ವ್ಯಾಪಾರ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಸಾಕ್ಷಿಕೊಡಿ
1. ವ್ಯಾಪಾರ ಕ್ಷೇತ್ರಗಳಲ್ಲಿ ಸಾಕ್ಷಿಕೊಡುವುದರ ಬಗ್ಗೆ ಹೆದರಿಕೆಯಿದ್ದರೂ ಹತಾಶರಾಗಬೇಕಿಲ್ಲ ಏಕೆ?
1 ವ್ಯಾಪಾರ ಕ್ಷೇತ್ರಗಳಲ್ಲಿ (ಅಂಗಡಿ, ಫ್ಯಾಕ್ಟರಿ, ಕಛೇರಿ ಇತ್ಯಾದಿ) ಸಾಕ್ಷಿಕೊಡುವುದರ ಬಗ್ಗೆ ನೆನಸಿದರೇ ಎದೆ ಡವಡವ ಎನ್ನುತ್ತದಾ? ಹಾಗಿದ್ದರೆ ಹತಾಶರಾಗಬೇಡಿ. ಪೌಲನಂಥ ಧೀರ ಸುವಾರ್ತಾ ಸೇವಕನೂ ಸಾರಲು ಧೈರ್ಯ ತಂದುಕೊಳ್ಳಬೇಕಾದ ಸಂದರ್ಭಗಳಿದ್ದವು. (1 ಥೆಸ. 2:2) ಈ ಸಾಕ್ಷಿಕಾರ್ಯದ ಬಗ್ಗೆ ನಮ್ಮ ಮನಸ್ಸಲ್ಲಿ ಏಳುವ ವಿಚಾರಗಳನ್ನೂ ಅವುಗಳನ್ನು ನಿಭಾಯಿಸುವುದು ಹೇಗೆಂದೂ ಕೆಳಗೆ ಕೊಡಲಾಗಿದೆ.
2. ಕೆಲಸಗಾರರಿಗೆ ಸಿಟ್ಟುಬರಬಹುದೆಂದು ಚಿಂತಿಸುವ ಅಗತ್ಯವಿಲ್ಲವೇಕೆ?
2 ಕೆಲಸಕ್ಕೆ ಅಡ್ಡಿಯಾಗಿ ಅವರಿಗೆ ಸಿಟ್ಟುಬರಬಹುದಲ್ಲಾ? ವ್ಯಾಪಾರ-ವಹಿವಾಟು ಅಂದಮೇಲೆ ಜನರು ಹೋಗ್ತಾ ಬರ್ತಾ ಇರುತ್ತಾರೆ. ಆದ್ದರಿಂದ ತಮ್ಮ ಕೆಲಸ ನಿಲ್ಲಿಸಿ ಅವರೊಟ್ಟಿಗೆ ಮಾತಾಡಬೇಕಾಗುತ್ತೆ ಎಂದು ಕೆಲಸಗಾರರಿಗೆ ಗೊತ್ತು. ಬಹುಶಃ ನೀವೊಬ್ಬ ಹೊಸ ಗಿರಾಕಿ ಅಂತ ನೆನಸಿ ನಿಮ್ಮೊಟ್ಟಿಗೆ ವಿನಯದಿಂದ ಮಾತಾಡಬಹುದು. ಅಲ್ಲದೆ ನಿಮ್ಮ ವೇಷಭೂಷಣ ನೀಟಾಗಿದ್ದರೆ, ನೀವು ಉತ್ಸುಕತೆ, ಸ್ನೇಹಭಾವದಿಂದ ಮಾತಾಡಿದರೆ ಅವರು ನಿಮ್ಮನ್ನು ಗೌರವದಿಂದ ಉಪಚರಿಸುವ ಸಾಧ್ಯತೆ ಹೆಚ್ಚು.
3. ಗಿರಾಕಿಗಳ ಸಿಟ್ಟೆಬ್ಬಿಸುವುದನ್ನು ತಪ್ಪಿಸಲು ನಾವೇನು ಮಾಡಬಹುದು?
3 ತುಂಬ ಗಿರಾಕಿಗಳು ಹೋಗ್ತಾ ಬರ್ತಾ ಇರ್ತಾರಲ್ಲಾ? ಸಾಧ್ಯವಿದ್ದರೆ ಅಂಗಡಿಗಳಲ್ಲಿ ಹೆಚ್ಚು ಗಿರಾಕಿಗಳಿರದ, ಉದಾಹರಣೆಗೆ ಅಂಗಡಿಗಳು ತೆರೆಯುವ ಸಮಯವನ್ನು ಆರಿಸಿಕೊಳ್ಳಿ. ಅಂಗಡಿಯವನು ಅಥವಾ ಕ್ಯಾಷಿಯರ್ ಬಳಿ ಯಾವ ಗಿರಾಕಿಯೂ ಇಲ್ಲದ ಸಮಯ ನೋಡಿ ಮಾತಾಡಿ. ನಿಮ್ಮ ನಿರೂಪಣೆ ಚುಟುಕಾಗಿರಲಿ.
4. ವ್ಯಾಪಾರ ಕ್ಷೇತ್ರಗಳಲ್ಲಿ ಸಾಕ್ಷಿಕೊಡುವಾಗ ನಾವೇನು ಹೇಳಬಹುದು?
4 ನಾನೇನು ಮಾತಾಡಬೇಕು? ತುಂಬ ಕೆಲಸಗಾರರಿದ್ದರೆ ಮೊದಲು ಅವರ ಧಣಿ/ಸೂಪರ್ವೈಸರ್ ಜೊತೆ ಮಾತಾಡಿ. ಹೀಗನ್ನಿ: “ಕೆಲ್ಸಕ್ಕೆ ಹೋಗೋರು ಮನೆಯಲ್ಲಿ ಸಿಗೋದು ಕಷ್ಟ. ಹಾಗಾಗಿ ನಿಮ್ಮ ಕೆಲ್ಸದ ಸ್ಥಳದಲ್ಲಿ ಭೇಟಿಯಾಗಲು ಬಂದಿದ್ದೇವೆ. ನೀವು ಬ್ಯುಸಿ ಇರೋದರಿಂದ ವಿಷಯವನ್ನ ಚುಟುಕಾಗಿ ಹೇಳ್ತೇನೆ.” ನಮ್ಮನ್ನು ಅವರು ಸೇಲ್ಸ್ಮೆನ್ ಅಂತ ತಪ್ಪಾಗಿ ತಿಳಿಯದಿರಲು, ದಾನಗಳ ಕುರಿತ ಏರ್ಪಾಡಿನ ಬಗ್ಗೆ ನಾವಾಗಿ ಹೇಳದೇ ಇರುವುದು ಉತ್ತಮ. ನಮ್ಮ ಕೆಲಸಕ್ಕೆ ಹಣ ಎಲ್ಲಿಂದ ಬರುತ್ತೆ ಎಂದು ಅವರೇ ಕೇಳಿದರೆ ಆಗ ಅದರ ಬಗ್ಗೆ ಹೇಳಬಹುದು. ಅಲ್ಲಿ ನಡೆಯುತ್ತಿರುವ ಕೆಲಸದ ಮೇಲೆ ಹೊಂದಿಕೊಂಡು, ಕೆಲಸಗಾರರೊಂದಿಗೆ ಸ್ವಲ್ಪ ಹೊತ್ತು ಮಾತಾಡಲು ಮ್ಯಾನೇಜರರ ಅನುಮತಿ ಪಡೆಯಿರಿ. ಮ್ಯಾನೇಜರ್ ಜೊತೆ ಮಾತಾಡಿದ ವಿಷಯವನ್ನೇ ಕೆಲಸಗಾರರೊಂದಿಗೂ ಮಾತಾಡಿ. ಕೆಲಸಗಾರನೊಬ್ಬನು ಬ್ಯುಸಿ ಇದ್ದರೆ ನಿಮ್ಮ ನಿರೂಪಣೆಯನ್ನು ಇನ್ನಷ್ಟು ಚಿಕ್ಕದಾಗಿಸಿ ಕರಪತ್ರ (ಟ್ರ್ಯಾಕ್ಟ್) ಕೊಟ್ಟುಬನ್ನಿ. ಕೆಲಸಗಾರರೊಂದಿಗೆ ಮಾತಾಡಲು ಸಾಧ್ಯವಾಗದಿದ್ದರೆ, ಕೆಲಸಗಾರರ ವಿಶ್ರಾಂತಿಕೊಠಡಿಯಲ್ಲೊ ಇತರ ಸ್ಥಳದಲ್ಲೊ ಸಾಹಿತ್ಯವನ್ನು ಇಟ್ಟುಬರಲಿಕ್ಕಾಗಿ ಅನುಮತಿ ಕೇಳಿ.
5. ವ್ಯಾಪಾರ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಸಾಕ್ಷಿಕೊಡಲು ನಮಗೆ ಯಾವ ಕಾರಣಗಳಿವೆ?
5 ಯೇಸು ಮತ್ತು ಪೌಲ ವ್ಯಾಪಾರ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಸಾರಿದರು. ನೀವೂ ಸಾರಬಲ್ಲಿರಿ. (ಮತ್ತಾ. 4:18-21; 9:9; ಅ. ಕಾ. 17:17) ಚಡಪಡಿಕೆಯಿಲ್ಲದೆ ಧೈರ್ಯದಿಂದ ಮಾತಾಡಲು ಯೆಹೋವನ ಸಹಾಯ ಕೇಳಿ. (ಅ. ಕಾ. 4:30) ವ್ಯಾಪಾರ ಕ್ಷೇತ್ರಗಳಲ್ಲಿ ಜನರು ಸಿಗುವುದಿಲ್ಲ ಎಂಬ ಸಮಸ್ಯೆ ಇಲ್ಲ. ಹಾಗಾಗಿ ಇದು ಫಲದಾಯಕ ಸಾಕ್ಷಿಕಾರ್ಯ. ಪ್ರಯತ್ನಿಸಿ ನೋಡಿ!