ದೇವರಿಗೆ ಘನತೆ ತರುವಂತಹ ಯೋಗ್ಯ ನಡವಳಿಕೆಯುಳ್ಳವರಾಗಿರಿ
1 ನಾವು ಎಲ್ಲಿಯೇ ಇರಲಿ, ನಮ್ಮ ನಡವಳಿಕೆ, ಉಡುಗೆತೊಡುಗೆ ಮತ್ತು ಅಲಂಕಾರವು, ನಮ್ಮ ಕುರಿತಾಗಿ ಹಾಗೂ ನಾವು ಆರಾಧಿಸುತ್ತಿರುವ ದೇವರ ಕುರಿತಾಗಿ ಸಾಕ್ಷಿಯನ್ನು ಕೊಡುತ್ತದೆ. ಇದೆಲ್ಲವೂ ದೇವರ ಜನರು ಒಟ್ಟುಗೂಡುವ ದೊಡ್ಡ ಸಮ್ಮೇಳನಗಳಲ್ಲಿ ವಿಶೇಷವಾಗಿ ಎದ್ದುಕಾಣುತ್ತದೆ, ಯಾಕೆಂದರೆ ಅನೇಕರು ನಮ್ಮನ್ನು ಗಮನಿಸುತ್ತಿರುತ್ತಾರೆ. ನಾವು ಆದರ್ಶಪ್ರಾಯರಾಗಿರುವಾಗ, ಯೆಹೋವನ ನಾಮಕ್ಕೆ ಘನತೆಯುಂಟಾಗುತ್ತದೆ. (1 ಪೇತ್ರ 2:12) ಆದರೆ, ಕೆಲವೊಂದು ವ್ಯಕ್ತಿಗಳ ತಪ್ಪಾದ ನಡವಳಿಕೆ ಅಥವಾ ಬುದ್ಧಿಹೀನ ಕೃತ್ಯಗಳು, ದೇವರ ಹೆಸರಿನ ಮೇಲೆ ಮತ್ತು ಆತನ ಜನರೆಲ್ಲರ ಮೇಲೆ ಕಳಂಕವನ್ನು ತರುತ್ತವೆ. (ಪ್ರಸಂ. 9:18ಬಿ) ನಮ್ಮ ನಡತೆಯನ್ನು ನೋಡಿ, ಹೊರಗಿನವರು ನಮ್ಮ ಸಂಸ್ಥೆಯ ಬಗ್ಗೆ ಮತ್ತು ನಾವು ಆರಾಧಿಸುತ್ತಿರುವ ದೇವರ ಬಗ್ಗೆ ತಮ್ಮ ಅಭಿಪ್ರಾಯವನ್ನು ರೂಪಿಸುತ್ತಾರೆ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕು. ಆಗ ನಾವು ‘ಏನು ಮಾಡಿದರೂ ದೇವರ ಘನತೆಗಾಗಿ ಮಾಡಲು’ ಯಾವಾಗಲೂ ಪ್ರಯತ್ನಿಸುತ್ತಿರುವೆವು.—1 ಕೊರಿಂ. 10:31.
2 ಹೋಟೆಲುಗಳಲ್ಲಿ ಒಳ್ಳೆಯ ನಡವಳಿಕೆ: ಹೆಚ್ಚಿನ ಸಂದರ್ಭಗಳಲ್ಲಿ ಹೋಟೆಲ್ ಸಿಬ್ಬಂದಿವರ್ಗದವರು ಯೆಹೋವನ ಸಾಕ್ಷಿಗಳ ಕ್ರಮಬದ್ಧತೆ, ಶಿಷ್ಟಾಚಾರಗಳು ಮತ್ತು ಶುಚಿತ್ವವನ್ನು ನೋಡಿ ವಿಸ್ಮಿತರಾಗುತ್ತಾರೆ. ಒಬ್ಬ ಮ್ಯಾನೇಜರನು ತನ್ನ ಹೋಟೆಲಿನಲ್ಲಿ ತಂಗಿದ್ದ ಸಾಕ್ಷಿಗಳ ಕುಟುಂಬಗಳ ಕುರಿತಾಗಿ ಮಾತಾಡುತ್ತಾ ಹೇಳಿದ್ದು: “ನಾನು ಈ ವರೆಗೂ ನೋಡಿರುವ ಮಕ್ಕಳ ಪೈಕಿ, ಯೆಹೋವನ ಸಾಕ್ಷಿಗಳ ಮಕ್ಕಳೇ ಶ್ರೇಷ್ಠರು! ದೊಡ್ಡ ಪುರುಷರು ಮತ್ತು ಮಹಿಳೆಯರಂತೆ ಅವರು ಸೊಗಸಾಗಿ ಉಡುಪನ್ನು ಧರಿಸುತ್ತಾರೆ; ಅವರು ವಿನಯರೂ, ಸೌಜನ್ಯವುಳ್ಳವರೂ, ಸಭ್ಯಾಚಾರವುಳ್ಳವರೂ ಆಗಿದ್ದಾರೆ, ಮತ್ತು ಅವರು ಯಾವುದೇ ರೀತಿಯಲ್ಲಿ ನಮಗೆ ತೊಂದರೆಯನ್ನು ಉಂಟುಮಾಡಿಲ್ಲ. ನಿಮ್ಮ ಮಕ್ಕಳ ವಿಷಯದಲ್ಲಿ ನಿಮ್ಮನ್ನು ನಿಜವಾಗಿಯೂ ಅಭಿನಂದಿಸಬೇಕು. ನಿಮ್ಮ ಮಕ್ಕಳು ನಮ್ಮಲ್ಲಿ ತಂಗಿದ್ದಕ್ಕಾಗಿ ತುಂಬ ಸಂತೋಷಿಸುತ್ತೇವೆ.” ಈ ರೀತಿಯ ಮೆಚ್ಚುಗೆಯ ಹೇಳಿಕೆಗಳನ್ನು ನಾವು ಕೇಳುತ್ತಾ ಇರುತ್ತೇವೆ. ಯಾಕೆಂದರೆ ನಮ್ಮೊಂದಿಗೆ ವ್ಯವಹರಿಸುವವರು, ಯೆಹೋವನ ಜನರ ನಡುವೆ ಇರುವ ಪ್ರೀತಿಗೌರವವನ್ನು ಸ್ಪಷ್ಟವಾಗಿ ನೋಡಶಕ್ತರಾಗಿದ್ದಾರೆ.
3 ಆದರೆ ಇನ್ನೊಂದು ಕಡೆ, ಬೇರೆ ಕೆಲವೊಂದು ಹೋಟೆಲುಗಳ ಸಿಬ್ಬಂದಿಯವರು ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಇದು ಇನ್ನೂ ಒಂದು ಸಮಸ್ಯೆಯಿದೆ ಎಂಬುದನ್ನು ತೋರಿಸುತ್ತದೆ. ಅಂದರೆ ಕೆಲವು ಸಾಕ್ಷಿಗಳು ತುಂಬ ಅಸಡ್ಡೆಯಿಂದ ವರ್ತಿಸಿದ್ದಾರೆ ಅಥವಾ ಹೋಟೆಲಿನ ಸೌಕರ್ಯಗಳನ್ನು ದುರುಪಯೋಗಿಸಿದ್ದಾರೆ. ಇದರಿಂದಾಗಿ ಸಮಸ್ಯೆಗಳುಂಟಾಗುತ್ತವೆ ಮತ್ತು ಇದು ಸಲ್ಲದ ಟೀಕೆಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ಹದಿವಯಸ್ಕರು ಗದ್ದಲಮಾಡುತ್ತಿರುತ್ತಾರೆ, ಅವರನ್ನು ನಿಯಂತ್ರಿಸಲಾಗುವುದಿಲ್ಲ, ಅವರು ಈಜುಕೊಳ ಅಥವಾ ಬೇರಾವುದೊ ಆಟಪಾಟದ ಸೌಕರ್ಯಗಳನ್ನು ಉಪಯೋಗಿಸುತ್ತಿರುವಾಗ ಹೆತ್ತವರು ಅವರ ಬಳಿ ಇರುವುದಿಲ್ಲವೆಂದು ಕೆಲವು ಮ್ಯಾನೇಜರರು ದೂರು ಸಲ್ಲಿಸಿದ್ದಾರೆ.
4 ಹೆಚ್ಚಿನ ಹೋಟೆಲುಗಳಲ್ಲಿ, ಅತಿಥಿಗಳು ಪಾಲಿಸಬೇಕಾದಂತಹ ಕೆಲವು ನಿಯಮಗಳಿರುತ್ತವೆ. ಶಬ್ದದ ಪ್ರಮಾಣ ಮತ್ತು ರೂಮುಗಳಲ್ಲಿ ಅಡಿಗೆಮಾಡುವುದರ ಬಗ್ಗೆ ಇರುವ ನಿಯಮಗಳನ್ನು ಕೆಲವು ಸಹೋದರರು ಉಲ್ಲಂಘಿಸಿದ್ದಾರೆ. ರೂಮುಗಳಲ್ಲಿ ಅಡಿಗೆಮಾಡುವುದನ್ನು ಕೆಲವೊಂದು ಹೋಟೆಲುಗಳು ಅನುಮತಿಸುವುದಿಲ್ಲ. ಆದರೆ, ಅಡಿಗೆಮಾಡುವ ಮೂಲಕ ಹೋಟೆಲಿನ ಸ್ವತ್ತನ್ನು ದುರುಪಯೋಗಿಸಲಾಗಿದೆ ಎಂದು ಹೋಟೆಲ್ ಮ್ಯಾನೇಜರರು ನಮಗೆ ಹೇಳಿದ್ದಾರೆ. ಹೀಗೆ ಅಡಿಗೆಮಾಡುವುದರಿಂದ, ರೂಮುಗಳು ಅಥವಾ ಅವುಗಳಲ್ಲಿರುವ ವಸ್ತುಗಳಿಗೆ ಹಾನಿಯಾಗುತ್ತದೆ ಮಾತ್ರವಲ್ಲ, ಆ ರೂಮುಗಳನ್ನು ಅನಂತರ ಅನೇಕ ದಿನಗಳ ವರೆಗೆ ಬಾಡಿಗೆಗೆ ಕೊಡಲಾಗುವುದಿಲ್ಲ. ಯಾಕೆಂದರೆ ಅವುಗಳಲ್ಲಿ ಆ ದುರ್ಗಂಧವು ಹಾಗೇ ಇರುತ್ತದೆ. ರೂಮುಗಳಲ್ಲಿ ಅಡಿಗೆಮಾಡಬಹುದೆಂದು ಸ್ಪಷ್ಟವಾಗಿ ಅನುಮತಿ ಕೊಡಲ್ಪಟ್ಟಿರುವಲ್ಲಿ ಮಾತ್ರ ಹಾಗೆ ಮಾಡಬಹುದು, ಇಲ್ಲದಿದ್ದರೆ ಅಡಿಗೆಮಾಡಬಾರದು.
5 ಹೋಟೆಲಿನ ಆಡಳಿತವರ್ಗದವರೊಂದಿಗೆ ಸಂಪೂರ್ಣವಾಗಿ ಸಹಕರಿಸಲು ನಾವು ಎಲ್ಲ ಪ್ರಯತ್ನವನ್ನು ಮಾಡಬೇಕು. ಯಾಕೆಂದರೆ ನಾವು ಅವರ ಮನಸ್ಸಿನಲ್ಲಿ ಯೆಹೋವನ ಜನರ ಕುರಿತಾಗಿ ಖಂಡಿತವಾಗಿಯೂ ಒಂದು ಕೆಟ್ಟ ಅಭಿಪ್ರಾಯವನ್ನು ಮೂಡಿಸಲು ಬಯಸುವುದಿಲ್ಲ. ನಾವು ಕ್ರೈಸ್ತರಾಗಿರುವುದರಿಂದ, ಎಲ್ಲ ಸಮಯದಲ್ಲೂ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು. ನಾವು ಹೋಟೆಲುಗಳನ್ನು ಬಿಟ್ಟುಹೋಗುವಾಗ ಅಲ್ಲಿನ ಬಟ್ಟೆ ಅಥವಾ ಬೇರಾವುದೇ “ಸ್ಮಾರಕ ವಸ್ತುಗಳನ್ನು” ತೆಗೆದುಕೊಂಡುಹೋಗಬಾರದು. ಯಾಕೆಂದರೆ ಅದು ಕಳ್ಳತನವಾಗಿದೆ. ಅಲ್ಲದೆ, ನಾವು ರೆಸರ್ವೇಷನ್ ಮಾಡುವಾಗ ಅಥವಾ ಹೋಟೆಲಿನ ಪ್ರವೇಶದಾಖಲೆಯನ್ನು ತುಂಬಿಸುವಾಗ (ಚೆಕಿಂಗ್ ಇನ್), ಕೋಣೆಯಲ್ಲಿ ಎಷ್ಟು ಮಂದಿ ತಂಗಲಿದ್ದೇವೆಂಬುದರ ಕುರಿತು ಪ್ರಾಮಾಣಿಕರಾಗಿರಬೇಕು.
6 ಅಧಿವೇಶನ ಸ್ಥಳದಲ್ಲಿ ಸಭ್ಯ ನಡವಳಿಕೆ ಮತ್ತು ತೋರಿಕೆ: ಅಧಿವೇಶನಕ್ಕಾಗಿ ಯಾವುದೇ ರೀತಿಯ ಸ್ಥಳವು ಉಪಯೋಗಿಸಲ್ಪಡಲಿ, ಆ ಸಮಯದಲ್ಲಿ ಅದು ಒಂದು ದೊಡ್ಡ ರಾಜ್ಯ ಸಭಾಗೃಹವಾಗಿದೆ ಎಂದು ನಾವು ನೆನಸಬೇಕು. ನಮ್ಮ ಸ್ಥಳಿಕ ಸಭೆಯಲ್ಲಿ ನಾವು ಕೂಟಗಳಿಗೆ ಹಾಜರಾಗುವಾಗ ಯಾವ ರೀತಿಯಲ್ಲಿ ವಸ್ತ್ರವನ್ನು ಧರಿಸುತ್ತೇವೊ ಅದೇ ರೀತಿಯಲ್ಲಿ ಇಲ್ಲಿಯೂ ನಾವು ಸಭ್ಯವಾದ ಉಡುಗೆತೊಡುಗೆ ಮತ್ತು ಕೇಶಾಲಂಕಾರವನ್ನು ಮಾಡಿಕೊಂಡಿರಬೇಕು. ಅಧಿವೇಶನದ ಸಮಯದಲ್ಲಿ ಮತ್ತು ಅನಂತರ, ಸಹೋದರ ಸಹೋದರಿಯರು ಈ ಲೋಕದ ಆತ್ಮವನ್ನು ಪ್ರತಿಬಿಂಬಿಸುವ ಹಾಗೂ ನಾವು ಲೋಕದವರಿಗಿಂತ ಭಿನ್ನರಾಗಿದ್ದೇವೆಂಬುದನ್ನು ಕಂಡುಹಿಡಿಯಲಾಗದಷ್ಟು ಅಸಭ್ಯವಾದ ಅಥವಾ ವಿಚಿತ್ರವಾದ ಫ್ಯಾಶನಿನ ಉಡುಪುಗಳನ್ನು ಧರಿಸಬಾರದು. ಸಹೋದರಿಯರು, ತಮ್ಮ ಲಂಗಗಳ (ಸ್ಕರ್ಟ್) ಮತ್ತು ಉಡುಪುಗಳ ಶೈಲಿ ಹಾಗೂ ಉದ್ದವು ಸಭ್ಯವಾದದ್ದಾಗಿರುವಂತೆ ನೋಡಿಕೊಳ್ಳಬೇಕು. (1 ತಿಮೊ. 2:9, 10) ನಾವು ಅಧಿವೇಶನದ ಸ್ಥಳದಲ್ಲಿರಲಿ, ಹೋಟೆಲಿನಲ್ಲಿ ತಂಗುತ್ತಿರಲಿ, ಒಂದು ರೆಸ್ಟೊರೆಂಟ್ನಲ್ಲಿ ತಿನ್ನುತ್ತಿರಲಿ, ಅಥವಾ ಶಾಪಿಂಗ್ ಮಾಡುತ್ತಿರಲಿ, ಎಲ್ಲ ಸಮಯಗಳಲ್ಲೂ ನಾವು ದೇವರ ಶುಶ್ರೂಷಕರಾಗಿರುವುದರಿಂದ, ಯಾರಿಗೂ ಎಡವಿಬೀಳಲು ಅವಕಾಶವನ್ನು ಕೊಡಬಾರದೆಂಬುದನ್ನು ಮನಸ್ಸಿನಲ್ಲಿಡಬೇಕು.—2 ಕೊರಿಂ. 6:3.
7 ಶನಿವಾರ ಬೆಳಗ್ಗೆ ದೀಕ್ಷಾಸ್ನಾನದ ಏರ್ಪಾಡು ಇರುವುದು. ಆ ಸಂದರ್ಭದಲ್ಲಿ ನಾವು ಯಾವ ರೀತಿಯ ಮನೋಭಾವವನ್ನು ವ್ಯಕ್ತಪಡಿಸಬೇಕೆಂಬುದನ್ನು 1995, ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಯ 30ನೆಯ ಪುಟವು ವಿವರಿಸುತ್ತದೆ. ನಾವು “ದೀಕ್ಷಾಸ್ನಾನದಲ್ಲಿ ತಕ್ಕದಾದ ಗಂಭೀರತೆಯಿಂದ ವರ್ತಿಸಬೇಕು. ಅದು ಆವೇಶಭರಿತ ಅಭಿವ್ಯಕ್ತಿಗಳಿಗೆ, ಗೋಷ್ಠಿಗಳಿಗೆ, ಅಥವಾ ವಿನೋದಕ್ಕಾಗಿ ಒಂದು ಸಮಯವಾಗಿರುವುದಿಲ್ಲ. ಆದರೆ ಒಂದು ವಿಷಣ್ಣ ಅಥವಾ ಉರಿ ಮೋರೆಯ ಸಮಯವೂ ಅದಾಗಿರುವುದಿಲ್ಲ” ಎಂದು ಅದು ಹೇಳುತ್ತದೆ. ದೀಕ್ಷಾಸ್ನಾನ ಪಡೆಯುತ್ತಿರುವವರು ಪುರುಷರಾಗಿರಲಿ, ಸ್ತ್ರೀಯರಾಗಿರಲಿ, ತುಂಬ ಬಿಗಿಯಾದ ಅಥವಾ ಗಿಡ್ಡವಾಗಿರುವ ಇಲ್ಲವೇ ಮೈ ಕಾಣುವಂತಹ ಸ್ನಾನದ ಉಡುಗೆಗಳನ್ನು ಧರಿಸುವುದು ಯೋಗ್ಯವಲ್ಲ. ಹೀಗಿರುವುದರಿಂದ, ಕ್ರೈಸ್ತ ದೀಕ್ಷಾಸ್ನಾನದ ಗಂಭೀರತೆ ಹಾಗೂ ಆನಂದವನ್ನು ನಾವೆಲ್ಲರೂ ಪ್ರತಿಬಿಂಬಿಸಬೇಕು.
8 ನಾವು ‘ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರುವಂತೆ’ ಪೇತ್ರನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. (2 ಪೇತ್ರ 3:11) “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನದ ಸಮಯದಲ್ಲಿ ನಮ್ಮನ್ನು ಅನೇಕರು ಗಮನಿಸುತ್ತಿರುವರು. ಆದುದರಿಂದ, ಅವರಲ್ಲಿನ ಪ್ರಾಮಾಣಿಕ ಹೃದಯದವರು, ಎಲ್ಲ ರೀತಿಯ ಘನಮಾನಕ್ಕೆ ಯೋಗ್ಯನಾಗಿರುವ ನಮ್ಮ ಮಹಾ ದೇವರನ್ನು ತಿಳಿದುಕೊಂಡು, ಆತನನ್ನು ಆರಾಧಿಸುವಂತೆ ಆ ಅಧಿವೇಶನದಲ್ಲಿನ ನಮ್ಮ ನಡೆನುಡಿಗಳು ಸಹಾಯಮಾಡಲಿ.—1 ಕೊರಿಂ. 14:24, 25.