ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ತೆರೆದಿದೆ
ಸುವಾರ್ತೆಯ ಹುರುಪಿನ ಪ್ರಚಾರಕನಾಗಿ ಪೌಲನು ಸಾರಲು ಹೆಚ್ಚಿನ ಅಗತ್ಯವಿದ್ದ ಸೇವಾಕ್ಷೇತ್ರಗಳನ್ನು ಅತ್ಯಾಸಕ್ತಿಯಿಂದ ಹುಡುಕಿದನು. ಅಂತಹ ಕ್ಷೇತ್ರಗಳಲ್ಲಿ ಒಂದು ಎಫೆಸ ನಗರವಾಗಿತ್ತು. ಅವನ ಸೇವೆ ಅಲ್ಲಿ ಎಷ್ಟು ಯಶಸ್ವಿಯಾಗಿತ್ತೆಂದರೆ, “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ನನಗಾಗಿ ತೆರೆದಿದೆ” ಎಂದು ತನ್ನ ಜೊತೆ ಕ್ರೈಸ್ತರಿಗೆ ಬರೆದನು. (1 ಕೊರಿಂ. 16:9) ಪೌಲನು ಆ ಕ್ಷೇತ್ರದಲ್ಲೇ ತನ್ನ ಸೇವೆಯನ್ನು ಮುಂದುವರಿಸಿ ಅಲ್ಲಿನ ಇನ್ನೂ ಅನೇಕರು ವಿಶ್ವಾಸಿಗಳಾಗಲು ಸಹಾಯಮಾಡಿದನು. (ಅ. ಕಾ. 19:1-20, 26) ಅಂತಹ ಚಟುವಟಿಕೆಗೆ ನಡೆಸುವ ಮಹಾ ದ್ವಾರವು ಇಂದು ನಮಗೂ ತೆರೆದಿದೆ. ವಿಶೇಷ ಅಭಿಯಾನದಲ್ಲಿ ಅನೇಕ ಆಸಕ್ತರನ್ನು ಕಂಡುಕೊಳ್ಳಲಾಯಿತು. ಅವರಲ್ಲಿ ಹೆಚ್ಚಿನವರು ಯಾವ ಸಭೆಗೂ ನೇಮಿಸಿರದ ಕ್ಷೇತ್ರಗಳಲ್ಲಿನ ಜನರಾಗಿದ್ದರು. ಆದ್ದರಿಂದ ಅಂತಹ ಕ್ಷೇತ್ರದಲ್ಲಿನ ಜನರಿಗೆ ಸುವಾರ್ತೆ ಸಾರಲು ಮತ್ತು ಆಸಕ್ತರನ್ನು ಪುನರ್ಭೇಟಿ ಮಾಡಲು ನಮ್ಮೆಲ್ಲರನ್ನೂ ಉತ್ತೇಜಿಸಲಾಗುತ್ತಿದೆ.—2 ಕೊರಿಂಥ 8:13-15 ಹೋಲಿಸಿ.
ಹೆಚ್ಚು ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆ ಮಾಡಬಲ್ಲಿರಾ? ಬೇರೊಂದು ಸ್ಥಳದಲ್ಲಿ ಸೇವೆ ಮಾಡುವುದರ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಿದ್ದೀರೋ? ಇತ್ತೀಚೆಗಿನ ದಶಕಗಳಲ್ಲಿ ಈ ಕೊಯ್ಲಿನ ಕೆಲಸದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾವಿರಾರು ಕುಟುಂಬಗಳು ಅಗತ್ಯ ಹೆಚ್ಚಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸುತ್ತಿವೆ. ಹೀಗೆ ಸ್ಥಳಾಂತರಿಸಿದ ಒಂದು ದಂಪತಿ ಹೇಳಿದ್ದು: “ಎಲ್ಲಿ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಸಾಧ್ಯವಿದೆಯೋ ಅಲ್ಲಿ ಹೋಗಿ ಸೇವೆ ಮಾಡಬೇಕೆಂದು ಬಯಸಿದೆವು.” ನಿಮಗೂ ಅಂತಹ ಬಯಕೆಯಿದ್ದು ಬೇರೆಡೆ ಸ್ಥಳಾಂತರಿಸಲು ಸಾಧ್ಯವಿರುವುದಾದರೆ, ನಿಮ್ಮ ಸಭೆಯ ಹಿರಿಯರ ಬಳಿ ಮಾತನಾಡಿ. ನಂತರ ಸಂಚರಣಾ ಮೇಲ್ವಿಚಾರಕರ ಬಳಿ ಮಾತನಾಡಿ ಅವರ ಸಲಹೆಯನ್ನೂ ಪಡೆದುಕೊಳ್ಳಿ.
ಹೆಚ್ಚಿನ ಅಗತ್ಯ ಎಲ್ಲಿದೆ ಎಂಬ ಮಾಹಿತಿಗಾಗಿ ಬ್ರಾಂಚ್ ಆಫೀಸನ್ನು ವಿಚಾರಿಸಲು ಬಯಸುವುದಾದರೆ ನಿಮ್ಮ ಸಭೆಯ ಸೇವಾ ಕಮಿಟಿಗೆ ನಿಮ್ಮ ಇಚ್ಛೆಯನ್ನು ತಿಳಿಸುವ ಒಂದು ಪತ್ರವನ್ನು ಕೊಡಿ. ಆಗ ಅವರು ತಮ್ಮ ಹೇಳಿಕೆಗಳನ್ನು ಸೇರಿಸಿ ಆ ಪತ್ರವನ್ನು ಬ್ರಾಂಚ್ ಆಫೀಸಿಗೆ ಕಳುಹಿಸುತ್ತಾರೆ. ಚಟುವಟಿಕೆಯ ಮಹಾ ದ್ವಾರವು ತೆರೆದಿರುವ ತನಕ ನಾವೆಲ್ಲರೂ ಯೆಹೋವನ ಸೇವೆಯನ್ನು ಒಂದಲ್ಲ ಒಂದು ವಿಧದಲ್ಲಿ ಮಾಡುತ್ತಾ ಕಾರ್ಯಮಗ್ನರಾಗಿರೋಣ.—1 ಕೊರಿಂ. 15:58.