ಅಧ್ಯಾಯ 23
ಪ್ರಾಯೋಗಿಕ ಮೌಲ್ಯವನ್ನು ಸ್ಪಷ್ಟಪಡಿಸುವುದು
ನೀವು ಒಬ್ಬ ವ್ಯಕ್ತಿಯೊಂದಿಗೆ ಮಾತಾಡುತ್ತಿರಲಿ ಅಥವಾ ದೊಡ್ಡ ಗುಂಪಿನೊಂದಿಗೆ ಮಾತಾಡುತ್ತಿರಲಿ, ನಿಮಗೆ ನಿಮ್ಮ ವಿಷಯವಸ್ತುವಿನಲ್ಲಿ ಆಸಕ್ತಿಯಿರುವುದರಿಂದ, ಕೇಳುಗನಿಗೂ(ರಿಗೂ) ಅದರಲ್ಲಿ ಆಸಕ್ತಿ ಇರುವುದು ಎಂದು ಊಹಿಸುವುದು ಅವಿವೇಕತನವಾಗಿದೆ. ನಿಮ್ಮ ಸಂದೇಶವು ಪ್ರಾಮುಖ್ಯವೆಂಬುದೇನೊ ನಿಜವಾದರೂ, ಅದರ ಪ್ರಾಯೋಗಿಕ ಮೌಲ್ಯವನ್ನು ಸ್ಪಷ್ಟಗೊಳಿಸಲು ನೀವು ತಪ್ಪುವುದಾದರೆ, ಪ್ರಾಯಶಃ ನಿಮ್ಮ ಸಭಿಕರ ಆಸಕ್ತಿಯನ್ನು ನೀವು ಬಹಳ ಸಮಯದ ವರೆಗೆ ಹಿಡಿದಿಡಲಾರಿರಿ.
ರಾಜ್ಯ ಸಭಾಗೃಹದ ಸಭಿಕರ ವಿಷಯದಲ್ಲಿಯೂ ಇದು ನಿಜವಾಗಿರುತ್ತದೆ. ಅವರು ಈ ಹಿಂದೆ ಕೇಳಿಸಿಕೊಂಡಿರದಂಥ ಒಂದು ದೃಷ್ಟಾಂತವನ್ನಾಗಲಿ ಅಥವಾ ಅನುಭವವನ್ನಾಗಲಿ ನೀವು ಉಪಯೋಗಿಸುವಾಗ, ಅವರು ಅದಕ್ಕೆ ಕಿವಿಗೊಡಬಹುದು. ಆದರೆ ಅವರಿಗೆ ಈಗಾಗಲೇ ತಿಳಿದಿರುವ ವಿಷಯಗಳ ಕುರಿತು ಮಾತಾಡುತ್ತಿದ್ದು, ವಿಶೇಷವಾಗಿ ನೀವು ಆ ವಿಷಯಗಳ ಮೇಲೆ ಆಸಕ್ತಿಯನ್ನು ವರ್ಧಿಸದಿರುವಲ್ಲಿ, ಅವರು ಅದಕ್ಕೆ ಕಿವಿಗೊಡುವುದನ್ನು ನಿಲ್ಲಿಸಬಹುದು. ನೀವು ಹೇಳುತ್ತಿರುವ ವಿಷಯಗಳು ಅವರಿಗೆ ಏಕೆ ಮತ್ತು ಹೇಗೆ ನಿಜವಾಗಿಯೂ ಪ್ರಯೋಜನಕರವಾಗಿವೆ ಎಂಬುದನ್ನು ಅವರು ತಿಳಿದುಕೊಳ್ಳುವಂತೆ ನೀವು ಸಹಾಯಮಾಡುವುದು ಆವಶ್ಯಕವಾಗಿದೆ.
ನಾವು ಪ್ರಾಯೋಗಿಕ ವಿಧಗಳಲ್ಲಿ ಯೋಚಿಸುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಜ್ಞಾನೋ. 3:21, NW) ಜನರನ್ನು, “ನೀತಿವಂತರ ಪ್ರಾಯೋಗಿಕ ವಿವೇಕ”ಕ್ಕೆ ನಡೆಸಲಿಕ್ಕಾಗಿ ಯೆಹೋವನು ಸ್ನಾನಿಕನಾದ ಯೋಹಾನನನ್ನು ಉಪಯೋಗಿಸಿದನು. (ಲೂಕ 1:17, NW) ಈ ವಿವೇಕವು ಯೆಹೋವನ ಕಡೆಗಿನ ಹಿತಕರವಾದ ಭಯದಲ್ಲಿ ಬೇರೂರಿರುವ ವಿವೇಕವಾಗಿದೆ. (ಕೀರ್ತ. 111:10) ಈ ವಿವೇಕವನ್ನು ಯಾರು ಗಣ್ಯಮಾಡುತ್ತಾರೊ ಅವರಿಗೆ, ಸದ್ಯದ ಜೀವನವನ್ನು ಜಯಪ್ರದವಾಗಿ ನಿಭಾಯಿಸುವಂತೆ ಮತ್ತು ವಾಸ್ತವವಾದ ಜೀವನ ಅಂದರೆ ಮುಂದೆ ಸಿಗಲಿರುವ ನಿತ್ಯಜೀವವನ್ನು ಹಿಡಿದುಕೊಳ್ಳುವಂತೆ ಸಹಾಯವು ನೀಡಲ್ಪಡುತ್ತದೆ.—1 ತಿಮೊ. 4:8; 6:18.
ಭಾಷಣವನ್ನು ಪ್ರಾಯೋಗಿಕವಾದದ್ದಾಗಿ ಮಾಡುವುದು. ನಿಮ್ಮ ಭಾಷಣವು ಪ್ರಾಯೋಗಿಕವಾಗಿರುವಂತೆ ಮಾಡಲಿಕ್ಕಾಗಿ, ನೀವು ಭಾಷಣದ ವಿಷಯವಸ್ತುವಿಗೆ ಮಾತ್ರವಲ್ಲ, ಸಭಿಕರಿಗೂ ಜಾಗರೂಕ ಗಮನವನ್ನು ಕೊಡಬೇಕು. ಅವರನ್ನು ಕೇವಲ ಜನರ ಒಂದು ಗುಂಪಾಗಿ ಪರಿಗಣಿಸಬೇಡಿ. ಆ ಗುಂಪಿನಲ್ಲಿ ಪ್ರತ್ಯೇಕ ವ್ಯಕ್ತಿಗಳಿದ್ದಾರೆ ಮತ್ತು ಕುಟುಂಬಗಳಿವೆ. ಅದರಲ್ಲಿ ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಕರು ಹಾಗೂ ವೃದ್ಧರು ಇರಬಹುದು. ಅದರಲ್ಲಿ ಹೊಸ ಆಸಕ್ತರು ಇರಬಹುದು ಹಾಗೂ ನೀವು ಹುಟ್ಟುವುದಕ್ಕೆ ಮೊದಲೇ ಯೆಹೋವನನ್ನು ಸೇವಿಸಲು ತೊಡಗಿದವರೂ ಇರಬಹುದು. ಕೆಲವರು ಆತ್ಮಿಕವಾಗಿ ಪ್ರೌಢರಾಗಿರಬಹುದು; ಬೇರೆ ಕೆಲವರು ಲೋಕದ ಮನೋಭಾವಗಳು ಮತ್ತು ರೂಢಿಗಳಿಂದ ಇನ್ನೂ ಬಲವಾಗಿ ಪ್ರಭಾವಿತರಾಗಿರಬಹುದು. ಆದುದರಿಂದ, ಸ್ವತಃ ಹೀಗೆ ಕೇಳಿಕೊಳ್ಳಿ: ‘ನಾನು ಚರ್ಚಿಸಲಿರುವ ವಿಷಯಭಾಗವು ಸಭಿಕರಿಗೆ ಹೇಗೆ ಪ್ರಯೋಜನದಾಯಕವಾಗಿರಬಹುದು? ಅವರು ಮುಖ್ಯಾಂಶವನ್ನು ಗ್ರಹಿಸುವಂತೆ ನಾನು ಹೇಗೆ ಸಹಾಯಮಾಡಬಲ್ಲೆ?’ ನೀವು ನಿಮ್ಮ ಪ್ರಧಾನ ಗಮನವನ್ನು, ಇಲ್ಲಿ ತಿಳಿಸಲ್ಪಟ್ಟಿರುವ ಗುಂಪುಗಳಲ್ಲಿ ಒಂದೊ ಎರಡೊ ಗುಂಪುಗಳಿಗೆ ಮಾತ್ರ ಕೊಡಲು ನಿರ್ಧರಿಸಬಹುದು. ಆದರೂ, ಇತರರನ್ನು ಪೂರ್ತಿ ಮರೆತು ಬಿಡಬೇಡಿ.
ಬೈಬಲಿನ ಒಂದು ಪ್ರಾಥಮಿಕ ಬೋಧನೆಯನ್ನು ಚರ್ಚಿಸುವ ನೇಮಕ ನಿಮಗೆ ದೊರೆತಿದೆ ಎಂದು ಭಾವಿಸೋಣ. ಆ ಬೋಧನೆಯನ್ನು ಈಗಾಗಲೇ ನಂಬಿರುವ ಸಭಿಕರಿಗೆ ಅಂಥ ಭಾಷಣವನ್ನು ನೀವು ಹೇಗೆ ಪ್ರಯೋಜನಕರವಾಗಿ ಮಾಡಬಲ್ಲಿರಿ? ಆ ವಿಷಯದ ಕುರಿತು ಅವರಿಗಿರುವ ನಿಶ್ಚಿತಾಭಿಪ್ರಾಯವನ್ನು ಬಲಪಡಿಸಲು ಪ್ರಯತ್ನಿಸಿರಿ. ಹೇಗೆ? ಅದನ್ನು ಬೆಂಬಲಿಸುವಂಥ ಶಾಸ್ತ್ರೀಯ ರುಜುವಾತಿನ ಮೇಲೆ ತರ್ಕಸಮ್ಮತವಾಗಿ ಮಾತಾಡುವ ಮೂಲಕವೇ. ಆ ಬೈಬಲ್ ಬೋಧನೆಗಾಗಿರುವ ಅವರ ಗಣ್ಯತೆಯನ್ನು ಸಹ ನೀವು ಆಳಗೊಳಿಸಬಲ್ಲಿರಿ. ಆ ಬೋಧನೆಯು ಬೈಬಲಿನ ಇತರ ಸತ್ಯಗಳೊಂದಿಗೆ ಮತ್ತು ಯೆಹೋವನ ಸ್ವಂತ ವ್ಯಕ್ತಿತ್ವದೊಂದಿಗೆ ಹೇಗೆ ಹೊಂದಿಕೆಯಲ್ಲಿದೆ ಎಂಬುದನ್ನು ತೋರಿಸುವ ಮೂಲಕ ನೀವು ಇದನ್ನು ಮಾಡಬಹುದು. ಈ ನಿರ್ದಿಷ್ಟ ಬೋಧನೆಯ ಕುರಿತಾದ ತಿಳಿವಳಿಕೆಯು ಜನರಿಗೆ ಹೇಗೆ ಪ್ರಯೋಜನವನ್ನು ತಂದಿದೆ ಮತ್ತು ಭವಿಷ್ಯದ ಕುರಿತಾದ ಅವರ ಹೊರನೋಟವನ್ನು ಹೇಗೆ ಪ್ರಭಾವಿಸಿದೆ ಎಂಬುದನ್ನು ತೋರಿಸುವ ದೃಷ್ಟಾಂತಗಳನ್ನು, ಸಾಧ್ಯವಾದರೆ ನಿಜ-ಜೀವನದ ಅನುಭವಗಳನ್ನು ಉಪಯೋಗಿಸಿರಿ.
ಈ ಪ್ರಾಯೋಗಿಕ ಅನ್ವಯವನ್ನು, ಭಾಷಣದ ಅಂತ್ಯದಲ್ಲಿ ಕೆಲವು ಸಂಕ್ಷಿಪ್ತ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರಿಸಬೇಡಿ. ಪ್ರಾರಂಭದಿಂದಲೇ, ನಿಮ್ಮ ಸಭಿಕರಲ್ಲಿ ಪ್ರತಿಯೊಬ್ಬನು “ಇದು ನನಗಾಗಿದೆ” ಎಂಬ ಅನಿಸಿಕೆಯುಳ್ಳವನಾಗಿರಬೇಕು. ಆ ಅಸ್ತಿವಾರವನ್ನು ಹಾಕಿದ ಬಳಿಕ, ನೀವು ಪ್ರತಿಯೊಂದು ಮುಖ್ಯಾಂಶವನ್ನು ವಿಕಸಿಸುವಾಗ, ನಿಮ್ಮ ಭಾಷಣದ ಮಧ್ಯಭಾಗದಲ್ಲಿ ಹಾಗೂ ಸಮಾಪ್ತಿಯಲ್ಲಿ ಪ್ರಾಯೋಗಿಕ ಅನ್ವಯವನ್ನು ಮಾಡುತ್ತ ಹೋಗಿರಿ.
ಅನ್ವಯವನ್ನು ಮಾಡುವಾಗ, ಬೈಬಲ್ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುವ ವಿಧದಲ್ಲಿ ಅದನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿರಿ. ಇದರ ಅರ್ಥವೇನು? ಅದನ್ನು ಪ್ರೀತಿಪೂರ್ವಕವಾದ ವಿಧದಲ್ಲಿ ಮತ್ತು ಪರಾನುಭೂತಿಯನ್ನು ತೋರಿಸುವ ವಿಧದಲ್ಲಿ ಮಾಡಬೇಕೆಂದೇ. (1 ಪೇತ್ರ 3:8; 1 ಯೋಹಾ. 4:8) ಅಪೊಸ್ತಲ ಪೌಲನು ಥೆಸಲೊನೀಕದಲ್ಲಿ ಕಷ್ಟಕರವಾದ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದಾಗಲೂ, ಅಲ್ಲಿನ ತನ್ನ ಕ್ರೈಸ್ತ ಸಹೋದರ ಸಹೋದರಿಯರ ಆತ್ಮಿಕ ಪ್ರಗತಿಯ ಕುರಿತಾದ ಸಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸಲು ಮರೆಯಲಿಲ್ಲ. ಆ ಸಮಯದಲ್ಲಿ ಚರ್ಚಿಸಲ್ಪಡುತ್ತಿದ್ದ ವಿಷಯದಲ್ಲಿ, ಅವರು ಯಾವುದು ಸರಿಯಾಗಿದೆಯೋ ಅದನ್ನು ಮಾಡಲು ಬಯಸುವರು ಎಂಬ ಭರವಸೆಯನ್ನೂ ಅವನು ವ್ಯಕ್ತಪಡಿಸಿದನು. (1 ಥೆಸ. 4:1-12) ನಮಗೆ ಅನುಕರಿಸಲು ಇದು ಎಷ್ಟು ಉತ್ತಮವಾದ ಮಾದರಿಯಾಗಿದೆ!
ನಿಮ್ಮ ಭಾಷಣವು, ಸುವಾರ್ತೆಯನ್ನು ಇತರರಿಗೆ ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಭಾಗವಹಿಸಲು ಉತ್ತೇಜನ ನೀಡುವಂತಹದ್ದಾಗಿದೆಯೊ? ಆ ಸದವಕಾಶಕ್ಕಾಗಿ ಉತ್ಸಾಹವನ್ನೂ ಗಣ್ಯತಾಭಾವವನ್ನೂ ವರ್ಧಿಸಿರಿ. ಆದರೆ ಇದನ್ನು ಮಾಡುವಾಗ, ವ್ಯಕ್ತಿಗಳು ಇದರಲ್ಲಿ ಭಾಗವಹಿಸಲು ಶಕ್ತರಾಗುವ ಮಟ್ಟವು ಭಿನ್ನವಾಗಿರುತ್ತದೆ, ಮತ್ತು ಬೈಬಲು ಇದನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೂ ಮನಸ್ಸಿನಲ್ಲಿಡಿರಿ. (ಮತ್ತಾ. 13:23) ನಿಮ್ಮ ಸಹೋದರರ ಮೇಲೆ ಅಪರಾಧಿ ಭಾವನೆಗಳನ್ನು ಹೊರಿಸಬೇಡಿ. ಇಬ್ರಿಯ 10:24, ನಾವು “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ” ನಮ್ಮನ್ನು ಪ್ರೋತ್ಸಾಹಿಸುತ್ತದೆ. ನಾವು ಪ್ರೀತಿಯನ್ನು ಉತ್ತೇಜಿಸುವುದಾದರೆ, ಒಳ್ಳೆಯ ಉದ್ದೇಶದಿಂದ ಮಾಡಲ್ಪಡುವ ಕಾರ್ಯಗಳು ಹಿಂಬಾಲಿಸಿ ಬರುತ್ತವೆ. ಅಪ್ಪಣೆ ಕೊಟ್ಟು ಕೆಲಸಮಾಡಿಸುವ ಬದಲು, ‘ನಂಬಿಕೆಯಿಂದ ವಿಧೇಯತ್ವವನ್ನು’ ನಾವು ಪ್ರವರ್ಧಿಸಬೇಕೆಂಬುದೇ ಯೆಹೋವನ ಇಚ್ಛೆಯಾಗಿದೆ ಎಂಬುದನ್ನು ಗ್ರಹಿಸಿರಿ. (ರೋಮಾ. 16:25, 26) ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ, ನಾವು ನಮ್ಮ ಮತ್ತು ನಮ್ಮ ಸಹೋದರರ ನಂಬಿಕೆಯನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ.
ಪ್ರಾಯೋಗಿಕ ಮೌಲ್ಯವನ್ನು ಅರ್ಥಮಾಡಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದು. ನೀವು ಇತರರಿಗೆ ಸಾಕ್ಷಿ ನೀಡುವಾಗ, ಸುವಾರ್ತೆಯ ಪ್ರಾಯೋಗಿಕ ಮೌಲ್ಯವನ್ನು ಎತ್ತಿಹೇಳಲು ತಪ್ಪಬೇಡಿ. ಇದು, ನಿಮ್ಮ ಟೆರಿಟೊರಿಯಲ್ಲಿರುವ ಜನರ ಮನಸ್ಸಿನಲ್ಲಿ ಏನಿದೆಯೆಂಬುದನ್ನು ನೀವು ಪರಿಗಣಿಸುವಂತೆ ಕೇಳಿಕೊಳ್ಳುತ್ತದೆ. ಇದನ್ನು ನೀವು ಹೇಗೆ ಕಂಡುಹಿಡಿಯುವಿರಿ? ರೇಡಿಯೊ ಅಥವಾ ಟೆಲಿವಿಷನ್‌ನಲ್ಲಿ ಬರುವ ವಾರ್ತೆಗಳನ್ನು ಕೇಳಿಸಿಕೊಳ್ಳಿರಿ. ವಾರ್ತಾಪತ್ರಿಕೆಯ ಮುಖಪುಟವನ್ನು ನೋಡಿರಿ. ಅಲ್ಲದೆ, ಜನರನ್ನು ಸಂಭಾಷಣೆಯಲ್ಲಿ ಒಳಗೂಡಿಸಲು ಪ್ರಯತ್ನಿಸಿರಿ ಮತ್ತು ಅವರು ಮಾತಾಡುವಾಗ ಕಿವಿಗೊಡಿರಿ. ಆಗ ಅವರು ತುರ್ತಿನ ಸಮಸ್ಯೆಗಳೊಂದಿಗೆ, ಅಂದರೆ ಉದ್ಯೋಗ ನಷ್ಟ, ಮನೆ ಬಾಡಿಗೆ, ಕಾಯಿಲೆ, ಕುಟುಂಬ ಸದಸ್ಯನೊಬ್ಬನ ಮರಣ, ಪಾತಕದಿಂದ ಅಪಾಯ, ಅಧಿಕಾರಿಯಿಂದ ಮಾಡಲ್ಪಟ್ಟ ಅನ್ಯಾಯ, ವಿವಾಹದಲ್ಲಿ ಒಡಕು, ಯುವ ಮಕ್ಕಳನ್ನು ನಿಯಂತ್ರಿಸುವುದು, ಇತ್ಯಾದಿ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿದ್ದಾರೆಂಬುದನ್ನು ನೀವು ಕಂಡುಹಿಡಿಯಬಹುದು. ಈ ವಿಷಯಗಳಲ್ಲಿ ಬೈಬಲು ಅವರಿಗೆ ಸಹಾಯ ನೀಡಬಲ್ಲದೊ? ಖಂಡಿತವಾಗಿಯೂ ನೀಡಬಲ್ಲದು.
ಒಂದು ಸಂಭಾಷಣೆಯನ್ನು ಪ್ರಾರಂಭಿಸುವಾಗ, ಒಂದು ವಿಷಯವಸ್ತು ನಿಮ್ಮ ಮನಸ್ಸಿನಲ್ಲಿರುವುದು ಸಂಭವನೀಯ. ಆದರೆ ಆ ವ್ಯಕ್ತಿಗೆ ಬೇರೆ ವಿಷಯವು ತುರ್ತಿನ ವೈಯಕ್ತಿಕ ಆಸಕ್ತಿಯ ವಿಷಯವಾಗಿದೆ ಎಂದು ತೋರಿಬರುವುದಾದರೆ, ನಿಮಗೆ ಸಾಧ್ಯವಿರುವಲ್ಲಿ ಅದೇ ವಿಷಯವನ್ನು ಚರ್ಚಿಸಲು ಅಥವಾ ಸಹಾಯಕರವಾದ ಮಾಹಿತಿಯೊಂದಿಗೆ ಮರಳಿ ಬರುತ್ತೇನೆಂದು ಹೇಳಲು ಹಿಂಜರಿಯಬೇಡಿ. ನಾವು ‘ಇತರರ ಕೆಲಸದಲ್ಲಿ ತಲೆಹಾಕುವುದರಿಂದ’ ದೂರವಿರುತ್ತೇವಾದರೂ, ಬೈಬಲು ನೀಡುವಂಥ ಪ್ರಾಯೋಗಿಕ ಸಲಹೆಯನ್ನು ಇತರರೊಂದಿಗೆ ಸಂತೋಷದಿಂದ ಹಂಚಿಕೊಳ್ಳುತ್ತೇವೆ. (2 ಥೆಸ. 3:11) ಜನರ ಮನಸ್ಸಿಗೆ ಅತಿ ಹೆಚ್ಚಾಗಿ ನಾಟುವುದು, ಜನರ ಸ್ವಂತ ಜೀವಿತಗಳ ಮೇಲೆ ಪ್ರಭಾವ ಬೀರುವಂಥ ಬೈಬಲ್ ಸಲಹೆಯೇ ಎಂಬುದು ಸುವ್ಯಕ್ತ.
ನಮ್ಮ ಸಂದೇಶವು ಜನರನ್ನು ವೈಯಕ್ತಿಕವಾಗಿ ಹೇಗೆ ಪ್ರಭಾವಿಸುತ್ತದೆಂಬುದನ್ನು ಅವರು ಮನಗಾಣದಿರುವಲ್ಲಿ, ಅವರು ತಮ್ಮ ಸಂಭಾಷಣೆಯನ್ನು ಬೇಗನೆ ನಿಲ್ಲಿಸಿಬಿಟ್ಟಾರು. ಅವರು ನಮ್ಮನ್ನು ಮಾತಾಡಲು ಬಿಟ್ಟರೂ, ನಮ್ಮ ವಿಷಯವಸ್ತುವಿನ ಪ್ರಾಯೋಗಿಕ ಮೌಲ್ಯವನ್ನು ಅವರಿಗೆ ತೋರಿಸಲು ನಾವು ತಪ್ಪಿಹೋಗುವುದು, ನಮ್ಮ ಸಂದೇಶವು ಅವರ ಜೀವಿತಗಳ ಮೇಲೆ ತೀರ ಕಡಿಮೆ ಪರಿಣಾಮವನ್ನು ಉಂಟುಮಾಡುವುದನ್ನು ಅರ್ಥೈಸುವುದು. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಸಂದೇಶದ ಪ್ರಾಯೋಗಿಕ ಮೌಲ್ಯವನ್ನು ನಾವು ಅವರಿಗೆ ಸ್ಪಷ್ಟಗೊಳಿಸುವಲ್ಲಿ, ನಮ್ಮ ಚರ್ಚೆಯು ಅವರ ಜೀವಿತಗಳಲ್ಲಿ ಬದಲಾವಣೆಯ ತಿರುಗುಬಿಂದು ಆಗಿರಬಲ್ಲದು.
ಬೈಬಲ್ ಅಧ್ಯಯನಗಳನ್ನು ನಡೆಸುವಾಗ, ಪ್ರಾಯೋಗಿಕ ಅನ್ವಯವನ್ನು ಎತ್ತಿ ತೋರಿಸುತ್ತ ಹೋಗಿರಿ. (ಜ್ಞಾನೋ. 4:7) ವಿದ್ಯಾರ್ಥಿಗಳು ಯೆಹೋವನ ಮಾರ್ಗಗಳಲ್ಲಿ ಹೇಗೆ ನಡೆಯಬೇಕೆಂಬುದನ್ನು ತೋರಿಸುವ ಶಾಸ್ತ್ರೀಯ ಸಲಹೆ, ಮೂಲತತ್ತ್ವಗಳು ಮತ್ತು ಮಾದರಿಗಳನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ. ಹಾಗೆ ಮಾಡುವುದರಿಂದ ಬರುವ ಪ್ರಯೋಜನಗಳನ್ನು ಒತ್ತಿಹೇಳಿರಿ. (ಯೆಶಾ. 48:17, 18) ಇದು ವಿದ್ಯಾರ್ಥಿಗಳನ್ನು ಅವರು ತಮ್ಮ ಜೀವಿತಗಳಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವಂತೆ ಪ್ರೇರಿಸುವುದು. ಅವರಲ್ಲಿ ಯೆಹೋವನಿಗಾಗಿ ಪ್ರೀತಿಯನ್ನು ಮತ್ತು ಆತನನ್ನು ಮೆಚ್ಚಿಸುವ ಅಪೇಕ್ಷೆಯನ್ನು ಬೆಳೆಸಿರಿ, ಮತ್ತು ದೇವರ ವಾಕ್ಯದ ಸಲಹೆಯನ್ನು ಅನ್ವಯಿಸಲು ಬೇಕಾಗಿರುವ ಪ್ರಚೋದನೆಯು ಅವರ ಆಂತರ್ಯದಿಂದ ಬರುವಂತೆ ಬಿಡಿರಿ.