1 ಯೋಹಾನ
4 ಪ್ರಿಯರೇ, ಅನೇಕ ಮಂದಿ ಸುಳ್ಳು ಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ, ಪ್ರತಿಯೊಂದು ಪ್ರೇರಿತ ನುಡಿಯನ್ನು ನಂಬದೆ, ಆ ಪ್ರೇರಿತ ನುಡಿಗಳು ದೇವರಿಂದ ಉಂಟಾದವುಗಳಾಗಿವೆಯೋ ಎಂದು ಕಂಡುಕೊಳ್ಳಲು ಅವುಗಳನ್ನು ಪರೀಕ್ಷಿಸಿರಿ.
2 ಒಂದು ಪ್ರೇರಿತ ನುಡಿಯು ದೇವರಿಂದ ಬಂದದ್ದಾಗಿದೆ ಎಂಬುದನ್ನು ನೀವು ಹೀಗೆ ತಿಳಿದುಕೊಳ್ಳುತ್ತೀರಿ: ಯೇಸು ಕ್ರಿಸ್ತನು ಮನುಷ್ಯನಾಗಿ ಬಂದಿದ್ದಾನೆ ಎಂಬುದನ್ನು ಒಪ್ಪಿಕೊಳ್ಳುವ ಪ್ರತಿಯೊಂದು ಪ್ರೇರಿತ ನುಡಿಯು ದೇವರಿಂದ ಉಂಟಾದದ್ದಾಗಿದೆ. 3 ಆದರೆ ಯೇಸುವನ್ನು ಒಪ್ಪದಿರುವ ಪ್ರತಿಯೊಂದು ಪ್ರೇರಿತ ನುಡಿಯು ದೇವರಿಂದ ಉಂಟಾದದ್ದಾಗಿರುವುದಿಲ್ಲ. ಮಾತ್ರವಲ್ಲದೆ, ಇದು ಕ್ರಿಸ್ತವಿರೋಧಿಯ ಪ್ರೇರಿತ ನುಡಿಯಾಗಿದ್ದು ಅದು ಬರಲಿತ್ತೆಂದು ನೀವು ಕೇಳಿಸಿಕೊಂಡಿದ್ದೀರಿ ಮತ್ತು ಅದು ಈಗಾಗಲೇ ಲೋಕದಲ್ಲಿದೆ.
4 ಚಿಕ್ಕ ಮಕ್ಕಳೇ, ನೀವು ದೇವರಿಂದ ಉಂಟಾದವರಾಗಿದ್ದೀರಿ ಮತ್ತು ಅಂಥ ವ್ಯಕ್ತಿಗಳನ್ನು ಜಯಿಸಿದ್ದೀರಿ; ಏಕೆಂದರೆ ಲೋಕದೊಂದಿಗೆ ಐಕ್ಯದಿಂದಿರುವವನಿಗಿಂತ ನಿಮ್ಮೊಂದಿಗೆ ಐಕ್ಯದಲ್ಲಿರುವಾತನು ಹೆಚ್ಚು ಶ್ರೇಷ್ಠನಾಗಿದ್ದಾನೆ. 5 ಅವರು ಲೋಕದಿಂದ ಉಂಟಾದವರಾಗಿದ್ದಾರೆ; ಆದುದರಿಂದಲೇ ಅವರು ಲೋಕದಿಂದ ಹೊರಡುವಂಥದ್ದನ್ನೇ ಮಾತಾಡುತ್ತಾರೆ ಮತ್ತು ಲೋಕವು ಅವರಿಗೆ ಕಿವಿಗೊಡುತ್ತದೆ. 6 ನಾವು ದೇವರಿಂದ ಉಂಟಾದವರಾಗಿದ್ದೇವೆ. ದೇವರ ಜ್ಞಾನವನ್ನು ಪಡೆದುಕೊಳ್ಳುವವನು ನಮಗೆ ಕಿವಿಗೊಡುತ್ತಾನೆ; ದೇವರಿಂದ ಉಂಟಾಗದವನು ನಮಗೆ ಕಿವಿಗೊಡುವುದಿಲ್ಲ. ನಾವು ಸತ್ಯದ ಪ್ರೇರಿತ ನುಡಿಯನ್ನೂ ತಪ್ಪಾದ ಪ್ರೇರಿತ ನುಡಿಯನ್ನೂ ಗುರುತಿಸುವುದು ಹೀಗೆಯೇ.
7 ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಇರೋಣ, ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿಸುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನಾಗಿದ್ದು ದೇವರ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. 8 ಪ್ರೀತಿಸದವನು ದೇವರನ್ನು ತಿಳಿದವನಲ್ಲ, ಏಕೆಂದರೆ ದೇವರು ಪ್ರೀತಿಯಾಗಿದ್ದಾನೆ. 9 ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು. 10 ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಆತನು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ ಕಳುಹಿಸಿಕೊಟ್ಟದ್ದರಲ್ಲಿ ಪ್ರೀತಿ ಏನೆಂಬುದು ತೋರಿಬಂತು.
11 ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿರುವಲ್ಲಿ, ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12 ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಮುಂದುವರಿಯುವುದಾದರೆ ದೇವರು ನಮ್ಮಲ್ಲಿ ನೆಲೆಗೊಳ್ಳುತ್ತಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ. 13 ಆತನು ನಮಗೆ ತನ್ನ ಪವಿತ್ರಾತ್ಮವನ್ನು ಅನುಗ್ರಹಿಸಿರುವುದರಿಂದ ನಾವು ಆತನೊಂದಿಗೆ ಐಕ್ಯದಲ್ಲಿ ಉಳಿದಿದ್ದೇವೆ ಮತ್ತು ಆತನು ನಮ್ಮೊಂದಿಗೆ ಐಕ್ಯದಲ್ಲಿದ್ದಾನೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. 14 ಇದಲ್ಲದೆ, ತಂದೆಯು ತನ್ನ ಮಗನನ್ನು ಲೋಕದ ರಕ್ಷಕನನ್ನಾಗಿ ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ನಾವು ನೋಡಿದ್ದೇವೆ ಮತ್ತು ಅದರ ವಿಷಯದಲ್ಲಿ ಸಾಕ್ಷಿಹೇಳುತ್ತಿದ್ದೇವೆ. 15 ಯೇಸು ಕ್ರಿಸ್ತನು ದೇವರ ಮಗನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನೊಂದಿಗೆ ದೇವರು ಐಕ್ಯದಲ್ಲಿ ಉಳಿಯುತ್ತಾನೆ ಮತ್ತು ಅವನು ದೇವರೊಂದಿಗೆ ಐಕ್ಯದಲ್ಲಿರುತ್ತಾನೆ. 16 ನಮ್ಮ ವಿಷಯದಲ್ಲಿ ದೇವರಿಗಿರುವ ಪ್ರೀತಿಯನ್ನು ನಾವೇ ತಿಳಿದುಕೊಂಡಿದ್ದೇವೆ ಮತ್ತು ಅದನ್ನು ನಂಬಿದ್ದೇವೆ.
ದೇವರು ಪ್ರೀತಿಯಾಗಿದ್ದಾನೆ ಮತ್ತು ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರೊಂದಿಗೆ ಐಕ್ಯದಲ್ಲಿ ಉಳಿಯುತ್ತಾನೆ ಮತ್ತು ದೇವರು ಅವನೊಂದಿಗೆ ಐಕ್ಯದಲ್ಲಿ ಉಳಿಯುತ್ತಾನೆ. 17 ಹೀಗೆ ನ್ಯಾಯತೀರ್ಪಿನ ದಿನದಲ್ಲಿ ನಮಗೆ ವಾಕ್ಸರಳತೆ ಇರುವಂತೆ ಪ್ರೀತಿಯು ನಮ್ಮ ವಿಷಯದಲ್ಲಿ ಪರಿಪೂರ್ಣಗೊಳಿಸಲ್ಪಟ್ಟಿದೆ, ಏಕೆಂದರೆ ಅವನು ಎಂಥವನಾಗಿದ್ದಾನೋ ನಾವೂ ಈ ಲೋಕದಲ್ಲಿ ಅಂಥವರಾಗಿಯೇ ಇದ್ದೇವೆ. 18 ಪ್ರೀತಿಯಲ್ಲಿ ಹೆದರಿಕೆ ಇಲ್ಲ; ಪರಿಪೂರ್ಣವಾದ ಪ್ರೀತಿಯು ಹೆದರಿಕೆಯನ್ನು ಓಡಿಸಿಬಿಡುತ್ತದೆ. ಏಕೆಂದರೆ ಹೆದರಿಕೆಯು ನಿರ್ಬಂಧವನ್ನು ಉಂಟುಮಾಡುತ್ತದೆ. ವಾಸ್ತವದಲ್ಲಿ, ಹೆದರಿಕೆಗೆ ಒಳಗಾಗಿರುವವನು ಪ್ರೀತಿಯಲ್ಲಿ ಪರಿಪೂರ್ಣಗೊಳಿಸಲ್ಪಟ್ಟಿಲ್ಲ. 19 ನಮ್ಮ ಕುರಿತು ಹೇಳುವುದಾದರೆ, ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.
20 ಯಾವನಾದರೂ “ನಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸುವುದಾದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ನೋಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ನೋಡಿರದ ದೇವರನ್ನು ಪ್ರೀತಿಸಲಾರನು. 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕು ಎಂಬ ಈ ಆಜ್ಞೆಯನ್ನು ನಾವು ಅವನಿಂದಲೇ ಹೊಂದಿದ್ದೇವೆ.