್ದಾರೆ ಮತ್ತು ಭಿನ್ನರಾಗಿರುವುದಕ್ಕೆ ಬಯಸದೆ ಸೈತಾನನ ಲೋಕಕ್ಕೆ ಹೊಂದಿಕೊಳ್ಳಲು ಬಯಸುತ್ತಾರೆ. ದೇವರ ನಿಯಮ ಮತ್ತು ತತ್ವಗಳಿಂದ ನೈತಿಕವಾಗಿ ನಿರ್ಬಂಧಿಸಲ್ಪಟ್ಟಿದ್ದೇವೆ ಎಂದು ಇವರು ಭಾವಿಸಿಕೊಳ್ಳುತ್ತಾರೆ. (ಎಫೆಸ 4:17-19) ಆದರೂ, ಅಗಲವಾದ ದಾರಿಯು “ನಾಶಕ್ಕೆ ಹೋಗುತ್ತದೆ” ಎಂದು ಯೇಸು ಸ್ಪಷ್ಟವಾಗಿ ಹೇಳಿದನು.
ಆದರೆ ಬಿಕ್ಕಟ್ಟಾದ ದಾರಿಯನ್ನು ಕೆಲವರು ಮಾತ್ರವೇ ಆರಿಸಿಕೊಳ್ಳುವರೆಂದು ಯೇಸು ಏಕೆ ಹೇಳಿದನು? ಪ್ರಾಮುಖ್ಯವಾಗಿ, ದೇವರ ನಿಯಮಗಳು ಮತ್ತು ತತ್ವಗಳು ತಮ್ಮ ಜೀವಿತಗಳನ್ನು ಆಳುವಂತೆ ಕೆಲವರು ಮಾತ್ರ ಬಯಸುತ್ತಾರೆ. ಮತ್ತು ಇವರು ತಪ್ಪುಮಾಡುವುದಕ್ಕೆ ಪ್ರೇರಿಸುವ ತಮ್ಮ ಸುತ್ತಮುತ್ತಲಿನ ಅನೇಕ ಪ್ರಲೋಭನೆಗಳನ್ನು ಮತ್ತು ಅವಕಾಶಗಳನ್ನು ಪ್ರತಿರೋಧಿಸುವುದಕ್ಕೆ ಸಹಾಯವನ್ನು ಬಯಸುತ್ತಾರೆ. ಇನ್ನೂ ಹೆಚ್ಚಾಗಿ, ಅಕ್ರಮ ಅಭಿಲಾಷೆ, ಸಮಾನಸ್ಥರ ಒತ್ತಡ ಮತ್ತು ತಾವು ಆರಿಸಿಕೊಂಡಿರುವ ಮಾರ್ಗದಲ್ಲಿ ಬರಸಾಧ್ಯವಿರುವ ಯಾವುದೇ ಕುಚೇಷ್ಟೆಯ ಕುರಿತಾದ ಭಯವನ್ನು ಎದುರಿಸಿ ಅದರ ವಿರುದ್ಧವಾಗಿ ಹೋರಾಡಲು ಕೆಲವರು ಮಾತ್ರವೇ ಸಿದ್ಧರಾಗಿದ್ದಾರೆ.—1 ಪೇತ್ರ 3:16; 4:4.
ಪಾಪಕ್ಕೆ ಇಲ್ಲವೆಂದು ಹೇಳಲು ತಾನು ಮಾಡಬೇಕಾಗಿದ್ದ ಹೋರಾಟವನ್ನು ಅಪೊಸ್ತಲ ಪೌಲನು ವಿವರಿಸಿದಾಗ ಅವನಿಗೆ ಹೇಗೆ ಅನಿಸಿತೆಂಬುದನ್ನು ಇಂಥವರು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇಂದಿರುವ ಲೋಕದಂತೆ, ಪೌಲನ ಸಮಯದಲ್ಲಿರುವ ರೋಮ್ ಮತ್ತು ಗ್ರೀಕ್ ಜಗತ್ತು ತಪ್ಪುಮಾಡುವಿಕೆಯಲ್ಲಿ ಒಳಗೂಡುವುದಕ್ಕೆ ಅಗಲವಾದ ದಾರಿಯನ್ನು ಒದಗಿಸಿತು. ಸರಿಯಾಗಿರುವುದನ್ನು ತಿಳಿದಿದ್ದ ತನ್ನ ಮನಸ್ಸು ತಪ್ಪುಮಾಡುವಿಕೆಯ ಕಡೆಗೆ ಒಲವನ್ನು ತೋರಿಸಿದ ತನ್ನ ಸ್ವಂತ ಶರೀರದೊಂದಿಗೆ ಸದಾ ‘ಕಾದಾಟ’ವನ್ನು ನಡೆಸುತ್ತಿತ್ತು ಎಂದು ಪೌಲನು ವಿವರಿಸಿದನು. (ರೋಮಾಪುರ 7:21-24) ಹೌದು, ತನ್ನ ಶರೀರವು ಒಳ್ಳೇ ಸೇವಕನಾಗಿತ್ತಾದರೂ ಕೆಟ್ಟ ಧಣಿಯಾಗಿತ್ತೆಂದು ಪೌಲನಿಗೆ ಗೊತ್ತಿತ್ತು, ಆದುದರಿಂದ ಅವನು ಅದಕ್ಕೆ ಇಲ್ಲವೆಂದು ಹೇಳಲು ಕಲಿತುಕೊಂಡನು. “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ,” ಎಂದು ಅವನು ಬರೆದನು. (1 ಕೊರಿಂಥ 9:27) ಈ ರೀತಿಯ ಹತೋಟಿಯನ್ನು ಅವನು ಹೇಗೆ ಪಡೆದುಕೊಂಡನು? ಕೆಲಸವನ್ನು ಪೂರೈಸಲು ಅಸಮರ್ಥವಾದ ತನ್ನ ಸ್ವಂತ ಶಕ್ತಿಯಿಂದಲ್ಲ, ಅದರ ಬದಲು ದೇವರ ಆತ್ಮದ ಸಹಾಯದಿಂದಲೇ.—ರೋಮಾಪುರ 8:9-11.
ಇದರ ಫಲಿತಾಂಶವಾಗಿ, ಪೌಲನು ಅಪರಿಪೂರ್ಣನಾಗಿದ್ದರೂ, ಕೊನೆಯ ವರೆಗೆ ಯೆಹೋವನಿಗೆ ತನ್ನ ಯಥಾರ್ಥತೆಯನ್ನು ಕಾಪಾಡಿಕೊಂಡನು. ತನ್ನ ಮರಣದ ಸ್ವಲ್ಪ ಸಮಯದ ಮುಂಚೆ, ಅವನು ಹೀಗೆ ಬರೆಯಲು ಶಕ್ತನಾದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ.”—2 ತಿಮೊಥೆಯ 4:7, 8.
ನಮ್ಮ ಅಪರಿಪೂರ್ಣತೆಯ ವಿರುದ್ಧವಾಗಿ ಕಾದಾಟವನ್ನು ನಾವು ಮಾಡುತ್ತಿರುವಂತೆ, ಪೌಲನಲ್ಲಿ ಮಾತ್ರವೇ ಅಲ್ಲ ಅವನಂತೆಯೇ ಮಾದರಿಗಳಾಗಿರುವ ಯೋಸೇಫ, ಮೋಶೆ, ದಾನಿಯೇಲ, ಶದ್ರಕ್, ಮೇಶಕ್, ಅಬೇದ್ನೆಗೋ ಮತ್ತು ಇತರ ಅನೇಕರಲ್ಲಿ ಉತ್ತೇಜನದಾಯಕ ಉದಾಹರಣೆಗಳನ್ನು ನಾವು ಕಂಡುಕೊಳ್ಳುತ್ತೇವೆ. ಇವರೆಲ್ಲರೂ ಅಪರಿಪೂರ್ಣ ಮಾನವರಾಗಿದ್ದರೂ, ಈ ನಂಬಿಗಸ್ತ ಪುರುಷರಲ್ಲಿ ಪ್ರತಿಯೊಬ್ಬರೂ ತಪ್ಪುಮಾಡುವಿಕೆಗೆ ಇಲ್ಲವೆಂದು ಹೇಳಿದರು ಮತ್ತು ಇದಕ್ಕೆ ಕಾರಣ ಮೊಂಡುತನ ಅಥವಾ ಹಟಮಾರಿತನವಾಗಿರದೆ ಯೆಹೋವನ ಆತ್ಮದಿಂದ ಪಡೆದುಕೊಂಡಿದ್ದ ನೈತಿಕ ಬಲವೇ ಆಗಿತ್ತು. (ಗಲಾತ್ಯ 5:22, 23) ಇವರು ಆತ್ಮಿಕ ಪುರುಷರಾಗಿದ್ದರು. ಇವರು ಯೆಹೋವನ ಬಾಯಿಂದ ಬರುವ ಪ್ರತಿಯೊಂದು ಮಾತುಗಳಿಗೆ ಹಸಿದವರಾಗಿದ್ದರು. (ಧರ್ಮೋಪದೇಶಕಾಂಡ 8:3) ಆತನ ವಾಕ್ಯವು ಅವರಿಗೆ ಜೀವದ ಅರ್ಥದಲ್ಲಿತ್ತು. (ಧರ್ಮೋಪದೇಶಕಾಂಡ 32:47) ಎಲ್ಲಕ್ಕಿಂತಲೂ ಮಿಗಿಲಾಗಿ, ಅವರು ಯೆಹೋವನನ್ನು ಪ್ರೀತಿಸಿದರು ಮತ್ತು ಆತನಿಗೆ ಭಯಪಟ್ಟರು ಮತ್ತು ಆತನ ಸಹಾಯದಿಂದ ಅವರು ತಾಳ್ಮೆಯಿಂದ ತಪ್ಪುಮಾಡುವಿಕೆಗೆ ದ್ವೇಷವನ್ನು ಬೆಳೆಸಿಕೊಂಡರು.—ಕೀರ್ತನೆ 97:10; ಜ್ಞಾನೋಕ್ತಿ 1:7.
ನಾವು ಸಹ ಅವರಂತಿರೋಣ. ನಿಜ, ತಪ್ಪುಮಾಡುವಿಕೆಯ ಎಲ್ಲ ವಿಧಗಳಿಗೆ ಇಲ್ಲವೆಂದು ಹೇಳಲಿಕ್ಕೆ ಇವರಿಗಿದ್ದಂತೆ ನಮಗೂ ಯೆಹೋವನ ಆತ್ಮದ ಅಗತ್ಯವಿದೆ. ನಾವು ಪ್ರಾಮಾಣಿಕವಾಗಿ ಆತನ ಆತ್ಮಕ್ಕಾಗಿ ಪ್ರಾರ್ಥಿಸುತ್ತಾ, ಆತನ ವಾಕ್ಯವನ್ನು ಅಭ್ಯಾಸಿಸುತ್ತಾ, ಅಷ್ಟೇ ಅಲ್ಲದೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದಾದರೆ ಯೆಹೋವನು ಉದಾರವಾಗಿ ಅದನ್ನು ಕೊಡುವನು.—ಕೀರ್ತನೆ 119:105; ಲೂಕ 11:13; ಇಬ್ರಿಯ 10:24, 25.
ಆರಂಭದಲ್ಲಿ ತಿಳಿಸಲಾದ ತಿಮೊಥಿ ತನ್ನ ಆತ್ಮಿಕ ಅಗತ್ಯಗಳನ್ನು ತಾನು ಅಲಕ್ಷಿಸದಿದ್ದುದಕ್ಕಾಗಿ ಸಂತೋಷವುಳ್ಳವನಾಗಿದ್ದಾನೆ. ತಿಮೊಥಿ ತನ್ನ ಸಹೋದ್ಯೋಗಿಯೊಂದಿಗೆ ಸಂಭಾಷಿಸುತ್ತಿದ್ದುದ್ದನ್ನು ಕದ್ದುಕೇಳಿದ ಯುವ ಸಹೋದ್ಯೋಗಿಯೊಬ್ಬಳು, ಅವನ ಮುಗ್ಧತೆಯಿಂದ ತಪ್ಪಾಗಿ ಆಕರ್ಷಿಸಲ್ಪಟ್ಟಳು. ತನ್ನ ಪತಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ ಗುಟ್ಟಾಗಿ ಅವಳು ತನ್ನ ಮನೆಗೆ ತಿಮೊಥಿಯನ್ನು ಆಮಂತ್ರಿಸಿದಳು. ಇದಕ್ಕೆ ತಿಮೊಥಿ ಒಪ್ಪಲಿಲ್ಲ. ಸುಲಭವಾಗಿ ಬಿಟ್ಟುಕೊಡದೆ, ಅವಳು ಪೋಟೀಫರನ ಹೆಂಡತಿಯಂತೆ ಅನೇಕ ಸಂದರ್ಭಗಳಲ್ಲಿ ಆಮಂತ್ರಿಸಿದಳು. ತಿಮೊಥಿ ಪ್ರತಿಯೊಂದು ಸಲವೂ ದೃಢವಾಗಿ ಆದರೆ ದಯಾಭರಿತನಾಗಿ ಇಲ್ಲವೆಂದು ಹೇಳಿದನು. ಅವನು ದೇವರ ವಾಕ್ಯದಿಂದ ಅತ್ಯುತ್ತಮವಾದ ಸಾಕ್ಷಿಯನ್ನು ಈ ಸ್ತ್ರೀಗೆ ಕೊಟ್ಟನು. ಇಲ್ಲವೆಂದು ಹೇಳಲು ನೈತಿಕ ಬಲವನ್ನು ನೀಡಿದ್ದಕ್ಕಾಗಿ ಯೆಹೋವನಿಗೆ ಕೃತಜ್ಞತಾಭಾವವುಳ್ಳವನಾಗಿ, ತಿಮೊಥಿ ಈಗ ಒಬ್ಬ ಜೊತೆ ಕ್ರೈಸ್ತ ಸ್ತ್ರೀಯೊಂದಿಗೆ ಮದುವೆಯಾಗಿ ಸಂತೋಷದಿಂದಿದ್ದಾನೆ. ನಿಜ, ತಪ್ಪುಮಾಡುವಿಕೆಗೆ ಮಾಡುವುದಿಲ್ಲವೆಂದು ಹೇಳುವುದರ ಮೂಲಕ ತಮ್ಮ ಕ್ರೈಸ್ತ ಯಥಾರ್ಥತೆಯನ್ನು ಕಾಪಾಡಿಕೊಳ್ಳಲು ಬಯಸುವವರೆಲ್ಲರನ್ನು ಯೆಹೋವನು ಆಶೀರ್ವದಿಸುವನು ಮತ್ತು ಬಲಪಡಿಸುವನು.—ಕೀರ್ತನೆ 1:1-3.