ಅಧ್ಯಯನ ಲೇಖನ 21
ಗೀತೆ 21 ದೇವರ ಸೇವೆಗೆ ಆದ್ಯತೆ ನೀಡೋಣ
ಯಾವಾಗ್ಲೂ ಇರೋ ಪಟ್ಟಣಕ್ಕಾಗಿ ಕಾಯ್ತಾ ಇರಿ
“ಮುಂದೆ ಬರೋ ಪಟ್ಟಣಕ್ಕಾಗಿ ಕಾತುರದಿಂದ ಕಾಯ್ತಾ ಇದ್ದೀವಿ.”—ಇಬ್ರಿ. 13:14.
ಈ ಲೇಖನದಲ್ಲಿ ಏನಿದೆ?
ಇಬ್ರಿಯ 13ನೇ ಅಧ್ಯಾಯದಲ್ಲಿರೋ ವಿಷ್ಯಗಳಿಂದ ನಮಗೆ ಈಗ ಮತ್ತೆ ಮುಂದೆ ಬರೋ ದಿನಗಳಲ್ಲಿ ಏನು ಪ್ರಯೋಜ್ನ ಇದೆ ಅಂತ ನೋಡೋಣ.
1. ಒಂದನೇ ಶತಮಾನದಲ್ಲಿ ಯೆರೂಸಲೇಮಿಗೆ ಏನಾಗುತ್ತೆ ಅಂತ ಯೇಸು ಭವಿಷ್ಯವಾಣಿ ಹೇಳಿದನು?
ಯೇಸು ಸಾಯೋ ಸ್ವಲ್ಪ ದಿನಗಳ ಮುಂಚೆ ಒಂದು ಭವಿಷ್ಯವಾಣಿ ಹೇಳಿದನು. ಅದು ಮೊದಲನೇ ಸಲ ನೆರವೇರಿದ್ದು ಯೆರೂಸಲೇಮ್ ಪಟ್ಟಣ ಮತ್ತು ದೇವಾಲಯ ನಾಶ ಆದಾಗ. ಯೇಸು “ಯೆರೂಸಲೇಮ್ ಪಟ್ಟಣಕ್ಕೆ ಶತ್ರು ಸೈನ್ಯ ಮುತ್ತಿಗೆ” ಹಾಕುತ್ತೆ ಅಂತ ಭವಿಷ್ಯವಾಣಿ ಹೇಳಿದನು. (ಲೂಕ 21:20) ಈ ತರ ಶತ್ರು ಸೈನ್ಯ ಮುತ್ತಿಗೆ ಹಾಕಿದ್ದನ್ನ ನೋಡಿದ ತಕ್ಷಣ ಅಲ್ಲಿಂದ ಓಡಿ ಹೋಗಬೇಕು ಅಂತಾನೂ ತನ್ನ ಶಿಷ್ಯರಿಗೆ ಹೇಳಿದನು. ಯೇಸು ಹೇಳಿದ ತರನೇ ರೋಮನ್ ಸೈನ್ಯ ಯೆರೂಸಲೇಮಿಗೆ ಒಂದಿನ ಮುತ್ತಿಗೆ ಹಾಕ್ತು.—ಲೂಕ 21:21, 22.
2. ಪೌಲ ಯೂದಾಯ ಮತ್ತು ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ಏನನ್ನ ನೆನಪಿಸಿದ?
2 ರೋಮನ್ ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕೋ ಸ್ವಲ್ಪ ವರ್ಷಗಳ ಮುಂಚೆ ಪೌಲ ಒಂದು ಪತ್ರ ಬರೀತಾನೆ. ಅದನ್ನ ನಾವೀಗ ಇಬ್ರಿಯ ಪತ್ರ ಅಂತ ಕರೀತೀವಿ. ಪೌಲ ಆ ಪತ್ರದಲ್ಲಿ, ಯೂದಾಯ ಮತ್ತು ಯೆರೂಸಲೇಮಿನ ಕ್ರೈಸ್ತರಿಗೆ ಒಂದು ಮುಖ್ಯ ವಿಷ್ಯನ ನೆನಪಿಸಿದ. ಅದೇನಂದ್ರೆ ಯೆರೂಸಲೇಮ್ ಇನ್ನೇನು ನಾಶ ಆಗುತ್ತೆ, ಆಗ ಕ್ರೈಸ್ತರು ಜೀವ ಉಳಿಸ್ಕೊಬೇಕಂದ್ರೆ ತಮ್ಮ ಮನೆ, ಆಸ್ತಿಪಾಸ್ತಿ, ವ್ಯಾಪಾರನೆಲ್ಲ ಬಿಟ್ಟು ಓಡಿಹೋಗೋಕೆ ರೆಡಿ ಇರಬೇಕು ಅಂತ. ಅದಕ್ಕೆ ಪೌಲ ಆ ಪಟ್ಟಣದ ಬಗ್ಗೆ “ಯಾವಾಗ್ಲೂ ಇರೋ ಪಟ್ಟಣ ಇಲ್ಲಿ ನಮಗಿಲ್ಲ” ಅಂತ ಹೇಳಿದ. “ಆದ್ರೆ ಮುಂದೆ ಬರೋ ಪಟ್ಟಣಕ್ಕಾಗಿ ಕಾತುರದಿಂದ ಕಾಯ್ತಾ ಇದ್ದೀವಿ” ಅಂತಾನೂ ಹೇಳಿದ.—ಇಬ್ರಿ. 13:14.
3. (ಎ) “ನಿಜವಾದ ಅಡಿಪಾಯ ಇರೋ ಪಟ್ಟಣ” ಯಾವುದು? (ಬಿ) ನಾವ್ಯಾಕೆ ಅದಕ್ಕೋಸ್ಕರ ಕಾಯಬೇಕು?
3 ಯೆರೂಸಲೇಮ್ ಮತ್ತು ಯೂದಾಯನ ಬಿಟ್ಟು ಹೋಗಬೇಕು ಅಂತ ನಿರ್ಧಾರ ಮಾಡಿದ ಕ್ರೈಸ್ತರಿಗೆ ಅಲ್ಲಿದ್ದ ಜನ ಅವಮಾನ ಮಾಡಿರಬಹುದು, ಅವ್ರ ಬಗ್ಗೆ ಆಡ್ಕೊಂಡು ನಗಾಡಿರಬಹುದು. ಆದ್ರೆ ಅವರು ಅದನ್ನೆಲ್ಲ ಲೆಕ್ಕಕ್ಕೆ ತಗೊಳ್ಳದೆ ಊರನ್ನ ಬಿಟ್ಟು ಬಂದ್ರು. ಅದಕ್ಕೇ ತಮ್ಮ ಜೀವ ಉಳಿಸ್ಕೊಂಡ್ರು. ಇವತ್ತು ನಾವು ನಮ್ಮ ಭದ್ರತೆಗೋಸ್ಕರ ಹಣ ಆಸ್ತಿ ಮೇಲೆ, ಮನುಷ್ಯರ ಸರ್ಕಾರದ ಮೇಲೆ ನಂಬಿಕೆ ಇಡದೇ ಇರೋದನ್ನ ನೋಡಿದಾಗ ಜನ ನಮ್ಮನ್ನೂ ಆಡ್ಕೊಂಡು ನಗ್ತಾರೆ. ನಾವ್ಯಾಕೆ ಇದ್ರ ಮೇಲೆ ನಂಬಿಕೆ ಇಡಲ್ಲ? ಯಾಕಂದ್ರೆ ಈ ಲೋಕ ಬೇಗ ನಾಶ ಆಗುತ್ತೆ ಅಂತ ನಮಗೆ ಗೊತ್ತು. ಅದಕ್ಕೆ ನಾವು “ಮುಂದೆ ಬರೋ” ‘ನಿಜವಾದ ಅಡಿಪಾಯ ಇರೋ ಪಟ್ಟಣದ’ ಮೇಲೆ ನಂಬಿಕೆ ಇಟ್ಟಿದ್ದೀವಿ. ಆ ಪಟ್ಟಣನೇ ದೇವರ ಆಳ್ವಿಕೆ!a (ಇಬ್ರಿ. 11:10; ಮತ್ತಾ. 6:33) ನಾವು ಈ ಲೇಖನದಲ್ಲಿ (1) “ಮುಂದೆ ಬರೋ ಪಟ್ಟಣಕ್ಕಾಗಿ” ಕಾಯೋಕೆ ಒಂದನೇ ಶತಮಾನದ ಕ್ರೈಸ್ತರಿಗೆ ಪೌಲ ಯಾವ ಸಲಹೆ ಕೊಟ್ಟ? (2) ಯೆರೂಸಲೇಮ್ ನಾಶನವನ್ನ ಪಾರಾಗೋಕೆ ಪೌಲ ಅವ್ರನ್ನ ಹೇಗೆ ರೆಡಿ ಮಾಡಿದ? (3) ಪೌಲ ಕೊಟ್ಟ ಸಲಹೆಯಿಂದ ನಮಗೇನು ಸಹಾಯ ಆಗುತ್ತೆ? ಅಂತ ನೋಡೋಣ.
ಯೆಹೋವ ನಿಮ್ಮ ಕೈ ಬಿಡಲ್ಲ!
4. ಕ್ರೈಸ್ತರಿಗೆ ಯೆರೂಸಲೇಮೇ ಪ್ರಪಂಚ ಆಗಿಬಿಟ್ಟಿತ್ತು ಅಂತ ಯಾಕೆ ಹೇಳಬಹುದು?
4 ಆಗಿನ ಕ್ರೈಸ್ತರಿಗೆ ಯೆರೂಸಲೇಮ್ ಪಟ್ಟಣನೇ ಅವ್ರ ಪ್ರಪಂಚ ಆಗಿಬಿಟ್ಟಿತ್ತು. ಯಾಕಂದ್ರೆ ಕ್ರಿಸ್ತ ಶಕ 33ರಲ್ಲಿ ಕ್ರೈಸ್ತ ಸಭೆ ಹುಟ್ಟಿದ್ದೇ ಇಲ್ಲಿ. ಆಡಳಿತ ಮಂಡಲಿ ಕೆಲ್ಸ ಮಾಡ್ತಿದ್ದಿದ್ದೂ ಇಲ್ಲಿಂದನೇ. ಅಷ್ಟೇ ಅಲ್ಲ, ಎಷ್ಟೋ ಕ್ರೈಸ್ತರು ಸ್ವಂತ ಮನೆ ಮಾಡ್ಕೊಂಡಿದ್ದೂ ಆಸ್ತಿಪಾಸ್ತಿನೆಲ್ಲ ಕೂಡಿಸಿಟ್ಟಿದ್ದೂ ಇಲ್ಲೇ. ಹೀಗಿದ್ರೂ ಅವರು ಯೇಸು ಹೇಳಿದ್ದನ್ನ ಮಾಡ್ಲೇಬೇಕಿತ್ತು. ಅವರು ಯೆರೂಸಲೇಮನ್ನ, ಇಡೀ ಯೂದಾಯನೇ ಬಿಟ್ಟು ಹೋಗಬೇಕಿತ್ತು.—ಮತ್ತಾ. 24:16.
5. ಕ್ರೈಸ್ತರು ಯೆರೂಸಲೇಮನ್ನ ಬಿಟ್ಟೋಗೋಕೆ ಪೌಲ ಅವ್ರ ಮನಸ್ಸನ್ನ ಹೇಗೆ ರೆಡಿ ಮಾಡಿದ?
5 ಯೆರೂಸಲೇಮನ್ನ ಬಿಟ್ಟು ಹೋಗೋಕೆ ಅಲ್ಲಿದ್ದ ಕ್ರೈಸ್ತರು ರೆಡಿ ಆಗಿರಬೇಕಿತ್ತು. ಪೌಲ ಅವ್ರ ಮನಸ್ಸನ್ನ ಹೇಗೆ ರೆಡಿ ಮಾಡಿದ ಗೊತ್ತಾ? ಯೆರೂಸಲೇಮ್ ಈಗ ತುಂಬ ಬದಲಾಗಿದೆ, ಯೆಹೋವನ ದೃಷ್ಟಿಲಿ ಅಲ್ಲಿದ್ದ ದೇವಾಲಯ, ಪುರೋಹಿತರು, ಜನ ಕೊಡ್ತಿದ್ದ ಬಲಿಗಳು ಪವಿತ್ರವಾಗಿಲ್ಲ ಅಂತ ಅವನು ನೆನಪಿಸಿದ. (ಇಬ್ರಿ. 8:13) ಅಷ್ಟೇ ಅಲ್ಲ, ಈ ಪಟ್ಟಣದಲ್ಲಿದ್ದ ಎಷ್ಟೋ ಜನ ಮೆಸ್ಸೀಯನನ್ನ ನಂಬಲೇ ಇಲ್ಲ. ಹಾಗಾಗಿ ಈ ದೇವಾಲಯದಲ್ಲಿ ನಡೀತಿದ್ದ ಆರಾಧನೆನ ಯೆಹೋವ ಒಪ್ತಿಲ್ಲ. ಹಾಗಾಗಿ ಈ ಆಲಯ ಇನ್ನೇನು ನಾಶ ಆಗುತ್ತೆ ಅಂತ ಪೌಲ ಆ ಕ್ರೈಸ್ತರಿಗೆ ಮನವರಿಕೆ ಮಾಡಿದ.—ಲೂಕ 13:34, 35.
6. ಇಬ್ರಿಯ 13:5, 6ರಲ್ಲಿರೋ ಮಾತುಗಳನ್ನ ಪೌಲ ಸರಿಯಾದ ಸಮಯಕ್ಕೆ ಹೇಳಿದ ಅಂತ ಯಾಕೆ ಹೇಳಬಹುದು?
6 ಪೌಲ ಈ ಪತ್ರ ಬರಿಯೋಷ್ಟರಲ್ಲಿ ಯೆರೂಸಲೇಮ್ ತುಂಬ ಬೆಳೆದುಬಿಟ್ಟಿತ್ತು. ಆಗಿನ ಕಾಲದ ಒಬ್ಬ ರೋಮನ್ ಲೇಖಕ ಯೆರೂಸಲೇಮ್ ಬಗ್ಗೆ ಮಾತಾಡ್ತಾ “ಇಂಥ ಪಟ್ಟಣ ಸುತ್ತಮುತ್ತ ಎಲ್ಲಿ ಹುಡುಕಿದ್ರೂ ಸಿಗಲ್ಲ” ಅಂತ ಹೇಳಿದ. ಇಲ್ಲಿಗೆ ಬೇರೆಬೇರೆ ದೇಶಗಳಿಂದ, ಊರುಗಳಿಂದ ಯೆಹೂದ್ಯರು ಹಬ್ಬಗಳಿಗೋಸ್ಕರ ಪ್ರತಿ ವರ್ಷ ಬರ್ತಿದ್ರು. ಆಗ ಅಲ್ಲಿ ತುಂಬ ವ್ಯಾಪಾರ ಆಗ್ತಿತ್ತು, ಹಣ ಹರಿದು ಬರ್ತಿತ್ತು. ಇದ್ರಿಂದ ಅಲ್ಲಿದ್ದ ಕೆಲವು ಕ್ರೈಸ್ತರು ಚೆನ್ನಾಗಿ ದುಡ್ಡು ಮಾಡ್ಕೊಂಡಿರಬಹುದು. ಅದಕ್ಕೆ ಅನಿಸುತ್ತೆ ಪೌಲ, “ಹಣದಾಸೆ ಇಲ್ಲದೆ ಜೀವನ ಮಾಡಿ. ಇರೋದ್ರಲ್ಲೇ ತೃಪ್ತಿಪಡಿ” ಅಂತ ಹೇಳಿದ್ದು. ಇದನ್ನ ಹೇಳಿದ್ಮೇಲೆ ಪೌಲ, ‘ನೀವು ಈ ತರ ಹಣದ ಹಿಂದೆ ಹೋಗದೆ ಇದ್ರೆ ಯೆಹೋವನೇ ನಿಮ್ಮನ್ನ ಕಾಪಾಡ್ತಾನೆ’ ಅಂದ. ಅದಕ್ಕೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ಯೆಹೋವನೇ ಮಾತು ಕೊಟ್ಟಿದ್ದಾನೆ ಅಂತ ನೆನಪಿಸಿದ. (ಇಬ್ರಿಯ 13:5, 6 ಓದಿ; ಧರ್ಮೋ. 31:6; ಕೀರ್ತ. 118:6) ಯೂದಾಯ ಮತ್ತು ಯೆರೂಸಲೇಮ್ನಲ್ಲಿದ್ದ ಕ್ರೈಸ್ತರಿಗೆ ಈ ಭರವಸೆಯ ಮಾತುಗಳು ಬೇಕಾಗಿತ್ತು. ಯಾಕೆ? ಯಾಕಂದ್ರೆ ಪೌಲ ಪತ್ರ ಬರೆದು ಸ್ವಲ್ಪದ್ರಲ್ಲೇ ಅವರು ತಮ್ಮ ಮನೇನ, ಆಸ್ತಿಪಾಸ್ತಿನ, ವ್ಯಾಪಾರನೆಲ್ಲಾನೂ ಬಿಟ್ಟು ಓಡಿ ಹೋಗಬೇಕಿತ್ತು. ಗೊತ್ತು ಗುರಿ ಇಲ್ಲದೇ ಇರೋ ಜಾಗಕ್ಕೆ ಹೋಗಿ ಹೊಸ ಜೀವನ ಶುರು ಮಾಡಬೇಕಿತ್ತು. ಇದು ಅಷ್ಟು ಸುಲಭ ಆಗಿರಲಿಲ್ಲ.
7. ಯೆಹೋವನ ಮೇಲೆ ನಂಬಿಕೆ ಇಡೋದನ್ನ ನಾವು ಯಾಕೆ ಈಗ್ಲೇ ಕಲಿಬೇಕು?
7 ನಮಗಿರೋ ಪಾಠ: ಮುಂದೆ ಏನಾಗುತ್ತೆ? “ಮಹಾ ಸಂಕಟ” ಶುರು ಆಗುತ್ತೆ, ಆಗ ಸೈತಾನನ ಈ ಲೋಕ ನಾಶ ಆಗುತ್ತೆ. (ಮತ್ತಾ. 24:21) ಅದಕ್ಕೆ ನಾವುನೂ ಒಂದನೇ ಶತಮಾನದ ಕ್ರೈಸ್ತರ ತರ ರೆಡಿ ಇರಬೇಕು, ಎಚ್ಚರವಾಗಿರಬೇಕು. (ಲೂಕ 21:34-36) ಮಹಾ ಸಂಕಟದ ಸಮಯದಲ್ಲಿ ನಾವು ಅವ್ರ ತರನೇ ನಮ್ಮ ಮನೆ, ಆಸ್ತಿಪಾಸ್ತಿ ಎಲ್ಲಾನೂ ಬಿಟ್ಟು ಹೋಗಬೇಕಾಗಬಹುದು. ನಮ್ ಪರಿಸ್ಥಿತಿ ಏನೇ ಆದ್ರೂ ಯೆಹೋವ ನಮ್ಮ ಕೈ ಬಿಡಲ್ಲ. ಆತನು ನಮ್ಮನ್ನ ಖಂಡಿತ ನೋಡ್ಕೊಳ್ತಾನೆ ಅಂತ ನಾವು ನಂಬಬೇಕು. ಮಹಾ ಸಂಕಟ ಶುರುವಾಗೋ ಮುಂಚೆ ಅಂದ್ರೆ ಈಗ್ಲೂ ನಾವು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸ್ಬೇಕು. ಅದಕ್ಕೆ ನಾವು ನಮ್ಮನ್ನೇ ‘ನಾನು ಜೀವನದಲ್ಲಿ ಇಡ್ತಿರೋ ಗುರಿಗಳು, ಮಾಡ್ತಿರೋ ನಿರ್ಧಾರ ಹಣ-ಆಸ್ತಿ ಮೇಲೆ ನಂಬಿಕೆ ಇಟ್ಟಿದ್ದೀನಿ ಅಂತ ತೋರಿಸ್ತಿದ್ಯಾ ಅಥವಾ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದೀನಿ ಅಂತ ತೋರಿಸ್ತಿದ್ಯಾ?’ ಅಂತ ಕೇಳ್ಕೊಬೇಕು. (1 ತಿಮೊ. 6:17) ಇಲ್ಲಿವರೆಗೂ ನಾವು ಮಹಾ ಸಂಕಟನ ಪಾರಾಗೋಕೆ ಎಚ್ಚರವಾಗಿರಬೇಕು, ರೆಡಿ ಆಗಿರಬೇಕು ಅಂತ ಒಂದನೇ ಶತಮಾನದ ಕ್ರೈಸ್ತರಿಂದ ಕಲಿತ್ವಿ. ಮಹಾ ಸಂಕಟದ ಸಮಯದಲ್ಲಿ ಏನೆಲ್ಲಾ ಆಗುತ್ತೆ, ಆಗ ಪರಿಸ್ಥಿತಿ ಎಷ್ಟೆಲ್ಲಾ ಹದಗೆಡುತ್ತೆ ಅಂತ ನಮಗ್ಯಾರಿಗೂ ಗೊತ್ತಿಲ್ಲ! ಹಾಗಾದ್ರೆ ಮಹಾ ಸಂಕಟ ಶುರು ಆದಾಗ ನಾವೇನು ಮಾಡಬೇಕು ಅಂತ ನಮಗೆ ಹೇಗೆ ಗೊತ್ತಾಗುತ್ತೆ?
ಹಿರಿಯರ ಮಾತು ಕೇಳಿ
8. ಯೇಸು ತನ್ನ ಶಿಷ್ಯರಿಗೆ ಏನು ಮಾಡಬೇಕು ಅಂತ ಹೇಳಿದನು?
8 ಪೌಲ ಇಬ್ರಿಯರಿಗೆ ಪತ್ರ ಬರೆದು ಸ್ವಲ್ಪ ವರ್ಷ ಆದ್ಮೇಲೆ ಯೆರೂಸಲೇಮನ್ನ ರೋಮ್ ಸೈನ್ಯ ಸುತ್ತುವರಿತು. ಇದನ್ನ ನೋಡಿದಾಗ ಅಲ್ಲಿದ್ದ ಕ್ರೈಸ್ತರಿಗೆ ‘ಇನ್ನೇನು ಯೆರೂಸಲೇಮ್ ನಾಶ ಆಗಿಬಿಡುತ್ತೆ. ನಾವೀಗ್ಲೇ ಇಲ್ಲಿಂದ ಜಾಗ ಖಾಲಿ ಮಾಡಬೇಕು’ ಅಂತ ಅರ್ಥ ಆಯ್ತು. (ಮತ್ತಾ. 24:3; ಲೂಕ 21:20, 24) ಆದ್ರೆ ಅವರು ಎಲ್ಲಿಗೆ ಹೋಗಬೇಕಿತ್ತು? ಯೇಸು ಅವ್ರಿಗೆ ಹೇಳಿದ್ದು “ಯೂದಾಯದಲ್ಲಿ ಇರೋರು ಬೆಟ್ಟಗಳಿಗೆ ಓಡಿಹೋಗಬೇಕು” ಅಂತ. (ಲೂಕ 21:21) ಆದ್ರೆ ಸುತ್ತಮುತ್ತ ಎಷ್ಟೊಂದು ಬೆಟ್ಟಗಳಿತ್ತು. ಅವರು ಯಾವ ಬೆಟ್ಟಕ್ಕೆ ಹೋಗ್ಬೇಕು ಅಂತ ಯೇಸು ನೇರವಾಗಿ ಹೇಳಿರಲಿಲ್ಲ. ಅಂದ್ಮೇಲೆ ಅವರು ಯಾವ ಬೆಟ್ಟಕ್ಕೆ ಅಂತ ಹೋಗ್ತಿದ್ರು?
9. ಯಾವ ಬೆಟ್ಟಗಳಿಗೆ ಓಡಿ ಹೋಗಬೇಕು ಅನ್ನೋ ವಿಷ್ಯದಲ್ಲಿ ಕ್ರೈಸ್ತರಿಗೆ ಯಾಕೆ ಕನ್ಫ್ಯೂಸ್ ಆಗಿರಬಹುದು? (ಮ್ಯಾಪ್ ನೋಡಿ.)
9 ಮೊದ್ಲು ಯೆರೂಸಲೇಮಿನ ಸುತ್ತಮುತ್ತ ಯಾವೆಲ್ಲ ಬೆಟ್ಟಗಳಿತ್ತು ಅಂತ ನೋಡೋಣ. ಸಮಾರ್ಯದ ಬೆಟ್ಟಗಳು, ಗಲಿಲಾಯದ ಬೆಟ್ಟಗಳು, ಹೆರ್ಮೋನ್ ಬೆಟ್ಟ, ಲೆಬನೋನ್ ಬೆಟ್ಟಗಳು, ಅಷ್ಟೇ ಅಲ್ಲ, ಯೋರ್ದನ್ ನದಿ ಸುತ್ತಮುತ್ತ ಎಷ್ಟೊಂದು ಬೆಟ್ಟಗಳಿತ್ತು. (ಮ್ಯಾಪ್ ನೋಡಿ.) ಈ ಬೆಟ್ಟಗಳಲ್ಲಿದ್ದ ಕೆಲವು ಪಟ್ಟಣಗಳು ತುಂಬ ಸುರಕ್ಷಿತ ಸ್ಥಳ ಅಂತ ಅವ್ರಿಗೆ ಅನಿಸಿರಬಹುದು. ಉದಾಹರಣೆಗೆ, ಗಾಮ್ಲ ಪಟ್ಟಣದ ಬಗ್ಗೆ ನೋಡಿ. ಇದು ಒಂದು ಬೆಟ್ಟದ ತುತ್ತ ತುದಿಯಲ್ಲಿತ್ತು. ಅಲ್ಲಿಗೆ ಹೋಗೋದು ತುಂಬ ಕಷ್ಟ. ಆದ್ರೆ ಕೆಲವು ಯೆಹೂದ್ಯರಿಗೆ ‘ಇಲ್ಲಿಗೆ ಹೋಗಿಬಿಟ್ರೆ ನಮ್ಮ ಜೀವ ಉಳಿಯುತ್ತೆ. ಇದು ಸುರಕ್ಷಿತವಾದ ಸ್ಥಳ’ ಅಂತ ಅನಿಸ್ತು. ಇದು ನಿಜಾನಾ? ಗಾಮ್ಲ ಪಟ್ಟಣಕ್ಕೆ ಏನಾಯ್ತು ಗೊತ್ತಾ? ಅಲ್ಲಿಗೂ ರೋಮನ್ ಸೈನಿಕರು ಬಂದು ಅದನ್ನ ವಶ ಮಾಡ್ಕೊಂಡು, ಅಲ್ಲಿ ವಾಸ ಮಾಡ್ತಿದ್ದ ಎಷ್ಟೋ ಜನ್ರನ್ನ ಕೊಂದು ಹಾಕಿಬಿಟ್ರು.b
ಕ್ರೈಸ್ತರಿಗೆ ಓಡಿ ಹೋಗೋಕೆ ತುಂಬ ಬೆಟ್ಟಗಳಿತ್ತು, ಆದ್ರೆ ಎಲ್ಲಾ ಬೆಟ್ಟಗಳೂ ಸುರಕ್ಷಿತವಾಗಿರಲಿಲ್ಲ (ಪ್ಯಾರ 9 ನೋಡಿ)
10-11. (ಎ) ಯೆಹೋವ ಆಗಿನ ಕ್ರೈಸ್ತರಿಗೆ ಹೇಗೆ ನಿರ್ದೇಶನ ಕೊಟ್ಟಿರಬಹುದು? (ಇಬ್ರಿಯ 13:7, 17) (ಬಿ) ಕ್ರೈಸ್ತರು ಹಿರಿಯರ ಮಾತು ಕೇಳಿದ್ರಿಂದ ಏನಾಯ್ತು? (ಚಿತ್ರ ನೋಡಿ.)
10 ಅಲ್ಲಿದ್ದ ಕ್ರೈಸ್ತರು ಎಲ್ಲಿಗೆ ಹೋಗಬೇಕು ಅಂತ ಯೆರೂಸಲೇಮಲ್ಲಿದ್ದ ಹಿರಿಯರ ಮೂಲಕ ಯೆಹೋವ ನಿರ್ದೇಶನ ಕೊಟ್ಟನು ಅಂತ ಅನಿಸುತ್ತೆ. ಇದ್ರ ಬಗ್ಗೆ ಆಮೇಲೆ ಯುಸೀಬಿಯಸ್ ಅನ್ನೋ ಒಬ್ಬ ಇತಿಹಾಸಗಾರ ಹೀಗೆ ಹೇಳಿದ್ದಾನೆ, “ಯೆರೂಸಲೇಮಲ್ಲಿದ್ದ ಸಭೆನ ನೋಡ್ಕೊಳ್ತಿದ್ದವರ ಮೂಲಕ ದೇವರು ಅಲ್ಲಿದ್ದ ಕ್ರೈಸ್ತರಿಗೆ ಒಂದು ನಿರ್ದೇಶನ ಕೊಟ್ಟನು. ಆ ನಿರ್ದೇಶನದಲ್ಲಿ . . . ಯುದ್ಧ ಶುರುವಾಗೋ ಮುಂಚೆ ಯೆರೂಸಲೇಮನ್ನ ಬಿಟ್ಟು ಪೆರಿಯದಲ್ಲಿದ್ದ ಪೆಲ ಅನ್ನೋ ಪಟ್ಟಣಕ್ಕೆ ಓಡಿ ಹೋಗಬೇಕು ಅಂತ ಇತ್ತು.” ಪೆಲ ಪಟ್ಟಣ ಒಂದು ಒಳ್ಳೇ ಜಾಗ ಆಗಿತ್ತು ಅಂತ ಅನಿಸುತ್ತೆ. ಯಾಕಂದ್ರೆ ಇದು ಯೆರೂಸಲೇಮಿಂದ ಅಷ್ಟೇನೂ ದೂರ ಇರಲಿಲ್ಲ. ಬೇರೆ ಬೆಟ್ಟಗಳಿಗೆ ಹೋಲಿಸಿದ್ರೆ ಕ್ರೈಸ್ತರು ಇಲ್ಲಿಗೆ ಹೋಗೋದು ಸುಲಭ ಆಗಿತ್ತು. ಅಷ್ಟೇ ಅಲ್ಲ ಪೆಲದಲ್ಲಿದ್ದ ಎಷ್ಟೊಂದು ಜನ ಯೆಹೂದ್ಯರಾಗಿರಲಿಲ್ಲ. ಹಾಗಾಗಿ ಅವರು ರೋಮ್ ಸೈನ್ಯದ ಜೊತೆ ಯುದ್ಧ ಮಾಡೋಕೆ ಹೋಗ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಪೆಲ ಒಂದು ಸುರಕ್ಷಿತವಾದ ಸ್ಥಳ ಆಗಿತ್ತು ಅಂತ ಹೇಳಬಹುದು.—ಮ್ಯಾಪ್ ನೋಡಿ.
11 ಪೌಲ ಕ್ರೈಸ್ತರಿಗೆ “ಮುಂದೆ ನಿಂತು ನಿಮ್ಮನ್ನ ನಡಿಸುವವ್ರ ಮಾತನ್ನ ಕೇಳಿ” ಅಂತ ಹೇಳಿದ್ದ. (ಇಬ್ರಿಯ 13:7, 17 ಓದಿ.) ಕ್ರೈಸ್ತರು ಈ ಸಲಹೆನ ಪಾಲಿಸಿದ್ರಿಂದ ಬೆಟ್ಟಗಳಿಗೆ ಅಂದ್ರೆ ಪೆಲ ಅನ್ನೋ ಪಟ್ಟಣಕ್ಕೆ ಓಡಿ ಹೋದ್ರು. ಹೀಗೆ ತಮ್ಮ ಜೀವಾನ ಉಳಿಸ್ಕೊಂಡ್ರು. “ನಿಜವಾದ ಅಡಿಪಾಯ ಇರೋ ಪಟ್ಟಣಕ್ಕಾಗಿ” ಅಂದ್ರೆ ದೇವರ ಆಳ್ವಿಕೆಗಾಗಿ ಕಾಯ್ತಿದ್ದೀವಿ ಅಂತ ತೋರಿಸ್ಕೊಟ್ರು. ಯಾರೆಲ್ಲ ಈ ಆಳ್ವಿಕೆ ಮೇಲೆ ನಂಬಿಕೆ ಇಟ್ಟಿದ್ದಾರೋ ಅವ್ರನ್ನ ಯೆಹೋವ ಯಾವತ್ತೂ ಕೈಬಿಟ್ಟಿಲ್ಲ ಅಂತ ಇತಿಹಾಸ ತೋರಿಸುತ್ತೆ.—ಇಬ್ರಿ. 11:10.
ಪೆಲ ಪಟ್ಟಣ ಕ್ರೈಸ್ತರಿಗೆ ಹತ್ರನೂ ಇತ್ತು, ಸುರಕ್ಷಿತವಾಗೂ ಇತ್ತು (ಪ್ಯಾರ 10-11 ನೋಡಿ)
12-13. ಯೆಹೋವ ತನ್ನ ಜನ್ರಿಗೆ ಕಷ್ಟದ ಸಮಯದಲ್ಲಿ ಹೇಗೆ ನಿರ್ದೇಶನ ಕೊಟ್ಟಿದ್ದಾನೆ?
12 ನಮಗಿರೋ ಪಾಠ: ಇವತ್ತು ಯೆಹೋವ ತನ್ನ ಜನ್ರು ಏನು ಮಾಡಬೇಕು ಅಂತ ಹಿರಿಯರ ಮೂಲಕ ನಿರ್ದೇಶನ ಕೊಡ್ತಿದ್ದಾನೆ. ಹಿಂದೆನೂ ತನ್ನ ಸೇವಕರಿಗೆ ಕಷ್ಟಗಳು ಬಂದಾಗ ಕುರುಬರ ತರ ದಾರಿ ತೋರಿಸೋಕೆ ಯೆಹೋವ ತನ್ನ ಎಷ್ಟೋ ನಂಬಿಗಸ್ತ ಸೇವಕರನ್ನ ಬಳಸಿದ್ರ ಬಗ್ಗೆ ಬೈಬಲಲ್ಲಿದೆ. (ಧರ್ಮೋ. 31:23; ಕೀರ್ತ. 77:20) ಇವತ್ತೂ ಯೆಹೋವ ಅದನ್ನೇ ಮಾಡ್ತಿದ್ದಾನೆ ಅನ್ನೋದಕ್ಕೆ ಎಷ್ಟೊಂದು ಉದಾಹರಣೆ ಇವೆ. ಅದ್ರಲ್ಲಿ ಒಂದನ್ನ ಈಗ ನಾವು ನೋಡೋಣ.
13 ಕೊರೊನಾ ಸಮಯದಲ್ಲಿ ಸಂಘಟನೆಯನ್ನ ಮುಂದೆ ನಿಂತು ನಡೆಸ್ತಿರೋ ಸಹೋದರರು ಹಿರಿಯರಿಗೆ ಬೇಕಾದ ನಿರ್ದೇಶನಗಳನ್ನ ಕೊಟ್ರು. ಆದ್ರೆ ಆ ಟೈಮಲ್ಲಿ ಲೋಕದಲ್ಲಿರೋ ಜನ್ರಿಗೆ ದಿಕ್ಕೇ ತೋಚಲಿಲ್ಲ. ಆದ್ರೆ ಯೆಹೋವ ಕೂಟಗಳನ್ನ ನಡಿಸೋಕೆ ನಮಗೆಲ್ಲ ಹೊಸ ದಿಕ್ಕನ್ನ ತೋರಿಸಿದನು. ಕೊರೊನಾ ಶುರುವಾದ ಕೆಲವೇ ತಿಂಗಳಲ್ಲೇ 500ಕ್ಕಿಂತ ಜಾಸ್ತಿ ಭಾಷೆಗಳಲ್ಲಿ ಇಂಟರ್ನೆಟ್ ಮೂಲಕ, ಟಿವಿ ಮತ್ತು ರೇಡಿಯೋ ಮೂಲಕ ನಾವು ಅಧಿವೇಶನನ ನಡಿಸೋಕಾಯ್ತು. ಕೊರೊನಾ ಟೈಮಲ್ಲಿ ಲೋಕದಲ್ಲಿ ಎಷ್ಟೋ ಕೆಲಸಗಳು ನಿಂತು ಹೋದ್ರೂ ಯೆಹೋವ ನಮಗೆ ಕೊಡ್ತಿದ್ದ ನಿರ್ದೇಶನಗಳು ನಿಂತು ಹೋಗಲಿಲ್ಲ. ಅದಕ್ಕೇ ನಾವೆಲ್ರೂ ಒಗ್ಗಟ್ಟಾಗಿದ್ವಿ, ಒಂದಾಗಿದ್ವಿ. ಇದನ್ನೆಲ್ಲ ನೋಡಿದ್ರೆ ಮುಂದೆ ಎಂಥದ್ದೇ ಕಷ್ಟ ಬಂದ್ರೂ ಹಿರಿಯರು ಒಳ್ಳೇ ನಿರ್ಧಾರಗಳನ್ನ ಮಾಡೋಕೆ ಅವ್ರಿಗೆ ಯೆಹೋವ ವಿವೇಕ ಕೊಟ್ಟು ಸಹಾಯ ಮಾಡೇ ಮಾಡ್ತಾನೆ ಅಂತ ಗೊತ್ತಾಗುತ್ತೆ. ನಾವು ಮಹಾ ಸಂಕಟಕ್ಕೆ ತಯಾರಾಗೋಕೆ ಮತ್ತು ಆ ಸಮಯದಲ್ಲಿ ನಿಯತ್ತಾಗಿರೋಕೆ ಯೆಹೋವನ ಮೇಲೆ ಭರವಸೆ ಇಡಬೇಕು ಅಂತ ಕಲಿತ್ವಿ. ಮುಂದೆ ನಿಂತು ಸಭೆನ ನಡಿಸುವವ್ರ ಮಾತು ಕೇಳಬೇಕು ಅಂತ ಅರ್ಥ ಮಾಡ್ಕೊಂಡ್ವಿ. ಅದ್ರ ಜೊತೆಗೆ ಇನ್ನೂ ಏನು ಮಾಡಬೇಕು ಅಂತ ಈಗ ಕಲಿಯೋಣ.
ಪ್ರೀತಿ ಮತ್ತು ಉದಾರತೆ ತೋರಿಸಿ
14. ಇಬ್ರಿಯ 13:1-3ರಲ್ಲಿ ಇರೋ ತರ ಆಗಿನ ಕ್ರೈಸ್ತರು ಏನು ಮಾಡಬೇಕಿತ್ತು?
14 ಮಹಾ ಸಂಕಟ ಶುರು ಆದ್ಮೇಲೆ ನಾವು ಒಬ್ರನ್ನೊಬ್ರು ಇನ್ನೂ ಜಾಸ್ತಿ ಪ್ರೀತಿಸಬೇಕಾಗುತ್ತೆ. ಈ ವಿಷ್ಯದಲ್ಲಿ ಯೆರೂಸಲೇಮ್ ಮತ್ತು ಯೂದಾಯದ ಕ್ರೈಸ್ತರು ನಮಗೆ ಒಳ್ಳೇ ಮಾದರಿ. ಅವರು ಒಬ್ರನ್ನೊಬ್ರು ಯಾವಾಗ್ಲೂ ಪ್ರೀತಿಸ್ತಿದ್ರು. (ಇಬ್ರಿ. 10:32-34) ಆದ್ರೆ ಯೆರೂಸಲೇಮ್ ನಾಶ ಹತ್ರ ಆಗ್ತಿದ್ದ ಹಾಗೆ “ಒಡಹುಟ್ಟಿದವ್ರ ತರ ಒಬ್ರು ಇನ್ನೊಬ್ರನ್ನ” ಪ್ರೀತಿಸೋಕೆ, “ಅತಿಥಿಸತ್ಕಾರ” ತೋರಿಸೋಕೆ ಇನ್ನೂ ಜಾಸ್ತಿ ಪ್ರಯತ್ನ ಹಾಕಬೇಕಿತ್ತು.c (ಇಬ್ರಿಯ 13:1-3 ಓದಿ) ನಾವೂ ಮಹಾ ಸಂಕಟದ ಸಮಯದಲ್ಲಿ ಒಡಹುಟ್ಟಿದವ್ರ ತರ ಒಬ್ರಿಗೊಬ್ರು ಇನ್ನೂ ಜಾಸ್ತಿ ಪ್ರೀತಿ ತೋರಿಸಬೇಕು.
15. ಯೆರೂಸಲೇಮನ್ನ ಬಿಟ್ಟು ಹೋದವರು ಯಾಕೆ ಒಬ್ರಿಗೊಬ್ರು ಒಡಹುಟ್ಟಿದವ್ರ ತರ ಪ್ರೀತಿ ಮತ್ತು ಉದಾರತೆ ತೋರಿಸಬೇಕಿತ್ತು?
15 ರೋಮ್ ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕಿ ಇದ್ದಕ್ಕಿದ್ದ ಹಾಗೆ ವಾಪಸ್ ಹೋಯ್ತು. ಆಗ ಅಲ್ಲಿದ್ದ ಕ್ರೈಸ್ತರಿಗೆ ಬೆಟ್ಟಗಳಿಗೆ ಓಡಿಹೋಗೋಕೆ ಸ್ವಲ್ಪನೇ ಸಮಯ ಇತ್ತು. (ಮತ್ತಾ. 24:17, 18) ಅದಕ್ಕೆ ಅವರು ಅಲ್ಪ-ಸ್ವಲ್ಪ ವಸ್ತುಗಳನ್ನ ತಗೊಂಡು ಪಟ್ಟಣದಿಂದ ಓಡಿ ಹೋದ್ರು. ಹೀಗೆ ಬೆಟ್ಟಗಳಿಗೆ ಹೋಗುವಾಗ, ಹೊಸ ಮನೆಯಲ್ಲಿ ಜೀವನ ಶುರು ಮಾಡುವಾಗ ಅವ್ರಿಗೆ ತುಂಬ ಸಹಾಯದ ಅಗತ್ಯ ಬಂತು. ಅಲ್ಲಿದ್ದ ಪ್ರತಿಯೊಬ್ರಿಗೂ ‘ಒಂದಲ್ಲ ಒಂದು ಕಷ್ಟ ಇತ್ತು.’ ಹಾಗಾಗಿ ಒಬ್ರಿಗೊಬ್ರು ಒಡಹುಟ್ಟಿದವರ ತರ ಪ್ರೀತಿ ತೋರಿಸಬೇಕಿತ್ತು. ಅವ್ರ ಹತ್ರ ಇರೋದನ್ನ ಬೇರೆಯವರ ಹತ್ರ ಹಂಚ್ಕೊಳ್ಳೋ ಮೂಲಕ ಉದಾರತೆ ತೋರಿಸಬೇಕಿತ್ತು.—ತೀತ 3:14.
16. ಕಷ್ಟದಲ್ಲಿರೋ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಪ್ರೀತಿ ತೋರಿಸಬಹುದು? (ಚಿತ್ರ ನೋಡಿ.)
16 ನಮಗಿರೋ ಪಾಠ: ನಮ್ಮ ಸಹೋದರ ಸಹೋದರಿಯರಿಗೆ ಕಷ್ಟ ಬಂದಾಗ ನಾವು ಸಹಾಯ ಮಾಡೋಕೆ ಮುಂದೆ ಹೋಗೋ ತರ ಮಾಡೋದು ಪ್ರೀತಿನೇ! ಇತ್ತೀಚಿಗೆ ಎಷ್ಟೋ ಸಹೋದರ ಸಹೋದರಿಯರಿಗೆ ವಿಪತ್ತಿಂದ, ಯುದ್ಧದಿಂದ ತುಂಬ ಕಷ್ಟ ಆಗಿದೆ. ಆಗ ಅವರು ತಮ್ಮ ಮನೆ ಬಿಟ್ಟು ಎಲ್ಲೆಲ್ಲೊ ಹೋಗಿ ಬದುಕಬೇಕಾಗಿದೆ. ಅಂಥ ಸಂದರ್ಭದಲ್ಲಿ ಅಲ್ಲಿದ್ದ ಸಹೋದರ ಸಹೋದರಿಯರು ಊಟ-ಬಟ್ಟೆ ಕೊಟ್ಟು, ಜೀವನ ಮಾಡೋಕೆ ಬೇಕಿರೋದನ್ನೆಲ್ಲ ಕೊಟ್ಟು ಸಹಾಯ ಮಾಡಿದ್ದಾರೆ. ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಳೋಕೂ ಜಾಸ್ತಿ ಸಹಾಯ ಮಾಡಿದ್ದಾರೆ. ಈ ತರನೇ ಉಕ್ರೇನ್ನಲ್ಲಿ ಯುದ್ಧ ಆದಾಗ ಒಬ್ಬ ಸಹೋದರಿ ಅವರ ಎಲ್ಲಾನೂ ಬಿಟ್ಟು ಬರಬೇಕಾಯ್ತು. ಆ ಸಹೋದರಿ ಹೇಳೋದು, “ಆ ಟೈಮಲ್ಲಿ ಬ್ರದರ್ ಸಿಸ್ಟರ್ಸ್ ನನಗೆ ತುಂಬ ಸಹಾಯ ಮಾಡಿದ್ರು. ಅವರು ಮಾಡಿದ ಸಹಾಯ ನೋಡಿದ್ರೆ, ಯೆಹೋವನೇ ನನ್ನ ಕೈಹಿಡಿದು ನಡೆಸ್ತಿದ್ದಾನೆ ಅಂತ ನನಗನಿಸ್ತು. ಅವರು ನಮಗೆ ಉಕ್ರೇನಲ್ಲಿ, ಹಂಗೇರಿಲಿ, ಈಗ ಜರ್ಮನಿಲೂ ಸಹಾಯ ಮಾಡ್ತಿದ್ದಾರೆ.” ಹೀಗೆ ಕಷ್ಟದಲ್ಲಿರೋ ನಮ್ಮ ಸಹೋದರರಿಗೆ ಸಹಾಯ ಮಾಡೋ ಮನಸ್ಸು ನಮ್ಮೆಲ್ರಿಗೂ ಇರಬೇಕು. ಆಗ ಯೆಹೋವನ ಜೊತೆ ಸೇರಿ ನಾವು ಕೆಲಸ ಮಾಡ್ತೀವಿ.—ಜ್ಞಾನೋ. 19:17; 2 ಕೊರಿಂ. 1:3, 4.
ಮನೆ ಕಳ್ಕೊಂಡಿರೋ ನಮ್ಮ ಸಹೋದರರಿಗೆ ನಾವು ಸಹಾಯ ಮಾಡಬೇಕು (ಪ್ಯಾರ 16 ನೋಡಿ)
17. ನಾವು ಯಾಕೆ ಈಗಿಂದಾನೇ ಒಡಹುಟ್ಟಿದವ್ರ ತರ ಪ್ರೀತಿ ಮತ್ತು ಉದಾರತೆ ತೋರಿಸಬೇಕು?
17 ಈಗ್ಲೇ ನಮಗೆ ತುಂಬಾ ಸಹಾಯ ಬೇಕಂದ್ಮೇಲೆ ಮುಂದೆ ಇನ್ನೆಷ್ಟು ಸಹಾಯ ಬೇಕಾಗುತ್ತೆ ಅಂತ ಯೋಚ್ನೆ ಮಾಡಿ. (ಹಬ. 3:16-18) ಅದಕ್ಕೆ ಯೆಹೋವ ಈಗಿಂದಾನೇ ನಾವೆಲ್ರೂ ಒಡಹುಟ್ಟಿದವ್ರ ತರ ಪ್ರೀತಿ ತೋರಿಸೋಕೆ, ಉದಾರತೆ ತೋರಿಸೋಕೆ ಕಲಿಸ್ತಿದ್ದಾನೆ. ಈ ಗುಣಗಳನ್ನ ನಾವು ಈಗ್ಲೇ ಬೆಳೆಸ್ಕೊಂಡ್ರೆ ಮುಂದೆ ಕಷ್ಟ ಬಂದಾಗ ತುಂಬ ಸಹಾಯ ಆಗುತ್ತೆ.
ಮುಂದೆ ಏನಾಗುತ್ತೆ ಗೊತ್ತಾ?
18. ಒಂದನೇ ಶತಮಾನದ ಕ್ರೈಸ್ತರ ತರ ನಾವೇನು ಮಾಡಬೇಕು?
18 ಆಗಿನ ಕಾಲದ ಕ್ರೈಸ್ತರು ಯೆರೂಸಲೇಮ್ ನಾಶ ಆಗೋ ಮುಂಚೆ ಆ ಪಟ್ಟಣನ ಬಿಟ್ಟು ಹೋದ್ರು, ತಮ್ಮ ಪ್ರಾಣ ಉಳಿಸ್ಕೊಂಡ್ರು ಅಂತ ಇತಿಹಾಸ ತೋರಿಸುತ್ತೆ. ಅವರು ಪಟ್ಟಣನ ಬಿಟ್ಟು ಹೋದ್ರೂ ಯೆಹೋವ ಮಾತ್ರ ಅವ್ರ ಕೈ ಬಿಡಲಿಲ್ಲ. ಇದ್ರಿಂದ ನಾವೇನು ಕಲಿಬಹುದು? ಮುಂದೆ ಏನೆಲ್ಲ ಆಗುತ್ತೆ ಅಂತ ನಮಗೂ ಸರಿಯಾಗಿ ಗೊತ್ತಿಲ್ಲ. ಅದೇನೇ ಆಗ್ಲಿ ಯೇಸು ಹೇಳಿದ ತರ, ನಾವು ಮಾತು ಕೇಳೋಕೆ ಯಾವಾಗ್ಲೂ ರೆಡಿ ಆಗಿರಬೇಕು. (ಲೂಕ 12:40) ಅಷ್ಟೇ ಅಲ್ಲ, ಪೌಲ ಇಬ್ರಿಯ ಪತ್ರದಲ್ಲಿ ಬರೆದಿರೋ ವಿಷ್ಯಗಳನ್ನ ನಾವು ಓದಿ ಅದ್ರ ಬಗ್ಗೆ ಯೋಚ್ನೆ ಮಾಡಿ ಅದನ್ನ ಪಾಲಿಸಬೇಕು. ಯಾಕಂದ್ರೆ ಅದು ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಹೇಗೆ ಸಹಾಯ ಮಾಡ್ತೋ ಮಹಾ ಸಂಕಟವನ್ನ ಎದುರಿಸೋ ನಮಗೂ ಅಷ್ಟೇ ಸಹಾಯ ಮಾಡುತ್ತೆ. ಇದನ್ನೆಲ್ಲಾ ನಾವು ಮಾಡುವಾಗ ಯೆಹೋವ ನಮಗೆ ಯಾವ ತರ ಸಹಾಯ ಮಾಡ್ತಾನೆ? ಅದೇನೇ ಆದ್ರೂ ‘ನಾನು ನಿಮ್ಮ ಕೈ ಬಿಡಲ್ಲ ಅಂತ’ ಆತನು ಮಾತು ಕೊಟ್ಟಿದ್ದಾನೆ. (ಇಬ್ರಿ. 13:5, 6) ಇದಂತೂ ನಮಗೆ ತುಂಬ ಧೈರ್ಯ ತುಂಬುತ್ತೆ. ಹಾಗಾಗಿ ನಾವೆಲ್ರೂ ನಿಜವಾದ ಅಡಿಪಾಯ ಇರೋ ಪಟ್ಟಣ ಅಂದ್ರೆ ದೇವರ ಆಳ್ವಿಕೆ ಮೇಲೆ ನಂಬಿಕೆ ಇಡೋಣ. ಅದು ಶಾಶ್ವತವಾಗಿರುತ್ತೆ! ಅದ್ರಿಂದ ನಮಗೆ ಸಿಗೋ ಆಶೀರ್ವಾದಗಳೂ ಶಾಶ್ವತವಾಗಿರುತ್ತೆ!—ಮತ್ತಾ. 25:34.
ಗೀತೆ 157 ಶಾಂತಿಯ ಸಾಮ್ರಾಜ್ಯ!
b ಇದು ಕ್ರೈಸ್ತರು ಯೆರೂಸಲೇಮ್ ಮತ್ತು ಯೂದಾಯವನ್ನ ಬಿಟ್ಟು ಬಂದ ಸ್ವಲ್ಪದ್ರಲ್ಲೇ ಅಂದ್ರೆ ಕ್ರಿಸ್ತ ಶಕ 67ರಲ್ಲಿ ನಡೀತು.
c ‘ಒಡಹುಟ್ಟಿದವ್ರ ತರ ಪ್ರೀತಿ’ ಅಂದ್ರೆ ಸಾಮಾನ್ಯವಾಗಿ ಕುಟುಂಬದವ್ರ ಮಧ್ಯೆ ತೋರಿಸೋ ಪ್ರೀತಿ ಅಂತರ್ಥ. ಆದ್ರೆ ಪೌಲ ಇಲ್ಲಿ ಈ ಪದನ ಸಹೋದರ ಸಹೋದರಿಯರ ಮಧ್ಯೆ ಇರೋ ಗಾಢವಾದ ಪ್ರೀತಿಗೂ ಬಳಸಿದ್ದಾನೆ.