ಅ. ಕಾರ್ಯ
1 ಥೆಯೊಫಿಲನೇ, ನಾನು ನನ್ನ ಮೊದಲನೆಯ ವೃತ್ತಾಂತದಲ್ಲಿ ಯೇಸು ಮಾಡುವುದಕ್ಕೂ ಬೋಧಿಸುವುದಕ್ಕೂ ಪ್ರಾರಂಭಿಸಿದ್ದೆಲ್ಲವನ್ನೂ, 2 ತಾನು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮದ * ಮೂಲಕ ಆಜ್ಞೆಯನ್ನು ಕೊಟ್ಟು ಮೇಲಕ್ಕೆ ಒಯ್ಯಲ್ಪಟ್ಟ ದಿನದ ವರೆಗಿನ ವಿಷಯಗಳೆಲ್ಲವನ್ನೂ ಬರೆದೆನು. 3 ಅವನು ಬಾಧೆಯನ್ನು ಅನುಭವಿಸಿದ ಬಳಿಕ ತಾನು ಜೀವಿತನಾಗಿ ಎದ್ದಿದ್ದೇನೆ ಎಂಬುದನ್ನು ಅನೇಕ ನಿಶ್ಚಿತ ರುಜುವಾತುಗಳಿಂದ ಇತರರಿಗೆ ಸಹ ತೋರಿಸಿಕೊಟ್ಟನು; ನಲವತ್ತು ದಿವಸಗಳಾದ್ಯಂತ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ಕುರಿತಾದ ವಿಷಯಗಳನ್ನು ಹೇಳುತ್ತಾ ಇದ್ದನು. 4 ಅವನು ಅವರೊಂದಿಗೆ ಕೂಡಿಬರುತ್ತಿದ್ದಾಗ ಅವರಿಗೆ ಆಜ್ಞಾಪಿಸಿದ್ದು: “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ನೀವು ಕೇಳಿಸಿಕೊಂಡಂತೆ ತಂದೆಯು ಏನನ್ನು ವಾಗ್ದಾನಿಸಿದ್ದಾನೋ ಅದಕ್ಕಾಗಿ ಕಾದುಕೊಂಡಿರಿ; 5 ಏಕೆಂದರೆ ಯೋಹಾನನು ನೀರಿನಿಂದ ದೀಕ್ಷಾಸ್ನಾನ ಮಾಡಿಸಿದನು, ಆದರೆ ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ ಹೊಂದುವಿರಿ.”
6 ಅವರು ಕೂಡಿಬಂದಿದ್ದಾಗ, “ಕರ್ತನೇ, ನೀನು ಈ ಕಾಲದಲ್ಲೇ ಇಸ್ರಾಯೇಲ್ಯರಿಗೆ ರಾಜ್ಯವನ್ನು ಪುನಸ್ಸ್ಥಾಪಿಸುತ್ತಿದ್ದೀಯೊ?” ಎಂದು ಅವನನ್ನು ಕೇಳಿದರು. 7 ಅವನು ಅವರಿಗೆ, “ತಂದೆಯು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಸಮಯಗಳ ಅಥವಾ ಕಾಲಗಳ ಕುರಿತು ತಿಳಿದುಕೊಳ್ಳುವುದು ನಿಮಗೆ ಸೇರಿದ್ದಲ್ಲ; 8 ಆದರೆ ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದನು. 9 ಇದನ್ನು ಹೇಳಿದ ಬಳಿಕ, ಅವರು ನೋಡುತ್ತಿದ್ದಾಗಲೇ ಅವನು ಮೇಲಕ್ಕೆ ಒಯ್ಯಲ್ಪಟ್ಟನು ಮತ್ತು ಮೋಡವು ಕವಿದು ಅವರ ದೃಷ್ಟಿಗೆ ಮರೆಯಾದನು. 10 ಅವನು ಹೋಗುತ್ತಿರಲು ಅವರು ಆಕಾಶವನ್ನು ದೃಷ್ಟಿಸಿ ನೋಡುತ್ತಿದ್ದಾಗ ಬಿಳೀ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಅವರ ಪಕ್ಕದಲ್ಲಿ ನಿಂತುಕೊಂಡು, 11 “ಗಲಿಲಾಯದವರೇ, ನೀವು ಏಕೆ ಆಕಾಶವನ್ನು ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶಕ್ಕೆ ಒಯ್ಯಲ್ಪಟ್ಟ ಈ ಯೇಸುವು ಯಾವ ರೀತಿಯಲ್ಲಿ ಆಕಾಶಕ್ಕೆ ಹೋಗುವುದನ್ನು ನೀವು ನೋಡಿದಿರೋ ಅದೇ ರೀತಿಯಲ್ಲಿ ಬರುವನು” ಎಂದು ಅವರಿಗೆ ಹೇಳಿದರು.
12 ಆಮೇಲೆ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂದಿರುಗಿದರು; ಆ ಗುಡ್ಡವು ಯೆರೂಸಲೇಮಿಗೆ ಸಮೀಪವಾಗಿದ್ದು ಸಬ್ಬತ್ದಿನದಲ್ಲಿ ಪ್ರಯಾಣಮಾಡುವಷ್ಟು ದೂರದಲ್ಲಿತ್ತು. * 13 ಅವರು ಪಟ್ಟಣವನ್ನು ಪ್ರವೇಶಿಸಿ ತಾವು ತಂಗುತ್ತಿದ್ದ ಮೇಲಂತಸ್ತಿನ ಕೋಣೆಗೆ ಹೋದರು; ಅಲ್ಲಿ ಪೇತ್ರ ಯೋಹಾನ ಯಾಕೋಬ ಅಂದ್ರೆಯ ಫಿಲಿಪ್ಪ ತೋಮ ಬಾರ್ತೊಲೊಮಾಯ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ ಅತ್ಯಭಿಮಾನಿ ಎಂದು ಪ್ರಸಿದ್ಧನಾಗಿದ್ದ ಸೀಮೋನ ಮತ್ತು ಯಾಕೋಬನ ಮಗನಾದ ಯೂದ ಎಂಬವರು ಇದ್ದರು. 14 ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು; ಇವರೊಂದಿಗೆ ಕೆಲವು ಮಂದಿ ಹೆಂಗಸರೂ ಯೇಸುವಿನ ತಾಯಿಯಾದ ಮರಿಯಳೂ ಅವನ ತಮ್ಮಂದಿರೂ ಇದ್ದರು.
15 ಈ ದಿವಸಗಳಲ್ಲಿ ಸಹೋದರರ ಮಧ್ಯದಲ್ಲಿ ಪೇತ್ರನು ಎದ್ದುನಿಂತು (ಅಲ್ಲಿ ಕೂಡಿಬಂದಿದ್ದ ಜನರ ಗುಂಪಿನಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು), 16 “ಜನರೇ, ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಿಯಾಗಿದ್ದ ಯೂದನ ಕುರಿತಾಗಿ ಪವಿತ್ರಾತ್ಮವು ದಾವೀದನ ಬಾಯಿಂದ ಮುಂದಾಗಿಯೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು. 17 ಏಕೆಂದರೆ ಅವನು ನಮ್ಮ ಗುಂಪಿನ ಒಬ್ಬ ಸದಸ್ಯನಾಗಿದ್ದು ನಮ್ಮೊಂದಿಗೆ ಈ ಶುಶ್ರೂಷೆಯಲ್ಲಿ ಪಾಲುಗಾರನಾಗಿದ್ದನು. 18 (ಈ ಮನುಷ್ಯನು ಅನೀತಿಯ ಸಂಬಳದಿಂದ ಒಂದು ಹೊಲವನ್ನು ಖರೀದಿಸಿದನು. ಅವನು ತಲೆಕೆಳಗಾಗಿ ಬಿದ್ದಾಗ ದೊಡ್ಡ ಸದ್ದಿನಿಂದ ಅವನ ಹೊಟ್ಟೆಯೊಡೆದು ಅವನ ಕರುಳುಗಳೆಲ್ಲ ಹೊರಬಂದವು. 19 ಇದು ಯೆರೂಸಲೇಮಿನ ನಿವಾಸಿಗಳೆಲ್ಲರಿಗೂ ತಿಳಿದುಬಂತು. ಆದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ಆಕೆಲ್ದಮಾ ಅಂದರೆ ರಕ್ತದ ಹೊಲ ಎಂಬ ಹೆಸರು ಬಂತು.) 20 ಕೀರ್ತನೆಗಳ ಗ್ರಂಥದಲ್ಲಿ, ‘ಅವನ ವಾಸಸ್ಥಳವು ಹಾಳುಬೀಳಲಿ, ಅಲ್ಲಿ ಯಾರೂ ವಾಸಿಸದಿರಲಿ’ ಮತ್ತು ‘ಅವನ ಮೇಲ್ವಿಚಾರಣೆಯ ಸ್ಥಾನವು ಇನ್ನೊಬ್ಬನ ವಶವಾಗಲಿ’ ಎಂದು ಬರೆದಿದೆ. 21 ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಹೋಗುತ್ತಾ ಬರುತ್ತಾ ಇದ್ದ ಕಾಲದಲ್ಲೆಲ್ಲ, 22 ಅಂದರೆ ಅವನು ಯೋಹಾನನಿಂದ ದೀಕ್ಷಾಸ್ನಾನ ಪಡೆದಂದಿನಿಂದ ಸ್ವರ್ಗಕ್ಕೆ ಒಯ್ಯಲ್ಪಡುವ ದಿನದ ವರೆಗೆ ನಮ್ಮ ಸಂಗಡ ಇದ್ದ ಈ ಪುರುಷರಲ್ಲಿ ಒಬ್ಬನು ನಮ್ಮೊಂದಿಗೆ ಅವನ ಪುನರುತ್ಥಾನಕ್ಕೆ ಸಾಕ್ಷಿಯಾಗಬೇಕಾಗಿದೆ” ಎಂದು ಹೇಳಿದನು.
23 ಆಗ ಅವರು ಯೂಸ್ತನೆಂದು ಉಪನಾಮವಿರುವ ಬಾರ್ಸಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿದರು. 24 ಬಳಿಕ ಅವರು, “ಯೆಹೋವನೇ, ಎಲ್ಲ ಹೃದಯಗಳನ್ನು ಬಲ್ಲಾತನೇ, ಯೂದನು ಭ್ರಷ್ಟನಾಗಿ ತನಗೆ ಸಲ್ಲತಕ್ಕ ಸ್ಥಳಕ್ಕೆ ಹೋಗಿರುವುದರಿಂದ 25 ಈ ಶುಶ್ರೂಷೆ ಮತ್ತು ಅಪೊಸ್ತಲತನದ ಸ್ಥಾನವನ್ನು ಪಡೆದುಕೊಳ್ಳಲು ಈ ಇಬ್ಬರಲ್ಲಿ ಯಾರನ್ನು ನೀನು ಆಯ್ಕೆಮಾಡಿದ್ದೀ ಎಂಬುದನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು. 26 ಅವರು ಚೀಟು ಹಾಕಿದಾಗ ಅದು ಮತ್ತೀಯನ ಪಾಲಿಗೆ ಬರಲಾಗಿ, ಅವನನ್ನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಲೆಕ್ಕಿಸಲಾಯಿತು.