ಯೋಹಾನ
7 ಇವುಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರಮಾಡುವುದನ್ನು ಮುಂದುವರಿಸಿದನು; ಯೆಹೂದ್ಯರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ಕಾರಣ ಅವನು ಯೂದಾಯದಲ್ಲಿ ಸಂಚಾರಮಾಡಲು ಬಯಸಲಿಲ್ಲ. 2 ಆದರೆ ಯೆಹೂದ್ಯರ ಹಬ್ಬವಾದ ಗುಡಾರಗಳ ಹಬ್ಬವು ಹತ್ತಿರವಾಗಿತ್ತು. 3 ಆದುದರಿಂದ ಅವನ ತಮ್ಮಂದಿರು ಅವನಿಗೆ, “ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರೂ ನೋಡಸಾಧ್ಯವಾಗುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು. 4 ಸಾರ್ವಜನಿಕವಾಗಿ ಪ್ರಸಿದ್ಧನಾಗಬೇಕೆಂದು ಬಯಸುವ ಯಾವನೂ ಏನನ್ನೂ ಗುಪ್ತವಾಗಿ ನಡೆಸುವುದಿಲ್ಲ. ನೀನು ಇವುಗಳನ್ನು ಮಾಡುತ್ತಿಯಾದರೆ ನಿನ್ನನ್ನು ಲೋಕಕ್ಕೆ ಪ್ರಕಟಪಡಿಸಿಕೊ” ಎಂದು ಹೇಳಿದರು. 5 ವಾಸ್ತವದಲ್ಲಿ ಅವನ ತಮ್ಮಂದಿರು ಅವನಲ್ಲಿ ನಂಬಿಕೆಯಿಟ್ಟಿರಲಿಲ್ಲ. 6 ಆದುದರಿಂದ ಯೇಸು ಅವರಿಗೆ, “ನನ್ನ ನಿಗದಿತ ಸಮಯವು ಇನ್ನೂ ಬಂದಿಲ್ಲ; ಆದರೆ ನಿಮ್ಮ ನಿಗದಿತ ಸಮಯವು ಸದಾ ನಿಕಟವಾಗಿದೆ. 7 ನಿಮ್ಮನ್ನು ದ್ವೇಷಿಸಲು ಲೋಕಕ್ಕೆ ಯಾವುದೇ ಕಾರಣವಿಲ್ಲ, ಆದರೆ ಅದರ ಕೃತ್ಯಗಳು ಕೆಟ್ಟವುಗಳೆಂದು ನಾನು ಸಾಕ್ಷಿಕೊಡುವುದರಿಂದ ಅದು ನನ್ನನ್ನು ದ್ವೇಷಿಸುತ್ತದೆ. 8 ನೀವು ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವುದಿಲ್ಲ, ಏಕೆಂದರೆ ನನ್ನ ನಿಗದಿತ ಸಮಯವು ಇನ್ನೂ ಪೂರ್ಣವಾಗಿ ಬಂದಿಲ್ಲ” ಎಂದು ಹೇಳಿದನು. 9 ಅವನು ಅವರಿಗೆ ಈ ವಿಷಯಗಳನ್ನು ಹೇಳಿದ ಬಳಿಕ ಗಲಿಲಾಯದಲ್ಲೇ ಉಳಿದನು.
10 ಆದರೆ ಅವನ ತಮ್ಮಂದಿರು ಹಬ್ಬಕ್ಕೆ ಹೋದ ಬಳಿಕ ಅವನು ಸಹ ಅಲ್ಲಿಗೆ ಹೋದನು, ಬಹಿರಂಗವಾಗಿ ಹೋಗದೆ ರಹಸ್ಯವಾಗಿ ಹೋದನು. 11 ಆದುದರಿಂದ ಯೆಹೂದ್ಯರು ಹಬ್ಬದ ಸಮಯದಲ್ಲಿ ಅವನಿಗಾಗಿ ಹುಡುಕಲಾರಂಭಿಸಿ, “ಆ ಮನುಷ್ಯನು ಎಲ್ಲಿ?” ಎಂದು ಕೇಳುತ್ತಿದ್ದರು. 12 ಜನರ ಮಧ್ಯೆ ಅವನ ಬಗ್ಗೆ ಬಹಳ ಗುಜುಗುಜು ಮಾತು ನಡೆಯುತ್ತಿತ್ತು. ಕೆಲವರು, “ಅವನು ಒಳ್ಳೆಯವನು” ಎಂದೂ ಇತರರು “ಅವನು ಒಳ್ಳೆಯವನಲ್ಲ, ಜನರನ್ನು ದಾರಿತಪ್ಪಿಸುತ್ತಾನೆ” ಎಂದೂ ಹೇಳುತ್ತಿದ್ದರು. 13 ಆದರೆ ಯೆಹೂದ್ಯರ ಭಯದಿಂದಾಗಿ ಯಾರೂ ಅವನ ಕುರಿತು ಬಹಿರಂಗವಾಗಿ ಮಾತಾಡುತ್ತಿರಲಿಲ್ಲ.
14 ಹಬ್ಬವು ಅರ್ಧ ಮುಗಿದಿದ್ದಾಗ ಯೇಸು ದೇವಾಲಯಕ್ಕೆ ಹೋಗಿ ಬೋಧಿಸಲಾರಂಭಿಸಿದನು. 15 ಇದನ್ನು ಕಂಡು ಆಶ್ಚರ್ಯಗೊಂಡ ಯೆಹೂದ್ಯರು, “ಶಾಲೆಗಳಲ್ಲಿ ವ್ಯಾಸಂಗ ಮಾಡಿರದ ಈ ಮನುಷ್ಯನಿಗೆ ಇಂಥ ಪಾಂಡಿತ್ಯ ಎಲ್ಲಿಂದ ಬಂತು?” ಎಂದು ಹೇಳುತ್ತಿದ್ದರು. 16 ಅದಕ್ಕೆ ಯೇಸು ಅವರಿಗೆ, “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು. 17 ಯಾವನಾದರೂ ಆತನ ಚಿತ್ತವನ್ನು ಮಾಡಲು ಬಯಸುವುದಾದರೆ ಅವನಿಗೆ ಈ ಬೋಧನೆಯು ದೇವರಿಂದ ಬಂತೋ ಅಥವಾ ನಾನು ನನ್ನ ಸ್ವಂತಿಕೆಯಿಂದ ಮಾತಾಡುತ್ತಿದ್ದೇನೋ ಎಂಬುದು ತಿಳಿದುಬರುವುದು. 18 ತನ್ನ ಸ್ವಂತಿಕೆಯಿಂದ ಮಾತಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುವವನಾಗಿದ್ದಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವವನು ಸತ್ಯವಂತನು ಮತ್ತು ಅವನಲ್ಲಿ ಯಾವುದೇ ಅನೀತಿಯಿಲ್ಲ. 19 ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನಲ್ಲವೆ? ಆದರೆ ನಿಮ್ಮಲ್ಲಿ ಒಬ್ಬನೂ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ನೀವು ಏಕೆ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ?” ಎಂದು ಹೇಳಿದನು. 20 ಅದಕ್ಕೆ ಜನರು, “ನಿನಗೆ ದೆವ್ವಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಪ್ರಯತ್ನಿಸುತ್ತಿದ್ದಾರೆ?” ಎಂದು ಕೇಳಿದರು. 21 ಯೇಸು ಅವರಿಗೆ, “ನಾನು ಕೇವಲ ಒಂದು ಕಾರ್ಯವನ್ನು ಮಾಡಿದೆನು; ಅದಕ್ಕೆ ನೀವೆಲ್ಲರೂ ಆಶ್ಚರ್ಯಪಡುತ್ತಿದ್ದೀರಿ. 22 ಆದುದರಿಂದಲೇ ಮೋಶೆಯು ನಿಮಗೆ ಸುನ್ನತಿಯ ನಿಯಮವನ್ನು ಕೊಟ್ಟನು—ಅದು ಮೋಶೆಯಿಂದ ಬರಲಿಲ್ಲ, ಪೂರ್ವಜರಿಂದ ಬಂತು—ಮತ್ತು ನೀವು ಒಬ್ಬ ಮನುಷ್ಯನಿಗೆ ಸಬ್ಬತ್ ದಿನದಲ್ಲಿ ಸುನ್ನತಿಮಾಡಿಸುತ್ತೀರಿ. 23 ಮೋಶೆಯ ನಿಯಮವನ್ನು ಮುರಿಯಬಾರದೆಂಬ ಕಾರಣಕ್ಕಾಗಿ ಒಬ್ಬ ಮನುಷ್ಯನು ಸಬ್ಬತ್ ದಿನದಲ್ಲಿ ಸುನ್ನತಿಮಾಡಿಸಿಕೊಳ್ಳುತ್ತಾನಾದರೆ, ಸಬ್ಬತ್ ದಿನದಂದು ನಾನು ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಸ್ವಸ್ಥಪಡಿಸಿದ್ದಕ್ಕಾಗಿ ನೀವು ನನ್ನ ಮೇಲೆ ಕ್ರೋಧಗೊಳ್ಳುತ್ತೀರೊ? 24 ಹೊರತೋರಿಕೆಯನ್ನು ನೋಡಿ ತೀರ್ಪುಮಾಡುವುದನ್ನು ನಿಲ್ಲಿಸಿರಿ; ನ್ಯಾಯವಾಗಿ ತೀರ್ಪುಮಾಡಿರಿ” ಎಂದನು.
25 ಆಗ ಯೆರೂಸಲೇಮಿನ ನಿವಾಸಿಗಳಲ್ಲಿ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ಮನುಷ್ಯನನ್ನೇ ಅಲ್ಲವೆ? 26 ಹಾಗಿದ್ದರೂ, ನೋಡಿ ಇವನು ಬಹಿರಂಗವಾಗಿ ಮಾತಾಡುತ್ತಿದ್ದಾನೆ ಮತ್ತು ಅವರು ಇವನಿಗೆ ಏನೂ ಹೇಳುತ್ತಿಲ್ಲ. ಇವನೇ ಕ್ರಿಸ್ತನೆಂದು ಅಧಿಪತಿಗಳಿಗೆ ಖಚಿತವಾಗಿ ತಿಳಿದುಬಂದಿದೆಯೆ? 27 ನಮಗಾದರೋ ಈ ಮನುಷ್ಯನು ಎಲ್ಲಿಂದ ಬಂದಿದ್ದಾನೆಂಬುದು ತಿಳಿದಿದೆ; ಆದರೆ ಕ್ರಿಸ್ತನು ಬರುವಾಗ ಅವನು ಎಲ್ಲಿಂದ ಬಂದನೆಂಬುದು ಯಾರಿಗೂ ತಿಳಿಯುವುದಿಲ್ಲ” ಎಂದು ಹೇಳಲಾರಂಭಿಸಿದರು. 28 ಆದುದರಿಂದ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಗಟ್ಟಿಯಾದ ಸ್ವರದಿಂದ, “ನಾನು ಯಾರು ಮತ್ತು ಎಲ್ಲಿಂದ ಬಂದಿದ್ದೇನೆ ಎಂಬುದು ನಿಮಗೆ ತಿಳಿದಿದೆ. ಇದಲ್ಲದೆ ನಾನು ನನ್ನ ಸ್ವಪ್ರೇರಣೆಯಿಂದ ಬಂದಿಲ್ಲ, ನನ್ನನ್ನು ಕಳುಹಿಸಿದಾತನು ನೈಜವಾದಾತನು ಮತ್ತು ನೀವು ಆತನನ್ನು ತಿಳಿದಿಲ್ಲ. 29 ಆದರೆ ನಾನು ಆತನನ್ನು ತಿಳಿದಿದ್ದೇನೆ, ಏಕೆಂದರೆ ನಾನು ಆತನ ಬಳಿಯಿಂದ ಬಂದ ಪ್ರತಿನಿಧಿಯಾಗಿದ್ದೇನೆ ಮತ್ತು ನನ್ನನ್ನು ಕಳುಹಿಸಿದವನು ಆತನೇ” ಎಂದು ಹೇಳಿದನು. 30 ಆಗ ಅವರು ಅವನನ್ನು ಬಂಧಿಸಲು ಪ್ರಯತ್ನಿಸಿದರಾದರೂ ಅವನ ಗಳಿಗೆಯು ಇನ್ನೂ ಬಂದಿರಲಿಲ್ಲವಾದ್ದರಿಂದ ಯಾರೊಬ್ಬನೂ ಅವನ ಮೇಲೆ ಕೈಹಾಕಲಿಲ್ಲ. 31 ಹಾಗಿದ್ದರೂ ಜನರಲ್ಲಿ ಅನೇಕರು ಅವನಲ್ಲಿ ನಂಬಿಕೆಯಿಟ್ಟರು; ಮತ್ತು ಅವರು, “ಕ್ರಿಸ್ತನು ಬಂದಾಗ ಈ ಮನುಷ್ಯನು ಮಾಡಿದ್ದಕ್ಕಿಂತ ಹೆಚ್ಚಿನ ಸೂಚಕಕಾರ್ಯಗಳನ್ನು ಮಾಡುವುದಿಲ್ಲ, ಅಲ್ಲವೆ?” ಎಂದು ಹೇಳತೊಡಗಿದರು.
32 ಜನರ ಗುಂಪು ಅವನ ಕುರಿತು ಗುಜುಗುಜು ಆಡಿದ ಈ ಮಾತುಗಳು ಫರಿಸಾಯರ ಕಿವಿಗೆ ಬಿದ್ದವು. ಆದುದರಿಂದ ಮುಖ್ಯ ಯಾಜಕರೂ ಫರಿಸಾಯರೂ ಅವನನ್ನು ಹಿಡಿಯಲು ಅಧಿಕಾರಿಗಳನ್ನು ಕಳುಹಿಸಿದರು. 33 ಆಗ ಯೇಸು, “ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗುವುದಕ್ಕಿಂತ ಮೊದಲು ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗೆ ಇರುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳಲಾರಿರಿ ಮತ್ತು ನಾನು ಇರುವಲ್ಲಿಗೆ ನೀವು ಬರಲಾರಿರಿ” ಎಂದನು. 35 ಅದಕ್ಕೆ ಯೆಹೂದ್ಯರು, “ಈ ಮನುಷ್ಯನನ್ನು ನಾವು ಕಂಡುಕೊಳ್ಳದ ಹಾಗೆ ಇವನು ಎಲ್ಲಿಗೆ ಹೋಗಬೇಕೆಂದಿದ್ದಾನೆ? ಗ್ರೀಕರ ಮಧ್ಯೆ ಚದರಿಕೊಂಡಿರುವ ಯೆಹೂದ್ಯರ ಬಳಿಗೆ ಹೋಗಿ, ಆ ಗ್ರೀಕರಿಗೆ ಬೋಧಿಸಬೇಕೆಂದಿದ್ದಾನೊ? 36 ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳಲಾರಿರಿ ಮತ್ತು ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎಂದು ಅವನು ಹೇಳಿದ ಮಾತಿನ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
37 ಆ ಹಬ್ಬದ ಮುಖ್ಯ ದಿನವಾದ ಕೊನೆಯ ದಿನದಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ಶಾಸ್ತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ನಂಬಿಕೆಯಿಡುವವನ ‘ಆಂತರ್ಯದಿಂದ ಜೀವದಾಯಕ ನೀರಿನ ಹೊಳೆಗಳು ಹರಿಯುವವು’ ” ಎಂದು ಗಟ್ಟಿಯಾದ ಸ್ವರದಿಂದ ಹೇಳಿದನು. 39 ತನ್ನಲ್ಲಿ ನಂಬಿಕೆಯಿಡುವವರು ಬೇಗನೆ ಪಡೆದುಕೊಳ್ಳಲಿಕ್ಕಿದ್ದ ಪವಿತ್ರಾತ್ಮದ ಕುರಿತು ಅವನು ಇದನ್ನು ಹೇಳಿದನು; ಏಕೆಂದರೆ ಯೇಸು ಇನ್ನೂ ಮಹಿಮೆಯ ಪದವಿಯನ್ನು ಹೊಂದದಿದ್ದ ಕಾರಣ ಅವರು ಇನ್ನೂ ಪವಿತ್ರಾತ್ಮವನ್ನು ಪಡೆದುಕೊಂಡಿರಲಿಲ್ಲ. 40 ಜನರಲ್ಲಿ ಕೆಲವರು ಈ ಮಾತುಗಳನ್ನು ಕೇಳಿಸಿಕೊಂಡು, “ಖಂಡಿತವಾಗಿಯೂ ಇವನು ಬರಬೇಕಾದ ಪ್ರವಾದಿಯಾಗಿದ್ದಾನೆ” ಎಂದು ಹೇಳಲಾರಂಭಿಸಿದರು. 41 ಇನ್ನಿತರರು “ಇವನೇ ಆ ಕ್ರಿಸ್ತನು” ಎಂದು ಹೇಳುತ್ತಿದ್ದರು. ಬೇರೆ ಕೆಲವರು “ಕ್ರಿಸ್ತನು ನಿಜವಾಗಿಯೂ ಗಲಿಲಾಯದಿಂದ ಬರುವುದಿಲ್ಲ, ಅಲ್ಲವೆ? 42 ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನು ವಾಸಿಸುತ್ತಿದ್ದ ಬೇತ್ಲೆಹೇಮ್ ಎಂಬ ಗ್ರಾಮದಿಂದಲೂ ಬರುವನೆಂದು ಶಾಸ್ತ್ರಗ್ರಂಥವು ತಿಳಿಸಿದೆಯಲ್ಲವೆ?” ಎಂದು ಹೇಳುತ್ತಿದ್ದರು. 43 ಆದುದರಿಂದ ಅವನ ವಿಷಯದಲ್ಲಿ ಜನರ ನಡುವೆ ವಿಭಾಗ ಉಂಟಾಯಿತು. 44 ಅವರಲ್ಲಿ ಕೆಲವರು ಅವನನ್ನು ಹಿಡಿಯಬೇಕೆಂದಿದ್ದರೂ ಯಾವನೂ ಅವನ ಮೇಲೆ ಕೈಹಾಕಲಿಲ್ಲ.
45 ಆದುದರಿಂದ ಅಧಿಕಾರಿಗಳು ಮುಖ್ಯ ಯಾಜಕರ ಮತ್ತು ಫರಿಸಾಯರ ಬಳಿಗೆ ಹಿಂದಿರುಗಿದಾಗ ಫರಿಸಾಯರು ಅವರಿಗೆ, “ನೀವು ಏಕೆ ಅವನನ್ನು ಹಿಡಿದು ತರಲಿಲ್ಲ?” ಎಂದು ಕೇಳಿದರು. 46 ಅದಕ್ಕೆ ಅಧಿಕಾರಿಗಳು, “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಉತ್ತರಿಸಿದರು. 47 ಆಗ ಫರಿಸಾಯರು, “ನೀವು ಸಹ ಮೋಸಹೋದಿರಾ? 48 ಅಧಿಪತಿಗಳಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಒಬ್ಬರಾದರೂ ಅವನಲ್ಲಿ ನಂಬಿಕೆಯಿಟ್ಟಿದ್ದಾರೊ? 49 ಆದರೆ ಧರ್ಮಶಾಸ್ತ್ರವನ್ನು ಅರಿಯದ ಈ ಜನರು ಶಾಪಗ್ರಸ್ತರು” ಎಂದು ಹೇಳಿದರು. 50 ಅವರಲ್ಲಿ ಒಬ್ಬನಾಗಿದ್ದು ಈ ಮುಂಚೆ ಯೇಸುವಿನ ಬಳಿಗೆ ಹೋಗಿದ್ದ ನಿಕೊದೇಮನು ಅವರಿಗೆ, 51 “ಒಬ್ಬ ಮನುಷ್ಯನನ್ನು ವಿಚಾರಿಸಿ ಅವನು ಏನು ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳದೆ ನಮ್ಮ ಧರ್ಮಶಾಸ್ತ್ರವು ಅವನಿಗೆ ನ್ಯಾಯತೀರ್ಪು ನೀಡುವುದಿಲ್ಲ, ಅಲ್ಲವೆ?” ಎಂದು ಕೇಳಿದನು. 52 ಅದಕ್ಕೆ ಅವರು, “ನೀನು ಸಹ ಗಲಿಲಾಯದವನೊ? ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲ, ಹುಡುಕಿ ನೋಡು” ಎಂದು ಉತ್ತರಿಸಿದರು. *
ಕೋಡೆಕ್ಸ್ ಸೈನಾಯ್ಟಿಕಸ್, ಕೋಡೆಕ್ಸ್ ವ್ಯಾಟಿಕೇನಸ್, ಸೈನಾಯ್ಟಿಕ್ ಸಿರಿಯ್ಯಾಕ್ ಕೋಡೆಕ್ಸ್ ಹಸ್ತಪ್ರತಿಗಳು 53ನೇ ವಚನದಿಂದ 8ನೇ ಅಧ್ಯಾಯದ 11ನೇ ವಚನದ ವರೆಗಿನ ವಚನಗಳನ್ನು ಬಿಟ್ಟುಬಿಟ್ಟಿವೆ. ಅದು (ಬೇರೆ ಬೇರೆ ಗ್ರೀಕ್ ಮೂಲಪಾಠಗಳಲ್ಲಿ ಮತ್ತು ಭಾಷಾಂತರಗಳಲ್ಲಿ ಕೆಲವು ವ್ಯತ್ಯಾಸಗಳೊಂದಿಗೆ) ಹೀಗೆ ಓದಲ್ಪಡುತ್ತದೆ:
53 ಹೀಗೆ ಅವರಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಮನೆಗಳಿಗೆ ಹೋದರು.